'ಧರ್ಮಾಧರ್ಮ' ( ಕವನ )

3.5

 

 

ನಮ್ಮ ಸಮಾಜ

ಧಾರ್ಮಿಕ ಮತ್ತು ಅಧಾರ್ಮಿಕ

ನೆಲೆಗಳಲ್ಲಿ ಸಮೀಕರಣಗೊಂಡ

ಒಂದು ಸಂಕೀರ್ಣ ವ್ಯವಸ್ಥೆ !

ಇವುಗಳ ಮಾನದಂಡಗಳೇನು

ಸೀಮಾರೇಖೆ ಯಾವುದು

ನಿರ್ಣಯ ಹೇಗೆ ? ಇದೊಂದು

ಬಗೆಹರಿಯದ ಸಾರ್ವಕಾಲಿಕ ಪ್ರಶ್ನೆ !

 

ಇದು ಮೇಲ್ನೋಟಕ್ಕೆ ಸರಳ

ಆದರೆ ವೈಚಾರಿಕತೆಯ ಆಳಕ್ಕೆ

ಇಳಿಯುತ್ತ ಹೋದಂತೆ ನಮಗೆ

ಅನ್ನಿಸುವುದು ಇದೊಂದು

ಅರ್ಥವಾಗದ ಕಗ್ಗಂಟು ಎಂದು !

 

ಈ ಧರ್ಮ ನಿಂತಿರುವುದು

ಸತ್ಯ ಅಸತ್ಯ ಹಿಂಸೆ ಅಹಿಂಸೆಗಳ

ತಳಹದಿಯ ಮೇಲೆ ಈ ಧರ್ಮ

ಅವಲಂಬಸಿ ನಿಂತಿದೆ

ಎನ್ನುವುವು ಎಲ್ಲ ಕಾಲಗಳ

ಸಾಮಾಜಿಕ ವಾದ ಆದರೆ

ಜನ ಸಾಮಾನ್ಯವಾದ ನಾವು

ಊಹಿಸುವಷ್ಟು ಸರಳವಲ್ಲ

 

ಸತ್ಯ ಅಹಿಂಸೆಗಳು ಧರ್ಮ

ಅಸತ್ಯ ಹಿಂಸೆಗಳು ಅಧರ್ಮ

ಇದೊಂದು ಸರಳ ವ್ಯಾಖ್ಯೆ

ಇದಕೆ ಬಲ ಬರುವುದು ಯಾವಾಗ ?

ಅದು ನಮ್ಮ ಜೀವನ ಕ್ರಮವಾದಾಗ

ಆದರೆ ನಮ್ಮ ಆಚರಣೆಯ ಬದುಕು

ಹಾಗಿದೆಯೆ ? ಇಲ್ಲ ಅದೆ ಸಮಸ್ಯೆ !

 

ಸತ್ಯ ಅಹಿಂಸೆಗಳು ಧರ್ಮವೂ

ಆಗಬಹುದು ಅಧರ್ಮವೂ ಆಗಬಹುದು

ಅದೇ ರೀತಿ ಅಸತ್ಯ ಹಿಂಸೆಗಳು

ಧರ್ಮವೂ ಆಗಬಹುದು

ಈ ವಿಂಗಡಣೆಗಳ ನೆಲೆಗಟ್ಟು ನಮ್ಮ

ಕ್ರಿಯೆಗಳ ಹಿಂದಿರುವ ಸಧ್ವಾವ

ದುರ್ಭಾವಗಳ ಮೇಲೆ ನಿಂತಿರುವಂತಹುದು

 

ಒಬ್ಬರನ್ನು ಹೊಡೆಯುವುದು ಹಿಂಸೆ

ಇದೊಂದು ಸಾಮಾನ್ಯ ನಿಯಮ ಆದರೆ

ತಪ್ಪು ಮಾಡಿದ ಮಗುವನ್ನು

ತಾಯಿ ದಂಡಿಸುವುದು ಕ್ರೂರಿಯೊಬ್ಬ

ಅಮಾಯಕರನ್ನು ಹಿಂಸಿಸುವುದು

ಒಟ್ಟಾರೆಯಾಗಿ ಇವುಗಳನ್ನು ಹಿಂಸೆ

ಎಂದು ಹೇಳಿ ಬಿಡಬಹುದೆ ?

ಇಂತಹ ಕ್ಲೀಷ್ಟ ಸಂಧರ್ಭಗಳಲ್ಲಿಯೆ

ಧರ್ಮಸಂಕಟ ಎದುರಾಗುವುದು

ವಿವೇಚನೆ ಹೇಳುತ್ತೆ

ತಾಯಿಯ ದಂಡನೆ ಧರ್ಮ

ಕ್ರೂರಿಯೊಬ್ಬ ಅಮಾಯಕರನ್ನು

ದಂಡಿಸುವುದು ಅಧರ್ಮ

ಹೀಗಾಗಿ ವಿವೇಚನಾಯುಕ್ತ

ನಡವಳಿಕೆ ಮತ್ತು ಕ್ರಿಯೆಗಳು ಧರ್ಮ

 

ಹುಲಿ ಸಿಂಹಗಳ ಜಿಂಕೆಯ ಬೇಟೆ ಧರ್ಮ

ಅದೇ ಬೇಟೆಗಾರ ಜಿಂಕೆಯ

ಬೇಟೆಯಾಡಿದರೆ ಅದು ಅಧರ್ಮ

ಕ್ರೂರ ವನ್ಯ ಮೃಗಗಳು ಮಾಂಸಾಹಾರಿಗಳು

ಅದು ಅರಣ್ಯ ನಿಯಮ

ಆದರೆ ಬೇಟೆಗಾರ ಸಸ್ಯಾಹಾರಿ ಜಿಂಕೆಯನ್ನು

ತಿನ್ನದೆಯೂ ಆತ ಬದುಕಬಲ್ಲ ಹೀಗಾಗಿ

ಆತ ಮಾಡುವ ಜಿಂಕೆಯ ಹನನ ಅಧರ್ಮ

 

ಒಬ್ಬ ಕೊಲೆಗಡುಕ ಕೊಲೆ

ಮಾಡುವ ಕ್ರಿಯೆ ಅಧರ್ಮ

ಆದರೆ ಆತನನ್ನು ನೇಣು ಗಂಬಕ್ಕೆ

ಏರಿಸುವವನ ಕ್ರಿಯೆ ಧರ್ಮ

ಇಲ್ಲಿ ಧರ್ಮಾಧರ್ಮ ಆಧರಿಸಿ

ನ್ಯಾಯಾಧೀಶ ನೀಡಿದ ಆಜ್ಞೆ

ವರ್ತಮಾನದ ಸಮಾಜದ ಸಾಕ್ಷಿಪ್ರಜ್ಞೆ

ಯಾಕೆಂದರೆ ಧರ್ಮಿದ ಗ್ರಹಿಕೆಯ

ಒಳ ಮತ್ತು ಹೊರ ನೋಟಗಳು

ಬೇರೆ ಬೇರೆ ಮಾನಸಿಕ ತೊಳಲಾಟ

ಮತ್ತು ಸ್ಪಂದನಗಳಲ್ಲಿ ಮೇಲೆದ್ದು

ಬರುವ ಸಧ್ಭಾವನೆಯೆ ಧರ್ಮ

 

ಧಾರ್ಮಿಕನ ವೇಷ ತೊಟ್ಟವ

ಅಧಾರ್ಮಿಕನೂ ಇರಬಹುದು

ಅದೇ ರೀತಿ ಅಧಾರ್ಮಿಕನಂತೆ

ಕಾಣುವವ ಧಾರ್ಮಿಕನೂ ಇರಬಹದು

ಈ ಧಾರ್ಮಿಕ ವೇಷಧಾರಿ

ಧರ್ಮಧ್ವಜರು ಆಚರಿಸುವುದು ಬರಿ

ಬೂಟಾಟಿಕೆಯ ಧರ್ಮ ಇದು ಒಣ

ಪ್ರಚಾರ ಪ್ರತಿಷ್ಟೆ ಸ್ವಾರ್ಥ ಸಾಧನೆಗಾಗಿ

ಇಲ್ಲಿರುವುದು ತೋರಿಕೆಯ ಧರ್ಮ

ಅದು ಅಂತರಂಗದ ಧರ್ಮ ಅಲ್ಲ !

 

ಒಟ್ಟಾರೆಯಾಗಿ ಧರ್ಮದ ಮೂಲ

ಸದ್ಭಾವ ಸಚ್ಚಾರಿತ್ರ್ಯ ಹಾಗೆಯೆ

ಪ್ರಾಮಾಣಿಕ ಬದುಕು ಇವಿಲ್ಲದ ಬದುಕು

ಅಧರ್ಮದ ಡಾಂಭಿಕ ಬದುಕು

ತಪ್ಪು ಮಾಡುವುದು ತಪ್ಪಲ್ಲ ಅದು

ಮಾನವ ಸಹಜ ಬದುಕಿನ ಧರ್ಮ ಅದೇ

ತಪ್ಪನ್ನು ಮುಚ್ಚಿಟ್ಟು ಧರ್ಮದ

ಸೋಗು ಹಾಕುವುದು ಅಧರ್ಮ

ಈ ಧರ್ಮಾಧರ್ಮಗಳು

ಅನಾದಿ ಕಾಲದಿಂದಲೂ

ಸಮಾನಾಂತರವಾಗಿ

ಚಲಿಸುತ್ತಲೆ ಬಂದಿವೆ

ಇವೆರಡರ ಮಧ್ಯೆ ಮುಗ್ಧ

ಮಾನವ ಸಮುದಾಯ

ನಲುಗುತ್ತಲೆ ಬಂದಿದೆ

 

ಧರ್ಮದ ಮುಖವಾಡ ಧರಿಸಿದ

ಧರ್ಮಜರು ಒಂದೆಡೆಗಾದರೆ

ವಿರೋಧಿಸುವವರು ಇನ್ನೊಂದೆಡೆ

ಇಲ್ಲಿ  ಮೊದಲ ವರ್ಗವೆ

ಎರಡನೆ ವರ್ಗದ ಹುಟ್ಟಿಗೆ ಕಾರಣ

ಇಲ್ಲಿ ಧರ್ಮಕ್ಕೆ ಮೂಲ

ಮೂಲ ಅಪಾಯವಿರುವುದು

ಮುಖವಾಡದ ಧರ್ಮಜರಿಂದ

ಅದರ ವಿರೋಧಿಗಳಿಂದಲ್ಲ

 

ನಮ್ಮ ಮುಂದೆ ಇಂದು ಮೂರು

ಬಗೆಯ ಧರ್ಮಗಳಿವೆ

ಸಧರ್ಮ ಅಧರ್ಮ ಸಮಾಜಧರ್ಮ

ಒಂದು ಕಾಲದಲ್ಲಿ

ಬಾಲ ವಿವಾಹ ಧಾರ್ಮಿಕವಾಗಿತ್ತು

ವಿದವಾ ವಿವಾಹ ಅಧಾರ್ಮಿಕವಾಗಿತ್ತು

ಅದು ಆ ಕಾಲದ

ಸಮಾಜ ಧರ್ಮವಾಗಿತ್ತು ಆದರೆ

ಇಂದು ಬಾಲ್ಯ ವಿವಾಹ ಅಧಾರ್ಮಿಕ

ವಿಧವಾ ವಿವಾಹ ಧಾರ್ಮಿಕ

ಕಾಲ ಮಾನದ ಕುಲುಮೆಯಲಿ

ಪುಟಗೊಂಡು ಹಿಂದಿನ ಅಧರ್ಮ

ಇಂದಿನ ಧರ್ಮವಾಗುವುದು

ಅಂದಿನ ಅಧರ್ಮ ಇಂದಿನ

ಧರ್ಮವಾಗುವುದು ಸಮಾಜ ಧರ್ಮ

ಇವೆಲ್ಲವುಗಳನ್ನು ಒಳಗೊಂಡ ಇನ್ನೊಂದು

ಧರ್ಮವಿದೆ ಅದು ಸನಾತನ ಧರ್ಮ

ಅದು ಎಂದಿಗೂ ಬದಲಾಗದ ಕಾಲದ

ಪರೀಕ್ಷೆಗೆ ಒಳಪಡುವಂತಹುದು

ಇದು ಕಾಲಾತೀತ ಧರ್ಮ ಹಿಂದೆ ಇತ್ತು

ಇಂದು ಇದೆಮುಂದೆಯೂ ಇರುವಂತಹುದು

ಇದು ಮಾನವ ಸಾಕ್ಷಿ ಪ್ರಜ್ಞೆಯ ಮೂಲಧರ್ಮ

 

ಧರ್ಮದ ಸರಳ ಸಮೀಕರಣವೆಂದರೆ

ಸ್ನೇಹ ಕರುಣೆ ಸಂತಸ ಮತ್ತು

ಅಧರ್ಮಧ ಉಪೇಕ್ಷೆಗಳು ಇವು ಸಾರ್ವಕಾಲಿಕ

ಅಲಿಖಿತ ಧರ್ಮಶಾಸ್ತ್ರ ಸ್ಮೃತಿಗಳು ಒಂದು

ಶಾಶ್ವತ ಮನುಜ ಧರ್ಮದ ಚೌಕಟ್ಟಿನಲ್ಲಿ

ಸಮಾಜಧರ್ಮವನ್ನು ಬೋಧಿಸುತ್ತವೆ ಅವುಗಳು

ಆಯಾ ಕಾಲಕ್ಕೆ ತಕ್ಕಂತೆ ನವೀಕರಣ ಗೊಳ್ಲುವ

ಸಮಾಜ ಧರ್ಮದ ಸಂವಿಧಾನಗಳು

 

             ***

 

   

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಧರ್ಮಾಧರ್ಮದ ಕುರಿತು ವೈಚಾರಿಕ ಸಂಘರ್ಷ, ಆಂತರಿಕ ತೊಳಲಾಟದ ಚಿತ್ರಣ, ಹೊರಡಿಸಿರುವ ಸಂದೇಶ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು, ಪಾಟೀಲರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜ ರವರಿಗೆ ವಂದನೆಗಳು ಕವನದ ಕುರಿತಾದ ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.