ಬಿಎಂಟಿಸಿ ಬಸ್ಸು ಪ್ರಯಾಣ: ಅನುಭವಗಳ ಬುತ್ತಿಯಿಂದ...

4.666665

ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆಶ್ಚರ್ಯ ಆಯ್ತಾ? ಹೌದಪ್ಪಾ...ಪಿಜಿಯಿಂದ ಅವಸರವಸರವಾಗಿ ಓಡಿಕೊಂಡು ಬಂದು ಹರಿಶ್ಚಂದ್ರ ಘಾಟ್! ಬಸ್ ಸ್ಟಾಪ್ ನಲ್ಲಿ ಶಿವಾಜಿನಗರಕ್ಕೆ ಹೋಗುವ ಬಸ್ ಗಾಗಿ ಕಾಯುತ್ತಿರುವಾಗ ಅಲ್ಲಿನ ಜನಸಂಖ್ಯೆ ಜಾಸ್ತಿಯಿದ್ದರೆ...ದೇವರೆ ಇವರೆಲ್ಲ ಮೆಜೆಸ್ಟಿಕ್ ಗೋ, ಮಾರ್ಕೆಟ್ ಕಡೆಗೋ ಹೋಗುವವರಾಗಿರಲಿ...ಶಿವಾಜಿನಗರಕ್ಕೆ ಹೋಗುವ ಬಸ್ ನವರಂಗ್ ನಿಂದ ಬರುವಾಗಲೇ ಜನರನ್ನು ತುಂಬಿಸಿಕೊಂಡು ಬರ್ತಿದೆ. ಇನ್ನು ಇವರೆಲ್ಲರೂ ಅದೇ ಬಸ್ ಗೆ ಬಂದ್ರೆ ಪಡ್ಚ... ಹೀಗೆ ಮೆಜೆಸ್ಟಿಕ್ ಬಸ್ ಬಂದಾಗೆಲ್ಲಾ ಎಷ್ಟು ಜನ ಆ ಬಸ್ ಗೆ ಹತ್ತುತ್ತಾರೆ ಅಂತಾ ಎಣಿಸುವುದೇ ಆಯ್ತು.

ನಮ್ ಕಡೆಯಿಂದ ಶಿವಾಜಿನಗರಕ್ಕೆ ಬರುವುದೇ ದೊಡ್ಡ ಸಮಸ್ಯೆ. ಬಂದರೆ ಎರಡು ಮೂರು ಬಸ್ ಗಳು ಒಟ್ಟೊಟ್ಟಿಗೆ ಬರುತ್ತೆ. ಇಲ್ಲದಿದ್ರೆ ಅರ್ಧ ಮುಕ್ಕಾಲು ಗಂಟೆ ಕಾಯಬೇಕು. ಇಷ್ಟು ಕಾದ ಮೇಲೆ ಬರುವ ಬಸ್ಸಂತೂ ಜನರಿಂದ ತುಂಬಿ ತುಳುಕುತ್ತಿರುತ್ತದೆ...ಆವಾಗ ಹಿಂದೆ ಖಾಲಿ ಬಸ್ ಬರುತ್ತೆ ಎಂದು ಕಂಡೆಕ್ಟರ್ ಬೊಬ್ಬೆ ಹಾಕತೊಡಗುತ್ತಾನೆ. ಅಷ್ಟೊತ್ತು ಕಾದದ್ದು ಬೇರೆ, ಇನ್ನು ಅದರ ಹಿಂದೆ ಖಾಲಿ ಬಸ್ ಬರುತ್ತೆ ಎಂಬ ಗ್ಯಾರಂಟಿ ಏನು? ಎಂದು ಹೇಗೋ ಹತ್ತಿದ್ದಾಯ್ತು. ಆದರೆ ನಿಲ್ಲೋಕೆ ಆಗ್ಬೇಕಲ್ವಾ? ಬೆಳಗ್ಗೆ ಆಫೀಸು, ಕಾಲೇಜು ಹೋಗುವ ಜನರ ನಡುವೆ ನುಸುಳಿ ಹೇಗೋ ಕಂಬ, ಸೀಟಿನ ಸೈಡ್ ಹಿಡಿದುಕೊಂಡರೆ ಆಯ್ತು. ಇನ್ನು ಕೆಲವು ಬಸ್ ಗಳಲ್ಲಿ ಮೇಲೆ ಹಿಡಿದುಕೊಳ್ಳುವ ರಾಡ್ ತುಂಬಾ ಎತ್ತರದಲ್ಲಿರುತ್ತೆ. ನನ್ನಂತೆ ಹೈಟ್ ಕಮ್ಮಿ ಇದ್ದವರಿಗೆ ಇದೊಂದು ಸಾಹಸವೇ. ಕೆಲವೊಮ್ಮೆ ಎಲ್ಲೂ ಹಿಡಿದುಕೊಳ್ಳಲು ಸಿಗದೇ ಇದ್ದಾಗ ಆ ರಾಡ್ ನಲ್ಲಿ ಹೇಗೋ ನೇತಾಡಬೇಕಾಗುತ್ತದೆ. ಅದರಲ್ಲಿಯೂ ಬ್ರೇಕ್ ಹಾಕಿದರೆ ನಮ್ ಕತೆ ಮುಗೀತು. ಎಲ್ಲಿಯೂ ಹಿಡಿದುಕೊಳ್ಳಲಾಗದೆ ಇನ್ನೊಬ್ಬರ ಮೈ ಮೇಲೆ ಬಿದ್ದರೆ ಅವರ ನುಡಿಮುತ್ತುಗಳು ಬೇರೆ...ಸಲಹೆಗಳು ಬೇರೆ. ಕೆಲವರಂತೂ ಸ್ಸಾರಿ..ಎಂದು ಹೇಳಿದ್ರೂ ತಮ್ಮ ಪ್ರವಚನ ಮುಂದುವರಿಸುತ್ತಲೇ ಇರುತ್ತಾರೆ. ಅವರಿಗೇನು ಗೊತ್ತು ನಮ್ಮ ಹೈಟು ಪ್ರಾಬ್ಲಂಉ....

ಇನ್ನು ಬ್ಯಾಗ್...ಬೆಳಗ್ಗೆ ಟಿಫಿನ್ ಬಾಕ್ಸ್ ಇದ್ದ ಕಾರಣ ತುಸು ಭಾರವೇ ಇರುತ್ತದೆ ಬಿಡಿ. ಕಂಡೆಕ್ಟರ್ ಗಳಿಗಂತೂ ಬ್ಯಾಗ್ ಕಂಡರೆ ಎಲರ್ಜಿ. ಬ್ಯಾಗ್ ತೆಗೀರಿ ಬ್ಯಾಗ್ ತೆಗೀರಿ ಎಂದು ಕಂಡೆಕ್ಟರ್ ಬೊಬ್ಬೆ ಹಾಕುತ್ತಿದ್ದರೆ, ಬೆನ್ನಿಗಂಟಿಕೊಂಡಿದ್ದ ಬ್ಯಾಗ್ ನ್ನು ತೆಗೆದು ಕೈಯಲ್ಲಿ ಹಿಡಿದಕೊಂಡದ್ದಾಯ್ತು. ಯಾರಾದರೂ ಪುಣ್ಯಾತ್ಮರು ಸೀಟಿನಲ್ಲಿ ಕುಳಿತಿದ್ದರೆ, ಬ್ಯಾಗ್ ಹಿಡ್ಕೊಳ್ ತ್ತಾರೆ. ಇಲ್ಲದೇ ಇದ್ದರೆ ಒಂದು ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಹೇಗೋ ಅಡ್ಜೆಸ್ಟ್ ಮಾಡಿ ನಿಂತುಕೊಳ್ಳಲೇಬೇಕು. ಹೂಂ...ಮುಕ್ಕಾಲು ಗಂಟೆ ನಿಂತುಕೊಂಡು ಪ್ರಯಾಣ ಮಾಡುವುದು ಕಷ್ಟವೇ..ಹೀಗಿರುವಾಗ ಎಲ್ಲಿ ಸೀಟು ಖಾಲಿಯಾಗುತ್ತದೆ ಎಂಬುದನ್ನು ಕಣ್ಣಲ್ಲೇ ಲೆಕ್ಕ ಹಾಕಬೇಕು. ಅದು ಹೇಗೆ ಅಂತೀರಾ? ಎಫ್ ಎಂ ಹಾಕಿಕೊಂಡು ಆರಾಮವಾಗಿ ಅರೆಕಣ್ಣು ಬಿಟ್ಟು ನಿದ್ದೆ ಹೋಗುವವರು, ಪುಸ್ತಕ ಓದುತ್ತಿರುವವರ ಪಕ್ಕ ನಿಂತು ಅವರ ಸೀಟು ಖಾಲಿಯಾಗುತ್ತೆ ಎಂದು ಕಾದು ನಿಲ್ಲುವುದು ವ್ಯರ್ಥ. ಯಾಕೆಂದರೆ ಹೀಗಿರುವವರು ಹತ್ತಿರದ ಸ್ಟಾಪ್ ನಲ್ಲಿ ಇಳಿದುಕೊಳ್ಳುವುದಿಲ್ಲ. ಇನ್ನು ಸೀಟಿನಲ್ಲಿ ಕುಳಿತುಕೊಂಡವರು ತಮ್ಮ ಬ್ಯಾಗ್ ಸರಿಮಾಡಿ, ಮೊಬೈಲ್ ನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದು, ಬಸ್ ನ ಬಾಗಿಲಿನತ್ತ ಕಣ್ಣು ಹಾಯಿಸುತ್ತಿದ್ದರೆ ಅವರು ಮುಂದಿನ ಸ್ಟಾಪ್ ನಲ್ಲಿ ಇಳಿದುಕೊಳ್ಳುತ್ತಾರೆ ಎಂಬುದು ಪಕ್ಕಾ. ಆವಾಗ ಅವರ ಪಕ್ಕದಲ್ಲೇ ಹೋಗಿ ನಿಂತುಕೊಂಡು ಸಾಧ್ಯವಾದರೆ, ಸೀಟಿನಲ್ಲಿ ನಮ್ಮ ಕೈಯ್ಯಲ್ಲಿದ್ದ ಚಿಕ್ಕ ಬ್ಯಾಗ್ ಹಾಕಿ ರಿಸರ್ವ್ ಮಾಡಬಹುದು. ಕೆಲವರಂತೂ ಬಿಎಂಟಿಸಿಯ ಸೀಟು ಅಂದ್ರೆ ಸಿಎಂ ಸೀಟು ಎಂಬಂತೆ ಗುದ್ದಾಡಿ ಸೀಟು ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಕೆಲವು ಬಸ್ಸಿನಲ್ಲಿ ನೋಡಿದರೆ ಸೀಟು ಸುತ್ತಲೂ ಜಿರಳೆ ಮರಿಗಳು ಓಡಾಡುತ್ತಿರುತ್ತವೆ. ಅವು ಅತ್ತಿತ್ತ ಓಡಾಡುತ್ತಿರುವುದನ್ನು ನೋಡಿದರೆ ಟೈಂಪಾಸ್ ಆಗುವುದಂತೂ ಗ್ಯಾರಂಟಿ.

ಇದಿಷ್ಟು ಸೀಟಿನ ವಿಷ್ಯ ಆದ್ರೆ ನಿಂತು ಕೊಂಡೇ ಪ್ರಯಾಣಮಾಡುವ ಪ್ರಯಾಣ ಇನ್ನೂ ತ್ರಾಸದಾಯಕ. ಅದರಲ್ಲೂ ಕೆಲವರು ನಮಗೆ ಕುತೂಹಲದ ವಸ್ತುಗಳಾಗುತ್ತಾರೆ. ಹೇಗೆ ಅಂತೀರಾ? ಸಾಮಾನ್ಯವಾಗಿ ನಾನು ಓಡಾಡುವ ಬಸ್ (ಹರಿಶ್ಚಂದ್ರಘಾಟ್ - ಶಿವಾಜಿನಗರ್)ನಲ್ಲಿ ಜನ ತುಂಬಿ ತುಳುಕುತ್ತಿರುತ್ತಾರೆ. ಇಂಥಾ ಬಸ್ ನಲ್ಲಿ ನೆಟ್ಟಗೆ ನಿಂತುಕೊಳ್ಳಲೂ ಆಗದ ಪರಿಸ್ಥಿತಿ. ಹೀಗಿರುವಾಗ ಕೆಲವರು ಮಹಿಳೆಯರು, ಕಿವಿಗೆ ಈಯರ್ ಫೋನ್ ಸಿಕ್ಕಿಸಿ ಹಾಡು ಕೇಳುವುದರಲ್ಲಿ ಮಗ್ನರಾಗಿದ್ದರೆ, ಇನ್ನು ಕೆಲವರು ಫೋನ್ ನಲ್ಲಿ ಮಾತನಾಡುತ್ತಲೇ ಇರುತ್ತಾರೆ. ಕಂಡೆಕ್ಟರ್ ಅವರ ಪಕ್ಕ ಬಂದು ಟಿಕೆಟ್ ಎಂದು ಕಿರುಚಿದರೂ ಅವರಿಗೆ ಗೊತ್ತಾಗಲ್ಲ. ನನ್ನ ಕುತೂಹಲ ಏನಪ್ಪಾ ಅಂದ್ರೆ ಅವರ ನಿಂತುಕೊಂಡು ಒದ್ದಾಡುತ್ತಿದ್ದರೂ, ಕಿವಿಯಿಂದ ಈಯರ್ ಫೋನ್  ಬೀಳುವುದೇ ಇಲ್ಲ. ನಾನೂ ಈ ರೀತಿ ಟ್ರೈ ಮಾಡಿ ನೋಡಿದೆ, ಆದ್ರೆ ಯಾವತ್ತೂ ಬಸ್ ನಲ್ಲಿ ಓಡಾಡುವಾಗ ನನ್ನ ಕಿವಿಯಲ್ಲಿ ಈಯರ್ ಫೋನ್ ನಿಲ್ಲಲ್ಲ. ಬಹುಷಃ ನನ್ನ ಕಿವಿಯ ರಚನೆ ಸರಿಯಿಲ್ಲವೇನೋ ಅಂತಾ ಅಂದ್ಕೊಂಡಿದ್ದೀನಿ :)

 ಇಂಥಾ ಪ್ರಯಾಣಗಳ ನಡುವೆ ಟೈಂಪಾಸ್ ಮಾಡಲು ಎಫ್್ಎಂ ಕೇಳುವುದು ಮಾತ್ರವಲ್ಲ ಇನ್ನೂ ಕೆಲವು ವಿಷ್ಯಗಳಿವೆ. ನಾನು ನನ್ನ ಗೆಳತಿಯರ ಜತೆಗೆ ಇದ್ರೆ ಸಾಧಾರಣವಾಗಿ ಹೆಣ್ಣು ಮಕ್ಕಳ ತಲೆಕೂದಲಿನ ಬಗ್ಗೆಯೇ ಕಾಮೆಂಟ್ ಮಾಡ್ತೀವಿ. ನೋಡು ಎಷ್ಟು ಚೆನ್ನಾಗಿದೆಯಲ್ಲಾ ಆಕೆಯ ಕೂದಲು ಎಂಬ ಉದ್ಗಾರಗಳೇ ಹೆಚ್ಚು. ಯಾವುದೋ ಹುಡುಗಿಯ ಹೇರ್್ಸ್ಟೈಲ್, ಚಪ್ಪಲಿ, ಟೀಶರ್ಟ್..ಉಫ್..ಎಲ್ಲದರ ಬಗ್ಗೆ ವಿಮರ್ಶೆ ನಡೆಯುತ್ತಲೇ ಇರುತ್ತವೆ. ಇನ್ನು ಕೆಲವರ ತಲೆಯಲ್ಲಿ ಹೇನುಗಳು ಥಕಧಿಮಿಥ ಮಾಡುತ್ತಿದ್ದರೆ ಅದೂ ಒಂದು ರೀತಿಯ ಟೈಂಪಾಸ್. ಬಸ್ ಟ್ರಾಫಿಕ್ ಸಿಗ್ನಲ್್ನಲ್ಲಿ ನಿಂತಾಗಲೂ ಹಾಗೆಯೇ..ಸುತ್ತಲಿರುವ ವಾಹನ..ಬೈಕ್್ನಲ್ಲಿರುವ ಲವ್್ಬರ್ಡ್ಸ್್ಗಳು, ಕಾರಿನ ಗಾಜಿನಲ್ಲಿ ಇಣುಕುವ ಪುಟ್ಟ ಮಕ್ಕಳು...ಇದೆಲ್ಲವೂ ಟೈಂಪಾಸ್!

ಇದೆಲ್ಲೆದರ ನಡುವೆ ಜಗಳವೂ ಒಂಥರಾ ಪ್ರಯಾಣದ ಭಾಗವೇ ಆಗಿರುತ್ತದೆ. ಕೆಲವೊಂದು ಜಗಳಗಳಲ್ಲಿ ಡಿಕ್ಷನರಿಯಲ್ಲೇ ಇರದ ಪದಗಳನ್ನು ಬಳಸಿ ಕಿತ್ತಾಡುವ ಮಂದಿ. ಬ್ರೇಕ್ ಹಾಕಿದಾಗ ಬಿದ್ದರೂ, ಗುರಾಯಿಸುವ ಮಂದಿ ಇವರೆಲ್ಲರ ನಡುವೆ ಮಹಿಳೆಯರಿಗೆ ಬೇಕುಬೇಕಂತಲೇ ಒರಗಿ ನಿಲ್ಲುವ ಪುರುಷರು...ಎಲ್ಲವನ್ನು ಸಹಿಸಿಕೊಳ್ಳಬೇಕು, ಇಲ್ಲದೇ ಇದ್ದರೆ ತಿರುಗಿ ಬೈಯ್ಯಬೇಕು. ಮಹಿಳೆಯರಿಗೆ ಈ ಎರಡು ಆಫ್ಶನ್್ಗಳಂತೂ ಇದ್ದೇ ಇರುತ್ತೆ. ಆದರೆ ಮೊದಲನೇ ಆಫ್ಶನ್್ನ ಮೊರೆ ಹೋಗುವವರೇ ಹೆಚ್ಚು ಮಂದಿ. ಅಂತೂ ಕೆಲವೊಮ್ಮೆ ಜನರ ನಡುವೆ ಹೇಗೋ ಸೀಟು ಸಿಕ್ಕಿತು ಎನ್ನಿ, ಆವಾಗಲೇ ನಮ್ ಪಕ್ಕ ವಯಸ್ಸಾದವರೋ, ಮಗುವನ್ನು ಎತ್ತಿಕೊಂಡು ಬಂದವರೋ ಬಂದು ನಿಲ್ಲುತ್ತಾರೆ. ಸೀಟು ಬಿಟ್ಟು ಕೊಡಲೇ ಬೇಕಾಗುತ್ತದೆ. ಕೆಲವು ಜಾಣರಂತೂ ಸೀಟು ಬಿಟ್ಟುಕೊಡಬೇಕಲ್ವಾ ಎಂದು ಮುಖ ಬೇರೆಡೆಗೆ ತಿರುಗಿಸುತ್ತಾರೆ. ಈ ಪ್ರಯಾಣಗಳ ನಡುವೆ ಅಜ್ಜಿ ಪುಣ್ಯದಿಂದ ನನಗೆ ಸೀಟು ಸಿಕ್ಕಿದ್ದರೂ, ಸೀಟು ಬಿಟ್ಟುಕೊಟ್ಟದ್ದೇ ಜಾಸ್ತಿ. ನಾನು ಊರಲ್ಲಿ ಶಾಲೆಗೆ ಹೋಗುವಾಗಲೂ, ಕಾಲೇಜಿಗೆ ಹೋಗುವಾಗಲೂ ಎಸ್್ಟಿ (ಸ್ಟೂಡೆಂಟ್ ಪಾಸ್) ಹೊಂದಿದ ಶಾಲಾ ಮಕ್ಕಳು ಸೀಟಿನಲ್ಲಿ ಕೂರುವಂತಿಲ್ಲ. ಕುಳಿತರೆ ಸೀಟು ಬಿಟ್ಟುಕೊಡಲೇ ಬೇಕು, ಇಲ್ಲದಿದ್ದರೆ ಫುಲ್ ಟಿಕೆಟ್ ಕೊಡಲೇ ಬೇಕಿತ್ತು. ಇಂತಿರುವಾಗ ಕಾಲೇಜುವರೆಗೆ ಸೀಟಿನಲ್ಲಿ ಕುಳಿತು ಪ್ರಯಾಣಮಾಡಿದ ದಿನಗಳೇ ಕಡಿಮೆ. ಆದ್ರೆ ಬೆಂಗಳೂರಿನಲ್ಲಿ ಫುಲ್್ಟಿಕೇಟ್ ಕೊಟ್ಟು ಓಡಾಡ್ತಾ ಇದ್ದರೂ ಸೀಟಿನಲ್ಲಿ ಕೂರುವ ಭಾಗ್ಯ ನನಗೊಲಿದಿದ್ದು ಕಡಿಮೆಯೇ...ಖಾಲಿ ಬಸ್್ಗಾಗಿ ಕಾಯುತ್ತಾ ಕುಳಿತರೆ ಅದು ಆಗಲ್ಲ..ಕೆಲವೊಮ್ಮೆ ದಿನದ 24ಗಂಟೆಗಳಲ್ಲಿ ಎರಡು ಮೂರು ಗಂಟೆ ಬಸ್್ನ ನಿರೀಕ್ಷೆಯಲ್ಲೇ ಕಳೆದುಹೋಗುತ್ತಿದೆಯಲ್ಲಾ ಎಂದು ಬೇಜಾರಾಗುತ್ತಿದೆ. ಆದ್ರೆ ಏನ್ಮಾಡೋಣ..ಬಿಎಂಟಿಸಿ ಬಸ್್ನಲ್ಲಿ ಓಡಾಡುವ ನಮ್ಮಂಥ ಮಂದಿಯ ಕಷ್ಟ ನಮಗಷ್ಟೇ ಗೊತ್ತು.

ಲಾಸ್ಟ್್ಬೈಟ್: ಮೊನ್ನೆ ಮೊನ್ನೆ ಶಿವಾನಂದದ ಬಳಿ ಬಸ್ಸಿನಿಂದ ಇಳಿದ ವ್ಯಕ್ತಿ ಬಸ್ಸಿನ ಮುಂಬಾಗಿಲು ಬಳಿ ಬಂದು ಜೋರಾಗಿ ಕರೆಯುತ್ತಿದ್ದ...ಕಂಡೆಟ್ರೇ..ನನ್ನ ಲೇಡೀಸ್ ಇದ್ದಾರೆ..ಲೇಡೀಸ್ ಇದ್ದಾರೆ ಅಂತಾ.. ಆವಾಗ ಕಂಡೆಕ್ಟರ್ "ಲೇಡಿಸ್ ಇಳಿಯೋಕೆ ಜಾಗ ಕೊಡ್ರಿ" ಎಂದು ಕೂಗಿದಾಗ ಇಳಿದದ್ದು ಓರ್ವ ಮಹಿಳೆ ಮಾತ್ರ! ಆಕೆಗಾಗಿ ಆತ ಲೇಡೀಸ್..ಲೇಡಿಸ್  ಅಂತಾ ಬೊಬ್ಬೆ ಹಾಕಿದ್ದನ್ನು ನೋಡಿ ಬಸ್್ನಲ್ಲಿ ಫುಲ್ ನಗು :)

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಶ್ಮಿ ಅವ್ರೆ ತುಸು ದಿನಗಳ ಬಳಿಕ‌ ಒಳ್ಳೆಯ ಬರಹ(ಅನುಭವ) ಬರೆದಿರುವಿರಿ.. ನಿಜ ಬೀ ಎಂ ಟೀ ಸೀ ಬಸ್ಸಿನಲ್ಲಿ ಪ್ರಯಾಣಿಸುವಾಗ ತರಹೆವರಿ ಅನುಭವಗಳು ಆಗುವವು-ಆ ಬಗ್ಗೆ ಬರೆದರೆ ಎಸ್ಟೋ ಪುಟಗಲೆ ಆಗಬಹುದು ,ಮಹಾ ಕಾದಂಬರಿಯೇ ಆಗುವುದು...!! ದಿನಂಪ್ರತಿ ಸರಕಾರಿ ಬಸ್ಸುಗಳಲ್ಲಿ ಆದ್ಡಾದುವ ನನ್ನ0ತ‌ ಮತ್ತು ನಿಮ್ಮಂತ ಅಸಂಖ್ಯಾತ ಪ್ರಯಾಣಿಕರಿಗೆ ದಿನವೂ ನವ ನವೀನಾ ಅನುಭವಗಳೆ... ನೀವ್ ಹೇಳಿದ ರೂಟ್ ಕಡೆ ಗಾಡಿಗಳು ಬೇಜಾನ್ ಇವೆ ನಿಜ ಆದರೂ ಬಂದರೆ ಒಂದರ ಹಿಂದೆ ಒಂದು ಇಲ್ಲವಾದರೆ ಕಾಯುವಿಕೆ ತಪ್ಪಿದ್ದಲ್ಲ.. ಬಸ್ಸುಗಳು ಬಂದರೂ ವಿಪರೀತ ರಸ್ಷ್ಯೂ...:(( ನನಗೂ ಅನುಭವ ಆಗಿದೆ... ನಾ ಆ ಕಡೆಯೇ ಕಾಲೇಜು ಓದಿದ್ದು...!! ಬರಹ್ದಲ್ಲಿ ಹಲವು ಸಾಲುಗಳು ಸಖತ್ ... ಶುಭವಾಗಲಿ... \|/ ಹಿನ್ದೊಮ್ಮೆ ಆ ಬಗ್ಗೆ ಒನ್ದು ಬರಹ ಬರೆದಿದ್ದೆ... ============================================== ಕಪನೀಪತಿ ಜೊತೆ ಒಂದು ದಿನ -ನೋಡಿ ಸ್ವಾಮಿ ನಾವ್ ಇರೋದು ಹೀಗೆಯೇ!! | ಸಂಪದ - Sampada http://sampada.net/%...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ಅವರೆ, ಬಸ್ಸುಗಳು ರಾಶಿ ರಾಶಿ ಇವೆ. ಆದರೂ ಈ ತೊಂದರೆ! ಲೀಟರುಗಟ್ಟಲೆ ಪೆಟ್ರೋಲ್ ಸುರಿದು, ಇಂಚಿಂಚೇ ಮುಂದೆ ಕಾರು ಬಿಡುತ್ತಿರುವಾಗ, ಬಸ್ಸಲ್ಲಿ ಕುಳಿತು ನಿದ್ರೆ ಮಾಡುತ್ತಾ ಪ್ರಯಾಣಿಸುವವರನ್ನು ಕಂಡು ಸುಖೀಜನ ಅಂದುಕೊಂಡಿದ್ದೆ. ಉತ್ತಮ ಹಾಸ್ಯ ಕ್ಷಮಿಸಿ ಅನುಭವ ಕಥನ. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Super Rashmi avare

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.