ಕತೆ [ಪತ್ತೆದಾರಿ] : ಸುಳಿ - ‍‍(೪) ಕಡೆಯ ಭಾಗ

4

ಮೊದಲ ಭಾಗ : ಕತೆ [ಪತ್ತೆದಾರಿ] : ಸುಳಿ - (೧)

ಎರಡನೆ ಬಾಗ : ಕತೆ [ಪತ್ತೆದಾರಿ] :ಸುಳಿ - (೨)

ಮೂರನೆಯ ಭಾಗ  : ಕತೆ [ಪತ್ತೆದಾರಿ] : ಸುಳಿ -(೩)

 

ಮುಂದೆ ಓದಿ .....

 

 

 ಸುಮಾರು ಒಂದು ಗಂಟೆಯೊ ಎರಡು ಗಂಟೆಯೊ ಕಳೆಯಿತು, ಗಿರಿಧರ ವಾಚ್ ಸಹಿತ ಕಟ್ಟಿರಲಿಲ್ಲ. ಅವನನ್ನು ಕೂಡಿಸಿದ ರೂಮಿನಲ್ಲಿ ಗಡಿಯಾರವು ಇರಲಿಲ್ಲ. ಕಿಟಕಿ ಸಹಿತ ಇರದ ರೂಮದು , ಹೊರಗೆ ಹೋಗಲು ಇದ್ದ ಒಂದು ಬಾಗಿಲಲ್ಲಿ ಸ್ಟೂಲ್ ಮೇಲೆ ಪೋಲಿಸ್ ಪೇದೆಯೊಬ್ಬ ಕುಳಿತಿರುವುದು ಕಾಣಿಸುತ್ತ ಇತ್ತು.  

ಅದೆ ಪೋಲಿಸ್ ಇನ್ಸ್ ಪೆಕ್ಟರ್ ಮತ್ತೆ ಒಳ ಬಂದು ಕುಳಿತ , ಗಿರಿಧರಿನಿಗೆ ಎದೆಯಲ್ಲಿ ಎಂತದೊ ನಡುಕ

“ಮತ್ತೆ ಹೇಗಿದ್ದೀರಿ ಡಾಕ್ಟರ್, ಹೋಗಲಿ ಬಿಡಿ ಏನೊ ಆಗಿ ಹೋಯಿತು,  ಹಣೆಬರಹ, ಅಂದ ಹಾಗೆ ಮನೆಯಲ್ಲಿ ಮತ್ತೆ ಯಾರ್ಯಾರು ಇದ್ದಾರೆ” ಪ್ರಶ್ನೆ ಕೇಳುತ್ತ ಸಿಗರೇಟ್ ಹಚ್ಚಿದ. ಗಿರಿಧರನಿಗೆ  ಸಿಗರೇಟ್ ಅಂದರೆ ಆಗದು ಆದರೆ ಮಾತನಾಡುವಂತಿಲ್ಲ
“ಮನೆಯಲ್ಲಿ ಈಗ ಯಾರು ಇಲ್ಲ ಬೀಗ ಹಾಕಿದೆ” ನುಡಿದ ಗಿರಿಧರ .
“ಅಂದರೆ ನಿಮ್ಮದು ಒಂಟಿ ಜೀವನವೊ,  ಮದುವೆ , ಮಕ್ಕಳು ?” ಎಂದ
“ಮಕ್ಕಳಿಲ್ಲ, ಹೆಂಡತಿ ಸಧ್ಯಕ್ಕೆ ಊರಿನಲ್ಲಿ ಇಲ್ಲ, ಅವಳ ಚಿಕ್ಕಪ್ಪನ ಮನೆಗೆ ಹೋಗಿದ್ದಾಳೆ “ ಎಂದ ಗಿರಿಧರ
“ಊರಿಗೆ ಅಂದರೆ ಯಾವ ಊರು “ ಪೋಲಿಸ್ ಅಧಿಕಾರಿ ಕೇಳಿದ
“ವಾರಂಗಲ್ ತಮಿಳುನಾಡು”
ಹೇಳಿ ತುಟಿ ಕಚ್ಚಿದ ಗಿರಿಧರ್ ಅವನು ಯಾವಾಗಲು ಅದೇ ತಪ್ಪು ಮಾಡುತ್ತಿದ್ದ , ಆ ಪ್ರಶ್ನೆಗೆ ಉತ್ತರ ಹೇಳುವಾಗ
ಇನ್ಸ್ ಪೆಕ್ಟರ್ ಕಣ್ಣು ಚೂಪು ಮಾಡಿದ
“ರೀ ಡಾಕ್ಟರೆ ವಾರಂಗಲ್ ಇರುವುದು  ಆಂದ್ರ ಪ್ರದೇಶ ಅಲ್ಲವೇನ್ರಿ ಇಲ್ಲು ನಮ್ಮ ಕಾಲೆಳೆಯುತ್ತೀರ , ನಿಮ್ಮ ಹೆಂಡತಿ ಇರುವ ಊರು ಎಲ್ಲಿ ಎನ್ನುವದನ್ನು ತಪ್ಪಾಗಿ ಹೇಳುತ್ತೀರಪ್ಪ , ಇರಲಿ ಯಾರಿದ್ದಾರೆ ವಾರಂಗಲ್ ನಲ್ಲಿ , ನಿಮ್ಮಾಕೆಯ ಅಪ್ಪ ಅಮ್ಮ ಎಲ್ಲ ಎಲ್ಲಿದ್ದಾರೆ” ಎಂದು ಕೇಳಿದ
“ಇಲ್ಲ ಅವಳಿಗೆ ಅಪ್ಪ ಅಮ್ಮ   ಇಲ್ಲ, ಅವಳ ಅಣ್ಣ ಇರುವುದು ದೂರದ ಅಮೇರಿಕಾದಲ್ಲಿ, ಅವಳ ಹತ್ತಿರದ ನೆಂಟರು ಚಿಕ್ಕಪ್ಪ ಒಬ್ಬರೆ ಅವರನ್ನು ನೋಡಲು ವಾರಂಗಲ್ ಹೋಗಿದ್ದಾಳೆ “  ಗಿರಿಧರ ಹೇಳಿದ ಎಚ್ಚರಿಕೆಯಿಂದ

“ಆಕೆಯ ಫೋನ್ ನಂಬರ್ ಇದ್ದರೆ ಕೊಡಿ ಕರೆಸೋಣ” ಎಂದ ಪೋಲಿಸ್ ಅಧಿಕಾರಿ ಕರಿಯಪ್ಪ

“ಏಕೆ ಅದೆಲ್ಲ ಏನು ಬೇಡ,  ನನ್ನ ಈ ಪರಿಸ್ಥಿಥಿಯಲ್ಲಿ ಆಕೆ ಬರೋದು ನೋಡೋದು ಬೇಡ ಪ್ಲೀಸ್ ” ಎಂದ ಗಿರಿಧರ
“ಸರಿ ಆಕೆ ಮೊಬೈಲ್ ಇಟ್ಟಿಲ್ಲವೆ “  ಪೋಲಿಸ್ ಅಧಿಕಾರಿ ಕೇಳಿದ
“ಇಲ್ಲ ಇಲ್ಲ ಆಕೆಯ ಹತ್ತಿರ ಮೊಬೈಲ್ ಇಲ್ಲ , ಅಷ್ಟಕ್ಕು ಆಕೆ ಈಗ ಬರುವುದು ಬೇಡಬಿಡಿ “ ಎಂದ ಗಿರಿಧರ ಗಾಬರಿಯಾಗಿ

“ಸರಿ ಆಗಲಿ ಬಿಡಿ, ಅದಿರಲಿ ಡಾಕ್ಟರ್ , ಹೆಣವನ್ನು ಕಣ್ಮರೆ ಮಾಡೋದು , ಹೂತುಬಿಡೋದು , ನಿಮಗೆ ಇಂತಾ ಯೋಚನೆ ಎಲ್ಲ ಹೇಗೆ ಬಂದಿತು, ಇವೆಲ್ಲ ಪಕ್ಕಾ ಕ್ರಿಮಿನಲ್ ಗಳು ಇರುತ್ತಾರಲ್ಲ ಅವರಿಗೆ ಹೊಳೆಯೊ ಪ್ಲಾನ್ ಗಳು,  ಇಂತವನ್ನೆಲ್ಲ ನಾವು ಕೈದಿಯ ನಡುವಳಿಕೆಗೆ ಸೇರಿಸುತ್ತೇವೆ, ನೀವು ಯಾವ ಕ್ರಿಮಿನಲ್  ಬ್ಯಾಗ್ರೌಂಡ್ ಇಲ್ಲದವರು , ನೀವು ಹೇಗೆ ಈ ರೀತಿ ಚಿಂತಿಸಿದಿರಿ  “
ಪೋಲಿಸ್ ಅಧಿಕಾರಿ ಪ್ರಶ್ನೆಗೆ ಉತ್ತರಿಸಲು ಆಗದೆ ಸುಮ್ಮನೆ ಮೌನವಾಗಿದ್ದ  ಗಿರಿಧರ

“ಸರಿಯಪ್ಪ ಅದೇನೊ ನೀವು ನೇರವಾದ ವ್ಯಕ್ತಿಯಲ್ಲ ಡಾಕ್ಟರೆ, ನಿಮ್ಮ ಮನಸಿನ ಆಳ ತೆಗೆಯೋದು ಕಷ್ಟವೆ,  ಇನ್ನು ಸಮಯವಿದೆಯಲ್ಲ  ಯೋಚಿಸೋಣ , ಈಗ ಇರಲಿ ಬನ್ನಿ ಹೊರಡೋಣ , ನಿಮ್ಮ ಮನೆಯ ಹತ್ತಿರ ಹೋಗೋಣ,  ನೀವು ಮುಚ್ಚಿರುವ ಗುಂಡಿ ಅಗೆಯಲು ಎಲ್ಲರು ಸೇರಿದ್ದಾರೆ, ನಮ್ಮ ಬಾಸ್ ಗಳು ಎಲ್ಲ ಬಂದಿದ್ದಾರೆ ಹೊರಡಿ “ ಎಂದು ಎದ್ದು ನಿಂತ ಇನ್ಸ್ ಪೆಕ್ಟರ್ ಕರಿಯಪ್ಪ
“ಈಗಲೆ ಹೋಗಬೇಕೆ  ಅಲ್ಲಿಗೆ “ ಆತಂಕದಿಂದ ಪ್ರಶ್ನಿಸಿದ ಗಿರಿಧರ
“ಮತ್ತೆ ಇನ್ನೇನು ಡಾಕ್ಟರೆ, ಟಿವಿಯಲ್ಲಿ ಬರೋ ನರೇಂದ್ರ ಶರ್ಮರನ್ನು ಕರೆಸಿ ಮಹೂರ್ತವಿಡಿಸಿ ಹೋಗಲು ಇದೇನು ಸತ್ಯನಾರಾಯಣ ಪೂಜೆನ  ಸುಮ್ಮನೆ ನಕರಾ ಮಾಡದೆ ಹೊರಡಿ “ ಎಂದು ಎದ್ದು ಹೊರಟವನ ಹಿಂದೆ ನಡೆಯುತ್ತ ಹೊರಟ
ಗಿರಿಧರ್, ಅವನ ಹಿಂದೆ ಮತ್ತಿಬ್ಬರು ಪೋಲಿಸರು, ಅವನಿಗೆ ಅರ್ಥವಾಯಿತು ಅದು ಅವನಿಗೆ ಕಾವಲು.
==================

ಗಿರಿಧರನಿಗೆ ಮನೆಯ ಹತ್ತಿರ ಬರುವಾಗಲೆ ಗಾಭರಿಯಾಯಿತು. ಮನೆಯ ಮುಂದೆ ಜನಸಾಗರವೆ ಸೇರಿತ್ತು, ಪೋಲಿಸರು ಎಲ್ಲರನ್ನು ದೂರ ತಳ್ಳುತ್ತಿದ್ದರು. ಅವನ ಮನೆಯ ಕಾಂಪೋಡಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು, ನ್ಯಾಯವಾದಿಗಳು , ರಸ್ತೆಯ ಅಕ್ಕಪಕ್ಕದ ಮನೆಯವರು, ಅಲ್ಲದೆ ಕೆಲವು ಒಬ್ಬ ಪೋಲಿಸ್ ಡಾಕ್ಟರ್ ಹೀಗೆ ಬಹಳಷ್ಟು ಜನ ಸಿದ್ದವಿದ್ದರು. ಅಕ್ಕ ಪಕ್ಕದ ಜನರೆಲ್ಲ ಗಿರಿಧರನನ್ನು ಕುತೂಹಲದಿಂದ ನೋಡುತ್ತಿದ್ದರು.  ಸುತ್ತಲು ಟರೇಸ್ ಮೇಲಿಂದ ,  ಕಿಟಕಿಗಳಿಂದ  ಎಲ್ಲರು ಇಣುಕುತ್ತಿದ್ದರು. ಅದೇಗೊ ಮಾಧ್ಯಮದವರು ಆಗಲೆ ಬಂದು ನೆರದಿದ್ದರು,  ಅವರೆಲ್ಲರ  ಕ್ಯಾಮರ  ತನ್ನ ಮೇಲೆ  ಫೋಕಸ್ ಆಗಿದ್ದು ಗಿರಿಧರನಿಗೆ  ಕುತ್ತಿಗೆ ಹಿಸುಕಿದಂತೆ ಆಗುತ್ತಿತ್ತು.

ಗಿರಿಧರ ನಿಧಾನವಾಗಿ ಪೋಲಿಸರ ಜೊತೆ ಒಳಗೆ ಬಂದ . ಇವನ ಜೊತೆ ಬಂದ ಇನ್ಸ್ ಪೆಕ್ಟರ್ ಅಲ್ಲಿದ್ದ , ಹಿರಿಯ ಅಧಿಕಾರಿಗೆ ವಂದನೆ ಸಲ್ಲಿಸಿ , ಇವನೆ ಡಾಕ್ಟರ್ ಗಿರಿಧರ ಎಂದು ತಿಳಿಸಿದ, ಅಲ್ಲಿಗೆ ಬರುವ ಮುಂಚೆಯೆ ಎಲ್ಲ ವಿಷಯವು ಹಿರಿಯ ಪೋಲಿಸ್ ಅಧಿಕಾರಿಗಳಿಗೆ ನಿವೇದನೆಯಾಗಿತ್ತು. ಪೋಲಿಸ್ ಅಧಿಕಾರಿ ಮನೆಯ ಬೀಗ ತೆಗೆಯುವಂತೆ ತಿಳಿಸಿದ. ಗಿರಿಧರ ತನ್ನ ಜೇಬಿನಲ್ಲಿದ್ದ ಕೀ ಬಳಸಿ ಮನೆ ಬಾಗಿಲು ತೆಗೆದ. ಕೆಲವೆ ಅಧಿಕಾರಿಗಳ ಜೊತೆ ಗಿರಿಧರನು ಮನೆಯ ಒಳಗೆ ಹೋದರು, ಪೋಲಿಸ್ ಅಧಿಕಾರಿಗಳು   ಮತ್ತೇನಾದರು ಸಾಕ್ಷಿಗಳು ಸಿಕ್ಕೀತ ಎಂದು ತಡಕಾಡಿದರು
ಹೊರಗೆ ಬಂದು ಎಲ್ಲ ಪಂಚರ ಎದುರಿಗೆ , ಗಿರಿಧರ ಇದೆ ಜಾಗ ಎಂದು ನೆಲವನ್ನು ಗುರುತಿಸಿದ. ನೆಲವನ್ನು ಅಗೆಯಲು ಪ್ರಾರಂಬಿಸಿದರು. ಹೆಚ್ಚು ಕಷ್ಟವೇನಿರಲಿಲ್ಲ. ಬೆಳಗ್ಗೆ ಇನ್ನು ಮುಚ್ಚಿದ ಹಸಿ ಮಣ್ಣು ಸುಲುಭವಾಗಿಯೆ   ಹೊರಬರುತ್ತಿತ್ತು. ಕ್ಯಾಮರಾ ಕಣ್ಣುಗಳು , ಸುತ್ತಲ ಪೋಲಿಸರು, ಅಧಿಕಾರಿಗಳು ಕಾಯುತ್ತಿರುವಂತೆ ದೊಡ್ಡ ಪ್ಲಾಸ್ಟಿಕ್ ಕವರ್ ಗೋಚರಿಸಿತು.   ಅಗೆಯುವುದನ್ನು ನಿಲ್ಲಿಸಿ ಹುಷಾರಾಗಿ   ಮಣ್ಣು ತೆಗೆಯುತ್ತಿದ್ದರು. ಸುತ್ತಲ ಮಣ್ಣನ್ನು ತೊಲಗಿಸಿ, ದೊಡ್ಡ ಪ್ಲಾಸ್ಟಿಕ್ ಬ್ಯಾಗನು ಬಟ್ಟೆಯ ಗಂಟಿನಂತೆ ಎತ್ತಿ ಹೊರಗೆ ನೆಲದ ಮೇಲೆ ಇಟ್ಟರು ಅಗೆಯುತ್ತಿದ್ದ ಇಬ್ಬರು. ಗಿರಿಧರ ಆ ಬುರ್ಕಾದಾರಿ ಹೆಣ್ಣಿನ  ಹೆಣವನ್ನು ಪ್ಲಾಸ್ಟಿಕ್ ಕವರಿನಲ್ಲಿ ಪ್ಯಾಕ್ ಮಾಡಿ ನೆಲದಲ್ಲಿ ಸೇರಿಸಿದ್ದ. ಎಲ್ಲರ ಸಮಕ್ಷಮದಲ್ಲಿ   ಸಾಯುವ ಸಮಯದಲ್ಲಿ ಆಕೆ ಇದ್ದಂತೆ ಬುರ್ಕಾ ಸಮೇತ ಆಕೆಯ ದೇಹ ಪ್ಲಾಸ್ಟಿಕ್ ಕವರಿನಿಂದ ಹೊರತೆಗೆದು ಮಲಗಿಸಿದರು. ಅಲ್ಲಿಯೆ ಇದ್ದ ಪೋಲಿಸ್ ಡಾಕ್ಟರ್ ಗಳು ಶವವನ್ನು ಹೊರತೆಗೆದಾಗ ಇರುವ ಸ್ಥಿಥಿಯ ಬಗ್ಗೆ  ಗುರುತಿಸಿಕೊಳ್ಳುತ್ತಿದ್ದರು. ವಿಡಿಯೋ ಕ್ಯಾಮರ ಜೊತೆ ಜೊತೆಗೆ ಪೋಲಿಸರು ಪೋಟೋಗಳನ್ನು    ತೆಗಿಯುತ್ತಿದ್ದರು.   ಹಿರಿಯ ಅಧಿಕಾರಿಗಳು, ಕೇಂದ್ರದ ಅಪರಾದ ಪಡೆಯ   ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಒಬ್ಬ ಟೆರರಿಸ್ಟ್ ಬಾಡಿ ಸಿಕ್ಕಿರುವ ಬಗ್ಗೆ ಮಾಹಿತಿ ಕೊಡುತ್ತಿದ್ದರು.

ಹೆಣವನ್ನು ಹೊರಗೆ ನಿಂತಿದ್ದ ಸರ್ಕಾರಿ ಆಂಬ್ಯುಲೆನ್ಸ್ ಗೆ ಸಾಗಿಸಲಾಯಿತು. ಪೋಲಿಸ್ ಇನ್ಸ್ ಪೆಕ್ಟರ್ ಗುಂಡಿಯ ಮೇಲ್ಬಾಗದಲ್ಲಿ ಕುಳಿತು ಕೆಳಗೆ ಇರುವ ಅಗೆಯುವರಿಗೆ ಸೂಚನೆ ಕೊಡುತ್ತಿದ್ದ. ಇನ್ನೇನಾದರು ಸಾಕ್ಷಿಗಳು, ಬಟ್ಟೆ , ಒಡವೆ ಚಪ್ಪಲಿ ಮತ್ತೇನಾದರು ಸಿಕ್ಕರೆ ಕೆದಕಿನೋಡಿ, ನಂತರ ಮಣ್ಣು ಮುಚ್ಚುವಂತೆ ತಿಳಿಸಿ ಎದ್ದ. ಅವನು ತನ್ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತಿರುವಂತೆ ಗುಂಡಿಯ ಒಳಗಿದ್ದ  ನೆಲ ಅಗೆಯುವ ಕೆಲಸಗಾರ ಕೂಗಿದ
“ಸಾರ್ ಇಲ್ಲೆ , ಸೀರೆಯ ಗಂಟು ಒಂದು ಇರುವ ಹಾಗಿದೆ “  
ಮತ್ತೆ ಹತ್ತಿರ ಬಂದ  ಇನ್ಸ್ ಪೆಕ್ಟರ್ ಕರಿಯಪ್ಪ ಹೇಳಿದ,
“ಸ್ವಲ್ಪ ಹುಷಾರಾಗಿ ಹಾಗೆ ಕೆದಕಿ ಏನು ಹಾಳಾಗದಂತೆ ನಿದಾನವಾಗಿ ಹೊರತೆಗೆಯಿರಿ. ರೀ ಚಂದ್ರಪ್ಪ ನೀವೆ ಕೆಳಗಿಳಿದು ಸ್ವಲ್ಪ ಸೂಪರ್ವೈಸ್ ಮಾಡಿ” ಎನ್ನುತ್ತಿದ್ದಂತೆ, ಉತ್ಸಾಹದಿಂದ ಒಳಗೆ ದುಮಿಕಿದ ಪೋಲಿಸ್ ಪೇದೆ ಚಂದ್ರಪ್ಪ.  

“ಸಾರ್, ಇಲ್ಲೆನೊ ಮರ್ಮವಿದೆ, ಇಲ್ಲಿ ಮತ್ತೊಂದು ಬಾಡಿ ಇದೆ ಅನ್ನಿಸುತ್ತಿದೆ ಯಾವುದೋ  ಹೆಣ್ಣಿನ  ದೇಹ!! “ ಗುಂಡಿಯ ಒಳಗಿನಿಂದ ಚಂದ್ರಪ್ಪ ಅಚ್ಚರಿಯಿಂದ ಕೂಗಿದ.

ಮೇಲೆ ಸ್ವಲ್ಪ ದೂರದಲ್ಲಿ ಮಾತನಾಡುತ್ತ ನಿಂತಿದ್ದ  ಪೋಲಿಸ್ ಅಧಿಕಾರಿಗಳೆಲ್ಲ ಅಲರ್ಟ್ ಆದರು. ಕುತೂಹಲದಿಂದ ಎಲ್ಲರು ಮತ್ತೆ ಗುಂಡಿಯ ಹತ್ತಿರ ಬಂದರು.
ಇನ್ಸ್ ಪೆಕ್ಟರ್ ಕರಿಯಪ್ಪ ಸಹ ದಂಗಾಗಿದ್ದ, ಇದೇನು ಮುಗಿಯಿತು ಅಂದುಕೊಂಡ ಕೇಸ್ ಮತ್ತೆ   ತೆರೆದುಕೊಳ್ಳುತ್ತಿದೆ ತಿರುವು ಪಡೆಯುತ್ತಿದೆ ಅಂದುಕೊಂಡವನು
“ರೀ ಚಂದ್ರಪ್ಪ ಅದೇನು ಸರಿಯಾಗಿ ನೋಡಿ “ ಎನ್ನುತ್ತ ಗುಂಡಿಯ ಪಕ್ಕ ಕುಳಿತು ಬಗ್ಗಿ ನೋಡಿದ . ಅನುಮಾನವೆ ಇರಲಿಲ್ಲ ಸೂರ್ಯನ ಬಿಸಿಲಿನಲ್ಲಿ , ಸ್ವಷ್ಟವಾಗಿ ಕಾಣುತ್ತಿತ್ತು, ಸೀರೆ ಧರಿಸಿದ್ದ ಹೆಣ್ಣೊಬ್ಬಳ ಶವ. ಸ್ವಲ್ಪ ಆಳದಲ್ಲಿದ್ದು, ಇನ್ನು ಪೂರ್ಣವಾಗಿ ಕೊಳೆತಿರದೆ ಪ್ಲಾಸ್ಟಿಕ್ ಕವರಿನಲ್ಲಿ ಸ್ವಷ್ಟವಾಗಿ ಕಾಣುತ್ತಿತ್ತು.

ಎದ್ದು ನಿಂತ ಇನ್ಸ್ ಪೆಕ್ಟರ್ ಕರಿಯಪ್ಪ ಹಿಂದೆ ನಿಂತಿದ್ದ ಗಿರಿಧರನತ್ತ ತಿರುಗಿದ
“ಏನ್ರಿ ಡಾಕ್ಟರೆ , ನಿಮ್ಮ ವಿಷಯ , ಗುಂಡಿ ಅಗಿದರೆ ಹೆಣದ ಮೇಲೆ ಹೆಣ ಸಿಗುತ್ತಿದೆ, ಅದೆಷ್ಟು ಹೆಣ ಮುಚ್ಚಿಟ್ಟಿದ್ದೀರಿ ಇಲ್ಲಿ ಹೇಳಿಬಿಡಿ , ಯಾರದು ಈ ಎರಡನೆ ಹೆಣ,  ಮತ್ತೆ ಕಾಲೆಳೆದರೆ ಇದೆ ಗುಂಡೀಲಿ ನಿಮ್ಮನ್ನು ಹಾಕಿ ತದುಕಿಬಿಡ್ತೀನಿ ಬಾಯಿಬಿಡಿ “ ಕೋಪದಿಂದ ನುಡಿದ.
ಗಿರಿಧರನ ಮುಖ ಸೋತು ಹೋಗಿತ್ತು, ಅವನು ಏನನ್ನು ಮಾತನಾಡುವ ಸ್ಥಿಥಿಯಲ್ಲಿ ಇರಲಿಲ್ಲ, ಎರಡು ಕೈಯನ್ನು ತಲೆಯ ಮೇಲಿಟ್ಟು ಕುಸಿದು ಕುಳಿತ.  ತಲೆ ತಗ್ಗಿಸಿಬಿಟ್ಟ

“ ಈ ನಾಟಕ ಎಲ್ಲ ಬೇಡ, ಒಂದೆ ಸಾರಿ ಒದರಿ ಬಿಡು ಇಲ್ಲದಿದ್ದರೆ ಪೋಲಿಸ್ ಅಂದರೆ ಏನಂತ ನಿನಗೆ ಗೊತ್ತಾಗುವಂತೆ ಮಾಡ್ತೀನಿ , ಸುವರ್ “ ಸುತ್ತಲು ಜನವಿರುವದನ್ನು ಮರೆತು ಏಕವಚನದಲ್ಲಿ ಬೈದ ಪೋಲಿಸ್ ಅಧಿಕಾರಿ ಕರಿಯಪ್ಪ.

ಪಕ್ಕದಲ್ಲಿದ್ದ ಹಿರಿಯ ಐ ಪಿ ಎಸ್ ಅಧಿಕಾರಿ ಕರಿಯಪ್ಪನ ಬುಜ ಅದುಮಿಧರು ಅವನಿಗೆ ಅರ್ಥವಾಯಿತು ಜನರಿದ್ದಾರೆ ಶಾಂತಿಯಿಂದ ಇರು ಎಂದು ಅದರ ಅರ್ಥ

ಗಿರಿಧರ ನಿದಾನವಾಗಿ ತಲೆ ಎತ್ತಿ  “ಇಲ್ಲ ಎಲ್ಲ ಹೇಳಿಬಿಡ್ತೀನಿ, ಅದು ನನ್ನ ಹೆಂಡತಿ ಸುನೀತಳದು, ಆಕೆಯನ್ನು ನಾನೆ ಕೊಂದು ಇಲ್ಲಿ ಹೂತುಬಿಟ್ಟಿದ್ದೆ, ಮೂರುತಿಂಗಳ ಹಿಂದೆ” ಬಾಯಿ ಬಿಟ್ಟ ಗಿರಿಧರ . ಎಲ್ಲರು ದಂಗಾಗಿದ್ದರು.

“ ಮತ್ತೆ ವಾರಂಗಲ್ ಚಿಕ್ಕಪ್ಪ ನ ಮನೆ ಅಂತೆಲ್ಲ ಬೊಗಳಿದೆ “  ಪೋಲಿಸ್ ಅಧಿಕಾರಿ ಕರಿಯಪ್ಪ ಕೇಳಿದ ಉರಿಮುಖದಿಂದ.

ಗಿರಿಧರ ತಲೆ ತಗ್ಗಿಸಿ ನಿಂತ , ಅವನಿಗೆ ಅರ್ಥವಾಗಿ ಹೋಗಿತ್ತು, ತಾನು ಪೂರ್ತಿ ಸುಳಿಯಲ್ಲಿ ಸಿಕ್ಕಿಬಿದ್ದೀದ್ದೀನಿ ಇನ್ನು ತಪ್ಪಿಸಿಕೊಳ್ಳಲು ಸಾದ್ಯವೆ ಇಲ್ಲ ಎಂದು.
 ಹಿರಿಯ ಅದಿಕಾರಿಗಳು ಹೇಳಿದರು “ ಸಧ್ಯಕ್ಕೆ ಮನೆಯನ್ನು ಸೀಲ್ ಮಾಡಿ ಮತ್ತೆ ಏನಾದರು ಸಾಕ್ಷಿಗಳಿರಬಹುದು , ಹಾಗೆ
ಈ ಶವವನ್ನು ಪಂಚನಾಮೆ ಮಾಡಿಸಿ , ಡಾಕ್ಟರ್ ಹತ್ತಿರ ಬರೆಸಿ, ವ್ಯಾನ್ ತರಿಸಿ, ಪೋಸ್ಟ್ ಮಾರ್ಟಮ್ ಗೆ ಕಳಿಸಿ, ಇದಕ್ಕು ಆ ಟೆರರಿಷ್ಟ್ ಕೇಸಿಗು ಸಂಭಂದವಿಲ್ಲ “
ಎಲ್ಲವು ಅವರು ಹೇಳಿದಂತೆ ನಡೆಯಿತು, ಗಿರಿಧರನನ್ನು ತಕ್ಷಣಕ್ಕೆ ಇಬ್ಬರು ಕಾನ್ಸ್ ಟೇಬಲ್ ಹಾಗು ಚಂದ್ರಪ್ಪ ನ ಸಮೇತ ಪೋಲಿಸ್ ಠಾಣೆಗೆ ಕಳಿಸಲಾಯಿತು

ಠಾಣೆಯ  ಒಳ ಕೊಠಡಿಯಲ್ಲಿ ಗಿರಿಧರನನ್ನು ಕೂಡಿಸಿದ ಚಂದ್ರಪ್ಪ ನುಡಿದ

“ನಾನು ಏನೊ ಮಾಡಲು ಹೋಗಿ ಏನೆಲ್ಲ ಆಯ್ತು ನೋಡಿ ಡಾಕ್ತ್ರೆ, ನಿಮ್ಮಂತ ಓದಿದ ಮಂದಿನೆ ಹೀಗೆ  ಅಪರಾದ ಮಾಡಿದರೆ, ಓದದ ಜನ ಮಾಡುವದರಲ್ಲಿ  ಏನು ಆಶ್ಚರ್ಯ,  ಈಗ ಪುನಃ ಪ್ರಾರಂಬವಾಗುತ್ತೆ ನೋಡಿ,  ಎರಡನೆ ಕೊಲೆ ವಿಚಾರಣೆ , ಮಾಡಿದ್ದು ಅನುಭವಿಸಲೆ ಬೇಕು ಬಿಡಿ , ನೀವೇಕೆ ಅ ಬುರ್ಕಾದಾರಿ ಹೆಣ್ಣಿನ ಶವದ ಜೊತೆ ಪೋಲಿಸ್ ಹತ್ತಿರ ಬರಲಿಲ್ಲ ಇವೆಲ್ಲ ಬೇಕಿತ್ತ   “
ಎಂದು ಕರುಣೆಯಿಂದ ನುಡಿದ.


“ಮೊದಲು ಅದೆ ಚಿಂತಿಸಿದೆ, ಕಾರು ಅಲ್ಲಿ ಬಿಟ್ಟು ಪೋಲಿಸ್ ಹತ್ತಿರ ಹೋಗೋಣ ಎಂದು, ಆದರೆ ಮನದಲ್ಲಿ ಬೇರೆ ಯೋಚನೆ ಬಂದಿತ್ತು, ಒಂದು ವೇಳೆ ನನ್ನ ಹೆಸರು ಎಲ್ಲ ಕಡೆ ಬಂದು ಇಲ್ಲದ  ಉಪದ್ರವ ಪ್ರಾರಂಬವಾಗುತ್ತೆ,  ಟೀವಿನೋರೊ, ಪೋಲಿಸ್ನೋರು ಯಾರಾದರು ನಿನ್ನ  ಮನೆ ಎಲ್ಲಿ ಹೆಂಡತಿ ಎಲ್ಲಿ , ಹೆಸರೇನು ಎಂದು ಕೆದಕಲು ಪ್ರಾರಂಬಿಸಿದರೆ ಸುಮ್ಮನೆ ಇಲ್ಲದ ತಂಟೆ ಎಂದು ಅನ್ನಿಸಿತು, ಆದಷ್ಟು ಪೋಲಿಸ್ , ಪೇಪರ್ ಇವುಗಳಿಂದ ದೂರವಾಗಿರುವುದು ಕ್ಷೇಮ , ಅಪಾಯ ಕಡಿಮೆ ಎಂದು ಯೋಚಿಸಿದೆ”
ಗಿರಿಧರ ಚಿಂತಿಸುತ್ತ ನುಡಿದ

ಮತ್ತೆ ಸ್ವಲ್ಪ ಹೊತ್ತಾಯಿತು, ಅದೇನೊ ತೋಚಿ ಕೇಳಿದ ಚಂದ್ರಪ್ಪ ,

“ಅಲ್ಲ ಡಾಕ್ಟರೆ ನನಗೊಂದು ಡೌಟು,  ನಿಮ್ಮ ಕಾಂಪೋಡು ಸಾಕಷ್ಟು   ದೊಡ್ಡದಾಗಿದೆ, ಎಲ್ಲ ಬಿಟ್ಟು ನೀವು ಮೂರು ತಿಂಗಳ ಹಿಂದೆ ಅಗೆದಿದ್ದ ಗುಂಡಿಯನ್ನೆ ಮತ್ತೆ ಅಗೆದು ಈ ಹೊಸ ಹೆಣ ಯಾಕೆ ಇಟ್ರಿ, ಬೇರೆ ಕಡೆ ಅಗೆದಿದ್ದರೆ,  ಮೊದಲ ಹೆಣ ಸಿಗ್ತಿರಲಿಲ್ಲ ಅಲ್ವೆ “
ಕುತೂಹಲದಿಂದ ಪ್ರಶ್ನಿಸಿದ.

ಗಿರಿಧರ ಈಗ ಎಲ್ಲಕ್ಕು ಸಿದ್ದನಾಗಿ ಬಿಟ್ಟಿದ , ಅವನು ಬಿಡಿಸಿಕೊಳ್ಳಲಾರದ  ಸುಳಿಗೆ  ಸಿಲುಕಿದ್ದ .   ಅವನು ನಿದಾನವಾಗಿ ನುಡಿದ

“ಹೌದು ಚಂದ್ರಪ್ಪ , ನನ್ನ ಗ್ರಹಚಾರ , ಕೊಲೆಯ ಮಾಡುವ  ಉದ್ದೇಶವಿಲ್ಲದೆಯೆ  ಆಕಸ್ಮಿಕವಾಗಿ ಮೊದಲ ಕೊಲೆ ಮಾಡಿದೆ ನನ್ನ ಪತ್ನಿ ಸುನೀತಳದು, ಯಾರಿಗು ತಿಳಿಯದಂತೆ ತೆಂಗಿನ ಗಿಡದ ಗುಂಡಿಯ ನೆಪದಲ್ಲಿ ಒಳಗೆ ಸೇರಿಸಿ ಮುಚ್ಚಿದೆ, ಆದರೆ ವಿಧಿ ಆ ಅಪರಾದವನ್ನು ಹೊರಗೆ ತಂದು ನನಗೆ ಶಿಕ್ಷೆ ಕೊಡಿಸಲು ಕಾಯುತ್ತ ಇದ್ದು, ಈ ಟೆರರಿಷ್ಟ್ ಹೆಣ್ಣಿನ ರೂಪದಲ್ಲಿ  ನನ್ನ ಆಕ್ರಮಿಸಿತು,  ಬೇರೆ ಕಡೆ  ಎಸೆದು ಸುಮ್ಮನಿದ್ದರೆ ಯಾರಿಗು ಗೊತ್ತಾಗುತಿರಲಿಲ್ಲವೇನೊ, ಆದರೆ ಮೂರು ತಿಂಗಳ ಹಿಂದೆ ನೆಲದಲ್ಲಿ ಹೂತಿಟ್ಟ ಅನುಭವ ಮತ್ತೆ ಅದನ್ನು ಮಾಡುವಂತೆ ಮನಸಿಗೆ  ಪ್ರೇರೆಪಿಸಿತು,  ಮತ್ತೆ ನೆಲ ಅಗೆಯುವುದು ಕಷ್ಟ ಆಗುತ್ತೆ , ಗಟ್ಟಿ ನೆಲ ಇರುತ್ತೆ ಅನ್ನಿಸಿ, ಮೊದಲೆ ಅಗೆದಿದ್ದ ಗುಂಡಿಯನ್ನು ಮತ್ತೆ ಅಗೆದರೆ, ಮಣ್ಣು ಲೂಸ್ ಆಗಿರುತ್ತೆ, ಅಗೆಯೋದು ಸುಲುಭ ಅಂತ ಭಾವಿಸಿದೆ , ನನ್ನ ಎಲ್ಲ ತಪ್ಪುಗಳು ಒಟ್ಟಿಗೆ ಮೇಲೆ ಬಂದವು”
ಗಿರಿಧರ ಮಾತು ನಿಲ್ಲಿಸಿ,  ಗೋಡೆಗೆ ಒರಗಿ ಕಣ್ಣು ಮುಚ್ಚಿಕುಳಿತ,  ಕರುಣೆ ಹಾಗು ವಿಷಾದದಿಂದ ಅವನನ್ನು ನೋಡಿದ ಚಂದ್ರಪ್ಪ ಹೊರಗೆ ಹೊರಟ.

ಮುಗಿಯಿತು.

(ಎಲ್ಲ ಬಾಗಗಳನ್ನು ಒಟ್ಟಾಗಿ ಓದಲು ಕೆಳಗೆ ಸ್ಟೇಟಸ್ ಲೈನ್ ನಲ್ಲಿರುವ ’ಸುಳಿ ಪತ್ತೆದಾರಿ’ ಪದವನ್ನು ಕ್ಲಿಕ್ ಮಾಡಿ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೊಸ ಪ್ರಶ್ನಾರ್ಥಕ ತಿರುವಿನಿ೦ದ ಕಥೆಯನ್ನು ಮುಗಿಸಿದ್ದೀರಾ. ಈ ಕಥೆಯ ಎರಡನೇ ಆವ್ರುತ್ತಿ ಇದಯ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲ ಮೂರು ಭಾಗದಲ್ಲಿ ಗಿರಿಧರನನ್ನು ನಿರಪರಾದಿ ಎಂದು ತಿಳಿದಿದ್ದೆ ಆದರೆ ಅವನೆ ಅಪರಾದಿಯಾಗಿರುವುದು ವಿಪರ್ಯಾಸ ಮೊದಲು ಬರಿ ಕಥೆಯೆನಿಸಿದರು ಕಡೆಯಲಿ ಪತ್ತೆದಾರಿ ಕಥೆಯಾಗಿ ಮುಗಿಯಿತು ಆದರೂ ಕಡೆಯಲ್ಲಿ ಇದ್ದಕಿದ್ದಂತೆ ಮುಗಿಸಿದರಿ ಅನ್ನಿಸಿತು. ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇರೇನೋ ಅಂದುಕೊಂಡಿದ್ದೆ ... ಹಾಗಾಗಲಿಲ್ಲ ... ಸ್ವಲ್ಪ ರಷ್ ಅಯ್ತೇನೋ ಅನ್ನಿಸಿತು :‍(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತೆಯ ಬಗ್ಗೆ : ಈ ಕತೆಯಲ್ಲಿ ಪ್ರಯತ್ನಿಸಿದ ಟೆಕ್ನಿಕ್ ಹೊಸದೇನಲ್ಲ. ತಾನು ಮಾಡಿದ ಮೊದಲನೆ ಕೊಲೆ ಯಾರ ಕಣ್ಣಿಗು ಬೀಳದೆ ಮುಚ್ಚಿಹೋಗಿದ್ದ ಸಂದರ್ಭದಲ್ಲಿ, ತಾನು ಮಾಡದೆ ಇರುವ ಕೊಲೆಯ ಘಟನೆಯಲ್ಲಿ ಸಿಕ್ಕಿಬಿದ್ದು, ಮೊದಲ ಕೊಲೆಯ ವಿಷಯ ಹೊರಬರುವುದು, ಇದನ್ನು ಮುಂಚೆಯು ಕನ್ನಡದ ಪ್ರಖ್ಯಾತ ಪತ್ತೆದಾರಿ ಲೇಖಕ ಶ್ರೀ ಟಿ,ಕೆ. ರಾಮರಾವ್ ರವರು ತಮ್ಮ 'ಹಾವಿಲದ್ದ ಹುತ್ತ ' ಎಂಬ ಕತೆಯಲ್ಲಿ ಪ್ರಯೋಗಿಸಿದಂತೆ ನೆನಪು. ಆದರೆ ಈ 'ಸುಳಿ' ಕತೆಯಲ್ಲಿ ಏಕೊ ಕಡೆಯ ಬಾಗ ಓದುವರಿಗೆ ಇಷ್ಟವಾಗಲಿಲ್ಲವೇನೊ ಅನ್ನಿಸುತ್ತೆ. ಬಹುಷಹ ಕಡೆಯ ಬಾಗದ ನಿರೂಪಣೆ 'ಪಂಚ್ ' ಕೊಡುವಲ್ಲಿ ಸೋತಿತೇನೊ ಅನಿಸಿತು. @ಜಯಂತ್ ಇಲ್ಲ ಜಯಂತ್ ಇದೆ ಕಡೆ ಬಾಗ ಮತ್ತೆ ಕತೆ ಮುಂದುವರೆಯುವದಿಲ್ಲ :)) @ಸತೀಶ್ ಗಿರಿಧರ ಕೊಲೆಗಾರ ಆದರೆ ಅದನ್ನು ಅವನು ಮುಚ್ಚಿ ಇಟ್ಟಿದ ಆದರೆ ವಿಧಿ ಮತ್ತೆ ಅವನನ್ನು ಬಲೆಯಲ್ಲಿ ಕೆಡವಿ ಕಾನೂನಿಗೆ ಒಪ್ಪಿಸಿತು ಅಂತ ನನ್ನ ಕತೆಯ ಒಟ್ಟು ಸಾರ . @ಶ್ರೀನಾಥ್ ತಮ್ಮ ಪ್ರತಿಕ್ರಿಯೆಗೆ ವಂದನೆಗಳು 'ರಷ್' ಅಂದರೆ ಬೇಗ ಮುಗಿಯಿತು ಅಂತ ಅರ್ಥ ಮಾಡಿಕೊಳ್ಳಲ ಅಥವ ಸಂಭಾಷಣೆಗಳು ಬಹಳ ವೇಗವಾಯಿತು ಅಂದುಕೊಳ್ಳಲ . ಅಥವ ಕತೆಯಲ್ಲಿ ಗಲಿಬಿಲಿ ಇದೆ ಎಂದ ? :))) ಎಲ್ಲರಿಗು ನನ್ನ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನು ಉತ್ತರ ಕೊಡಬೇಕೆಂಬ ರಷ್ ಮನದಲ್ಲಿ ಇದ್ದರೂ ಸದ್ಯಕ್ಕೆ 'ಕಥೆಯಲ್ಲಿ ಗಲಿಬಿಲಿ' ಎಂದು ಮಾತ್ರ ಹೇಳಬಲ್ಲೆ ... ಓದುಗರಾದ ನಮ್ಮಿಂದ ನಿಮ್ಮ ಮೇಲೆ ಒತ್ತಡ ಬಂತೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

. ಶ್ರೀನಾಥ್ ರವರೆ ಕತೆಯಲ್ಲಿ ಗಲಿಬಿಲಿ , ಇರಬಹುದು ಸಂಬಾಷಣೆಯಲ್ಲಿ ಹಿಂದಿನ ಕತೆ ಬಿಚ್ಚಿಕೊಳ್ಳುವದರಿಂದ ಗಿರಿಧರ ಕತೆಯನ್ನು ಮುಚ್ಚಿಡಲು ಪ್ರಯತ್ನಪಡುತ್ತಿರುವದರಿಂದ ಮತ್ತು ಇದೆಲ್ಲವನ್ನು ಕತೆಗಾರ ತನ್ನ ನಿರೂಪಣೆಯಲ್ಲಿ ನಿರೂಪಿಸಲು ಎಡವಿದಾಗ ಇಂತ ಗಲಿಬಿಲಿ ಎಲ್ಲೊ ಕಾಣಿಸಿಕೊಂಡಿದೆ. ಅದು ದೇವರಹಸ್ಯದ ನಿರೂಪಣೆಯ ಹ್ಯಾಂಗೋವರ್ ಎಂದು ಕೊಳ್ಳುತ್ತಿರುವೆ :))))) >> ಓದುಗರಾದ ನಮ್ಮಿಂದ ನಿಮ್ಮ ಮೇಲೆ ಒತ್ತಡ ಬಂತೇ? ಸಾದ್ಯವಿಲ್ಲ ನಾನು ಕತೆಯನ್ನು ಪೂರ್ತಿ ಬರೆಯುವ ತನಕ ಪ್ರಕಟಿಸುವದಿಲ್ಲ . ಬರೆದಾದ ಮೇಲೆ ಬಾಗ ಮಾಡಿ ಇಲ್ಲಿ ಹಾಕುವೆ ನಂತರ ಅಕ್ಷರಗಳ ತಪ್ಪುಗಳಿದ್ದರೆ (ಕಾಗುಣಿತ) ತಿದ್ದುವೆನ ವಿನಹ ಕತೆಯನ್ನು ಬದಲಾಯಿಸುವದಿಲ್ಲ . ಹಾಗಿರುವಾಗ ಓದುಗರನ್ನು ಅಕ್ಷೇಪಿಸುವಂತಿಲ್ಲ ! :)) ಹೇಗಾದರು ಸರಿ ತಮಗೆ ವಂದನೆಗಳು , ಕೆಲವು ಸೂಕ್ಷ್ಮ ವಿಷಯಗಳನ್ನು ತಿಳಿಸಿದ್ದಕ್ಕೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ಗಿರಿಧರ ಪತ್ನಿಯನ್ನು ಕೊಂದಿದ್ದಾನೆ ಎಂಬ ಅನುಮಾನ ಮೊದ್ಲೇ ಬಂದಿತ್ತು. ಇನ್ನು ಎದುರುಮನೆ ಪೋಲೀಸಪ್ಪನಿಗೆ ಡೌಟು ಬರದೇ ಇದ್ದೀತಾ. ಸುಳಿವು ಸ್ವಲ್ಪ ಸ್ವಲ್ಪ ಕೊಡುತ್ತಾ ಸುಳಿಯೊಳಗೆ ಸಿಲುಕಿದ ಗಿರಿಧರನ ಕತೆಯನ್ನು ಸೂಪರ್ ಆಗಿ ಹೇಳಿದ್ದೀರಿ. -ಗಣೇಶ. ಇನ್ನೊಂದು ವಿಷಯ- >>>(ಎಲ್ಲ ಬಾಗಗಳನ್ನು ಒಟ್ಟಾಗಿ ಓದಲು ಕೆಳಗೆ ಸ್ಟೇಟಸ್ ಲೈನ್ ನಲ್ಲಿರುವ ’ಸುಳಿ ಪತ್ತೆದಾರಿ’ ಪದವನ್ನು ಕ್ಲಿಕ್ ಮಾಡಿ) ಸ್ಟೇಟಸ್ ಲೈನ್ ಬಗ್ಗೆ ಹೇಳಿದ್ದು ಒಳ್ಳೆಯದಾಯಿತು. ಹೊಸಬರಿಗೆ ಅದರ ಅರಿವಾಗುವುದು. ಕೊಂಡಿ ಕೊಡುವುದಕ್ಕಿಂತ ಇದು ಉತ್ತಮ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರಿಗೆ ವಂದನೆಗಳು ಹಿಂದೊಮ್ಮೆ ದೆವ್ವದ ಕತೆಗಳನ್ನು ನಿಲ್ಲಿಸುತ್ತೇನೆ ಎಂದು ಹೇಳಿದಾಗ ನಿಮ್ಮ ಬಳಿ ಹೇಳಿದ್ದೆ, ಬೇರೆ ಬೇರೆ ರೀತಿಯ ಕತೆಗಳೆನ್ನಲ್ಲ ಪ್ರಯತ್ನಿಸುವ ಉತ್ಸಾಹವಿದೆ ಅದಕ್ಕಾಗಿ ದೆವ್ವದ ಕತೆಗಳನ್ನು ನಿಲ್ಲಿಸಿದೆ ಎಂದು ಈಗ ಅದೇಕೊ ಈ ರೀತಿಯ ಪ್ಯಾಂಟೆಸಿ, ಪತ್ತೆದಾರಿ , ವೈಜ್~ಜಾನಿಕ ರೀತಿಯ ಕತೆಗಳು ಬರೆದುದ್ದು ಸಾಕು ಅನ್ನಿಸುತ್ತಿದೆ ಬೇರೆ ಏನು ಪ್ರಯತ್ನ ಪಡಲಿ ಎಂದು ಸ್ವಷ್ಟವಿಲ್ಲ. ಸಲಹೆಯ ನಿರೀಕ್ಷೆಯಲ್ಲಿ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆ ಪೋಲೀಸ್ ಇನ್ವೆಸ್ಟಿಗೇಶನ್ ಸಮಯದಲ್ಲೆ ಸ್ವಾರಸ್ಯ ಕಳೆದುಕೊಳ್ತು ಸಾರ್ ... ಥ್ರಿಲ್ಲರ್ ಬರೆಯೋದು ಕಷ್ಟವೇ ... ನಿಮ್ಮ ಪ್ರಯತ್ನಕ್ಕೆ ಅಭಿನಂದನೆ ಧನ್ಯವಾದ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕಥೆ ಪೋಲೀಸ್ ಇನ್ವೆಸ್ಟಿಗೇಶನ್ ಸಮಯದಲ್ಲೆ ಸ್ವಾರಸ್ಯ ಕಳೆದುಕೊಳ್ತು ಸಾರ್ ... ಹೌದು ಅನ್ನಿಸುತ್ತೆ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥವ್ರೆ ಕಥೆ ಇಷ್ಟವಾಯಿತು ಆದರೆ ಕ್ಲೈಮ್ಯಾಕ್ಸ್ಗಿಂತ ಮೊದಲೇ ಗ್ರಹಿಸಿಬಿಡಬಹುದು,ಪತ್ತೇದಾರಿ ಆದ್ದರಿಂದ ಓದುಗರೂ ಬಹಳ ಯೋಚನೆ ಮಾಡುತ್ತಾ ಹೀಗಾಗಬಹುದೇ ಅಂತ ಯೋಚಿಸುವುದರಿಂದ ಕೊನೆಗೆ ತಲುಪುವ ಮುನ್ನವೇ ಇಲ್ಲಿ ನಿರ್ಧಾರಕ್ಕೆ ಬರುವಂತಾಗುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಚೇತನ್ ಕಡೆಗೆ ಹೇಗು ಕತೆ ಇಷ್ಟವಾಯಿತಲ್ಲ ಸಾಕು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.