ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಅಥವಾ ಹಾಸ್ಯಾಸ್ಪದ ಬರೆಹ!!

4.75

  ಚಿತ್ರ ಕೃಪೆ: ಮಿತ್ರನೊಬ್ಬ ಮಿಂಚಂಚೆಯಲ್ಲಿ ಕಳುಹಿಸಿದ್ದು, ಮೂಲ ತಿಳಿದಿಲ್ಲ.

    ಒಮ್ಮೆ ಸಂಪದಿಗರೆಲ್ಲ ಸೇರಿ ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು ಎಂದು ಅದರ ಮೂಲ ಶೋಧಿಸಲು ಒಂದು ಮುಕ್ತ ವಿಚಾರಗೋಷ್ಠಿ ಏರ್ಪಡಿಸಿದರು. ಸಂಪದ ಎಂದ ಮೇಲೆ ಅದು ಮುಕ್ತ ಚರ್ಚೆಯೆಂದು ಬೇರೆ ಹೇಳಬೇಕಾಗಿಲ್ಲವಲ್ಲ, ಆದ್ದರಿಂದ ಎಲ್ಲರೂ ತಮಗೆ ಸರಿತೋರಿದ ವಿಚಾರಗಳನ್ನು ಒಂದೊಂದಾಗಿ ಮಂಡಿಸತೊಡಗಿದರು. ಅದಕೂ ಮೊದಲು ವಿಘ್ನಗಳು ಬರಬಾರದೆಂದು ಆಗಲೇ ಅಂಡಾಂಡ ಭಂಡ ಸ್ವಾಮಿಗಳೆಂದು ಖ್ಯಾತಿ ಇರುವ ಗಣೇಶರನ್ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಹೇಳಿದರು. ಅದರಂತೆ ಅಧ್ಯಕ್ಷ ಪೀಠದ ಮೇಲೆ ಆಸೀನರಾದ ಗಣೇಶರು ಮೊದಲು ಚಿಕ್ಕವರಿಂದ ಪ್ರಾರಂಭವಾಗಲಿ ಎಂದು  ಚಿಕ್ಕು ಉರುಫ್ ಚೇತನ್ ಅವರ ಕಡೆ ನೋಡಿದರು. ಚೇತನ್ ಹೇಳಿದರು, ಇಲ್ಲಿ ಬಾಸುಗಳು ತಮ್ಮ ಸಬಾರ್ಡಿನೇಟ್ಸನ್ನ "ಬ್ಯಾಂಗ್" ಮಾಡುತ್ತಾರೆ, ಹಾಗೆಯೆ ಗರ್ಲ್ ಫ್ರೆಂಡುಗಳು ತಮ್ಮ ಬಾಯ್ ಫ್ರೆಂಡುಗಳನ್ನು, ಮನೆ ಓನರುಗಳು ತಮ್ಮ ಬಾಡಿಗೆದಾರರನ್ನ, ಗೂಂಡಾಗಳು ಶಾಸಕರನ್ನ, ಶಾಸಕರು ಆಫೀಸರುಗಳನ್ನ, ಆಫೀಸರುಗಳು ಜನಸಾಮಾನ್ಯರನ್ನ ಹೀಗೆ ಒಬ್ಬೊಬ್ಬರು ಮತ್ತೊಬ್ಬರನ್ನು "ಬ್ಯಾಂಗ್" ಮಾಡುತ್ತಿರುತ್ತಾರೆ. ಹಾಗಾಗಿ ಇದು ಬ್ಯಾಂಗ್ ಮಾಡುವವರ ಊರು ಬ್ಯಾಂಗಳೂರು ಅದೇ ಕ್ರಮೇಣ ಬೆಂಗಳೂರು ಆಗಿದೆ. ಇದಕ್ಕೆ ತಂತು-ನಿಸ್ತಂತು ಜೀವಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಸುಪ್ರೀತ್ ಅವರು ಅಮೇರಿಕದಲ್ಲೂ ಯಾವುದಾದರೂ ಸಾಫ್ಟವೇರ್ ಕಂಪನಿಯ ನೌಕರರನ್ನು ಬ್ಯಾಂಗ್ ಮಾಡಿದಾಗ, ಐ ಯಾಮ್ ಬೆಂಗಳೂರ್ಡ್ ಅಂತ ಅನ್ನುತ್ತಾರೆ ಎಂದು ಚಿಕ್ಕುವಿನ ಮಾತನ್ನು ಸಮರ್ಥಿಸಿದರು.

    ಅಮೇರಿಕಾದಿಂದ ಈ ಸಭೆಗೆ ಆಗಮಿಸಿದ್ದ  ಶ್ರೀನಾಥರು ನಕ್ಕು, ಬ್ಯಾಂಗ್ ಎನ್ನುವುದು ಇತ್ತೀಚೆಗೆ ಬಂದದ್ದು ಆದರೆ ಬೆಂಗಳೂರು ಅಭಿವೃದ್ಧಿ ಹೊಂದಿದ್ದು ಬ್ರಿಟೀಷರ ಕಾಲದಲ್ಲಿ, ಅವರು ಇಟ್ಟ ಹೆಸರು "ಬ್ಯಾಂಗಲ್" ಊರು ಅಂದರೆ ಬಳೆಗಳ ಊರು, ಇದಕ್ಕೆ ಉದಾಹರಣೆಯಾಗಿ ನೀವು ಮೆಜೆಸ್ಟಿಕ್ಕಿನ ಹತ್ತಿರವೇ ಇರುವ ಬಳೇಪೇಟೆಯನ್ನು ನೋಡಬಹುದು. ಅವರು ಇಲ್ಲಿಗೆ ಬಂದಾಗ ಮೊದಲು ಕಣ್ಣಿಗೆ ಬಿದ್ದದ್ದು ಈ ಬಳೇಪೇಟೆ ಆದ್ದರಿಂದ ಇದನ್ನು ಬ್ಯಾಂಗಲ್ ಊರು ಅದೇ ಈಗಿನ ಬ್ಯಾಂಗಲೂರು ಅಥವಾ ಬೆಂಗಳೂರು. ಆಗ ಸಭೆಯಲ್ಲಿದ್ದ ಜಯಂತರು ಬ್ಯಾಂಗಲ್ ಎನ್ನುವುದು ಆಂಗ್ಲ ಪದ ಅದು ಹೇಗೆ ನಮ್ಮ ಕನ್ನಡದ ಊರಿಗೆ ಇಡುತ್ತಾರೆ ಎಂದು ಸಿಡಿಮಿಡಿಗೊಂಡರು. ಆಗ ರಾಮಮೋಹನರು ಜಯಂತ್ ಅಷ್ಟೊಂದು ಆವೇಶ ಬೇಡ,  ಬಹುಶಃ "ಬಳೇ ಊರು" ಅಂತ ಇದ್ದಿದ್ದು ಇಲ್ಲಿಗೆ ಬ್ರಿಟೀಷರು ಬಂದ ಮೇಲೆ ಅದು ಆಂಗ್ಲೀಕರಣಗೊಂಡಿರಬಹುದು ಅದಕ್ಕೇನಾದರೂ ನಮ್ಮ ಇತಿಹಾಸದಲ್ಲಿ ದಾಖಲೆ ಸಿಗುತ್ತದೆಯೇನೊ ನೋಡೋಣ. ಈಗ ನೋಡಿ ಅರಳೇಪೇಟೆ ಅಂತ ಇದ್ದಿದ್ದು "ಕಾಟನ್ ಪೇಟೆ"ಯಾಗಿಲ್ಲವೆ? ಹಾಗೇ ಇದು ಕೂಡ ಇರಬಹುದು ಸ್ವಲ್ಪ ತಾಳ್ಮೆಯಿಂದ ಬೇರೆಯವರು ಹೇಳುವುದನ್ನೂ ಕೇಳೋಣ ಎಂದಾಗ ಎಲ್ಲರೂ ಸುಮ್ಮನಾದರು.    

    ಆಗ ಕವಿಗಳು ಹೇಳಿದರು ನೋಡಿ ಬೆಂಗಳೂರು ಪುರಾಣ ಪ್ರಸಿದ್ಧವಾದ ಊರು ಅದರ ಕುರುಹಾಗಿ ಬೆಂಗಳೂರಿನಲ್ಲಿ ಧರ್ಮರಾಯನ ಕರಗ ನಡೆಯುತ್ತದೆ. ಅಂದರೆ ಇದು ಮಹಾಭಾರತಕಾಲದಿಂದಲೂ ಇದ್ದ ಊರು.  ಮಹಾಭಾರತದಲ್ಲಿ ಭೀಮನು ದುರ್ಯೋಧನನ ತೊಡೆಯನ್ನು ಮುರಿದದ್ದು ಇಲ್ಲೇ, ದುರ್ಯೋಧನನು ಅಡಗಿಕೊಂಡಿದ್ದು ಇಲ್ಲೇ ಸ್ಯಾಂಕಿ ಕೆರೆಯೆಂದು ಕರೆಯಲ್ಪಡುವ ವೈಶಂಪಾಯನ ಸರೋವರದಲ್ಲಿ, ಅದರ ಇತಿಹಾಸದ ಬಗ್ಗೆ ಆಮೇಲೆ ಹೇಳುತ್ತೇನೆ. ಊರು ಅಂದರೆ ತೊಡೆ ಅದನ್ನು ಮುರಿದದ್ದು ಅಂದರೆ ಭಂಗ ಮಾಡಿದ್ದರಿಂದ ಈ ಪ್ರದೇಶ "ಊರುಭಂಗವಾದ ಪ್ರದೇಶ" ಅದು ಕನ್ನಡದಲ್ಲಿ ಭಂಗವಾದ ಊರು ಅದೇ ಜನರ ಬಾಯಲ್ಲಿ ಬಂಗವೂರು, ಬೆಂಗಳೂರು ಎಂದಾಗಿದೆ. ಅದಕ್ಕೆ ಅಲ್ಲೇ ಇದ್ದ ಆಸುರವರು ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂದರೆ ನನ್ನ ಬ್ಲಾಗ್ ಬರಹ "ನನಗಿಷ್ಟ ನನ್ನ ಸಖಿಯ ಊರು" ನೋಡಿ ಎಂದು ಹೇಳಿದರು.

    ಆಗ ಅಲ್ಲೇ ಆಸೀನರಾಗಿದ್ದ ಸಾಲಿಮಠರು, ಅದು ಸಕ್ಕದ ಹೆಸರಾದ್ದರಿಂದ ಅದನ್ನು ಸರಿಯೆಂದು ಸಮರ್ಥಿಸಲಾಗದು. ಅದಕ್ಕೆ ಕನ್ನಡದ ಮೂಲವಿದೆ. ಅದು ಹೇಗೆಂದರೆ, ಈ ಊರಿನಲ್ಲಿ ಎಲ್ಲರೂ ತಮ್ಮ ಕೆಲಸಗಳಿಗೆ ದೂರದ ಜಾಗಗಳಿಗೆ ಹೋಗಬೇಕಾದ್ದರಿಂದ ಇಲ್ಲಿಯವರು ಬಹಳ ಬೇಗನೆ ಏಳುತ್ತಾರೆ. ಆದ್ದರಿಂದ ಇದು ಬೇಗ+ಏಳುವವರ+ಊರು=ಬೇಗೇಳುವವರ ಊರು, ಮೊದಲನೆಯದು ಗುಣಸಂಧಿಯಾದರೆ ಆಮೇಲಿನದು ಸವರ್ಣದೀರ್ಘ ಸಂಧಿ, ಈ ಸಂಧಿಗಳನ್ನು ಕನ್ನಡಕ್ಕೆ ಎರವಲು ಪಡೆದಿದ್ದಾರೆ. ಅವು ಇಲ್ಲಿ ಬೇಡ. ಬೇಗೇಳುವವರ ಊರು ಇದು ಆಡುನುಡಿಯಲ್ಲಿ ಬೇಗಳೂರು ಆಗಿ "೦" ಪ್ರತ್ಯಯ ಸೇರಿಕೊಂಡು ಬೇಂಗಳೂರು ......ಬೆಂಗಳೂರು ಆಗಿದೆ. ಆಗ ಅಲ್ಲೇ ಇದ್ದ ಮೈಸೂರಿನ ಶಶಿಕುಮಾರ್ ಅವರು ಇದು ಸಕ್ಕದ ಪದವಲ್ಲವೆನ್ನುವುದು ದಿಟ ಆದರೆ ಬೆಂಗಳೂರು ಪದದ ಹಿನ್ನಲೆ ಅದಲ್ಲ. ಅದು ಹೀಗಿದೆ, ಮೊದಲು ಇಲ್ಲೆಲ್ಲಾ ಸುತ್ತು ವನಸಿರಿಯಿಂದ ಊರು ಸುಂದರವಾಗಿ ಕಂಗೊಳಿಸುತ್ತಿತ್ತು. ಇಲ್ಲಿ ಬ್ರಿಟೀಶರು ಬೀಡು ಬಿಟ್ಟು ಬಿಲ್ಡಿಂಗುಗಳು ಹೆಚ್ಚಾಗಿ ಬಿಸಿಲಿನ ಬೇಗೆ ಹೆಚ್ಚಾಯಿತು. ಮತ್ತು ಇಲ್ಲಿ ನೆಲದ ಬೆಲೆ ಹೆಚ್ಚಾದ್ದರಿಂದ ಭ್ರಷ್ಟಾಚಾರವೂ ಹೆಚ್ಚಾಗಿ ಇನ್ನೂ ಹೆಚ್ಚು ಕಟ್ಟಡಗಳಾಗಿ ಬಿಸಿಲು ಇನ್ನೂ ಹೆಚ್ಚಾಯಿತು ಮತ್ತು ದಿನನಿತ್ಯ ವಸ್ತುಗಳ ಬೆಲೆಗಳೆಲ್ಲಾ ವಿಪರೀತವಾಗಿ ಏರಿ ಸಾಮಾನ್ಯ ಜನರೂ ಬೇಗೆಯಿಂದ ಬಳಲುವಂತಾಯಿತು ಅದೇ ಜನರು ಬೆಂದಕಾಳಿನಂತಾದರು. ಆದ್ದರಿಂದ ಜನ ಇದನ್ನು ಬೆಂದಕಾಳೂರು ಅಥವಾ ಬೇಗೆ ಊರು, ಅದೇ ಈಗ ಬೇಂಗಳೂರು ಆಗಿದೆ. ಆಗ ಹೈದರಾಬಾದು ಸೇರಿ ಅಷ್ಟೋ ಇಷ್ಟೋ ತೆಲುಗು ಕಲಿತಿದ್ದ ಶ್ರೀಧರ್ ಸುಮ್ಮನಿರುತ್ತಾರೆಯೆ. "ಬೇಗೆ" ಎನ್ನುವುದು ಕನ್ನಡದ ಶಬ್ದ, ಅದನ್ನು ತೆಲುಗಿನಲ್ಲಿ "ಬೆಂಗ" ಎನ್ನುತ್ತಾರೆ ಮತ್ತು ಬೆಂಗಳೂರಿನಲ್ಲಿ ತೆಲುಗರೇ ಹೆಚ್ಚಿನ ಜನ ಸಂಖ್ಯೆಯಲ್ಲಿರುವುದರಿಂದ ಇದು ತೆಲುಗಿನ ಮೂಲದ್ದು, ಆದ್ದರಿಂದ ನನ್ನ ವಾದ ಸರಿ. ಅದು ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ಎಂದು ಶಶಿಕುಮಾರ್ ಮತ್ತೆ ಪ್ರಶ್ನಿಸಿದರು. ಆಗ ಶ್ರೀಧರ್ ಮತ್ತೆ ಹೇಳಿದರು ನೋಡಿ ನಿಮ್ಮಲ್ಲಿ ಸಂಪಂಗಿ ರಾಮನಗರ ಅಂತ ಇದೆ. ತೆಲುಗಿನಲ್ಲಿ ಸಂಪಿಗೆಗೆ ಸಂಪಂಗಿ ಅನ್ನುತ್ತಾರೆ, ಅದೇ ರೀತಿ ಬೇಗೆ ಅಥವಾ ಬವಣೆಯೆನ್ನುವುದನ್ನು ಒಪ್ಪಿದರೂ ಕೂಡ ಬೆಂಗ ಅಂತ ಬಂದಿರುವುದರಿಂದ ಅದು ಖಚಿತವಾಗಿ ತೆಲುಗಿನದೇ ಅಂತ ಸಮರ್ಥಿಸುತ್ತೇನೆ ಎಂದರು.

    ಇದನ್ನೆಲ್ಲಾ ದೂರದಿಂದ ನಗುತ್ತಾ ವೀಕ್ಷಿಸುತ್ತಿದ್ದ ಮಂಜಣ್ಣನವರು ಬಹಳ ದಿನ ಬೆಂಗಳೂರಿನಲ್ಲಿದ್ದುದ್ದರಿಂದ ಸಹಜವಾಗಿಯೇ ಅವರಿಗೆ ತಮಿಳು ಬರುತ್ತಿತ್ತು. ಅವರೆಂದರು, ಅದು ಹಾಗಲ್ಲ ಸ್ವಾಮಿ ಇದು ತಮಿಳಿನ ವಾಂಗೋ ಶಬ್ದದಿಂದ ಬಂದದ್ದು. ವಾಂಗೋ ವಾಂಗೋ ಎಂದರೆ ತಮಿಳಿನಲ್ಲಿ ಬನ್ನಿ ಬನ್ನಿ ಅಂತ. ಬೆಂಗಳೂರಿಗರು ಎಲ್ಲರನ್ನೂ ವಾಂಗೋ ವಾಂಗೋ ಅಂದರೆ ಬನ್ನಿ ಬನ್ನಿ ಎಂದು ಆಹ್ವಾನಿಸುತ್ತಾರೆ ಆದ್ದರಿಂದ ಇಲ್ಲಿ ಎಲ್ಲೆಲ್ಲಿಯವರೋ ಬಂದು ವಕ್ರಿಸಿಕೊಂಡಿರುವುದು, ಅದು ಈಗ ಬೇಡ. ಅವರು ಈ ಊರಿಗೆ ಇಟ್ಟ ಹೆಸರು ವಾಂಗೋ ಊರು, ವಾಂಗೂರು ಅದು ಹೇಗೋ ಕನ್ನಡಿಗರ ಬಾಯಲ್ಲಿ ಬಾಂಗೋ ಆಗಿ ಬ್ಯಾಂಗೋ ಆಗಿ ಬೆಂಗಳೂರು ಆಗಿದೆ. ಆಗ ಚನ್ನೈನಲ್ಲಿ ವಾಸವಾಗಿದ್ದ ಶ್ರೀನಿವಾಸ್ ಅವರು ಸೂಪರ್ ಆಗಿ ಹೇಳಿದ್ರಿ ಮಂಜಣ್ಣನವರೆ. "ತಮಿಳರು ಇಲ್ಲಿನ ಏರಿಯಾವೊಂದಕ್ಕೆ "ಕಲೀಜು ಪಾಳ್ಯ" ಅದೇ ಗಲೀಜು ಪಾಳ್ಯ ಅಂತ ಹೆಸರಿಟ್ಟರೆ ಅದನ್ನು ನಮ್ಮವರು ಕಲಾಸಿಪಾಳ್ಯಂ ಅಂತ ಸ್ಟೈಲಾಗಿ ಕರೆಯುತ್ತಾರೆ, ಆದ್ದರಿಂದ ವಾಂಗೂರನ್ನು ನಮ್ಮವರು ಸ್ಟೈಲಾಗಿ ಬ್ಯಾಂಗಳೂರು ಎಂದು ಕರೆದಿರಬಹುದು ಅಂತ ಮಂಜಣ್ಣನವರು ಹೇಳಿದ್ದಕ್ಕೆ ಧ್ವನಿಗೂಡಿಸಿದರು.

    ಸಭೆಯಲ್ಲಿ ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಕೃಷ್ಣ ಬೊಳಂಬುರವರು, ಬೇಗೆ ಎಂದು ಶಶಿಕುಮಾರ್ ಅವರು ಹೇಳಿದ್ದು ಸರಿ ಆದರೆ ಬೆಂಗಳೂರಿಗೆ ಆ ಹೆಸರು ಬರಲು ಅದು ಕಾರಣವಲ್ಲ. ಇಲ್ಲಿ ಬಿಸಿಲಿನ ಬೇಗೆಯಿಂದ ಮಾತ್ರವಲ್ಲ ಮಂಡೆ ಬಿಸಿಯಾಗುವುದು. ಇದಕ್ಕೆ ಹಲವಾರು ಕಾರಣಗಳಿವೆ, ಆಗೆಲ್ಲಾ ಇಲ್ಲಿಯ ಜನ ಎಳನೀರು ಅದೇ ಬೋಂಡಾ ಕುಡಿಯುತ್ತಾರೆ. ಇಲ್ಲಿಯ ಚನ್ನಪಟ್ಟಣ, ಮದ್ದೂರಿನಿಂದ ಬರುವ ಬೋಂಡಾಗಳು ಕಡಿಮೆ ಬರುವುದರಿಂದ ಮಂಗಳೂರು ಹಾಗು ಕೇರಳಗಳಿಂದ ಅವನ್ನು ತರಿಸಿ ಕುಡಿಯುತ್ತಾರೆ. ಅದಕ್ಕೆ ಇದನ್ನು ಬೋಂಡ ಕುಡಿಯುವವರ ಊರು, ಬೋಂಡ ಕುಡಿಯೂರು, ಇಲ್ಲಿ ಒಂದು ಅರಿಸಮಾಸ ಬರುವುದರಿಂದ ಅದನ್ನು ಬೋಂಡಊರು ಎಂದು ಬದಲಾವಣೆಗೊಂಡಿದೆ. ಮಧ್ಯದಲ್ಲಿ "ಡ" ಬದಲಿಗೆ "ಗ" ಸೇರಿ ಬೋಂಗ ಆಗಿದೆ. ಅದೇ ಕ್ರಮೇಣ ಬೋಂಗಊರು ಬೋಂಗಳೂರು-ಬೆಂಗಳೂರು ಆಗಿದೆ. ಅಷ್ಟರಲ್ಲಿ ಮೈಸೂರಿನ ಬಾಲುರವರು ಅದೇನು ಬೋಂಡ ಅಂದ್ರೆ ಎಳನೀರು ಬುರುಡೇನ?! ಅಂತ ಪ್ರಶ್ನಿಸಿದರು. ಆಗ ಪಾರ್ಥರವರಿಗೆ ತಮ್ಮ ಬುರುಡೆಯ ಕಥೆ ಜ್ಞಾಪಕಕ್ಕೆ ಬಂದು ಮನಸ್ಸಿನಲ್ಲಿಯೇ ನಕ್ಕರು, ಅದನ್ನು ಗಮನಿಸಿದ ಜಯಂತ್ ಅವರ ಮನಸ್ಸನ್ನು ಓದಿದವನಂತೆ ಅವನೂ ಕೂಡ ಕಿಸಕ್ಕನೆ ನಕ್ಕ, ಏಕೆಂದರೆ ಅವನು  ಕೂಡ ಬುರುಡೇ ಸ್ಪೆಷಲಿಸ್ಟಲ್ಲವೇ?

    ಇತ್ತ ಬೋಂಗ ಶಬ್ದ ಕಿವಿಗೆ ಬಿಳುತ್ತಿದ್ದಂತೆ ಸುಮಂಗಲಾ ಅವರು ನನ್ನ ಕಡೆ ನೋಡಿ, ಏನು ಗುರುಗಳೇ ಎಲ್ಲಾ ಗಂಡಸ್ರೇ ಮಾತಾಡ್ಲಿಕತ್ತಾರ ಹೆಣ್ಣು ಮಕ್ಳಿಗೂ ಸ್ವಲ್ಪ ಮಾತಾಡಕ ಅವಕಾಶ್ ಮಾಡಿ ಕೊಡಾಕ್ ಹೇಳ್ರಿ! ಇವರು ಹಾಗೆನ್ನುತ್ತಿದ್ದಂತೆ ನಾನು ಪಾರ್ಥರವರ ಕಡೆ ನೋಡಿದೆ, ಅವರು ಎಲ್ಲಾ ಒಂದು ಕ್ಷಣ ಸೈಲೆಂಟಾಗಿರಿ ಎಂದು ಎಲ್ಲರಿಗೂ ಸನ್ನೆ ಮಾಡಿದರು. ಆಗ ಸುಮಂಗಳಾ ಹೇಳಾಕ ಷುರು ಮಾಡಿದ್ರು, "ಎಲ್ಲಾ ಹಿರಿಯರಿಗೂ ನನ್ ನಮಸ್ಕಾರ್ರಿ! ನಮ್ ಉತ್ತರ್ ಕರ್ನಾಟಕದ್ ಕಡೀ ಬೋಂಗಾ ಅಂದ್ರ ಗ್ಯಾಸ್ ಬಿಡೂದ್ ರೀ, ಅದರೀ ಈ ಬೆಂಗ್ಳೂರ್ ಮಂದಿ ಅದೇನೋ ಅಂತಾರಲ್ರೀಪ ಅದ....ಅದ......ಈಗ ಹೊಳಿತ್ ನೋಡ್ರೆಲಾ ಅದ ರೀ....ರೀಲ ಬಿಡೂದು ಇಲ್ಲಾ ರೇಲು ಬಿಡೂ.....ದ್......ರೀಪ!. ಇಲ್ಲ್ ಬಾಳ್ ಮಂದೀಗ ಅದ ದಂಧಾರೀಪ ಅದ್ಕ ಇದ್ನ ಬೋಂಗಾ ಊರ್ ಅಂತಾರಿ. ಅದಾ....ಮಂದಿ ಬಾಯಾಗ ಬೊಳಂಬುರವ್ರು ಹೇಳಿಧಂಗ ಬೆಂಗ್ಳೂರ್ ಆಗ್ಯಾದ.

    ಅಷ್ಟರಲ್ಲಿ, ಅಲ್ಲೇ ಇದ್ದ ಹನುಮಂತ ಪಾಟೀಲರು, ಹೆಣ್ಮಗ್ಳಾದ್ರೂ ಭಾಳ್ ಧೈರ್ಯಾ ತಗೋಂಡ್ ಮಾತಾಡೀದ್ ನೋಡ್ವ ನೀ ಹೇಳೂದು ಒಂದು ರೀತಿ ಖರೇನ ನೋಡ್ ತಂಗಿ, ಆದ್ರೂ ಭೋಂಗಾ ಅಂದ್ರ "ಸೀಟಿ" ಅಂತಾನೂ ಅರ್ಥ್ ಬರ್ತದ. ಇದೇ ಹೆಚ್ ಸೂಕ್ತ ಅಂತ ನನಗನ್ನಿಸ್ಲಕ್ಕತ್ಯದ. ಇಲ್ಲಿ ಸಿಟಿ ಬಸ್ಸಿನ್ಯಾಗ ಕಂಡಕ್ಟರ್ಗೋಳು ಸೀಟಿ ಊದ್ತಾರ, ಹಂಗ ಟ್ರಾಫಿಕ್ ಪೋಲಿಸ್ರು, ರಾತ್ರಿ ಆತಂದ್ರ ಬೀಟಿನ್ ಪೋಲಿಸ್ರು ಮತ್ತ ರೈಲು ಹೊಂಡು ಮುಂದ ಅದುರ್ ಸೀಟಿ ಕೇಳಿಸ್ತೇತಿ, ಫ್ಯಾಕ್ಟರಿ ಬಿಟ್ಟಾಗೂ ಸೆತೆ ಈ ಬೋಂಗಾ ಶಬ್ದ ಕೇಳಿಸ್ತೇತಿ, ಅದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಪಾರ್.....ಯಾಗೋಳು (ಪಡ್ಡೆ ಹುಡುಗ್ರು) ಪೋರಿಗುಳಿಗೆ ಸೀಟಿ ಹೊಡಿತಾವ; ಅದ್ಕ ನಮ್ ಉತ್ತರ್ ಕರ್ನಾಟಕುದ್ ಮಂದಿ ಈ ಊರ್..ನ ಬೋಂಗಾ ಊರು ಅಂತಾ ಕರ‍್ದಾರ. ಇಷ್ಟು ಹೇಳಿದ ಪಾಟೀಲರು ಅಲ್ಲೇ ಹತ್ತಿರದಲ್ಲಿದ್ದ ಗೋಪಾಲ್ ಕುಲಕರ್ಣಿಗಳ ಕಡೆ ತಿರುಗಿ ನಾನು ಹೇಳಿದ್ದು ಸರಿನಾ ಅಂತ ಅಭಿಪ್ರಾಯಕ್ಕಾಗಿ ನೋಡಿದರು. ಗೋಪಾಲರು ಯಾರ ಪರವೂ ವಹಿಸಲು ಇಷ್ಟಪಡದೆ, ಒಂದೇ ಮಾತಿನಲ್ಲಿ ಇಲ್ಲಿಯವರೆಗೆ ಎಲ್ಲರೂ ಹೇಳಿದ್ದು ನಿಜ, ಅವರಿಗೆಲ್ಲ ನನ್ನ ಧನ್ಯವಾದಗಳು ಅಂತ ಹೇಳಿ ಸುಮ್ಮನಾಗಿಬಿಟ್ಟರು. 

    ಈ ವರದಿಯನ್ನು ತಮ್ಮ ಕಂಪ್ಯೂಟರ್ ಪರದೆಯ ಮೇಲೆ ಮುಂಬೈಯ್ಯಲ್ಲಿ ಲೈವ್ ಆಗಿ ನೋಡುತ್ತಿದ್ದ ಮಿಶ್ರಿಕೋಟಿಗಳು, ವೀಡಿಯೋ ಕಾನ್ಫರೆನ್ಸ್ ಟೆಕ್ನಿಕ್ಕಿನ ಮೂಲಕ ಸಂಪದಗರಿಗರನ್ನುದ್ದೇಶಿಸಿ ಮಾತನಾಡಿದರು. ನೋಡಿ ಬೆಂಗಳೂರಿಗೆ ಮೊದಲು ಉತ್ತರ ಭಾರತೀಯರು ವಲಸೆ ಬಂದಾಗ ಅಲ್ಲಿ ಹೆಚ್ಚು ಬದನೆಕಾಯಿಯನ್ನು ಬಳಸುತ್ತಿದ್ದರು. ಈಗಲೂ ಈರನಗೆರೆ ಬದನೆಕಾಯಿ ಅಲ್ಲಿ ಫೇಮಸ್ಸು, ಹಾಗೆಯೇ "ಬೇಂಗನ್ ಬಾತ್"  ಅಲ್ಲಿನವರಿಗೆ ಹೆಚ್ಚು ಪ್ರಿಯವಾದ ತಿನಿಸು. ಹಾಗಾಗಿ ಅವರು ಇದನ್ನು "ಬೇಂಗನ್ ಊರು" ಅಂತ ಕರೆದರು. ಅದೇ ಕಾಲಕ್ರಮೇಣ ಈಗಿನ ಬೆಂಗಳೂರಾಗಿದೆ, ಎಂದು ತಿಳಿಸಿಕೊಟ್ಟರು. ಆಗ ಸಭೆಯಲ್ಲಿ ಗದ್ದಲ ಷುರುವಾಯಿತು, ಒಬ್ಬರು ಅದು ಸಂಸ್ಕೃತ ಮೂಲದ್ದೆಂದರೆ, ಇನ್ನೊಬ್ಬರು ಅದು ತೆಲುಗೆಂದು, ತಮಿಳೆಂದು, ಅದು ಕನ್ನಡವೆಂದು, ಕನ್ನಡದ್ದಾದರೆ ಕುಂದಾಪುರ ಕನ್ನಡದ್ದಾ, ಧಾರವಾಡದ್ದಾ ಅಥವಾ ಬೆಂಗಳೂರಿನದ್ದಾ ಅಂತ ಸದಸ್ಯರೆಲ್ಲ ತಾವು ಹೇಳಿದ್ದೇ ಸರಿ ಎಂದು ತಮ್ಮ ತಮ್ಮಲ್ಲೇ ವಾಗ್ಯುದ್ಧಕ್ಕೆ ಇಳಿದರು. ಇದನ್ನು ಕಂಡ ಪಾರ್ಥರು, ಕವಿಗಳ ಮೂಢ ಉವಾಚದಿಂದ ಒಂದು ಚೌಪದಿಯನ್ನು ಹೇಳಿದರು:

                                                       ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ

                                                          ನಿಜವ ನಂಬಲು ಹಿಂಜರಿಕೆಯೇಕೆ |

                                                          ಜಿಜ್ಞಾಸೆಯಿರಲಿ ಹೇಗೆ ಏನು ಏಕೆ

                                                         ಹಿರಿಯ ನಿಜವರಿತು ನಡೆವ ಮೂಢ!!

     ಆಗ ಎಲ್ಲರೂ ಸುಮ್ಮನಾದರು, ಆಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಗಣೇಶರು ಥೇಟ್ ಅಂಡಾಂಢ ಭಂಡ ಸ್ವಾಮೀಜಿಯ ಸ್ಟೈಲಿನಲ್ಲಿ ಪ್ರವಚನ ಷುರು ಮಾಡಿದರು. ನೋಡಿ ಈ ಎಲ್ಲಾ ಸಮಸ್ಯೆ ಬಗೆಹರಿಯ ಬೇಕೆಂದರೆ ನೀವು ನನ್ನ ಪೂಜೆ ಮಾಡ್ಬೇಕು. ಆಗ ಸಭೆಯಲ್ಲಿ ಒಂದು ಕ್ಷಣ ಆಶ್ಚರ್ಯ ಉದ್ವೇಗ ಉಂಟಾದವು ಇದೇನಿದು ಸ್ವಾಮಿಗಳು ಹೀಗೆ ಅಪ್ಪಣೆಕೊಡಿಸುತ್ತಿದ್ದಾರೆ ಎಂದು ಹಲವರ ಹುಬ್ಬುಗಳು ಮೇಲೇರಿದವು. ಸಭಿಕರನ್ನು ನೋಡಿ ಮೀಸೆಮರೆಯಲ್ಲೇ (ಮೀಸೆ ಇದೆಯಾ?) ನಕ್ಕ ಗಣೇಶರು ನನ್ನ ಅಂದರೆ ನನ್ನ ಹೆಸರಿನ ದೇವರ ಪೂಜೆಯನ್ನು ಮಾಡಬೇಕು ಎಂದಾಗ ಸಭೆ ನಿರಾಳವಾಯಿತು. ನೋಡಿ ನಿಮಗೆ ತಿಳಿದ ಹಾಗೆ ನಾನು ಈ ಬೆಂಗಳೂರಿನ ಗಲ್ಲಿ-ಗಲ್ಲಿ ತಿರುಗಿದ್ದೇನೆ, ಈ ಮೊದಲು ನಿಮಗೆ ಮಲ್ಲೇಶ್ವರದ ಪರಿಚಯ ಮಾಡಿದೆ, ಈಗ ಸದಾಶಿವ ನಗರ ಪಾರ್ಕ್ ಹಾಗೆ ಮುಂದುವರೆಯುತ್ತೇನೆ. ಈಗ ನಾನು ಹೇಳ ಹೊರಟಿರುವ ವಿಶ್ಯಾ ಏನಂದ್ರೆ ನನಗೆ ಈ ಬೆಂಗಳೂರಿನ ಸಂಪೂರ್ಣ ಪರಿಚಯ ಇದೆ. ಅದಕ್ಕೂ ಮುಂಚೆ ಒಂದು ಮಾತು, ನೋಡಿ ನೀವು ಬೇಗ ಏಳುವುದೇತಕ್ಕೆ ಬೇಗನೇ ಆಫೀಸಿಗೆ ಹೋಗುವುದಕ್ಕೆ, ಯಾಕೆ ಆಫೀಸಿಗೆ ಬೇಗ ಹೋಗ್ಬೇಕು ಅಂದ್ರೆ ಬಾಸಿನಿಂದ ಬ್ಯಾಂಗ್ ಆಗುವುದನ್ನ ತಪ್ಪಿಸಿಕೊಳ್ಳೋದಕ್ಕೆ. ನೀವು ಎಷ್ಟೇ ಬೇಗ ಎದ್ದರೂ ದಾರಿಯಲ್ಲಿ ಟ್ರಾಫಿಕ ಜ್ಯಾಮ್ ಅಗದಂಗೆ ಇರ್ಬೇಕು ಅಂದ್ರೇ ನೀವೆಲ್ಲಾ ಗಣೇಶನ ಪೂಜೆ ಮಾಡಬೇಕು. ಹಾಗೆ ಈ ಬೆಂಗಳೂರಿನಲ್ಲಿ ಬಳೇ ತಗೋಬೇಕಂದ್ರೂ, ಅಥವಾ ಬಿಸಿಲಿನ ಬೇಗೆ ಅಥವಾ ಬೆಲೆಯೇರಿಕೆಯ ಬವಣೆಯಿಂದ ತಪ್ಪಿಸ್ಕೋಬೇಕು ಅಂದ್ಕೊಂಡ್ರೂ ಮೊದ್ಲು ಗಣೇಶನ್ನ ಪೂಜೆ ಮಾಡ್ಬ್ಕೇಕು. ತೆಲುಗು, ತಮಿಳರು,ಇಂಗ್ಲೀಷಿನೋರು, ಉತ್ತರ ಭಾರತೀಯರು ಎಲ್ರೂ ನಡುವೆ ನೀವು ಏಗಿ ಈ ಊರಲ್ಲಿ ಬದುಕ್ಬೇಕಂದ್ರೂ ನೀವು ಗಣೇಶ್ನ ಪೂಜೆ ಮಾಡ್ಬೇಕು. ಕರ್ನಾಟಕದಲ್ಲಿ ಏನೇ ಬದ್ಲಾವಣೆ ತರ್ಬೇಕು ಅಂದ್ರೆ ಅದು ಬೆಂಗ್ಳೂರಿನಿಂದ್ಲೇ ಪ್ರಾರಂಭವಾಗ್ಬೇಕು. ಅದಕ್ಕೇ ಈ ಊರಿಗೆ ಇರೋ ಮಹತ್ವ ನೋಡಿ ಇಲ್ಲಿನ ಮೂಲನಿವಾಸಿಗಳಾದ ಈಗ ಅಲ್ಪಸಂಖ್ಯಾತರಾದ ಕನ್ನಡಿಗರ ಪೂರ್ವಿಕರು ಗಣೇಶನ ಪೂಜೆ ಮಾಡೋದು ಜನ ಮರೀಬಾರ್ದು ಅಂತೇಳಿ ಈ ಊರಿಗೆ ಗಣೇಶನ ಊರು ಅಂದ್ರೆ, "ಬೆನಕನ ಊರು" ಅಂತಾ ಹೆಸರಿಟ್ರು, ಅದು ಜನ್ರು ಬಾಯ್ನಲ್ಲಿ ಬೆಂಕೂರು ಆಗಿ ಆಮೇಲೆ ಬೆಂಕ್ಳೂರು ಆಗಿ ಬೆಂಗ್ಳೂರ್ ಆಯ್ತು. ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವಂತೆ ಅಂಡಾಂಡ ಭಂಡ ಸ್ವಾಮಿಗಳು ಉತ್ತರಿಸಿದ್ದರಿಂದ ಅವರಿಗೆ ಆ ಪಟ್ಟವನ್ನು ಖಾಯಂ ಆಗಿ ಉಳಿಸಬೇಕೆಂದು ಆ ಸಭೆಯಲ್ಲಿ ಅವಿರೋಧವಾಗಿ ತೀರ್ಮಾನವಾಯಿತು. ಇದನ್ನು ಹಿರಿಯಾರಾದಂಥಹ ಕಾಮತರೂ ಕೂಡ ಅನುಮೋದಿಸಿದರು.

    ಆಗ ಚಿಕ್ಕುವಿನ ನೇತೃತ್ವದಲ್ಲಿ ಪಡ್ಡೆ ಹುಡುಗರ ಗುಂಪೊಂದು ತಯಾರಾಗಿ ಅವರೆಲ್ಲ ಒಕ್ಕೊರೊಲಿನಿಂದ ಭಜನೆ ಷುರು ಮಾಡಿದರು.

                                                   "ಅಂಡಾಂಡ ಭಂಡ ಸ್ವಾಮೀಜಿಯ ಕರುಣೆ

                                                     ಪಡೆದು ಆಗೋಣ ನಾವು ಜಾಣ ಜಾಣೆ!

                                                 ಇದ ಹಾಡಿದರು ಯಾರೂ ಕೊಡರು ಎಂಟಾಣೆ,

                                                   ಆದರೂ ಇದನೇಕೆ ಹಾಡಬೇಕೋ ನಾಕಾಣೆ!!

    ಈ ಸಭೆಯ ಕಾರ್ಯಕಲಾಪಗಳನ್ನು ವರದಿ ಮಾಡಲೆಂದು ಅಲ್ಲಿಗೆ ಆಗಮಿಸಿದ್ದ "ಸತ್ಯ ಚರಣ" ಇನ್ನು ಹೆಚ್ಚು ಹೊತ್ತು ಇಲ್ಲಿದ್ದರೆ ತನಗೆ ನಿಮ್ಹಾನ್ಸೇ ಗತಿಯಾಗಬಹುದೆಂದು ಹೆದರಿ ಅಲ್ಲಿಂದ ಕಾಲ್ತೆಗೆದರು.ವಿ.ಸೂ.: ಇದು ಕೇವಲ ಹಾಸ್ಯಕ್ಕಾಗಿ ಬರೆದದ್ದು, ಯಾರೂ ಇದರಿಂದ ಕೋಪಿಸಿಕೊಳ್ಳುವುದಿಲ್ಲವೆಂದು ಭಾವಿಸುತ್ತೇನೆ!  ಹಾಗೊಂದು ವೇಳೆ ಕೋಪವಿದ್ದರೆ ಅದಕ್ಕೆ ಕ್ಷಮೆಯಿರಲಿ :))

  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಂಗೆ ಭಯಂಕರ ಕೋಪ ಬಂದಿದೆ... ಹೇಗ್ ನಲ್ಲಿರುವ ಅಂತಾರ್ರಾಷ್ಟ್ರೀಯ ಕೋರ್ಟ್ ನಲ್ಲಿ ಮಾನ ನಷ್ಟ ಮೊಕದ್ದಮೆ ಹಾಕುತ್ತೇನೆ. ವಿಮಾನದಲ್ಲಿ ಕೋರ್ಟ್ ಗೆ ಸುತ್ತಾಡಿ ಸುಸ್ತಾಗುವಂತೆ ಮಾತನಾಡುತ್ತೇನೆ. :) ಒಂದು ಸ್ವೀಟ್ ಪಾರ್ಟಿ ಕೊಟ್ಟರೆ ಮಾತ್ರ ಕೋಪ ಇಳಿದೀತು....!!! ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲಿಮಠರೆ, "ಹೇಗ್" ಆದ್ರೂ ಹೈದ್ರಾಬಾದಿಗೆ ಬರ್ರೆಲಾ, ಇಲ್ಲೇ ಸ್ವೀಟ್ ಪಾರ್ಟಿ ಯಾಕ ಹಾಟ್.....ಬಿಸಿ, ಬಿಸಿ ಚಾ....ನೂ ಕುಡುಸ್ತೇನ0ತ. ಶರಣ್ರೀ....ಪಾ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರವರೆ, ನಿಜಕ್ಕೂ ಅದ್ಭುತ ಹಾಸ್ಯ ಬರೆಹ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಭಾಗ್ವತರೆ. ಆ ಸಭೆಯಲ್ಲಿ ನೀವು ಮತ್ತು ನಾವಡರು ಇದ್ದದ್ದನ್ನ ನಾನು ಗಮನಿಸಲಿಲ್ಲ. ಆ ಗದ್ದಲದಲ್ಲಿ ನೀವು ಹೇಳಿದ್ದು ಯಾಕೋ ರೆಕಾರ್ಡ್ ಆಗಿಲ್ಲ. :)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಿದ್ರೆ ಬಚಾವ್..;) ) )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀದರ್ ತಿಳಿಹಾಸ್ಯದ ಬರಹ ತು೦ಬಾ ಚೆನ್ನಾಗಿದೆ ಹಾಗೆ ಕವಿ ನಾಗರಾಜರ 'ಮೂಡ' ಕವನ ನನ್ನ ಬಾಯಲ್ಲಿ ಹಾಡಿಸಿ , ಅವರಿಗೆ ಸಲ್ಲಬೇಕಾದ 'ಕ್ರೆಡಿಟ್' ನನಗೆ ಕೊಟ್ಟಿದ್ದೀರಿ ! ಮತ್ತು ಎಲ್ಲ ದಿಕ್ಕಿನಿಂದಲೂ ಯೋಚಿಸಿರುವ ತಮಗೆ ಇನ್ನೊಂದು ನೆನಪಿಗೆ ಬರಲಿಲ್ಲವೆ ನೀವು ಹೇಳಿದಂತೆ ಎಲ್ಲರನ್ನು ವಾ೦ಗೊ ವಾ೦ಗೊ ಎನ್ನುವ ನಾವು ದಡ್ಡರಲ್ಲವೆ ? ದಡ್ಡ ಅನ್ನುವದಕ್ಕೆ ಕನ್ನಡದಲ್ಲಿ ಏನು ಹೇಳಿ : ಪೆಂಗ ಅಂದರೆ ಪೆಂಗರಿರುವ ಊರು ಪೆಂಗಳೂರು ... ಕ್ರಮೇಣ ಬೆಂಗಳೂರು ಆಗಿದೆ ಅಂತ ನನ್ನ ಅಭಿಮತ ಯಾರಿಗಾದರು ಕೋಪ ಬಂದಿದ್ದರೆ ನಾನು ಕ್ಷಮೆಯನ್ನಂತು ಕೇಳಲ್ಲ :)))))) ‍‍‍‍‍‍‍‍‍‍‍‍‍‍‍‍‍‍‍‍‍‍‍‍‍================================================== ಹುಡುಕು ಪದ: ಪೆಂಗ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಪೆಂಗ ನಾಮಪದ (ದೇ) ಪೆದ್ದ, ದಡ್ಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್, ಮೊದಲನೆಯದಾಗಿ ಮೆಚ್ಚುಗೆಗೆ ಧನ್ಯವಾದಗಳು. ಇಲ್ಲಿ ಮೂಢದ ಕವಿತೆಯನ್ನು ನಾಗರಾಜ್ ಅವರೆ ಹೇಳಿದ್ದರೆ ಕ್ರೆಡಿಟ್ ಅವರಿಗೆ ಮಾತ್ರ ಹೋಗುತ್ತಿತ್ತು. ಈಗ ಅವರ ಚೌಪದಿಯನ್ನು ನೀವು ಹೇಳಿದ್ದರಿಂದ ಕ್ರೆಡಿಟ್ ಇಬ್ಬರಿಗೂ ಸಂದಿತು. <<ದಡ್ಡ ಅನ್ನುವದಕ್ಕೆ ಕನ್ನಡದಲ್ಲಿ ಏನು ಹೇಳಿ : ಪೆಂಗ ಅಂದರೆ ಪೆಂಗರಿರುವ ಊರು ಪೆಂಗಳೂರು ... ಕ್ರಮೇಣ ಬೆಂಗಳೂರು ಆಗಿದೆ ಅಂತ ನನ್ನ ಅಭಿಮತ>> ಈ ಅಭಿಪ್ರಾಯ ಉಳಿದ ಎಲ್ಲ ಅಭಿಪ್ರಾಯಗಳಿಗಿಂತ ಹೆಚ್ಚು ಸರಿಯೆನಿಸುತ್ತದೆ. ಸ್ವಾಮಿ, ನಾನು ಪೆಂಗಳೂರು ರಾಜಧಾನಿಯಾದ ಕರ್ನಾಟಕದಿಂದ ಬಂದವನು ಹಾಗಾಗಿ ನಾನು ಕೂಡ ಪೆಂಗನಾದ್ದರಿಂದ ನನಗೆ ಇದೆಲ್ಲಾ ಎಲ್ಲಿ ಹೊಳೆಯಬೇಕು? ಅಷ್ಟು ಹೊಳೆದಿದ್ದರೆ ನಮ್ಮ ಬಳ್ಳಾರಿಯನ್ನು ಲೂಟಿ ಮಾಡುತ್ತಿರುವ ಹೊರ-ರಾಜ್ಯದವರನ್ನು ಹಾಗೆ ಒಳಗೆ ಬಿಟ್ಟುಕೊಳ್ಳುತ್ತಿದ್ದೆವ? ಕಡೆಯಲ್ಲಿ ಯಾರಿಗಾದರೂ ಕೋಪ ಬಂದು ನಿನ್ನ ತಲೆ "ಹದ-ಗೆಟ್ಟ ಹೈದ್ರಾಬಾದ್ ಆಗ್ಲಿ" ಎಂದರೆ ಏನು ಮಾಡೋದು ಸ್ವಾಮಿ ಅದಕ್ಕೆ ಮುಂಜಾಗ್ರತೆಯಾಗಿ ಯಾರೂ ಕೋಪಿಸಿಕೊಳ್ಳಬೇಡಿ ಅಂತ ವಿ. ಸೂ. ಕೊಟ್ಟದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ..ಹ..ಹ....ಹಾ.....!!! ಸೊಗಸಾಗಿದೆ. ಸಂಪದಕ್ಕೆ ನಿಜವಾದ ಕ್ರೆಡಿಟ್, ಆಮೂಲಕ ನಿಮಗೆ ಮತ್ತು ಆನಂದಿಸಿದ ಎಲ್ಲರಿಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜ್ ಅವರೆ, ನಮ್ಮಂತಹವರ ಬರಹವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮಂತಹ ಹಿರಿಯರಿಂದಾಗಿ ಸಂಪದದ ಶೋಭೆ ಹೆಚ್ಚಿದೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಅಂದ ಹಾಗೆ ನಿನ್ನೆ ರಾತ್ರಿ ಪ್ರಸಾರವಾದ "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಕೆಳದಿ ಲಿಂಗಣ್ಣನವರ ಪುಸ್ತಕದ ಬಗ್ಗೆ ಪ್ರಸ್ತಾಪ ಬಂದಿತ್ತು. ಅದನ್ನು ಕೇಳಿ ಅವರ ವಂಶಸ್ಥರಾದ ನೀವು ಸಂಪದಿಗರಾಗಿರುವುದು ನೆನೆದು ನಾನೂ ಕೂಡ ಸಂಪದ ಬಳಗ ಸೇರಿದ್ದಕ್ಕೆ ಹೆಮ್ಮೆಯೆನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಅವರೇ ಚೆನ್ನಾಗಿದೆ ತಿಳಿಹಾಸ್ಯ .... ಈಚೆಗೆ ನಿಮ್ಮ ಬರಹಗಳಲ್ಲಿ ವೈವಿಧ್ಯತೆ ಇದೆ ... ಹೀಗೆ ಮು0ದುವರೆಯಲಿ ಸಾಹಿತ್ಯ ಸೇವೆ :‍)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲ್ ಜೀ, ನಿಮ್ಮ ಮೆಚ್ಚುಗೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಶ್ರೀನಾಥ್ ಜೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀದರ್ ಶೀರ್ಷಿಕೆಯಲ್ಲಿರುವ ಬರೆಹ ವನ್ನು ಬರಹ ಎಂದು ಮಾಡಿ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.ಸಕ್ಕತ್ ..... ತು0ಬಾ ಚೆನ್ನಾಗಿದೆ :)))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆಹ ಅ0ತ ಇದ್ದರೆ ಪ0ಚ್ ಇರುತ್ತದೆ ಎ0ದು ಹಾಗೆ ಬರೆದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಅವರೇ ಸ೦ಪದಿಗರನ್ನೆಲ್ಲಾ ಸೇರಿಸಿಕೊ೦ಡು ಒ೦ದು ಉತ್ತಮ ಹಾಸ್ಯ ಬರಹ ಕೊಟ್ಟಿದ್ದೀರಿ.ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲ ಜಯ0ತರೆ, ನೀವು ಸತೀಶ್ ಅವರಿಗೆ ನೀವು ಕಬ್ಬನ್ ಪಾರ್ಕಿನ ಬಳಿ ಬನ್ನಿ ಅಲ್ಲಿ0ದ ಇಬ್ಬರೂ ಸೇರಿ ಗೋಷ್ಠಿ ನಡೆಯುವ ಸ್ಥಳಕ್ಕೆ ಹೋಗೋಣ ಎ0ದು ಹೇಳಿದ್ದಿರ0ತೆ. ತೀರಾ ಅವರು ಅಲ್ಲಿಗೆ ಬರೋ ಹೊತ್ತಿಗೆ ನೀವು ಯಾವುದೋ ಹೈಹೀಲ್ಡ್ ಹಾಕಿದ ಚೆಲುವೆಯ ಹಿ0ದೆ ಹೋಗಿ ಬಿಡೋದಾ? ಮೆಚ್ಚುಗೆಗೆ ನಿಮಗೂ ಧನ್ಯವಾದಗಳು .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರವರೇ, ತಮ್ಮ ಈ ನವಿರಾದ ಹಾಸ್ಯ ತುಂಬಾ ಖುಶಿ ಕೊಟ್ಟಿತು. ಪ್ರತಿಯಾಗಿ ನಿಮಗೇನು ಕೊಡಲಿ? ಹೌದು, ನೆನಪಾಯಿತು ಸುಮಂತ್ ಅವರು ಸಂಪದದಲ್ಲಿಯೇ ತಯಾರಿಸಿರುವ ಗರಂ ಚಾಯ್...ನಿಮಗಾಗಿ ... http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೀ ಗರಮ್ ಚಾದಲ್ಲೇ ಎಲ್ಲಾ ಮುಗಿಸಿಬಿಟ್ಟಿರಲ್ಲ? ನೀವು ಹಾಲು....ತಪ್ಪಿದಲ್ಲಿ ಕನಿಷ್ಠ ಆಲ್ಕೋಹಾಲನ್ನಾದರೂ ಕುಡಿಸುತ್ತೀರೆ0ದುಕೊ0ಡಿದ್ದೆ ಶಾಸ್ತ್ರಿಗಳೆ. ಒಳ್ಳೆಯ ಚಾಯ್ ಕುಡಿಸಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))))))))))))))) ಶ್ರೀಧರ್‌ಜೀ, ಸೂಪರ್. "ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು - ಒಂದು ಹಾಸ್ಯ ಬರಹ" ಶೀರ್ಷಿಕೆ ಅಷ್ಟೇ ಸಾಕು. ಎಲ್ಲರನ್ನೂ ಸೇರಿಸಿ ಒಂದು ಸುಂದರ ಹಾಸ್ಯ ಬರಹ ಬರೆದಿದ್ದೀರಿ. ಯಾವ ರೀತಿಯಲ್ಲೆಲ್ಲಾ "ಬೆಂಗಳೂರು" ಆಗಲು ಸಾಧ್ಯ ಅದನ್ನು ಹೇಳಿದ್ದೀರಿ. >>>ಇದ ಹಾಡಿದರು ಯಾರೂ ಕೊಡರು ನಾಕಾಣೆ, ಆದರೂ ಇದನೇಕೆ ಹಾಡಬೇಕೋ ನಾಕಾಣೆ!! -ಎಂಟಾಣೆ ಮಾಡಿ.. ಸ್ವಾಮಿಗಳು ಚಲಾವಣೆಯಲ್ಲಿರುವಂತೆ ಮಾಡಿ :) ======= ಶಾಸ್ತ್ರಿಗಳು ಹೇಳಿದಂತೆ- >>>ತಮ್ಮ ಈ ನವಿರಾದ ಹಾಸ್ಯ ತುಂಬಾ ಖುಶಿ ಕೊಟ್ಟಿತು. ಪ್ರತಿಯಾಗಿ ನಿಮಗೇನು ಕೊಡಲಿ? -ಹೌದು, ನೆನಪಾಯಿತು..>>>ಸ್ವಾಮಿಗಳೇ ಆದಷ್ಟು ಬೇಗ ಮಿಗತಾ ೫೦% ನಿಜವಾಗುವ೦ತೆ ಕೃಪೆ ತೋರಿ. :)) ತಥಾಸ್ತು. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಜೀ, ಅದು ಹಾಸ್ಯ ಬರಹ ಅ0ತ ಬರೆದಿದ್ದರೂ ಸರಿಹೋಗುತ್ತಿತ್ತು ನಿಜ, ಕೆಲವರಿಗೆ ಅದು ಹಾಸ್ಯಾಸ್ಪದವಾಗಿ ತೋರಬಹುದೆ0ದು ಆ ರೀತಿ ಶೀರ್ಷಿಕೆ ಕೊಟ್ಟೆ. <<-ಎಂಟಾಣೆ ಮಾಡಿ.. ಸ್ವಾಮಿಗಳು ಚಲಾವಣೆಯಲ್ಲಿರುವಂತೆ ಮಾಡಿ :)>> ಇದನ್ನು ನಿಮ್ಮ ಪಟ್ಟ ಶಿಷ್ಯ ಚಿಕ್ಕುರವರು ರಚಿಸಿದ್ದು, ಅದರಲ್ಲಿ ನಾನು ತಲೆದೂರಿಸಿದರೆ ಅಪರಾಧವಾದೀತು ;))) ಉಳಿದ ೫೦% ನಿಜವಾಗುವಂತೆ ದಯಪಾಲಿಸಿದ್ದಕ್ಕೆ ಕೃತಾರ್ಥನಾದೆ, ಧನ್ಯೋಸ್ಮಿ! ;) :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ್ ಜೀ, ಚಿಕ್ಕುರವರು ಫೋನ್ ಮಾಡಿ ಗುರುಗಳು ಹೇಳಿದ ಮೇಲೆ ಮೊದಲು ಆ ಕೆಲಸ ಮಾಡಬೇಕು, ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುವವರು ಅವರಾದ್ದರಿ0ದ ಅವರು ಹೇಳಿದ್ದನ್ನು ಮೊದಲು ಮಾಡಿ ಎ0ದು ತಿಳಿಸಿರುತ್ತಾರೆ. ಆದ್ದರಿ0ದ ನಿಮ್ಮ ಆಣತಿಯ0ತೆ ನಿಮ್ಮ ಚಲಾವಣೆಯಲ್ಲಿಡುತ್ತಿದ್ದೇನೆ. ;)) :)) <<-ಎಂಟಾಣೆ ಮಾಡಿ.. ಸ್ವಾಮಿಗಳು ಚಲಾವಣೆಯಲ್ಲಿರುವಂತೆ ಮಾಡಿ :)>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಪದದಲ್ಲಿ ನಾವಡನೆ೦ಬುವ ವ್ಯಕ್ತಿ ಇದ್ದಾನೆನ್ನುವುದನ್ನೂ ಭಾಗ್ವತರೆ೦ಬುವ ಮಾಸ್ತರರು ಪಾಠ ಮಾಡುತ್ತಿದ್ದಾರೆ೦ಬುದನ್ನೂ ತಾವು ಮರೆತಿರುವ೦ತಿದೆ! ಯಾ ನಮ್ಮನ್ನು ಸ೦ಪದದಿ೦ದ ಕಿತ್ತುಹಾಕಲಾಗಿದೆಯೋ ಎ೦ಬುದರ ಬಗ್ಗೆ ತಮ್ಮಿ೦ದ ಸ್ಪಷ್ಟೀಕರಣವನ್ನು ಬಯಸುತ್ತಿದ್ದೇನೆ..!!! :)))))) ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಅದಕ್ಕೆ ಕ್ಷಮೆಯಿರಲಿ, ಇದರ ಬಗ್ಗೆ ನಾನು ಆಗಲೇ ಭಾಗ್ವತ ಮಾಸ್ತರರಿಗೆ ಸ್ಪಷ್ಠೀಕರಣ ಕೊಟ್ಟಿದ್ದೇನೆ. ಅನುಮಾನವಿದ್ದಲ್ಲಿ ಈ ಕೆಳಗಿನ ಸಾಲುಗಳನ್ನು ನೋಡಿ.;) :)) <<ಮೆಚ್ಚುಗೆಗೆ ಧನ್ಯವಾದಗಳು ಭಾಗ್ವತರೆ. ಆ ಸಭೆಯಲ್ಲಿ ನೀವು ಮತ್ತು ನಾವಡರು ಇದ್ದದ್ದನ್ನ ನಾನು ಗಮನಿಸಲಿಲ್ಲ. ಆ ಗದ್ದಲದಲ್ಲಿ ನೀವು ಹೇಳಿದ್ದು ಯಾಕೋ ರೆಕಾರ್ಡ್ ಆಗಿಲ್ಲ. :)))>>> ಈಗ ಇಲ್ಲಿ ಅಚ್ಚಾಗಿರುವುದು ಬೆ0ಗಳೂರು ಎಡಿಷನ್, ಮ0ಗಳೂರು ಎಡಿಷನ್ನಿನಲ್ಲಿ ಈ ದೋಷವನ್ನು ಸರಿಪಡಿಸುತ್ತೇವೆ, ಸಪ್ರೇಮ ವ0ದನೆಗಳೊ0ದಿಗೆ, ತಮ್ಮ ವಿಧೇಯ ವಿದ್ಯಾರ್ಥಿ, ಶ್ರೀಧರ್ ಬ0ಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಸಂಪದ ಗ್ಯಾಂಗ್ ನಲ್ಲಿದ್ದೇನೆ ನನ್ನನ್ನು ಮರೆತಿರುವುದಕ್ಕೆ ಕೋಪ ಬಂದಿದೆ ಶ್ರೀಧರ್ ರವರೇ ಅದಕ್ಕೆ ಬೆಂಗಳೂರು ಎಂದು ಹೆಸರು ಬರುವುದಕ್ಕೆ ಇನ್ನೊಂದು ಕಾರಣ ಹೇಳುತ್ತೇನೆ " ಇದು ತುಮಕೂರಿಗೆ ಬಹಳ ಹತ್ತಿರ ಇರೋದ್ರಿಂದ ಬೇಗ+ಸೇರಬಹುದಾದ+ಊರು = ಬೇಗ ಸೇರುವ ಊರು ಕಾಲಕ್ರಮೇಣ ಬೆಂಗಳೂರು ಆಗಿದೆ ಅಂತ ತುಮಕೂರಿನಲ್ಲಿ ಇರುವ ದಂತ ಕಥೆ" ಬೆಂಗಳೂರು ಹೆಸರು ಬಂದಿರುವ ಬಗ್ಗೆ ನಿಮ್ಮ ಕಲ್ಪನಾ ಹಾಸ್ಯ ವಿಶ್ಲೇಷಣೆ ಮನಸ್ಸಿಗೆ ಮುದ ನೀಡಿತು ( ಕೋಪ ಬಂದಿದೆ ಎಂದು ತಮಾಷೆಗೆ ಹೇಳಿದೆ ಅಷ್ಟೆ ) ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶ್ ಅವರೆ, ಮೊದಲು ನೀವು ಜಯಂತ್ ಅವರ ಜೊತೆಗೆ ಬರುತ್ತೀರೆಂದು ತಿಳಿದಿದ್ದೆ, ಆದರೆ ಅವರೊಬ್ಬರೆ ಬಂದಾಗ ಅವರು ಕೈಬಿಟ್ಟ ಹೈಹೀಲ್ಡ್ ಹುಡುಗಿಯ ಹಿಂದೆ ನೀವು ಹೋಗಿರಬಹುದಾದ್ದರಿಂದ ಆ ಸಭೆಗೆ ಬಂದಿಲ್ಲವೆಂದು ತಿಳಿದೆ. ನೆನ್ನೆ ರಾತ್ರಿ ಹನ್ನೆರಡರ ನಂತರ "ನಶಾದೇವಿ"ಯ ಕ್ಷಮಿಸಿ "ನಿಶಾದೇವಿ"ಯ ವಶದಲ್ಲಿದ್ದ ಅಂಡಾಂಡ ಭಂಡ ಸ್ವಾಮಿಗಳು ನಿದ್ದೆಗಣ್ಣಿನಲ್ಲಿ ಹೇಳಿದ್ದೇನೆಂದರೆ, ಸತೀಶರು ನನ್ನ ದಡೂತಿ ದೇಹದ ಹಿಂದೆ ನಿಂತು ಬೆಂಗಳೂರಿನ ಬಗ್ಗೆ ಹೇಳುತ್ತಿದ್ದರು ನಾನು ಕೇವಲ ಬಾಯಿ ಆಡಿಸುತ್ತಿದ್ದೆನಷ್ಟೆ ಹಾಗಾಗಿ ಅವರು ಯಾರಿಗೂ ಕಾಣಿಸಲಿಲ್ಲವೆಂದು ತಿಳಿಸಿದರು. ಆಮೇಲೆ ಕಡೇಪಕ್ಷ ಚಿಕ್ಕುವಿನ ಭಜನೆ ಗುಂಪಿನಲ್ಲಿದ್ದ ಸತೀಶರನ್ನು ನೀನು ಗಮನಿಸಬೇಕಿತ್ತು ಎಂದರು. ಹಾಗಾಗಿ ಈ ಅಚಾತುರ್ಯ ನಡೆಯಿತು, ಪರದೆಯ ಹಿಂದೆ ನಿಂತು ನೀವು ಹೀಗೆ ಡಬ್ಬಿಂಗ್ ಮಾಡುತ್ತಿದ್ದದ್ದು ನನಗೆ ಗೊತ್ತಾಗಲಿಲ್ಲ. ಇದಕ್ಕಾಗಿ ಕೋಪಿಸಿಕೊಂಡು ನಿನ್ನ ತಲೆ ಕ್ಯಾತ್ಸಂದ್ರದ "ತಟ್ಟೆ ಇಡ್ಲಿ"ಯಾಗಲೆಂದು ಶಪಿಸಬೇಡಿ. :))) ಅಂದ ಹಾಗೆ ಬೆಂಗಳೂರಿನ ಬಗ್ಗೆ ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಇದಕ್ಕಾಗಿ ಕೋಪಿಸಿಕೊಂಡು ನಿನ್ನ ತಲೆ ತಟ್ಟೆಇಡ್ಲಿ ಆಗಲಿ ಅಂತ ಶಪಿಸಬೇಡಿ<< ಹಾಗಿದ್ದಲ್ಲಿ ತುಮಕೂರಿನ ಪರಿಚಯ ನಿಮಗೆ ಚನ್ನಾಗಿ ಇದೆ ಅಂದ ಹಾಗಾಯಿತು, ಇನ್ನು ಕೋಪ ತಮಾಷೆಗೆ ಅಷ್ಟೆ ( ) ಗಮನಿಸಿ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶ್ ಅವರೆ, ನನಗೆ ತುಮಕೂರಿನ ಬಗ್ಗೆ ಹೆಚ್ಚು ಪರಿಚಯ ಇಲ್ಲ, ಆದರೆ ನಮ್ಮ ಸ್ವಂತ ಊರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಿಂದ ಬೆಂಗಳೂರಿಗೆ ಹೋಗಬೇಕಾದರೆ ತುಮಕೂರಿನ ಮೇಲೆಯೇ ಹೋಗಬೇಕಲ್ಲವೆ? ನಮ್ಮೂರಿನಿಂದ ರಾತ್ರಿ ಕಡೆಯ ಬಸ್ಸಿಗೆ ಹೊರಟರೆ ಬೆಳಿಗ್ಗೆ ಏಳರ ಸುಮಾರಿಗೆ ಕ್ಯಾತ್ಸಂದ್ರದಲ್ಲಿ ಟಿಫಿನ್ನಿಗಾಗಿ ಬಸ್ ನಿಲ್ಲಿಸುತ್ತಿದ್ದರು, ಹಾಗಾಗಿ ನಿಮ್ಮ ಜಿಲ್ಲೆಯ ಪರಿಚಯ ಸ್ವಲ್ಪ ಇದೆ. ಮತ್ತೊಂದು ವಿಷಯವೇನೆಂದರೆ, ಗುಬ್ಬಿಯಲ್ಲಿ ನಮ್ಮ ದೊಡ್ಡಪ್ಪನ ಕಡೆಯ ನೆಂಟರಿದ್ದರು ಹಾಗಾಗಿ ಅಲ್ಲಿಗೆ ಹೋಗಬೇಕಾದರೆ ತುಮಕೂರಿನಲ್ಲಿ ಬಸ್ ಇಳಿದು ಹತ್ತುತ್ತಿದ್ದರಿಂದ ನಿಮ್ಮ ಊರಿನ ಬಸ್-ಸ್ಟ್ಯಾಂಡಿನ ಪರಿಚಯವಿದೆ. :)) ನಿಮಗೆ ಕೋಪ ಬಂದಿಲ್ಲವೆಂದು ತಿಳಿದಿದೆ, ಏಕೆಂದರೆ ಸಂಪದಿಗರು ಹಾಗೆಲ್ಲಾ ಹುಚ್ಚುಚ್ಚಾಗಿ ಕೋಪಿಸಿಕೊಳ್ಳುವುದಿಲ್ಲವೆಂದು ಗೊತ್ತು ;))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಪ್ಪಾ some ಶೋದನೆ ಅಂದ್ರೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಧ್ಯ ಯಾರಿಗೂ ಆಗಲಿಲ್ಲ ವೇದನೆ :)))) ಪ್ರತಿಕ್ರಿಯೆಗೆ ಧನ್ಯವಾದಗಳು ಬಾಲುರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಪ್ಪಾ some ಶೋದನೆ ಅಂದ್ರೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಡಿದರೂ ಕೂಡ ನಾನು someಶೋಧನೆ, ಯಾರೂ ಕೊಡಲಿಲ್ಲ ನನಗೆ Someಭಾವನೆ ;) :)) ನಿಮ್ಮಭಿಮಾನಕ್ಕಿಂತ ಬೇಕೇ ದೊಡ್ಡ ಬಹುಮಾನ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಬಂಡ್ರಿ ಸಾರ್... ಕೆಂಪೇಗೌಡರ "ಗ0ಡುಭೂಮಿ"ಜಗತ್ತಿನ 3ನೇ ದೊಡ್ಡನಗರ " ಕನ್ನಡಿಗರ ಹ್ರುದಯಾ"ಬೆ0ಗಳೂರನ್ನಾ ಹಾಸ್ಯವಾಗಿ ಪರಿಗಣಿಸ ಬಿಟ್ಟೀದ್ದೀರಾ.ತು0ಬಾ ಬೇಜಾರಾಗಿದೆ ಸಾರ್.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್ ಅವರೆ, ನೀವು ಹಾಸ್ಯಕ್ಕಾಗಿ ಸೀರಿಯಸ್ಸಾಗಿ ಬರೆದಿದ್ದೀರೋ ಅಥವಾ ನಿಜವಾಗಿಯೂ ಸೀರಿಯಸ್ಸಾಗಿದ್ದೀರೋ ಅರ್ಥವಾಗಲಿಲ್ಲ. ಒಂದು ಮಾತಂತು ನಿಜ ನನಗೆ ಬೆಂಗಳೂರಿನ ಬಗ್ಗೆ ಅಷ್ಟೊಂದು ಅಭಿಮಾನವಿರುವುದರಿಂದಲೇ ಮುಂದೊಂದು ದಿನ ಬೇರೆ ಬೇರೆ ಭಾಷೆಯವರು ಹೇಗೆ ಅದನ್ನು ತಮ್ಮದೆಂದು ಸಾಧಿಸಬಹುದು ಎನ್ನುವ ಕಲ್ಪನೆಯುಂಟಾಗಿ ಅದನ್ನ ಸಂಪದಿಗರ ಬಾಯಲ್ಲಿ ಹೇಳಿಸಿದೆ ಅಷ್ಟೆ. ಬೆಂಗಳೂರಿನ ಕನ್ನಡಿಗರೆಲ್ಲರೂ ನಿಮ್ಮ ಒಂದಂಶ ಅಭಿಮಾನವಿಟ್ಟುಕೊಂಡಿದ್ದರೂ ಬೆಂಗಳೂರಿನಲ್ಲಿ ಕನ್ನಡಿಗರ ಪರಿಸ್ಥಿತಿ ಈ ರೀತಿಯಿರುತ್ತಿರಲಿಲ್ಲ, ಇಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು ಮತ್ತು ತಮ್ಮ ನಾಡಿನಲ್ಲೇ ಒಂದು ರೀತಿ ಪರದೇಶಿಗಳಾಗಿದ್ದಾರೆ. ಇಲ್ಲಿರುವ ಎಷ್ಟೋ ಕನ್ನಡಿಗರಿಗೆ ಕನ್ನಡ ಮಾತನಾಡಿದರೆ ಪ್ರೆಸ್ಟೀಜ್ ಕಡಿಮೆಯಾಗುತ್ತದೆ ಅವರೇನಿದ್ದರೂ ಮಾತನಾಡುವುದು ಇಂಗ್ಲೀಷ್, ಹೀಗಾಗದಿರಲಿ ಎನ್ನುವುದೇ ನನ್ನ ಅಭಿಲಾಷೆ. ಇಲ್ಲಿ ಕೊಟ್ಟಿರುವ ಚಿತ್ರಗಳನ್ನು ನನ್ನ ಗಣಕ ಯಂತ್ರದ ಪರದೆಯ ಮೇಲೆ ಆಗಿಂದಾಗೆ ಸುಳಿಯುತ್ತಾ ನನ್ನ ಕಕ್ಷಿದಾರರಿಗೆ ಅವುಗಳ ಪರಿಚಯವಾಗುತ್ತಿರುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ ಸರ್, ತಮಗೆ ತುಂಬಾ ಬೇಜಾರಾಗಿದೆ ಎಂದು ತಿಳಿದು ನನಗೂ ಬೇಸರವಾಯಿತು. ತಮ್ಮ ಬೇಸರ ನೀಗಿಸಲು ಕೆಂಪೇಗೌಡರ ಬಗ್ಗೆ ಒಂದು ಉತ್ತಮ ಲೇಖನ ನಿಮಗೆ ಓದಲು- http://blogs.jnanako... ಹಾಗೇ ಇನ್ನೊಂದು ವಿಷಯ: >>>ಜಗತ್ತಿನ 3ನೇ ದೊಡ್ಡನಗರ " ಕನ್ನಡಿಗರ ಹ್ರುದಯಾ"ಬೆ0ಗಳೂರನ್ನಾ.. ಕನ್ನಡಿಗರ ಹೃದಯ- ಬೆಂಗಳೂರು- ಜಗತ್ತಿನ ಅಲ್ಲ ಭಾರತದ ೩ನೇ ದೊಡ್ಡನಗರ ಇರಬಹುದು. ಕೊನೆಯದಾಗಿ ಒಂದು ನಮ್ರ ಕೋರಿಕೆ- ನಗೆ ವಾರ್ತೆಯನ್ನು ತಿದ್ದಿ ಬರೆಯಿರಿ. ಭಲ್ಲೇಜಿಯವರು ಸಹಾಯ ನೀಡಲು ತಯಾರಿರುವೆ ಎಂದಿರುವರಲ್ಲಾ? ಪ್ರಯತ್ನಿಸುವಿರಾ? -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ ಬಂಡ್ರಿಯವರೆ ವಂದನೆಗಳು. ನಾನು ಬರವಣಿಗೆಯಲ್ಲಿ ವ್ಯಸ್ತನಾದುದರಿಂದ ನಿಮ್ಮ ಲೇಖನದೆಡೆಗೆ ಗಮನಹರಿಸಲು ಆಗಿರಲಿಲ್ಲ. ರಮೇಶ ಕಾಮತರು ಹೇಳಿದ ಮೇಲೆ ಈಗ ನೋಡಿದೆ. ಸೊಗಸಾದ ಲೇಖನ ಬರೆದಿದ್ದೀರಿ, ಬಹಳ ಚೆನ್ನಾಗಿದೆ ಓದಿ ಮುದವಾಯಿತು. ಹೀಗೆಯೆ ಬರೆಯುತ್ತಾ ಇರಿ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲ್ ಸರ್, ನಿಮ್ಮ0ತಹ ಹಿರಿಯರ ಆಶೀರ್ವಾದ ಪ್ರೋತ್ಸಾಹ ಇದ್ದ ಮೇಲೆ ಖ0ಡಿತ ನನ್ನ ಬರೆಯುವ ಕಾಯಕವನ್ನು ಮು0ದುವರೆಸುತ್ತೇನೆ. ಈ ಲೇಖನ ಪ್ರಕಟವಾಗಿರೋದರಿ0ದ ಇದನ್ನು ನಿಧಾನವಾಗಿ ಓದಿಕೊಳ್ಳಬಹುದು. ಆದರೆ ನಿಮ್ಮ ಲೇಖನಗಳು ಸಕಾಲದಲ್ಲಿ ಪ್ರಕಟಗೊಳ್ಳದಿದ್ದರೆ ಅವುಗಳ ಅರ್ಥ ಕಳೆದುಕೊಳ್ಳುತ್ತಿದ್ದವು. ಈ ಲೇಖನ ನಿಮಗೆ ಖುಷಿ ಕೊಟ್ಟಿದ್ದಕ್ಕೆ ನನಗೂ ಸ0ತಸವೆನಿಸುತ್ತಿದೆ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ ಬಂಡ್ರಿಯವರಿಗೆ ನಮೋ ನಮಃ ದೀಪಾವಳಿ ಪಟಾಕಿ ಆಗಮನದ ಮುಂಚೆ ನಿಮ್ಮ ಈ ಹಾಸ್ಯ ಚಟಾಕಿ ಸಂಪದದಲ್ಲಿ ಸಿಡಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದೀರಿ.ನಿಜವಾಗಿಯಾದರೂ ಸರಿ,ಸಂಪದಿಗರ ಸಮಾವೇಶವಂದನ್ನು ಮಾಡಿ ಎಲ್ಲರನ್ನು ಆಗದಿದ್ದರೂ ಕೇಲವರನ್ನಾದರೂ ಭೆಟಿಯಾಗಿ ಸಂತೋಷ ಪಡಬಹುದೆಂದು ನನಗೆನುಸುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಮತ್ ಸರ್, ನನ್ನ0ತ ಸಣ್ಣವನಿಗೆ ಬಹಳ ದೊಡ್ಡ ಪದ ಉಪಯೋಗಿಸಿದ್ದೀರ :)). ಈ ಹಾಸ್ಯ ಚಟಾಕಿಯನ್ನು ಓದಿ ನಿಮ್ಮ0ತಹ ಹಿರಿಯರೂ ನಗೆಗಡಲಿನಲ್ಲಿ ತೇಲಿರುವುದು ನನಗೂ ಖುಷಿಯಾಗುತ್ತಿದೆ. ನೀವು ಇದನ್ನು ಓದಿ ಎಲ್ಲಿ ಇದು ಹಾಸ್ಯವಲ್ಲ, "ಹಾಸ್ಯಾಸ್ಪದ" ಎ0ದು ಕೋಪಿಸಿಕೊಳ್ಳುವಿರೆ0ದು ಒ0ದು ರೀತಿಯ ಅಳಕು ಇತ್ತು ಹಾಗಾಗಿ ಇದರ ಶೀರ್ಷಿಕೆಯನ್ನು ಹಾಗೆ ಇಟ್ಟೆ. ಸ0ಪದಿಗರ ಸಮಾವೇಶ ಬಹಳ ಒಳ್ಳೆಯ ವಿಚಾರ ಅದು ಆದಷ್ಟು ಬೇಗ ನೆರವೇರಲಿ ಎ0ದು ಆಶಿಸೋಣ. ದೀಪಾವಳಿಯ ಶುಭಾಶಯಗಳು ಹಾಗು ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ, ಇತರೇ ಕಾರ್ಯಗಳಲ್ಲಿ ವ್ಯಸ್ತನಾಗಿದ್ದರಿಂದ, ನಿಮ್ಮ ಬರೆಹ ನೋಡಲಿಕ್ಕೆ ತಡವಾಯಿತು. ಎಲ್ಲಪ್ಪಾ ನಾನೂ ಸಿಕ್ಕಿಕೊಂಡೆನಾ ಈ ಬರೆಹದಲ್ಲೂ ಅನ್ಕೊತಾ, ಸದ್ಯ ಬರೆಹ ಮುಗಿತಾ ಬಂತು, ನಾನು ಬೆಂಗಳೂರಿನವನಲ್ಲ, ಅದರ ಬಗ್ಗೆ ಜಾಸ್ತಿ ತಿಳಿದವನಲ್ಲ; ಮತ್ತೆ ಇದರಲ್ಲಿ ಸದ್ಯ ಅಂತೂ ಸಿಕ್ಕಿಕೊಳ್ಳಲಿಲ್ಲಾ ಅನ್ನುವಷ್ಟರಲ್ಲಿ, ನಮ್ಮನ್ನ ಅಂತೂ ಕೊನೆಗೂ ಸಿಕ್ಕಿಸಿದರಲ್ರೀ..! ಅದೂ ವರದಿಗಾರನಾಗಿ. ನಾವು ವರದಿಗಾರನಾಗಿ ಎಷ್ಟರಮಟ್ಟಿಗೆ ಗೆಲವು ಸಾಧಿಸುತ್ತೇವೋ, ನಿಮ್ಮಂತವರು ಮನಸ್ಸು ಮಾಡಿದರೆ, ಎನಾದ್ರೂ ಹೆಸರು ಬರಬಹುದೇನೋ. ಆದರೆ, ನಿಮ್ಮ ಮಾಹಿತಿಗಾಗಿ, ನಾವು ಮಾಹಿತಿ ತಂತ್ರಜ್ಞಾನದಲ್ಲಿ ಸ್ವಲ್ಪ ಕಸರತ್ತು ಮಾಡುತ್ತಿರುವವರು. ಇವೆಲ್ಲಾ ಸಾಧ್ಯವೋ ಇಲ್ಲವೋ ಗೊತ್ತಿಲ್ಲಾ..! ಆದರೆ, ಶ್ರೀಧರ್ ಬಂಡ್ರಿ, ಒಳ್ಳೆ ಹಾಸ್ಯದೌತಣ ಉಣಬಡಿಸಿದ್ದೀರಾ..! ಧನ್ಯವಾದಗಳು..! ನಿಮ್ಮೊಲವಿನ, ಸತ್ಯ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಚರಣರೆ, ಮೊದಲನೆಯದಾಗಿ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮನ್ನು ಸಿಕ್ಕಿಸ ಬೇಕೆನ್ನುವಷ್ಟರಲ್ಲಿ ನೀವು ಜಾಗ ಖಾಲಿ ಮಾಡಿಬಿಟ್ಟಿರಲ್ಲ! :)) ಇನ್ನು ವರಿದಿಗಾರರಾದ ನಿಮಗೆ ನಾವು ಮನಸ್ಸು ಮಾಡಿ ಮೇಲೆ ಎತ್ತುವುದು ಹಾಸ್ಯಾಸ್ಪದ, ಏಕೆ0ದರೆ ನಿಮ್ಮ ಹೆಸರಿಗೆ ತಕ್ಕ0ತೆ ನಿಮ್ಮ ಚರಣ, ಕಾಯ, ವಾಕ್ಕು ಮತ್ತು ಮನಸ್ಸುಗಳು ಸತ್ಯದ ಕಡೆಗಿದ್ದರೆ ಯಾರೂ ನಿಮ್ಮನ್ನು ಮೇಲೆತ್ತದೆಯೇ ನೀವು ಮೇಲೆ ಬರುತ್ತೀರ. ಆಲ್ ದ ಬೆಸ್ಟ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಸಾರ್ ದೀಪಾವಳಿ ಹಬ್ಬದ ಶುಬಾಶಯಗಳು ತಮ್ಮ ಹಾಸ್ಯ ಲೇಖನ ಚೆನ್ನಾಗಿದೆ ಈ ನಮ್ಮ ಬೆ0ಗಳೂರಿಗೆ ಇ0ತಹ ಹೆಸರುಗಳೂ ಇವೆಯಾ ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀಳಾ ಮೇಡಮ್, ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು. ಮೊನ್ನೆ ನಡೆದ ಬೆ0ಗಳೂರಿನ ವಿಚಾರ ಗೋಷ್ಠಿಯಲ್ಲೂ ನೀವು ಏನೂ ಹೇಳಲಿಲ್ಲ :)). ಯಾವುದಾದರೂ ಹೊಸ ವಿಚಾರ‌ ಹೇಳುವಿರೇನೋ ಎ0ದು ಎರಡು ಮೂರು ದಿನಗಳಿ0ದ ಕಾಯುತ್ತಾ ಇದ್ದೆ! ಆದರೆ ಬರಿ ಮೆಚ್ಚುಗೆಯ ಮಾತುಗಳನ್ನಾಡಿ ತಪ್ಪಿಸಿಕೊಳ್ಳುತ್ತಿದ್ದೀರ? :)) ಓದಿ ಅಭಿನ0ದಿಸಿದ್ದಕ್ಕೆ ಧನ್ಯವಾದಗಳು ನೀಳಾ ಅವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಸಾರ್ ಕೆ0ಪೇಗೌಡ‌ರು ದೇವನಹಳ್ಳಿಯ ಬಾಗಲೂರಿನಲ್ಲಿ ತಳವೂರಿದ ಸಮಯದಲ್ಲಿ ಬೇಳೆಕಾಳನ್ನು ಬೇಯಿಸಿದರ0ತೆ ಕಾಳು ಎಲ್ಲೂ ಬೇಯದೆ ಆ ಜಾಗದ ನೀರಿನಲ್ಲಿ ಬೇಯಿತ0ತೆ ಆದರಿ0ದ ಬೆ0ದಕಾಳೂರು ಎ0ದುಹೆಸರಾಇತು ಅಲ್ಲೇ ಅವರ ಪಾಳುಬಿದ್ದ ಕೋಟೆಇದೆಯ0ತೆ. ಬೆ0ದಕಾಳೂರು ನ0ತರ ಬೆ0ಗಳೂರು ಎ0ದು ಪ್ರಸಿದ್ದಿ ಪಡೆಇತು ಮೊನ್ನೆ ನಡೆದ ಬೆ0ಗಳೂರಿನ ವಿಚಾರ ಗೋಷ್ಠಿಯಲ್ಲಿ ಈ ವಿಚಾರ ಬರಲಿಲ್ಲವಾ ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀಳಾ ಮೇಡಮ್, ಈಗ ನೀವು ಹೇಳಿದ ಮೇಲೆ ಗೊತ್ತಾಯ್ತು ನೋಡಿ, ಯಾಕೆ ಬೇರೆ ಕಡೆ ಬೇಳೆ ಬೇಯಿಸಿಕೊಳ್ಳಲಾಗದವರು ಬೆಂಗಳೂರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆಂದು, ವಿಶೇಷ ಮಾಹಿತಿಗೆ ಧನ್ಯವಾದಗಳು. ಮೊನ್ನೆಯ ಗೋಷ್ಠಿಯಲ್ಲಿ ಈ ವಿಚಾರ ಹೇಳಿದ್ದರೆ ನಿಮಗೆ ಹೆಚ್ಚು ಕ್ರೆಡಿಟ್ ಸಿಗ್ತಾ ಇತ್ತು. :))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಲೇಖನ ಸುಊಊಊಊಊಊಊಊಊಊಊಊಪರ್ರೋ ಸುಪರ್ರ್ !!!!!!!!!!!!!!!!!!!!!!! ಬಹಳ ಇಷ್ಟವಾಯ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಕಾಮನೆಗಳು ನಿಮಗೆ ಮತ್ತು ಮನೆಯವರಿಗೆಲ್ಲರಿಗೂ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಗುರುಗಳೇ ಲೇಖನ ಸುಊಊಊಊಊಊಊಊಊಊಊಊಪರ್ರೋ ಸುಪರ್ರ್ !!!!!!!!!!!!!!!!!!!!!!!>> ನೀನೂ ಹೀಂ...........ಗ ಬೋಂ..............ಗಾ ಬಿಡೂ.................ದ! :))) ಮೆಚ್ಚುಗೆಗೆ ಧನ್ಯವಾದ ಸುಮಂಗಳಾ, ಅಂದ ಹಾಗೆ ದಸರಾಕ್ಕೆ ಹೋದವರು ಈಗ ದೀಪಾವಳಿ ಹೊತ್ತಿಗೆ ಕಾಣಿಸಿಕೊಳ್ಳುತ್ತಿದ್ದೀರ ಅದೂ ಯಾವುದೇ ಹೊಸ ಕವನವಿಲ್ಲದೆ? ಆದಷ್ಟೂ ಲಘೂನ ಒಂದು ಚೊಲೋ ಕವಿತೆ ಬರೀರೆಲ. ನಿಮಗೂ ಹಾಗು ನಿಮ್ಮ ಮನೆಯವರಿಗೂ (ಬೆಂಗಳೂರಿನ ಅರ್ಥದಲ್ಲಿ ಹೇಳಿದ್ದು), [ನಿಮ್ಮ ಮನಿಯವರು ಕಾರ್ತೀಕಕ್ಕ ಸಿಕ್ಕಿದ್ದರೆ ಅದನ್ನು ಧಾರವಾಡ ಭಾಷೆಯಲ್ಲಿ ಓದಿಕೊಳ್ಳಿ] ದೀಪಾವಳಿಯ ಹಾರ್ದಿಕ ಶುಭಾಶಯಗಳು. :)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿಗೆ ಇದೂ ಒಂಥರಾ ರಾಜಕಾರಣಿಗಳ ಮೀಟಿಂಗ್ ತರಾನೇ ಯಾವುದೇ ನಿರ್ಧಾರವಿಲ್ಲದೆ ಮುಕ್ತಾಯವಾಗಿದೆ!!! ಶ್ರೀಧರವ್ರೆ ಮಸ್ತ್ ಕ್ರಿಯೇಟಿವಿಟಿ. ಹೀಗೆ ನಿಮ್ಮ ಸಂಶೋಧನೆಗಳು ಮುಂದುವರೆಯಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೆ ಚೇತನ್, >>ಅಲ್ಲಿಗೆ ಇದೂ ಒಂಥರಾ ರಾಜಕಾರಣಿಗಳ ಮೀಟಿಂಗ್ ತರಾನೇ ಯಾವುದೇ ನಿರ್ಧಾರವಿಲ್ಲದೆ ಮುಕ್ತಾಯವಾಗಿದೆ!!!<< ಎಂದು ಅನುಮಾನ ವ್ಯಕ್ತಪಡಿಸಿದ್ದೀರ? ಅಂಡಾಂಢ ಭಂಡ ಸ್ವಾಮಿಗಳು ಹೇಳಿದ್ದನ್ನು ನೀವು ಗಮನಿಸಲಿಲ್ಲವೆ ಅಥವಾ ಅದು ನಿಮಗೆ ಒಪ್ಪಿಗೆಯಾಗಲಿಲ್ಲವೆ?? :((( <<ಗಣೇಶನ ಪೂಜೆ ಮಾಡೋದು ಜನ ಮರೀಬಾರ್ದು ಅಂತೇಳಿ ಈ ಊರಿಗೆ ಗಣೇಶನ ಊರು ಅಂದ್ರೆ, "ಬೆನಕನ ಊರು" ಅಂತಾ ಹೆಸರಿಟ್ರು, ಅದು ಜನ್ರು ಬಾಯ್ನಲ್ಲಿ ಬೆಂಕೂರು ಆಗಿ ಆಮೇಲೆ ಬೆಂಕ್ಳೂರು ಆಗಿ ಬೆಂಗ್ಳೂರ್ ಆಯ್ತು. ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವಂತೆ ಅಂಡಾಂಡ ಭಂಡ ಸ್ವಾಮಿಗಳು ಉತ್ತರಿಸಿದ್ದರಿಂದ ಅವರಿಗೆ ಆ ಪಟ್ಟವನ್ನು ಖಾಯಂ ಆಗಿ ಉಳಿಸಬೇಕೆಂದು ಆ ಸಭೆಯಲ್ಲಿ ಅವಿರೋಧವಾಗಿ ತೀರ್ಮಾನವಾಯಿತು.>> :))) <<ಶ್ರೀಧರವ್ರೆ ಮಸ್ತ್ ಕ್ರಿಯೇಟಿವಿಟಿ.>> ನಿಮ್ಮ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಮತ್ತು ನಿಮ್ಮ ಹಾಗು ನಿಮ್ಮ ಕುಟುಂಬವರ್ಗದವರಿಗೆ ದೀಪಾವಳಿಯ ಶುಭಾಶಯಗಳು. :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages