ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ....

3

ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ.  ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ ಪುಸ್ತಕ ಮೊದಲು ಓದಿ ಮುಗಿಸಿ ಎಂದು ಬೈಯುತ್ತಾಳೆ. ಆಗ ಹಾಸ್ಯ ಸಾಹಿತಿಗಳ ಭಾವ ಚಿತ್ರ,  ನನ್ನ ನೋಡಿ ನಕ್ಕ ಹಾಗೆ ಅನ್ನಿಸುತ್ತೆ. ಆದರೂ ಹೊಸ ಹೊಸ ಪುಸ್ತಕಗಳನ್ನು ಕೊಳ್ಳುವುದನ್ನು ಬಿಟ್ಟಿಲ್ಲ. ಮೊನ್ನೆ ಮುಂಜಾನೆ ಪೇಪರ್ ನಲ್ಲಿ ಕಾರ್ಯಕ್ರಮ ಪಟ್ಟಿ  ಓದುತ್ತಾ ಕುಳಿತ್ತಿದ್ದೆ. ಅಲ್ಲಿ ಶ್ರೀ ಜೋಗಿ ಅವರ "ಗುರುವಾಯನಕೆರೆ" ಮತ್ತು "ಹಲಗೆ ಬಳಪ" (ಹೊಸ ಬರಹಗಾರರಿಗೆ ಉಪಯೋಗವಾಗುವ) ಪುಸ್ತಕಗಳ ಬಿಡುಗಡೆ ಇತ್ತು. ಪುಸ್ತಕ ಬಿಡುಗಡೆಗೆ ಹೋದರೆ ತುಂಬಾ ಫಾಯಿದೆ ಇರುತ್ತವೆ. ರುಚಿಯಾದ ತಿಂಡಿ, ಕಾಫಿ  ಅಲ್ಲದೆ ಪುಸ್ತಕಗಳು ರಿಯಾಯತಿ ದರದಲ್ಲಿ ಸಿಗುತ್ತವೆ. ಮತ್ತು ತುಂಬಾ ಗೆಳೆಯರ ಪರಿಚಯ ಮತ್ತು ಒಳ್ಳೊಳ್ಳೆ ಪ್ರಖ್ಯಾತರ ಭಾಷಣ ಕೇಳಲು ಸಿಗುತ್ತೆ. ಅದನ್ನು ನೋಡಿ ತುಂಬಾ ಖುಷಿಯಿಂದ  "ಅರೆ ಜೋಗಿ..." ಎಂದು ಹಾಡಲು ಶುರು ಮಾಡಿದೆ.  ಅದನ್ನು ನೋಡಿ ಏನು ರಾಯರು ತುಂಬಾ ಖುಷಿಯಿಂದ ಇದ್ದೀರಿ ಎಂದಳು.  ನಾನು ಬೇಗನೆ ಪೇಪರ್ ಮಡಚಿ ಇಟ್ಟೆ.  ಏಕೆಂದರೆ, ಅವಳಿಗೂ ಪೇಪರ್ ನಲ್ಲಿ ಇರುವ ಎಲ್ಲ ಮಾಹಿತಿಗಳು ಚಿರ ಪರಿಚಿತವಾಗಿತ್ತು. ಮಗ ಬೇಗ ಎದ್ದು ಅಮ್ಮ ಅಮ್ಮ .. ಎಂದು ರಾಗ ಎಳೆಯುತ್ತಿದ್ದ. ನಾನು ಹೋಗಿ ಬಾ ಕಂದ ಎಂದು ಕರೆದುಕೊಳ್ಳಲು ಹೋದೆ. ಮತ್ತಷ್ಟು ಜೋರಾಗಿ ಅಮ್ಮ ಅಮ್ಮ ಎಂದು ಅಳುತ್ತ ಕುಳಿತ.  ಒಂದೆರಡು ದಿವಸದಿಂದ ಅಪ್ಪ ಅಪ್ಪ ಎಂದು ಏಳುತ್ತಿದ್ದವನು, ಇವತ್ತು ಎದ್ದು ಅಮ್ಮ ಎಂದಿದ್ದು ನೋಡಿ, ಮಡದಿಗೆ ಲೇ ಇವತ್ತು ಮಗ ಪಕ್ಷ ಬದಲಿಸಿದ್ದಾನೆ ಎಂದೆ. ಮೊದಲೇ ಸಿಲಿ೦ಡರ್ ರೇಟ್ ಜಾಸ್ತಿ ಮಾಡಿದ್ದಕ್ಕೆ ಕೋಪದಿಂದ ಇದ್ದ ಮಡದಿ ಏನ್ರೀ, ನನ್ನನ್ನು ಯಾವ ಪಕ್ಷಕ್ಕೂ ಸೇರಿಸಬೇಡ ಎಂದು ಸಿಡಿದೆದ್ದಳು. ಲೇ ನೀನೆ ತಾನೇ ಆಡಳಿತ ಪಕ್ಷದ ಹೈ ಕಮಾಂಡ್ ಎಂದೆ. ನನ್ನದೇನಿದ್ದರು ನಿನ್ನ ಮಾತು ಕೇಳುವುದು ಅಷ್ಟೇ ಎಂದೆ. ಕಡೆಗೆ ಮಡದಿಗೆ ನನ್ನ ಗೆಳೆಯ ಸಂತೋಷ ಫೋನ್ ಮಾಡಿದ್ದಾನೆ ಅವನ ಮನೆಗೆ ಹೋಗಬೇಕು ಎಂದು ಸುಳ್ಳು ಹೇಳಿ, ಬೇಗನೆ ರೆಡಿ ಆಗಿ ಮನೆಯಿಂದ ಹೊರಬಿದ್ದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತುಂಬಾ ಪ್ರಸಿದ್ದ ವ್ಯಕ್ತಿಗಳು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಪುಸ್ತಕ ಖರೀದಿಸಿ ಮನೆಗೆ ಹೋಗುವ ಬದಲು, ನನ್ನ  ಮನೆಯ ಪಕ್ಕದಲ್ಲೇ ಇರುವ ಮನೋಜನ ಮನೆಗೆ ಹೋಗಿ, ಆ ಪುಸ್ತಕ ಕೊಟ್ಟು, ಮರುದಿನ ಮಡದಿಗೆ ತಿಳಿಯದ ಹಾಗೆ ತಂದು ಇಟ್ಟರೆ ಆಗುತ್ತೆ ಎಂದು ಮನೋಜನ ಮನೆಗೆ ಹೋದೆ.


ಅಷ್ಟರಲ್ಲಿ ನಮ್ಮ ಮಂಜ ಕೂಡ ಹಾಜರ ಆದ. ಮನೋಜ ಮಗನಿಗೆ "ಲೋ.. ಲೋಹಿತಾ ಬೇಗ ಎದ್ದು, ಮುಖ ತೊಳೆದುಕೊಂಡು, ದೇವರಿಗೆ ನಮಸ್ಕಾರ ಮಾಡೋ" ಎಂದು ಕೂಗುತ್ತಿದ್ದ. ಲೋಹಿತ ಮುಖ ತೊಳೆದುಕೊಂಡು ಬಂದು, ನನ್ನ ಪಕ್ಕ ಕುಳಿತುಕೊಂಡ. ಮನೋಜ ಮತ್ತೆ ಜೋರಾಗಿ ಲೇ.. ದೇವರಿಗೆ ನಮಸ್ಕಾರ ಮಾಡೋ ಎಂದು ಕಿರುಚಿದ. ಆಗ ಮಂಜ ಲೇ ನಿನ್ನ ಕಿರುಚಾಟಕ್ಕೆ ದೇವರು ಹೆದರಿ ದೇವರ ಮನೆಯಿಂದ ಓಡಿ ಹೋಗಿದ್ದಾರೆ, ನಮಸ್ಕಾರ ಯಾರಿಗೆ ಮಾಡಬೇಕು ಎಂದು ಮಂಜ ಛೇಡಿಸಿದ. ಲೇ.. ನೀನೊಂದು ಸುಮ್ಮನೆ ಕುಳಿತುಕೋ ಎಂದು ಹೇಳಿದ.  ಕಡೆಗೆ ಮನೋಜನ ಮಗ ನಮಸ್ಕಾರ ಮಾಡಿ ಅಳುತ್ತ ಬಂದ. ಮಂಜ ಟಿ ವಿ ಚಾನೆಲ್ ಚೇಂಜ್ ಮಾಡಿದ. ಅದರಲ್ಲಿ "ದೊಡ್ಡವರೆಲ್ಲ ಜಾಣರಲ್ಲ..." ಎಂಬ ಗುರು-ಶಿಷ್ಯ ಚಲನಚಿತ್ರದ ಹಾಡು ಹತ್ತಿತು. ಮಂಜ ಲೋಹಿತನಿಗೆ ನೋಡು ಸರಿಯಾಗಿದೆ ಹಾಡು ದೊಡ್ಡವರೆಲ್ಲ ದಡ್ಡರು, ಸಣ್ಣವರು ಶ್ಯಾಣ್ಯ ಎಂದು ಮತ್ತು ನಿಮ್ಮ ಅಪ್ಪನಿಗೆ ಬಾಲ್ಯ ಎಂದರೆ ಗೊತ್ತೇ ಇಲ್ಲ ಕಣೋ, ಅವಿನಿಗೆ ಎರಡು ಬಾಲ(ಬಾಲ ಮತ್ತು ಅದರ ಕೆಳಗೆ ಮತ್ತೊಂದು ಮಂಗ್ಯಾನ್ ಬಾಲ) ಇದೆ ಎನ್ನುವುದು ಮಾತ್ರ ಗೊತ್ತು ಎಂದ. 


ಅಷ್ಟರಲ್ಲಿ, ಒಬ್ಬರು ಮನೋಜನ ಹತ್ತಿರ ಭವಿಷ್ಯ ಕೇಳುವುದಕ್ಕೆ ಬಂದರು. ಅವರು ತಮ್ಮ ಮನೆಯಲ್ಲಿ ದಿನವು ಜಗಳ ಎಂದು ಹೇಳಿದರು. ಮನೋಜ ಅವರ ಕುಂಡಲಿ ಪರೀಕ್ಷಿಸಿ ಲೆಕ್ಕ ಹಾಕಿ, ಅವರಿಗೆ ಒಂದಿಷ್ಟು ಪೂಜೆಗಳನ್ನೂ ಮಾಡಿಸಲು ಹೇಳಿದ. ಮತ್ತೆ, ನಿಮ್ಮ ಮನೆಯಲ್ಲಿ ಶಿವ-ಪಾರ್ವತೀ, ಗಣೇಶ, ಸುಬ್ರಮಣ್ಯ ಇರುವ ಫೋಟೋ ಇದ್ದರೆ, ತೆಗೆದು ಬಿಡಿ ಎಂದ.  ಬಂದವರು, ಏನಾಗುತ್ತೆ ಇದ್ದರೆ ಎಂದು ಕೇಳಿದರು. ಶಿವನ ವಾಹನ ನಂದಿ, ಪಾರ್ವತೀ ವಾಹನ ಸಿಂಹ, ಗಣೇಶನ ವಾಹನ ಇಲಿ, ಸುಬ್ರಮಣ್ಯ ವಾಹನ ನವಿಲು. ಶಿವನ ಕೊರಳಲ್ಲಿ ಇರುವುದು ಹಾವು. ಅದಕ್ಕೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಅದಕ್ಕೆ ನಿಮ್ಮ ಮನೆಯಲ್ಲಿ ಪ್ರತಿ ದಿವಸ ಜಗಳ ಆಗುತ್ತಿದೆ ಎಂದ. ಮಂಜನಿಗೆ ಸಕ್ಕತ ಕೋಪ ಬಂತು. ಲೇ... ಅದು ಪ್ರೀತಿ - ಸೌಹಾರ್ಧತೆಯ ಸಂಕೇತ. ತಿಳುವಳಿಕೆ ಇರುವ ಮನುಷ್ಯರಾದ ನಮಗೆ ಆ ಬುದ್ದಿ ಇಲ್ಲ.  ಏನೇನೋ ಹೇಳಿ ತಲೆ ಕೆಡಿಸ ಬೇಡ. ಇದು ಯಾವ ಪುಸ್ತಕದಲ್ಲಿ ಬರೆದಿದೆ ಹೇಳು ನೋಡೋಣ ಎಂದು ಸವಾಲೆಸೆದ. ಮತ್ತೆ ಮೊನ್ನೆ ಬಂದಾಗ, ಒಬ್ಬರಿಗೆ ನಿಂತಿರುವ ಶ್ರೀ ಸೀತ-ರಾಮರ ಫೋಟೋ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಿದ್ದ. ಅದು ವನವಾಸಕ್ಕೆ ಹೋಗುವ ಲಕ್ಷಣವಂತೆ, ನಿನ್ನ ತಲೆ ಕೆಟ್ಟಿರಬೇಕು ಎಂದು ಝಾಡಿಸಿದ. ಒಬ್ಬರು ನಿನ್ನ ಹಾಗೆ ಮನೆಯಲ್ಲಿರುವ ಶ್ರೀ ವೆಂಕಟೇಶ ದೇವರ ಫೋಟೋ ಎಲ್ಲವನ್ನು ತೆಗೆದು ಹಾಕಿದ್ದರು. ಏಕೆ? ಎಂದು ಕೇಳಿದರೆ ನಿನ್ನ ಹಾಗೆ ಯಾರೋ ಒಬ್ಬರು ಅವರಿಗೆ ಹೇಳಿದ್ದರಂತೆ ಅದನ್ನು ಹಾಕಿಕೊಂಡರೆ ಮನೆ ತುಂಬಾ ಸಾಲ ಆಗುತ್ತಂತೆ ಎಂದು. ಕಡೆಗೆ ನಾನು ಬುದ್ಧಿ ಹೇಳಿದೆ, ಒಂದೇ ತಿಂಗಳಲ್ಲಿ ಅವರಿಗೆ ಸಾಲಾ ಬಂದ(ಹೆಂಡತಿ ಅಪ್ಪನಿಗೆ ಮಗ ಹುಟ್ಟಿದ, ಅದು ಅವರ ಮಾವ ತಿರುಪತಿ ವೆ೦ಕಪ್ಪನಿಗೆ ಹರಕೆ ಹೊತ್ತಮೇಲೆ ಹತ್ತನೇ ಮಗು ಗಂಡು ಆಗಿತ್ತು). ಮತ್ತೆ ನಾವು ದಕ್ಷಿಣಕ್ಕೆ ಮುಖ ಇರುವ ಮನೆಯನ್ನು ತೆಗೆದುಕೊಳ್ಳುವುದಿಲ್ಲ. ವರದಕ್ಷಿಣೆ ಬಂದರೆ ಬಿಡುವುದಿಲ್ಲ. ದೇವರ ಸನ್ನಿಧಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುತ್ತೇವೆ. ಯಾರಾದರು ದಕ್ಷಿಣೆ ಕೊಟ್ಟರೆ ಬಿಡದೆ  ತೆಗೆದುಕೊಳ್ಳುತ್ತವೆ ಎಂದು ಬೈದ.  ಮೊನ್ನೆ ಇವನ ಕಡೆ ನನ್ನ ಅಳಿಯನ ಒಂದು ಕುಂಡಲಿ ತೆಗಿಸಿಕೊಂಡು ಹೋಗಿದ್ದೆ. ಅವನು ಹುಟ್ಟಿದ ವಾರ ಬುಧವಾರ ಎಂದು ಬರೆದಿದ್ದ. ಕಂಪ್ಯೂಟರ್ ನಲ್ಲಿ ನೋಡಿದರೆ ಮಂಗಳವಾರ ಎಂದು ಬರುತಿತ್ತು. ಬಂದು ಕೇಳಿದರೆ, ನನ್ನ ಪಂಚಾಗದಲ್ಲಿ ಎಂದು ತಪ್ಪು ಆಗುವುದಿಲ್ಲ ಎಂದು ನನಗೆ ಹೇಳಿದ್ದ. ಅದಕ್ಕೆ ನಾನು ಹಾಗಾದರೆ ಎಷ್ಟೋ ಬ್ಯಾಂಕ್ ಗಳು ಕಂಪ್ಯೂಟರ್ ಉಪಯೋಗಿಸುತ್ತಾರೆ. ವಾರ ತಪ್ಪು ಆಗಿದ್ದರೆ ಎಷ್ಟೋ ಲೆಕ್ಕ ತಪ್ಪುತ್ತಿತ್ತು ಎಂದೆ. ಅದಕ್ಕೆ ನಾನು ದುಡ್ಡನ್ನು ಬ್ಯಾಂಕ್ನಲ್ಲಿ ಇಟ್ಟೆ ಇಲ್ಲ, ನನ್ನದೇನಿದ್ದರು ಬರಿ ರೋಕ್ ಮಾತ್ರ ಎಂದ. ಈಗ ನೋಡಿದರೆ ದೇವರ ಸುತ್ತ ಏನೇನೋ ಹೇಳುತ್ತಾನೆ ಎಂದು ಬೈದ.  ಅಷ್ಟರಲ್ಲಿ ಭವಿಷ್ಯ ಕೇಳಲು ಬಂದ ಆಸಾಮಿ ಮನೋಜನಿಗೆ ದಕ್ಷಿಣೆ ಕೊಡದೆ, ನಾನು ಹೊರಡುತ್ತೇನೆ ಎಂದು ಹೊರಟು ಹೋದರು.


ಇಲ್ಲೇ ಕುಳಿತರೆ ಮಂಜ ಮತ್ತೆ ನನ್ನ ಬಗ್ಗೆ ಏನಾದರು ಶುರು ಮಾಡಿದರೆ ಕಷ್ಟ ಎಂದು, ಪುಸ್ತಕವನ್ನು ಮನೋಜನಿಗೆ ಕೊಟ್ಟು ನಾಳೆ ಬಂದು ತೆಗೆದು ಕೊಳ್ಳುತ್ತೇನೆ ಎಂದು ಹೇಳಿ ಮನಗೆ ಹೋದೆ. ಮನೆಯಲ್ಲಿ ಸಂತೋಷ ತನ್ನ ಮಡದಿ ಮಗಳ ಸಮೇತ ಹಾಜರ ಆಗಿದ್ದ. ನನ್ನ ಮುಖದಲ್ಲಿ ಇದ್ದ ಸಂತೋಷ ಮಾತ್ರ ಮಾಯವಾಗಿತ್ತು. ಅಷ್ಟರಲ್ಲಿ ಮನೋಜನ ಮಗ ಲೋಹಿತ್ "ಅಂಕಲ್ ನಿಮ್ಮ ಪುಸ್ತಕ ಅಲ್ಲೇ ಮರೆತು ಬಂದಿದ್ದೀರಾ" ತೆಗೆದುಕೊಳ್ಳಿ ಎಂದು ಕೊಟ್ಟು ಹೋದ. ಮಡದಿ ಸಂತೋಷನ ಪರಿವಾರ ಹೋದ ಮೇಲೆ ಕೋಪದಿಂದ ಮಾತು ಬಿಟ್ಟಿದ್ದಳು.  "ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ" ಎಂದು ಡಿ ವಿ ಜಿ ಅವರು ಹೇಳಿದ್ದಾರೆ ಎಂದೆ.  ನೀವು ಮಸ್ತಕ ಬೆಳೆಯುತ್ತೆ ಎಂದು ಕಷ್ಟಕ್ಕೆ ಆಗುವ ದುಡ್ಡು ಪೋಲು ಮಾಡುತ್ತ ಇದ್ದೀರಾ? ಎಂದಳು. ಇನ್ನು ಮೇಲಿಂದ ಇರುವ ಎಲ್ಲ ಪುಸ್ತಕ ಓದುವವರೆಗೂ, ಯಾವುದೇ ಪುಸ್ತಕ ಖರಿದಿಸುವುದಿಲ್ಲ ಎಂದು ಹೇಳಿದ ಮೇಲೆ ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡಿದ್ದಳು. ಹಾಗೇನಾದರು ತಂದರೆ ರಸ್ತೆಗೆ ಒಗೆಯುತ್ತೇನೆ ಎಂದಳು. ಲೇ ಅದು ಸರಸ್ವತಿ ಕಣೇ... ಎಂದೆ. ನಗುತ್ತ ಅದನ್ನಲ್ಲಾ ನಿಮ್ಮನ್ನು ಎಂದಳು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕುಲಕರ್ಣಿಗಳೆ, ನಾನೂ ನಿಮ್ಮ ಹಾಗೆ ಬಿಬ್ಲಿಯೋಮೇನಿಯಾಕ್ ಅಂದರೆ ಪುಸ್ತಕದ ಹುಚ್ಚ. ಒಮ್ಮೆ ಒಂದು ಪುಸ್ತಕದ ಮಳಿಗೆಯಲ್ಲಿ ಜೇಬಲ್ಲಿ ಇರುವ ದುಡ್ಡನ್ನೆಲ್ಲಾ ಖಾಲಿ ಮಾಡಿಕೊಂಡು ಪುಸ್ತಕ ಖರೀದಿ ಮಾಡಿದ್ದೆ. ಸಿಟಿ ಬಸ್ಸಿಗಾಗಿ ಇಪ್ಪತ್ತು ರೂಪಾಯಿ ಮೇಲಿನ ಅಂಗಿಯ ಜೇಬಿನಿಲ್ಲಿಟ್ಟುಕೊಂಡಿದ್ದೆ. ಆದರೆ ಅದನ್ನು ಸರ್ಕಾರಿ ಆಫೀಸಿನ ಜವಾನನೊಬ್ಬನಿಗೆ ಚಾಯ್ ಖರ್ಚಿಗೆಂದು ಕೊಟ್ಟಿದ್ದು ಮರೆತೇ ಹೋಗಿತ್ತು. ಇನ್ನೇನು ಬಸ್ ಹತ್ತಿ ಟಿಕೇಟಿನ ಹಣಕ್ಕಾಗಿ ತಡಕಾಡಿದರೆ ಆಗ ನೆನಪಾಗಬೇಕೆ ನನ್ನ ಬಳಿಯಲ್ಲಿ ಚಿಲ್ಲರೆ ಕಾಸೂ ಕೂಡಾ ಇಲ್ಲಾಂತ. ಸರಿ ಕಂಡಕ್ಟರಿಗೆ ಅದರ ಆಪೋಸಿಟ್ ರೂಟಿನ ಬಸ್ಸಾ ಅಂತಾ ಕೇಳಿ ಮುಂದಿನ ಸ್ಟಾಪಿನಲ್ಲಿ ಉಪಾಯವಾಗಿ ಇಳಿದುಕೊಂಡೆ. ಆ ದಿನ ಅದ್ಯಾವ ಮಾಯದಲ್ಲೋ ಏ.ಟಿ.ಎಮ್. ಕಾರ್ಡನ್ನು ಮನೆಯಲ್ಲೇ ಬಿಟ್ಟು ಹೋಗಿದ್ದೆ. ಇನ್ನೇನು ಮಾಡುವುದು ಒಂದು ಉಪಾಯಮಾಡಿ ಆಟೋ ಹಿಡಿದು ಮನೆಗೆ ಬಂದು ಸೇರಿದೆ. ಮನೆಗೆ ಬಂದು ನನ್ನ ಶ್ರೀಮತಿಯಿಂದ ಹಣ ತೆಗೆದು ಆಟೋದವನಿಗೆ ಕೊಟ್ಟು ಕಳುಹಿಸಿದೆ. ಆಮೇಲೆ ನನ್ನ ಪುಸ್ತಕದ ಕಟ್ಟು ಮಾರನೆಯ ದಿನ ನೋಡಿದ ಮೇಲೆಯೇ ನನ್ನ ಶ್ರೀಮತಿಗೆ ನಾನು ಆಟೋದವನಿಗೆ ಕೊಡಲು ಏಕೆ ದುಡ್ಡು ಕೇಳಿದೆ ಎಂದು. ಈ ಪಜೀತಿಯ ಪ್ರಸಂಗ ನಿಮ್ಮ ಬರಹದಿಂದ ನೆನಪಿಗೆ ಬಂತು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀ ಮತ್ತು ಗೋಪಾಲ್ ಸಾರ್ ನಿಮ್ಮಿಬ್ಬರ ಅನುಭವ ಕೇಳಿದ ಮೇಲೆ ನಾನಾ ಅನುಭವವನ್ನು ಹೇಳಲೇ ಬೇಕು ಅನ್ನಿಸಿದೆ..!!

ನನಗೆ ವಿಪರೀತ ಪುಸ್ತಕಗನ್ನು ಓದುವ ಹುಚ್ಚು ... ನಾ ಎಸ ಎಸ ಎಲ್ ಸೀ ಮತ್ತು ಪೀ ಯೂ ಸಿ ನಂತರ ಡಿಪ್ಲೋಮಾ ಈಗಲೂ ಸಹ ಮನೆಗೆ ವಾಪಾಸ್ಸು ಹೋಗುವಾಗ ಕೈನಲ್ಲಿ ಯಾವ್ದರ ಹೊಸ ಪುಸ್ತಕ ಇರುವುದು..

ನನಗೆ ಈ ಪುಸ್ತಕ ಓದುವ ಚಟ(ಒಳ್ಳೆಯದೇ) ಅಂಟಿಸಿದ್ದು ನಮ್ ಅಣ್ಣ.. ಅವನು ಡಿಪ್ಲೋಮಾ ಓದುವಾಗ ಸಿಟಿಯಿಂದ ಮನೆಗೆ ಬರುವಾಗ ಲೈಬ್ರರಿಯಿಂದ ಮಾತು ತನ್ ಹಣದಿಂದ ಕೆಲವು ಪುಸ್ತಕ ಕೊಂಡು ತರುತ್ತಿದ್ದ.. ಆಗೆಲ್ಲ ನಾನಗೆ ನೆನಪಿರುವ ಹಾಗ್ ನಾ ಓದಿದ್ದು
ತುಷಾರ
ಕರ್ಮವೀರ
ಕಸ್ತೂರಿ
ಮಯೂರ
ಮಲ್ಲಿಗೆ
ತುಂತುರು
ಬಾಲ ಮಂಗಳ
ಚಂದಮಾಮ
ಆಮೇಲೆ ಸ್ವಲ್ಪ ಬುದ್ಧಿ ತಿಳಿದ ಮೇಲೆ !! ನಾ ಓದಿದ್ದು ಜಿಮ್ ಕಾರ್ಬೆಟ್ ಅವರ ನರ ಭಕ್ಷಕ ಚಿರತೆ ಮತ್ತು , ಹುಲಿಯನ್ನ ಕೊಂದ ಬಗೆಗಿನ ಪುಸ್ತಕ(ಅದು ನನಗೆ ಬಹು ಅಚ್ಚು ಮೆಚ್ಚು)..
ಆಮೇಲೆ ಕಾನೂರು ಸುಬ್ಬಮ್ಮ ಹೆಗ್ಗಡತಿ ಮಲೆಗಳಲ್ಲಿ ಮದುಮಗಳು ತೇಜಸ್ವಿ ಅವರ ಪುಸ್ತಕಗಳು ಲಂಕೇಶ್ ಪತ್ರಿಕೆ ಇತ್ಯಾದಿ ಕೊಂಡು ಓದುವ ಪರಿಪಾಠ ಬೆಳೆಸಿಕೊಂಡೆ ಹಲವೊಮ್ಮೆ ಮಧ್ಯಾಹ್ನದ ಊಟ ಬಿಟ್ಟು ಆ ಹಣದಲ್ಲಿ ಪುಸ್ತಕ ಪತ್ರಿಕೆ ಕೊಂಡು ಓದಿದ್ದು ಇದೆ...
ನಮ್ಮ ಮನೆಯಲ್ಲಿ ಸಂಗ್ರಹವಾಗುತ್ತಿದ್ದ ಪುಸ್ತಕಗಳ ರಾಶಿ ಗುಡ್ಡೆ ನೋಡಿ ನನ್ನ ಗುಣಗಾನ (ಅದಲ್ಲ) ಮಾಡದವರೇ ಇಲ್ಲ.....!!

ಹಲವೊಮ್ಮೆ ಪುಸ್ತಕಗಳಿಗೆ ಹೆಚಿಗೆ ಹಣ ವಿನಿಯೋಗಿಸಿ ಬಸ್ ಚಾರ್ಜ್ ಗೆ ಊಟಕ್ಕೆ ತೊಂದರೆ ಆದದ್ದು ಇದೆ.. ಆದ್ರೆ ನನಗಂತೂ ಆ ಬಗ್ಗೆ ಬೇಸರ ಇಲ್ಲ... ಈಗಲೂ ತಪ್ಪದೆ ೫-೬ ಪುಸ್ತಕ ಕೊಂಡು ಓದುವೆ...(ಮಾಸಿಕ ಪಾಕ್ಷಿಕ ಪತ್ರಿಕೆಗಳು) ಅಲ್ಲದೆ ಸ್ವಪ್ನ ಬುಕ್ ಸ್ಟಾಲ್ ಗೆ ಹೋದಾಗ ಯಾವ್ದಾರ ಶೀರ್ಷಿಕೆ ಕಣ್ಣಿಗೆ ಕಾಣಿಸಿದರೆ ಒಮ್ಮೆಲೇ ೫-೬ ಬುಕ್ ಮನೆಗೊಯ್ಯುವೆ...

ಓದುವುದರಲ್ಲಿರೋ ಮಜಾ ಬೆರಾವುದರಲ್ಲೂ ಸಿಗೋದು ಕಡಿಮೆ ಅನ್ನೋದು ನನ್ನ ವಯುಕ್ತಿಕ ಅನಿಸಿಕೆ...(ನನಗೆ ಸಿನೆಮ ಹುಚು ವಿಪರೀತ ಆದರೂ ಓದುವಿಕೆ ನನ್ ಪ್ರಥಮ ಆದ್ಯತೆ)....
ಬರಹ ನನ್ ನೆನಪುಗಳನ್ನು ಕೆದಕಿತು... ಅಲ್ಲಲ್ಲಿ ನಗೆ ಉಕ್ಕಿಸಿತು..

ಶುಭವಾಗಲಿ.

ನನ್ನಿ

ಶುಭ ಸಂಜೆ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ, ನಿಮ್ಮ ಹಳೆಯ ನೆನಪುಗಳನ್ನು ಕೆದಿಕಿತು ಎಂದು ತಿಳಿದು ತುಂಬಾ ಸಂತೋಷವಾಯಿತು ...ಶ್ರೀಧರ ಸರ್ .ಮತ್ತು ಸಪ್ತಗಿರಿಯವರಿಗೆ
..ತುಂಬಾ ಧನ್ಯವಾದಗಳು ಮತ್ತು ವಂದನೆಗಳು....

ಪ್ರೀತಿಯಿಂದ ..

--ಗೋಪಾಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.