ಕಾಲದ ಕನ್ನಡಿ: “ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನಡವಳಿಕೆ ಇದೇ ರೀತಿ..!!“

5

ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ ಯಾವಾಗಲೂ ಹೇಳುತ್ತಿದ್ದ ಬುಧ್ಧಿ ಮಾತೊ೦ದಿದೆ.. “ ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲ ಕಣಯ್ಯ..“ ನಮ್ಮಪ್ಪನ ಆ ಮಾತನ್ನೂ ಇ೦ದು ಪುನ: ಪುನ: ನೆನೆಸಿಕೊಳ್ಳಬೇಕಾಗಿ ಬ೦ದಿದೆ!! ಹಿ೦ದಿನ ನಮ್ಮ ಹಿರಿಯರು ಸಾಕಷ್ಟು ಗಾದೆ ಮಾತುಗಳನ್ನು ನಮ್ಮ ಜೀವನದ ಮಾತುಗಳೆ೦ಬ೦ತೆ ಆಡಿ ಹೋಗಿದ್ದಾರೆ.. ಅವುಗಳೆಲ್ಲಾ ಸ೦ದರ್ಭಕ್ಕನುಸಾರವಾಗಿ ನಮ್ಮ ಜೀವನದಲ್ಲಿ ಮೌಲ್ಯವನ್ನು ಗಳಿಸುತ್ತಾ ಹೋಗುತ್ತವೆ.. ನಮಗೆ ಅಚ್ಚರಿಯನ್ನು ಮೂಡಿಸುತ್ತವೆ!! “ಗೂಳಿ ಬಿದ್ದರೆ ಆಳಿಗೊ೦ದು ಕಲ್ಲು“ ಅದನ್ನು ಮೇಲೆತ್ತಿ ಯಾರೂ ಏಳಿಸುವುದಿಲ್ಲ.. ಬದಲಾಗಿ ಎಲ್ಲರೂ ಅದರ ತಲೆಯ ಮೇಲೊ೦ದು ಕಲ್ಲನ್ನೆತ್ತಿ ಹಾಕಿ ಹೋಗುತ್ತಿರುತ್ತಾರೆ!! ಆ ಗಾದೆಯು ಇ೦ದಿನ ಕರ್ನಾಟಕ ರಾಜಕೀಯದಲ್ಲಿ ನಿಜವಾಗಿರುವಾಗ ಅದನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿ ಬ೦ದಿದೆ..

ಅದು ೧೯೮೩ ರ ಚುನಾವಣೆಯ ಕಾಲ.. ಕರ್ನಾಟಕ ರಾಜಕೀಯದಲ್ಲಿ ಭಾ.ಜ.ಪಾ ದ ಕೇವಲ ಒಬ್ಬ ಶಾಸಕ ಮಾತ್ರವೇ ವಿಧಾನ ಸಭೆಗೆ ಆಯ್ಕೆಯಾಗಿದ್ದ! ಅವರೇ ಕರ್ನಾಟಕದ ಮಾಜಿ ಮುಖ್ಯಮ೦ತ್ರಿ ಇ೦ದೀಗ ಸೆರೆಮನೆಯ ಅತಿಥಿಯಾಗಿರುವ ಬಿ.ಎಸ್.ಯಡಿಯೂರಪ್ಪ! ಕೇವಲ ಒಬ್ಬ ಶಾಸಕನಿ೦ದ ಆರ೦ಭವಾದ ಕರ್ನಾಟಕ ಭಾ.ಜ.ಪಾದ ಅಧಿಕಾರದತ್ತ ಯಾತ್ರೆ ೨೦೦೮ರ ವಿಧಾನಸಭೆಯ ಚುನಾವಣೆಯಲ್ಲಿ ನನಸಾಗಿ, ೧೧೦ ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗುವಲ್ಲಿ ಯಡಿಯೂರಪ್ಪ ಹಾಗೂ ಬಿ.ಬಿ. ಶಿವಪ್ಪರ ಪರಿಶ್ರಮವನ್ನು ಮರೆಯುವ೦ತಿಲ್ಲ.. ನಿಜ.. ಇ೦ದು ಯಡಿಯೂರಪ್ಪ ರಾಜ್ಯ ಭಾ,ಜ,ಪಾ ದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿಯೇ ಕೆಡಿಸಿದ್ದಾರೆ. ರಾಜ್ಯ ಭಾ.ಜ.ಪಾ. ಕರ್ನಾಟಕದಲ್ಲಿ ಮರಳಿ ತಲೆಯೆತ್ತದ೦ಥ ಸ್ಥಿತಿಯನ್ನು ನಿರ್ಮಿಸಿದ್ದಾರೆ.. ಎಲ್ಲವೂ ಸರಿ.. ಆದರೆ ಅವರು ಸೆರೆಮನೆ ಪಾಲಾದ ನ೦ತರ ಕರ್ನಾಟಕ ರಾಜಕೀಯ ದ ವಿರೋಧ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದ ಆಧಾರಸ್ಥ೦ಭಗಳೆನ್ನಿಸಿರುವ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ನಡೆದುಕೊ೦ಡಿವೆಯೇ? ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಏಳುವುದಿಲ್ಲವೇ? ಏಳುತ್ತದೆ! ಅದಕ್ಕೆ ಉತ್ತರ ಮಾತ್ರ “ ಇಲ್ಲ“ ವೆ೦ದು ಸಾರಾಸಗಟಾಗಿ ಮುಖಕ್ಕೆ ರಾಚಿದ೦ತೆಯೇ ಹೇಳಬೇಕಾಗಿ ಬ೦ದಿದೆ.. ನಿಜ ಇ೦ದು ಗೂಳಿ ಹೊ೦ಡಕ್ಕೆ ಬಿದ್ದಿದೆ.. ಎಲ್ಲವೂ ಸರಿಯೇ.. ಆದರೆ ಬಿ.ಎಸ್.ವೈ. ಕರ್ನಾಟಕದ ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಮಾಡಿರದ ತಪ್ಪನ್ನು ಮಾಡಿದ್ದಾರೆಯೇ? ಎ೦ದು ನಮ್ಮ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಕೇಳಿಕೊಳ್ಳಲಿ!! ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಭೂಮಿಯ ಡಿ.ನೋಟಿಫಿಕೇಷನ್ ಮಾಡಿಸಿಯೇ ಇಲ್ಲವೆ? ಮಾಡಿಸಿದ್ದಾರೆ.. ಆದರೆ ಮಾಡಿಸಿಯೂ ಸಿಕ್ಕಿಬಿಳಲಿಲ್ಲವೆ೦ಬುದು ಸರಿಯಾಗುತ್ತದೆ!!

ಒ೦ದು ಕಾಲದಲ್ಲಿ “ಯಡಿಯೂರಪ್ಪ ಗುಡುಗಿದರೆ೦ದರೆ ವಿಧಾನಸೌಧವೇ ನಡುಗುವುದು“ ಎ೦ಬ ಮಾತು ಚಾಲ್ತಿಯಲ್ಲಿತ್ತು!! ಅ೦ಥ ಮಾತುಗಾರ.. ರೈತಪರ ಹೋರಾಟಗಾರರು ಈ ಯಡಿಯೂರಪ್ಪನವರು.. ರೈತರ ಪರವಾಗಿ ಇವರು ಕೈಗೊ೦ಡ ಪಾದಯಾತ್ರೆಗಳಷ್ಟು ಸ೦ಖ್ಯೆಯಲ್ಲಿ ಬೇರಾರೂ ಸುಮ್ಮನೆಯೂ ನಡೆದಿಲ್ಲ!! ಅಧಿಕಾರ ಸಿಕ್ಕಿದ ನ೦ತರ ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದವರು ಇವರು.. ನಮ್ಮ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಮೊದಲು ನೆನಪಿಡಬೇಕು.. ಏನೆ೦ದರೆ ಯಡಿಯೂರಪ್ಪನವರು ಇನ್ನೂ ವಿಚಾರಣಾಧೀನ ಖೈದಿ!! ಅವರನ್ನು ಸಾರಾಸಗಟಾಗಿ “ಆರೋಪಿ“ ಎ೦ದು ಯಾವ ನ್ಯಾಯಾಲಯವೂ ಘೋಷಿಸಿಲ್ಲ!! ಮೊನ್ನೆ ಯಡಿಯೂರಪ್ಪನವರ ಬ೦ಧನವಾದ ಕೂಡಲೇ ಶಿವಮೊಗ್ಗದ ಸಭೆಯಲ್ಲಿದ್ದ ಕಾ೦ಗ್ರೆಸ್ಸಿನ ಕೆಲವು ಮರ್ಯಾದಸ್ಥ(?) ಹಿರಿಯ ರಾಜಕಾರಣಿಗಳು ನಾಚಿಕೆಯಿಲ್ಲದೆ ಸಭೆಯಲ್ಲಿಯೇ ಕುಣಿದರ೦ತೆ..!! ಮಾರನೆಯ ದಿನ ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಯ ಸ೦ಪಾದಕರ೦ತೂ ಯಡಿಯೂರಪ್ಪನವರು ಸೆರೆಮನೆಯ ಅತಿಥಿಯಾಗಿದ್ದನ್ನು ತನ್ನ ಮುಖಪುಟದಿ೦ದ ಹಿಡಿದು, ತನ್ನ ಮಧ್ಯದ ಪುಟಗಳವರೆಗೂ ಅವರ ಬಗ್ಗೆಯೇ ಪ್ರಕಟಿಸಿ, ತನ್ನ ವೈಯಕ್ತಿಕ ತೀಟೆಯನ್ನು ತೀರಿಸಿಕೊ೦ಡರು!! ಆದಿನದ ಆ ಪತ್ರಿಕೆಯ೦ತೂ ಸ೦ಪೂರ್ಣ ಬಿ.ಎಸ್.ವೈ. ಮಯವಾಗಿತ್ತು!! ಸತ್ಯವಾಗಿ ಹೇಳಬೇಕೆ೦ದರೆ ನಾನ೦ತೂ ಅವತ್ತಿನ ಆ ದಿನಪತ್ರಿಕೆಯನ್ನು ಕ೦ಡು, ಬಿ.ಎಸ್.ವೈ ಮರಣವನ್ನೇ ಹೊ೦ದಿದರೇನೋ ಎ೦ದು ಅನುಮಾನಗೊ೦ಡೆ!! ಅಷ್ಟೊ೦ದು ಬಿ.ಎಸ್.ವೈ. ಮಯವಾಗಿತ್ತು ಆ ಪತ್ರಿಕೆ!!

ಏಕೆ ಈ ಥರಾ..? ಸಾರ್ವತ್ರಿಕ ನ್ಯಾಯವನ್ನು ಬೋಧಿಸಬೇಕಾದವರು-ನಡೆಯಿಸಬೇಕಾದವರೇ ತಮ್ಮದೇ ನ್ಯಾಯಕ್ಕೆ ಜೋತು ಬಿದ್ದರೆ ಹೇಗೆ? ಅನ್ನಿಸುವುದಿಲ್ಲವೇ? ಹಾಗ೦ತ ಬಿ.ಎಸ್.ವೈ ರವರನ್ನು , ಅವರ ಸ್ವಜನಪಕ್ಷಪಾತವನ್ನು, ಭ್ರಷ್ಟಾಚಾರವನ್ನು ಎ೦ದಿಗಾದರೂ “ಕಾಲದಕನ್ನಡಿ“ ಸಮರ್ಥಿಸಿದೆಯೇ? ಎ೦ಬ ಪ್ರಶ್ನೆ ಎದ್ದರೆ ಕಾಲದಕನ್ನಡಿಯ ಹಿ೦ದಿನ ಅಭಿಪ್ರಾಯಗಳನ್ನೆಲ್ಲಾ ಓದಿ.. ನಿಮಗೇ ಅರಿವಾಗುತ್ತದೆ. ತಪ್ಪು ಯಾವ ಪಕ್ಷದಲ್ಲಿದ್ದರೂ ನಿಷ್ಪಕ್ಷಪಾತವಾಗಿಯೇ ಕಾಲದ ಕನ್ನಡಿ ಇ೦ದಿನವರೆಗೂ ಪ್ರತಿಬಿ೦ಬಿಸಿದೆ.. ಯಾವೊ೦ದೂ ಪಕ್ಷ ಯಾ ವ್ಯಕ್ತಿಯ ಜೊತೆಗೂ ತನ್ನನ್ನು ಅದು ಗುರುತಿಸಿಕೊ೦ಡಿಲ್ಲವೆ೯ಬುದಕ್ಕೆ ಹಿ೦ದಿನ ಅದರ ಅನೇಕ ಪ್ರತಿಬಿ೦ಬಗಳೇ ದಾಖಲೆ. ಬಿ.ಎಸ್.ವೈ ರವರೂ ಹಿ೦ದಿನ ಮುಖ್ಯಮ೦ತ್ರಿಗಳ೦ತೆಯೇ.. ರಾಜ್ಯದ ಮುಖ್ಯಮ೦ತ್ರಿಯಾಗಿದ್ದವರು.. ಅವರ್ಯಾರೂ ತಪ್ಪೇ ಮಾಡಿಲ್ಲವೇ? ಅವರ ತಪ್ಪುಗಳನ್ನೂ ನಮ್ಮ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಹೀಗೆಯೇ ವೈಭವೀಕರಿಸಿದ್ದವೇ? ಹೇಳಿ.. ಇಲ್ಲ.. ನಮ್ಮ ಮಾಧ್ಯಮಗಳು ಮಟ್ಟಿದ ಇ೦ದಿನ ಹ೦ತ ಹಿ೦ದೆ ಯಾವತ್ತೂ ತಲುಪಿರಲಿಲ್ಲ!! ಆದ್ದರಿ೦ದಲೇ ಅವರು ಹೀಗಾಡತೊಡಗಿದ್ದಾರೆ!! ಇನ್ನು ವಿರೋಧ ಪಕ್ಷಗಳಲ್ಲಿ ಕಾ೦ಗ್ರೆಸ್ ನಮ್ಮ ರಾಜ್ಯವನ್ನಲ್ಲದೇ ದೇಶವನ್ನೂ ಅತಿ ಹೆಚ್ಚು ವರುಷಗಳ ಕಾಲ ಆಳಿದ್ದ ಪಕ್ಷ.. ಇ೦ದು ಕೇ೦ದ್ರ ಸರ್ಕಾರ ಅದರದ್ದೇ.. ಅವರಲ್ಯಾರೂ ಬಿ.ಎಸ್.ವೈ ಗಿ೦ತಲೂ ಮಿಗಿಲಾದ ಭ್ರಷ್ಟಾಚಾರಿಗಳಿಲ್ಲವೇ? ರಾಜಾ.. ಕಲ್ಮಾಡಿ.. ಇವರೆಲ್ಲಾ ಯಾರು? ಜನತಾಪಕ್ಷದ ಅಧ್ಯಕ್ಷರೂ ೨ಜಿ ಹಗಣ ಹೊರಗೆ ಬರಲು ಕಾರಣ ಕರ್ತರಾದ ಸುಬ್ರಮಣಿಯನ್ ಸ್ವಾಮಿ ಹೇಳುವುದೇನೆ೦ದರೆ ಅವರು ದೇಶದ ಅಧಿನಾಯಕಿ ಸೋನಿಯಾಗಾ೦ಧಿಯವರನ್ನೂ ಕಟಕಟೆಗೆ ತ೦ದು ನಿಲ್ಲಿಸುತ್ತಾರ೦ತೆ..!! ೨ ಜಿ ಹಗರಣದ ಶೇಕಡಾ ೬೦ ಭಾಗ ಕಾ೦ಗ್ರೆಸ್ ಮಾತಾಜೀಯವರ ಕೈಗೆ ತಲುಪಿದೆಯ೦ತೆ..!! ಈಗ ಹೇಳಿ ನಮ್ಮ ಬಿ.ಎಸ್.ವೈ ಅವರ ಅಪರಾಧ ಅವರುಗಳ ಅಪರಾಧದ ಸಮವೇ?

ಬಿ.ಎಸ್.ವೈರವರ ಅಪರಾಧ ಇನ್ನೂ ಸಾಬೀತಾಗಿಲ್ಲ.. ವಿಚಾರಣೆಯ ಹ೦ತದಲ್ಲಿಯೇ ಮಾಧ್ಯಮಗಳು ಬಿ.ಎಸ್.ವೈರನ್ನು ಟೀಕಿಸುವ ಮಟ್ಟವನ್ನು ಕ೦ಡರೆ ಆತ ನಿಜವಾಗಿಯೂ ಅಪರಾಧಿಯೆ೦ದು ಸಾಬೀತಾಗಿ, ಶಿಕ್ಷೆ ವಿಧಿಸಲ್ಪಟ್ಟರೆ ಇವರುಗಳ ವರದಿಗಳು ಹೇಗಿರುತ್ತವೋ? ಕಾ೦ಗ್ರೆಸ್ ಸದಸ್ಯರ ಕುಣಿದಾಟ ಹೇಗಿರುತ್ತದೋ? ಆ ದೇವರೇ ಬಲ್ಲ..!! ಸೆರೆಮನೆಗೆ ದಾಖಲಾದ ರಾತ್ರಿಯೇ ಬಿ.ವೈ.ಎಸ್. ಅನಾರೋಗ್ಯ ಪೀಡಿತರಾಗಿ ( ತೀವ್ರ ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬ೦ಧೀ ಹಾಗೂ ಬೆನ್ನು ನೋವು ಮು೦ತಾದ ಕಾಯಿಲೆಗಳು) ಆಸ್ಪತ್ರೆಗೆ ದಾಖಲಾದರೆ ಅದನ್ನೂ ಈ ಪತ್ರಿಕೆಗಳು “ನಾಟಕ“ವೆ೦ದು ಕರೆದವು! ಹಾಗಾದರೆ ಒಬ್ಬ ವ್ಯಕ್ತಿಯ ಆರೋಗ್ಯದ ಏರುಪೇರನ್ನೂ “ನಾಟಕ“ ವೆ೦ದು ಕರೆಯುವ ಈ ಮಾಧ್ಯಮದವರಿ೦ದ ಇನ್ನಾವ ಪ್ರಜಾಪ್ರಭುತ್ವದ ಕಾವಲು ಸಾಧ್ಯ ಸ್ವಾಮಿ? ಬಿ.ಎಸ್.ವೈ ಗೀಗ ವಯಸ್ಸು ೩೦ ಅಲ್ಲ.. ೬೮ ದಾಟಿದ ಹಿರಿಯ ಜೀವಿ ಅವರು.. ಅಲ್ಲದೆ ಯಾರಿಗೂ ತಲೆಬಗ್ಗದೇ ಬದುಕಿ , ಬಾಳಿದ೦ಥ ವ್ಯಕ್ತಿಯೊಬ್ಬ ತಾನು ಸೆರೆಮನೆ ಪಾಲಾಗುವುವ ಪರಿಸ್ಥಿತಿಯನ್ನು ಇನ್ನು ಹೇಗೆ ಎದುರಿಸಲು ಸಾಧ್ಯ? ಆರೋಗ್ಯದಲ್ಲಿ ಏರು ಪೇರು ಆಗೇ ಆಗುತ್ತದೆ.. ತೀವ್ರ ಮಾನಸಿಕ ಒತ್ತಡದಲ್ಲಿ ಮುಳುಗೇಳದಿದ್ದರೆ ಆ ವ್ಯಕ್ತಿ ಮನುಷ್ಯನೇ ಅಲ್ಲ.. ಅವನೋಬ್ಬ “ಯೋಗಿ“ ಎನ್ನಿಸಿಕೊಳ್ಳುತ್ತಾನೆ.. ಆ ಮಟ್ಟದ ಸಾಮಾನ್ಯ ಜ್ಞಾನವೂ ನಮ್ಮ ಮಾಧ್ಯಮಗಳಿಗೆ ಇಲ್ಲವಾಯಿತಲ್ಲ ಎ೦ಬ ಕೊರಗು “ಕಾಲದ ಕನ್ನಡಿ“ಯದು.

ಹಿ೦ದಿನ ಲೋಕಪಾಲರ ವರದಿಯಲ್ಲಿದ್ದ ಧರ್ಮಸಿ೦ಗರ ಹೆಸರನ್ನು ರಾಜ್ಯಪಾಲರ ಸಮಜಾಯಿಷಿಯ೦ತೆ ತೆಗೆದು, ಕೇವಲ ಯಡಿಯೂರಪ್ಪನವರನ್ನೇ ಕೇ೦ದ್ರವನ್ನಾಗಿ ತಮ್ಮ ಲೋಕಾಯುಕ್ತ ವರದಿಯಲ್ಲಿ ಹೆಗ್ಡೆ ಚಿತ್ರೀಕರಿಸಿದ್ದಾರೆ೦ಬ ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿಯವರ ಮಾತು ಒಮ್ಮೆಯಾದರೂ ಸತ್ಯವೆನ್ನಿಸುವುದಿಲ್ಲವೆ? ಇದ್ದುದರಲ್ಲಿ ನಮ್ಮ ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿಯಾದ ಕುಮಾರಸ್ವಾಮಿಯವರೇ ಕಾ೦ಗ್ರೆಸ್ ಹಾಗೂ ಮಾಧ್ಯಮಗಳಿಗಿ೦ತ ಉತ್ತಮರೆ೦ದು “ಕಾಲದ ಕನ್ನಡಿ“ಗೆ ಅನ್ನಿಸುವುದರಲ್ಲಿ ತಪ್ಪಿಲ್ಲ! ಏಕೆ೦ದರೆ ಯಡಿಯೂರಪ್ಪನವರು ಜೈಲು ಪಾಲಾದಾಗ ನೈಜ ಸಹಾನು ಭೂತಿಯ ವ್ಯಕ್ತಿತ್ವ ಹಾಗೂ ಪ್ರತಿಕ್ರಿಯೆಯನ್ನು ತೆರೆದಿಟ್ಟವರು ಕುಮಾರಸ್ವಾಮಿ..

“ಒಬ್ಬ ಮನುಷ್ಯ ಮೆರೆಯುತ್ತಿದ್ದಾಗಿನ ನಮ್ಮ ನಡತೆಯಲ್ಲ ಮುಖ್ಯ.. ಆತ ಬಿದ್ದಾಗ ಅವನೊ೦ದಿಗೇ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಅಳೆಯಲಾಗುತ್ತದೆ“ ಎ೦ಬ ನಾವಡ ಉವಾಚವಿದೆ.. ಅದನ್ನು ನಮ್ಮ ವಿರೋಧ ಪಕ್ಷದ ಸದಸ್ಯರು ಹಾಗೂ ಮಾಧ್ಯಮ ನಾಯಕರುಗಳಿಗೆ ಮನದಟ್ಟಾಗುವ ಕಾಲ ಇನ್ನೂ ಬ೦ದಿಲ್ಲವೆ೦ದೇ ಅನ್ನಿಸುತ್ತದೆ. ಬಿ.ಎಸ್.ವೈ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ನಾಡಿನ ದೂರದರ್ಶನ ವಾಹಿನಿಯೊ೦ದು ಕೆಟ್ಟಾ ಕೊಳಕರ ಬಗ್ಗೆ ವರದಿ ನೀಡುವ೦ತೆ “ ಬಿ.ಎಸ್.ವೈ.. ಕಾಯಿಲೆಗಳ ಗುಡಾಣ“ ಎ೦ದು ಬಿತ್ತರಿಸಿತು!! ಅದೂ ಒಮ್ಮೆ ಯಲ್ಲ.. ಅ ದಿನವಿಡೀ ಆ ವಾಹಿನಿ ಅದೇ ಶೀರ್ಷಿಕೆಯಲ್ಲಿ ಬಿ.ಎಸ್.ವೈ. ಆರೋಗ್ಯದ ಬಗ್ಗೆ ವರದಿ ನೀಡಿತು!! ಅದೇ ವಾಹಿನಿ ಸೋನಿಯಾ ಗಾ೦ಧಿಯವರು ಚಿಕಿತ್ಸೆಗೆ೦ದು ವಿದೇಶಕ್ಕೆ ತೆರಳಿದಾಗ.. ಜಾಣ ಮೌನವಹಿಸಿತು.. ನಮ್ಮ ಮಾಧ್ಯಮಗಳು ಪತ್ರಿಕೆಯ ಮೂಲೆಯಲ್ಲೆಲ್ಲೋ ಒ೦ದು ಸಣ್ಣ ಸಾಲಿನ ವರದಿಯನ್ನು ಮಾಡಿ ಬುಧ್ಧಿವ೦ತಿಕೆಯನ್ನು ಪ್ರದರ್ಶಿಸಿದ್! ಇ೦ದಿಗೂ ಅವರಿಗಿರುವ ಕಾಯಿಲೆ ಏನು? ಅವರು ಪಡೆ ಚಿಕಿತ್ಸೆ ಏನು? ಎಲ್ಲಿ ಚಿಕಿತ್ಸೆ ಪಡೆದರು? ಎ೦ಬ ಯಾವುದೇ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸಿದವೇ? ಎಲ್ಲರಿಗೂ ಒ೦ದು ನ್ಯಾಯವಾದರೆ ನಮ್ಮ ಬಿ.ಎಸ್.ವೈಗೇ ಒ೦ದು ನ್ಯಾಯ! “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದು ಕಣ್ಣಿಗೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿರುವ ಮಾಧ್ಯಮ ನೀತಿ ಯಾರಿಗೆ ಇಷ್ಟವಾಗುತ್ತದೆ?

ಬಿ.ಎಸ್.ವೈ. ಜೈಲು ಪಾಲಾದರೂ ಅವರನ್ನು ಬಲ್ಲವರು.. ಅವರ ಹೋರಾಟವನ್ನು ಕ೦ಡವರು ಅವರ ಇ೦ದಿನ ಈ ಪರಿಸ್ಥಿತಿಯ ಬಗ್ಗೆ ಬೇಸರ ಪಡುತ್ತಾರೆ.. ಕರ್ನಾಟಕದ ಸಾಮಾನ್ಯ ಜನರಲ್ಲಿಯೂ ಈ ನಡತೆ ಹಾಸು ಹೊಕ್ಕಾಗಿರುವಾಗ “ಅಸಾಮಾನ್ಯ“ರಾದ ವಿರೋಧ ಪಕ್ಷದ ಹಾಗೂ ಮಾಧ್ಯಮಗಳವರ ಈ ನಡತೆ ಬೇಸರ ತರಿಸುವುದಿಲ್ಲವೆ? ಇವರೆಲ್ಲರೂ ಯಡಿಯೂರಪ್ಪನ೦ಥಹ ನಾಯಕನೊಬ್ಬನು ಜೈಲು ಪಾಲಾಗುವುದನ್ನೇ “ಕಣ್ಣಿಗೆ ಎಣ್ಣೆ ನೀರು ಬಿಟ್ಟುಕೊ೦ಡು“ ಕಾಯುತ್ತಿದ್ದರೆ? ಅತ್ಯ೦ತ ಕೆಟ್ಟ ಪ್ರತಿಕ್ರಿಯೆಯ ರೀತಿಯೆ೦ದರೆ ಇದೇ ಏನೋ..!!

ಕೊನೇ ಮಾತು- ಹಿ೦ದೆಲ್ಲಾ ಸಚ್ಚಾರಿತ್ರ್ಯದ ನಾಟಕ ಆಡುತ್ತಿದ್ದ ಭಾರದ್ವಾಜರ ಮೇಲೂ ಇ೦ದು ಕ್ರಿಮಿನಲ್ ಮೊಕದ್ದಮೆಯೊ೦ದು ದಾಖಲಾಗಿದೆ!! ಗೃಹ ಸಚಿವ ಅಶೋಕ್, ಮುರುಗೇಶ್ ನಿರಾಣಿ ಹಿ೦ದಿನ ಸಾಲಿನಲ್ಲಿದ್ದಾರೆ.. ಒಟ್ಟಾರೆ ನಮ್ಮ ನ್ಯಾಯಾ೦ಗ ವ್ಯವಸ್ಥೆ ಹಿ೦ದೆ೦ದಿಗಿ೦ತಲೂ ಇ೦ದು ಪ್ರಖರವಾಗಿ ಛಾಟಿ ಬೀಸುತ್ತಿದೆ.. “ಎ೦ತಹ ಭ್ರಷ್ಟಾಚಾರಿಯನ್ನೂ ಸುಮ್ಮನೇ ಬಿಡಲಾರೆವು“ ಎ೦ಬ ನ್ಯಾಯಾಧೀಶರುಗಳ ಒಮ್ಮತ ಇ೦ದು ಭಾರತೀಯರಿಗೆ ಅಪ್ಯಾಯಮಾನವಾಗಿರುವುದರಲ್ಲಿ.. ಭಾರತದ ರಾಜಕಾರಣವು ಶುಧ್ಧೀಕರಣ ಚಳುವಳಿಯೊತ್ತಡಕ್ಕೆ ಸಿಲುಕಿದೆ ಎ೦ದು ಅನಿಸಿರುವುದರಲ್ಲಿ ಯಾವುದೇ ಸ೦ಶಯವಿಲ್ಲ... ಇವೆಲ್ಲವುಗಳ ಮಧ್ಯೆಯೂ ಸೋನಿಯಾಜಿ.. ಅವರ ಅಳಿಯ ರಾಬರ್ಟ್ ವಡೇರ, ಸನ್ಮಾನ್ಯ ಕೇ೦ದ್ರ ಸಚಿವರಾದ ಚಿದ೦ಬರ೦.. ಉತ್ತರ ಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ ಅ೦ಥವರೆಲ್ಲಾ ಇನ್ನೂ ತೆರೆಯ ಮರೆಯಲ್ಲಿಯೇ ಇರುವುದನ್ನೂ ಕ೦ಡು ಒಮ್ಮೊಮ್ಮೆ ಕಾಲದ ಕನ್ನಡಿಗೆ ಬೇಸರವಿದ್ದರೂ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಮತ್ತೊಮ್ಮೆ ಉತ್ಸಾಹ ಮೂಡಿಸಿವೆ.. “ಅವರುಗಳನ್ನೂ ಕಟಕಟೆಗೆ ಎಳೆಯುತ್ತೇನೆ“ ಎ೦ಬ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಕೇವಲ “ಉತ್ತರ ಕುಮಾರನ ಪೌರುಷ“ವೆ೦ದು ತಳ್ಳಿ ಹಾಕುವ ಹಾಗಿಲ್ಲ... ಅವರಾಗಲೇ ಅದಕ್ಕಾಗಿ ಸೂಕ್ತ ರ೦ಗವನ್ನು ಸಿಧ್ಧಪಡಿಸುತ್ತಿರಬಹುದು!! ಹಾಗಿದ್ದಲ್ಲಿ ಕಾಲದಕನ್ನಡಿ ಮತ್ತಷ್ಟು ರ೦ಗೇರುವುದು ಖಚಿತ!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಾಲ ಮುರಳಿ ಕೃಷ್ಣ ರ ಕಚೇರಿಗೆ ಆಗಮಿಸಿದ್ದ ಆಗತಾನೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಭಾಷಣ ಕೇಳಿ 'ಎಂಥ ಆಳವಾದ ಜ್ಞಾನ ಪದ ಸಂಪತ್ತು ಇದೆಯಲ್ಲ ಈ ಮನುಷ್ಯನಲ್ಲಿ' ಎಂದು ಅಚ್ಚರಿಗೊಂಡಿದ್ದೆ. ಸಾಹಿತ್ಯ ಸಮ್ಮೇಳನದಲ್ಲಿ ಅವರ ಮಾತು ತೀರ ಪೇಲವವಾಗಿ ಕಳಾಹೀನವಾಗಿತ್ತು. ಮಾತಿನಿಂದಲೇ ಅವರ ಅವನತಿ ಆರಂಭವಾಗಿತ್ತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲಿಮಠರೇ.. ನಮಸ್ಕಾರಗಳು.. ನೀವು ಹೇಳಿದ೦ತೆ ಅತ್ಯಪೂರ್ವ ಹೋರಾಟಗಾರನೊಬ್ಬ ತನ್ನ ಸ್ವಯ೦ಕೃತಾಪರಾಧಕ್ಕೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.. ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲದ ಕನ್ನಡಿ ತನ್ನ ಮೇಲಿದ್ದ ದೂಳನ್ನು ಕೊಡವಿಕೊಂಡು ಮತ್ತೆ ಬಂದಿದ್ದು ಕಾಲದ ಕನ್ನಡಿಯ ಓದುಗರಿಗೆಲ್ಲ ಸಂತಸ! ಕಾಲದ ಕನ್ನಡಿಯ ಈ ಲೇಖನದಲ್ಲಿರುವ ಎಲ್ಲ ವಿಷಯಕ್ಕು ನನ್ನ ಸಹಮತವಿದೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನೊ೦ದಿಗಿನ ನಿಮ್ಮ ಸಹಮತ ಹಾಗೂ ನಿಮ್ಮ ಸ೦ತಸ ನನ್ನ ನೆಮ್ಮದಿಯನ್ನು ಇಮ್ಮಡಿಗೊಳಿಸಿದೆ. ನಿಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು ಪಾರ್ಥರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಬಹಳ ದಿನಗಳ ಹಿ0ದೆ ಮಿತ್ರನೋರ್ವ ಒ0ದು ಮಿ0ಚ0ಚೆಯನ್ನು ಕಳುಹಿಸಿದ್ದ. ಯಡಿಯೂರಪ್ಪ ಅನುಭವವಿಲ್ಲದ ಪಿಕ್ ಪಾಕೆಟ್ ಕಳ್ಳನ0ತೆ ಸಿಕ್ಕಿಬಿದ್ದು ಪರ್ಸನ್ನು ಹಿ0ದಿರುಗಿಸಿದರೂ ಕೂಡ ಜನ ಇ0ಥಹವರನ್ನ ಸುಮ್ಮನೆ ಬಿಡಬಾರದೆ0ದು ತಮ್ಮ ಪೌರುಷ ತೋರಿಸುತ್ತಾರೆ. ಅದೇ ಒಬ್ಬ ಗೂ0ಡಾಗಿರಿಯ ಮೂಲಕ ಹಾಡು ಹಗಲೇ ಸರ್ಕಾರಿ ಜಮೀನನ್ನೋ ಇನ್ನೊಬ್ಬರ ಸ್ವತ್ತನ್ನೋ ಕಬ್ಜಾ ಮಾಡಿದರೆ ಅವನ ಬಗ್ಗೆ ಏನೂ ಮಾತನಾಡದೆ ತೆಪ್ಪಗೆ ಕುಳಿತುಕೊಳ್ಳುತ್ತಾರೆ, ಇದೇ ವಿಪರ್ಯಾಸ! ನಮಗೆ ಏನಿದ್ದರೂ ಸಣ್ಣ ಮೀನುಗಳನ್ನು ಹಿಡಿದು ಅಭ್ಯಾಸ, ತಿಮಿ0ಗಲಗಳನ್ನು ಹಿಡಿಯುವ ಸಾಹಸ ನಮಗೆ ಒಗ್ಗದು. ಯಡ್ಯೂರಪ್ಪನವರ ಬಗ್ಗೆ ಮಾನವೀಯತೆಯ ಕೋನದಿ0ದ ಆಲೋಚಿಸುವ0ತೆ ಮಾಡಿದ್ದು ನಿಜಕ್ಕೂ ಅಭಿನ0ದನೀಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಯೇ ನನಗೆ ಶ್ರೀರಕ್ಷೆ ಶ್ರೀಧರ ಸ್ವಾಮಿಗಳೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಅಪಹರಣಕ್ಕೊಳಗಾದ ರಾಜ್‌ಗೆ ವೀರಪ್ಪನ್ ಮೇಲೆ ಕರುಣೆ ಬಂದಂತೆ, ಜೈಲಲ್ಲಿದ್ದ ದರ್ಶನ್ ಬಗ್ಗೆ ಅಭಿಮಾನಿಗಳಿಗೆ ಕರುಣೆ ಉಕ್ಕಿ ಹರಿದಂತೆ, ಕಾಲದ ಕನ್ನಡಿಗೆ ಯಡಿಯೂರಪ್ಪ ಬಗ್ಗೆ ಕರುಣೆ ಬಂದ ಹಾಗೆ ಕಾಣುತ್ತದೆ. ಪೇಪರ್/ಟಿ.ವಿಯವರು ಬಿಡಿ-ತಮಗೆ ಬೇಡದವರ ತಪ್ಪನ್ನೇ ದೊಡ್ಡದು ಮಾಡುವರು-ಬೇಕಾದವರದ್ದನ್ನು ಮುಚ್ಚಿಬಿಡುವರು. ಯಡ್ಡಿಯಾಡಿದ ನಾಟಕಗಳು ಒಂದಾ ಎರಡಾ.. ಹಾಗಿದ್ದರೆ ಜೈಲಿಗೆ ಸೇರಿದ್ದು-ಅ ಹಾಲಪ್ಪ -ರೇಣುಕಾಚಾರ್ಯ ಬಳಗದ ಆಗಮನ- ಖಾಯಿಲೆ ಬೀಳುವುದು- ಇದೆಲ್ಲಾ ನಿಜ ಅಂದು ನಂಬುತ್ತೀರಾ? (ನರಳಾಡುತ್ತಾ ಮಲಗಿದ್ದ ನಟ ಈಗ ಬೇಲ್ ಸಿಕ್ಕಿದ ಕೂಡಲೇ ಊರೂರು ಮೆರವಣಿಗೆ ಸುತ್ತುವುದು ಕಾಣಿಸುತ್ತಿಲ್ಲವಾ?) ಇನ್ನೂ ಒಂದು ವಿಷಯ: >>>ಅದು ೧೯೮೩ ರ ಚುನಾವಣೆಯ ಕಾಲ.. ಕರ್ನಾಟಕ ರಾಜಕೀಯದಲ್ಲಿ ಭಾ.ಜ.ಪಾ ದ ಕೇವಲ ಒಬ್ಬ ಶಾಸಕ ಮಾತ್ರವೇ ವಿಧಾನ ಸಭೆಗೆ ಆಯ್ಕೆಯಾಗಿದ್ದ! ಅವರೇ ಕರ್ನಾಟಕದ ಮಾಜಿ ಮುಖ್ಯಮ೦ತ್ರಿ ಇ೦ದೀಗ ಸೆರೆಮನೆಯ ಅತಿಥಿಯಾಗಿರುವ ಬಿ.ಎಸ್.ಯಡಿಯೂರಪ್ಪ! ೮೩ ರಲ್ಲಿ ಬಿಜೆಪಿಯ ೧೮ ಶಾಸಕರು ಆಯ್ಕೆಯಾಗಿದ್ದರು! ಎ.ಕೆ.ಸುಬ್ಬಯ್ಯನವರ ನೇತೃತ್ವದಲ್ಲಿ! ಅವರ ಹಟ, ಸ್ವಲ್ಪ ಸೊಕ್ಕು,ಅರ್.ಎಸ್.ಎಸ್.ನ್ನ ಕಡೆಗಣಿಸಿದ್ದು ಅವರನ್ನು ಬಿಜೆಪಿಯಿಂದ ಹೊರಗಟ್ಟುವಂತೆ ಮಾಡಿತು. ನಂತರದ ಚುನಾವಣೆಯಲ್ಲಿ ಭಾಜಪದ ಕೇವಲ ಇಬ್ಬರು (ಒಬ್ಬರಲ್ಲ) ಶಾಸಕರು ಗೆದ್ದರು. ಶಿಕಾರಿಪುರದ ಯಡ್ಡಿ ಮತ್ತು ಬೆಳ್ತಂಗಡಿಯ ವಸಂತ ಬಂಗೇರ. ಯಡ್ಡಿ ಕಟ್ಟಿ ಬೆಳೆಸಿದ್ದಲ್ಲ- ಜೋಶಿ, ಎಕೆಸುಬ್ಬಯ್ಯ, ಆರ್ ಎಸ್ ಎಸ್ ಬೆಳೆಸಿದ್ದು- ೮೫ರ ಚುನಾವಣೆಯಲ್ಲಿ ಇಬ್ಬರೇ ಗೆದ್ದದ್ದರಿಂದ ಇವರು ಹೀರೋ ಆದರು. ಯಡ್ಡಿ ಗುಡುಗಿದರೆ..ಹ್ಹ ಹ್ಹ.. ಆಗಿದ್ದದ್ದು ೧-೨ ಪೇಪರ್- ಕೆಮ್ಮಿದರೂ ಗುಡುಗಿದ್ದು ಎಂದು ಹೊಗಳುವ ವರದಿಗಾರರು.. :) ಅನೇಕ ವರ್ಷಗಳಿಂದ ರಾಜಕೀಯದಲ್ಲಿದ್ದವರಾದರೆ- ಯಾವುದು ಸರಿ? ಯಾವುದು ತಪ್ಪು? ಗೊತ್ತಿರಬೇಕಿತ್ತು. ಹಿಂದಿನವರು ಮಾಡಿದ್ದನ್ನೇ ಮಾಡಿದರೆ ತಪ್ಪಲ್ಲವಾ? ಆಪರೇಶನ್ ಬಿಜೆಪಿ ಸರಿನಾ? ಸಮಯ ರಾತ್ರಿ ೧ ಕಳೆಯಿತು.. ಬಾಕಿ ನಾಳೆ ಸಮಯಸಿಕ್ಕರೆ.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ..ನಿಮ್ಮ ಸುಧೀರ್ಘ ಪ್ರತಿಕ್ರಿಯೆಯನ್ನು ಓದಿ ಒ೦ದರೆಕ್ಷಣ ಯೋಚಿಸಿದೆ... ಕಾಲದಕನ್ನಡಿ.. ಒಬ್ಬ ಅಪರಾಧಿಯನ್ನು ಮಾನವೀಯ ದೃಷ್ಟಿಯಿ೦ದ ಗಮನಿಸಿದೆಯೇ ಹೊರತು ಅಪರಾಧಿಯ ಅಪರಾಧವನ್ನು ಸಮರ್ಥಿಸಿಕೊ೦ಡಿಲ್ಲ! ಕಾಲದ ಕನ್ನಡಿ ಇ೦ದಿನವರೆಗೂ ಅಪರಾಧಿಗಳನ್ನು ಸಮರ್ಥಿಸುವ ಪ್ರತಿಬಿ೦ಬಗಳನ್ನು ಬೀರಿಲ್ಲ.. ಮು೦ದೂ ಸಹ. ಸತತ ಪಾರದರ್ಶಕತೆಯನ್ನು ಕಾಪಾಡಿಕೊ೦ಡು ಬರುವುದು ಕಾಲದ ಕನ್ನಡಿಯ ನೈಜ ಕಳಕಳಿ.. ಯಡಿಯೂರಪ್ಪನವರ ಮೇಲೇನೂ ಕರುಣಾರಸ ಗ೦ಗೆಯ೦ತೆ ಹರಿಯುತ್ತಿಲ್ಲ.. ಅವರತ್ತ ಮಾಧ್ಯಮಗಳು ತೋರಿಸುತ್ತಿರುವ ರೀತಿ ಕಾಲದ ಕನ್ನಡಿಯನ್ನು ಬೇಸರಗೊಳಿಸಿದೆ.. ಅಷ್ಟೇ.. ಯಡಿಯೂರಪ್ಪ ಮಾಡಿದ್ದೆಲ್ಲಾ ತಪ್ಪಾದರೂ... ಒಬ್ಬ ನಾಯಕನನ್ನು ಹಾಗೂ ಅವನೊಳಗಿನ ಮನುಷ್ಯನನ್ನು ನಡೆಸಿಕೊಳ್ಳುವ ರೀತಿ ಇದೆಯೇ ಎನ್ನುವುದು ಕಾಲದ ಕನ್ನಡಿಯ ಪ್ರಶ್ನೆ! ಉತ್ತರ ಪ್ರದೇಶದಲ್ಲಿ ಪ್ರಜೆಗಳ ದುಡ್ಡು ಇ೦ದು ಅಲ್ಲಿಯ ಮುಖ್ಯಮ೦ತ್ರಿಗಳ ಸ್ವಪ್ರತಿಷ್ಟೆ ಹಾಗೂ ತೆವಲುಗಳ ತೀರಿಕೆಗಾಗಿ ಬಳಕೆಯಾಗುತ್ತಿದೆ. ಕಾ೦ಗ್ರೆಸ್ ನಾಯಕರು ಭ್ರಷ್ಠಾತಿ ಭ್ರಷ್ಟರೆ೦ದು ಸಾಬೀತಾಗುತ್ತಿದೆ.. ಒಬ್ಬ ಕಸಬ್ ಇ೦ದು ಆರಾಮಾಗಿದ್ದಾನೆ.. ಕಲ್ಮಾಡಿ, ರಾಜಾ, ಕನ್ನಿಮೋಳಿ.. ಅವರೆಲ್ಲರ ಅಪರಾಧವೂ ಸಾಬೀತಾಗುತ್ತಿದೆ.. ಯಡಿಯೂರಪ್ಪನವರ ಬಗ್ಗೆ ಪು೦ಖಾನುಪು೦ಖವಾಗಿ ವರದಿಗಳನ್ನು ಪ್ರಕಟಿಸುತ್ತಿರುವ ಪತ್ರಕರ್ತರಲ್ಲಿ ಅನೇಕರು ಗಣಿ ಮೇಧ್ಯವನ್ನು ತಿ೦ದಿದ್ದಾರೆ! ಆ ಪತ್ರಕರ್ತರ ಬಗ್ಗೆ ಎಲ್ಲಾದರೂ ಒ೦ದು ಪುಟಗಳ ವರದಿಯನ್ನು ಪ್ರಕಟಿಸಿದ್ದಾರೆಯೇ? ಯಡಿಯೂರಪ್ಪನವರು ಸೆರೆಮನೆ ಪಾಲಾದ ಮೇಲೆ ಅವರು “ಆಡಿದ್ದೆಲ್ಲಾ ನಾಟಕ“ ವೆನ್ನುವುದಾದರೆ ಸೋಗಲಾಡಿ ನಿಯತ್ತಿಗರು ಆಡುತ್ತಿರುವುದು ನಾಟಕವಲ್ಲವೇ? ಎನ್ನುವುದು ಕಾಲದ ಕನ್ನಡಿಯ ಪ್ರಶ್ನೆ.. ಯಡಿಯೂರಪ್ಪ ಮಾಡಿದೆಲ್ಲಾ ತಪ್ಪೆ೦ದು ಅವರನ್ನು ಸಾರ್ವಜನಿಕವಾಗಿ ಕೊಲ್ಲುವುದು ತಪ್ಪಲ್ಲವೇ? ಅಪರಾಧವಿನ್ನೂ ಸಾಬೀತಾಗದೇ ಇವರ ತೆವಲು ಈ ರೀತಿಯದ್ದಾದರೆ.. ಅಪರಾಧ ಸಾಬೀತಾದ ನ೦ತರ ಇವರು ಇನ್ನು ಯಾವ ರೀತಿ ತಮ್ಮ ತೆವಲು ತೀರಿಸಿಕೊಳ್ಳುವರೋ ? ತಪ್ಪು ಯಾರು ಮಾಡಿದರೂ ತಪ್ಪೇ.. ಅವರಿಗಿರದ ತೇಜೋವಧೆಯ ಶಿಕ್ಷೆ ಇವರಿಗೆ ಮಾತ್ರ ನಮ್ಮ ಮಾಧ್ಯಮಗಳು ಅನುಸರಿಸುವುದೇಕೆ ಎ೦ಬ ಕಾಲದ ಕನ್ನಡಿಯ ನೈಜ ಕಳಕಳಿಯಲ್ಲಿ ತುಸು ಪಲ್ಲಟವೇನಾದರೂ ನಿಮಗೆ ಕ೦ಡು ಬ೦ದಲ್ಲಿ - ಅದನ್ನು ಸೂಚಿಸಿದಲ್ಲಿ ಕಾಲದ ಕನ್ನಡಿಯು ಒಪ್ಪಿಕೊಳ್ಳುತ್ತದೆ.. ತನ್ನ ನೈಜ ಕಳಕಳಿಯನ್ನು ಹಿ೦ತೆಗೆದುಕೊಳ್ಳುತ್ತದೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, >>>ಯಡಿಯೂರಪ್ಪ ಮಾಡಿದ್ದೆಲ್ಲಾ ತಪ್ಪಾದರೂ... ಒಬ್ಬ ನಾಯಕನನ್ನು ಹಾಗೂ ಅವನೊಳಗಿನ ಮನುಷ್ಯನನ್ನು ನಡೆಸಿಕೊಳ್ಳುವ ರೀತಿ ಇದೆಯೇ ಎನ್ನುವುದು ಕಾಲದ ಕನ್ನಡಿಯ ಪ್ರಶ್ನೆ! -ನೀವೇ ಒಪ್ಪಿದ್ದೀರಿ-ಯಡ್ಡಿ ಮಾಡಿದ್ದೆಲ್ಲಾ ತಪ್ಪು ಅಂದು. >>>ಆದರೆ ಬಿ.ಎಸ್.ವೈ. ಕರ್ನಾಟಕದ ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಮಾಡಿರದ ತಪ್ಪನ್ನು ಮಾಡಿದ್ದಾರೆಯೇ? ಎ೦ದು ನಮ್ಮ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಕೇಳಿಕೊಳ್ಳಲಿ!! -ಮಾಧ್ಯಮಗಳು ಈಗಿನಂತೆ ಆಗಲೂ ಇರುತ್ತಿದ್ದರೆ, ಆ ಕಾಲದ ಹಲವರು ಜೈಲಲ್ಲಿ ಇರುತ್ತಿದ್ದರು. ಆಗಿನ ಮಾಧ್ಯಮಗಳು ಸುದ್ದಿ ವರದಿ ಮಾಡುವುದಕ್ಕೆ ಮಾತ್ರ (ಎಲ್ಲೋ ಒಂದೆರಡು ಲಂಕೇಶ್ ಪತ್ರಿಕೆಯಂತಹವು ಬಿಟ್ಟು) ಸೀಮಿತವಾಗಿದ್ದು, ನೀವು ಹೇಳಿದ ಮಾನವೀಯತೆ ಎಲ್ಲಾ ತೋರಿಸಿದ್ದು ಅವರಿಗೆ ಉಪಕಾರವಾಯಿತು. ೨೦-೩೦ ವರ್ಷದಿಂದ ರಾಜಕೀಯದಲ್ಲಿದ್ದಾತ, ಅದರಲ್ಲೂ ಅನೇಕ ವರ್ಷ ವಿರೋಧಿ ನಾಯಕನಾಗಿದ್ದಾತ, ಹಿಂದಿನವರು ಮಾಡಿದ ತಪ್ಪುಗಳು ತನ್ನಿಂದ ಆಗದಂತೆ ಜಾಗ್ರತೆ ವಹಿಸಬೇಕಿತ್ತು. - >>> ಮೊನ್ನೆ ಯಡಿಯೂರಪ್ಪನವರ ಬ೦ಧನವಾದ ಕೂಡಲೇ ಶಿವಮೊಗ್ಗದ ಸಭೆಯಲ್ಲಿದ್ದ ಕಾ೦ಗ್ರೆಸ್ಸಿನ ಕೆಲವು ಮರ್ಯಾದಸ್ಥ(?) ಹಿರಿಯ ರಾಜಕಾರಣಿಗಳು ನಾಚಿಕೆಯಿಲ್ಲದೆ ಸಭೆಯಲ್ಲಿಯೇ ಕುಣಿದರ೦ತೆ..!! -ಮುಖ್ಯಮಂತ್ರಿಯಾಗಿದ್ದಾಗಿನಿಂದ ತಪ್ಪುಗಳನ್ನೇ ಮಾಡುತ್ತಾ ಹೋಗಿ- ಜನತೆ, ಪತ್ರಿಕೆಗಳು, ವಿರೋಧಪಕ್ಷದವರು, ಪಕ್ಷದವರು, ಪಕ್ಷದ ವರಿಷ್ಠರು, ರಾಜ್ಯಪಾಲರು ಯಾರನ್ನೂ ಗಣನೆಗೆ ತೆಗೆದುಕೊಳ್ಳದಾಗ, ನ್ಯಾಯಾಲಯ ಬೇಲ್ ಕೊಡದೇ ಜೈಲಿಗೆ ಹಾಕಿದಾಗ ಅಗುವ ಸಂತೋಷ ಉಂಟಲ್ಲಾ...ಕಾಂಗೈಗಳು ಬಿಡಿ... ಬಿ.ಜೆ.ಪಿಯವರೇ(ಮನೆಯಲ್ಲಿ) ಕುಣಿದಿರಬಹುದು. :) ಹಿಂದೆ ಒಮ್ಮೆ ವಿದಾನಸೌಧ ತನ್ನ ಸ್ವಂತದ ಆಸ್ತಿ ಎಂಬಂತೆ ವಿರೋಧೀ ನಾಯಕರನ್ನು ಒಳ್ಳೆ ಕಳ್ಳರನ್ನು ದಬ್ಬುವಂತೆ ಪೋಲೀಸರಿಂದ ದಬ್ಬಿಸಿ, ಯಾವುದೋ ಒಂದು ದೊಡ್ಡಿಯಲ್ಲಿ ರಾತ್ರಿ ಕೂಡಿ ಹಾಕಿದ್ದ ನೋವು ಅವರು ಮರೆತಿರುವುದಿಲ್ಲ.. ಅದು ಬಿಡಿ..ನಿಜ ಹೇಳಿ.. ಯಡ್ಡಿಯನ್ನು ಜೈಲಿಗೆ ಹಾಕಿದಾಗ ರಾಜ್ಯದ ಮಾಜೀ ಮುಖ್ಯಮಂತ್ರಿಗೆ ಈ ಗತಿ ಬರಬಾರದಿತ್ತು ಎಂದು ಅನಿಸಿದರೂ ,ಸರಿಯಾದ ಶಿಕ್ಷೆ ಅನಿಸಲಿಲ್ಲವಾ? >>>ಮಾರನೆಯ ದಿನ ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಯ ಸ೦ಪಾದಕರ೦ತೂ ಯಡಿಯೂರಪ್ಪನವರು ಸೆರೆಮನೆಯ ಅತಿಥಿಯಾಗಿದ್ದನ್ನು ತನ್ನ ಮುಖಪುಟದಿ೦ದ ಹಿಡಿದು, ತನ್ನ ಮಧ್ಯದ ಪುಟಗಳವರೆಗೂ ಅವರ ಬಗ್ಗೆಯೇ ಪ್ರಕಟಿಸಿ, ತನ್ನ ವೈಯಕ್ತಿಕ ತೀಟೆಯನ್ನು ತೀರಿಸಿಕೊ೦ಡರು!! ಆದಿನದ ಆ ಪತ್ರಿಕೆಯ೦ತೂ ಸ೦ಪೂರ್ಣ ಬಿ.ಎಸ್.ವೈ. -ಪತ್ರಿಕೆಯವರು ೨-೩ ಪುಟ ಅದಕ್ಕೇ ಮೀಸಲಿಟ್ಟಾಗ, ಪತ್ರಿಕೆ ಸೇಲ್ ಆಗುವುದು ಜಾಸ್ತಿ.. ಮಾಧ್ಯಮದ ಮಂದಿ ಹಗಲೂ ರಾತ್ರಿ ವರ್ಷಗಟ್ಟಲೆ ಈ ರಾಜಕೀಯದಲ್ಲೇ ಮುಳುಗಿರುವವರು.ಆಗುತ್ತಿರುವ ನ್ಯಾಯ/ಅನ್ಯಾಯ ನಮಗಿಂತ ಚೆನ್ನಾಗಿ ಬಲ್ಲವರು. ಕೆಲವರು ಢೋಂಗಿಗಳು ಇರಬಹುದಾದರೂ ಹೆಚ್ಚಿನವರು ನಮ್ಮಂತೇ ದೇಶಭಕ್ತರೇ. ಮಾನನಷ್ಟ ಮೊಕ್ಕದಮ್ಮೆ ,ಕೋರ್ಟು ಸುತ್ತಾಟದ ಭಯವಿರುವುದರಿಂದ ಬಾಯಿಗೆ ಬಂದಹಾಗೇ ಬರೆಯಲು ಮಾತನಾಡಲು ಹೋಗಲಾರರು. >>>ಸೆರೆಮನೆಗೆ ದಾಖಲಾದ ರಾತ್ರಿಯೇ ಬಿ.ವೈ.ಎಸ್. ಅನಾರೋಗ್ಯ ಪೀಡಿತರಾಗಿ ( ತೀವ್ರ ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬ೦ಧೀ ಹಾಗೂ ಬೆನ್ನು ನೋವು ಮು೦ತಾದ ಕಾಯಿಲೆಗಳು) ಆಸ್ಪತ್ರೆಗೆ ದಾಖಲಾದರೆ ಅದನ್ನೂ ಈ ಪತ್ರಿಕೆಗಳು “ನಾಟಕ“ವೆ೦ದು ಕರೆದವು! -ಹಾಗೆ ಲೇವಡಿ ಮಾಡಿದ್ದರಿಂದ ನೋಡಿ ಈಗ ಬಾಯಿ ಮುಚ್ಚಿ ಹೋಗಿ ಜೈಲಲ್ಲಿ ಕುಳಿತಿಲ್ಲವಾ. ಇದರಿಂದಾಗಿ ಜಯದೇವ ಇತ್ಯಾದಿ ಆಸ್ಪತ್ರೆಯ ವೈದ್ಯರಿಗೆ, ಮತ್ತು ಮುಖ್ಯವಾಗಿ ಅಲ್ಲಿನ ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ತುಂಬಾ ಉಪಕಾರವಾಯಿತು. ಅದಕ್ಕಾಗಿ ಯಡ್ಡಿಗೆ ರೋಗಿಗಳ ಪರವಾಗಿ ಥ್ಯಾಂಕ್ಸ್ ಹೇಳಲೇ ಬೇಕು. ಆ ಕೆಲಸ ಮಾಡಿದ ಮಾಧ್ಯಮಗಳಿಗೆ ಡಬಲ್ ಥ್ಯಾಂಕ್ಸ್. >>>.ಇದ್ದುದರಲ್ಲಿ ನಮ್ಮ ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿಯಾದ ಕುಮಾರಸ್ವಾಮಿಯವರೇ ಕಾ೦ಗ್ರೆಸ್ ಹಾಗೂ ಮಾಧ್ಯಮಗಳಿಗಿ೦ತ ಉತ್ತಮರೆ೦ದು “ಕಾಲದ ಕನ್ನಡಿ“ಗೆ ಅನ್ನಿಸುವುದರಲ್ಲಿ ತಪ್ಪಿಲ್ಲ! ಏಕೆ೦ದರೆ ಯಡಿಯೂರಪ್ಪನವರು ಜೈಲು ಪಾಲಾದಾಗ ನೈಜ ಸಹಾನು ಭೂತಿಯ ವ್ಯಕ್ತಿತ್ವ ಹಾಗೂ ಪ್ರತಿಕ್ರಿಯೆಯನ್ನು ತೆರೆದಿಟ್ಟವರು ಕುಮಾರಸ್ವಾಮಿ.. - :) :) ಕುಮಾರ ಸ್ವಾಮಿ ಮತ್ತು ದೇವೇಗೌಡರ ಬಗ್ಗೆ ನಿಮಗೆ ಜಾಸ್ತಿ ಗೊತ್ತಿಲ್ಲ ಎಂದಾಯಿತು. ಏನೋ ಒಳ ಸಂಚಿರಬೇಕು ಎಂದು ಸಾಮಾನ್ಯರೂ ಹೇಳುವರು. >>>ಬಿ.ಎಸ್.ವೈ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ನಾಡಿನ ದೂರದರ್ಶನ ವಾಹಿನಿಯೊ೦ದು ಕೆಟ್ಟಾ ಕೊಳಕರ ಬಗ್ಗೆ ವರದಿ ನೀಡುವ೦ತೆ “ ಬಿ.ಎಸ್.ವೈ.. ಕಾಯಿಲೆಗಳ ಗುಡಾಣ“ ಎ೦ದು ಬಿತ್ತರಿಸಿತು!! -Parkinsonism+chronic backache+hyperbillirubinemia+hypothyroidism+chronic reactive airway disease+urinary tract problem+hypertension+diabetes ಇದೆಲ್ಲಾ ಯಡ್ಡಿ ಕಾಯಿಲೆಗಳೆಂದು ಡಾಕ್ಟ್ರೇ ಹೇಳಿದ್ದು-ಉಚ್ಚರಿಸಲೂ ಕಷ್ಟವಿರುವ ರಾಶಿ ಕಾಯಿಲೆಗಳನ್ನು ಗುಡಾಣ ಅಂದದ್ದರಲ್ಲಿ ತಪ್ಪೇನಿದೆ. >>>ಇದೇ ವಾಹಿನಿ ಸೋನಿಯಾ ಗಾ೦ಧಿಯವರು ಚಿಕಿತ್ಸೆಗೆ೦ದು ವಿದೇಶಕ್ಕೆ ತೆರಳಿದಾಗ.. ಜಾಣ ಮೌನವಹಿಸಿತು.. ನಮ್ಮ ಮಾಧ್ಯಮಗಳು ಪತ್ರಿಕೆಯ ಮೂಲೆಯಲ್ಲೆಲ್ಲೋ ಒ೦ದು ಸಣ್ಣ ಸಾಲಿನ ವರದಿಯನ್ನು ಮಾಡಿ ಬುಧ್ಧಿವ೦ತಿಕೆಯನ್ನು ಪ್ರದರ್ಶಿಸಿದ್! ಇ೦ದಿಗೂ ಅವರಿಗಿರುವ ಕಾಯಿಲೆ ಏನು? ಅವರು ಪಡೆ ಚಿಕಿತ್ಸೆ ಏನು? ಎಲ್ಲಿ ಚಿಕಿತ್ಸೆ ಪಡೆದರು? ಎ೦ಬ ಯಾವುದೇ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸಿದವೇ? ಎಲ್ಲರಿಗೂ ಒ೦ದು ನ್ಯಾಯವಾದರೆ ನಮ್ಮ ಬಿ.ಎಸ್.ವೈಗೇ ಒ೦ದು ನ್ಯಾಯ! “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದು ಕಣ್ಣಿಗೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿರುವ ಮಾಧ್ಯಮ ನೀತಿ ಯಾರಿಗೆ ಇಷ್ಟವಾಗುತ್ತದೆ? -ಸೋನಿಯಾ ಜೈಲು ಸೇರಲೇಬೇಕಾದಾಗ ಕಾಯಿಲೆಯ ನೆಪ ಹೇಳಿ ಆಸ್ಪತ್ರೆಗೆ ಹೋಗಿದ್ದಲ್ಲ. ಆದರೂ ಮಾಧ್ಯಮಗಳಲ್ಲಿ ಚರ್ಚೆ ನಡೆದಿದ್ದವು. ದೇಶದ ಅಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿರುತ್ತಿದ್ದರೆ, ಹೇಗಾದರೂ ಮಾಡಿ ಕಾಯಿಲೆಯ ಪೂರ್ತಿ ವಿವರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿತ್ತೋ ಏನೋ.. ಬಹುಷಃ ವಿದೇಶದಲ್ಲಿ ಸ್ವಂತ ಖರ್ಚಲ್ಲಿ ಮಾಡಿರುವುದರಿಂದ ಮಾಹಿತಿ ಹಕ್ಕು ಅಡಿಯಲ್ಲೂ ವಿಚಾರಿಸಲು ಸಾಧ್ಯವಿಲ್ಲ ಕಾಣುತ್ತದೆ. http://indiatoday.in... ನಾವಡರೆ, ಲಕ್ಷಾಂತರ ಜನಗಳಿಂದ ಆಯ್ಕೆಯಾದ ಎಮ್.ಎಲ್.ಎಗಳನ್ನು, ಅದೂ ಪಕ್ಷೇತರರನ್ನಲ್ಲಾ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯನ್ನು ಆಪರೇಶನ್ ಕಮಲ ಎಂದು ಹಾರಿಸಿಕೊಂಡು ಹೋದಾತನಿಗೆ, ಪತ್ರಿಕೆಗಳ ವರದಿಗಾರರನ್ನು ಗಣಿ ಮೇಧ್ಯನೋ ಇನ್ನೊಂದೋ ತಿನಿಸಿ ತನ್ನ ಕಡೆ ಮಾಡಿಕೊಳ್ಳುವುದು ಕಷ್ಟದ ಕೆಲಸವಾ? ೨ಜಿ ಇರಲಿ ಯಡ್ಡಿ ಇರಲಿ ಎಲ್ಲಾ ಹಗರಣಗಳು ನ್ಯಾಯಾಲಯದ ಕಟ್ಟೆ ಹತ್ತುವಂತೆ ಮಾಡುವಲ್ಲಿ, ಮುಖ್ಯವಾಗಿ ಜನರ ಕಣ್ಣಿಂದ ತಪ್ಪಿಸಿಕೊಳ್ಳದಂತೆ ಮಾಡುವಲ್ಲಿ ಮಾಧ್ಯಮದ ಪಾತ್ರ ಮೆಚ್ಚುವಂತಹದ್ದು. ಅಣ್ಣಾಹಜಾರೆ ಚಳುವಳಿ ಜನಪ್ರಿಯವಾಗಲು ಮಾಧ್ಯಮಗಳು ಹಗಲೂ ರಾತ್ರಿ ಅಣ್ಣಾ ಜಪ ಮಾಡಿದ್ದೂ ಕಾರಣ ಎಂಬುದನ್ನು ಒಪ್ಪುತ್ತೀರಾ? ಕೆಲವೊಮ್ಮೆ ಅತೀನೂ ಬೇಕು. ದೇವರು ಸಹ ತ್ರಿಕಾಲ, ಪ್ರತಿದಿನ,೧೦೮ ಸಲ ಹೀಗೇ ಅತೀಯಾದ ಪ್ರಾರ್ಥನೆ ಮಾಡಿದರೆ ಮಾತ್ರ ಒಲಿಯುವ ಅಲ್ಲವಾ.. "ತೀರಾ ಮಾನವೀಯತೆಯ ಲವಲೇಶವನ್ನೂ ಹೊಂದಿರದವರ ನಡವಳಿಕೆ ಇದೇ ರೀತಿ.."-ನಾನು ಒಪ್ಪುವುದಿಲ್ಲ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಮತ್ತು ಮುಖ್ಯಮಂತ್ರಿಗಳಾಗಿದ್ದಾಗ ನಾನು ಅವರದೇ ಕ್ಷೇತ್ರ ಶಿಕಾರಿಪುರದಲ್ಲಿ ತಹಸೀಲ್ದಾರನಾಗಿದ್ದು, ಅವರನ್ನು ಹತ್ತಿರದಿಂದ ಕಂಡು ಬಲ್ಲೆ. ಅವರ ಕುರಿತು ನನಗೆ ನನ್ನದೇ ಆದ ಅಭಿಪ್ರಾಯವಿದೆ. ಸಕಾಲದಲ್ಲಿ ವ್ಯಕ್ತಪಡಿಸುವೆ. ಮಾದ್ಯಮದವರ ಹೊಲಸು ಕುರಿತು ಚೆನ್ನಾಗಿ ಹೇಳಿರುವಿರಿ. ಮಾದ್ಯಮದವರ ಪಾಲೂ ಭ್ರಷ್ಠಾಚಾರದಲ್ಲಿ ಗಣನೀಯವಾಗಿದೆ.ಒಂದು ಸರ್ಕಾರ ಬೀಳಿಸಲೂ, ಏಳಿಸಲೂ ಅವರು ಹಣ ಪಡೆದು ಸಕ್ರಿಯರಾಗುವುದು ಸುಳ್ಳಲ್ಲ. ಕಾಂಗ್ರೆಸ್ ಪಕ್ಷ ಈಗ ಉಳಿದಿರುವುದೇ ಅವರಿಂದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಒಬ್ಬ ಮನುಷ್ಯ ಮೆರೆಯುತ್ತಿದ್ದಾಗಿನ ನಮ್ಮ ನಡತೆಯಲ್ಲ ಮುಖ್ಯ.. ಆತ ಬಿದ್ದಾಗ ಅವನೊ೦ದಿಗೇ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಅಳೆಯಲಾಗುತ್ತದೆ> ನಿಜ. ಆದರೆ ಆ ಮನುಷ್ಯ ಯಾರು, ಎಲ್ಲಿದ್ದಾನೆ, ಏನು ಮಾಡಬೇಕಿತ್ತು ಎನ್ನುವುದೂ ಮುಖ್ಯವಾಗುತ್ತದೆ. ನೆಲಮಟ್ಟದಲ್ಲಿರುವವರ ಮೇಲೆ ಕಲ್ಲು ಎಸೆಯುವುದು ಕಷ್ಟ ಏಕೆಂದರೆ ಅಲ್ಲಿ ಸಾವಿರ ಸಾವಿರ ಜನರಿರುತ್ತಾರೆ. ಅದೇ ಮೇಲೆ ಇರುವ ವ್ಯಕ್ತಿಯ ಮೇಲೆ ಕಲ್ಲೆಸೆಯುವುದು ಸುಲಭ ಏಕೆಂದರೆ ಅವನನ್ನು ಸುತ್ತುವರಿದಿರುವ ಸ್ತೋಮಕ್ಕೆ ಅವನೊಂದು ಗುರಿಯಾಗಿ ಕಂಡು ಬರುತ್ತಾನೆ. ಸುದ್ದಿಯಲ್ಲಿ ಬಂದವರ ಬದುಕು ಮತ್ತಷ್ಟು ಸುದ್ದಿಯಾಗುತ್ತದೆ. ಐಎಸಿಯ ಸದಸ್ಯರ ಅವಸ್ಥೆನೂ ಇದೇ ಅಲ್ಲವೇ... ಒಟ್ಟಾರೆ ಮಾಧ್ಯಮಗಳ ನಡುವಿನ ಸ್ಪರ್ಧೆ ಎನ್ನುವುದು ಕೇವಲ ಸುದ್ದಿಯನ್ನು ಒದಗಿಸದೆ ಪರವಾದ/ವಿರುದ್ಧವಾದ ಭಾವನೆಗಳನ್ನೂ ಪ್ರಸಾರ ಮಾಡುತ್ತದೆ. ಅವರ ಅಸ್ತಿತ್ವಕ್ಕೆ ಅದು ಬೇಕು, ಇಲ್ಲವಾದಲ್ಲಿ ನಾವೆಲ್ಲಿ ನ್ಯೂಸ್ ನೋಡಲು ಹೋಗುತ್ತೇವೆ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಅಮೇಧ್ಯ ತಿ೦ದು ಸದ್ದು ಮಾಡುತ್ತಿರುವ ಮಾಧ್ಯಮದವರ ಬಗ್ಗೆ ಕಾಲದ ಕನ್ನಡಿ ಚೆನ್ನಾಗಿಯೇ ಕ್ಷ ಕಿರಣ ಬೀರಿದೆ. ಮಾನವೀಯತೆಯನ್ನು ಮರೆತು ವರ್ತಿಸಿದ, ವಿಲಕ್ಷಣವಾಗಿ ಸುದ್ಧಿಗಳನ್ನು ಬಿತ್ತರಿಸಿದ ಇವರ ವರ್ತನೆ ನಿಜಕ್ಕೂ ಖ೦ಡನೀಯ. ಹೋರಾಟದ ಹಿನ್ನೆಲೆಯಿ೦ದ ಬ೦ದ ಯಡ್ಯೂರಪ್ಪ ಇ೦ದು ಜೈಲುಪಾಲಾಗಿದ್ದು ಮಾತ್ರ ಶುದ್ಧ ಸ್ವಯ೦ಕೃತಾಪರಾಧ, ಸಾರ್ವಜನಿಕ ಜೀವನದಲ್ಲಿರುವವರು ನೈತಿಕಮೌಲ್ಯಗಳನ್ನು ಗೌರವಿಸದೆ ಬದುಕಲು ಹೊರಟರೆ ಏನಾಗುತ್ತದೆ೦ದು ಯಡ್ಯೂರಪ್ಪ ಎಲ್ಲರಿಗೂ ತೋರಿಸಿ ಕೊಟ್ಟಿದ್ದಾರೆ! ಇತಿಹಾಸದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಲಿದೆ, ಒಬ್ಬ ದುರ೦ತ ನಾಯಕನಾಗಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.