ನನ್ನ ಮೊದಲ ಕಂಪಾಸ್ ಬಾಕ್ಸ.

4.625

ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳಾಗು, ದೊಡ್ಡವಳಾದ ಮೇಲೆ ತಂದು ಕೊಡುತ್ತೇನೆ" ಎಂದೆ. "ಇಲ್ಲಾ ನನಗೆ ಈಗಲೇ ಬೇಕು, ನಾನು ನಿನ್ನ ಹಾಗೆ ಟೈಪ್ ಮಾಡಬೇಕು, ಅದು ಪರದೆ ಮೇಲೆ ಬರುವುದನ್ನು ನೋಡಬೇಕು, ಅದಕ್ಕೆ ನನಗೆ ಒಂದು ಕಂಪ್ಯುಟರ್ ಬೇಕು" ಅಂದಳು. ನಾನು ಹಾಗೋ ಹೀಗೋ ಅವಳನ್ನು ಪುಸಲಾಯಿಸಿತ್ತಾ ಸ್ವಲ್ಪ ದಿನ ಕಾಲ ಕಳೆದೆ. ನನ್ನ ಮಗಳು ಬಿಡಬೇಕಲ್ಲ, ಒಮ್ಮೆ ಏನನ್ನಾದರೂ ಕೇಳಿ ಬಿಟ್ಟರೆ ಮುಗಿಯಿತು, ತಂದು ಕೊಡುವವರೆಗೂ ಅವಳಿಗೆ ಸಮಾಧಾನವಿಲ್ಲ. ಬಹುಷಃ ಎಲ್ಲಾ ಮಕ್ಕಳು ಹೀಗೆ ಇರಬೇಕೇನೋ. ಅವಳು ಹೀಗೆ ದಿನಾ ಕೇಳುತ್ತಿದ್ದರಿಂದ ಒಂದು ದಿನ ನಾನು ವ್ಯಾಪಾರಿ ಮಳಿಗೆಗೆ ಏನನ್ನೋ ತರಲು ಹೋದವನು ಅಲ್ಲಿ ಒಂದು ಚಿಕ್ಕ ಕಂಪ್ಯುಟರ್ ತರಹದ ಒಂದು ಆಟಿಕೆಯನ್ನು ನೋಡಿದೆ. ಅದು ಕಂಪ್ಯೂಟರ್ ತರಹನೇ ಇದ್ದು ಅದಕ್ಕೆ ಕೀಲಿ ಮಣೆ ಎಲ್ಲಾ ಇತ್ತು. ಅದೇ ಅವಳಿಗೆ ಸರಿಯಾದುದ್ದೆಂದು ತಂದು ಕೊಟ್ಟೆ. ಸ್ವಲ್ಪ ದಿನ ಖುಸಿಯಿಂದ ಆಟವಾಡಿದಳು, ಆಮೇಲೆ ದಿನ ಕಳೆದ ಮೇಲೆ ಅವಳಿಗೆ ಅದರಲ್ಲಿ ಆಸಕ್ತಿ ಕಡಿಮೆಯಾಯಿತು. ಆಮೇಲೆ ನನಗೆ ಇದು ಬೇಡ ಇದು ಸರಿ ಇಲ್ಲ, ನನಗೆ ಬೇರೇ ತರಹದ ಕಂಪ್ಯುಟರ್ ತಂದು ಕೊಡು ಎನ್ನಲು ಪ್ರಾರಂಭಿಸಿದಳು. ನನಗೆ ಅವಳ ಬೇಡಿಕೆಗಳನ್ನೆಲ್ಲ ಕೇಳಿದಾಗ ನನಗೆ ನಾನು ಚಿಕ್ಕವನಿದ್ದಾಗ ನಾನು ನನ್ನ ಅಪ್ಪನ ಹತ್ತಿರ ಕಂಪಾಸ್ ಬಾಕ್ಸ್ ಕೇಳಿ ಬೈಸಿಕೊಂಡದ್ದು ನೆನಪಾಯಿತು.

ಅದು ೧೯೮೮ - ೧೯೮೯ ನೇ ಇಸ್ವಿ, ನಾನಾಗ ನಮ್ಮೂರಿನ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಒದುತಿದ್ದೆ. ಅಂದು ನಾವು ನಾಲ್ಕನೇ ತರಗತಿಯಲ್ಲಿ ರೇಖಾಗಣಿತವೇನು ಇರಲಿಲ್ಲ, ಅದೇನಿದ್ದರು ಐದನೇ ತರಗತಿಯಿಂದ ಮಾತ್ರ. ನಾಲ್ಕನೇ ತರಗತಿಗೆ ರೇಖಾಗಣಿತ ಇಲ್ಲದ ಕಾರಣ ನಮಗೆ ಕಂಪಾಸ್ ಬಾಕ್ಸನ ಅವಶ್ಯಕತೆ ಇಲ್ಲದಿದ್ದರೂ ಕೆಲವು ಹುಡುಗರು ಶಾಲೆಗೆ ಕಂಪಾಸ್ ಬಾಕ್ಸ್ ತೆಗೆದುಕೊಂಡು ಬರುತಿದ್ದರು. ಆಗ ನಟರಾಜ್ ಮತ್ತು ಕೆಮೆಲ್ ಬ್ರಾಂಡಿನ ಕಂಪಾಸ್ ಬಾಕ್ಸ್ ಪ್ರಚಲಿತದಲ್ಲಿತ್ತು. ಆಗ ಕಂಪಾಸ್ ಬಾಕ್ಸಗೆ ಹದಿನೈದೋ , ಇಪ್ಪತ್ತೋ ರೂಪಾಯಿ ಇತ್ತು. ನಮಗೆ ಆ ಕಾಲಕ್ಕೆ ಅದು ದೊಡ್ಡದಾದ ಮೊತ್ತವೇ. ಕೈಯಲ್ಲಿ ಐದೋ, ಹತ್ತೋ ಪೈಸೆ ಸಿಕ್ಕರೆ ಸಂತೋಷ ಪಡೋ ನಮಗೆ ಹದಿನೈದು-ಇಪ್ಪತ್ತು ರೂಪಾಯಿ ಅಂದರೆ ಅದೊಂತರಾ ದೊಡ್ಡ ಮೊತ್ತವೇ. ಆ ಕಾಲವೂ ಹಾಗೆ ಇತ್ತು ಬಿಡಿ. ಆಗ ಹದಿನೈದು ಇಪ್ಪತ್ತು ರೂಪಾಯಿಗೆ ಒಂದು ದಿನದ ಸಂಸಾರ ಸಾಗಿಸಬಹುದಿತ್ತು.

ನನಗೆ ಆಗ ಕೆಲವು ಮಕ್ಕಳು ತರುತ್ತಿದ್ದ ಕಂಪಾಸ್ ಬಾಕ್ಸ್ ನೋಡಿ, ನನಗು ಅದರಲ್ಲಿ ಆಸಕ್ತಿ ಮೂಡ ತೊಡಗಿತು. ನನಗು ಒಂದು ಕಂಪಾಸ್ ಬಾಕ್ಸ್ ಬೇಕು ಎನ್ನುವಷ್ಟರ ಮಟ್ಟಿಗೆ ಅನಿಸಿಬಿಟ್ಟಿತು. ಆದರೆ ಅದನ್ನು ಮನೆಯಲ್ಲಿ ಹೇಗೆ ಹೇಳಲಿ ಎನ್ನುವುದೇ ಸಮಸ್ಯೆ. ನಮ್ಮ ತಂದೆಯವರಿಗೆ ನಾವೇನಾದರೂ ಅವಶ್ಯಕತೆಯಿಲ್ಲದ್ದನ್ನು ಕೇಳಿ ಬಿಟ್ಟರೆ ಕೋಪ ಉಕ್ಕೇರುತಿತ್ತು. ಹಾಗಾಗಿ ಕೇಳಲು ಹಿಂಜರಿಕೆ. ಹೇಗೋ ನನ್ನ ಆಸೆಗಳನ್ನು ಸ್ವಲ್ಪ ದಿನ ಹಾಗೆ ಅದುಮಿಟ್ಟುಕೊಂಡು ಸ್ವಲ್ಪ ದಿನ ಕಳೆದೆ. ಶಾಲೆಯಲ್ಲಿ ಬೇರೇ ನನ್ನ ಸಾಧನೆಗಳು ಕೂಡ ಹೇಳಿಕೊಳ್ಳುವಂತಿರಲಿಲ್ಲ. ಹೇಗೋ ಒಂದು ತರಗತಿಯಿಂದ ಇನ್ನೊಂದು ತರಗತಿಗೆ ತೇರ್ಗಡೆಯಾಗುತ್ತಾ ಬಂದು ನಾಲ್ಕನೇ ತರಗತಿಯವರೆಗೆ ಬಂದು ತಲುಪಿದ್ದಷ್ಟೇ ನನ್ನ ಅಂದಿನ ಸಾಧನೆ. ನನಗೆ ಶಾಲೆಗೆ ಇತರ ಮಕ್ಕಳು ತರುವ ಕಂಪಾಸ್ ಬಾಕ್ಸನ್ನು ದಿನಾ ನೋಡಿದಾಗ ಸ್ವಲ್ಪ ದಿನದವರೆಗೆ ಮನಸ್ಸಲ್ಲೇ ಅದುಮಿಟ್ಟುಕೊಂಡು ಬಂದ ಆಸೆಯನ್ನು ತುಂಬಾ ದಿನ ತಡೆ ಹಿಡಿಯಲಾರದೇ ಒಂದು ದಿನ ಅಮ್ಮನಿಗೆ ಹೇಳಿಯೇ ಬಿಟ್ಟೆ. ನಮ್ಮ ಅಮ್ಮನಿಗೆ ನಾನು ಮುದ್ದಿನ ಮಗನಾಗಿದ್ದರಿಂದ ಅಮ್ಮ ತಡಮಾಡದೇ ತಂದೆಗೆ ನನ್ನ ಪರವಾಗಿ ಹೇಳಿ ಬಿಟ್ಟರು.

ನಮ್ಮ ತಂದೆಗೆ ಅದನ್ನು ಕೇಳಿದ ತಕ್ಷಣ ಒಮ್ಮೇಲೆ ಕೋಪ ಬಂತು, ಕೂಡಲೇ ನಮ್ಮ ಮನೆಯಿಂದ ಹೊರಟು ಅಕ್ಕ ಪಕ್ಕದ ನನ್ನ ಓರಗೆಯ ಹುಡುಗರ ಮನೆಗೆ ಹೋಗಿ, ಕಂಪಾಸ್ ಬಾಕ್ಸ ತರಲು ಶಾಲೆಯಲ್ಲಿ ಹೇಳಿದ್ದಾರೆಯೇ ಎಂದು ವಿಚಾರಿಸಿ ಮನೆಗೆ ಬಂದರು. ಹಾಗೆ ಮಾರನೆಯ ದಿನ ಶಾಲೆಗೆ ಬಂದು ಶಾಲೆಯಲ್ಲಿಯೂ ವಿಚಾರಿಸಿದರು. ಅವರಿಂದ ನಾಲ್ಕನೇ ತರಗತಿಗೆ ಕಂಪಾಸ್ ಬಾಕ್ಸನ ಅವಶ್ಯಕತೆಯಿಲ್ಲ ಎಂದು ತಿಳಿದ ಮೇಲೆ ಅವರ ಕೋಪ ನೆತ್ತಿಗೇರಿತ್ತು. ಶಾಲೆಯಿಂದ ಮನೆಗೆ ಬಂದವರು ನಾನು ಬರುವುದನ್ನೇ ಕಾದು ಕುಳಿತರು. ನಾನು ಮನೆಯೊಳಗೆ ಬರುತ್ತಿದ್ದಂತೆ ಮೈ ಮೇಲೆ ಬಾಸುಂಡೆ ಮೂಡುವಂತೆ ಒಂದೆರಡು ಏಟು ಕೊಟ್ಟರು. "ಮುಂದಿನ ತರಗತಿಗೆ ಬೇಕಾಗುವ ಕಂಪಾಸ್ ಬಾಕ್ಸನ್ನು ಈಗಲೇ ತೆಗೆದುಕೊಂಡು ಹೋಗಿ ಏನು ಶೋಕಿ ಮಾಡಿತ್ತಿಯಾ? ಈಗಲೇ ಓದುವುದನ್ನು ಬಿಟ್ಟು ಶೋಕಿ ಮಾಡುವುದನ್ನು ಕಲಿತಿದ್ದಿಯಾ ಹೇಗೆ?" ಹಾಗೆ ಅದು ಇದು ಅನ್ನುತ್ತಾ ರಾತ್ರಿ ನಾನು ಮಲಗುವವರೆಗೂ ಬಯ್ಯುತ್ತಲೇ ಇದ್ದರು. ಅಂದಿನಿಂದ ನಾನು ಏನೇ ಬೇಕು ಎಂದು ಕೇಳಲಿ ಅದನ್ನು ನಂಬದೇ, ಅಕ್ಕ ಪಕ್ಕದವರನ್ನು ವಿಚಾರಿಸಿಯೇ ತಂದು ಕೊಡುತಿದ್ದರು. ನನಗೆ ಅವಶ್ಯಕತೆಯಿದೆ ಎಂದು ತಿಳಿದು ಬಂದಲ್ಲಿ ಅವರಿಗೆ ಎಷ್ಟೇ ಕಷ್ಟವಿರಲಿ ತಂದು ಕೊಡುತಿದ್ದರು. ಹಾಗೆ ನಾನು ಐದನೇ ತರಗತಿ ಪ್ರವೇಸಿಸುತ್ತಿದ್ದಂತೆ, ನಾನು ಕೇಳದಿದ್ದರೂ ಅವರೇ ಹೋಗಿ ಕಂಪಾಸ್ ಬಾಕ್ಸ್ ತಂದು ಕೊಟ್ಟಿದ್ದರು. ಆ ಕಂಪಾಸ್ ಬಾಕ್ಸ ನಾನು ಹತ್ತನೇ ತರಗತಿ ಮುಗಿಯುವವರೆಗೂ ನನ್ನ ಬಳಿ ಜೋಪಾನವಾಗೇ ಇತ್ತು.

ಈಗಲು ನಾನೇನಾದರು ಅವಶ್ಯಕತೆಯಿಲ್ಲದ ವಸ್ತುವನ್ನೇನಾದರು ಕೊಂಡರೆ, ನೀನಗೇಕಪ್ಪಾ ಬೇಕಿತ್ತು ಅನ್ನುತ್ತಾ , "ನೀನು ಬೀಡು ಶೋಕಿ ಮನುಷ್ಯ, ಆಗಲೇ ಕಂಪಾಸ್ ಬಾಕ್ಸ್ ಬೇಕು ಅಂದು ಕೇಳಿದವನು, ಈಗ ಕಾಸು ಓಡಾಡುವಾಗ ಬಿಡುತ್ತಿಯಾ?" ಅಂತಾ ಕೇಳುತ್ತಿರುತ್ತಾರೆ.

ಈಗಂತು ನಾನು ಮನೆಯಿಂದ ದೂರವಿದ್ದೇನೇ,ಹಾಗಾಗಿ ಶೋಕಿ ಮಾಡಿದರೂ ಅಪ್ಪನಿಂದ ಬೈಸಿ ಕೊಳ್ಳುವುದು ತಪ್ಪ ಬಹುದು, ಆದರೆ ಕಾಡುವ ನೆನಪುಗಳಿಂದ ತಪ್ಪಿಸಿಕೊಳ್ಳಲು ಸಾದ್ಯವೇ?

ಇಂದು ಬೀಡಿ ನಾವು ನಮ್ಮ ಮಕ್ಕಳಿಗೆ ಅವರೇನು ಕೇಳುತ್ತಾರೆ, ಅದರ ಅವಶ್ಯಕತೆ ಅವರಿಗೆ ಇದೆಯೇ ಎನ್ನುವುದನ್ನು ನೋಡುವುದಾಗಲಿ, ವಿಚಾರಿಸುವುದಾಗಲಿ ಮಾಡದೇ, ಅವರು ಕೇಳಿದ್ದನ್ನೆಲ್ಲ ತಂದು ಕೊಡುತ್ತೇವೆ. ಇಂದು ನಮ್ಮ ಕೈಯಲ್ಲಿ ಕಾಸು ಇದೆಯೇ ಹೊರತು, ಹಿಂದಿನವರಂತೆ ಅದರ ಬೆಲೆ ತಿಳಿದಿಲ್ಲ.

 

--ಮಂಜು ಹಿಚ್ಕಡ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿಂದೆ ಮಾಡುತ್ತಿದ್ದುದು, ಇಂದಿನವರು ಮಾಡುತ್ತಿರುವುದು ಎರಡೂ ಅತಿರೇಕಗಳೇ! ಹಿಂದೆ ಹಣಕ್ಕೆ ಕಷ್ಟವಿತ್ತು. ಒಟ್ಟಿನಲ್ಲಿ ವಿಚಾರಾರ್ಹ ಲೇಖನ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾಗರಾಜ ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.