ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩

4.333335

 

ಮೆಂತ್ಯೆ ಬೇಳೆ ಹುಳಿ ಸೊಗಸಾಗಿತ್ತು. ಸರಸು ಅತ್ತೆ ಕೈ ಅಡುಗೆನೆ ಹಾಗೆ... [ಸಂಬಂಧದಲ್ಲಿ ಅವರು ನನ್ನ ಅತ್ತೆಯಲ್ಲ. ಅವರಿಗೆ ನನ್ನ ತಾಯಿ ವಯಸ್ಸಿರಬಹುದು. ನಾನು ಬೆಂಗಳೂರಿಗೆ ಹೊಸದಾಗಿ ಬಂದಾಗ ಅವರು ತಮ್ಮನ್ನು ಸರಸ್ವತಿ ಬಾಯಿ ಎಂದು ಪರಿಚಯಿಸಿಕೊಂಡರು.  ಕರೆಯಲು ಉದ್ದ ಹಾಗು ವಯಸ್ಸಿನಲ್ಲಿ ಹಿರಿಯರಾದ ಅವರನ್ನು ನಾನು ಅತ್ತೆ ಅಂತ ಕರೆದೆ. ಹಾಗೆ ಕರೆದ್ದಿದ್ದಕ್ಕೆ ಅವರಿಗೆ ಬೇಸರವಾಯಿತೇನೋ ಅನಿಸಿ ತಕ್ಷಣವೇ, ಕ್ಷಮಿಸಿ ಆಂಟಿ, ನಾವು ಚಿಕ್ಕಂದಿನಿಂದ ಆಂಟಿ ಅಂಕಲ್ ಅಂತ ಯಾರನ್ನೂ ಕರೆದಿಲ್ಲ. ಹಿರಿಯರಿಗೆಲ್ಲ ನಾವು ಅಣ್ಣ ಅಕ್ಕ ಅತ್ತೆ ಮಾವ ಅಂತಾನೆ ಕರೆಯೋದು. ಹಾಗಾಗಿ ನಿಮ್ಮನ್ನು ಹಾಗೆ ಕರೆದೆ. ಬೇಜಾರು ಮಾಡ್ಕೋ... ಅಯ್ಯೋ ಇಷ್ಟಿಕ್ಕೆಲ್ಲ ಬೇಜಾರ್ ಯಾಕಪ್ಪ? ಸಂಬಂಧಗಳ ಅರ್ಥಾನೆ ಗೊತ್ತಿಲ್ಲದೆ ಬದುಕುತ್ತಿರುವ ಈ ಕಾಲದಲ್ಲಿ ನೀನು ಹಾಗೆ ಕರೆದರೆ ನನಗ್ಯಾಕೆ ಬೇಜಾರ್ ಆಗತ್ತೆ ಹೇಳು? ನೀನ್ ಇನ್ಮೇಲೆ ನನ್ನ ಸರಸು ಅತ್ತೆ ಅಂತಾನೆ ಕರಿ ಅಂದಿದ್ದರು. ಆ ಹೊತ್ತಿಗೆ ಇವರಿಗೆ ವಯಸ್ಸಿಗೆ ಬಂದ  ಸಂಯುಕ್ತ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ ಎಂದು ಸತ್ಯವಾಗಿಯೂ ನನಗೆ ತಿಳಿದಿರಲ್ಲಿಲ್ಲ.]

ಸಮಯ ೯:೩೦. ಹಾಸಿಗೆ ಹಾಸಿ ಮಲಗಲು ಅಣಿಯಾಗುತ್ತಿದ್ದೆ. ಯಾವುದೋ ಗೊತ್ತಿಲ್ಲದ (BSNL) ಸಂಖ್ಯೆಯಿಂದ ಕರೆ ಬಂತು. ನಾನು ಹಲೋ ಅಂದೆ ಅಷ್ಟೆ.. ಆ ಕಡೆಯಿಂದ ಹೆಣ್ಣು ಧ್ವನಿ. ನನ್ನ ನಂಬರನ್ನು ಬ್ಲಾಕ್ ಮಾಡಬೇಡ. ನಾನು ನಿನ್ನ ಫ್ರೆಂಡ್. ನಿನಗೆ ನನ್ನ ಮೇಲೆ ನಂಬಿಕೇನೆ ಇಲ್ಲ. ಈಗ ಮನೆಗೆ ಬಂದೆ. ಅರ್ಧ ಗಂಟೆ ಟೈಮ್ ಕೊಡು..  ಮತ್ತೆ ಕಾಲ್ ಮಾಡ್ತೀನಿ. ಮಲ್ಕೊಬೇಡ ನೋಡು ಮತ್ತೆ...ನಾನು ಏನೂ ಮಾತನಾಡದ್ದಿದ್ದನ್ನು ಗಮನಿಸಿದವಳು ಓಹೋ ನಿನ್ನ ನಂಬರ್ ಹೇಗೆ ಸಿಕ್ಕಿತು ಅಂತ ಯೋಚಿಸ್ತಿದ್ಯ? ಆರ್ಕುಟ್ ಲಿ ಹಾಕಿದ್ಯ ಜ್ಞಾಪಕ ಇಲ್ವಾ? ಸರಿ ಅಮೇಲ್ ಮಾಡ್ತೀನಿ ಅಮ್ಮ ಕರಿತಿದಾರೆ ಅಂತ ಡಿಸ್ಕನೆಕ್ಟ್ ಮಾಡಿದಳು.

ಆರ್ಕುಟ್ ಅಕೌಂಟಿನ ಪ್ರೈವೆಸಿ ಸೆಟ್ಟಿಂಗ್ಸ್ ಬದಲಾಯಿಸಬೇಕೆನಿಸಿದರೂ ಈಗಾಗಲೇ ಅವಳು ನನ್ನ ಇಡೀ ಜಾತಕ ಜಾಲಾಡಿರ್ತಾಳೆ ಅನಿಸಿ ಸುಮ್ಮನಾದೆ. ಅವಳ ಧ್ವನಿ ಅಥವಾ ಅದೇ ಹೋಲಿಕೆಯದೋ.. ಎಂದೋ ಯಾವಾಗಲೋ ಕೇಳಿದೀನಿ ಅನಿಸಿ ಯಾರಿರಬಹುದು ಎಂದು ಅವಳ ಧ್ವನಿಯನ್ನು ಮನಸಿನಲ್ಲೇ ರೀವೈಂಡ್ ಮಾಡಿಕೊಂಡು ಕೇಳತೊಡಗಿದೆ. ಹದಿನೈದು ನಿಮಿಷಗಳ ಕಾಲ ದೀರ್ಘಾಲೋಚನೆಯಲ್ಲಿ ಮುಳುಗಿದ್ದ ಮನಸ್ಸು, ೩ ಜನರ ಪಟ್ಟಿಯನ್ನು ಸಿದ್ದಪಡಿಸಿತ್ತು. ಆ ಪಟ್ಟಿಯಲ್ಲಿದ್ದ ಮೊದಲ ಹೆಸರು ತಿಕ್ಲಿ, ಎರಡನೆಯದು ಸಂಗೀತ, ಮೂರನೇ ಹೆಸರು ಶೈಲಾ.

ನನ್ನ ಇಂಜಿನಿಯರಿಂಗ್ ಕೋರ್ಸಿನ ಕಡೆಯ ವರ್ಷದಲ್ಲಿ ಮೈಕ್ರೋಕಂಟ್ರೋಲರ್ ಪಾಠ ಮಾಡುತ್ತಿದ್ದ ಮೇಡಂ ತಿಕ್ಲಿ. ಅವಳ ಹೆಸರು ಸೌಮ್ಯ.. ಅವಳಾಡುತ್ತಿದ್ದ ರೀತಿ, ನಡೆಯುತ್ತಿದ್ದ ಹಾವಭಾವ, ಮಾತಾಡಿದರೆ ಮುಂಗೋಪ ಇವೆಲ್ಲ ನೋಡಿ ನಾವಿಟ್ಟಿದ್ದ ಹೆಸರು ತಿಕ್ಲಿ. ವಾರಕ್ಕೆ ನಾಕು ದಿನ ಎಂಟಕ್ಕೆ ಶುರು ಆಗ್ತಿದ್ದ ಮೊದಲ ಪೀರಿಯಡ್ ಅವಳದೇ. ಸರಿಯಾಗಿ ಎಂಟಕ್ಕೆ ಬಂದು ಬಾಗಿಲು ಮುಚ್ಚಿಬಿಡುತ್ತಿದ್ದಳು. ೮:೦೧ಕ್ಕೆ ಬಂದರೂ ಒಳ ಸೇರಿಸುತ್ತಿರಲಿಲ್ಲ. ಸಾರಿ ಗೀರಿ ಅಂತ ಗೋಗರೆದರೆ ಒಳ ಬಿಡುತ್ತಿದ್ದರೂ ಜಪ್ಪಯ್ಯ ಅಂದರೂ ಪ್ರೆಸೆಂಟ್ ಮಾರ್ಕ್ ಹಾಕುತ್ತಿರಲ್ಲಿಲ್ಲ. ಮೂರು ವರ್ಷದಲ್ಲಿ ಒಂದು ದಿನವೂ ಸರಿಯಾದ ಸಮಯಕ್ಕೆ ಹೋಗದ ನಾವುಗಳು ಈಗ ಬೇಗ ಬರಲು ಸಾಧ್ಯವೇ ಇರಲಿಲ್ಲ. ಒಂದು ತಿಂಗಳು ಕಳೆದರೂ ನಮ್ಮ ನಾಲ್ಕೈದು ಮಂದಿಗೆ ಮೈಕ್ರೋಕಂಟ್ರೋಲರ್ ಸಬ್ಜೆಕ್ಟಿನಲಿ ಝೀರೋ ಪರ್ಸೆಂಟ್ ಅಟೆಂಡನ್ಸ್ ಇತ್ತು. ಇವಳಿಗೆ ಸರಿಯಾದ ಪಾಠ ಕಲಿಸಬೇಕೆಂದು ನಾವೆಲ್ಲಾ ಕಾಯುತ್ತಿದ್ದೆವು.

ಒಂದು ದಿನ ನಮ್ಮ ರೆಗ್ಯುಲರ್ ಸಮಯ ೮:೨೫ಕ್ಕೆ ಬಂದು ಕ್ಲಾಸಿನ ಬಾಗಿಲಲ್ಲಿ ಇಣುಕಿದೆವು. VLSI ನ ಡ್ರಾಕುಲ ಪಾಠ ಮಾಡುತ್ತಿದ್ದಳು. [ಡ್ರಾಕುಲ ಫೇಸ್ ಕಟ್ ಇದ್ದ ಮಾನಸಾಳಿಗೆ ನಾವಿಟ್ಟಿದ್ದ ಅಡ್ಡ ಹೆಸರು]. ನಾವೆಲ್ಲಾ ಒಳ ತೂರಿದಾಗ ಸಂಗೀತ ಎದ್ದು ಬಂದು ನನ್ನ ಪಕ್ಕಕ್ಕೆ ಕೂತು, ಡಾರ್ಲಿಂಗ್ ಗೊತ್ತಾಯ್ತ ವಿಷ್ಯ ಅಂದ್ಲು. ಏನೇ ಅದು ಅಂದೆ .. ಇವತ್ತು ತಿಕ್ಲಿ ಕಾಲೇಜಿಗೆ ಬರೋದು ಲೇಟ್ ಆಯ್ತಂತೆ ಅದಿಕ್ಕೆ ಎರಡನೇ ಪೀರಿಯಡ್ ಬರಬೇಕಿದ್ದ ಡ್ರಾಕುಲ ಈಗ ಬಂದಿದೆ. ತಿಕ್ಲಿ ಡ್ರಾಕುಲಳ  ಕ್ಲಾಸ್ ತೊಗೊತಾಳಂತೆ. ಆಹಾ.. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನಾನು, ಇವತ್ತಿದೆ ತಡಿ ಮಾಡ್ತೀನಿ ಅವ್ಳಿಗೆ ಸರಿಯಾಗಿ ಅಂತ ನನ್ನ ಗೆಳೆಯರಿಗೆ, ಇವತ್ ಅವ್ಳಿಗೆ ನಾನ್  ಬಾಗ್ಲ್ ಹಾಕ್ತೀನಿ ಅದೇಗೆ ಒಳಕ್ ಬರ್ತಾಳೋ ನೋಡ್ತೀನಿ ನೀವ್ ಏನಂತೀರ? ಅಂದೆ. ಹೇ ಹೇ ಸೂಪರ್ ಗುರು ಹಾಗೆ ಮಾಡು ನಾವು ಸಪೋರ್ಟ್ ಮಾಡ್ತೀವಿ ಅಂತ ಭರವಸೆ ಕೊಟ್ರು.

ನಾ ಹೇಳಿದಂತೆ ಮಾಡಿದೆ. ಅವಳಿಗೆ ಇದು ನಿನ್ನ ಕ್ಲಾಸ್ ಅಲ್ಲ ಸೊ ನಾನು ನಿನ್ನ ಒಳಕ್ಕೆ ಬಿಡೋಲ್ಲ.. ನಾಳೆಯಿಂದ ಸರಿಯಾದ ಟೈಮಿಗೆ ಬಂದು ಕ್ಲಾಸ್ ತೊಗೊ ಅಂತ ದಬಾಯಿಸಿದೆ. ಆ ದಿನ ಸಂಜೆಯೇ ಬಂದ ಬದಲಾದ ಟೈಮ್ ಟೇಬಲ್ ನಲ್ಲಿ ತಿಕ್ಲಿಗೆ ಎರಡನೇ ಪೀರಿಯಡ್ ನೀಡಿದ್ದರು. ಅಂದಿನಿಂದ ನನ್ನ ಮೇಲೆ ಹಗೆ ಸಾಧಿಸಲು ಶುರು ಮಾಡಿದ್ದ ತಿಕ್ಲಿ ನನ್ನನ್ನು ಒಂದಿಲ್ಲೊಂದು ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಕಾಯುತ್ತಿದ್ದಳು. ಅವಳ ಬುದ್ದಿ ಅರಿತಿದ್ದ ನಾನು, ಅವಳ ಯಾವ ತಂತ್ರಗಳಿಗೂ ಸೋಲಲಿಲ್ಲ. ಕಾಲೇಜಿನ ಕಡೆಯ ದಿನ ಆಕೆ ನನ್ನ ಬಳಿ ಬಂದು ನಿನ್ನ ಬಿಡಲ್ಲ ನೋಡ್ತಿರು ನಿಂಗೇನ್ ಮಾಡ್ತೀನಿ ಅಂತ ನನ್ನ ಕಡೆ ಅಂಗುಷ್ಠವನ್ನಾಡಿಸುತ್ತಾ ಹೋಗಿದ್ದಳು.

ಈಗಷ್ಟೇ ಫೋನಿನಲ್ಲಿ ಕೇಳಿದ ಧ್ವನಿ ತಿಕ್ಲಿಯ ಧ್ವನಿ ತರಾನೆ ಇತ್ತು. ಅವಳೇನಾ ಈ ಕೆಲಸ ಮಾಡ್ತಿರೋದು? ಅಂತ ಯೋಚಿಸುತ್ತಿರುವಾಗಲೇ, ನಾಕು ದಿನದ ಹಿಂದಷ್ಟೇ ಗೆಳೆಯ ಸಂತು ಹೇಳಿದ್ದ [" ಲೇ ತಿಕ್ಲಿಗೆ ಮದ್ವೆ ಆಯ್ತಂತೆ.. ಹೋದವಾರ ಅಷ್ಟೇ ಅಮೆರಿಕಗೆ ಹೋದಳಂತೆ. ನನ್ನ ಚಿಕ್ಕಮ್ಮ ಹೇಳುದ್ರು "] ಮಾತು ನೆನಪಾಗಿ,  ಅವಳಲ್ಲ ಸದ್ಯ. ಉಫ್ ಅಂತ ನಿಟ್ಟುಸಿರು ಬಿಟ್ಟೆ.

ಎಂಟನೆ ಸೆಮಿಸ್ಟರ್ ರಿಸಲ್ಟ್ ಬಂದ ದಿನ 'ಐ ಲವ್ ಯು' ಅಂತ ಹೇಳಿ ನನ್ನ ಬೆಚ್ಚಿ ಬೀಳಿಸಿದ್ದ ಸಂಗೀತ ಏನಾದರೂ ಆಟವಾಡಲು ಈ ರೀತಿ ಮಾಡ್ತಿದ್ದಾಳ ಅನಿಸಿ ಏಕಕಾಲಕ್ಕೆ ಸಂಗೀತಾಳಿಗೂ ಹಾಗೂ ಇನ್ನೊಂದು ಮೊಬೈಲಿಂದ ಈ ಅನ್ನೋನಿಗೂ ಕರೆ ಮಾಡಿ, ಎರಡು ಕಿವಿಯಲ್ಲೂ ಒಂದೊಂದು ಫೋನ್ ಇಟ್ಟುಕೊಂಡೆ. ಮೂರನೇ ರಿಂಗಿಗೆ ರಿಸೀವ್ ಮಾಡಿದ ಸಂಗೀತ - ಏ ಗೂಬೆ ಯಾಕೋ ಇಷ್ಟೊತ್ತಲ್ಲಿ ಕಾಲ್ ಮಾಡಿದ್ಯ? ಆಯ್ತಾ ಊಟ? .. ಅವಳ ಧ್ವನಿ ಕಡೆಗೆ ಲಕ್ಷ್ಯ ಇಟ್ಟಿದ್ದ ನಾನು ಏನೂ ಮಾತಾಡದ್ದಿದ್ದಾಗ, ಏನಾಯ್ತೋ? ಅಂತ ಜೋರಾಗಿ ಕಿರುಚಿದಳು. ಎಚ್ಚೆತ್ತ ನಾನು - ಏನಿಲ್ಲ ಸುಮ್ನೆ ಮಾಡ್ದೆ. ಹು ಊಟ ಆಯ್ತು. ನಿಂದು? ಆ ಅನ್ನೋನ್ ನ ಮೊಬೈಲ್ ಇನ್ನು ರಿಂಗ್ ಆಗುತ್ತಿತ್ತು.  ಸಂಗೀತ - ನಂದು ಊಟ ಆಯ್ತು.. ನಿದ್ದೆ ಬರ್ತಿದೆ.. ಮಲ್ಕೊಬೇಕು ನಾಳೆ ಮಾಡ್ತೀನಿ ಗು.. ಅಂತ ಹೇಳೋಷ್ಟರಲ್ಲಿ ನಾನು ತಡ್ಯೆ ಅನ್ನಕ್ಕು ಈ ಅನ್ನೋನ್ ಕಾಲ್ ರಿಸೀವ್ ಮಾಡಕ್ಕು ಸರಿ ಹೊಂದಿತು.

ಅನ್ನೋನ್ - ನಾನೇ ಕಾಲ್ ಮಾಡ್ತೀನಿ ಅಂದ್ರು ನೀನೆ ಯಾಕೋ ಮಾಡ್ದೆ?

ಸಂಗೀತ - ಯಾಕೋ.. ನಂಗೆ ನಿದ್ದೆ ಬರ್ತಿದೆ. ನಾಳೆ ಮಾತಾಡೋಣ

ನಾನು - ಸರಿ

ಸಂಗೀತ - ಗುಡ್ ನೈಟ್. ಟೇಕ್ ಕೇರ್

ಅನ್ನೋನ್ - ಓಕೆ. ಟೆನ್ ಮಿನಿಟ್ಸ್....  ಮಾಡ್ತೀನಿ. ಬೈ.

ಅಬ್ಬಾ.. ಸಂಗೀತಾನೂ ಅಲ್ಲ.. ಇನ್ನ ನನ್ನ ಸಂಶಯ ಏನಿದ್ದರೂ ಶೈಲಾ ಮೇಲೆಯೇ. ಅದು ಪರಿಹಾರ ಆಗಬೇಕೆಂದರೆ ಹತ್ತಿರದಲ್ಲೇ ಇದ್ದ ಗೆಳೆಯ ಕಿಟ್ಟಿ ಮನೆಗೆ ಹೋಗಬೇಕು. ತಕ್ಷಣವೇ ಮನೆ ಬೀಗ ಹಾಕಿ ಗಾಡಿ ಹೊರ ತೆಗೆದೆ. ಸಂಯುಕ್ತ ಹೊರ ಬಂದು ಎಲ್ಲಿಗೆ ಅಂತ ಕೈ ಸನ್ನೆ ಮಾಡಿದರೂ ಆಮೇಲೆ ಹೇಳ್ತೀನಿ ಅಂತ ಸನ್ನೆ ಮಾಡಿ ಗಾಡಿ ಏರಿದೆ. ಉದಯ ಭಾನು ಕಲಾ ಸಂಘದ ಹತ್ತಿರದಲ್ಲೇ ಇದ್ದ ಕಿಟ್ಟಿ ಮನೆ ಕಡೆ ಗಾಡಿ ಓಡಿಸಿದೆ. ಶೈಲಾ ತೀರ ಇತ್ತೀಚಿನವರೆಗೂ ನಮ್ಮಲ್ಲೇ ಕೆಲಸ ಮಾಡುತ್ತಿದ್ದಳು. ನನ್ನ ಟೀಮಿನಲಿ ಒಂದು ಓಪನಿಂಗ್ ಇದ್ದಾಗ ಆ ಜಾಗಕ್ಕೆ ಹುಡುಗಿಯನ್ನೇ ತರಬೇಕೆಂದು ನನ್ನ ಟೀಂ ಮೇಟ್ಸ್ ಟೀಂ ಲೀಡ್ ಆಗಿದ್ದ ನನಗೆ ಒತ್ತಡ ಹಾಕಿದ್ದರು. ೩-೪ ಹುಡುಗಿಯರ ಪ್ರೊಫೈಲ್ ಗಳನ್ನು HR ಕಳುಹಿಸಿದ್ದರೂ ಅವರ್ಯಾರೂ ಇಂಟರ್ವ್ಯೂ ಕ್ಲಿಯರ್ ಮಾಡಲ್ಲಿಲ್ಲ.

ಅದೇ ಸಮಯದಲ್ಲಿ ಗೆಳೆಯ ಕಿಟ್ಟಿ ರೆಫರ್ ಮಾಡಿದ ಹುಡುಗಿಯೇ ಶೈಲಾ. ನೋಡಲು ಸುಂದರವಾಗಿದ್ದರೂ ತಲೆಯಲ್ಲಿ ಬುದ್ದಿ ಅಷ್ಟೇನೂ ಇರಲ್ಲಿಲ್ಲ. ಕಿಟ್ಟಿಯ ಗೆಳತಿ ಹಾಗು ಅವಳ ಮನೆಯ ಪರಿಸ್ಥಿತಿ ನೋಡಿ ನಾನೇ ಸೆಲೆಕ್ಟ್ ಮಾಡಿದ್ದೆ. ಹುಡುಗಿ ಹೇಗೋ ಆಮೇಲೆ ಕಿರಿಕ್ ಆಗಬಾರದೆಂದು ಮುನ್ನೆಚ್ಚೆರಿಕೆ ವಹಿಸಿ ೩ ತಿಂಗಳು ಟ್ರೈನಿ ನಂತರ ಪರ್ಫಾರ್ಮೆನ್ಸ್ ನೋಡಿ ಪರ್ಮನೆಂಟ್ ಮಾಡ್ತೀವಿ ಅಂತ ಹೇಳಿ ಆಫರ್  ಲೆಟರ್ ಕೊಡಿಸಿದ್ದೆ. ನೋಡನೋಡುತ್ತಿದ್ದಂತೆ ೩ ತಿಂಗಳು ಕಳೆಯಿತು. ತನ್ನ ವಯ್ಯಾರದಿಂದ ಎಲ್ಲರನ್ನ ಬುಟ್ಟಿಗೆ ಹಾಕಿಕೊಂಡಿದ್ದ ಶೈಲಾ, ತನ್ನ ಕೆಲಸವನ್ನು ಬೇರೆಯವರ ಕೈಲಿ ಮಾಡಿಸಿಕೊಳ್ಳುವುದರಲ್ಲಿ ನಿಪುಣೆಯಾಗಿಬಿಟ್ಟಿದ್ದಳೆ ವಿನಃ ತಾನು ಸ್ವತಃ ಏನನ್ನೂ ಕಲಿತಿರಲಿಲ್ಲ. ಹಾಗಾಗಿ ನಾನು ಅವಳ ಟ್ರೈನಿಂಗ್ ಪೀರಿಯಡ್ ಅನ್ನು ಇನ್ನು ಮೂರು ತಿಂಗಳ ಕಾಲ ವಿಸ್ತರಿಸಿದೆ. ಇದನ್ನು ಸಹಿಸದ ಅವಳು ನನ್ನ ವಿರುದ್ದವೇ ತಿರುಗಿಬಿದ್ದಳು. ಎಲ್ಲರ ಹತ್ತಿರ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾತಾಡಲು ಶುರು ಮಾಡಿದ್ದಳು. ಕೇವಲ ೩ ತಿಂಗಳಲ್ಲಿ ತಾನು ಎಲ್ಲರ ವಿಶ್ವಾಸ ಗಳಿಸಿದ್ದೀನಿ ನನ್ನ ಮಾತನ್ನು ಎಲ್ಲರೂ ನಂಬುತ್ತಾರೆ ಅನ್ನೋ ಅಹಂ ಭಾವ ತುಂಬಿಕೊಂಡು ನನ್ನ ವಿರುದ್ದ ಹಗೆ ಬೆಳೆಸಿಕೊಂಡಳು.  ಮೂರು ವರ್ಷದಿಂದ ನನ್ನ ಕೆಳಗೆ ಕೆಲಸ ಮಾಡುತ್ತಿದ್ದ ಹುಡುಗರಿಗೆ ನಾನು ಎಂತವನೆಂದು ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಶೈಲಾ ಅವರುಗಳ ಬಳಿ ಆಡುತ್ತಿದ್ದ ಒಂದೊಂದು ಮಾತು ನನಗೆ ತಲುಪುತ್ತಿತ್ತು. ೨-೩ ಬಾರಿ ಕರೆದು ಅವಳಿಗೆ ಬುದ್ದಿ ಹೇಳಿದರೂ ಪ್ರಯೋಜನವಾಗಲಿಲ್ಲ. ೩ ತಿಂಗಳು ಕಳೆಯುವುದರೊಳಗೆ ನನ್ನ ಸಹನೆಯೂ ಮೀರಿತ್ತು. ಹಾಗಾಗಿ ಅವಳನ್ನು ಕಂಪನಿಯಿಂದ ಫೈರ್ ಮಾಡಲು ಮ್ಯಾನೆಜ್ ಮೆಂಟಿಗೆ ಶಿಫಾರಸ್ಸು ಮಾಡಿ ಅವಳನ್ನು ಕೆಲಸದಿಂದ ತೆಗೆಸಿ ಹಾಕಿದೆ. ತನ್ನ ಕೆಲಸದ ಕಡೆಯ ದಿನ ನನ್ನ ಟೇಬಲ್ ಗೆ  ಬಂದು ನಿನ್ನ ನೋಡ್ಕೋತೀನಿ ಅಂತ ಹೇಳಿದ್ದಳು.

ಕಿಟ್ಟಿ ಆಗ ತಾನೇ ಊಟ ಮುಗಿಸಿ ಕಾಂಪೌಂಡ್ ನಲ್ಲಿ ಬಂದು ನಿಂತಿದ್ದವ ನನ್ನ ನೋಡಿದ ಕೂಡಲೇ ಏನ್ಲಾ ಈ ಕಡೆ ಇಷ್ಟೊತ್ತಿಗೆ? ಅಂದ. ನಿನ್ನೆ ನೋಡಕ್ಕೆ ಬಂದೆ ಒಂದ್ ಹೆಲ್ಪ್ ಆಗಬೇಕಿತ್ತು ಅಂದೇ.ಏನೋ ಅದು ಬಾ ಒಳಗೆ ಅಂತ ಅವನ ರೂಮಿಗೆ ನಡೆದೆವು. ನನ್ನ ಮೊಬೈಲ್ ನೋಡಿದರೆ ಆ ಅನ್ನೋನ್ ಇಂದ ಮಿಸ್ಡ್ ಕಾಲ್ ಇತ್ತು. ಇದೆ ಸರಿಯಾದ ಸಮಯವೆಂದು ಭಾವಿಸಿ, ಕಿಟ್ಟಿಗೆ ನೀನು ಈಗಲೇ ಶೈಲಾಳಿಗೆ ಕಾಲ್ ಮಾಡೆಂದು ಹೇಳಿ ನಾನು ಅನ್ನೋನ್ ನಿಗೆ ಕಾಲ್ ಮಾಡಿದೆ. ಶೈಲಾ ರಿಸೀವ್ ಮಾಡುತ್ತಿದ್ದಂತೆ ಸ್ಪೀಕರ್ ಆನ್ ಮಾಡುವಂತೆ ಕಿಟ್ಟಿಗೆ ಹೇಳಿದೆ. ಇಬ್ಬರೂ ಒಟ್ಟಿಗೆ ರಿಸೀವ್ ಮಾಡಿದರು. ಇಬ್ಬರ ಧ್ವನಿಯೂ ಆಲ್ಮೋಸ್ಟ್ ಸೇಮ್.. ಆದರೆ ಅವರು ಬೇರೆ ಬೇರೆ. ಕಿಟ್ಟಿಗೆ ನಡೆದ್ದದ್ದನ್ನು ತಿಳಿಸಿ ಗುಡ್ ನೈಟ್ ಹೇಳಿ ಮನೆಗೆ ಬಂದೆ.

ಅನ್ನೋನ್ ಮತ್ತೆ ಕಾಲ್ ಮಾಡಿ ಆಗ್ಲೇ ಯಾಕೋ ಕಟ್ ಮಾಡಿದೆ? ಅಂತ ಕೇಳುತ್ತಿದ್ದಳು.

ನಾನು - ನನಗೆ ನಿದ್ದೆ ಬರ್ತಿದೆ ಮಲ್ಕೊಬೇಕು ದಯವಿಟ್ಟು ಕಾಟ ಕೊಡಬೇಡ ಫೋನ್ ಇಡು.

ಅನ್ನೋನ್ - ನಾನು ನಿನ್ ಜೊತೆ ಮಾತಾಡಬೇಕು.

ನಾನು - ನೀನ್ಯಾರಂತಾನೆ ನಂಗೊತ್ತಿಲ್ಲ ನಿನ್ ಜೊತೆ ನಂ ಮಾತೇನು ಇಲ್ಲ.

ಅನ್ನೋನ್ - ನಾನು ನಿನ್ನ ಫ್ರೆಂಡ್.

ನಾನು - ಸರಿ. ನಾಳೆ ಚಾಟ್ ಮಾಡೋಣ.

ನನ್ನ ಮೊಬೈಲ್ ನಂಬರ್ ಸಿಕ್ಕಿರುವಾಗ ಚಾಟ್ ಲಿ ಬ್ಲಾಕ್ ಮಾಡಿದರೆ, ಅದರಿಂದ ನನಗೆ ಕಿರಿಕಿರಿ ಜಾಸ್ತಿ ಆಗುತ್ತೆ ಅನಿಸಿ ಅನ್ ಬ್ಲಾಕ್ ಮಾಡಲು ತೀರ್ಮಾನಿಸಿದ್ದೆ.

ಅನ್ನೋನ್ - ಚಾಟ್ ಬ್ಲಾಕ್ ಮಾಡಿದ್ಯಲ್ಲ? ಒಳ್ಳೇದೆ ಆಯಿತು. ಡೈರೆಕ್ಟ್ ಆಗಿ ಫೋನಲ್ಲೇ ಮಾತಾಡಬಹುದು.

ನಾನು - ಇಲ್ಲ ಇಲ್ಲ .. ನಾಳೆ ಅನ್ ಬ್ಲಾಕ್ ಮಾಡ್ತೀನಿ. ಅಲ್ಲೇ ಚಾಟ್ ಮಾಡು. ಕಾಲ್ ಮಾಡ್ಬೇಡ.

ಅನ್ನೋನ್ - ಗುಡ್ ಬಾಯ್. ನಾಳೆ ೨ ಗಂಟೆಗೆ ಆನ್ಲೈನ್ ಬರ್ತೀನಿ. ಅನ್ ಬ್ಲಾಕ್ ಆಗಿಲ್ಲ ಅಂದ್ರೆ ಮತ್ತೆ ಕಾಲ್ ಮಾಡ್ತೀನಿ.

ನಾನು - ಸರಿ ಸರಿ. ಗುಡ್ ನೈಟ್

ಅನ್ನೋನ್ - ಗುಡ್ ನೈಟ್. ಸ್ವೀಟ್ ಡ್ರೀಮ್ಸ್

 

ಗಂಟಲು ಕೆರೆತದ ಜೊತೆಗೆ ಸ್ವಲ್ಪ ಮೈ ಕೈ ನೋವು ಇತ್ತು. ಒಂದು ವಿಕೊರಿಲ್ ಮಾತ್ರೆ ನುಂಗಿ ಮಲಗಿದೆ. ಮಾತ್ರೆಯ ಪ್ರಭಾವಕ್ಕೆ ರಾತ್ರಿ ನಿದ್ದೆ ಬಂದಿತ್ತು. ನಾನು ಅವಳ ಮೊಬೈಲ್ ನಂಬರ್ನ ಬ್ಲಾಕ್ ಮಾಡಬಹುದಿತ್ತು.

ಆದರೂ ನಾನ್ಯಾಕೋ ಅವಳ ನಂಬರ್ನ ಬ್ಲಾಕ್ ಲಿಸ್ಟಿನಲಿ ಸೇರಿಸುವ ಕೆಲಸ ಮಾಡಲ್ಲಿಲ್ಲ ಬದಲಾಗಿ ಆ ನಂಬರ್ನ Unknown ಅಂತ ಸೇವ್ ಮಾಡಿಕೊಂಡೆ ಹಾಗು ಅವಳ ಇಮೇಲ್ ID  ಸಹ Unknown ಎಂದು ಬದಲಾಯಿಸಿಕೊಳ್ಳಲು ತೀರ್ಮಾನಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬರಹ ಚೆನ್ನಾಗಿ ಮೂಡಿಬರುತ್ತಿದೆ. ಈ ಅನ್ ನೋನ್ ಕರೆಗಳೇ ಹೀಗೆ ನಿದ್ದೆ ಕೆಡಿಸಿಬಿಡುತ್ತವೆ ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಮತ‌ ಅವರೆ :) ಯಾವುದೊ ಅನ್ ನೊನ್ ನ0ಬರ್ ಯಿ0ದ‌ ಕರೆ ಮಿಸ್ಸಾದಾಗ‌, ನಾವು ತಿರುಗಿ ಕರೆ ಮಾಡಿದಾಗ‌ ಅವರು ಸ್ವೀಕರಿಸದ್ದಿದ್ದರೆ ಆಗುವ‌ ಕುತೂಹಲ‌ ವರ್ಣಿಸಲು ಅಸಾಧ್ಯ‌ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.