ಕಥೆ : ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರ ಇರಲಿ

3.6

ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರ ಇರಲಿ
----------------------------------------------------------


ಬೆಳಗ್ಗೆ ಎದ್ದು  ಅರ್ದ ಒಂದು ಗಂಟೆ  ನಡೆದು ಬರುವುದು ಶ್ರೀನಿವಾಸರ ಅಭ್ಯಾಸ. ಅಂದು ಹಾಗೆ ನಡಿಗೆ ಮುಗಿಸಿ ಮನೆಯತ್ತ ಹೊರಟು ಬರುವಾಗ, ಅದೇಕೊ  ಕುಮುದಳ ಮನೆಯ ಮುಂದೆ ನಿಂತರು, ಅವರಿಗೆ ಅಲ್ಲಿನ  ಸಂದರ್ಭ ಅರ್ಥವಾಗಲಿಲ್ಲ.  ಬೆಳಗ್ಗೆ ಬೆಳಗ್ಗೆಯೆ ಕುಮುದ ಮನೆಯ ಮುಂದು ರಸ್ತೆಯಲ್ಲಿ ದಿಕ್ಕೆಟವಳಂತೆ ಕುಳಿತ್ತಿದ್ದಳು. ಮನೆಯ ವಸ್ತುಗಳೆಲ್ಲ, ಹಳೆಯ ಮಂಚ, ಪಾತ್ರೆಗಳು,  ಬಟ್ಟೆ , ಬುಟ್ಟಿ  ಪರಕೆಯಾದಿಯಾಗಿ ಅವಳ ಸುತ್ತ ಹರಡಿ ಬಿದ್ದಿತ್ತು.  ಅವಳ ಮುಖದಲ್ಲಿ ಅದೆಂತದೊ ದಿಕ್ಕೆಟ್ಟ ಭಾವ. ಹತ್ತಿರ ಹೋದ ಅವರು ಪ್ರಶ್ನಿಸಿದರು
“ಇದೇನಮ್ಮ ಹೀಗೆ, ಇಲ್ಲೇಕೆ ಕುಳಿತಿರುವೆ?”
“ನೋಡು ಸೀನ, ನನ್ನ ಬಾಳು ಹೀಗೆ ಕಡೆಗೆ ಬೀದಿಗೆ ಬಂದು ಬಿತ್ತು” ಅಕೆಯ ದ್ವನಿಯಲ್ಲಿ ಅದೆಂತದೊ ವಿರಕ್ತಭಾವ. ದುಖಃ , ಸಂಕಟಗಳೆಲ್ಲ ಸಮಿಶ್ರಗೊಂಡಿದ್ದವು.
“ಏನಾಯಿತು, ಮನೆಯಿಂದ ಹೊರಗೆ ಏಕೆ ಕುಳಿತಿರುವೆ, ನಿನ್ನ ಮಗ ಕೃಷ್ಣನೆಲ್ಲಿ ಹೋದ , ಏನು ವಿಷಯ” ಶ್ರೀನಿವಾಸರ ಪ್ರಶ್ನೆ.
“ಕೃಷ್ಣನೆಲ್ಲಿ ಹೋಗಿರುವನೊ ಗೊತ್ತಿಲ್ಲ, ವಾರದ ಮೇಲಾಯ್ತು ಮನೆಗೆ ಬಂದು. ನಮಗಿದ್ದ ಒಂದೆ ಮನೆಯನ್ನು ಯಾರಿಗೋ ಮಾರಿಬಿಟ್ಟಿದ್ದಾನೆ, ನನಗೂ ಮೋಸ ಮಾಡಿ. ಅವರ್ಯಾರೊ ತಾವು ಕೊಂಡ ಮನೆಗೆ ಬಂದು ನನ್ನನ್ನು ಹೊರಹಾಕಿದ್ದಾರೆ, ನಮ್ಮವರು ಕಟ್ಟಿಸಿದ ಮನೆ , ಈಗ ಮಗನ ಕೈಕೆಳಗೆ ನಾನು , ನನ್ನ ಹಣೆಬರಹ ಹೀಗೆ, ಈಗ ಏನು ಮಾಡಲಿ ತಿಳಿಯುತ್ತಿಲ್ಲ ನಿನ್ನೆ ರಾತ್ರಿಯಿಂದ ಇಲ್ಲಿಯೆ ಕುಳಿತಿರುವೆ “

ಆಕೆ ಅಸಹಾಯಕಳಾಗಿ ಕೈಚಲ್ಲಿ ಕುಳಿತಳು

ಶ್ರೀನಿವಾಸರು, ಯೋಚನೆಗೆ ಬಿದ್ದರು. ಕುಮುದಳನ್ನು ಹೀಗೆ ರಸ್ತೆಯಲ್ಲಿ ಬಿಟ್ಟುಹೋಗುವದಾದರು ಹೇಗೆ. ಅವಳೇನು ಅಪರಿಚಿತಳಲ್ಲ.   ಅವರಿಗೆ ದೂರದ ಸಂಭಂದಿಯಾದರು ಚಿಕ್ಕವಯಸ್ಸಿನಿಂದಲು ಆಕೆಯ ಜೊತೆಗೆ ಬೆಳೆದವರು ಅವರು. ಅಪ್ಪ ಅಮ್ಮನ ಆಟವಾಡುವಾಗ  ಅಷ್ಟೆ ಅಲ್ಲ , ನಿಜಕ್ಕು ಆಕೆ  ಭಾವನಾತ್ಮಕವಾಗಿ ಅವರ ಜೊತೆ ಚಿಕ್ಕವಯಸಿನಿಂದಲು ಅಕ್ಕನಂತೆ ಇದ್ದವರು.

“ಕುಮುದ, ಈಗ ಏನು ಮಾಡುವೆ ಹೇಳು, ಒಂದು ಕೆಲಸ ಮಾಡು ಈಗ ನಮ್ಮ ಮನೆಗೆ ಬಂದುಬಿಡು, ಮುಂದೆ ನೋಡೋಣ” ಎಂದರು
“ನಿನ್ನ ಜೊತೆಗೆ ಬರುವುದೆ, ನಿನಗೆ ತೊಂದರೆಯಾಗದೆ ಸೀನ, ಇಳಿವಯಸಿನಲ್ಲಿ ನಾನು ನಿನಗೆ ಹೊರೆಯಾಗೆನೆ?”  ಎಂದಳು ಆಕೆ

“ಅದೆಲ್ಲ ಏನು ಇಲ್ಲ, ಈಗ ಅದು ಬಿಟ್ಟು ಮತ್ತೆ ಏನು ಮಾಡುವೆ ಹೇಳು, ಈ ಮನೆಯಲ್ಲಿರುವದಂತು ನಿನಗೆ ಸಾದ್ಯವಿಲ್ಲ, ಹೊರಗೆಲ್ಲಿ ಹೋಗುವೆ? ಏನು ಯೋಚಿಸದೆ ನನ್ನ ಜೊತೆ ಬಾ” ಎನ್ನುತ್ತ ಸುತ್ತಲು ಬಿದ್ದಿರುವ ವಸ್ತುಗಳನ್ನೆಲ್ಲ ಗಮನಿಸುತ್ತ,

“ಇಷ್ಟೊಂದು ವಸ್ತುಗಳು ಇವನ್ನೆಲ್ಲ ಎನು ಮಾಡುವೆ,  ನನ್ನ ಕೇಳಿದಲ್ಲಿ ಇವೆಲ್ಲ ಏನು ಬೇಡ, ನಿನಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ತೆಗೆದುಕೊ , ಸಾಕು , ನನ್ನ ಜೊತೆ ಬಾ “ ಎಂದರು

ಆಕೆ, ಸುತ್ತಲು ನೋಡಿ,  ಸಣ್ಣದೊಂದು  ಹಳೆಯ ಪೆಟ್ಟಿಗೆಯಲ್ಲಿ , ಕೆಲವು ಬಟ್ಟೆಗಳನ್ನೆಲ್ಲ ಹಾಕಿಕೊಂಡಳು. ಎದ್ದು ನಿಂತು

“ನಡೆಯಪ್ಪ,  ನನ್ನ   ಹೊರೆ ನಿನ್ನ ಮೇಲೆ, ಭವಿಷ್ಯದಲ್ಲಿ ಅದೇನು ಕಾದಿದೆಯೊ “ ಎಂದಳು.

“ಇಷ್ಟೆ ಸಾಕೆ ಉಳಿದ ವಸ್ತುಗಳು ಯಾವುವು ಬೇಡವೆ ?” ಎಂದರು ಆಶ್ಚರ್ಯದಿಂದ ಶ್ರೀನಿವಾಸರು.

“ಯಾವುದರಿಂದ ನನಗಿನ್ನೇನು ಆಗಬೇಕಿದ ಸೀನ,  ಉಡಲು ಒಂದೆರಡು ಸೀರೆ ಸಾಕು, ಒಂದು ಹೊತ್ತಿನ ಅನ್ನ ತಿನ್ನಲು , ಹಾಗಿರಲು ಇವೆಲ್ಲ ನನಗೇಕೆ, ಮಗನೆ ಬೀದಿಗೆ ಬಿಟ್ಟು ಹೋದ ಅನ್ನುವಾಗ ಉಳಿದ ವ್ಯಾಮೋಹವೆಲ್ಲ ನನಗೇಕೆ ನಡೆ, ಇದೆಲ್ಲ ಯಾರು ಬೇಕಾದರು ತೆಗೆದುಕೊಳ್ಳಲ್ಲಿ “ ಎನ್ನುತ್ತ , ನಡೆಯಲು ಪ್ರಾರಂಬಿಸಿದರು.

 ಶ್ರೀನಿವಾಸರ ಮನೆ ತಲುಪುವದರಲ್ಲಿ , ಕುಮುದ ವಿಷಯವೆಲ್ಲ ತಿಳಿಸಿದಳು.  ಗಂಡನನ್ನು ಕಳೆದುಕೊಂಡ ನಂತರ ಮಗನ ಜೊತೆಯಲ್ಲಿ ಇದ್ದ ಕುಮದಳ ವಿಷಯ ಶ್ರೀನಿವಾಸರಿಗೆ ತಿಳಿದಿರುವುದೆ.  ಎಲ್ಲ ದುರಾಭ್ಯಾಸಗಳ ದಾಸ ಅವನು. ಓದನ್ನು ಪೂರ್ಣಗೊಳಿಸಲಿಲ್ಲ.  ಸರಿಯಾಗಿ ಯಾವ ಕೆಲಸದಲ್ಲು ನೆಲೆನಿಲ್ಲಲಿಲ್ಲ.  ಕುಮುದ ಹೇಗೊ ಹೆಣ್ಣು ಹುಡುಕಿ ಅವನಿಗೊಂದು ಮದುವೆ ಮಾಡಿದಳು. ಸ್ವಲ್ಪ ಮಟ್ಟಿಗೆ ಓದಿದ ಸೊಸೆ ಆಕೆ. ಬುದ್ದಿವಂತೆ ಮನೆಗೆ ಬಂದ ಕೆಲವೆ ದಿನಗಳಲ್ಲಿ ಗಂಡನ ಬುದ್ದಿಯನ್ನೆಲ್ಲ ಅರ್ಥಮಾಡಿಕೊಂಡಳು. ಅತ್ತೆಯೊಡನೆ ಆಕೆ ಹೊಂದಿಕೊಂಡಳು. ಆದರೆ ಕಟ್ಟಿಕೊಂಡ ಗಂಡನೆ ಸರಿ ಇಲ್ಲದಿರಲು ಫಲವೇನು, ಅವರಿಬ್ಬರ ಸಂಸಾರ ತುಂಬಾ ದಿನವೇನು ಸಾಗಲಿಲ್ಲ್ಲ.  ಗಂಡನನ್ನು ತಿದ್ದಲು ಸಾಕಷ್ಟು ಪ್ರಯತ್ನ ಪಟ್ಟ ಆಕೆ ಕಡೆಗೆ ಕೈಚಲ್ಲಿ,ಮದುವೆಯಾದ ವರ್ಷದಲ್ಲಿ ಆಕೆ ಗಂಡನಿಗೆ ವಿಚ್ಚೇಧನ ನೀಡಿ ಹೊರಟುಹೋದಳು.

ಕುಮುದಳ ಮಗ ಕೃಷ್ಣಮೂರ್ತಿಯೇನು ಅದನ್ನು ಬಹಳ ಹಚ್ಚಿಕೊಂಡಂತೆ ಕಾಣಲಿಲ್ಲ. ತನ್ನದೆ ಪ್ರಪಂಚದಲ್ಲಿದ್ದ. ಕಡೆಗೊಮ್ಮೆ ಹಣಕ್ಕಾಗಿ ತಾಯಿಯನ್ನು ಮೋಸಮಾಡಿ ಹೊರಟುಬಿಟ್ಟ. ತಾನು ಯಾವುದೊ ವ್ಯಾಪಾರ ಮಾಡುತ್ತಿರುವದರಿಂದ ಮನೆಯ ಮೇಲೆ ಸಾಲ ತೆಗೆಯುವದಾಗಿ ಅದಕ್ಕಾಗಿ ಮನೆ ತನ್ನ ಹೆಸರಿನಲ್ಲಿರಲಿ ಎಂದು ತಾಯಿಯನ್ನು ಬಲವಂತ ಪಡಿಸಿ, ಪತ್ರಕ್ಕೆ ಆಕೆಯ ಕೈಲಿ ರುಜು ಹಾಕಿಸಿದ, ಆದರೆ ಆಕೆಗೆ ಅರಿವಿರಲಿಲ್ಲ, ಮನೆ ಅವನ ಹೆಸರಿಗೆ ಆಲ್ಲ ಅದನ್ನು ಸೇಟು ಒಬ್ಬನಿಗೆ ಮಾರುತ್ತಿರುವ ವಿಷಯ ಆಕೆಗೆ ಅರಿವಿಗೆ ಬರಲಿಲ್ಲ. ಆಕೆಯೆ ನೊಂದಣಿ ಕಛೇರಿಗೆ ಹೋಗಿ ರುಜು ಹಾಕುವಾಗಲು ಮನೆ ಮಗನ ಹೆಸರಿಗೆ ಬರೆಯುತ್ತಿರುವದಾಗಿ ಆಕೆ ನಂಬಿಕೊಂಡಿದ್ದರು, ಪತ್ರದಲ್ಲಿರುವದನ್ನು ಆಕೆ ಓದಿರಲು ಇಲ್ಲ.

ಆಕೆ ರುಜು ಹಾಕಿಬಂದ ನಂತರ ಮಗ ಮನೆಗೆ ಬರಲಿಲ್ಲ, ವಾರದ ನಂತರ ಸಂಜೆ ಬಂದ  ಸೇಟು ಮನೆ ಖಾಲಿ ಮಾಡಲು ತಿಳಿಸಿದಾಗ ಅವಳಿಗೆ ನಿಜ ವಿಷಯ ತಿಳಿಯಿತು. ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಹೊರಗೆ ಬಲವಂತದಿಂದ ಹಾಕಿದ ,  ಅವನು ಆಕೆಯನ್ನು ಬೀದಿಗೆ ದಬ್ಬಿದಾಗ ನಿಸ್ಸಾಹಯಕಳಾಗಿದ್ದಳು, ಯಾರನ್ನು ನ್ಯಾಯ ಕೇಳುವುದು ಎನ್ನುವುದು ಎಂದು ಆಕೆಗೆ ತಿಳಿಯಲೆ ಇಲ್ಲ.  

..

ಬೆಳಗ್ಗೆ ಗಾಳಿಸೇವನೆಗೆ ಹೊರಹೋದ ಗಂಡ, ಹೊತ್ತಾದರು  ಬರದಿದ್ದಾಗ  ಆತಂಕದಲ್ಲಿ ಬಾಗಿಲಲ್ಲಿ ನಿಂತಿದ್ದಳು ಶ್ರೀನಿವಾಸರಾಯರ ಪತ್ನಿ ಪದ್ಮ.  ಕಡೆಗೊಮ್ಮೆ ಗಂಡ ನಡೆದುಬರುವದನ್ನು ಕಂಡು ಸಮಾದಾನದ ಉಸಿರು ಬಿಟ್ಟಳಾಕೆ, ಹಿಂದೆಯೆ ಇದ್ದ ಹೆಂಗಸನ್ನು ಕಂಡು ಯಾರು ಎಂದು ದಿಟ್ಟಿಸಿದಳು. ಕುಮುದಳ ಗುರುತು ಆಕೆಗೆ ಸುಲುಭವಾಗಿ ಸಿಕ್ಕಿತು.  ಹತ್ತಿರ ಬಂದ ಆಕೆಯನ್ನು ಒಳಗೆ  ‘ಬನ್ನಿ ‘ ಎಂದು ನಗುತ್ತ ಸ್ವಾಗತಿಸಿದಳು.

ಒಳಗೆ ಬಂದ ಶ್ರೀನಿವಾಸರಾಯರು, ಮೊದಲು ಕುಮುದಳಿಗೆ ಕಾಫಿ ಕೊಡುವಂತೆಯು, ನಂತರ ದೇವರ ಮನೆ ಪಕ್ಕದಲ್ಲಿರುವ ಖಾಲಿ   ಕೊಟ್ಟಡಿಯನ್ನು ಅವಳು ಇರಲು ಅನುಕೂಲಮಾಡುವಂತೆಯು ತಿಳಿಸಿದಾಗ. ಆಕೆಗೆ ಯಾವ ಸುದ್ದಿ ತಿಳಿಯದಿದ್ದರು ಸಹ, ಆಗಲಿ ಎಂದು ತಲೆ ಆಡಿಸಿದರು.

ಪದ್ಮ ಮೂವರಿಗು ಕಾಫಿ ಮಾಡಿಕೊಟ್ಟು, ನಂತರ ಕುಮುದ ಸ್ನಾನಕ್ಕೆ ಎಂದು ಹೊರಟಾಗ, ಶ್ರೀನಿವಾಸರಾಯರು, ಪದ್ಮಳಿಗೆ ಎಲ್ಲ ವಿಷಯ ತಿಳಿಸಿದರು. ಆಕೆ ಅಸಾಹಯಕಳಾಗಿ ರಸ್ತೆಯಲ್ಲಿ ನಿಂತಿದ್ದಾಗ ತಾವು ಹಾಗೆ ಬರಲಾಗಲಿಲ್ಲ , ಕರೆತಂದನೆಂದು , ಇನ್ನು ಸ್ವಲ್ಪ ದಿನ್ನ ಇಲ್ಲೆ ಇರಲಿ ನಂತರ ಯೋಚಿಸೋಣವೆಂದು ತಿಳಿಸಿದಾಗ, ಪದ್ಮ ಹೆಚ್ಚು ಏನು ಯೋಚಿಸಲಿಲ್ಲ.

ಶ್ರೀನಿವಾಸರಾಯರು ಹಾಗು ಪದ್ಮರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಓದಿನಲ್ಲಿ ಸದಾ ಮುಂದೆ. ದೊಡ್ಡವರಾದಂತೆ ಉನ್ನತ ವ್ಯಾಸಂಗವನ್ನೆಲ್ಲ ಮುಗಿಸಿ,  ಕೆಲಸ ಹಿಡಿದು, ಇಬ್ಬರು ಅಮೇರಿಕ, ಇಂಗ್ಲೇಂಡ್  ಎಂದು ಹೊರದೇಶಕ್ಕೆ ಹಾರಿದಾಗ. ಶ್ರೀನಿವಾಸರಾಯರಿಗೆ ಇಷ್ಟವೆ ಇರಲಿಲ್ಲ.  ಕೆಲಸಕ್ಕಾಗಿ ಏಕೆ ದೇಶಬಿಟ್ಟು ದೇಶ ಹೋಗುವುದು, ಇಲ್ಲಿಯೆ ಒಂದು ಕೆಲಸ ಹೊಂಚಿಕೊಂಡರಾಗದೆ ಎನ್ನುವ ಮನೋಭಾವ ಅವರದು. ಅದರೆ ಅವರ ಅಭಿಪ್ರಾಯಕ್ಕೆ ಮನ್ನಣೆ ಸಿಗದು ಎಂದಾಗ ನೊಂದು ಸುಮ್ಮನಾದರು. ಈಗ ಅವರಿಬ್ಬರದೆ ಸಂಸಾರಕ್ಕೆ ಕುಮುದ ಬಂದು ಸೇರಿದ್ದು, ಒಂದು ರೀತಿ ಪದ್ಮಳಿಗೆ ಸಂತಸವೆ ಆಗಿತ್ತು ಎನ್ನಬಹುದು.ಕುಮುದ ಆ ಇಬ್ಬರ ಸಂಸಾರಕ್ಕೆ ಸುಲುಭವಾಗಿ ಹೊಂದಿಕೊಂಡಳು. ಅವಳಿಗೆ ಅಲ್ಲಿ ಯಾವ ಕೊರತೆಯು ಇರಲಿಲ್ಲ. ಊಟಕ್ಕೆ ಆಗಲಿ, ಸ್ನಾನಕ್ಕೆ ಆಗಲಿ, ಇರಲು ಜಾಗವಾಗಲಿ , ತನ್ನ ಮನೆಯಲ್ಲಿ  ಇದ್ದ ಅನುಕೂಲಕ್ಕಿಂತ ಚೆನ್ನಾಗಿಯೆ ಇದ್ದಿತು. ಅವಳಿಗೆ ಇರುವದೆಲ್ಲ ಮಗನ ಯೋಚನೆ ಅಷ್ಟೆ. ತಾನು ಹೆತ್ತ ಮಗ  ಹೀಗಾದನಲ್ಲ ಎಂದು. ಆದರೆ ಆಕೆ ಬುದ್ದಿವಂತಳು,

“ಸದಾ ನಮ್ಮ ದುಃಖವನ್ನು ಪರರ ಬಳಿ ಹೇಳುತ್ತಿದ್ದರೆ, ಅವರಿಗೆ ನಮ್ಮ ಬಗ್ಗೆ ನಿರಾಸಕ್ತಿ,  ಮತ್ತು ಜಿಗುಪ್ಸೆಯ ಭಾವ ಬೆಳೆದು, ನಮ್ಮ ಮಾತು ಕೇಳಲು ಇಷ್ಟ ಪಡುವದಿಲ್ಲ’ ಎಂದು ಆಕೆ ಅರ್ಥಮಾಡಿಕೊಂಡಿದ್ದಳು.  ಆ ಮನೆಗೆ ಬಂದ ನಂತರ ಆಕೆ ಪದೆ ಪದೆ ತನ್ನ ಹಾಗು ತನ್ನ ಮಗನ ಬಗ್ಗೆ ಮಾತು ಆಡಲು ಹೋಗಲೆ ಇಲ್ಲ. ಅವರಾಗೆ ಕೇಳಿದಾಗ ಸಣ್ಣ ದ್ವನಿಯಿಂದ ಉತ್ತರಿಸಿ ಸುಮ್ಮನಾಗುತ್ತಿದ್ದಳು.

ಶ್ರೀನಿವಾಸರ  ನಡೆ ನುಡಿಗಳಲ್ಲಿ ಈಚೆಗೆ ಸ್ವಲ್ಪ ಬದಲಾವಣೆಯನ್ನು ಪದ್ಮ ಗುರುತಿಸಿದ್ದಳು,  ಮಕ್ಕಳು ಅವರ ಮಾತು ನಿರ್ಲಕ್ಷ ಮಾಡಿ ವಿದೇಶಗಳಿಗೆ ಹೊರಟುಹೋದ ನಂತರ ಅವರು ತೀರ ಗಂಭೀರವಾಗಿಯೆ ಇರುತ್ತಿದ್ದರು. ಪದ್ಮ ಜೊತೆ ಸಹ ಮಾತು ತೀರ ಕಡಿಮೆ ಎಷ್ಟು ಬೇಕೊ ಅಷ್ಟು ಅನ್ನುತ್ತಾರಲ್ಲ ಹಾಗೆ ಇದ್ದರು. ಆದರೆ ಕುಮುದ ಬಂದ ನಂತರ ಅವರಲ್ಲಿ ಸ್ವಲ್ಪ ಉತ್ಸಾಹ ಜಾಸ್ತಿಯಾಗಿತ್ತು.

ಸದಾ ಪುಸ್ತಕ ಹಿಡಿದು ಕಾಲ ಕಳೆಯುತ್ತಿದ್ದ ಅವರು, ಈಗ ವಿರಾಮದ ಸಮಯಗಳಲ್ಲಿ, ತಮ್ಮ ಚಿಕ್ಕ ವಯಸಿನ ಘಟನೆಗಳನ್ನೆಲ್ಲ ಮೆಲುಕು ಹಾಕುವರು. ತಾವು ಮತ್ತು ಅವಳು ಜೊತೆಯಲ್ಲಿ ಆಡುತ್ತಿದ್ದ ದಿನಗಳು, ಆಗ ಜೊತೆಯಲ್ಲಿ ಇರುತ್ತಿದ್ದ ಹಲವು ಗೆಳೆಯರು, ತಮ್ಮ ಅಪ್ಪ ಅಮ್ಮ, ಕುಮುದಳ ಅಪ್ಪ ಅಮ್ಮ ಇವರೆಲ್ಲರ ನೆನಪು, ಹೀಗೆ ದಿನಕ್ಕೊಂದು ಬಗೆಯಲ್ಲಿ ಅವರ ಮಾತಿನ ಲಹರಿ ಸಾಗುತ್ತಿತ್ತು. ಹೀಗಾಗಿ ಅವರು ಪದ್ಮ ಬಳಿ ಸಹ ನಗುತ್ತ ಮಾತನಾಡುತ್ತ ಇರುವುದು ಅವಳಿಗು ನೆಮ್ಮದಿ, ತೃಪ್ತಿ ಕೊಟ್ಟಿತ್ತು.

ಅವಳು ಎಷ್ಟೊ ಬಾರಿ ಕುಮುದಳ ಎದುರಿಗೆ ಅಂದಳು

“ನೀವು ಬಂದ ಮೇಲೆ ಅವರು ಗೆಲುವಾಗಿದ್ದಾರೆ,  ನೀವು ಎಲ್ಲಿಯು ಹೋಗಬೇಡಿ, ನಮ್ಮ ಜೊತೆಗೆ ಇದ್ದುಬಿಡಿ” ಎಂದು.

ಅದಕ್ಕೆ ಕುಮುದ ಸಹ ನಗುತ್ತಲೆ ಹೇಳಿದ್ದಾಳೆ

“ನಾನು ಎಲ್ಲಿ ಅಂತ ಹೋಗಲಮ್ಮ,  ನೀವು ಕಳಿಸಿದರೆ ಹೋಗಬೇಕೆ ಹೊರತು,   ನನಗೆ ಇನ್ನು ಯಾರು ಇಲ್ಲ “ ಎಂದು.

ಅಲ್ಲದೆ ಕುಮುದ ಎಂದು ಕುಳಿತು ,ಮಲಗಿ ಕಾಲ ಕಳೆಯುತ್ತಿರಲಿಲ್ಲ. ಅವಳು ಸದಾ ಚಟುವಟಿಕೆಯಿಂದ ಇರುತ್ತಿದ್ದು, ಪದ್ಮಳಿಗೆ ಎಲ್ಲ ಕೆಲಸಗಳಿಲ್ಲಿ  ಸಹಾಯ ಮಾಡುತ್ತ, ಅವಳ ಕೆಲಸಗಳನ್ನು ಹಗುರಗೊಳಿಸಿದ್ದಳು. ಹೊರಗಿನ ಬಟ್ಟೆ, ಪಾತ್ರೆ, ಕಸ ತೆಗೆಯುವುದು, ಹೀಗೆ ಪದ್ಮ ಬೇಡ ಎಂದರು ಸಹ ಪದ್ಮ ಮಾಡಿ ಮುಗಿಸುತ್ತಿದ್ದಳು. ಅವಳು ಕೆಲವು ಸೂಕ್ಷ್ಮಗಳನ್ನು ಸಹ ಅರ್ಥಮಾಡಿಕೊಂಡಿದ್ದಳು. ಎಷ್ಟೆ ಕೆಲಸಗಳನ್ನು ಮಾಡಿದರು ಸಹ ಅವಳು ಪೂರ್ತಿ ಸ್ವತಂತ್ರ್ಯ ವಹಿಸಿ, ಎಲ್ಲ ಕಡೆ ಕೈ ಹಾಕುತ್ತಿರಲಿಲ್ಲ. ಅಡುಗೆಯಂತ ಕೆಲಸದಲ್ಲಿ ಅವಳು ಪದ್ಮ ಕರೆದಹೊರತು, ಕುಮುದ ಕೈ ಆಡಿಸುತ್ತಿರಲಿಲ್ಲ. ಅಲ್ಲದೆ ಕೆಲವು ಮನೆಗೆ ಸಂಬಂದಿಸಿದ ಮಾತುಕತೆಗಳಲ್ಲಿ ಮೌನವಾಗಿ ಕೇಳುತ್ತಿದ್ದಳೆ ಹೊರತು, ತಾನಾಗಿ ಏನು ನುಡಿಯುತ್ತಿರಲಿಲ್ಲ.

ಶ್ರೀನಿವಾಸರಿಗೆ, ಪದ್ಮರಿಗೆ ತಮ್ಮ ಮಕ್ಕಳ ಮೊಮ್ಮಕ್ಕಳ ಬಗ್ಗೆ ಹೆಚ್ಚು  ಅಕರಾಸ್ತೆ ಎಂದು ಗೊತ್ತು. ಅವರು ಆ ಮಾತು ಆಡುವಾಗ ತಾನು ಸಹನೆಯಿಂದ ಕೇಳುವಳು. ತಾನು ಆದಷ್ಟು ಆ ಬಗ್ಗೆ ಹೆಚ್ಚೆಚ್ಚು ಮಾತನಾಡುವಳು. ಇದರಿಂದ ಪದ್ಮ ಹಾಗು ಶ್ರೀನಿವಾಸರ ಮನಸಿಗೆ ಹಿತವೆನಿಸುತ್ತೆ ಎಂದು ಅವಳು ಅರ್ಥಮಾಡಿಕೊಂಡಿದ್ದಳು.

ಎಲ್ಲವು ಸುಖಕರವಾಗಿಯೆ ಇತ್ತು.  

ಒಂದಾರು ತಿಂಗಳು ಕಳೆದಿತ್ತೊ ಏನೊ.  ಶ್ರೀನಿವಾಸರು ಎಂದಿನಂತೆ ಬೆಳಗ್ಗೆ ಎದ್ದು ಗಾಳಿಸೇವನೆಗೆ ಹೊರಬಿದ್ದವರು ಇನ್ನು ಬಂದಿರಲಿಲ್ಲ. ಪದ್ಮ ಗಮನಿಸಿದರು, ಅದೇನೊ ಇನ್ನು ಕುಮುದ ಎದ್ದು ಹೊರಬಂದಿಲ್ಲ. ಸಾಮಾನ್ಯವಾಗಿ, ಮನೆಯಲ್ಲಿ ಮೊದಲು ಏಳುತ್ತ ಇದ್ದಿದ್ದೆ ಅವಳು,   ಏಕಿರಬಹುದು, ಮೈಸರಿ ಇಲ್ಲವೆ ಎಂದುಕೊಳ್ಳುತ್ತ,  ಕುಮುದ ಮಲಗುತ್ತಿದ್ದ ಕೊಟ್ಟಡಿಗೆ ಬಂದರು.  ಕುಮುದ ಇನ್ನು ಮಲಗಿಯೆ ಇದ್ದರು.  ಪದ್ಮ ಹತ್ತಿರ ಬಂದರು, ಕೂಗಿದರು, ಮುಟ್ಟಿನೋಡಿದರು. ಆಕೆಗೆ ತಿಳಿಯಿತು, ಕುಮುದ ಸತ್ತು ಹೋಗಿದ್ದರು. ರಾತ್ರಿ ಮಲಗಿದಂತೆಯೆ, ನಿದ್ದೆಯಲ್ಲಿಯೆ ಬಹುಷಃ ಪ್ರಾಣ ಬಿಟ್ಟಿರಬಹುದು.

ಗಾಭರಿಪಟ್ಟು ಹೊರಬಂದ ಪದ್ಮ ಏನು ತೋಚದೆ, ಎದುರು ಮನೆ ಹುಡುಗರನ್ನು ಕರೆದು, ಶ್ರೀನಿವಾಸರನ್ನು ಕರೆತರಲು ಕಳಿಸಿದಳು. ಸ್ವಲ್ಪ ಹೊತ್ತಿನಲ್ಲಿಯೆ, ಶ್ರೀನಿವಾಸರು ಹಿಂದೆ ಬಂದರು. ಅವರು ನೋಡಿ, ಡಾಕ್ಟರನ್ನು ಕರೆಸಿದರು, ಪ್ರಯೋಜನವೆನು ಇರಲಿಲ್ಲ. ಆಕೆಯ ಬದುಕು ಮುಗಿದು ಹೋಗಿತ್ತು.

ಶ್ರೀನಿವಾಸರು ನೊಂದು ಕೊಂಡರು,’ಪಾಪ ಈಕೆಯ ಬದುಕು ಹೀಗೆ ಕೊನೆಯಾಯಿತೆ’ ಎಂದು.

ತಮಗೆ ಗೊತ್ತಿದ್ದ, ಕುಮುದಳ ಎಲ್ಲ ಬಂದುಗಳಿಗೆ ಸುದ್ದಿ ಕಳಿಸಿದರು ಶ್ರೀನಿವಾಸರು, ಆಕೆಯ ಸ್ವಂತ ತಮ್ಮ ಒಬ್ಬ ಬೆಂಗಳೂರಿನಲ್ಲಿದ್ದರು,  ಸತ್ಯನಾರಾಯಣ ಎಂದು, ಆತನು ಬಂದರು. ಏನೆ ಮಾಡಿದರು ಸಹ ಕುಮುದಳ ಮಗ ಕೃಷ್ಣಮೂರ್ತಿ ಮಾತ್ರ ಎಲ್ಲಿದ್ದಾನೆ ಎಂದು ಪತ್ತೆಯಾಗಲೆ ಇಲ್ಲ.  ಕಡೆಗೆ ಶ್ರೀನಿವಾಸರೆ ಸ್ವತಃ ನಿಂತು ಎಲ್ಲ ಕಾರ್ಯ ನೆರವೇರಿಸಿದರು. ಕುಮುದಳ ಬಂದುಗಳೆಲ್ಲ ಶ್ರೀನಿವಾಸರ ಈ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಿಪಡಿಸಿದರು.   ಮಗನ ಜಾಗದಲ್ಲಿ ನಿಂತು ಕರ್ತವ್ಯ ನೆರವೇರಿಸಿದ ಅವರ ಗುಣ ಎಲ್ಲರಿಗು ಮೆಚ್ಚುಗೆಯಾಯಿತು.
.
.

ಮತೆ ವಾರ ಕಳೆದಿತ್ತೇನೊ.

ಬೆಳಗ್ಗೆ ಶ್ರೀನಿವಾಸರು ತಿಂಡಿ ತಿನ್ನುವ ಮೊದಲೆ, ಕುಮುದಳ ಮಗ ಕೃಷ್ಣ ಮೂರ್ತಿ ಬಂದ. ಅವರಿಗೆ ಕೊಂಚ ಆಶ್ಚರ್ಯವೆನಿಸಿತು. ಅವರು ಅವನ ಜೊತೆಗೆ ಯಾವ ಮಾತು ಆಡಲು ಇಷ್ಟಪಡಲಿಲ್ಲ. ಮೌನವಾಗಿಯೆ ಕುಳಿತಿದ್ದರು. ಅವನಾಗಿಯೆ ತನ್ನ ಅಮ್ಮನನ್ನು ಕಡೆದಿನಗಳಲ್ಲಿ ಸುಖವಾಗಿ ನೋಡಿಕೊಂಡ ಅವರ ಗುಣವನ್ನು ಹೊಗಳಿದ. ಅದಕ್ಕು ಸುಮ್ಮನಿದ್ದರು.

ಅವನು ಹೇಳಿದ
“ನನಗೆ ತಿಳಿಯಲಿಲ್ಲ, ಅಂಕಲ್ , ನಮ್ಮ ಅಮ್ಮ ಹೋಗಿಬಿಟ್ಟರು ಎಂದು, ನಾನು ಬೆಂಗಳೂರಿನಲ್ಲಿ ಮನೆ ಮಾಡಿದ್ದೆ, ಅವಳನ್ನು ಇಲ್ಲಿ ಬಂದು ಕರೆದುಕೊಂಡು ಹೋಗುವ ಎಂದೆ ಬಂದೆ, ಇಲ್ಲಿ ಬಂದ ನಂತರವೆ ವಿಷಯ ತಿಳಿಯಿತು. ನೋಡಿ ನನಗೆ ಎಂತ ಕಷ್ಟ ಬಂತು “
ಎಂದು ಕಣ್ಣು ಹಾಕಿದ.

ಶ್ರೀನಿವಾಸರಿಗೆ ಎಂತದೊ ಮುಜುಗರ ಯಾವಾಗ ಇವನು ಎದ್ದು ಹೋಗುವನೊ ಎಂದು ಕಾಯುತ್ತಿದ್ದರು. ಕಡೆಗು ಅವನು ಬಾಯಿ ಬಿಟ್ಟ
“ಅಂಕಲ್ ,  ಅಮ್ಮನ ಹತ್ತಿರ  ಎರಡೆಳೆಯ ಒಂದು ಚಿನ್ನದ ಸರವಿತ್ತು ಅನ್ನಿಸುತ್ತೆ, ಅವರು ಇಲ್ಲಿ ಬರುವಾಗ ತಂದರೆ” ಎಂದು

ಶ್ರೀನಿವಾಸರು ನುಡಿದರು “ನೋಡಪ್ಪ ಅವಳ ಹತ್ತಿರ ಏನೇನು ಇತ್ತೊ ನನಗೆ ತಿಳಿಯದು, ಅವಳು ಎಲ್ಲವನ್ನು ರಸ್ತೆಯ ಮದ್ಯದಲ್ಲಿಯೆ ಬಿಟ್ಟು ಬಂದಳು, ಅವಳದು ಎಂದು ಒಂದು ಪೆಟ್ಟಿಗೆ ಮಾತ್ರ ಇದೆ, ಅದೂ ಈಗಲು ಅವಳು ಇದ್ದ ರೂಮಿನಲ್ಲಿಯೆ ಇದೆ, ಅದರಲ್ಲಿ ಏನಿದೆ ಎಂದು ನನಗೆ ತಿಳಿಯದು, ನೀನೆ ನೋಡು ಬಾ” ಎಂದು ಕರೆದೋಯ್ದರು.

ಕುಮುದ ಮಲಗುತ್ತಿದ್ದ ರೂಮು ಸ್ವಚ್ಚವಾಗಿತ್ತು, ಗೋಡೆಯಲ್ಲಿನ ಗೂಡಿನಲ್ಲಿ , ಕುಮುದಳ ಪೆಟ್ಟಿಗೆ ಇತ್ತು. ಶ್ರೀನಿವಾಸರು ಕೈ ತೋರಿಸಿದಾಗ, ಕೃಷ್ಣಮೂರ್ತಿ  ಪೆಟ್ಟಿಗೆ ಹೊರತೆರೆದು, ಅದರಲ್ಲಿದ್ದ ಬಟ್ಟೆಗಳನ್ನೆಲ್ಲ ಹೊರತೆಗೆದ, ಕಡೆಗೆ, ಪೆಟ್ಟಿಗೆಯ ತಳದಲ್ಲಿ ಅವನಿಗೆ ಅವನು ಹೇಳಿದ ಸರವಿತ್ತು. ಸಂತಸದಿಂದ ಅದನ್ನು ತೋರಿಸಿ,

“ಸಿಕ್ಕಿತ್ತು ಅಂಕಲ್ ಇದೆ” ಎನ್ನುತ್ತ ಎದ್ದು ನಿಂತ.

“ಸರಿ ಸಿಕ್ಕಿತಲ್ಲ ಬಿಡಪ್ಪ, ನಿಮ್ಮ ಅಮ್ಮನ ವಸ್ತು” ಎಂದರು ಶ್ರೀನಿವಾಸರು.

“ ಹೌದು  ಅಂಕಲ್, ನನ್ನ ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರವಿರಲಿ” ಎಂದು ಕಣ್ಣಲ್ಲಿ ನೀರು ತುಂಬುತ್ತ ಹೇಳಿದ ಕೃಷ್ಣಮೂರ್ತಿ.


ಅದೇಕೊ ಶ್ರೀನಿವಾಸರಿಗೆ ನಗು ಬರಲು ಪ್ರಾರಂಬವಾಯಿತು. ಅವರು ಎಂದು ಅಷ್ಟು ಜೋರಾಗಿ ನಕ್ಕವರೆ ಅಲ್ಲ , ನಗುತ್ತ

“ಅದೇನಪ್ಪ, ಸರವೊಂದೆ ಏನು, ಅಲ್ಲಿರುವ ಪೆಟ್ಟಿಗೆ, ಅ ಹಳೆಯ ಸೀರೆಗಳು ಎಲ್ಲವು ನಿಮ್ಮ ಅಮ್ಮನ ನೆನಪೆ ಅಲ್ಲವೆ ಅದೆಲ್ಲ ಬೇಡವೆ “ ಎಂದರು ಜೋರಾಗಿ ನಗುತ್ತ.

ಕೃಷ್ಣಮೂರ್ತಿ, ಅವರನ್ನೆ ನೋಡುತ್ತಿದ್ದ ತುಸು ಗಾಭರಿಯಾಗಿ, ಅವರ ನಗು ನಿಲ್ಲಲ್ಲೆ ಇಲ್ಲ. ಅದೇಕೊ ಅವರು ಪ್ರಯತ್ನ ಪಟ್ಟರು ನಗು ನಿಲ್ಲದೆ ಉಕ್ಕಿ ಉಕ್ಕಿ ಬರುತ್ತಿತ್ತು, ನಗು ತಡೆಯದೆ ಅವರ ಕಣ್ಣಲ್ಲಿ ನೀರು ಬರುತ್ತಿತ್ತು, ಕನ್ನಡಕ ತೆಗೆದು ಕೈಯಲ್ಲಿ ಹಿಡಿದು ಜೋರಾಗಿ ನಗುತ್ತಿದ್ದರು.

ಅವರ ನಗು ಕೇಳಿ , ಗಾಭರಿಯಿಂದ ಒಳಗಿನಿಂದ ಬಂದ ಪದ್ಮಳು ನೋಡುತ್ತ ನಿಂತಳು. ಕೃಷ್ಣಮೂರ್ತಿ ಅಲ್ಲಿ ನಿಲ್ಲಲ್ಲು ಸಂಕೋಚವೆನಿಸಿ, ತಲೆತಗ್ಗಿಸಿ, ಮನೆಯಿಂದ ಹೊರಬಂದು. ತನ್ನ ದ್ವಿಚಕ್ರವನ್ನತ್ತಿ ಹೊರಟುಬಿಟ್ಟ.

“ಅಂಕಲ್ ನನ್ನ ಅಮ್ಮನ ನೆನಪಾಗಿ ಇದೊಂದಾದರು ನನ್ನ ಹತ್ತಿರವವಿರಲಿ” ಎಂದ ಕೃಷ್ಣಮೂರ್ತಿಯ ಮಾತು ನೆನೆಯುತ್ತ ಶ್ರೀನಿವಾಸರಿಗೆ ಅದೇನೊ ನಗು ಉಕ್ಕಿ ಉಕ್ಕಿ ಬರುತ್ತಿತ್ತು. ಅವನು ಹೋದ ಸ್ವಲ್ಪ ಹೊತ್ತು ನಗುತ್ತಿದ್ದರು. ಕಡೆಗೊಮ್ಮೆ ಪದ್ಮ ಅವರ ಪಕ್ಕದಲ್ಲಿ   ನಿಂತು ಆತಂಕದಿಂದ
“ರೀ ..” ಎಂದಳು. ಅಕೆಯತ್ತ ನೋಡಿದ ಶ್ರೀನಿವಾಸರು ನಗು ನಿಲ್ಲಿಸಿ. ಕನ್ನಡಕ ಧರಿಸಿ, ಗಂಬೀರವಾಗುತ್ತ,
“ಸರಿ ನಡಿ ಪದ್ಮ, ತಿಂಡಿ ಕೊಡು “ ಎನ್ನುತ್ತ ಹೊರಟರು.

-ಮುಗಿಯಿತು

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥರೇ, ಮನಮಿಡಿಯುವ ವಾಸ್ತವ ಚಿತ್ರಣ. ಮಾನವ ಮೇಲೇರುವ ಬದಲು ಕೆಳಗೆ ಜಾರುತ್ತಿರುವುದನ್ನು ಚೆನ್ನಾಗಿ ಬಿಂಬಿಸಿರುವಿರಿ. ಶ್ರೀನಿವಾಸರಾಯರಂತಹವರೂ ಇದ್ದಾರಲ್ಲಾ! ಅದೇ ಸಮಾಧಾನದ ಸಂಗತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ತವದಲ್ಲಿ ಶ್ರೀನಿವಾಸರಾಯರಂತವರು ಇರುವುದು ಬಹಳ ಅಪರೂಪ. ಸ್ವಾರ್ಥವೇ ತುಂಬಿಕೊಂಡಿರುವ ಈ ಜಗತ್ತಿನಲ್ಲಿ ಅದೆಷ್ಟೋ ತಾಯಂದಿರು ಕುಮುದಳಂತಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೆಟ್ಟ ಚಟಗಳು ಮನುಷ್ಯನನ್ನು ಎಷ್ಟು ಕೀಳು ಮಟ್ಟಕ್ಕೆ ಇಳಿಸುತ್ತವೆ ಎನ್ನುವುದಕ್ಕೆ ಉತ್ತಮ ನಿದರ್ಶನ ಈ ಕಥೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪಾರ್ಥರೆ,
" ಅಮ್ಮನ............." ಕಥೆ ಓದುವಾಗ ನಮ್ಮ ಮನೆಯ ಹತ್ತಿರದಲ್ಲಿ ನಡೆದ ನಿಜವಾದ ಘಟನೆಯ ವಿವರಣೆಯನ್ನು ಓದಿದಹಾಗೆ ಆಯಿತು. ಇಲ್ಲಿ ಸ್ವಲ್ಪ ಬದಲಾವಣೆ ಎಂದರೆ, ಶ್ರೀನಿವಾಸರಂಥಹವರು ಆಕೆಯ ಸಹಾಯಕ್ಕೆ ಬಂದು, ಶೃಂಗೇರಿಯ ವೃದ್ಧಾ ಶ್ರಮಕ್ಕೆ ಸೇರಿಸಿ ಪುಣ್ಯ ಕಟ್ಟಿ ಕೊಂಡರು. ಅವರ ಅಂತ್ಯಕಾಲದಲ್ಲಿ ತಕ್ಕ ಮಟ್ಟಿಗೆ ಔಷದೊಪಚರ ನಡೆಸಿ, ಅಂತ್ಯಸಂಸ್ಕಾರವನ್ನು ನಡೆಸಿ ಪುಣ್ಯ ಸಂಪಾದನೆ ಮಾಡಿದರು.
ನಿಮ್ಮ ಲೇಖನ ನನಗೆ ಕಥೆ ಎಂದು ಅನಿಸಲೇ ಇಲ್ಲ. ಉತ್ತಮ ನಿರೂಪಣೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಪ್ರಕಾಶ್ ರವರೆ ಯಾವಾಗಲು ನಿಜಘಟನೆಗಳು ಕಥೆಗಳಂತೆಯು , ಕಥೆಗಳು ನಿಜ ಘಟನೆಗಳಂತೆಯು ತೋರುತ್ತವೆ ,
ತಮ್ಮ ಮೆಚ್ಚುಗೆಗೆ ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಮತರವರಿಗೆ ವಂದನೆಗಳು ನಮ್ಮ ಸಮಾಜವೆ ಹಾಗೆ ಕೃಷ್ಣಮೂರ್ತಿಯಂತವರು ಇರುವಲ್ಲಿ ಶ್ರೀನಿವಾಸರಾಯರು ಇರುವರು ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಇರಬಹುದು , ತಮ್ಮ ಮೆಚ್ಚುಗೆಗೆ ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜರಿಗೆ ನಮಸ್ಕಾರಗಳು , ನಮ್ಮ ಸಮಾಜವೆ ಹಾಗೆ ಕೃಷ್ಣಮೂರ್ತಿಯಂತವರು ಇರುವಲ್ಲಿ ಶ್ರೀನಿವಾಸರಾಯರು ಇರುವರು ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಇರಬಹುದು , ತಮ್ಮ ಮೆಚ್ಚುಗೆಗೆ ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿಯವರೆ ವಂದನೆಗಳು
" ಆಮ್ಮನ ನೆನಪಾಗಿ ಇದೊಂದಾದರೂ ನನ್ನ ಹತ್ತಿರವಿರಲಿ " ಒಂದು ಸಶಕ್ತ ಕಥಾನಕ. ನಿಜಕ್ಕೂ ಕುಮುದಮ್ಮಳ ಜೀವನ ಯೋಚಿಸುವಂತೆ ಮಾಡುತ್ತದೆ, ತಾಯಿಯನ್ನು ಇರುವಷ್ಟು ಕಾಲ ಸರಿಯಾಗಿ ನೋಡಿ ಕೊಳ್ಳದೆ ಆಕೆ ತೀರಹೋದನಂತರ ಆಕೆಯ ಸರವನ್ನು ನೋಡಿ ಅಮ್ಮನ ನೆನಪಾಗಿ ಇದೊಂದಾದರೂ ನನ್ನ ಹತ್ತಿರವರಲಿ ಎನ್ನುವುದು ಆತನ ಮನದ ವಿಕೃತಿಯೆಂದು ನನಗೆ ಅನಿಸುತ್ತದೆ. ಕೃಷ್ಣಮೂರ್ತಿಯ ಬೂಟಾಟಿಕೆಯನ್ನು ಅಮರ್ಥವಾಗಿ ತೆರೆದಿಡುತ್ತದೆ, ಶ್ರೀನಿವಾಸ ರಂತಹವರ ಸಂಖ್ಯೆ ಹೆಚ್ಚಬೇಕು. ಇದೊಂದು ಆರೋಗ್ಯಕರ ಕಥಾನಕ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ , ತಮ್ಮ ವಿಮರ್ಷೆ ಯಾವಾಗಲು ನನಗೆ ಖುಷಿ ಕೊಡುತ್ತದೆ, ತೂಕ ಹಾಕಿದ ಪದಗಳು, ಕತೆಯ ಮುಖ್ಯ ಬಾಗದ (ಜಿಷ್ಟ್) ಸರಿಯಾದ ಗ್ರಹಣ ಹಾಗು ತಮ್ಮ ವಿಮರ್ಷೆ, ಕತೆಗಾರನಿಗೆ ಸಾರ್ಥಕತೆಯ ಭಾವ ತಂದುಕೊಡುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್,
ಕೆಲವು ದಿವಸ ಬರೆಯದೇ ಕೇವಲ ಸಂಪದದಲ್ಲಿನ ಬರಹಗಳನ್ನಷ್ಟೇ ಓದುವ ಮನಸ್ಸಾಗಿದೆ ಎಂದು ಪ್ರತಿಕ್ರಿಯೆಯೊಂದರಲ್ಲಿ ಬರೆದಿದ್ದಿರಿ. ಆದರೂ ಕೂಡಾ ನಿಮ್ಮ ಬರಹ ವೇದನೆಯನ್ನು :) ಅಂತ್ಯಗೊಳಿಸಿ ಒಳ್ಳೆಯ ಕಥೆಗಳನ್ನು ಕೊಡುತ್ತಿರುವುದಕ್ಕೆ ಸಂತಸವಾಗುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀದರ್ ಬಂಡ್ರಿಯವರೆ, ಕೆಲವು ಚಟಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವೆ, ಆದರೆ ಪರವಾಗಿಲ್ಲ ಈಗೀಗ ಈ ಬರೆಯುವ ಚಟದಿಂದ ಹೊರಬಂದು ಓದುವತ್ತ ಗಮನ ಹರಿಸುತ್ತಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃಷ್ಣಮುರ್ತಿಯ0ತಹ ದುರುಳ, ಶ್ರಿನಿವಾಸರ0ತಹ ವಿರಳ'ರ ಕತೆಯ ಕೊಟ್ಟು ನಮ್ಮನ್ನು ಮರುಳು ಮಾಡಿದ್ದೀರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಾಥರೆ , ಪ್ರತಿಕ್ರಿಯೆ ಓದುತ್ತ, ಇದೇನು ನನ್ನನ್ನು ದುರಳ ಎಂದರೆ ಎಂದು ಗಲಿಬಿಲಿಗೊಳ್ಳುತ್ತ ಮತ್ತೊಮ್ಮೆ ಓದಿ ಸುಮ್ಮನಾದೆ
ಚೆನ್ನಾಗಿದೆ ದುರುಳ ವಿರಳ ಮರುಳ , ಗಳನ್ನು ನೀವು ಸರಳವಾಗಿ ಹೇಳಿದ್ದೀರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಈ ಕಥೆಯನ್ನ (ಫೆಸ್ಬುಕ್ಕಲ್ಲಿ ಇದ್ದುದೇ ಸ್ವಲ್ಪ ಸಾರ )ಅಲ್ಲಿ ಓದಿ ಬಹುಶ ಇದು ಅದೇ ರೀತಿ ಅಂತ ಹಾಗೆ ಪ್ರತಿಕ್ರಿಯಿಸಿದ್ದೆ, ಇಲ್ಲಿ ಈಗ ಪೂರ್ತಿ ಓದಿ ಪ್ರತಿಕ್ರಿಯೆಗಳನ್ನು ನೋಡಿದಾಗ ನನ್ನ ಊಹೆ ಅನಿಸಿಕೆ ಸರಿ ಅನ್ನಿಸಿತು..!!
ಬೆಲೆ ಬಾಳುವ ಸರ ಬೇಕಾಯ್ತು ಅಮ್ಮನ ಬಟ್ಟೆ ಬರೆ ಇತ್ಯಾದಿ ಬೇಕಾಗಲಿಲ್ಲ..:(((
ರಾಯರ ತರಹದವರು ಅಪರೂಪ(ಈಗ) ಆದ್ರೆ ಮಗನ ತರಹದವರು ಬೇಜಾನ್ ಇರ್ವರು..:((
ದೀರ್ಘ ವಿರಾಮದ ನಂತರ ಒಂದು ಕಣ್ ತೆರೆಸುವ ಮನ ಮಿಡಿಯುವ , ವ್ಯಥೆ ಪಡುವ ಕಥೆ.....

ಅದೇ ಕಾಲಮಾನ ,ಬದಲಾದ ಮನಸ್ಸುಗಳು. ಯೋಚಿಸಬೇಕಾದ ವಿಷ್ಯ.
ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)))
ಸಪ್ತಗಿರಿಯವರೆ ನಿಮ್ಮ ಪ್ರತಿಕ್ರಿಯೆ ಶುರುವಾಗಿ ಮತ್ತೆ ಸ0ಪದಕ್ಕೆ ಚಟುವಟಿಕೆ ಬ0ತು !!
ಇನ್ನು ನಿಮ್ಮ ಗಣೇಶಣ್ಣ ಎಲ್ಲಿ ಮಲಗಿದ್ದಾರೊ ಗೊತ್ತಿಲ್ಲ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಪಾರ್ಥರೆ:)
ದಯವಿಟ್ಟು
http://www.sampada.net/%E0%B2%86%E0%B2%95%E0%B3%86
ಇದರ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.