ಡರ್ಟಿ ಇಲ್ಲದಿದ್ದರೂ ಮನ ಮುಟ್ಟದ ಡರ್ಟಿ ಪಿಕ್ಚರ್

3.5

ಡರ್ಟಿ ಪಿಕ್ಚರ್ - ಸಿಲ್ಕ್ ಸ್ಮಿತಾಳ ಕಥೆ ಆಧಾರಿಸಿದಂತಹ ಚಿತ್ರವೆಂದು, ವಿದ್ಯಾಬಾಲನ್ ‘ಸಿಲ್ಕ್’ ಪಾತ್ರದಲ್ಲಿ ನಟಿಸುತ್ತಿರುವಳೆಂದು! ಶೂಟಿಂಗ್ ಶುರುವಾದಾಗಿನಿಂದಲೂ ಎಲ್ಲರ ಕುತೂಹಲ ಕೆರಳಿಸಿದ ಚಿತ್ರ.

ಬಡತನದಿಂದಾಗಿ ೪ ನೇ ತರಗತಿಗೆ ಓದನ್ನು ಬಿಟ್ಟ ‘ವಿಜಯ ಲಕ್ಷ್ಮಿ’ ಗೆ ಆಕೆಯ ಸೌಂದರ್ಯವೇ ಮುಳ್ಳಾಯಿತು.  ಹಾಗಾಗಿ, ಸಣ್ಣ ವಯಸ್ಸಿನಲ್ಲೇ ಆಕೆಗೆ, ಆಕೆಯ ತಂದೆ ತಾಯಿ ಮದುವೆ ಮಾಡಿಸಿಬಿಟ್ಟರು.  ಗಂಡನ ಮನೆಯ ದೌರ್ಜನ್ಯ ತಾಳಲಾಗದೇ, ಅಲ್ಲಿಂದ ರಾತ್ರೋ ರಾತ್ರಿ ಚೆನ್ನೈಗೆ ಓಡಿಬಂದವಳು ಆಶ್ರಯ ಪಡೆದದ್ದು ನೆಂಟರೊಬ್ಬರ ಮನೆಯಲ್ಲಿ.  ಈಕೆಗೆ ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ.  ಆದರೆ ಇಲ್ಲೂ ದುರಾದೃಷ್ಟ ಕೈಕೊಟ್ಟಿತು. ನಟಿಯಾಗಲು ಬಂದವಳು, ತನ್ನ ದೇಹ ಸಿರಿಯನ್ನೇ ಬಂಡವಾಳವಾಗಿಸಿಕೊಂಡು ಸುಮಾರು ೧೭ ವರ್ಷಗಳ ಕಾಲ ಇಡೀ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕ್ಯಾಬರೇ ನರ್ತಕಿಯಾಗಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ಸರಿ ಸುಮಾರು ೪೫೦ ಚಿತ್ರಗಳಲ್ಲಿ ನಟಿಸಿ ‘ಸಿಲ್ಕ್’ ಸ್ಮಿತಾ ಆದದ್ದು ದಂತ ಕಥೆ! ಎಲ್ಲೋ ಅಲ್ಲೊಂದು, ಇಲ್ಲೊಂದು ಬಿಟ್ಟರೆ, ಬಹುತೇಕ ಸಿನೆಮಾಗಳಲ್ಲಿ ಒಂದೇ ತರಹದ ಪಾತ್ರಗಳು.  ಅಶ್ಲೀಲತೆಯಿಂದ ಕೂಡಿದ ಲೈಂಗಿಕ ಪ್ರಚೋದನಕಾರಿಯಾದಂತಹ ಪಾತ್ರಗಳಲ್ಲಿಯೇ ಈಕೆ ನಟಿಸಬೇಕಾಯಿತು. ೧೯೮೦ರ ಕಾಲದಲ್ಲಿ ಪ್ರದರ್ಶಿತವಾಗದೇ, ಡಬ್ಬದಲ್ಲೇ ಉಳಿದಿದ್ದ ಅನೇಕ ಸಿನೆಮಾಗಳು ಈಕೆಯದೊಂದು ಸೆಕ್ಸೀ ನೃತ್ಯವನ್ನು ತುರುಕಿಸಿದ್ದಕ್ಕಾಗಿಯೇ ಪ್ರದರ್ಶನಗೊಳ್ಳುವ ಭಾಗ್ಯವನ್ನು ಕಂಡಿದ್ದವಂತೆ. ವೀಕ್ಷಕರು ಚಿತ್ರದಲ್ಲಿ ಈಕೆಯ ನೃತ್ಯ ಬರುವ ಸಮಯಕ್ಕೆ ಸರಿಯಾಗಿ, ಅದನ್ನು ನೋಡಲಿಕ್ಕಾಗಿಯೆ ಥಿಯೇಟರ್ ಗೆ ಬರುತ್ತಿದ್ದರಂತೆ. ನಟಿಯಾಗಲು ಬಂದವಳು ‘ಸ್ಟಾರ್’ ಆದರೂ ಕೂಡ ಮಾಧ್ಯಮಗಳಿಂದಾಗಿ (ಈಕೆಯನ್ನು ಸಾಫ್ಟ್ ಪೊರ್ನ್ ನಟಿಯೆಂದು ಬಹುತೇಕ ಪತ್ರಕರ್ತರು ಅಭಿಪ್ರಾಯ ಪಟ್ಟಿದ್ದರು), ಸಿನೆಮಾ ಮಂದಿಯ ನಡುವೆ (ಈಕೆಯ ನಟನೆಗಿಂತಲೂ, ಇವಳ ದೇಹವನ್ನು ಬಿಡಿಸಿ, ಬಿಡಿಸಿ ತೋರಿಸುವುದರಲ್ಲಿಯೇ ಇವರಿಗಿದ್ದ ಆಸಕ್ತಿ), ಪ್ರೇಮದಲ್ಲೂ ವೈಫಲ್ಯ ಕಂಡ ‘ಸಿಲ್ಕ್’ ಸ್ಮಿತಾ ತನಗಂಟಿದ್ದ ಇಮೇಜನ್ನು ತೊಳೆಯಲು ತಾನೇ ನಿರ್ಮಾಪಕಿಯಾಗಲು ನಿರ್ಧರಿಸಿದರೂ, ಹಣದ ಮುಗ್ಗಟ್ಟಿನಿಂದ, ಕುಡಿತದಿಂದ ಯಾವುದೂ ಸಾಧ್ಯವಾಗದೇ ಹತಾಶಳಾಗಿ, ಆತ್ಮಹತ್ಯೆ ಮಾಡಿಕೊಂಡ ‘ಸಿಲ್ಕ್’ ಸ್ಮಿತಾಳದ್ದು ದುರಂತ ಕಥೆ.


ಇನ್ನೂ ‘ಡರ್ಟಿ ಪಿಕ್ಚರ್’ ಚಿತ್ರದ ಬಗ್ಗೆ ಹೇಳುವುದಾದರೆ, ಈ ಮೇಲಿನ ಕಥೆಯಲ್ಲಿಯೇ ಸಣ್ಣ ಪುಟ್ಟ ಮಾರ್ಪಾಡು ಮಾಡಿ, ಒಂದಿಷ್ಟು ಬಾಲಿವುಡ್ ಮಸಾಲೆ ತುರುಕಿ, ಶುರು ಶುರುಗೆ ಆಸಕ್ತಿ ಮೂಡಿಸಿ (‘ಸಿಲ್ಕ್’ ಸ್ಮಿತಾಳ ಹಾಗೆಯೇ), ನಂತರ ಚಿತ್ರವೂ ಯಾಕೋ ಬೋರ್ ಹೊಡೆಸುತ್ತಿದೆಯೆಲ್ಲಾ ಎಂಬ ಭಾವನೆ ಮೂಡಿಸಿ, ಕೊನೆಗೊಂದು ಚೆಂದದ, ಮನ ಮುಟ್ಟುವಂತಹ, ಭಾವುಕತೆಯಿಂದ ಕೂಡಿದಂತಹ ಅಂತ್ಯ (ಅಂತ್ಯ ಮೊದಲೇ ಗೊತ್ತಿದ್ದರೂ) ಕಾಣುವ ಚಿತ್ರಕಥೆ ಈ ‘ಡರ್ಟಿ ಪಿಕ್ಚರ್’.  ದುರಂತವೆಂದರೆ ಚಿತ್ರ ಕಥೆಯಲ್ಲಿಯೂ ಕೂಡ ‘ಸಿಲ್ಕ್’ ಳ ದೇಹ ಸಿರಿ ಪ್ರಾಮುಖ್ಯತೆ ಕಂಡಷ್ಟು ಆಕೆಯ ಮನಸ್ಥಿತಿ ಎಲ್ಲೂ ಹೈಲೈಟ್ ಆಗುವುದಿಲ್ಲ.  ಚಿತ್ರ ಎಲ್ಲೂ ಕೂಡ ‘ಸಿಲ್ಕ್’ ಳ ಮನಸ್ಸನ್ನು ಹೊಕ್ಕು ನೋಡುವುದಿಲ್ಲ. ಅವಳ ಭಾವನೆಗಳು ಚಿತ್ರಿತಗೊಂಡಿಲ್ಲ.  ಇದು ಚಿತ್ರದ ಅತಿ ದೊಡ್ಡ ಮೈನಸ್ ಪಾಯಿಂಟ್.  ವಿದ್ಯಾಬಾಲನ್ ತನ್ನ ದೇಹದಲ್ಲಿ ಬಹಳಷ್ಟು ಮಾರ್ಪಾಡು ಮಾಡಿಕೊಂಡು, ಸೆಕ್ಸೀ ಇಮೇಜ್ (‘ಸಿಲ್ಕ್’ ನಂತೇ) ಬೆಳೆಸಿಕೊಳ್ಳಲು ಸಾಕಷ್ಟು ತಯಾರಿ ನಡೆಸಿ, ಕೆಚ್ಚೆದೆಯಿಂದ, ‘ಬಿಚ್ಚು’ಗಾರ್ತಿ ಯಾಗಿ ಚೆಂದ ನಟಿಸಿದ್ದರೂ, ಅದು ನಟನೆಯಾಗಿಯೇ ಕಾಣುತ್ತದೆ.  ಚಿತ್ರದಲ್ಲೊಂದು ಡೈಲಾಗ್ - ‘ಸಿಲ್ಕ್’ ಳಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಳ್ಳುತ್ತಿದ್ದ ‘ಶಕೀಲಾ’ ಳಿಗೆ, ‘ಸಿಲ್ಕ್’ ಹೇಳುತ್ತಾಳೆ. ‘ಮನೆಯಲ್ಲಿರುವ ಕನ್ನಡಿಯನ್ನು ಒಡೆದು ಹಾಕು’, ನೀನು ‘ಸಿಲ್ಕ್’  ಆಗಬಹುದೆಂದು ಅದು ಸುಳ್ಳು ಹೇಳುತ್ತಿದೆ!’. ಇದು ವಿದ್ಯಾಬಾಲನ್ ಗೆ ಕೂಡ ಸೂಕ್ತವೇ. ವಿದ್ಯಾ ಮೋಹಕವಾಗಿ ಕಾಣುತ್ತಾಳೆಯೇ ಹೊರತು ಸಿಲ್ಕ್ ಳ ಸೆಕ್ಸಿ ಫೀಲ್ ಆಕೆಗೆ ಬಂದಿಲ್ಲ. ‘ಸಿಲ್ಕ್’ ಳಿಗೆ ‘ಸಿಲ್ಕ್’ ಳೇ ಸಾಟಿ! ಇನ್ಯಾರೂ ಆಕೆಯ ಪಾತ್ರ ಮಾಡಲಾರರು.   ಇನ್ನುಳಿದಂತೆ ನಸಿರುದ್ದೀನ್ ಶಾ ನಟನೆ ಚೆನ್ನಾಗಿದ್ದರೂ, ಆ ಪಾತ್ರಕ್ಕೆ ಹೊಂದುವುದಿಲ್ಲ.  ಬಹುಶಃ ಆಗ ಎಷ್ಟೇ ವಯಸ್ಸಾಗಿದ್ದರೂ, ನಾಯಕನ ಪಾತ್ರಕ್ಕೆ ಪ್ರಾಮುಖ್ಯತೆ ಹೆಚ್ಚು, ಅವರು ನಡೆದದ್ದೇ ದಾರಿ ಎಂಬುದನ್ನು ಬಿಂಬಿಸಲು ಅವರನ್ನು ಆಯ್ಕೆ ಮಾಡಿಕೊಂಡಿರಬಹುದು. ಪತ್ರಕರ್ತೆಯ ಪಾತ್ರಧಾರಿ ಬಹಳ ಚೆನ್ನಾಗಿ ನಟಿಸಿದ್ದಾರೆ.  ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಚಿತ್ರದುದ್ದಕ್ಕೂ ‘ಸಿಲ್ಕ್’ ಳನ್ನು ಚಿತ್ರಿಸಿರುವ ನಿರ್ದೇಶಕನ ಜಾಣ್ಮೆಯನ್ನು ಮೆಚ್ಚಲೇ ಬೇಕು.  ಎಲ್ಲೂ ಅಶ್ಲೀಲತೆಯ ಸೋಂಕಿಲ್ಲದೆ, ಎಷ್ಟು ಬೇಕೋ ಅಷ್ಟನ್ನೇ ಚಿತ್ರಿತಗೊಳಿಸಿರುವ ರೀತಿ ವೀಕ್ಷಕನ ಮೆಚ್ಚುಗೆ ಗಳಿಸುತ್ತದೆ.  ಹಾಗಾದ್ರೆ ಚಿತ್ರ ಚೆನ್ನಾಗಿದೆಯೋ? ಇಲ್ಲವೋ? ಚೆನ್ನಾಗಿದೆ. ಆದರೆ! ಏನೋ ಕೊರತೆ ಕಾಣುತ್ತದೆ.  ಏನು? ಎಂಬುದು ಕೊನೆಯವರೆಗೂ ಗೊತ್ತಾಗುವುದೇ ಇಲ್ಲ.  ಒಮ್ಮೆ ನೋಡಲಡ್ಡಿಯಿಲ್ಲ.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರೇಕ್ಷಕನಿಗೆ ಡರ್ಟಿ ಪಿಚ್ಚರ್ ಮನಮುಟ್ಟದಿದ್ದರೇನಂತೆ ನಿರ್ಮಾಕನಿಗಂತೂ 60ಕೋಟಿಯ ಲಾಭ ಮುಟ್ಟಿದೆಯಂತೆ. :)) ಸಿಲ್ಕ ಸ್ಮಿತಾಳ ವೈಯ್ಯಕ್ತಿಕ ಜೀವನವನ್ನು ಡರ್ಟಿ ಮಾಡದೆ 'ಡರ್ಟಿ' ಚಿತ್ರ ತೆಗೆದದ್ದು ನಿಜಕ್ಕೂ ಮೆಚ್ಚಿಕೊಳ್ಳಬೇಕಾದ ಅಂಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಅವ್ರೆ ಸಿಲ್ಕ್ ಸ್ಮಿಥಾಲ ಜೀವನ ಕಥೆ ಎಂದು ತೆರೆಗೆ ಬರುವ ಮುಂಚೆ ಬಹುಸುದ್ಧಿ ಮಾಡಿದ ಈ ಚಿತ್ರ ಪ್ರೆಕ್ಕ್ಷಕನ ನಿರೀಕ್ಷೆಗೆ ತಕ್ಕುದಾಗಿಲ ಎನ್ನುವುದು ಗೊತ್ತಾಯ್ತು. ಚಿತ್ರ ನಿರ್ಮಾಣವೇ ಹಾಗೆ ಕೆಲ ಅನಾವಶ್ಯಕ ಸನ್ನಿವೇಶಗಳು, ಹೊಡೆದಾಟ ನೃತ್ಯ ಎಲ್ಲವೂ ಇಸ್ತವಿಲ್ಲದೆ ಇದ್ದರೂ ಸೇರ್ಸ್ತಾರೆ. ಇನ್ನು ವಿದ್ಯಾ ಬಾಲನ್ ಚಿತ್ರಗಳಿಂದ ಚಿತ್ರಕ್ಕೆ ಅವುಗಲ್ಗೆ ಹೆಂಗ್ ಬೇಕೋ ಹ್ಯಾಂಗ್ ಅಡ್ಜಸ್ಟ್ ಆಗ್ತಾ ನಟನೆ ಮಾಡ್ತಿದಾರೆ. ನಾ ಈ ಚಿತ್ರ ಇನ್ನು ನೋಡಿಲ್ಲ, ಈ ಚಿತ್ರದ ವಿಶ್ಲೇಷಣೆಯಲ್ಲಿ ನೀವು ಹೇಳಿದ ಒಂದು ಮಾತು " ಸಿಲ್ಕ್ ಸ್ಮಿತಾಳ' ಅಂತರಂಗದ ದರ್ಶನ-ತಳಮಳ-ವ್ಯಥೆ ತೆರೆ ಮೇಲೆ ಬಂದಿಲ್ಲ' ಎನ್ನುವುದು, ನಿರ್ಮಾಪಕರು ಅದನ್ನು ಉದ್ದೆಶಪೂರ್ವಕವಾಗ್ ಸೇರಿಸದೆ ಬರೀ ಮಸಾಲೆ ಬೆರೆಸಿ ಕೈ ತೊಳೆದುಕೊಂಡಿದ್ದಾರೆ. ಶಕೀಲಂಗೆ ಸಿಲ್ಕ್ ಹೇಳಿದ ಮಾತು ನಿಜವೇ... ನಿಮ್ಮ ವಿಶ್ಲೇಷಣೆ ಹಿಡಿಸಿತು.. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರಲ್ಲಿ ಬಾಲಿವುಡ್ ಮಸಾಲೆ ಸೇರಿಸಿದ್ದಾರೆ ಎನ್ನುವುದನ್ನು ತಪ್ಪರ್ಥ ಮಾಡಿಕೊಂಡ್ರಿ ಅನಿಸುತ್ತೆ. ಸಿನಿಮೀಯ ಘಟನೆಗಳನ್ನು (ಚಿತ್ರಕಥೆಗೆ ಕೆಲವೊಮ್ಮೆ ಬೇಕಾಗುತ್ತದೆ) ಸೇರಿಸಿದ್ದಾರೆ ಎಂದಿದ್ದೇ ಹೊರತು ಅನಾವಶ್ಯಕ ಎಂದರ್ಥದಲ್ಲಿ ಹೇಳಿಲ್ಲ. ‘ಸಿಲ್ಕ್’ ಳ ಅಂತರಂಗ ಹೊಕ್ಕು ನೋಡಿದ್ದರೆ ಚಿತ್ರ ಮನ ಮುಟ್ಟುತ್ತಿನೇನೋ ಎನ್ನುವುದು ನನ್ನ ಉದ್ದೇಶ :-) ಚಿತ್ರ ಚೆನ್ನಾಗಿದೆ. ಆದರೆ ಕಾಡುವುದಿಲ್ಲ, ಈ ವಿಷಯದಲ್ಲದು ಎಡವಿದೆ ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

‘ಸಿಲ್ಕ್’ ಳ ಅಂತರಂಗ ಹೊಕ್ಕು ನೋಡಿದ್ದರೆ ಚಿತ್ರ ಮನ ಮುಟ್ಟುತ್ತಿನೇನೋ>>> ಇದು ಫೆಮಿನಿಸ್ಟಿಕ್ ಮಾತು. ಚಿತ್ರ ಬರೀ ಸಿಲ್ಕಳ ದೃಷ್ಟಿಕೋನವಷ್ಟೇ ಅಲ್ಲದೇ ಇತರರ ಭಾವಗಳನ್ನೂ ಬಿಂಬಿಸುವಂತಿದೆಯೇನೋ? ಇಡೀ ಚಿತ್ರಕತೆಯನ್ನು ರೂಪಿಸುವಾಗ ನಿರ್ದೇಶಕ ಏಕಪಕ್ಷೀಯನಾಗಲು ಬರದು. ಇಂಟರೆಸ್ಟಿಂಗ್ ವಿಮರ್ಶೆ ಆದರೆ ಸಿಲ್ಕ್ ಳಿಗೆ ಸಿಲ್ಕಳೇ ಸಾಟಿ ಎಂಬ ನಿಮ್ಮ ಮಾತು ಚಿತ್ರಕ್ಕೆ ಅನ್ವಯವಾಗುವುದಿಲ್ಲ, ಆಕೆ ನಟಿಸಿದ ಚಿತ್ರದ ರೀಮೇಕ್ ನಲ್ಲಿ ವಿದ್ಯಾಬಾಲನ್ ನಟಿಸಿದರೆ ಈ ಹೋಲಿಕೆ ಸರಿಯಿತ್ತೇನೋ ಆದರೆ ಈ ಚಿತ್ರದಲ್ಲಿ ವಿದ್ಯಾಬಾಲನ್ ನಟಿಯಷ್ಟೇ, ಆಕೆ ಸಿಲ್ಕ್ ಳಾಗಿ ನಟಿಸಬಲ್ಲಳೇ ಹೊರತು ಸಿಲ್ಕಳೇ ಆಗುವುದಕ್ಕೆ ಬರುವುದಿಲ್ಲ ಅಲ್ಲವೇ? ಅಲ್ಲದೆ ಇದು ನೈಜ ಕತೆ ಆಧರಿಸಿದ ಚಿತ್ರವಾದ್ದರಿಂದ ಚಿತ್ರವನ್ನಷ್ಟೇ ರೆಫರೆನ್ಸ್ ಇಟ್ಟುಕೊಂಡು ಬರೆದಿದ್ದರೆ ಚೆನ್ನಾಗಿತ್ತು. ವಿದ್ಯಾ ಬಾಲನ್ ಹೋಮ್ಲೀ ಪಾತ್ರಗಳನ್ನು ಬದಿಗಿಟ್ಟು ನೋಡಿದರೆ ಚಿತ್ರ ಹೆಚ್ಚು ಅರ್ಥವಾಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಮಾ ಪವಾರ್ - ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ ನೋಡಿ ಕಮೆಂಟ್ ಮಾಡಿದರೆ ಒಳಿತು. ಇನ್ನುಳಿದಂತೆ ನಿಮ್ಮ ಎಲ್ಲಾ ಮಾತುಗಳು ಒಪ್ಪತಕ್ಕದ್ದೇ. ನಿಮ್ಮ ಸತ್ವಯುತ ವಿಮರ್ಶೆಗೆ ಧನ್ಯವಾದಗಳು .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರದ ವಿಮರ್ಶೆ, ಚಿತ್ರದ ವಿಮರ್ಶೆಯ ವಿಮರ್ಶೆ, ಚಿತ್ರದ ವಿಮರ್ಶೆಯ ವಿಮರ್ಶೆಯ ವಿಮರ್ಶೆ ಎಲ್ಲವೂ ಇಷ್ಟವಾಯ್ತು. ಇನ್ನು ಚಿತ್ರ ನೋಡಬೇಕಿಲ್ಲ ಎನ್ನುವ ನಿರ್ಧಾರ ಮಾಡಿಯಾಯ್ತು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ನೋಡುವುದಕ್ಕಿಂತ ಚರ್ಚೆಯೇ ಒಳ್ಳೆಯ ಮನರಂಜನೆ ಒದಗಿಸಿತು. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್. ಚಿತ್ರ ನೋಡಬಹುದು. ಆದರೆ ಬಹಳ ಚೆನ್ನಾಗಿದೆ ಅನ್ನುವ ತರಹವಿಲ್ಲ. ಅದಕ್ಕಿಂತ ಭೂಮಿಕಾ ಚಿತ್ರ ಸಿಕ್ಕರೆ ನೋಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡರ್ಟಿ ಪಿಕ್ಚರ್ ಚೆನ್ನಾಗಿದೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರ ಅಭಿಪ್ರಾಯ ನೋಡಿದ ಮೇಲೆ ಡರ್ಟಿ ಇಲ್ಲದಿದ್ದರಿಂದ ಡರ್ಟಿ ಪಿಚ್ಚರ್ ಮನಮುಟ್ಟಲಿಲ್ಲ ಎನ್ನುವುದು ಗೊತ್ತಾಯಿತು :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ವಿಧ್ಯಳ ಅಭಿಮಾನಿ! ಅದಕೊಸ್ಕರವಾದರು ಚಲನಚಿತ್ರವನ್ನು ನೋಡಬೇಕೆಂದಿದ್ದೆ. ಸಮಯ ಸಿಕ್ಕಾಗ ನೋಡುತ್ತೇನೆ. ಚಿತ್ರದ ವಿಮರ್ಶೆಗೆ ಧನ್ಯವಾದಗಳು ಇಂಚರರವರಿಗೆ.:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಚರ ಅವ್ರೆ ಮಾಲತಿ ಆನ್ತ ಒದ್ರು ಸ್ಪಟಿಕ ಎಸ್ಟೇಟ್ ಅನ್ತ ಕಥೆ ಬರಿತಿದ್ರಲ್ಲ ಅವ್ರು ಎಲ್ಲಿ ಮುನ್ದೆ ಕಥೆ ಪುರ್ಥಿ ಮಡಲೆ ಎಲ್ಲ ಅವ್ರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೆ ನಿಮ್ಮ ಕಥೆ ಮೊದಲ ಪ್ರೀತಿ ಅದರದು ಲಾಸ್ಟ್ ಪಾರ್ಟ್ ಸಿಕ್ಕಿಲ್ಲ ನನಗೆ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಚಿತ್ರಾ, ನಾನು ಬಹಳದಿವಸಗಳಿಂದ ಸಂಪದ ನೋಡಿಲ್ಲದಿರುವ ಕಾರಣ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗಿರಲಿಲ್ಲ. ಕ್ಷಮಿಸಿ. ನನಗೆ ಮಾಲತಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿಯದು. ಮಾಲತಿಯವರು ಈ ಕಮೆಂಟ್ ನೋಡಿದ್ದರೆ, ನೋಡಿದರೆ, ಖಂಡಿತವಾಗಿಯೂ ಉತ್ತರಿಸುವರು:-). ಇನ್ನುಳಿದಂತೆ ನಾನು ಈ ತರಹದ ಕಥೆ (ಮೊದಲ ಪ್ರೀತಿ) / ಕಥೆಗಳನ್ನು / ಲೇಖನಗಳನ್ನು ಮುಂದುವರೆಸುತ್ತೇನೆ ಎಂದು ಆ ಕ್ಷಣಕ್ಕೆ ಬರೆದು, ನಂತರ ನಾನು ಬರೆಯದಿರುವುದರಲ್ಲಿ ಬಹಳ ಪ್ರಖ್ಯಾತಿ ;-) ಸ್ವಲ್ಪ ದಿವಸಗಳ ನಂತರ ನಾನು ಬರೆದಿರುವುದನ್ನು ನಾನೇ ಓದಿ, ನಿಜವಾಗಿಯೂ ನಾನೇ ಬರೆದದ್ದು ಎಂದು ಆಶ್ಚರ್ಯ ಪಟ್ಟಿದ್ದು ಕೂಡ ಉಂಟು. ಬರೆಯಲು ಫ್ಲೋ ಸಿಗದಿದ್ದರೆ ನನ್ನ ಕೈಯಲ್ಲಿ ಬರೆಯಲಾಗುವುದೇ ಇಲ್ಲ. ಹಾಗಾಗಿ ಮುಂದುವರೆಸಿಲ್ಲ. ಅದಕ್ಕೂ ಕೂಡ ಕ್ಷಮಿಸಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಇಂಚರ‌ >>>>> ಲೇಖನಗಳನ್ನು ಮುಂದುವರೆಸುತ್ತೇನೆ ಎಂದು ಆ ಕ್ಷಣಕ್ಕೆ ಬರೆದು, ನಂತರ ನಾನು ಬರೆಯದಿರುವುದರಲ್ಲಿ ಬಹಳ ಪ್ರಖ್ಯಾತಿ ;<<<< ಪ್ರಖ್ಯಾತಿಯೋ, ಕುಖ್ಯಾತಿಯೋ ಗೊತ್ತಿಲ್ಲ‌. ಕನ್ನಡ ಪುಸ್ತಕಗಳು ನನಗಿರಲಿ ಎಂದು ಹೇಳಿ ಅಡ್ರೆಸ್ಸೇ ಇಲ್ಲದವರಿಗೆ ಏನು ಮಾಡಬೇಕು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಸ್ಮಿತಾ'ಳನ್ನು ನಿರ್ಮಾಪಕರು ಬಳಸಿದ೦ತೆಯೇ ವಿದ್ಯಾಳನ್ನು ಸ್ವಲ್ಪ ಆದರೆ ಡೀಸೆ೦ಟ್ ಆ೦ಗಲ್ ನಿ೦ದ ಬಳಸಲಾಗಿದೆ. ಸಿಲ್ಕ್ ಅ೦ತರ೦ಗದ ಪ್ರತಿಬಿ೦ಬಿಸುವ ಚಿತ್ರವ೦ತೂ ಖ೦ಡಿತ ಅಲ್ಲ. ಒ೦ದರೆಡು ಸೀರಿಯಸ್ ಡೈಲಾಗ್ ಬಿಟ್ಟರೆ ಕಾಡುವ ಚಿತ್ರವಲ್ಲ. ಸಿಲ್ಕ್ ಹೆಸರಲ್ಲಿ ದುಡ್ಡು ಮಾಡಿದ್ದಾರೆ ಅನಿಸುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆಯಲು 'ಪ್ಲೋ ' ಸಿಗುತ್ತಿಲ್ಲ... ಅದೇನು ಅಂತ ನನಗೆ ಗೊತ್ತಾಗಲಿಲ್ಲ.... ಇಂಚರ ಅವ್ರೆ ಚಿಂತಿಸಬೇಡಿ!! ನೀವೊಬ್ಬರೇ ಅಲ್ಲ, ಈ ರೀತಿ ಒಳ್ಳೆ ಕುತೂಹಲಕಾರಿ ಬರಹ ಬರದು ಆಮೇಲೆ ಬರೆಯಲು ಆಗ್ತಿಲ್ಲ ಅಂತ ಕೈ ಚೆಲ್ಲಿ ಕುಳಿತವರು... ನಾ ಸಹಾ ಮೊದ -ಮೊದಲು(ಈಗಲೂ ) ಬರಹಗಳನ್ನ ಭಲೇ 'ಉತ್ಸಾಹದಿಂದ 'ಏನೇನೂ 'ಪೂರ್ವ ತಯಾರಿ' ಇಲ್ಲದೆ ಶುರು ಮಾಡಿ ಆಮೇಲೆ ಅದನ್ನ ಹೇಗೆ 'ಮುಂದುವರೆಸುವುದೋ' ತಿಳಿಯದೆ 'ಎಲ್ಲೆಲ್ಲಿಗೋ' ಹೋಗಿ ಮುಟ್ಟಿಸಿರ್ವೆ-ಮುಟ್ಟಿಸುತ್ತಲೇ ಇರ್ವೆ:)) ಸಧ್ಯ ಅಲ್ಲದಿದ್ದರೂ ಮುಂದೆ 'ಯಾವಗಲಾರ' ನಿಮಗೆ ನಾ 'ಬರೆಯಬಲ್ಲೆ' ಅನ್ನಿಸಿದಾಗ ಬರೆಯಿರಿ, ಆದರೆ ನಿಲ್ಲಿಸಬೇಡಿ ... ಶುಭವಾಗಲಿ ಹೊಸ ವರ್ಷದ ಶುಭಾಶಯಗಳು..............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.