" ಕವನ ಬರುವುದಾದರೆ ಬರಲಿ " ಲೋಕಾರ್ಪಣೆ

3.5

        

                                ಮೂರು ಭಿನ್ನ ಧಾರೆಗಳು

ಸಂಪದ ಮಿತ್ರರೆ,

     ದಿನಾಂಕ 23.12.2012 ರ ಬೆಳಿಗ್ಗೆ 10-30 ಗಂಟೆಗೆ ಸಾಗರದ ಎಮ್.ಡಿ.ಎಫ್ (ಸ್ವತಂತ್ರ) ವಿಜ್ಞಾನ ಪಿಯೂಸಿ ಕಾಲೇಜಿನ ಸಭಾಂಗಣದಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು.

ಎನ್. ಹುಚ್ಚಪ್ಪ ಮಾಸ್ತರ ವಿರಚಿತ ‘ಗೊಂಡರು ಮತ್ತು ಇತರ ಲೇಖನಗಳು’ ಮತ್ತು  ಎನ್.ಹುಚ್ಚಪ್ಪ ಮಾಸ್ತರ ಮತ್ತು ಡಾ.ಸರ್ಫಾಜ್ ಚಂದ್ರಗುತ್ತಿ ವಿರಚಿತ ‘ಯಕ್ಷಗಾನ ಮತ್ತು ಆಧುನಿಕತೆ’ ಪುಸ್ತಕಗಳ ಕುರಿತು ಮಂಗಳೂರಿನ ಹಿರಿಯ ಸಾಹಿತಿ ವಿ.ಗ.ನಾಯಕ ಮಾತನಾಡಿದರು. ಇನ್ನೊಂದು ಪುಸ್ತಕ ನಾನುಬರೆದ ‘ಕವನ ಬರುವುದಾದರೆ ಬರಲಿ’ ಕವನ ಸಂಗ್ರಹ ಕುರಿತು ಹಲಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಹಾ.ಉಮೇಶ ಸೊರಬ ರವರು ಮಾತನಾಡಿದರು ಸಮಾರಂಭದ ಅಧ್ಯಕ್ಷತೆಯನ್ನು ಬಾಬು ಶಿವ ಪೂಜಾರಿ ವಹಿಸಿದ್ದರು. ಅವರ ಜೊತೆಗೆ ವೇದಿಕೆಯಲ್ಲಿ ಕೃತಿಗಳ ಕತೃಗಳು ಉಪಸ್ಥಿತರಿದ್ದರು.

 ಬೊಂಗಾಳೆ ದತ್ತಾತ್ರಯ ಸ್ವಾಗತಿಸಿದರು, ವೈ.ಎನ್.ಹುಬ್ಬಳ್ಳಿ ಪ್ರಾರ್ಥನೆ ಮಾಡಿದರು. ಪರಸ್ಪರ ವೇದಿಕೆಯ ಅಧ್ಯಕ್ಷ ಡಾ.ಸರ್ಫಾಜ್ ಚಂದ್ರಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯವರು, ಗಂಗಾಧರ ಮತ್ತು ಉಮೇಶರವರು ಪ್ರಸಿದ್ಧ ಕವಿಗಳ ರಚನೆಗಳನ್ನು ಸುಶ್ರಾವ್ಯವಾಗಿ ಸಭಿಕರನ್ನು ರಂಜಿಸಿದರು.

‘ಗೊಂಡರು ಮತ್ತು ಇತರ ಲೇಖನಗಳು’ ಮತ್ತು ‘ಯಕ್ಷಗಾನ ಮತ್ತು ಆಧುನಿಕತೆ’ :-

ಈ ಪುಸ್ತಕಗಳ ಕುರಿತು ಹಿರಿಯ ಸಾಹಿತಿ ವಿ.ಗ.ನಾಯಕರು ಮಾತನಾಡಿದರು. ಎನ್.ಹುಚ್ಚಪ್ಪ ಮಾಸ್ತರರು ಹಸಲರಿಗಾಗಿ ತನ್ನ ಸಮಾಜದ ಕಳಕಳಿಯನ್ನು ಸಹ ಬಿಟ್ಟು ಹಸಲರಿಗಾಗಿ ಹೋರಾಡಿದವರು ಆ ಕಾರಣಕ್ಕಾಗಿ ಅವರು ಪೂಜನೀಯರು. ಇವರು ಜಾನಪದ ಅಕಾಡೆಮಿ ಸದಸ್ಯರಾಗಿ ಅಲ್ಲಿಯೂ ಸಹ ಬಹು ದೊಡ್ಡ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಅವರು ಬುಡಕಟ್ಟು ಜನಾಂಗದ ಜೀವನ ಅವರ ನಂಬಿಕೆ ಆಚರಣೆಗಳು ಅವುಗಳಲ್ಲಿಯ ಮಾನವೀಯತೆ ಬಗೆಗೆ ಒತ್ತುಕೊಟ್ಟು ಬಿಂಬಿಸಿದರು. ಅದಕ್ಕೆ ದೊಡ್ಡ ಸಂಸ್ಕಾರ ಮತ್ತು ಸಂಸ್ಕೃತಿ ಬೇಕು ಅವುಗಳು ಅವರಲ್ಲಿದ್ದವು, ಹೀಗಾಗಿ ಅವರು ಪ್ರಮುಖರಾಗುತ್ತಾರೆ. ಅವರು ಜಾತಿ ವರ್ಗ ಮೀರಿ ಬೆಳೆದವರು. ಇವರು ,ಮಾಡಿದ ಅಧ್ಯಯನ ಮಾಡಿಕೊಂಡ ಟಿಪ್ಪಣಿಗಳು ಬಹಳಷ್ಟು ಬರಹ ರೂಪದಲ್ಲಿ ಬರಲೆ ಇಲ್ಲ. ಡಾ.ಸರ್ಫಾಜ್ ರವರ ಒತ್ತಾಸೆಯ ಫಲವಾಗಿ ‘ ಗೊಂಡರು ಮತ್ತು ಇತರ ಲೇಖನಗಳು’ ಕೃತಿ ಹೊರಬತರಲು ಸಾಧ್ಯವಾಯಿತು. ಇದೊಂದು ಶ್ಲಾಘನೀಯ ಕಾರ್ಯವೆಂದರು. ಕೆಳ ಜಾತಿಗಳ ಉದಾರಿಗಳು ಮತ್ತು ದೊಡ್ಡ ಸಂಸ್ಕಾರವಂತರು, ಗೊಂಡರು ಹಸಲರು ಮತ್ತು ಇತರ ಕೆಳ ಸಮುದಾಯಗಳ ಕುರಿತ ಲೇಖನಗಳು ಬರಿ ನೀರಸ ಗದ್ಯವಾಗದೆ ಅದರೊಳಗೊಂಡು ಲಾಲಿತ್ಯ ಜೊತೆಗೆ ಕವಿತ್ವ ವಿದೆ, ಅದು ಹುಚ್ಚಪ್ಪ ಮಾಸ್ತರರ ಬರವಣಿಗೆಯ ತಾಕತ್ತು ಎಂದರು. ಇವರು ಪೂರ್ವಭಾವಿಯಾಗಿ ಆಂದ್ರದ ಭಾಗಗಳು ಮತ್ತು ಉತ್ತರ ಕನ್ನಡದ ಭಟ್ಕಳ ಮುಂತಾದೆಡೆ ಸಂಚರಿಸಿ ಮಾಹಿತಿಗಳನ್ನು ಹೆಕ್ಕಿ ತೆಗೆದು ಲಭ್ಯವಿರುವ ಬೇರೆ ಸಾಹಿತ್ಯಗಳನ್ನು ಓದಿ ನಿರ್ಧಾರಕ್ಕೆ ಬಂದಿದ್ದಾರೆ ಇದು ಬಹುಮುಖ್ಯ ಎಂದರು. ಜೊತೆಗೆ ಇವರು ಸತ್ತ ಜಾನುವಾರು ಗಳನ್ನು ಮುಟ್ಟುವುದಿಲ್ಲ. ಬೇರೆಯವರ ಮನೆಗಳನ್ನು ಸಾರಿಸುವುದಿಲ್ಲ. ಇವು ಆ ಜಾತಿಯ ಗರ್ವ  ಜೊತೆಗೆ ಅದರಲ್ಲಿ ಒಂದು ಅಸ್ಮಿತೆಯಿದೆ ಎಂದರು.

ಯಕ್ಷಗಾನಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಇದು ಜಾನಪದ ಕಲೆಯ ಒಂದು ಮೇರು ಪ್ರಾಕಾರ. ಇದರ ಪಾತ್ರ, ವೇಷಭೂಷಣಗಳು, ನೃತ್ಯ, ಅರ್ಥಗಾರಿಕೆ ನಮ್ಮನ್ನು ಅವ್ಯಕ್ತ ಲೋಕಕ್ಕೆ ಎಳೆದೊಯ್ಯುವಂತಹವು. ಅಲ್ಲಿಯೂ ವ್ಯವಸ್ಥೆ ಪ್ರಧಾನತೆಯಿದೆ. ಕಲಾವಿದರ ಭಾಗವತರ ಒಳ ರಾಜಕೀಯ ಗಳಿವೆ. ಯಕ್ಷಗಾನ ಸಾಗಿಬಂದ ದಾರಿ ಈ ಕಾಲಘಟ್ಟದಲ್ಲಿ ಅದರ ಉಳಿವಿನ ಕುರಿತು ಚಿಂತನೆಗಳಿವೆ. ಅನೇಕ ಒಳನೊಟಗಳು ಈ ಕೃತಿಯಲ್ಲಿವೆ ಎಂದರು.

‘ಕವನ ಬರುವುದಾದರೆ ಬರಲಿ’ :-

ಈ ಕವನ ಸಂಕಲನ ಕುರಿತು ಮಾತನಾಡಿದ ಹಲಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಹಾ.ಉಮೇಶ ಸೊರಬ ರವರು ಮಾತನಾಡುತ್ತ ಪ್ರಜಾವಾಣಿ ಪತ್ರಿಕೆಯ ಪ್ರಮುಖ ಬರಹಗಾರರ ಲ್ಲೊಬ್ಬರಾದ ಜಿ.ವಿ.ಬಸವರಾಜರ ಜೊತೆ ಒಮ್ಮೆ ಈ ಪತ್ರಿಕೆ ಬಳಗದ ಸುಧಾ ಕಾವ್ಯ ಅಂಕಣವನ್ನು ಮರೆತಿರುವುದೇಕೆ ಎಂದು ಪ್ರಶ್ನಿಸಿದಾಗ ಅವರು ಅದನ್ನು ಕಳೆದು ಕೊಂಡವರು ಓದುಗರೆ ಎಂದರು. ಉದಾಹರಣೆಗೆ ಹಪ್ಪಳ ಮಾಡುವ ಕ್ರಮದ ಲೇಖನಕ್ಕೆ ಸಾವಿರಾರು ಪತ್ರಗಳು ಬರುತ್ತವೆ. ಆದರೆ  ಕಾವ್ಯ ಸುಧಾ ಅಂಕಣ ಕುರಿತು ಒಂದೇ ಒಂದು ಪತ್ರ ಬರುವುದಿಲ್ಲ. ಕಾವ್ಯದ ಜೊತೆ ಓದುಗರ ಒಡನಾಟ ಕ್ಷೀಣವಾಗಿದೆ. ಹೀಗಾಗಿ ಆ ಅಂಕಣ ಮಾಯವಾಗಿದೆ ಎಂದುದನ್ನು ವಿವರಿಸಿದರು.

ನಮ್ಮದು ಈಗ ವೇಗದ ಬದುಕು ಅದು ನಮ್ಮ ಏಕಾಂತವನ್ನು ಕೊಂದು ಹಾಕಿದೆ. ನಾವು ಕಾವ್ಯದ ಜೊತೆಗಿನ ಒಡನಾಟವನ್ನು ದೂರ ಮಾಡಿದ್ದೇವೆ. ಒಂದು ಕಾಲ ಇತ್ತು ಹಿರಿಯರು ಕಾವ್ಯ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ಈಗ ಆಸಕ್ತಿಗಳು ಕಡಿಮೆಯಾಗಿವೆ. ಇಂತಹ ಸಂಕೀರ್ಣ ಕಾಲಘಟ್ಟ ದಲ್ಲಿ ‘ಕವನ ಬರುವುದಾದರೆ ಬರಲಿ’  ಕವನ ಸಂಕಲನ ಬಂದಿದೆ. ಅದರ ಆಶಯ ಒಳ್ಳೆಯದು, ಇಲ್ಲಿ ಕಾವ್ಯ ಸಹಜವಾಗಿ ಬಂದಿದೆ. ರಚನೆ ಗಳಲ್ಲಿ ಕಾವ್ಯ ಶಕ್ತಿ ಮತ್ತು ಕಾಳಜಿಗಳು ಮುಖ್ಯವಾಗಿವೆ. ಜನ ಸಮೂಹದಿಂದ ದೂರವಾದವ ಒಳ್ಳೆಯ ಕವಿಯಾಗಲಾರ. ಇಲ್ಲಿಯ ಕವನಗಳು ಬದುಕಿನ ತಲ್ಲಣ ಸಂಕಟಗಳ ಬಗೆಗೆ ಸೂಕ್ಷ್ಮ ಒಳ ನೋಟಗಳಿವೆ ಎಂದರು.

ಕೊನೆಯದಾಗಿ ಈ ಮೂರು ಪುಸ್ತಕಗಳ ಪ್ರಕಾಶಕರಾದ  ಸೊರಬ ನೇಕಾರ ಪ್ರಕಾಶದ ಶ್ರೀಯುತ ರಾಮಕೃಷ್ಣ ಅವರಿಗೆ ಹಿರಿಯ ಸಾಹಿತಿ ವಿ.ಗ.ನಾಯಕ ಅವರು ಶಾಲು ಹೊದಿಸಿ ಗೌರವಿಸಿದರು.            

ಈ ಕಾರ್ಯಕ್ರಮಕ್ಕೆ ನನ್ನ ಮಿತ್ರರಾದ , ಹಾಗೂ ಸಂಪದಿಗರಾದ ರಮೇಶ್ ಕಾಮತ್ ಅವರು ಭಾಗವಹಿಸಿ ಸಂತಸ ಹಂಚಿಕೊಂಡಿದ್ದು ನನಗೆ ಎಲ್ಲಾ ಸಂಪದ  ಮಿತ್ರರು ಬಂದಷ್ಟೇ ಆನಂದದಾಯಕವಾಗಿತ್ತು.                                                        

                                                                                                        ವಂದನೆಗಳು

                                                                                             ಹನುಮಂತ ಅನಂತ ಪಾಟೀಲ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಟಿಲರೇ
ಕಾರ್ಯಕ್ರಮದ ವಿವರಣೆ ಓದಿ ಭಾಗವಹಿಸಿದಷ್ಟೇ ಆನಂದವಾಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥ ರವರಿಗೆ ವಂದನೆಗಳು, ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಭಿನಂದನೆಗಳು, ಪಾಟೀಲರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜರವರಿಗೆ ವಂದನೆಗಳು ತಮ್ಮ ಹೃತ್ಪೂರ್ವಕ ಅಭಿನಂದನೆಗಳಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.