ಬಣ್ಣದ ಚೆಂಡೂ- ಬಾಲ್ಯದ ಬದುಕು

2.5

ಬಣ್ಣದ ಚೆಂಡು, ಬಲೂನು ಇವುಗಳ ಜತೆಯಲ್ಲಿ ಆಡೋ ಸಮಯದಲ್ಲಿ ಅವುಗಳನ್ನೇ ಮಾರಿ ತಮ್ಮ ಹೊಟ್ಟೆಯನ್ನು ತುಂಬಿಸಬೇಕಾದ ಪರಿಸ್ಥಿತಿ ಹೇಗಿರುತ್ತೆ ಹೇಳಿ? ಹೌದು. ನಾನು ಹೇಳಹೊರಟಿರುವುದು ಹೀಗೇ ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುತ್ತಿರುವ ಪುಟ್ಟ ಮಕ್ಕಳ ಬಗ್ಗೆ. ಐದಾರು ತಿಂಗಳ ಹಿಂದೆ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಸಿಗ್ನಲ್ ನಿಂದಾಗಿ ನಿಂತಿದ್ದೆ. ಮರುಕ್ಷಣದಲ್ಲಿಯೇ ಮೂರು ಪುಟ್ಟ ಮಕ್ಕಳು ಕೈಯಲ್ಲಿ ಉದ್ದದ ಬಲೂನು, ಬಣ್ಣದ ಚೆಂಡುಗಳನ್ನು ಹಿಡಿದುಕೊಂಡು ನಿಂತಿದ್ದ ವಾಹನಗಳ ಕಿಟಕಿ ಗಾಜನ್ನು ಮೆಲ್ಲಗೆ ತಟ್ಟುತ್ತಾ ಅಕ್ಕಾ..ಅಣ್ಣಾ ..ತಗೊಳ್ಳಿ ಚೆನ್ನಾಗಿದೆ ಅನ್ನುತ್ತಿದ್ದರು. ಅಲ್ಲಲ್ಲಿ ಹರಿದ ಬಟ್ಟೆಗಳು, ಎಣ್ಣೆ ,ನೀರು ಕಾಣದೆ ಹಲವು ದಿನಗಳಾಗಿರಬಹುದಾದ ಕೂದಲುಗಳು ಹೀಗೆ ಇವರನ್ನು ನೋಡಿದಾಗಲೇ ಅವರ ಜೀವನ ಸ್ಥಿತಿಯನ್ನು ಊಹಿಸಬಹುದಿತ್ತು. ಸುರಕ್ಷಿತವಾಗಿ ರಸ್ತೆ ದಾಟಲೂ ತಿಳಿಯದಂತಹ ವಯಸ್ಸಿನಲ್ಲಿ ಬೀದಿ ಬೀದಿಗಳಲ್ಲಿ ಹೀಗೆ ನಾನಾ ತರದ ಆಟಿಕೆಗಳನ್ನು ಹೊತ್ತು ಅಲೆಯುತ್ತಿರುವ ಅದೆಷ್ಟೋ ಮಕ್ಕಳನ್ನು ನಾವು ಕಾಣುತ್ತಿದ್ದೇವೆ.
ಹೀಗೆ ಮಾರುತ್ತಿರುವ ಮಕ್ಕಳು ಹೆಚ್ಚಾಗಿ ಗಾರೆ ಕೆಲಸ,ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿರುವವರ ಮಕ್ಕಳು. ಊರಿಂದ ಊರಿಗೆ ಉದ್ಯೋಗವನ್ನರಸುತ್ತಾ ಹೋಗುವ ಇಂತಹವರ ಮಕ್ಕಳು ಶಾಲೆಯ ಮುಖ ಕಾಣುವುದು ತೀರಾ ಅಪರೂಪ. ತಮ್ಮ ಜೀವನವೇ ಹೀಗೆ ಸಾಗುತ್ತಿರುವಾಗ ಮಕ್ಕಳನ್ನು ಯಾವ ರೀತಿಯಾಗಿ ಶಾಲೆಗೆ ಕಳುಹಿಸುವುದು ಎಂಬುದು ಅವರ ಅಭಿಪ್ರಾಯ. ದಿನಗೂಲಿಯಲ್ಲಿ ಜೀವನ ನಡೆಸುತ್ತಿರುವ ಈ ಜನರ ಜೀವನದಲ್ಲಿ ಶಾಲೆಗಳು ಕೈಗೆ ಬಂದರೂ ಬಾಯಿಗೆ ಸಿಗಲಾರದ ತುತ್ತು. ಕಾರಣ ಗಾರೆ ಕೆಲಸ ಅಥವಾ ಕೂಲಿ ಕೆಲಸಗಳು ಒಂದೆರಡು ತಿಂಗಳುಗಳು ಮಾತ್ರ ಇರುತ್ತವೆ. ನಂತರ ಬೇರೆ ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ.
ಒಮ್ಮೆ ಹೀಗೇ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆಯನ್ನು ಮಾತಾಡಿಸಿದ್ದೆ. 'ಇಷ್ಟು ಕಷ್ಟ ಪಟ್ಟು ದುಡಿಯುತ್ತೀರಿ, ಮಕ್ಕಳನ್ನಾದರೂ ಶಾಲೆಗಳಿಗೆ ಕಳುಹಿಸಿ ನಾಲ್ಕಕ್ಷರ ಕಲಿಸಬಾರದಾ? ಎಂದೆ. ಅದಕ್ಕೆ ಆ ಮಹಿಳೆ ನಮ್ಮೂರಲ್ಲಿ ಮಳೆ-ಬೆಳೆ ಇಲ್ಲ. ಹೊಟ್ಟೆಪಾಡಿಗಾಗಿ ಊರೂರು ಅಲೆದು-ದುಡಿದು ತಿನ್ನುವುದು. ಮಕ್ಕಳನ್ನು ಊರಲ್ಲಿ ಶಾಲೆಗೆಂದು ಬಿಟ್ಟುಬಂದರೆ ನೋಡಿಕೊಳ್ಳುವವರು ಯಾರೂ ಇಲ್ಲ. ಹಾಗಾಗಿ ಊರೂರು ಅಲೆಯುತ್ತಾ ಸಾಗುವುದೇ ನಮ್ಮ ಜೀವನ. ಹೊಟ್ಟೆ ತಣ್ಣಗಾದ ಮೇಲೆ ಓದು ಎಲ್ಲಾ ಅಲ್ವಾ ಅಂದಿದ್ದರು. ಒದಿಸಬೇಕೆಂಬ ಇಚ್ಚೆ ಇದ್ದರೂ ಒದಿಸಲಾಗದ ಅಸಹಾಯಕಥೆಯನ್ನು ನೋಡಿ ಏನನ್ನುವುದೋ ತಿಳಿಯದಾಯಿತು.
ಇದು ಬೀದಿ ಬದಿಯ ಮಕ್ಕಳ ಕಥೆ, ಇಂತಹುದೇ ಅನೇಕ ಮಕ್ಕಳು ತಮ್ಮ ಬಾಲ್ಯವನ್ನು ಕಾಣದೆ, ಹೊಟೇಲುಗಳಲ್ಲಿ, ವ್ಯಾಪಾರಸ್ಥರ ಅಂಗಡಿಗಳಲ್ಲಿ ಯಾರಿಗೂ ಕಾಣದ ಹಾಗೆ ಬದುಕು ನಡೆಸುತ್ತಿದ್ದಾರೆ. ಬಡತನ, ಹೊಟ್ಟೆಪಾಡು ಬದುಕಿನ ಎಲ್ಲಾ ಅವಕಾಶಗಳನ್ನೂ ಕಸಿದುಕೊಂಡು ಬಿಡುತ್ತದೆ. ಕಡ್ಡಾಯ ಶಿಕ್ಷಣ ಪದ್ದತಿ ಜಾರಿಯಲ್ಲಿದ್ದರೂ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ಪೋಷಕರೇ ಮಕ್ಕಳನ್ನು ಸರ್ಕಸ್,ಭಿಕ್ಷಾಟನೆ, ಮುಂತಾದ ಕಾರಣಗಳಿಗೆ ಬಳಸಿಕೊಂಡು ಶಾಲೆಯಿಂದ ವಂಚಿತರಾಗುವಂತೆ ಮಾಡುತ್ತಾರೆ. ಸರ್ಕಸ್ ಮಾಡಿದರೆ ಹಣ ಸಿಗುತ್ತದೆ, ಶಾಲೆಯಲ್ಲಿ ಏನು ಕೊಡುತ್ತಾರೆ? ಎನ್ನುವುದು ಅವರ ಪ್ರಶ್ನೆ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಕಳಕಳಿ, ಮಮತಾರವರೇ. ಸರ್ಕಾರದೊಂದಿಗೆ ಪ್ರಜ್ಞಾವಂತರೂ ಈ ಕುರಿತು ಗಮನ ಹರಿಸಬೇಕಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸಮಸ್ಯೆಗಳನ್ನು ಮನಸಿನಲ್ಲಿಟ್ಟುಕೊಂಡು ಕೆಲವು ಸ್ವಾವಲಂಬಿ ಸ್ವಯಂ ಸೇವಾ ಸಂಸ್ಥೆಗಳು ಹಲವಾರು ಶಾಲೆಗಳನ್ನು ತೆರೆದು ಇಂತಹ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದೆ. ಆದರೆ ಇವು ಬೆರಳೆಣಿಕೆಯಷ್ಟು ಮಾತ್ರ ಇದೆ.
ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಸಾರ್ವಜನಿಕರು ಕೈಜೋಡಿಸಿದಾಗ ಇಂತಹ ಸಮಸ್ಯೆಗಳಿಗೆ ಸ್ವಲ್ಪಮಟ್ಟಿನ ಪರಿಹಾರ ಸಾಧ್ಯ. ನಿಮ್ಮ ಕಳಕಳಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.