ಪಾಪ ಪ್ರಜ್ಞೆ

5

ಬಹಳ ದಿನಗಳ ನಂತರ ಸಂಪದದಲ್ಲಿ ಬರಹ ಪ್ರಕಟಿಸಲು ಸಂತಸವಾಗುತ್ತಿದೆ.

"ಪಾಪ ಪ್ರಜ್ಞೆ"  -  ಕಥೆಯ ಎಂಟನೆಯ ಭಾಗ. ಮೊದಲ ಏಳು ಭಾಗಗಳನ್ನು ಏಳು ಬೇರೆ ಬೇರೆ ಲೇಖಕರು ಬರೆದಿದ್ದಾರೆ. ಆ ಬರಹಗಳೆಲ್ಲ ಅವರವರ ಸ್ವಂತ ಬ್ಲಾಗ್ ನಲ್ಲಿ ಇದೆ. ಹಾಗಾಗಿ ಆ ಬರಹಗಳ ಕೊಂಡಿ ಇಲ್ಲಿ ನೀಡಲು ಸಾಧ್ಯವಾಗಿಲ್ಲ. ಆ ಬರಹಗಳ ಕೊಂಡಿ ನಿಮಗೆ ನನ್ನ ಸ್ವಂತ ಬ್ಲಾಗ್ ನಲ್ಲಿ ಸಿಗುತ್ತದೆ. ನಾನು ಬರೆದ ಎಂಟನೆಯ ಭಾಗವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.

+++++++++++++++++++++++++++++++++++++++++++++++++++++++++++++++++++++++++

ನನ್ನವರು ವಾಪಸ್ಸು ಬರುತ್ತಿದ್ದರು..ನಾನು ಗುಡುಕ್ಕನೆ ಮತ್ತೆ ರೂಮಿಗೋಡಿದೆ..ಅವರು ಬಾಗಿಲ ಚಿಲಕ ಹಾಕಿ ರೂಮಿನೆಡೆ ಬರುತ್ತಿದ್ದರು..

(ಮುಂದೇನಾಯಿತು ?  ನಿಮಗೇ ಗೊತ್ತಿದೆ....)

ನಿಮಗೆ ಗೊತ್ತಿದೆಯೆಂದು ನನಗೆ ಗೊತ್ತಿಲ್ಲ .. ಹಾಗಾಗಿ ಹೇಳುತ್ತಿದ್ದೇನೆ / ಬರೆಯುತ್ತಿದ್ದೇನೆ. 

+++++++++++++++++++++++++++++++++++++++++++++++++++++++++++++++++++++++++

ಹಾಸಿಗೆ ಮೇಲೆ ಅಡಿಯಿಂದ ಮುಡಿವರೆಗೂ ಪಾರದರ್ಶಕವಾದ ಹೊದಿಗೆಯನ್ನು ಮುಸುಕೆಳೆದು ಕೊಠಡಿಯ ಛಾವಣಿಯನ್ನೇ ದಿಟ್ಟಿಸುತ್ತಾ ಮಲಗಿದ್ದೆ. ನನ್ನವರು ಕೊಠಡಿಯ ಬಾಗಿಲ ಬಳಿ ಬಂದವರು ನನ್ನ ಕಡೆಗೊಮ್ಮೆ ದಿಟ್ಟಿಸಿ ನೋಡಿ ಅಡುಗೆಮನೆಯತ್ತ ಹೆಜ್ಜೆ ಹಾಕಿದರು. ಮನಸ್ಸಿನಲ್ಲಿ ಮನೆ ಮಾಡಿದ್ದ ಸಂಶಯಗಳೆಲ್ಲ ಹೊತ್ತಿ ಉರಿದು ಪರಾಕಾಷ್ಠೆ ತಲುಪಿ ಇದೀಗ ಶಾಂತವಾಗುತ್ತಿತ್ತು. ಚಿಕ್ಕಂದಿನಲ್ಲಿ ವಠಾರದ ಮಂದಿಯೆಲ್ಲ ಸೇರಿ ನಡೆಸುತ್ತಿದ್ದ ಕಾಮದಹನದ ದೃಶ್ಯ ನೆನಪಾಗುತ್ತಿತ್ತು. ಒಂದು ಹಂತದಲ್ಲಿ ಆತ್ಮಹತ್ಯೆಗೆ (ದೇಹ ಹತ್ಯೆ! ಆತ್ಮಕ್ಕೆ ಸಾವಿಲ್ಲವೆಂಬುದು ನನ್ನ ನಂಬಿಕೆ )  ತಯಾರಾಗಿದ್ದ ನನ್ನನ್ನು ಆ ಬೆಂಕಿಯ ಜ್ವಾಲೆ ಬಲಿ ತೆಗೆದುಕೊಳ್ಳಲ್ಲಿಲ್ಲ ! ಸದ್ಯ ಬಚಾವಾದೆ. ಇಲ್ಲವಾದಲ್ಲಿ ಎಂಥ ಅನಾಹುತ ಸಂಭವಿಸಿಬಿಡುತ್ತಿತ್ತು ? ಎರಡು ವರ್ಷದ ನನ್ನ ವಿಜಿ ತಾಯಿ ಇಲ್ಲದ ತಬ್ಬಲಿಯಾಗುತ್ತಿದ್ದ. ನನ್ನ ಎಷ್ಟೊಂದು ಪ್ರೀತಿಸುವ ಇವರೋ ಇಷ್ಟು ಚಿಕ್ಕ ವಯಸ್ಸಲ್ಲಿ ನನ್ನನ್ನು ಕಳೆದುಕೊಂಡು ಹೇಗೆ ತಾನೇ ಬದುಕಿರುತ್ತಿದ್ದರು?

 ಛೆ ನಾನೆಂಥ ಪಾಪಿ! ಒಮ್ಮೆಯಾದರೂ ನನ್ನ ಗಂಡನ ಬಗ್ಗೆ ಒಳ್ಳೆಯದು ಯೋಚಿಸಲೇ ಇಲ್ಲ. ಅವರು ಹೀಗೆ ಮಾಡಿರಲಿಕ್ಕಿಲ್ಲ ಎಂದು ಒಂದು ಬಾರಿಯಾದರೂ ಅನ್ನಿಸಲೇ ಇಲ್ಲ... ನಾನಿದ್ದ ಪರಿಸ್ಥಿತಿಯೆ ಅವರದು ಕೂಡ ... ಆ ಹುಡುಗನ ಜೊತೆ ನಾನು ಎಷ್ಟು ಎಲ್ಲೆ ಮೀರಿ ನಡೆದಿದ್ದೇನೋ ಅಷ್ಟೇ ನನ್ನವರು ಮೈತ್ರಿಯ ಜೊತೆ ನಡೆದುಕೊಂಡಿದ್ದರು. ಇಲ್ಲ ಅದಕ್ಕಿಂತ ಕಡಿಮೆಯೇ... ಆ ಸಂದರ್ಭದಲ್ಲಿ ನಾನೇನು ತಪ್ಪು ಮಾಡಿಲ್ಲ ಸಹಜವಾಗೇ ವರ್ತಿಸಿದ್ದೇನೆ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡಿರಲ್ಲಿಲ್ಲವೇ? ಅದೇ ರೀತಿ ಅವರ ವಿಷಯದಲ್ಲಿ ಯಾಕೆ ನಾನು ಯೋಚಿಸದೆ ದುಡುಕಿಬಿಟ್ಟೆ? ನನ್ನ ಹಾಗೆ ಮತ್ತೊಬ್ಬರೂ ಕೂಡ ಎಂದು ತಿಳಿಯದ ಈ ನನ್ನ ಮನುಷ್ಯ ಬುದ್ದಿಗೆ ಧಿಕ್ಕಾರವಿರಲಿ.

ಕೊಠಡಿಯ ದೀಪ ಹೊತ್ತಿತು. ಕಪ್ ಅಂಡ್ ಸಾಸರ್ ಲಿ ಬೈಟು ಸ್ಟ್ರಾಂಗ್ ಕಾಫಿ ಹಿಡಿದು ನನ್ನವರು ಪಕ್ಕ ಬಂದು ಕೂತರು. ನಾನು ಬೇಕಂತಲೇ ಕಣ್ಣು ಮುಚ್ಚಿದೆ. ಅವರನ್ನು ನೋಡಲು ಧೈರ್ಯ ಸಾಕಾಗಲಿಲ್ಲ. ಕಾಫಿಯನ್ನು ಟೇಬಲ್ ಮೇಲಿಟ್ಟು ನಿಧಾನವಾಗಿ ಮುಸುಕೆಳೆದು ನಯವಾಗಿ ತಲೆ ಸವರುತ್ತಾ ಏಳು, ಕಾಫಿ ಕುಡಿ ತಲೆ ನೋವು ಸರಿಯಾಗುತ್ತೆ ಅಂದರು. ಎದ್ದು ಕೂತು ತಲೆ ತಗ್ಗಿಸಿ ಕಾಫಿ ಕಪ್ಪಿಗೆ ಕೈ ಚಾಚಿದೆ. ನನ್ನವರು ಕಾಫಿ ಕಪ್ ನೀಡುತ್ತಾ ಗಲ್ಲವನ್ನು ಮೇಲೆತ್ತಿ A LOT can happen over a cup of coffee ಅನ್ನುತ್ತಾ ತಾವು ಹೀರಲು ಶುರು ಮಾಡಿದರು. ಈಗೇಕೆ ಹೀಗೆ ಹೇಳುತ್ತಿದ್ದಾರೆ? ಇವರಿಗೆ ಎಲ್ಲ ತಿಳಿದುಬಿಟ್ಟಿತಾ? ನನ್ನ ನೀಚ ಬುದ್ದಿ ಇವರ ಅರಿವಿಗೆ ಬಂದುಬಿಟ್ಟಿತೇ ? ಹಾಗೇನಾದರೂ ಆಗಿದ್ದಲ್ಲಿ ಅವರ ಮುಂದೆ ನಾನು ತೀರ ಚಿಕ್ಕವಳಾಗಿ ಬಿಡುತ್ತೇನೆ ಅಂದುಕೊಳ್ಳುತ್ತಲೇ ಅವರ ಮುಖ ನೋಡಿದೆ. ಅವರ ಜೊತೆ ಮದುವೆಗೂ ಮುಂಚೆ ಮೊದಲ ಬಾರಿ Cafe Coffee Dayಗೆ ಹೋಗಿದ್ದು ನೆನಪಾಗಿ, ಅಂದು ಇದ್ದ ಮುಗ್ಧತೆಯೇ ಇಂದು ಅವರ ಮುಖದಲ್ಲಿ ಕಂಡು, ಕಳ್ಳರ ಮನಸ್ಸು ಹುಳ್ಳುಳ್ಳುಗೆ ಅನಿಸಿತು. 

ನನ್ನವರು ಎಂದಿನಂತೆ ಕಣ್ಣು ಮುಚ್ಚಿ ಕಪ್ಪಿನ ಆಚೀಚೆ ಉಫ್ ಉಫ್ ಎನ್ನುತ್ತಾ ಸೊರ್  ಸೊರ್ ಎಂದು ಶಬ್ದ ಮಾಡುತ್ತಾ ಕಾಫಿ ಕುಡಿಯುತ್ತಿದ್ದರು. 

ಮನೆಯಲ್ಲಿ ಮೌನ ಆವರಿಸಿತ್ತು. ಮನಸ್ಸಿನಲ್ಲಿ ನೂರಾರು ಈಟಿಗಳು ಒಟ್ಟಿಗೆ ತಿವಿದಂತೆ ಭಾಸವಾಗುತ್ತಿತ್ತು. ಕಾಫಿ ಕಪ್ಪನ್ನು ಪಕ್ಕದಲ್ಲಿಟ್ಟು ನನ್ನನ್ನು ತೊಡೆ ಮೇಲೆ ಮಲಗಿಸಿಕೊಂಡು ಏನಾಯಿತು ಚಿನ್ನಾ? ಊಟ ಕೂಡ ಮಾಡಿಲ್ಲ, ಅಮ್ಮನ ಮನೆಯಿಂದ ಪಾಪುನ ಕರೆದುಕೊಂಡು ಬಂದಿಲ್ಲ.. ಏನಾಗಿದೆ ನಿನಗೆ ಇವತ್ತು? ಯಾಕೋ ಒಂಥರಾ ಇದ್ಯಲ? ಇವರ ಪ್ರಶ್ನೆಗಳು ನನ್ನನ್ನು ವಿಚಾರಣೆಗೆ ಒಳಪಡಿಸಿದಂತೆ ಅಣಕಿಸುತ್ತಿದ್ದವು .. ಆದರೆ ಅವರು ಮಾತ್ರ ನಿರ್ವಿಕಾರವಾಗಿ, ನನ್ನ ಮೇಲೆ ಅತೀವ ಕಾಳಜಿಯಿಂದ ಸಹಜವಾಗಿಯೇ ಆ ಪ್ರಶ್ನೆಗಳನ್ನು ಕೇಳುತ್ತಿದ್ದರು.. ನ.. ನನಗೇನೂ ಆಗಿಲ್ಲ ಸ್ವಲ್ಪ ತಲೆ ನೋವಿತ್ತು ಪಾಪು ಗಲಾಟೆಯಿಂದ ನಿನ್ನೆ ರಾತ್ರಿ ನಿದ್ದೆ ಮಾಡಿರಲ್ಲಿಲ್ಲವಲ್ಲ ಅದಕ್ಕೆ ನಿದ್ದೆ ಹತ್ತಿ ಬಿಟ್ಟಿತ್ತು .. ಬನ್ನಿ ಊಟ ಮಾಡೋಣ ಎಂದು ಎದ್ದು ಹೋದೆ. ನನ್ನನ್ನು ನನಗಿಂತಲೂ ಹೆಚ್ಚಾಗಿ ಬಲ್ಲ ಇವರು, ಹೆಚ್ಚು ಕೆದುಕದೆ, ಆಯಿತು ನಡೆ ಊಟ ಮಾಡುವ.. ಆಮೇಲೆ ಒಂದು ರೌಂಡ್ ವಾಕಿಂಗ್ ಹೋಗಿ ಪಾಪುನ ಕರೆದುಕೊಂಡು ಬರುವ ಎಂದು ಅಡುಗೆ ಮನೆ ಕಡೆ ನನ್ನ ಹಿಂದೆ ಬಂದರು. 

ಮಧ್ಯಾನ್ಹ  ಆಫೀಸಿನಲ್ಲಿ ಊಟಕ್ಕೆ ಹೊರಗೆ ಹೋಗೋಣ ಎಂದಾಗ ರಾತ್ರಿ ಹೋಗೋಣ ಎಂದಿದ್ದರಿಂದ ಇವರು ಕ್ಯಾಂಟೀನ್ ನಲ್ಲಿ ೨ ಚಪಾತಿ ತಿಂದು ಮಧ್ಯಾನ್ಹದ ಊಟ ಮುಗಿಸಿದ್ದರಂತೆ.. ಮನೆಯಲ್ಲಿ ನಾನು ಬೆಳಗ್ಗೆ ಮಾಡಿದ್ದ ಸಾರನ್ನೇ ಬಹಳ ರುಚಿಯಾಗಿದೆಯೆಂದು ಹೊಗಳುತ್ತಿದ್ದರು. ನನ್ನನ್ನು ಪಾಪ ಪ್ರಜ್ಞೆ ಅತಿಯಾಗಿ ಕಾಡುತ್ತಿತ್ತು. ನನ್ನ ಬಗ್ಗೆ ಅವರು ಒಂದೊಂದು ಮಾತು ಆಡಿದಾಗಲು ಅದು ಮತ್ತಷ್ಟು ಹೆಚ್ಚುತ್ತಿತ್ತು. ಇವರಿಗೆ ಎಲ್ಲವನ್ನು ಹೇಳಿಬಿಡಬೇಕು, ಆಗಲೇ ನನಗೆ ಸಮಾಧಾನ. ಆದರೆ  ಎಲ್ಲಿಂದ ಶುರು ಮಾಡುವುದು... ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಅವನು ನನ್ನನ್ನು ನಾಚಿಸುತ್ತಿದ್ದುದ್ದ , ಪ್ರವಾಸ ಹೋದಾಗ ಬಸ್ಸು ಮಿಸ್ಸಾಗಿ ಒಟ್ಟಿಗೆ ರಾತ್ರಿ ಪ್ರಯಾಣ ಮಾಡಿದ್ದ ಅಥವಾ ಒಮ್ಮೊಮ್ಮೆ ನಾನು ನಾಚಿ ನೀರಾದಾಗ ಮನಸ್ಸು ಅವನನ್ನು ಹಂಬಲಿಸುತ್ತಿದ್ದುದ , ಅಥವಾ ಮೊನ್ನೆ ಅವನ ಮನೆಗೆ ಹೋದಾಗ ನಡೆದ ಘಟನೆಯ ?? ಎಲ್ಲಿಂದ ಅಂತ ಹೇಳಲಿ ? ಸಿಡಿಲು ಗುಡುಗು ಮಿಂಚಿಗೆ ಭಯ ಪಡುತ್ತಿದ್ದ ನನಗೆ ಮಳೆ ಬಂದಾಗ ಅಲ್ಲೇ ಅವರ ಮನೆಯಲ್ಲೇ ಇರು ಎಂದು ಇವರು ಹೇಳಿದಾಗ, ಅವರಿಗಿದ್ದ ಆ ನಂಬಿಕೆ ಇಂದು ಬೆಳಗ್ಗೆ ಅವರು ಮೈತ್ರಿ ಜೊತೆ ಇದ್ದಾಗ ನನಗ್ಯಾಕೆ ಬರಲ್ಲಿಲ್ಲ.. ಥೂ ನನ್ನ ಸಂಕುಚಿತ ಮನಸ್ಸೇ :( 

ಗೋಮ ಹಚ್ಚಿ ಒರೆಸಿ , ಮನೆಗೆ ಬೇಗ ಹಾಕಿ ಗೇಟಿನ ಬಳಿ ನಿಂತಿದ್ದ ಇವರ ಹತ್ತಿರ ಹೋಗಿ ನಡೆಯಿರಿ ಹೋಗೋಣ ಎಂದೆ. ಇವರು ನನ್ನ ಕೈ ಹಿಡಿದು ಹೆಜ್ಜೆ ಹಾಕಿದರು. ಐದ್ಹತ್ತು ನಿಮಿಷ ನಾನು ಏನಾದರೂ ಹೇಳುವಿನೇನೋ? ಎಂದು ಕಾದಿರಬೇಕು. ನಾನು ಏನೂ ಮಾತಾಡದಿದ್ದಾಗ ಎಂದಿನಂತೆ ಇವರು ಲೋಕಾಭಿರಾಮ ಶುರು ಮಾಡಿದರು. ಇವತ್ತು ದಿನಪತ್ರಿಕೆ ಓದುದ್ಯ? ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗಿದ್ದ ನನಗೆ ದಿನಪತ್ರಿಕೆ ಓದುವುದಕ್ಕೆ ಸಮಯವಾದರೂ ಎಲ್ಲಿತ್ತು? ಇಲ್ಲ ಓದಿಲ್ಲ ಎಂದು ತಲೆಯಾಡಿಸಿದೆ. ಸರಿ ಬಿಡು ಓದುವುದಕ್ಕೆ ಅದರಲ್ಲಾದರೂ ಏನಿರತ್ತೆ? ಬರೀ ಕೊಲೆ ಅತ್ಯಾಚಾರ ಮೋಸ ವಂಚನೆ ದಗಲ್ ಬಾಜಿ ಇಂತದೆ ಸುದ್ದಿಗಳು. ಅದನ್ನು ಓದಿದರೆಷ್ಟು ಬಿಟ್ಟರೆಷ್ಟು ?? ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ೧೬ ರಿಂದ ೨೦  ವಯಸ್ಸಿನವರು. ಈಗಿನ ಜನಾಂಗಕ್ಕೆ ಪಾಪ ಪ್ರಜ್ಞೆ ಅನ್ನೋದೇ ಇಲ್ಲ. ನೈತಿಕತೆ ಎಂದರೇನು ಅನ್ನುವ ಕಾಲ. ಧರ್ಮಾಧರ್ಮಗಳ ವಿವೇಚನೆ ಇಲ್ಲದೆ ಜನರು ಬದುಕುತ್ತಿದ್ದಾರೆ. ನ್ಯಾಯ ನೀತಿ ಪ್ರಾಮಾಣಿಕತೆಗಳು ಮಾಯವಾಗಿವೆ. ಹಾಗೆ ನೋಡಿದರೆ ನಮ್ಗುಳಲ್ಲೂ ಪಾಪ ಪುಣ್ಯಗಳ ಭಾವನೆಯಲ್ಲಿ ತೀವ್ರತೆ ಕಡಿಮೆಯಾಗಿದೆ. ................ .................... ..............

ಇವರ ಮಾತಿಗೆ ತಡೆಯೇ ಇಲ್ಲ ನನಗೆ ತಲೆ ಚಿಟ್ಟು ಹಿಡಿದಂತಾಗಿ, ಹೇಳುವುದಿದ್ದರೆ ನನಗೆ ನೇರವಾಗಿ ಹೇಳಿ ಸುತ್ತಿ ಬಳಸಿ ನನ್ನ ನೋಯಿಸಬೇಡಿ ಅಂತ ಹೇಳಬೇಕೆನಿಸಿತು. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ಕೊಂಡ್ರನ್ತೆ .. ಹಾಗಾಗಿತ್ತು ನನಗೆ. ಅವರು ಯಾವತ್ತು ನನಗೆ ನೋವಾಗುವ ರೀತಿ ಮಾತಾಡಿಲ್ಲ.. ಇದೆಲ್ಲ ನನ್ನನ್ನು ಕಾಡುತ್ತಿರುವ ಪಾಪ ಪ್ರಜ್ಞೆ.

ಅಮ್ಮನ ಮನೆ ತಲುಪಿದಾಗ ಗಂಟೆ ಹನ್ನೊಂದಾಗಿತ್ತು. ವಿಜಿ ಆಗಲೇ ಮಲಗಿಯಾಗಿತ್ತು. ಇಲ್ಲೇ ಮಲಗಿರಲಿ ಪರವಾಗಿಲ್ಲ ಅವನನ್ನು ನಾಳೆ ಕರೆದುಕೊಂಡಿ ಹೋಗಿ ಅಂದರು ಅಮ್ಮ. ಅಪ್ಪ ಬಂದು ಏನು ಅಳಿಯಂದಿರೆ, ಹೆಂಡತಿಯನ್ನು ಕೆಲಸಕ್ಕೆ ಹಚ್ಚಿದಿರ.. ಇನ್ನು ಮುಂದೆ ದುಡಿಮೆ ಜೋರು ಅಂತ ನಕ್ಕರು. ಎರಡು ನಿಮಿಷ ಕ್ಷೇಮ ಸಮಾಚಾರ ವಿಚಾರಿಸಿ ಮತ್ತೆ ಮನೆ ಕಡೆ ಹೆಜ್ಜೆ ಹಾಕಿದೆವು. ಮನೆ ಕಡೆ ಬರುವಾಗಲೂ ನಾನು ಹೆಚ್ಚು ಮಾತಾಡಲ್ಲಿಲ್ಲ.. ಅವರೇ ಆಫೀಸಿನ ಕೆಲ ವಿಚಾರಗಳ ಸೂಕ್ಷ್ಮತೆಯನ್ನು ನನಗೆ ವಿವರಿಸುತ್ತಿದ್ದರು. ಆದರೆ ಮನಸ್ಸು ಮಾತ್ರ ನನ್ನ ತಪ್ಪಿನ ಭಿನ್ನಹಕ್ಕೆ ಹಾತೊರೆಯುತ್ತಿತ್ತು. ಒಮ್ಮೆಲೆಗೆ ಸಂಪೂರ್ಣ ತಪ್ಪು ನನ್ನದೇ ಎಂದು ಒಪ್ಪಿಕೊಳ್ಳಲು ಅಹಂಕಾರ ಅಡ್ಡ ಬಂದಿತ್ತು. ಪಶ್ಚಾತ್ತಾಪಪಟ್ಟು ಪಾಪ ಪ್ರಜ್ಞೆಯನ್ನು ಹೋಗಲಾಡಿಸಿಕೊಳ್ಳಲು ಚಡಪಡಿಸುತ್ತಿದ್ದ ಮನಸ್ಸು ಈಗ ಇದ್ದಕ್ಕಿದ್ದ ಹಾಗೆ ಉಲ್ಟಾ ಹೊಡಿದಿತ್ತು .. ಇವರೇನು ದೇವರಿಗಿಂತ ಮಿಗಿಲೇ ? ಇಷ್ಟಾದರೂ ನಾನು ಮಾಡಿರುವ ತಪ್ಪಾದರೂ ಏನು ?? ಮನಸ್ಸೆಂಬ ಮರ್ಕಟ ಅಹಂಕಾರದ ಬಲೆಯಲ್ಲಿ ಸಿಕ್ಕಿ ನರಳುತ್ತಿತ್ತು.

                                                                                                  *******

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.