ದುಡ್ಡೇ ದೊಡ್ಡಪ್ಪ....

3.75

ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ,  ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು ಆರ್ಕಿಮೆಡಿಸ್ ಪ್ರಿನ್ಸಿಪಲ್  ಅನ್ನು ಹೇಳಲು ಬರುತ್ತಿರಲಿಲ್ಲ ಅರುಣನಿಗೆ. ಪ್ರಿನ್ಸಿಪಾಲರು ಅರುಣನಿಗೆ ಹಿರಿಯರನ್ನು ಕರೆದುಕೊಂಡು ಬನ್ನಿ ಎಂದು ತಾಕಿತ್ ಮಾಡಿದ್ದರು. ಅದಕ್ಕೆ ಅರುಣ ಪೂರ್ತಿ ಮಂಕಾಗಿದ್ದ. ಕಡೆಗೆ ಅರುಣ ಯೋಚಿಸಿ ತಲೆ ಕೆರೆದುಕೊಂಡು, ಮಂಜನ ಅಣ್ಣನನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿ ಹೀಗೆ ಮಾಡಿದ್ದ.  ಬಾತ್ ರೂಮಿನಲ್ಲಿಯ ನಲ್ಲಿ ಹಾಗೆ ಬಿಟ್ಟು ಬಂದು, ಮನೆಯಲ್ಲಿರುವ ಪೂರ್ತಿ ನೀರು ಖಾಲಿ ಆಗಿ ಎಲ್ಲರಿಗೂ ಫಜೀತಿ ಬೇರೆ ಮಾಡಿದ್ದ. ಅವರ ಅಪ್ಪನಿಂದ ಏಟುಗಳ ಸುರಿಮಳೆ ಆಗಿತ್ತು. ಮಂಜನ ಅಣ್ಣ ಸುರೇಶನಿಗೆ ಹತ್ತು ರುಪಾಯಿ ಕೊಟ್ಟು ಒಪ್ಪಿಸಿ ಕಡೆಗೆ ಶಾಲೆಗೆ ಕರೆದುಕೊಂಡು ಹೋಗಿದ್ದ.
 
ಹತ್ತು ರುಪಾಯಿಯ ಆಸೆಯಿಂದ ಸುರೇಶ್ ಲಗುಬಗೆಯಿಂದ ಪ್ರಿನ್ಸಿಪಾಲ್ ರೂಮಿಗೆ ಅರುಣನನ್ನು ಕರೆದುಕೊಂಡು ಹೊಕ್ಕ. ಈಗ ಅರುಣನ ಜೊತೆ ಸುರೇಶನಿಗೆ ಕೂಡ ನಡುಕ ಶುರು ಆಯಿತು. ಏಕೆಂದರೆ ಸುರೇಶನಿಗೆ ಕಲಿಸಿರುವ  ಮಾಸ್ತರ್ ಬೇರೆ ಶಾಲೆಯಿಂದ ಇಲ್ಲಿ ಪ್ರಿನ್ಸಿಪಾಲ್ ಆಗಿ ವರ್ಗಾವಣೆಯಾಗಿ ಬಂದಿರುತ್ತಾರೆ ಎಂದು ಕಲ್ಪನೆಯಲ್ಲೂ ಯೋಚಿಸಿರಲಿಲ್ಲ. ಕಡೆಗೆ ಎಲ್ಲಾ ವಿಷಯಗಳು ಪೋಲಾಗಿ ಇಬ್ಬರು ಕ್ಷಮೆ ಕೇಳಿ, ಅರುಣನ ತಂದೆಗೆ ವಿಷಯ ಮುಟ್ಟಿಸಿ, ಕರೆದುಕೊಂಡು ಹೋಗಿ  ಪ್ರಿನ್ಸಿಪಾಲ್ ರನ್ನು ಭೇಟಿ ಮಾಡಿಸಿದ್ದರು. ಅವರ ತಂದೆ ವರ್ಗಾವಣೆಯಾಗಿ ಮೈಸೂರಿಗೆ ಹೋದಮೇಲೆ ನನಗೂ ಮತ್ತು ಅರುಣನಿಗೆ ಸಂಪರ್ಕ ಕಡಿದು ಹೋಗಿತ್ತು.
 
ಮಂಜ ಮನೆಗೆ ಬಂದಿದ್ದ. ಮಂಜನಿಗೆ ಸ್ವೀಟ್ ಕೊಡುವ ಸಲುವಾಗಿ, ನಾನು ಸ್ವೀಟಿನಲ್ಲಿ ಇರುವ ಇರುವೆಗಳನ್ನು ತೆಗೆಯುತ್ತ "ಇರುವೆ ಎಲ್ಲಿರುವೆ ...ಮಾನವನನ್ನು ಕಾಡುವ" ಎಂದು ಹಾಡುತ್ತ ಇದ್ದೆ ಹೆಂಡತಿ ಏನು? ರೀ.... ಎಂದಳು, ಅಷ್ಟರಲ್ಲಿ ಅಚಾನಕ್ಕಾಗಿ ನಮ್ಮ ಅರುಣನ ಆಗಮನವಾಯಿತು. ಅದು ಜೊತೆಯಲ್ಲಿ ಅದೇ ಸುರೇಖಾ ಮತ್ತು ಒಂದು ಮುದ್ದಾದ ಮಗು ಇತ್ತು.  ಅವನು ನನ್ನ ಅಡ್ರೆಸ್ ಅಂತರ್ಜಾಲದಲ್ಲಿ ಹುಡುಕಿ ಮನೆಗೆ ಬಂದಿದ್ದ.  ಮಂಜ ಏನಪ್ಪಾ? ಮಗನ ಹೆಸರು ಯುರೇಕಾ ಏನು? ಎಂದು ಕಾಡಿಸಿದ. ಅವನ ಕೈಯಲ್ಲಿ ಒಂದು Tablet ಇತ್ತು. ಅದನ್ನು  ತೆಗೆದುಕೊಂಡು ಅವನ ಮಗ ಆಟ ಆಡುತ್ತ ಇದ್ದ.  ಅವನು ತನ್ನ ವ್ಯವಹಾರ, ದುಡ್ಡು, ಕಾರುಗಳ ಮತ್ತು ಅಸ್ತಿಗಳ ಬಗ್ಗೆ ತುಂಬಾ ಬೀಗುತ್ತಿದ್ದ. ಇದನ್ನು ಕೇಳಿ ಕೇಳಿ ನನಗೆ ಮತ್ತು ಮಂಜನಿಗೆ ಸಾಕಾಗಿ ಹೋಗಿತ್ತು. ಪ್ರತಿ ಎರಡೆರಡು ನಿಮಿಷಕ್ಕೆ ಫೋನ್ ಬರುತ್ತಿತ್ತು. ನಡು ನಡುವೆ ಎದ್ದು ಹೋಗಿ ಮಾತನಾಡುತ್ತಿದ್ದ.  ಕಡೆಗೆ, ಮಂಜ ಏನು? ಈ ಕಡೆಗೆ ಪ್ರಯಾಣ, ಕುಚೇಲನ ಮನೆಗೆ ಕೃಷ್ಣ ಆಗಮಿಸಿದ ಹಾಗೆ ಆಯಿತು ಎಂದು ಹಿಯಾಳಿಸಿ ಮಾತನಾಡಿದ. ಅದಕ್ಕೆ, ಇಲ್ಲೇ ಸ್ವಲ್ಪ ಉತಾರ ಬೇಕಾಗಿತ್ತು ಅದಕ್ಕೆ ಬಂದಿದ್ದೆ.  ನಿಮ್ಮ ಮನೆ ಇಲ್ಲೇ ಎಂದು ತಿಳಿದು ಭೇಟಿಗೆಂದು ಬಂದಿದ್ದೆ ಎಂದ. ಮಂಜ ನಿನ್ನ ಉಡದಾರ ಗಟ್ಟಿ ಇದೆ ತಾನೇ ಎಂದು ಕೇಳಿದ. ಲೇ... ನೀನು ಎಂದು ಸುಧಾರಿಸಲ್ಲ ಕಣೋ ಎಂದು ಹೇಳಿದ. ಮಂಜ ತಮ್ಮ ಮನೆಗೆ ಅವನನ್ನು ಆಹ್ವಾನಿಸಿದ. ಆದರೆ, ಅರುಣ ಮತ್ತೊಮ್ಮೆ ಬರುತ್ತೇನೆ ಎಂದು ಹೇಳಿ, ಕಾಫಿ ಕುಡಿದು ಹೊರಟು ಹೋದರು.
 
ನನ್ನ ಮಗ ಅವರು ಹೋದ ಮೇಲೆ Tablet  ನನಗೂ ಬೇಕು ಎಂದು ಹಠ ಹಿಡಿದ. ಮಂಜನಿಗೆ ತುಂಬಾ ಕೋಪ ಬಂದಿತ್ತು. ಮಂಜ ದುಡ್ಡಿದ್ದರೆ ಅವನ ಕಡೆ ಇರಲಿ, ನಮಗೇನು ಅವನು ಕೊಡುತ್ತಾನೆ. ದುಡ್ಡು ಅಂದರೆ ಕೈಯೊಳಗಿನ ಧೂಳು ಇದ್ದ ಹಾಗೆ, ಯಾವತ್ತು ಹೋಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ.  ಮತ್ತೆ ಇದು ನೆರಳು ಇದ್ದ ಹಾಗೆ ಬಿಸಿಲು ಇದ್ದಾಗ ಮಾತ್ರ ಅದನ್ನು ಕಾಣಬಹುದು. ಇವನೇನು ಸತ್ತಾಗ ಎಲ್ಲವನ್ನು ಹೊತ್ತು ಕೊಂಡು ಹೋಗುತ್ತಾನೆ. ಎಲ್ಲೋ ಇವನ ಮಾವನಿಂದ ವರದಕ್ಷಿಣೆ ತೆಗೆದುಕೊಂಡಿರಬೇಕು. ನಡುವೆ ಬಂದಿದ್ದು, ನಡುವೆ ಹೋಗುತ್ತೆ. ನದಿ ನೀರು ಮತ್ತು ಭಾವಿ ನೀರಿಗೂ ತುಂಬಾ ವ್ಯತ್ಯಾಸ. ನದಿ ನೀರು ಎಲ್ಲಿಂದಲೋ ಬಂದಿರುತ್ತೆ. ಭಾವಿ ನೀರು ಯಾವತ್ತಿದ್ದರೂ ಹೊಸದಾಗಿ ಬರುತ್ತಾ ಇರುತ್ತೆ. ನದಿ ನೀರು ಬತ್ತಬಹುದು. ಭಾವಿ ನೀರು ಬತ್ತಲು ಖಂಡಿತ ಸಾಧ್ಯ ಇಲ್ಲ ಎಂದ.  ಇಂತವರು ಮೂರೂ ಬಿಟ್ಟವರು. ಮರ್ಯಾದೆ ಬಿಟ್ಟವರು ಎರಡು ತರಹ ಇರುತ್ತಾರೆ. ಒಬ್ಬರು ಮರ್ಯಾದೆ ಹೋದರೆ ಸಾಯುತ್ತಾರೆ. ಮತ್ತೆ ಕೆಲವರು ಮರ್ಯಾದೆ ಮಾರಿ ಮಲಗಿಕೊಳ್ಳುತ್ತಾರೆ ಎಂದ. ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ ಎಂದ. ಲೇ.. ಅದು ಮನುಷ್ಯತ್ವ ಅಲ್ಲ ಕಣೋ ವಿದ್ಯೆ ಎಂದೆ. ಆಯಿತು ಬಿಡೋ ಎಂದು  ಮನೆಗೆ ಹೊರಟು ಹೋದ.  ನನಗು ಕೂಡ ಹಾಗೆ ಅನ್ನಿಸಿತು. ಅರುಣನ ಮಾತಿನ ಹಮ್ಮು ತುಂಬಾ ಇತ್ತು.  ಮಗ ಮತ್ತೆ ಮತ್ತೆ Tablet  ಬೇಕು ಎಂದು ಕೇಳುತ್ತಿದ್ದ.  ನಾನು ನಾಳೆ ತೆಗೆದುಕೊಳ್ಳೋಣ ಎಂದು ಹೇಳಿ ಸುಮ್ಮನಾಗಿಸಿದ್ದೆ. ನನಗು ದುಡ್ಡಿನ ಮಹಿಮೆಯ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದು ಅನ್ನಿಸಿತು ರಾತ್ರಿ ಕುಳಿತು ಬರೆದೆ.
 
ದುಡ್ಡಿನ ಮಹಿಮೆ
----------------
ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ
 
ಇದು ನಂದೇ ಜಗತ್ತು ಎಂದ ಪುಂಡ
ಇವನ ಮುಂದೆ ಪ್ರಾಮಾಣಿಕತೆ ಒಂದು ದಂಡ
ಖಾಲಿ ಡಬ್ಬದ ನಾದವೇ ಸುರ ಸಂಗೀತವು
ಜಾಲಿ ಗಿಡದ ಪುಷ್ಪವೇ ಮಂದಾರ ಪುಷ್ಪವು ||೧||
 
ದಡ್ಡನಾದರೇನು ದುಡ್ಡು ಒಂದು ಸಾಕು
ಮಧ್ಯ ಒಂದೇ ಬೇಕು, ವಿದ್ಯೆ ಯಾಕೆ ಬೇಕು
ಮುಂದೆ ಹೊಗಳಿ ಏರಿಸುವ ಜನ ಸಮೂಹವು
ಹಿಂದೆ ತೆಗಳಿ ಬೀಳಿಸುವ ಶ್ವಾನ ಸಮಾನವೂ ||೨||
 
ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾಮರುದಿನ ಸಂಜೆ ಆಫೀಸ್ ನಿಂದ ಬರುವ ವೇಳೆಗೆ ನನ್ನ ಅಪ್ಪ, ಅಮ್ಮ ಊರಿನಿಂದ ಬಂದಿದ್ದರು. ಮಗ Tablet ತೆಗೆದುಕೊಂಡು ಬಂದ್ಯಾ ಎಂದು ಕೇಳಿದ. ನನ್ನ ಅಮ್ಮ ಗಾಬರಿಯಿಂದ ಏನಾಯಿತು? ನಿನಗೆ ಎಂದು ಕೇಳಿದರು. ನಾನು ಏನು ಇಲ್ಲ ಮಗನಿಗೆ Tablet ಬೇಕಂತೆ ಅಂದೆ. ಅವನಿಗೆ ಏನಾಗಿದೆ? ಎಂದು ಅಜ್ಜ-ಅಜ್ಜಿ  ಇಬ್ಬರು ಮತ್ತಷ್ಟು ಗಾಬರಿಯಾದರು. ಕಡೆಗೆ ಅವರಿಗೆ ಅದು ಒಂದು ಮೊಬೈಲ್ ಇದ್ದ ಹಾಗೆ ಇರುವ ಒಂದು ಇಲೆಕ್ಟ್ರಾನಿಕ್ ಉಪಕರಣ ಎಂದು ಹೇಳಿದ ಮೇಲೆ ಸಮಾಧಾನವಾಗಿ, ಇದೆಂತಹ ಹೆಸರು ಇಡುತ್ತಾರೆ ಇವರು ಎಂದು ಬೈದರು.
 
ಮತ್ತೆ ಸಂಜೆಗೆ ಊಟಕ್ಕೆ ಕುಳಿತಾಗ ಮಡದಿ ನಾಳೆಗೆ ನಿಮಗೇನು ವೋಟ್ಸ್ ಎಂದು ಕೇಳಿದಳು. ಅದಕ್ಕೆ ನಾಳೆ ಏನು ಎಲೆಕ್ಷನ್ ಇದೇನಾ ಎಂದು ನನ್ನ ಅಮ್ಮ ಮುಗ್ದತೆಯಿಂದ ಕೇಳಿದಳು. ಅದು  ವೋಟ್ಸ್ ಎಂದರೆ ಅದು ತಿನ್ನುವ ವಸ್ತು ಎಂದು ಅದರ ಪಾಕೆಟ್ ತಂದು ತೋರಿಸಿದ ಮೇಲೆ ಅಮ್ಮ, ಇದೇನೋ ವಿಚಿತ್ರವಾಗಿ ಹೆಸರು ಇಡುತ್ತರೋ ಈ ಆಂಗ್ಲರು ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದೆ ನಮ್ಮ ತಪ್ಪು ಎಂದು ಆಡುತ್ತಿದ್ದಳು. ಅದಕ್ಕೆ ಅಪ್ಪ ಅಮ್ಮನಿಗೆ ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದರಿಂದ ಮೊಬೈಲ್, ಟಿ ವಿ, ಕಂಪ್ಯೂಟರ್ ಎಂದು ಎಷ್ಟೊಂದು ಉನ್ನತಿಯನ್ನು ನಾವು ಕಾಣುತ್ತಿದ್ದೇವೆ. ಸುಮ್ಮನೆ ಏನೇನೋ ಮಾತನಾಡಬೇಡ ಎಂದು ಬೈದರು. ಮತ್ತೆ ಮೊನ್ನೆ ನಿಮ್ಮ ಅಮ್ಮ "ಅಳಗುಳಿಮನೆ" ಎಂಬ ಹೆಸರನ್ನು ಕೇಳಿ, ಇದೇನು ಇವರ ತಲೆ ಅಳುಬುರುಕ ಮನೆ ಎಂದು ಧಾರಾವಾಹಿಯ ಹೆಸರು ಇಟ್ಟಿದ್ದಾರೆ ಎಂದು ಬೈಯುತ್ತಿದ್ದಳು ಎಂದರು. ಕಡೆಗೆ ನಾನು ಅದು ಒಂದು ಆಟದ ಸಾಮಾನಿನ ಹೆಸರು ಎಂದು ಹೇಳಿದೆ ಎಂದು ನಗಹತ್ತಿದರು. ಅದಕ್ಕೆ ಅಮ್ಮ ನಿಮಗೆ ನಾನೆಂದರೆ ತಮಾಷೆ ಎಂದು ಕೋಪ ಮಾಡಿಕೊಂಡು ಬಿಟ್ಟಳು. ಇವರಿಬ್ಬರ  ಜಗಳ ನೋಡಿ ನನ್ನ ಮಗ ನಗುತ್ತಲಿದ್ದ. ಊಟ ಮುಗಿಸಿ ಎಲ್ಲರೂ ನಿದ್ದೆಗೆ ಜಾರಿದೆವು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:))) ಮೊಬೈಲಿನಿಂದ ಫೋನು ಮಾಡುವುದು, ಕೇಳುವುದು ಬಿಟ್ಟರೆ ಇತರ ಕೆಲಸಗಳನ್ನು ಮಕ್ಕಳು, ಮೊಮ್ಮಕ್ಕಳು ಮಾಡುವಷ್ಟು ನನಗೆ ಬರುವುದಿಲ್ಲ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.