ಭಾಗ ೧೩ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ನಮ್ಮದೆನ್ನುವುದು ಬದಲಾಗುತ್ತಿದೆ! ಮಾಯವಾಗಿ ಹೋಗುತ್ತಿದೆ........

1

ಶ್ರೀ ಕೃಷ್ಣ, ದ್ರೌಪದಿ ಮತ್ತು ಪಾಂಡವರ ಚಿತ್ರಕೃಪೆ: ಗೂಗಲ್ 

        ಸಾಹಿತ್ಯವು ಸಮಾಜದ ಸ್ವರೂಪವಾದರೆ. ಸಂಸ್ಕೃತಿಯು ಸಮಾಜದ ಸ್ವಭಾವವಾಗಿದೆ. ಸಾಹಿತ್ಯದ ಮೂಲಕ ಸಮಾಜದ ಸ್ವಭಾವವು ಅನಾವರಣಗೊಳ್ಳುತ್ತದೆ. ಸನಾತನ ಸಾಹಿತ್ಯವು ಭಾರತದ ರಾಷ್ಟ್ರೀಯ ಆತ್ಮವನ್ನು ನಿರಂತರವೂ ಹೊಸ ಚಿಂತನೆಗಳಿಂದ ಚೈತನ್ಯ ಪಡಿಸುತ್ತಲೇ ಇದೆ. ಸಾಹಿತ್ಯ ಭೂಮಿಕೆಯ ಮೇಲೆ ಸನಾತನ ಸಂಸ್ಕೃತಿಯ ವನವು ಅನಾದಿ ಕಾಲದಿಂದಲೂ ವಿಕಸಿಸಿ, ಭೂತಲದ ಮೇಲೆ ಸಂಸ್ಕಾರದ ಪರಿಮಳಗಳನ್ನು ಹರಡಿದೆ. ಈ ಸಂಸ್ಕೃತಿಯ ನಂದನವನದೊಳಕ್ಕೆ ಪಾಶ್ಚಾತ್ಯ ದುರಾಕ್ರಮಣಕಾರರು ಸೂಕರಗಳಂತೆ (ಹಂದಿಗಳಂತೆ) ನುಗ್ಗಿ ಅದರ ಪರಿಮಳವನ್ನು ಹಾಳುಗೆಡವಿದರು! ಮೆಕಾಲೆ ವಿದ್ಯಾವಿಧಾನವು ನಮ್ಮ ಸಾಹಿತ್ಯವನ್ನು ಮಾರ್ಪಡಿಸಿತು, ರಾಷ್ಟ್ರೀಯತೆಯ ಸ್ವರೂಪವನ್ನೂ ವಿಕೃತಗೊಳಿಸಿತು. ಸಕ್ರಮವಾಗಿದ್ದ ಸಾಹಿತ್ಯವನ್ನು ವಕ್ರ ಮಾಡಿತು, ಸಂಸ್ಕೃತಿಯ ಮೇಲೆ ಕೆಸರಿನ ರಾಡಿ ಎರಚಿತು. ಸಾಹಿತ್ಯದ ಸ್ವರೂಪ (Form) ಮತ್ತು ಸಾಹಿತ್ಯದ ಸ್ವಭಾವಗಳೆರಡನ್ನೂ (Content) ಬದಲಾಯಿಸ ಬೇಕೆಂದು ದಶಕಗಳ ಕಾಲ ಎಡಪಂಥೀಯ ವಿಚಾರವಾದಿಗಳು ಮಾಡಿದ ಮತ್ತು ಮಾಡುತ್ತಿರುವ ರಾದ್ಧಾಂತಕ್ಕೆ ಮೆಕಾಲೆ ವಿದ್ಯಾವಿಧಾನವು ಬೀಜವನ್ನು ಬಿತ್ತಿತು! ನಮ್ಮ ಧರ್ಮ, ನಮ್ಮ ಅನುಕೂಲ, ನಮ್ಮ ತತ್ತ್ವ, ನಮ್ಮ ಶೃಂಗಾರ, ನಮ್ಮ ಹಾಸ್ಯ, ನಮ್ಮ ವ್ಯವಹಾರ, ನಮ್ಮ ಶತ್ರುಮಿತ್ರ ದೃಷ್ಟಿಕೋನ, ನಮ್ಮ ಅರ್ಥ, ನಮ್ಮ ಪರಮಾರ್ಥ, ನಮ್ಮ ಜೀವನ ಪದ್ಧತಿ - ಇವೆಲ್ಲವಕ್ಕು ಪಾಶ್ಚಾತ್ಯರ ದೊಡ್ಡಸ್ತಿಕೆಯ ಬೂಜು ಹಿಡಿದಿದೆ. ರಾಷ್ಟ್ರೀಯ ಸ್ರೋತಸ್ಸಿನ ಝರಿಗಳು ಚರಂಡಿಯ ಕಾಲುವೆಗಳಾಗಿವೆ.... ಜನಸಾಮಾನ್ಯರ ಆಡುಭಾಷೆ ಬದಲಾಗಿ ಹೋಗುತ್ತಿದೆ, ಅಜ್ಜಿಯರು ಹೇಳುತ್ತಿದ್ದ ಕಥೆಗಳು ಬದಲಾಗಿ ಹೋಗುತ್ತಿವೆ..........! ಹೀಗೆ ಬದಲಾಗುತ್ತಿವೆ ಎಂದು ಪೇಚಾಡುವ ಮನಸ್ಸುಗಳೂ ಸಹ ಬದಲಾಗಿ ಹೋಗುತ್ತಿವೆ..... ಮಾಯವಾಗಿ ಹೋಗುತ್ತಿವೆ......!!
                                     *****
ನಮ್ಮದೆನ್ನುವುದು ಬದಲಾಗುತ್ತಿದೆ! ಮಾಯವಾಗಿ ಹೋಗುತ್ತಿದೆ........
      ಒಮ್ಮೆ ಒಬ್ಬ ವೃದ್ಧ ಬಡಬ್ರಾಹ್ಮಣನು ರಾಜ್ಯವೊಂದರ ರಾಜಧಾನಿಗೆ ಹೋದನು. ಅವನು ತನಗೆ ಪರಿಚಯವಿದ್ದ ರಾಜನ ಆಸ್ಥಾನದಲ್ಲಿದ್ದ ವಿದ್ವಾಂಸನೊಬ್ಬನ ಬಳಿಗೆ ಹೋಗಿ ತನಗೆ ಆರ್ಥಿಕ ಸಹಾಯ ಮಾಡುವಂತೆ ಬೇಡಿಕೊಂಡನು. ಅದನ್ನು ಕೇಳಿದ ಆ ವಿದ್ವಾಂಸ, "ಸ್ವಾಮಿ, ನಾನು ನಿಮಗೆ ಕೊಟ್ಟರೆ ಒಂದೋ ಎರಡೋ ವರಹಗಳನ್ನು ಕೊಡಬಲ್ಲೆ. ಅದೇ ರಾಜನು ನಿಮ್ಮನ್ನು ಸತ್ಕರಿಸಿ ಸನ್ಮಾನಿಸಿದರೆ ಘನವಾಗಿರುತ್ತದಲ್ಲವೇ?" ಎಂದು ಹೇಳಿದ. ಅದಕ್ಕೆ ಪ್ರತ್ಯುತ್ತರವಾಗಿ ಆ ವೃದ್ಧನು, "ಅಯ್ಯೋ! ನಾನು ಪಂಡಿತನೂ ಅಲ್ಲ ಕಡೇ ಪಕ್ಷ ಕವಿಯೂ ಅಲ್ಲ, ಹೋಗಲಿ ನನ್ನನ್ನು ರಾಜಸಭೆಯ ಒಳಗಾದರೂ ಬಿಡುತ್ತಾರೆಯೇ? ಪರಿಸ್ಥಿತಿ ಹೀಗಿರುವಾಗ ಮಹಾರಾಜರು ನನ್ನನ್ನು ಸತ್ಕರಿಸಿ ಸನ್ಮಾನ ಮಾಡುವುದು ದೂರವೇ ಉಳಿಯಿತು" ಎಂದು ವ್ಯಥೆ ಪಟ್ಟುಕೊಂಡನು.
        "ನಿಮಗೇಕೆ ಆ ಚಿಂತೆ, ಸುಮ್ಮನೇ ನೀವು ನನ್ನ ಹಿಂದೆ ಬಂದು ಕುಳಿತುಕೊಳ್ಳಿ, ಬಾಯನ್ನು ಮಾತ್ರ ತೆರೆಯಬೇಡಿ, ಉಳಿದಿದ್ದನ್ನು ನಾನು ನೋಡಿಕೊಳ್ಳುತ್ತೇನೆ ......" ಎಂದು ಆ ವಿದ್ವಾಂಸನು ಆ ವೃದ್ಧನಿಗೆ ಆಶ್ವಾಸನೆ ಕೊಟ್ಟನು.
      ಆಮೇಲೆ ಆ ವೃದ್ಧ ಬ್ರಾಹ್ಮಣನಿಗೆ ಪಂಡಿತರ ವೇಷಭೂಷಣಗಳನ್ನು ತೊಡಿಸಿ ಆ ವಿದ್ವಾಂಸನು ಅವನನ್ನು ತನ್ನ ಹಿಂದೆ ರಾಜಸಭೆಗೆ ಕರೆದುಕೊಂಡು ಹೋದನು. ರಾಜ ಸಭೆಯಲ್ಲಿ, ವಿದ್ವಾಂಸನು ರಾಜನನ್ನು ಉದ್ದೇಶಿಸಿ, " ಮಹಾಪ್ರಭು, ನಮ್ಮ ಜನ್ಮಗಳು ಇಂದಿಗೆ ಪಾವನವಾಗಿ ಹೋದವು, ಅದ್ವಿತೀಯ ಪಂಡಿತರಾಗಿರುವ ನನ್ನ ಗುರುಗಳಾಗಿರುವ ಇವರು ತಮ್ಮ ದರ್ಶನ ಭಾಗ್ಯವನ್ನು ನಮಗೆ ಕರುಣಿಸಲು ಇಲ್ಲಿಗೆ ಆಗಮಿಸಿದ್ದಾರೆ" ಎಂದು ಆ ವಿದ್ವಾಂಸನು ಆ ವೃದ್ಧನನ್ನು ರಾಜನಿಗೆ ಪರಿಚಯ ಮಾಡಿಸಿದ. ರಾಜ ಹಾಗೂ ಅವನ ಸಭಾಸದರು ಆ ವೃದ್ಧನಿಗೆ ವಂದಿಸಿ ಅವನನ್ನು ಉಚಿತಾಸನದಲ್ಲಿ ಕುಳ್ಳಿರಿಸಿದರು! ಆ ವಿದ್ವಾಂಸನ ಗುರುಗಳ ಬಾಯಿಂದ ಹೇಳುವ ಮಹಾನ್ ಸಂಗತಿಗಳನ್ನು ಕೇಳಿ ಕರ್ಣಾನಂದಗೊಳ್ಳಲು ಸಭಾಸದರೆಲ್ಲರೂ ಉತ್ಸುಕರಾಗಿ ನೋಡತೊಡಗಿದರು. ಆದರೆ ಎಷ್ಟು ಹೊತ್ತಾದರೂ ಆ ಘನ ಪಂಡಿತರು ಬಾಯಿ ತೆರೆಯಲೊಲ್ಲರು! "ಇದೇನಿದು, ನಿಮ್ಮ ಗುರುಗಳು ನಮ್ಮನ್ನು ಅನುಗ್ರಹಿಸುತ್ತಿಲ್ಲವಲ್ಲ" ಎಂದು ರಾಜನು ತನ್ನ ಆಸ್ಥಾನ ಪಂಡಿತನನ್ನು ಪ್ರಶ್ನಿಸಿದನು! ಅದಕ್ಕೆ ಪಂಡಿತನು, "ಮಹಾಪ್ರಭು, ನಮ್ಮ ಗುರುಗಳು ಆಜೀವನ ಮೌನವ್ರತವನ್ನು ಪಾಟಿಸುತ್ತಿದ್ದಾರೆ, ಎರಡು ತಿಂಗಳಿಗೋ, ಮೂರು ತಿಂಗಳಿಗೋ, ವರ್ಷಕ್ಕೊಂದು ಸಾರಿಯೋ ಅದೂ ಸಮಾಜಕ್ಕೆ ತಾವು ಹೇಳಬೇಕಾಗಿರುವ ಸಂದೇಶವಿದೆಯೆಂದು ಭಾವಿಸಿದಾಗಲಷ್ಟೆ ಬಾಯಿ ತೆರೆಯುತ್ತಾರೆ. ಆಗ ಕೂಡಾ ಕೇವಲ ಒಂದು ಅಥವಾ ಎರಡು ಶಬ್ದಗಳನ್ನಷ್ಟೇ ನುಡಿಯುತ್ತಾರೆ. ಬಹಳವೆಂದರೆ ಒಂದು ವಾಕ್ಯವನ್ನು ಹೇಳುತ್ತಾರೆ! ಎಂದು ವಿವರಿಸಿದ!
        "ಇದ್ದರೂ ಇರಬಹುದು, ಇದ್ದರೂ ಇರಬಹುದು....." ಎಂದು ಎಲ್ಲರೂ ತಲೆಯಾಡಿಸಿದರು.
        ಆ ಪಂಡಿತನ ಗುರುಗಳ ಗೌರವಾರ್ಥವಾಗಿ ಅವರ ಸಮ್ಮುಖದಲ್ಲಿಯೇ ಸಾಹಿತ್ಯ ಗೋಷ್ಠಿ ಮೊದಲಾಯಿತು. ವಿದ್ವಾಂಸರು ಚರ್ಚೆಯನ್ನು ಮೊದಲು ಮಾಡಿದರು. ರಾಮಾಯಣವನ್ನು ಕುರಿತ ಚರ್ಚೆಯು ಸಾಗುತ್ತಿತ್ತು. ರಾಮಾಯಣದ ಕುರಿತು ಯಾರಿಗೆ ತಾನೆ ತಿಳಿಯದು, ಗುರುಗಳಿಗೂ ಸಹ ಸ್ವಲ್ಪ ಉತ್ಸಾಹವುಂಟಾಯಿತು. ಉತ್ಸಾಹಗೊಂಡ ಗುರುಗಳು ಶಿಷ್ಯನ ಸೂಚನೆಯನ್ನು ಮರೆತು ರಾವಣಾಸುರನನ್ನು ಕುರಿತು ಏನೋ ಹೇಳಹೊರಟರು. ಗಾಬರಿಯಲ್ಲಿ ರಾವಣ ಎಂದು ಹೇಳಹೋಗಿ ’ರಾಭಣ’ ಎಂದು ತೊದಲಿದರು. ಕೂಡಲೇ ಅವರ ಶಿಷ್ಯನು ಅವರೆಡೆಗೆ ನೋಡಿದ್ದೇ ತಡ ಗುರುಗಳಿಗೆ ಅವನ ಎಚ್ಚರಿಕೆಯ ಮಾತುಗಳು ನೆನಪಿಗೆ ಬಂದು ಅವರು ಮೌನವಹಿಸಿದರು. ಆಗ, "ಇದೇನಿದು ರಾವಣ ಎನ್ನುವುದನ್ನು ’ರಾಭಣ’ ಎಂದು ಕರೆಯುವುದು ವಿಚಿತ್ರವಾಗಿದೆ!" ಎಂದು ರಾಜನು ತನ್ನ ಆಸ್ಥಾನ ಪಂಡಿತನನ್ನು ಪ್ರಶ್ನಿಸಿದನಂತೆ. ಅದಕ್ಕೆ ಉತ್ತರವಾಗಿ ಆ ಶಿಷ್ಯ ಪಂಡಿತನು, "ಕುಂಭಕರ್ಣನ ಹೆಸರಿನಲ್ಲಿ ’ಭ’ ಎನ್ನುವ ಅಕ್ಷರವಿದೆ, ವಿಭೀಷಣನಲ್ಲಿಯೂ ’ಭ’ಕಾರವಿದೆ. ಎಲ್ಲಾ ಅಣ್ಣ ತಮ್ಮಂದಿರಿಗಿಂತ ಹಿರಿಯನಾದವನೂ, ಕುಲಶ್ರೇಷ್ಠನೂ ಆದ ರಾವಣನ ಹೆಸರಿನಲ್ಲಿ ಮಾತ್ರ ’ಭ’ ಏಕೆ ಇರಬಾರದು? ಇದ್ದೇ ಇರಬೇಕೆಂದು ನಮ್ಮ ಗುರುಗಳ ಅಭಿಪ್ರಾಯ....!"
"ಭಕಾರಃ ಕುಂಭಕರ್ಣೇವ, ಭಕಾರಸ್ತು ವಿಭೀಷಣೇ,
ತ್ರಯೋರ್ಜ್ಯೇಷ್ಠೇ ಕುಲಶ್ರೇಷ್ಠೇ ಭಕಾರಃ ಕಿಂ ನ ವಿದ್ಯತೆ?
    ಈ ಉದಾಹರಣೆಯಲ್ಲಿರುವ ಪಂಡಿತನ ಶಿಷ್ಯನನ್ನು ಕೆಲವರು ಕಾಳಿದಾಸ ಎಂದು ಕರೆಯಬಹುದು, ತೆನಾಲಿ ರಾಮಕೃಷ್ಣ ಎಂದು ಕೆಲವರು ಹೇಳಬಹುದು, ಕೆಲವರು ಬೀರಬಲ್ ಎಂದರೆ ಇನ್ನೂ ಕೆಲವರು ಜಗನ್ನಾಥ ಪಂಡಿತನಿಗೆ ಸಂಬಂಧಿಸಿದ ಕಥೆಯಿದು ಎನ್ನಬಹುದು. ಈ ಶ್ಲೋಕದ ಕುರಿತು ಇರುವ ಕಥೆಯ ಹಲವಾರು ಪಾಠಾಂತರಗಳು ನಮಗೆ ದೊರೆಯಬಹುದು! ಆದರೆ, ಹಾಸ್ಯದಲ್ಲೂ ರಾಮಾಯಣದ ಧ್ಯಾಸವನ್ನು ನಮ್ಮಲ್ಲಿ ನಿಲ್ಲಿಸುತ್ತದೆ ಈ ಕಥೆ. ಈ ವಿಧವಾದ ಕಥೆಗಳು ಈಗ ನಮ್ಮ ಭಾಷೆಯಿಂದ, ನಮ್ಮ ಸಾಹಿತ್ಯದಿಂದ ಬೆಳಕು ಕಾಣುತ್ತಿಲ್ಲ! ಮೆಕಾಲೆ ಬಂದ ನಂತರ ಶಿಬಿ ಚಕ್ರವರ್ತಿ ಮೂಲೆಯಲ್ಲಿ ಬಿದ್ದ, ಷೈಲಾಕ್ ನಮ್ಮ ತಲೆಯನ್ನೇರಿ ಕುಳಿತ. ತೊಡೆಯನ್ನು ಕತ್ತರಿಸಿ ಕೊಟ್ಟವನ ಕಥೆ  ನಮಗೆ ಮರೆತುಹೋಗಿದೆ ಆದರೆ ತೊಡೆ ಕತ್ತರಿಸಿ ಕೊಡು ಎನ್ನುವವನ ಕಥೆ ನಮಗೆ ತಿಳಿದಿದೆ......! ಸಂಸ್ಕೃತ ಭಾಷೆಯನ್ನು ತೊಲಗಿಸಿದ್ದರ ಫಲಿತವಿದು. ಇಂಗ್ಲೀಷನ್ನು ಕೂರಿಸಿದ್ದರ ಫಲವಿದು. ಭಾಷೆಗಳೆಲ್ಲವೂ ಸರಸ್ವತೀ ದೇವಿಯ ಸ್ವರೂಪಗಳೆನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಎಲ್ಲಾ ಜನಾಂಗಗಳ ಸಂಸ್ಕೃತಿ ಒಂದೇ ತೆರನಾಗಿಲ್ಲ!
         ಮಹಾಕವಿ ಕಾಳಿದಾಸನು ವಾರಣಾಸಿಯಲ್ಲಿ ವೇದ ವ್ಯಾಸನ ವಿಗ್ರಹವನ್ನು ನೋಡಿ ನಮಸ್ಕರಿಸಿದನಂತೆ. ಆಗ ಅವನಿಗೆ ಮಹಾಭಾರತ ಕಾವ್ಯದಲ್ಲಿ ಅಸಂಖ್ಯಾಕವಾಗಿ ’ಚ’ಕಾರಗಳು ಇರುವ ಸಂಗತಿ ನೆನಪಿಗೆ ಬಂತಂತೆ. ಸಂಸ್ಕೃತ ಕವಿಗಳು ಶ್ಲೋಕದಲ್ಲಿ ಒಂದು ಅಕ್ಷರ ಕಡಿಮೆ ಬಿದ್ದಂತಹ ಸಂದರ್ಭಗಳಲ್ಲಿ ಅದಕ್ಕೆ ’ಚ’ ಅಕ್ಷರವನ್ನು ಬಳಸುವುದು ವಾಡಿಕೆ. ಮಹಾಭಾರತದಲ್ಲಿ ವ್ಯಾಸನು ಹೀಗೆ ಸಿಕ್ಕಾಪಟ್ಟೆ ’ಚ’ಗಳನ್ನು ಉಪಯೋಗಿಸಿರುವುದು ಜ್ಞಾಪಕಕ್ಕೆ ಬಂದು ಕಾಳಿದಾಸ ನಸುನಕ್ಕು. "ಇವನ ಹೊಟ್ಟೆಯ ತುಂಬಾ ’ಚ’ಕಾರಗಳೇ" ಎಂದು ಮನಸ್ಸಿನಲ್ಲಿ ಅಂದುಕೊಂಡನಂತೆ. ’ಚ’ಕಾರ ಕುಕ್ಷಿ! ಎಂದು ವ್ಯಾಸನನ್ನು ಸಂಬೋಧಿಸುತ್ತಾ ವಿಗ್ರಹದ ಹೊಕ್ಕಳನ್ನು ತನ್ನ ಬೆರಳಿನಿಂದ ಚುಚ್ಚಿದನಂತೆ. ಅಷ್ಟೇ! ಅವನ ಬೆರಳು ವಿಗ್ರಹದ ಹೊಕ್ಕಳಿನೊಳಗೆ ಸಿಕ್ಕಿಹಾಕಿಕೊಂಡು ಬಿಟ್ಟಿತು. ಈಗ ವಿಲವಿಲ ಒದ್ದಾಡುವ ಸರದಿ ಕಾಳಿದಾಸನದು. "ನನ್ನನ್ನು ಅಣಗಿಸುವುದಲ್ಲ! ದ್ರೌಪದಿಗೂ ಪಾಂಡವರಿಗೂ ಇದ್ದ ಸಂಬಂಧವನ್ನು ಸಮಗ್ರವಾಗಿ ನೀನು ಒಂದೇ ಒಂದು ಶ್ಲೋಕದಲ್ಲಿ ಒಂದೇ ಒಂದು ’ಚ’ಕಾರವಿಲ್ಲದೇ ಹೇಳಬಲ್ಲೆಯಾದರೆ ನನ್ನ ಹೊಕ್ಕಳಿನಲ್ಲಿ ಸಿಕ್ಕಿಕೊಂಡಿರುವ ನಿನ್ನ ಬೆರಳು ಹೊರಕ್ಕೆ ಬರುತ್ತದೆ, ಇಲ್ಲಾ ನೀನು ತಪ್ಪೊಪ್ಪಿಕೊಂಡು ಕ್ಷಮಾಪಣೆ ಕೇಳಬೇಕು. ಆಗ ನಿನ್ನ ಬೆರಳು ಹೊರಕ್ಕೆ ಬರುತ್ತದೆ" ಎಂದು ವ್ಯಾಸನು ಹೇಳಿದಂತೆ ಕಾಳಿದಾಸನಿಗೆ ಭಾಸವಾಯಿತು. ಕೂಡಲೇ ಕಾಳಿದಾಸನು, ವ್ಯಾಸನು ಬಯಸಿದಂತೆ ’ಚ’ಕಾರವಿಲ್ಲದೇ ಶ್ಲೋಕವೊಂದನ್ನು ಹೇಳಿದನಂತೆ!
                   ದ್ರೌಪದ್ಯಾಃ ಪಾಂಡುತನಯಾಃ
                   ಪತಿ ದೇವರ ಭಾವುಕ್ಣಾಃ l
                   ನ ದೇವರೋ ಧರ್ಮರಾಜಾ
                   ಸಹದೇವೋ ನ ಭಾವುಕಃ ll
          "ದ್ರೌಪದಿಗೆ ಪಾಂಡವರು ಗಂಡಂದಿರು, ಮೈದುನರು, ಭಾವರುಗಳು, ಧರ್ಮರಾಜನು ಎಂದಿಗೂ ಮೈದುನನಾಗಲಾರ ಮತ್ತು ಸಹದೇವನು ಎಂದಿಗೂ ಭಾವನಾಗಲಾರ" ಎಂದು ಕಾಳಿದಾಸನು ಹೇಳಿದ ಕೂಡಲೇ ಅವನ ಬೆರಳು ಹೊರಬಂದಿತಂತೆ. ಇಂತಹ ವಿಶಿಷ್ಠ ಪದ್ಯಗಳನ್ನೆಲ್ಲಾ ಮರೆತು ಹೋಗಿ, "ಬೆಟ್ಟಿ ಬಾಟ್ ಸಮ್ ಬಟ್ಟರ್, ಬಟ್ ದಿ ಬಟ್ಟರ್ ವಾಸ್ ಬಿಟ್ಟರ್, ಟು ಮೇಕ್ ಬಿಟ್ಟರ್ ಬಟ್ಟರ್ ಬೆಟ್ಟರ್, ಷಿ ಬಾಟ್ ಸಮ್ ಬೆಟ್ಟರ್ ಬಟ್ಟರ್" ಎನ್ನುವ ಪದವಿನ್ಯಾಸಗಳನ್ನು ನಾವು ಕೇಳುತ್ತಿದ್ದೇವೆ. ಇಂತಹ ಪದವಿನ್ಯಾಸಗಳು ಸಂಸ್ಕೃತದಲ್ಲಿಯೂ ಇತರ ಭಾರತೀಯ ಭಾಷೆಗಳಲ್ಲಿಯೂ ಇರುವ ಸಂಗತಿ ನಮಗೆ ತಿಳಿಯದು. ಇಂತಹ ವಿಷಯಗಳನ್ನು ತಿಳಿದವರೂ, ಬೇರೆಯವರಿಂದ ತಿಳಿದುಕೊಂಡವರೂ ಸಹ ಇಂತಹ ವಿಚಿತ್ರವಾದ ಪದಬಂಧಗಳು, ವಿಚಿತ್ರ ಕವಿತೆಗಳು ನಮಗೆ ಬೇಕಾಗಿಲ್ಲ. "ಪಾರ್ಮ್ ಛೇಂಜ್......" ಆಗಬೇಕು ಎಂದು ಪ್ರಚಾರ ಮಾಡಿದರು. * ನು ತನ್ನ ಇಷ್ಟದೇವತೆಯ ಕುರಿತ ಧ್ಯಾನ ಪದ್ಯವನ್ನು ಚಮತ್ಕಾರಿಕವಾಗಿ ಹೇಳಿರುವ ಈ ಕೆಳಗಿನ ಪದ್ಯವನ್ನು ನೋಡಿ.
ವೇದ ಪುರುಷನ ಸುತನ ಸುತನ ಸ
ಹೋದರನ ಹಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನ ನತುಳಭುಜಬಲದಿ
ಕಾದು ಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ
ಮಕ್ಕಳಿಗೆ ಹಲವಾರು ವಿಷಯಗಳನ್ನು ತಿಳಿಸಲು ನಾವು ಹೇಳಿಕೊಡುತ್ತಿದ್ದ ಪದ್ಯಗಳೂ ಸಹ ಇಂದು ಕಣ್ಮರೆಯಾಗುತ್ತಿವೆ. ಈ ಕೆಳಗಿನ ಸರಳ ಪದ್ಯ ಇಂದು ಕನ್ನಡದ ಎಷ್ಟು ಮಕ್ಕಳಿಗೆ ತಿಳಿದಿದೆ?
ಒಂದು ಎರಡು
ಬಾಳೆಲೆ ಹರಡು,
ಮೂರು ನಾಲ್ಕು
ಅನ್ನ ಹಾಕು, ಐದು ಆರು
ಬೇಳೆ ಸಾರು,
ಏಳು ಎಂಟು
ಪಲ್ಯಕೆ ದಂಟು,
ಒಂಬತ್ತು ಹತ್ತು
ಎಲೆಮುದುರೆತ್ತು.
ಒಂದರಿಂದ ಹತ್ತು ಹೀಗಿತ್ತು,
ಊಟದ ಆಟವು ಮುಗಿದಿತ್ತು" 
      ಇಂತಹ ಪದ್ಯಗಳ ಬದಲು ಒಂಟೂ ಬಕಲ್ ಮೈ ಷೂಸ್ ಎಂದೋ ಇಲ್ಲಾ ಬ್ಲಾಕ್ ಷೀಪ್‌ಗೆ ಇರುವ ’ಉಲ್’ ಕುರಿತೋ ಮಕ್ಕಳು ಲೆಕ್ಕ ಹಾಕುತ್ತಿವೆ. ಅಂಗಡಿಗೆ ಹೋಗಿ ಎರಡು ಸಾಮಾನು ತೆಗೆದುಕೊಂಡರೆ, ಒಂದಕ್ಕೆ ಹನ್ನೆರಡು ರೂಪಾಯಿ, ಮತ್ತೊಂದಕ್ಕೆ ಎಂಟು ರೂಪಾಯಿಗಳು, ಒಟ್ಟು ಎಷ್ಟಾಯಿತೆಂದು ತಿಳಿಯಲು ಅಂಗಡಿಯವನು ತನ್ನ ಲೆಕ್ಕದ ಡಬ್ಬಿ - ಕ್ಯಾಲ್ಕುಲೇಟರ್ ಅನ್ನು ತೆಗೆದು ಠಕ, ಠಕ ಕುಟ್ಟಿ ಇಪ್ಪತ್ತು ರೂಪಾಯಿಗಳಾದವು ಎನ್ನುವುದನ್ನು ಕಂಡುಹಿಡಿಯುತ್ತಾನೆ. ಮಗ್ಗಿಗಳನ್ನು ಕಲಿಯುವ ಅವಶ್ಯಕತೆ ಅಥವಾ ಪರಿಸ್ಥಿತಿ ಹೀಗಿದ್ದ ಮೇಲೆ ಪದ್ಯಗಳನ್ನು ಕಲಿಯುವ ಮಾತು ದೂರವೇ ಉಳಿಯಿತಲ್ಲವೇ?
(*ತೆಲುಗಿನಲ್ಲಿ ಮೂಲ ಲೇಖಕರು ಎರಡು ವಿಶೇಷ ಪದ್ಯಗಳನ್ನು ಉದಾಹರಿಸಿದ್ದಾರೆ. ಮೊದಲನೆ ಪದ್ಯವು ಗಜೇಂದ್ರ ಮೋಕ್ಷದ ಕುರಿತಾದದ್ದು. ಗಜೇಂದ್ರನು ಮೊಸಳೆಯಿಮದ ತನ್ನನ್ನು ರಕ್ಷಿಸೆಂದು ವಿಷ್ಣುವನ್ನು ಪ್ರಾರ್ಥಿಸಿದೊಡನೆಯೇ ವಿಷ್ಣುವು ಎಲ್ಲಾ ಕೆಲಸಬೊಗಸೆಗಳನ್ನು ಬಿಟ್ಟು ವೈಕುಂಠದಿಂದ ದಢದಢನೇ ಹೋಗುತ್ತಾನೆ. ಅವನ ಹಿಂದೆ ಏನಾಯಿತು ಎಂದು ಕೇಳುವ ಪರಿಯಲ್ಲಿ ಲಕ್ಷ್ಮೀದೇವಿಯ ಅವನ ಹಿಂದೆ ಹೇಗೆ ಹೋದಳು ಎನ್ನುವುದನ್ನು ತೆಲುಗಿನ ಕವಿಯೊಬ್ಬ ಹೀಗೆ ವರ್ಣಿಸಿದ್ದಾನೆ. "ವೆಡನೆಡ ಸಿಡಿಮುಡಿ ತಡಬಡ ಅಡುಗಿಡು ನಡುಗಿಡಡು ಜಡಿಮ ನಡುಗಿದ ನೆಡಲನ್..." ಅದೇ ವಿಧವಾಗಿ "ಗುಂಡಮ್ಮ ಗುಂಡು, ಗುಮ್ಮಡಿ ಪಂಡು....." ಎನ್ನುವುದನ್ನೂ ತೆಲುಗಿನ ಮಕ್ಕಳು ಮರೆತು ಹೋಗುತ್ತಿದ್ದಾರೆ ಎಂದು ಮೂಲ ಲೇಖಕರು ವಿಷಾದ ವ್ಯಕ್ತಪಡಿಸಿದ್ದಾರೆ).
       ಅಭಿಜ್ಞಾನ ಶಾಕುಂತಲ ನಾಟಕವನ್ನು ವಿಲಿಯಂ ಜೋನ್ಸ್‌ ಇಂಗ್ಲೀಷಿಗೆ ಅನುವಾದಿಸಿ ಆ ಮಹಾಶಯನು ಮಹತ್ತರವಾದ ಸೇವೆಯನ್ನು ಮಾಡಿದ್ದಾನೆಂದು ಮೆಕಾಲೆ ಪಂಡಿತರು ಅವನನ್ನು ಕೊಂಡಾಡುತ್ತಿರುತ್ತಾರೆ! ತನ್ನ ಹೆಸರಿಗೆ ಸರ್ ಅನ್ನು ಪೂರ್ವಪ್ರತ್ಯಯವಾಗಿ ತಗುಲಿಸಿಕೊಂಡ ವಿಲಿಯಂ ಜೋನ್ಸ್ ಕಾಳಿದಾಸನ ಕತೆಯನ್ನು ತಲೆಕೆಳಗೆ ಮಾಡಿ ಹೋಗಿದ್ದಾನೆ. ವಿಕ್ರಮ ಎನ್ನುವವನು ಇರಲೇ ಇಲ್ಲ ಎಂದು ವಿಲಿಯಂ ಜೋನ್ಸ್‌ ತೀರ್ಮಾನಿಸಿದ್ದರಿಂದ ಮಹಾಕವಿ ಕಾಳಿದಾಸ ಎಲ್ಲಿಯವನು ಎನ್ನುವ ಪ್ರಶ್ನೆ ಹುಟ್ಟುತ್ತದೆಯಲ್ಲವೇ? ಕಾಳಿದಾಸನೂ ಸಹ ಜೀವಿಸಿರಲಿಲ್ಲ ಎಂದು ಹೇಳುವುದಕ್ಕೆ ಎಷ್ಟೇ ಕಸರತ್ತು ಮಾಡಿದರೂ ವಿಲಿಯಂ ಜೋನ್ಸನಿಗೆ ಸಾಧ್ಯವಾಗಲಿಲ್ಲ! ಆದ್ದರಿಂದ ಮಹಾಕವಿ ಕಾಳಿದಾಸನು ಗುಪ್ತವಂಶದ ಎರಡನೇ ಚಂದ್ರಗುಪ್ತನ ಆಸ್ಥಾನ ಕವಿಯಾಗಿರಬಹುದು ಎಂದು ಜೋನ್ಸ್‌ ತನ್ನ ಸಂದೇಹವನ್ನು ವ್ಯಕ್ತಪಡಿಸಿದ. "ಮೊದಲು ಸಂದೇಹಿಸುವುದು, ಆಮೇಲೆ ಆ ಸಂದೇಹವೇ ಸತ್ಯವೆಂದು ನಿರ್ಧರಿಸುವುದು - ಇದು ಮೆಕಾಲೆ ಪಂಡಿತರು ಚರಿತ್ರೆಯನ್ನು ಬರೆಯುವ ವಿಧಾನ.... ಆದ್ದರಿಂದ ಕ್ರಿ.ಪೂ. ಒಂದನೇ ಶತಮಾನದಲ್ಲಿ ವಿಕ್ರಮನ ಆಸ್ಥಾನ ಕವಿಯಾಗಿದ್ದ ಕಾಳಿದಾಸನನ್ನು ಎರಡನೇ ಚಂದ್ರಗುಪ್ತನಿಗೆ ಗಂಟು ಹಾಕಿದ್ದಾರೆ. ಆದರೆ ಎರಡನೇ ಚಂದ್ರಗುಪ್ತ ಕ್ರಿ.ಪೂ. ಮೂರನೇ ಶತಮಾನದವನಲ್ಲವೇ! ಅಲೆಗ್ಜಾಂಡರನನ್ನು ಒದ್ದೋಡಿಸಿದ ಸಮುದ್ರಗುಪ್ತನ ಮಗನಲ್ಲವೇ! ಈ ಸತ್ಯವನ್ನು ಸುಳ್ಳು ಮಾಡಲು ಕಾಳಿದಾಸನನ್ನೂ ಎರಡನೇ ಚಂದ್ರಗುಪ್ತನನ್ನೂ ಸಹ ಎಳೆದುಕೊಂಡು ಬಂದು ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಕುಳ್ಳಿರಿಸಿ ಹೋಗಿದ್ದಾರೆ. ಈ ಒಂದು ಸುಳ್ಳಿನಿಂದಾಗಿ ಸುಮಾರು ಏಳುನೂರು ವರ್ಷಗಳ ಕಾಲವನ್ನು ಅಂತ್ಯಗೊಳಿಸಿದ ಕಾಲಾಂತಕರು ಮೆಕಾಲೆ ವಿದ್ಯಾವಿಧಾನದ ನಿರ್ಮಾತೃಗಳು! ಗುಪ್ತವಂಶದ ಪರಿಪಾಲನೆಯು ಕ್ರಿ.ಶ. ನಾಲ್ಕನೆಯ ಶತಮಾನ (ಕಲಿಯುಗದ ಇಪ್ಪತ್ತೆಂಟನೇ ಶತಮಾನ) ಆರಂಭವಾಯಿತೆಂದು ಬ್ರಿಟಿಷರು ಬರುವುದಕ್ಕೆ ಪೂರ್ವದಲ್ಲಿ ನಮ್ಮ ಚರಿತ್ರಕಾರರು ಹೇಳಿದ್ದಾರೆ. ಆದರೆ ಗುಪ್ತವಂಶದ ಪರಿಪಾಲನೆಯು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ (ಕಲಿಯುಗದ ಮೂವತ್ತನಾಲ್ಕನೇ ಶತಮಾನ) ಆರಂಭವಾಯಿತೆಂದು ವಿಲಿಯಂ ಜೋನ್ಸ್ ಮೊದಲಾದವರು ತೀರ್ಮಾನವಿತ್ತಿದ್ದಾರೆ. "ನಾನು ರಾಜ ವಿಕ್ರಮನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬ ಎಂದು ಮಹಾಕವಿ ಕಾಳಿದಾಸನೇ ಸ್ವತಃ ಹೇಳಿಕೊಂಡಿದ್ದಾನೆ.
"ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕ, ವೇತಾಳಭಟ್ಟ, ಘಟಕರ್ಪರ, ಕಾಳಿದಾಸಾಃ,
ಖ್ಯಾತೋ ವರಾಹಮಿಹಿರೋ ನೃಪತೇಃ ಸಭಾಯಾಂ ರತ್ನಾನಿವೈ ವರರುಚಿಃ ನವ ವಿಕ್ರಮಸ್ಯ"
       ಮೇಲಿನ ಶ್ಲೋಕದಂತೆ "ಜ್ಯೋತಿರ್ ವಿದ್ಯಾಭರಣಂ" ಎನ್ನುವ ಗ್ರಂಥದಲ್ಲಿ ಕಾಳಿದಾಸನು ರಾಜ ವಿಕ್ರಮನ ಆಸ್ಥಾನದಲ್ಲಿದ್ದ ನವರತ್ನಗಳು ಕುರಿತು ಹೇಳಿರುವನೆನ್ನುವ ವಿಷಯವು ತಮಗೆ ಬ್ರಹ್ಮಶ್ರೀ ಕೋಟ ವೆಂಕಟಾಚಲಂ ಅವರು ತಿಳಿಸಿರುವರೆಂದು ಬ್ರಹ್ಮಶ್ರೀ ತೆಲಕಪಲ್ಲಿ ವಿಶ್ವನಾಥ ಶರ್ಮರು ತಿಳಿಸಿರುತ್ತಾರೆ. ಆದರೆ, ಇದೊಳ್ಳೆ ರಾಮಾಯಣವಾಯಿತೆಂದು ಹೇಳಿ "ಜ್ಯೋತಿರ್ ವಿದ್ಯಾಭರಣಂ" ಗ್ರಂಥವನ್ನು ಮೂಲತಃ ಮಹಾಕವಿ ಕಾಳಿದಾಸನು ರಚಿಸಲೇ ಇಲ್ಲವೆಂದು ಮೆಕಾಲೆ ಪಂಡಿತರು ನಿರ್ಧರಿಸಿದರಲ್ಲದೇ, ಯಾರೋ ಈ ಗ್ರಂಥವನ್ನು ಬರೆದು ಅದನ್ನು ಕಾಳಿದಾಸನು ರಚಿಸಿರುವನೆಂದು ಬಿಂಬಿಸಿದ್ದಾರೆಂದು ತೀರ್ಮಾನಿಸಿದರು. ಅದು ನಿಜವೇ ಆಗಿದ್ದಲ್ಲಿ, ಹಾಗೆ ಮಾಡುವ ಉದ್ದೇಶವಾದರೂ ಏನಿತ್ತು? ಯಾರನ್ನು ಮೋಸಗೊಳಿಸಲು ಹೀಗೆ ಮಾಡಲಾಯಿತು? ವಿಕ್ರಮ ಶಕವನ್ನು ಯಾಸೆನ್ ಎನ್ನುವ ವಿದೇಶಿಯೊಬ್ಬನು ಸ್ಥಾಪಿಸಿದರೆ ಶಾಲಿವಾಹನ ಶಕವನ್ನು ಕನಿಷ್ಕನು ಸ್ಥಾಪಿಸಿದನೆಂದು ನಿರ್ಧರಿಸಿದ್ದಾರೆ ಮೆಕಾಲೆ ಪಂಡಿತರು. ಮೇಲಾಗಿ, ಈ ಕನಿಷ್ಕನೆನ್ನುವವನು ಚೀನಾ ದೇಶದ ಮಿಶ್ರಜನಾಂಗಕ್ಕೆ ಸೇರಿದವನಂತೆ! ಇಂದು ನಾವು ಅನುಸರಿಸುತ್ತಿರುವ ಕ್ರಿಸ್ತಶಕ ಮಾತ್ರವಲ್ಲದೇ ವಿಕ್ರಮ ಮತ್ತು ಶಾಲಿವಾಹನ ಶಕಗಳೂ ಸಹ ಭಾರತ ದೇಶಕ್ಕೆ ವಿದೇಶಿಯರಿಂದ ಪ್ರಾಪ್ತವಾಗಿವೆಯಂತೆ! ಹೀಗೆ ಸುಮಾರು ಎರಡು ಶತಮಾನಗಳ ಕಾಲ ಭಾರತೀಯರಿಗೆ ಬೋಧಿಸಿ ಹೋಗಿದ್ದಾರೆ ಮೆಕಾಲೆಯ ವಾರಸುದಾರರು. ಮಾರ್ಕ್ಸಿಸ್ಟ್ ಮೇಧಾವಿಗಳು ಇದನ್ನೇ ಇನ್ನಷ್ಟು ವಿಸ್ತಾರವಾಗಿ ಪ್ರಚಾರ ಮಾಡುತ್ತಿದ್ದಾರೆ! ಈ ವಿಧವಾಗಿ ಕಾಳಿದಾಸನ ಕಥೆಯ ಅಂಶವನ್ನು (Content) ಯಾವ ವಿಧವಾಗಿ ಬದಲಾಯಿಸುತ್ತಾ ಹೋಗಿದ್ದಾರೆನ್ನುವುದನ್ನು ಗಮನಿಸಿ! ಮೃಚ್ಛಕಟಿಕ - ಶೂದ್ರಕ ಕವಿ ಬರೆದಿರುವ ‘ಮಣ್ಣಿನ ಬಂಡಿ’ ಎನ್ನುವ ಈ ನಾಟಕದಲ್ಲಿ ಶಕಾರನೆನ್ನುವ ಪಾತ್ರವು ಕುಡಿದು ಅಮಲೇರಿಸಿಕೊಂಡು ವಸಂತಸೇನೆಯನ್ನು ಬಲಾತ್ಕರಿಸಲು ಮುಂದಾಗುತ್ತಾನೆ. ಆಗ, "ರಾವಣಾಸುರನನ್ನು ನೋಡಿದ ಕುಂತಿ ದೇವಿಯಂತೆ ಏಕೆ ಓಡಿಹೋಗುತ್ತಿದ್ದೀಯೆ?....." ಎಂದೂ ಮಾತನಾಡುತ್ತಾನೆ! ಬ್ರಿಟಿಷ್ ಶಕಾರರು ನಮ್ಮ ಚರಿತ್ರೆಯಲ್ಲಿನ ವಿಷಯಗಳನ್ನು ಆ ವಿಧವಾಗಿ ಮಾರ್ಪಡಿಸಿ ಹೋಗಿದ್ದಾರೆ. ಕಾಳಿದಾಸನನ್ನು ಚಂದ್ರಗುಪ್ತನಿಗೆ ಗಂಟು ಹಾಕಿದ್ದಾರೆ. ಅಂದಹಾಗೆ, ಏಸು ಕ್ರಿಸ್ತನಿಗೆ ಬಹುಪೂರ್ವದಲ್ಲಿದ್ದ ಶೂದ್ರಕನನ್ನು ಕ್ರಿ.ಶ. ಮೂರನೇ ಶತಮಾನಕ್ಕೆ ಎಳೆದುಕೊಂಡು ಬಂದಿದ್ದಾರೆ. ಭಾವದಾಸ್ಯದ ಅಮಲಿನಲ್ಲಿರುವ ನಮ್ಮವರು ಶೂದ್ರಕನ  ಬಂಡಿಯನ್ನು ಕ್ರಿ.ಶ. ಆರನೆಯ ಶತಮಾನದವರೆಗೂ ಎಳೆದು ತಂದಿದ್ದಾರೆ ಹೀಗೆ ವಿಷಯ ಪಲ್ಲಟವನ್ನು ಮಾಡುತ್ತಿದ್ದಾರೆ.
ಭಾವದಾಸ್ಯದ ಅಮಲೇರಿ
ಸ್ವಭಾವವನು ಮರೆತುಹೋಗಿ
ವಿದೇಶೀಯರ ಸೈದ್ಧಾಂತಿಕ
ವಿಷಮಹಲುಗಳ ಸುಖದಲಿ ತೂಗಿ...

                                     *****
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹದಿಮೂರನೆಯ ಕಂತು, "ಮನದಿ ಮಾರಿಪೋತುಂದಿ! ಮಾಯಮವುತುಂದಿ- ನಮ್ಮದೆನ್ನುವುದು ಬದಲಾಗುತ್ತಿದೆ! ಮಾಯವಾಗಿ ಹೋಗುತ್ತಿದೆ........ "
 
 ಈ ಸರಣಿಯ ಹನ್ನೆರಡನೆಯ ಕಂತು ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ! ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A8-...
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬೇರೆ ಕೆಲಸಗಳಲ್ಲಿ ವ್ಯಸ್ತನಾಗಿದ್ದರಿಂದ ತಿಂಗಳಿಗೂ ಹೆಚ್ಚು ದಿನಗಳ ಕಾಲ ಸಂಪದದಲ್ಲಿ ಬರೆಯಲಾಗಿರಲಿಲ್ಲ. ಆದರೆ ಸರಣಿಯ ಈ ಲೇಖನವನ್ನು ವಾರದ ವಿಶೇಷ ಲೇಖನಗಳನ್ನೊಂದಾಗಿ ಆರಿಸಿದ ಸಂಪದ ನಾಡಿಗರಿಗೂ ಹಾಗೂ ವಾಚಕ ಮಿತ್ರರಿಗೂ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನಕ್ಕೆ ಆರ್ಯರು ಬಂದರಾ? ಭಾರತೀಯರು ಹೋದರಾ?" ಈ ಕೊಂಡಿಯನ್ನು ನೋಡಿ
https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AA-...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.