ಕತೆ ಪತ್ತೆದಾರಿ:ಒಂದು ಕೊಲೆಯ ಸುತ್ತ [ ಭಾಗ-1 ]

3


ಕೆಂಪು ಸಿಗ್ನಲ್ ಬಿತ್ತು, ಸ್ವಲ್ಪ ಬೇಸರದಿಂದಲೆ ಕಾರಿನ ಬ್ರೇಕ್ ಅದುಮಿದರು ಮಹಾಂತೇಶ್ . ದೇಹಕ್ಕೆ ಅದೇನೊ ಆಯಾಸ ಅನ್ನಿಸುತ್ತಿತ್ತು. ಬೆಳಗ್ಗೆ ಬೇಗ ಮನೆಯಿಂದ ಹೊರಟಿದ್ದು. ಮಧ್ಯಾಹ್ನದ ಊಟವು ಸರಿ ಎನಿಸಲಿಲ್ಲ. ಅಲ್ಲದೆ ಸಂಜೆಯವರೆಗು  ಸಹಕಾರನಗರದ ಕೋಪರೇಟಿವ್ ಸೊಸೈಟಿಯಲ್ಲಿ ಕುಳಿತಿದ್ದು, ಅಲ್ಲಿ ವಿಷಯಗಳತ್ತ ಗಮನ ಹರಿಸಿದ್ದಾಯ್ತು. ಅದೇನೊ ನೋಡುವಾಗ  ವ್ಯವಹಾರ ಬಹಳಷ್ಟು  ಹೆಚ್ಚುಕಡಿಮೆ ಇರುವಂತಿದೆ, ಅಲ್ಲಿನ ವ್ಯವಹಾರಗಳಲ್ಲಿ ನಾಳೆ ಪಟ್ಟಾಗಿ ಕುಳಿತು ನಿಧಾನವಾಗಿ ನೋಡಬೇಕು. ಅಲ್ಲಿ ಸಾಕಷ್ಟು ಸಹಕಾರ ಸಿಗುತ್ತಿಲ್ಲ , ಬೇಕೆಂದೆ ನಿಧಾನ ಮಾಡುತ್ತಿದ್ದಾರೆ ಕೇಳಿದ ದಾಖಲೆಗಳನ್ನು ಒದಗಿಸಲು. ಮಹಂತೇಶನ ಯೋಚನೆ ಸಾಗಿತು. ಪಕ್ಕದಲ್ಲಿದ್ದ ಕನ್ನಡಿಯಲ್ಲಿ ನೋಡಿದ, ಹಿಂದೆ ಒಂದು ಕೆಂಪನೆಯ ಅಲ್ಟೊ. ಅದೇಕೊ ತನ್ನ ಹಿಂದೆಯೆ ಬಹಳ ದೂರದಿಂದಲು ಬರುತ್ತಿದೆ ಅನ್ನಿಸಿತು, ಈ ಬೆಂಗಳೂರಿನ ಟ್ರಾಫಿಕ್ ನಲ್ಲಿ ಓವರ್ ಟೇಕ್ ಮಾಡಿ ಹೋಗೋದು ಕಷ್ಟವೆ, ಆದರೆ ಆ ಕಾರಿನಲ್ಲಿನ ಡ್ರೈವರ್ ಮುಖಕಾಣುವಾಗ ಹಾಗೆನಿಸಲಿಲ್ಲ, ಇಪ್ಪತ್ತರ ಆಸುಪಾಸಿನ ಯುವಕ ಅಷ್ಟು ಸಹನೆಯಿಂದ ಡ್ರೈವ್ ಮಾಡುವುದು ಅಪರೂಪವೆ. ಯೋಚಿಸುತ್ತಿರವಂತೆ ಹಸಿರು ದೀಪ ಕಾಣಿಸಿತು. ಮೇಖ್ರಿ ಸರ್ಕಲ್ ದಾಟಿದ್ದಾಗಿತ್ತು.
 
 ರಸ್ತೆಯಲ್ಲಿನ ವಾಹನಗಳು ಸ್ವಲ್ಪ ತೆಳುವಾದವು, ಆದರು ಅದೇನೊ ಆ ಕೆಂಪನೆ ಆಲ್ಟೊ ತನ್ನ ಹಿಂದೆಯೆ ಬರುತ್ತಿದೆ ಅನ್ನಿಸಿತು. ನೋಡೋಣ ಅಂತ ಕಾರಿವ ವೇಗ ಹೆಚ್ಚಿಸಿದರು ಮಹಾಂತೇಶ್ , ಹಿಂದಿನ ಕಾರಿನ ವೇಗವು ಹೆಚ್ಚಿತು. ಮತ್ತೆ ಸ್ವಲ್ಪ ದೂರ ಹೋಗಿ ಮತ್ತೆ ವೇಗ ತಗ್ಗಿಸಿದರು, ಹಿಂದಿನ ಕಾರಿನ ವೇಗವು ತಗ್ಗಿತ್ತು. ಅವರಿಗೆ ಯಾವ ಅನುಮಾನವು ಉಳಿಯಲಿಲ್ಲ 'ತನ್ನನ್ನು ಅವರು ಹಿಂಬಾಲಿಸುತ್ತಿದ್ದಾರೆ'. ಮತ್ತೊಮ್ಮೆ ಹಿಂದಿನ ಕಾರಿನತ್ತ ಗಮನಿಸಿದರು, ಅದರಲ್ಲಿ ನಾಲ್ವರು ಇರುವಂತೆ ಕಾಣಿಸಿತು. ಎಲ್ಲರು ಯುವಕರೆ. ಏನಿರಬಹುದು ಇವರ ಹುನ್ನಾರ, ಅವರಿಗೆ ಗೊತ್ತಿತ್ತು ತನ್ನ ಮೇಲೆ ಸದಾ ಕೆಲವರ ಕೆಂಗಣ್ಣು ಇದೆ. ತನ್ನ ಜೀವಕ್ಕೊ, ದೇಹಕ್ಕೊ ಅಪತ್ತು ಇದೆ ಅಂತ ಕೆಲವೊಮ್ಮೆ ಅವರಿಗೆ ಅನ್ನಿಸಿತ್ತು. ಆದರೆ ಅದು ಅವರನ್ನು ಕಂಗೆಡಿಸಿರಲಿಲ್ಲ. ಅವರ ವೃತ್ತಿಯೆ ಅಂತಹುದು. ಕರ್ನಾಟಕ ಸರ್ಕಾರದಲ್ಲಿ ಕೋಆಪರೇಟಿವ್ ಸೊಸೈಟಿಗಳ ಆಡಿಟಿಂಗ್ ವಿಭಾಗದಲ್ಲಿ ಉಪನಿರ್ದೇಶಕರು ಮಹಾಂತೇಶ್. ಅವರ ವೃತ್ತಿ ಜೀವನದಲ್ಲಿ ಹಲವು ಬಾರಿ ಇಂತಹ ಪ್ರಸಂಗಗಳನ್ನು ಬೆದರಿಕೆಗಳನ್ನು ಸಹಿಸಿ ಗಟ್ಟಿಯಾದ ಮನವದು.
 
 ಸೂಕ್ಷ್ಮವಾಗಿ ಗಮನಿಸುವಾಗ ತನ್ನ ಹಿಂದೆ ಬಿದ್ದವರಿಂದ ಅದೇನೊ ಅಪಾಯವಿದೆ ಎಂದೆ ಅನ್ನಿಸಿತು. ಪಕ್ಕದಲ್ಲಿದ್ದ ಮೊಬೈಲ್ ಕೈಗೆ ತೆಗೆದುಕೊಂಡರು. 'ಪೋಲಿಸ್ ಗೆ ಕಾಲ್ ಮಾಡುವುದ?' ಒಮ್ಮೆ ಚಿಂತಿಸಿದರು. ಬೇಡ ಸುಮ್ಮನೆ ಗಲಾಟೆಯಾಗುತ್ತೆ. ಒಮ್ಮೆ ಹಿಂದಿರುವವರು ಸುಮ್ಮನೆ ಸಹ ಬರುತ್ತಿರಬಹುದು, ನಾನೆ ತಪ್ಪು ತಿಳಿದಿರಬಹುದು. ಗೆಳೆಯ ವೇಲುಗೆ ಒಮ್ಮೆ ಕಾಲ್ ಮಾಡೋಣ ಎಂದುಕೊಂಡು, ಮೊಬೈಲ್ ಒತ್ತಿದರು,
ಅದೇನೊ ' ನೀವು ಕಾಲ್ ಮಾಡಿದ ನಂಬರ್ ಕಾರ್ಯ ನಿರತವಾಗಿ ಸ್ವಲ್ಪ ಕಾಲದ ನಂತರ ಪ್ರಯತ್ನಿಸಿ' ಎಂದು ಬರುತ್ತಿದೆ.
ಮತ್ತೆ ಪ್ರಯತ್ನಿಸಿದರು, ಅದೇ ದ್ವನಿ, ಸರಿ ಎನ್ನುತ್ತ ಮನೆಗೊಮ್ಮೆ ಮಾಡಿನೋಡೋಣ ಲಾಂಡ್ ಲೈನ್ ಗೆ ಎನ್ನುತ್ತ ಕಾಲ್ ಮಾಡಿದರು, ಅದೇನೊ ಯಾವ ಪ್ರತಿಕ್ರಿಯೆ ಇಲ್ಲ. ಎಲ್ಲರು ಏನು ಮಾಡುತ್ತಿದ್ದಾರೊ. ಅವರಿಗೆ ಅನ್ನಿಸಿತು ತಕ್ಷಣ ತನ್ನ ಪರಿಸ್ಥಿಥಿಯನ್ನು ಯಾರಿಗಾದರು ಹೇಳಿದರೆ ಉತ್ತಮ. ಅವರಿಗೆ ನೆನಪಿಗೆ ಬಂದಿದ್ದು, ಆಫೀಸ್ ನಲ್ಲಿಯ ತಮ್ಮ ಕಾರ್ಯ ಸಹಾಯಕಿ ಜ್ಯೋತಿ. ಅವಳಿಗೆ ಯಾವ ಸಮಯದಲ್ಲಿ ಕಾಲ್ ಮಾಡಿದರು ಉತ್ತರಿಸುವ ನಿಸ್ಪೃಹ ಅಧಿಕಾರಿ, ಕೆಲಸಗಾರಳು ಆಕೆ. ಸರಿ ಎಂದುಕೊಂಡು, ಅವಳ ನಂಬರ್ ಹುಡುಕಿ ಒತ್ತಿದರು. ಎರಡೆ ರಿಂಗ್ , ಪೋನ್ ಕನೆಕ್ಟ್ ಆಯಿತು. ಆ ತುದಿಯಿಂದ
"ಸಾರ್..." ಎನ್ನುವ ದ್ವನಿ.
ಮಹಾಂತೇಶ್ ಬಾಯಿ ತೆರೆಯುವ ಮುನ್ನವೆ, ಅವರ ಕಾರಿಗೆ ಹಿಂದಿನಿಂದ ಬರುತ್ತಿದ್ದ ಕಾರು ವೇಗವಾಗಿ ಡಿಕ್ಕಿ ಹೊಡೆದಿತ್ತು, ಹೊಡೆತದ ರಭಸಕ್ಕೆ , ಕೈಲಿದ್ದ ಮೊಬೈಲ್ ಮುಂದಿನ ಗಾಜಿಗೆ ಬಡಿದು, ಹೊರಗೆ ಎಗರಿತು. ಕಾರ್ ಅವರ ಕಂಟ್ರೋಲಿಗೆ ಸಿಗದ ಪಕ್ಕದ ಪುಟ್ಪಾತ್ ಕಡೆ ನುಗ್ಗಿತು. ಕಷ್ಟಬಿದ್ದು ಬ್ರೇಕ್ ಅದುಮಿದ ಮಹಾಂತೇಶ್ ಇದೇನು ಹೀಗೆ ಆಯಿತು, ಆಕ್ಸಿಡೆಂಟ್ ಎನ್ನುತ್ತ ಇಂಜಿನ್ ಆಪ್ ಮಾಡಿ, ಬಾಗಿಲು ತೆರೆದು ಹೊರಗಿಳಿದರು.
ಏನಾಗಿದೆ ಎಂದು ನೋಡುತ್ತಿರುವಾಗಲೆ ಕಾಣಿಸಿತು. ತಮ್ಮಗೆ ಡಿಕ್ಕಿ ಹೊಡೆದ ಹಿಂದಿನ ಕಾರಿನಲ್ಲಿದ್ದ ಯುವಕರು, ಕಾರ್ ನಿಲ್ಲಿಸಿ, ಆತುರವಾಗಿ ತಮ್ಮ ಕಡೆ ಬರುತ್ತಿರುವುದು,  ಮತ್ತು ಅವರೆಲ್ಲರ ಕೈಗಳಲ್ಲಿ, ಕ್ರಿಕೇಟ್ ಬ್ಯಾಟ್, ವಿಕೆಟ್, ಚೈನ್ ತರದ ಆಯುಧಗಳು ಕಾಣುತ್ತಿದ್ದವು, ಅನುಭವಿ ಮಹಂತೇಶ್ ತಕ್ಷಣ ಅರಿತರು. ಇದು ತಮ್ಮ ಮೇಲೆ ನಡೆಯುತ್ತಿರುವ ಅಟ್ಯಾಕ್, ಇಲ್ಲಿ ನಿಲ್ಲುವುದು ಕ್ಷೇಮವಲ್ಲ, ಬೇಗ ಕಾರಿನ ಒಳಗೆ ಹೋಗಲು ಪ್ರಯತ್ನಿಸಿದರು. ಆದರೆ ಸಮಯ ಮೀರಿತ್ತು, ಪಾತಕಿಗಳು ಹತ್ತಿರ ಬಂದು ಆಗಿತ್ತು. ಮುಂದಿದ್ದವ ಬ್ಯಾಟ್ ಮೇಲೆತ್ತಿ ಬಾರಿಸಿದ, ಕೈಯನ್ನು ಅಡ್ಡ ಹಿಡಿದರು. ಬಲಗೈ ಮುರಿದಂತೆ ಆಯಿತು. ಎಷ್ಟೆ ಗಟ್ಟಿಮುಟ್ಟಾದ ದೇಹವಾದರು, ನಾಲ್ವರು ಯುವಕರ ದಾಳಿ ತಡೆಯುವಂತಿರಲಿಲ್ಲ. ಅಲ್ಲದೆ ಅವರು ಪೂರ್ಣ ಸಿದ್ದರಾಗಿ ಬಂದಿದ್ದರು. ಕೈ ಕಾಲು ತಲೆಗಳ ಮೇಲೆ ಸತತ ಹೊಡೆತಗಳು ಬಿದ್ದವು. ಕೆಳಗೆ ಕುಸಿಯುತ್ತಿರುವಾಗ ಬ್ಯಾಟ್ ತಲೆಗೆ ಬಲವಾಗಿ ಬಾರಿಸಿತು. ತಲೆಯಿಂದ ರಕ್ತ ಪ್ರವಾಹವಾಗಿ ಹರಿಯುತ್ತಿತ್ತು. ನೆಲಕ್ಕೆ ಬೀಳುತ್ತಿರುವಂತೆ, ನಾಲ್ವರು ಯುವಕರು ಸುತ್ತಲು ನಿಂತರು, ಕೆಲಕಾಲ ವಿಕ್ಷಿಸಿದ ಅವರು ತಕ್ಷಣ ತಮ್ಮ ಕಾರಿನತ್ತ ಹೊರಟರು. ಒಂದೆರಡು ಕ್ಷಣವಷ್ಟೆ. ಯುವಕರ ಕುಳಿತ್ತಿದ್ದ ಕಾರು ವೇಗವಾಗಿ ಅಲ್ಲಿಂದ ಹೊರಟುಹೋಯಿತು.
 
 ಆಗಿನ್ನು ಮಳೆಬಂದು ನಿಂತು ನೆಲವೆಲ್ಲ  ನೀರಿನಿಂದ ತೊಳೆದಂತಾಗಿದ್ದು ಈಗ ಮಹಾಂತೇಶ್ ರಕ್ತವು ಸೇರಿ ಭೂಮಿ ಕೆಂಪಾಗಿ ಕಾಣುತ್ತಿತ್ತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು ನಿಧಾನಕ್ಕೆ ಇತ್ತ ನೋಡಿ ಚಲಿಸುತ್ತಿದ್ದವಾಗಲಿ ನಿಲ್ಲಿಸುತ್ತಿರಲಿಲ್ಲ. ಬೆಂಗಳೂರು ಎಂಬ ಜನಭರಿತ ಕಾಡಿನ ಟಾರ್ ರಸ್ತೆಯಲ್ಲಿ, ರಾಜ್ಯದ ಕೆ.ಎ,ಎಸ್ ದರ್ಜೆಯ ಒಬ್ಬ ಹಿರಿಯ ಅಧಿಕಾರಿ, ನಿದಾನವಾಗಿ ತನ್ನ ದೇಹದಿಂದ ರಕ್ತವನ್ನು ಕಳೆದುಕೊಳ್ಳುತ್ತ ನಿತ್ರಾಣವಾಗುತ್ತ ಮಲಗಿದ್ದ. ಅವನ ಮನದಲ್ಲಿ ಭಾವನೆಗಳು ಅವನಿಗೆ ಅರ್ಥವಾಗದಂತೆ ಇದ್ದವು, ಒಮ್ಮೆ ತನ್ನ ಪತ್ನಿ ಮಕ್ಕಳನ್ನು ನೆನೆದ, ಮನೆಯಲ್ಲಿರುವ ವಯಸ್ಸಾದ ತಂದೆ ನೆನಪಿಗೆ ಬಂದರು, ಅದೇಕೊ ಅವನಿಗೆ ಚಿಕ್ಕ ವಯಸಿನಲ್ಲಿ ಹೋಗುತ್ತಿದ್ದ ತನ್ನ ತಂದೆಯವರ ಊರು ಕುಣಿಗಲ್ ನ ಸಿ.ಎಸ್.ಪುರ ಹತ್ತಿರದ ಸೀಗೆಹಳ್ಳಿಯ ಮನೆಗಳು, ರಸ್ತೆಗಳು ಹೊಲಗದ್ದೆಗಳು, ಬಾಲ್ಯದ ಸ್ನೇಹಿತರು ನೆನಪಿಗೆ ಬರುತ್ತಿರುವಂತೆ ನಿದಾನವಾಗಿ ಪ್ರಜ್ಞೆ ತಪ್ಪಿಹೋಗಿ ಮನಸು ದೇಹಗಳು ನಿಶ್ಚಲವಾಯಿತು..
..................
ಪೋಲಿಸ್ ಇನ್ಸ್ಪೆಕ್ಟರ್ ನಾಯಕ್  ಮೋಟರ್ ಬೈಕನ್ನು ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿನ ಪಕ್ಕ ನಿಲ್ಲಿಸಿದ. ಹಿಂದೆ ಇದ್ದ ಪೇದೆ ಮಂಜುನಾಥ ಕೆಳಗೆ ಇಳಿದ. ನಾಯಕ್ ಗೆ ಕಂಟ್ರೋಲ್ ರೂಮಿನಿಂದ ಕಾಲ್ ಬಂದಿತ್ತು, ಹೋಟೆಲ್  ಅಟ್ರಿಯ ಬಳಿ ಯಾವುದೊ ಗಲಾಟೆಯಾಗಿದೆ ರಸ್ತೆಯಲ್ಲಿ ಯಾರೊ ಬಿದ್ದಿದ್ದಾರೆ ಎಂದು. ಹಾಗೆ ಅವನು ಅಲ್ಲಿ ಬಂದಿದ್ದ. ನಾಯಕ್ ಕಾರಿನ ಒಳಗೆಲ್ಲ ನೋಡುತ್ತಿರುವಂತೆ, ಅವನು ನುಡಿದ,
"ಥತ್ತೇರಿ, ಇದೇ ಆಗೋಯ್ತು, ಬರಿ ಕತ್ತಿ, ಮಚ್ಚು, ಕೊಲೆ, ಹೆಣ ಅಂತ ನಮ್ಮ ಜೀವನ. ನೋಡು ಮೊದಲು ಕಂಟ್ರೋಲ್ ರೂಮಿಗೆ ಕಾಂಟಾಕ್ಟ್ ಮಾಡಿ, ವಿಷಯ ತಿಳಿಸಿ, ನಂತರ ಈ ಬಾಡಿ ಎತ್ತಿ ಪೋಸ್ಟ್ ಮಾರ್ಟಮ್ಗೆ ಕಳಿಸಬೇಕು, ಮೊದಲು ಸ್ಥಳದ ಪಂಚನಾಮೆ, ಇನ್ನು ಎಲ್ಲ ಶುರು"
 
ನಾಯಕ್ ಜೋರಾಗಿಯೆ ವಟಗುಟ್ಟುತ್ತಿದ್ದ,
 
ಕಾನ್ಸ್ ಟೇಬಲ್ ಮಂಜುನಾಥ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಶವದತ್ತ   ನಡೆದುಹೋದವನು ಪಕ್ಕದಲ್ಲಿ ಕುಳಿತ. ಅವನಿಗೆ ಅನುಮಾನ ಬಂದಿತು, ಬಗ್ಗಿ ನೋಡಿದವನು ಕೂಗಿದ
"ಸಾರ್  ಇದು ಪೋಸ್ಟ್ ಮಾರ್ಟಮ್ ಕೇಸಲ್ಲ, ಇವನು ಸತ್ತಿಲ್ಲ ಇನ್ನು ಬದುಕಿದ್ದಾನೆ" ಎಂದು.
ತಕ್ಷಣ ನಾಯಕ್ ಹತ್ತಿರ ಹೋಗಿ ಗಮನಿಸಿದ, ನಿಜ ಕೆಳಗೆ ಬಿದ್ದಿರುವ ವ್ಯಕ್ತಿ ಸತ್ತಿಲ್ಲ ಬದುಕಿದ್ದಾನೆ,  ತನ್ನ ಮೊಬೈಲ್ ಎತ್ತಿ ಕಂಟ್ರೋಲ್ ರೂಮನ್ನು ಸಂಪರ್ಕಿಸಿ,  ತಕ್ಷಣ ಆಂಬುಲೆನ್ಸ್ ಗೆ ಏರ್ಪಾಡು ಮಾಡುವಂತೆ ತಿಳಿಸಿ. ಸುತ್ತಲು ಗಮನಿಸಿದ. ಇವರಿಬ್ಬರು ಇರುವದನ್ನು ಕಂಡು ಆಗಲೆ ಸುತ್ತಲು ಜನ ಸೇರಲಾರಂಬಿಸಿದರು. ಅವರು ಹತ್ತಿರ ಬರದಂತೆ ನೋಡಬೇಕು ಯಾವುದಾದರು ಸಾಕ್ಷಿಗಳಿದ್ದರೆ ನಾಶವಾಗುವ ಸಾದ್ಯತೆ ಇರುತ್ತದೆ. ನಾಯಕ್ ಸಾರ್ವಜನಿಕರನ್ನು ಕುರಿತು ಹೇಳಿದ
"ನಿಮ್ಮಲ್ಲಿ ಯಾರಾದರು ಈ ಕೊಲೆ ಪ್ರಯತ್ನ ನೋಡಿದವರಿದ್ದರೆ, ಹೇಳಿ, ಉಳಿದವರು ದೂರ ನಿಲ್ಲಿ"
ತಕ್ಷಣ ಎಲ್ಲ ದೂರ ಹೋಗಿ ನಿಂತರು.
ಸುತ್ತಲು ಗಮನಿಸಿದಂತೆ ಕಾರಿನ ಹಿಂದಿನ ಚಕ್ರದ ಹತ್ತಿರ ಯಾವುದೋ ಮೊಬೈಲ್ ಬಿದ್ದಿರುವಂತೆ ಕಾಣಿಸಿತು. ಮಂಜುನಾಥ ಬಗ್ಗಿ ತೆಗೆದುಕೊಂಡ. ನಾಯಕ್ ಹೇಳಿದ
"ಅದನ್ನೇಕೆ ಮುಟ್ಟಿದೆ, ಅದು ಕೊಲೆಗಾರನಿಗೆ ಸೇರಿರಬಹುದು, ಕೆಳಗೆ ಬೀಳಿಸಿದ್ದರೆ"
"ಹಾಗಲ್ಲ ಸಾರ್ ನನಗೇಕೊ ಇದು ಇಲ್ಲಿ ಬಿದ್ದಿರುವ ವ್ಯಕ್ತಿಯದೆ ಅನ್ನಿಸಿತು, ಇವನು ಯಾರು ಅಂತ ತಿಳಿಯಬಹುದು ಅದಕ್ಕಾಗಿ ನೋಡಿದೆ" ಎನ್ನುತ್ತ ಮೊಬೈಲ್ ಅನ್ನು ಬಟ್ಟೆಯಿಂದ ಒರೆಸಿ ಗಮನಿಸಿದ.
ಅವನು ಅದನ್ನು ಗಮನಿಸುತ್ತಿರುವಂತೆ ಜನರ ಗುಂಪಿನಿಂದ, ಜೀನ್ಸ್ ಪ್ಯಾಂಟ್, ಹಾಗು ಬಿಳಿ ಶರ್ಟ್ ದರಿಸಿ, ಸ್ವಲ್ಪ ಗಡ್ಡ ಇರುವಾಗ ಹತ್ತಿರ ಬಂದ. ಅವನು ಬಂದದ್ದನ್ನು ಕಂಡ, ಮಂಜುನಾಥ ನುಡಿದ
"ನೀನಾಗಲೆ ಹಾಜರ್, ಅದೆಲ್ಲಿರುತ್ತೀರೊ ನಕ್ಷತ್ರಿಕರು   ನೀವು, ಪೋಲಿಸರಿಗಿಂತ ಮುಂದೆಯೆ ಬಂದು ನಿಂತಿರುತ್ತೀರಿ" ಜಬರ್ದಸ್ತ್ ಮಾಡಿದ.
ಆ ವ್ಯಕ್ತಿಯ ಹೆಸರು ವೀರೇಶ ಎಂದು, ಅವನು ಬೆಂಗಳೂರಿನ ಅವಿನ್ಯೂ ರಸ್ತೆಯ ಸಂದಿಯಿಂದ ಸಂಜೆಯಲ್ಲಿ ಮಾತ್ರ ಪ್ರಕಟವಾಗುವ ಪತ್ರಿಕೆಯೊಂದರ ರಿಪೋರ್ಟರ್. ಆದರೆ ಅವನಿಗೆ ಸುದ್ದಿಯನ್ನು ಆ ಪತ್ರಿಕೆಗೆ ಕೊಡಬೇಕು ಎಂಬ ಯಾವ ಕಟ್ಟುಪಾಡು ಇಲ್ಲ. ಕೆಲವೊಮ್ಮೆ ಅವನು ತನ್ನ ಪತ್ರಿಕೆಗೆ ಕೊಡುವದಕ್ಕಿಂತ ಸುದ್ದಿಯನ್ನು ಮೊದಲೆ,  T.V.-9 ಮುಂತಾದ ಮಾಧ್ಯಮಗಳಿಗೆ, ಅಥವ ಕೆಲವೊಮ್ಮೆ ದೊಡ್ಡ ಅಂಗ್ಲ ಪತ್ರಿಕೆಯ ರಿಪೋರ್ಟರ್ ಗಳಿಗೆ ಸುದ್ದಿಯನ್ನು ತಲುಪಿಸಿಬಿಡುತ್ತಾನೆ. ಅದಕ್ಕೆ ಕಾರಣ ಅವರು ಕೊಡುವ ಅಲ್ಪಸ್ವಲ್ಪ ಹಣ, ಒಮ್ಮೊಮ್ಮೆ ಅವರ ಜೊತೆ ಸೇರಿದಾಗ ಸಿಗುವ ಪುಕ್ಕಟೆ ತಿಂಡಿ, ಊಟ, ಪಾನೀಯಗಳು. ಯಾವ ಸಿದ್ದಾಂತ ತತ್ವಗಳಿಗೂ ದೂರವಾದ ಅವನು ಸುದ್ದಿಯನ್ನು ಹಾಗೆ ಹೇಳುವದಕ್ಕಿಂತ ಅದರಲ್ಲಿ ಏನಾದರು ಉಪ್ಪುಕಾರವಿದ್ದರೆ ಮಾತ್ರ ಲಾಭವೆಂದೆ ಅರಿತ್ತಿದ್ದವನು, ಹಾಗಾಗಿ ಅವನು ಕೊಡುವ ಸುದ್ದಿಗಳಲ್ಲಿ ಅರ್ದಭಾಗ ಸುಳ್ಳಿರುತ್ತದೆ ಎಂದು ಎಲ್ಲರಿಗು ಗೊತ್ತು,ಆದರು ಅದನ್ನು ಪ್ರಕಟಿಸುತ್ತಿದ್ದರು, ಕಾರಣ ಸರ್ಕ್ಯುಲೇಶನ್, ಮತ್ತು ಟಿ ಅರ್ ಪಿ ಲೆಕ್ಕಚಾರಗಳು.
 ಮೊಬೈಲ್ ಹಿಡಿದ ಮಂಜುನಾಥ , ಇನ್ಸ್ಪೆಕ್ಟರ್ ನಾಯಕ್ ಗೆ ಹೇಳಿದ
 
'ಸಾರ್ , ಕೇವಲ ಹದಿನೈದು ನಿಮಿಷ ಮುಂಚೆ ಇದರಿಂದ ಎರಡು ಮೂರು ಕಾಲ್ ಹೋಗಿದ್ದೆ ಅನ್ನಿಸುತ್ತೆ. ಕಡೆಯ ಕಾಲ್ ಯಾವುದೊ ಹುಡುಗಿಗೆ, ಸಾರ್ ಎಂತದೊ ಜ್ಯೋತಿ ಎಂದಿದೆ'
ವೀರೇಶನ ಕಿವಿ 'ಹುಡುಗಿ' ಎನ್ನುತ್ತಲೆ ಚುರುಕಾಯಿತು.
ನಾಯಕ್ ಹತ್ತಿರ ಬಂದವನು ಹೇಳಿದ
'ಕಡೆಯಲ್ಲಿ ಕಾಲ್ ಹೋಗಿದೆಯಲ್ಲ ಆ ನಂಬರ್ಗೆ ನೀನು ಪುನಃ ಕಾಲ್ ಮಾಡು, ಅಗ ಈ ಕಾರು, ಮತ್ತು ಬಿದ್ದಿರುವ ದೇಹ ಯಾರದೆಂದು ತಿಳಿಯಬಹುದು, ಬೇಡ ಕೊಡಿಲ್ಲಿ ನಾನೆ ಮಾಡುತ್ತೇನೆ '
ಎನ್ನುತ್ತ ಮಂಜುನಾಥನಿಂದ ಮೊಬೈಲ್ ಪಡೆದ. ನಾಯಕ್ ಪೋನ್ ಕಾಲ್ ಮಾಡುವಾಗಲೆ ಮಂಜುನಾಥ ಕುಳಿತು, ದೇಹದ ಸರ್ವೆ ನಡೆಸಿದ, ಜೇಬಿನಲ್ಲಿ ಡ್ರೈವಿಂಗ್ ಲೈಸನ್ಸ್ ಅಥವ ಯಾವುದಾದರು ಹೆಸರಿರುವ ಕಾರ್ಡ್ ಸಿಕ್ಕರೆ ಗುರುತಿಸಲು ಅನುಕೂಲ ಎಂದು. ಅವನು ಕೆಳಗೆ ಬಿದ್ದಿದ್ದ ವ್ಯಕ್ತಿಯ ಜೇಬನ್ನು ತಡಕುವಾಗ ದೂರದಲ್ಲಿ ನಿಂತ ಜನರ ಮದ್ಯದಲ್ಲಿ ಒಬ್ಬ ಅಜ್ಞಾತ ವ್ಯಕ್ತಿ ಬುದ್ದಿವಂತನಂತೆ ತನ್ನ ಪಕ್ಕದಲ್ಲಿದ್ದವನಿಗೆ ಹೇಳಿದ
"ನೋಡು ಈ ಪೋಲಿಸರು, ಸತ್ತ ವ್ಯಕ್ತಿಯ ಜೇಬನ್ನು ಬಿಡಲ್ಲ ಅಲ್ಲಿ ಏನಾದರು ಹಣ ಒಡವೆ ಇದ್ದರೆ ಇವರು ಹೊಡೆದು ಬಿಡುತ್ತಾರೆ, ಪಕ್ಕಾ ಕಳ್ಳರು ಅಂದರೆ ಇವರೆ" , ಆ ಮಾತು ಕೇಳಿದ ವ್ಯಕ್ತಿ ತಲೆ ಆಡಿಸಿದ ನಿಜ ಅನ್ನುವಂತೆ.
 
ನಾಯಕ್ ಮೊಬೈಲ್ ನಿಂದ ಕಡೆಯ ಕಾಲ್ ಹೋಗಿದ್ದ ಜ್ಯೋತಿ ಎಂಬಾಕೆಗೆ ಕಾಲ್ ಮಾಡಿದ, ಆ ಕಡೆಯಿಂದ
"ಸಾರ್... ಹೇಳಿ, ಆಗಲೆ ನಿಮ್ಮಕಾಲ್  ಅರ್ಧಕ್ಕೆ ಕಟ್ ಆಗಿ ಹೋಯ್ತು ಏಕೆ"  ಎನ್ನುವ ದ್ವನಿ.
ನಾಯಕ್ ಕೇಳಿದ " ನೋಡಿ ಮೇಡಮ್,  ನಾನು ಹೈಗ್ರೌಂಡ್ ಪೋಲಿಸ್ ಇನ್ಸ್ಪೆಕ್ಟರ್ ನಾಯಕ್ ಮಾತನಾಡೋದು, ಇಲ್ಲಿ ಹೋಟೆಲ್ ಏಟ್ರಿಯ ಬಳಿ,   ಇದು ಯಾರ ಮೊಬೈಲ್ ತಿಳಿಸುತ್ತೀರ"
ಆ ಕಡೆಯಿಂದ ಗಾಭರಿಯ ದ್ವನಿ
"ಹೌದಾ, ಸಾರ್, ನೀವು ಮಾತನಾಡುತ್ತಿರುವ ಮೊಬೈಲ್ ನಮ್ಮ ಬಾಸ್  ಮಹಾಂತೇಶ್ ಸಾರ್ ಅವರದು, ಈಗ ಹದಿನೈದು ನಿಮಿಷ ಮುಂಚೆ ಕಾಲ್ ಮಾಡಿದ್ದರು, ಆದರೆ ಏನು ಮಾತನಾಡಲೆ ಇಲ್ಲ, ದೊಡ್ಡ ಶಬ್ದ ಕೇಳಿಸಿತು ನಂತರ ಕಾಲ್ ಕಟ್ ಆಯಿತು, ಅಲ್ಲಿ ಏನಾಗಿದೆ ಸಾರ್ ಆಕ್ಸಿಡೆಂಟಾ ಏನು"
 
" ಆಕ್ಸಿಡೆಂಟ ಅಲ್ಲ ಮೇಡಮ್ , ನೀವು ಯಾರು ಮಾತನಾಡುತ್ತಿರುವುದು ತಿಳಿಸಿ, ನೋಡಿ ಇಲ್ಲಿರುವ ಕಾರಿನ ನಂಬರ್  KA 01 MC1724 ಇದು ನಿಮಗೆ ತಿಳಿದಿರುವುದಾ? "  ನಾಯಕ್ ಮತ್ತೆ ಕನ್ ಫರ್ ಮೇಶನ್ಗಾಗಿ ಕೇಳಿದ
"1724 ನಂಬರಾ? ಅದು ನಮ್ಮ ಬಾಸ್ ಅವರದೆ ಕಾರ್ ಹೌದು, ಅವರೆಲ್ಲಿದ್ದಾರೆ ಅಲ್ಲಿಯೆ ಇದ್ದಾರ ವಿಶಯ ತಿಳಿಸಿ" ಆಕೆ ಅಂದಳು ಗಾಬರಿಯಿಂದ
"ಹೌದು ಇಲ್ಲಿಯೆ ಇದ್ದಾರೆ , ಆದರೆ ಮಾತನಾಡುವ ಪರಿಸ್ಥಿಥಿಯಲ್ಲಿ ಇಲ್ಲ, ನಿಮಗೆ ಅವರ ಮನೆಯ ನಂಬರ್ ಕೊಡಲಿಕ್ಕಾಗುತ್ತ" ಕೇಳಿದ ನಾಯಕ್,
"ಸರಿ ತೆಗೆದುಕೊಳ್ಳಿ ಮನೆಯ ಲ್ಯಾಂಡ್ ಲೈನ್ ನಂಬರ್ '೨೬೬೧೧೭೪೫' , ಮನೆಯಲ್ಲಿ ಸಾರ್ ಅವರ ಪತ್ನಿ, ಮತ್ತು ಸಾರ್ ತಂದೆ ಇರುತ್ತಾರೆ ಅನ್ನಿಸುತ್ತೆ, ನಾನು ಕಾಲ್ ಮಾಡಿ ನೋಡ್ತೀನಿ, ಏನು ಕಾರ್ ಆಕ್ಸಿಡೆಂಟ್ ಆಗಿದೆಯ ,ನಾನು ಅಲ್ಲಿಗೆ ಬರಬೇಕ?" ಎಂದಳು.
"ನೀವು ಬರುವುದು ಬೇಡ ಬಿಡಿ, ನಾನು ಮನೆಗೆ ಮಾತನಾಡಿ ನೋಡ್ತೀನಿ, ಆಮೇಲೆ ಬೇಕಾದರೆ ನಿಮ್ಮನ್ನು ಪುನಃ ಕರೀತೇನೆ" ಎನ್ನುತ್ತ ನಾಯಕ್ ಮೊಬೈಲ್ ಕಾಲ್ ಕಟ್ ಮಾಡಿದ,
ಆ ವೇಳೆಗೆ ಕೆಳಗೆ ಕುಳಿತಿದ್ದ ಮಂಜುನಾಥ ವ್ಯಕ್ತಿಯ ಜೇಬಿನಿಂದ ಪರ್ಸ್ ತೆಗೆದು ಅದರಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಮತ್ತು ಅದರಲ್ಲಿನ ಪೋಟೊ ನೋಡಿ, ಕೆಳಗೆ ಬಿದ್ದಿರುವಾತ ಮಹಾಂತೇಶ್ , ಕೆ ಎ ಎಸ್ ಅಧಿಕಾರಿ ಎಂದು ಗ್ಯಾರಂಟಿ ಮಾಡಿಕೊಂಡಿದ್ದ.
ನಾಯಕ್ ಪುನಃ ಮಹಾಂತೇಶ್ ಮನೆಗೆ ಪೋನ್ ಮಾಡಿದ , ಯಾರೊ ಗಂಡಸರು ಪೋನ್ ತೆಗೆದರು,
"ಹಲೋ ಇದು ನಾಯಕ್ , ಹೈಗ್ರೌಂಡ್ ಪೋಲಿಸ್, ಇಲ್ಲಿ ಏಟ್ರಿಯ ಹೋಟೆಲ್ ಹತ್ತಿರ ಮಹಾಂತೇಶ್ ಮೇಲೆ ಹಲ್ಲೆಯಾಗಿದೆ, ಅವರನ್ನು ಅಸ್ಪತ್ರೆಗೆ ಸಾಗಿಸುತ್ತಿದ್ದೇವೆ, ನೀವು ಯಾರು ಮಾತನಾಡೋದು" ಎಂದರು.
ಆ ಕಡೆಯಿಂದ ಮಹಂತೇಶ್ ತಂದೆ, ಸಾಕಷ್ಟು ಗಾಭರಿಯಾಗಿದ್ದರು, ತಾವು ಎಲ್ಲರು ಈಗ ಬರುವದಾಗಿ ತಿಳಿಸಿದರು.
 
ಅಷ್ಟರಲ್ಲಿ, ಅಲ್ಲಿಗೆ ಅಂಬ್ಯುಲೆನ್ಸ್ ಶಬ್ದ ಮಾಡುತ್ತ ಬಂದು ನಿಂತಿತು, ಹಿಂದೆಯೆ ಪೋಲಿಸ್ ವ್ಯಾನ್ ಅದರಲ್ಲಿ  ಸೆಂಟ್ರಲ್  ವಿಭಾಗದ Acp ಮತ್ತು ಮತ್ತೆ ಇಬ್ಬರು ಇನ್ಸಪೆಕ್ಟರ್ . ಈಗ ನಾಯಕ್ ಚುರುಕುಗೊಂಡರು, ಸಲ್ಯೂಟ್ ಜೊತೆ ಹಿರಿಯ ಅಧಿಕಾರಿಯನ್ನು ಸ್ವಾಗತಿಸಿದರು.
"ಏನಾಗಿದೆ ನಾಯಕ್ ಏನು ಪ್ರೊಸೀಡಿಂಗ್ಸ್ , ಏನಾದರು ಕ್ಲೂಗಳಿವೆಯ" ಎನ್ನುತ್ತ ಹತ್ತಿರ ಬಂದರು,
"ಸಾರ್, ದಾಂದಲೆಗೆ ಒಳಗಾದವರು, ಮಹಂತೇಶ್ ಅನ್ನುವರು ಸಾರ್, senior KAS, ಕೋಅಪರೇಟಿಂಗ್ ಆಡಿಟ್ ನ deputy director,  ದಾಳಿ ಮಾಡಿದವರು ಯಾರು ಎಂದು ಇನ್ನು ತಿಳಿದಿಲ್ಲ, ಕ್ಲೂಗಳನ್ನು ನೊಡ್ತಾ ಇದ್ದೇನೆ ಸಾರ್, ಅಂಬ್ಯುಲೆನ್ಸ್ ಗೆ ಅರೇಂಜ್ ಮಾಡಿದೆ ಈಗ ಶಿಫ್ಟ್ ಮಾಡಿಸ್ತೇನೆ, ಅವರ ಮನೆಯವರಿಗೆ ಕಾಂಟಾಕ್ಟ್ ಮಾಡಿದೆ, ಅವರು ಬರುತ್ತಿದ್ದಾರೆ",
 ಮಹಾಂತೇಶ್ ಮಲಗಿರುವ ಸ್ಥಳವನ್ನು ಗುರುತು ಮಾಡಿಕೊಂಡು, ಕೆಲವು ಫೋಟೊಗಳನ್ನು ತೆಗೆದುಕೊಂಡು, ಅವರನ್ನು ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಿದರು. ಅಲ್ಲಿದ್ದ ಕಾನ್ಸ್ ಟೇಬಲ್ ಗಳಿಗೆ ಯಾರು ಹತ್ತಿರ ಬರದಂತೆ ಕಾಯಬೇಕೆಂದು ತಿಳಿಸಿ, ಹಿರಿಯ ಅದಿಕಾರಿಗಳಿಗೆ ತಿಳಿಸಿ, ನಾಯಕ್ ಅಂಬ್ಯುಲೆನ್ಸ್ ನ ಹಿಂದೆ ಹೊರಟರು, ಜೊತೆಗೆ ಸ್ವಲ್ಪ ಕಾಲದಲ್ಲಿ ಹಿರಿಯ ಅಧಿಕಾರಿಗಳು ಸಹ ಅಲ್ಲಿಂದ ಅಸ್ಪತ್ರೆಯತ್ತ ಪ್ರಯಾಣಬೆಳೆಸಿದರು. ಈಗ ಸ್ಥಳದಲ್ಲಿ ಬರಿ ಕಾನ್ಸ್ ಟೇಬಲ್ ಗಳು ಮತ್ತು ಸಬ್ ಇನ್ಸ್ಪೆಕ್ಟರ್ ಗಳು, ಟೀವಿ ಮಾಧ್ಯಮದವರು ಹಾಗು ಪತ್ರಿಕೆಗಳ ಪ್ರತಿನಿದಿಗಳು ಆಗಲೆ ಸ್ಥಳದಲ್ಲಿ ಸೇರಿ ಕಾನ್ಸ್ ಟೇಬಲ್ ಗಳಿಂದ ಎಲ್ಲ ವಿಷಯ ಸಂಗ್ರಹಿಸಲು ಪ್ರಯತ್ನಪಡುತ್ತಿದ್ದರು.
 
 ವೀರೇಶ ಆಗಲೆ ತನ್ನ ರಿಪೋರ್ಟ್ ಕೆಲವು ಮಾದ್ಯಮಗಳಿಗೆ ತಲುಪಿಸಿಯಾಗಿತ್ತು, ಟೀವಿಗಳು ಆಗಲೆ ಹೆಡ್ ಲೈನ್ಸ್ ಕೊಡುತ್ತಿದ್ದವು,
 
 'ಬೆಂಗಳೂರಿನ ಏಟ್ರಿಯ ಹೋಟೆಲ್ ಹತ್ತಿರ , ಸರ್ಕಾರದ ಹಿರಿಯ ಕೆ ಎ ಎಸ್ ಅಧಿಕಾರಿಯ ಮೇಲೆ ದಾಳಿ" , 'ಕೆ ಎ ಎಸ್ ಅಧಿಕಾರಿ ಜೀವ ಸಾವು ಬದುಕಿನ ನಡುವೆ" , 'ಕೊಲೆ ಪ್ರಯತ್ನದ ಹಿಂದೆ ಭೂಮಾಫಿಯ ಕೈವಾಡ ಇರುವ ಶಂಕೆ' , 'ಮಹಾಂತೇಶ್ ಸೊಸೈಟಿಗಳ ಅವ್ಯವಹಾರಗಳ ವಿಚಾರಣೆ ನಡೆಸಿದ್ದರು"
ಮತ್ತೆ ಕೆಲವು ಮಾಧ್ಯಮಗಳು ಪ್ರಕಟಿಸುತ್ತಿದ್ದವು
"ಕೊಲೆಯ ಹಿಂದೆ ಹುಡುಗಿಯೊಬ್ಬಳ ಕೈವಾಡ?" , "ಮಹಂತೇಶ್ ಮೊಬೈಲಿನಲ್ಲಿ ಹುಡುಗಿಯ ಚಿತ್ರ ಇತ್ತೆ?" 
ಹತ್ತು ಹಲವು ವಿಚಿತ್ರ ಸುದ್ದಿಗಳ ಮದ್ಯೆ ಮಹಾಂತೇಶ್  ಬೆಂಗಳೂರಿನ  ಮಲ್ಲಿಗೆ ಅಸ್ಪತ್ರೆಯಲ್ಲಿ. ಸಾವು ನೋವುಗಳ ನಡುವೆ ಹೋರಾಟ ನಡೆಸಿದ್ದರು.
---------------------------------------
                                    ಮುಂದಿನ ಭಾಗ
                                    ಕೊಲೆಯ ಕ್ಲೂಗಳನ್ನು ಹಿಡಿಯುವ ಯತ್ನ

 

ಎರಡನೆ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ  : ಕತೆ - ಒಂದು ಕೊಲೆಯ ಸುತ್ತ - ಭಾಗ 2
ಮೂರನೆಯ ಬಾಗ ಓದಲು ಇಲ್ಲಿ ಕ್ಲಿಕ್ ಮಾಡಿ : ಕತೆ - ಒಂದು ಕೊಲೆಯ ಸುತ್ತ - ಬಾಗ೩
 
ಮೂಲಚಿತ್ರ :ndtv.com   (download ಮಾಡಿ ನಂತರ edit ಮಾಡಲಾಗಿದೆ)

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿನ್ನೋಟ: ಆತ್ಮೀಯ ಸಂಪದಿಗರೆ, ಈ ಬಾರಿ ಒಂದು ಪತ್ತೆದಾರಿ ಕತೆ ಬರೆಯುವ ಅಂತ ಮನಸಾಯಿತು. ಈಚೆಗೆ ನಡೆದ ಕೆ ಎ ಎಸ್ ಅಧಿಕಾರಿ ಮಹಾಂತೇಶ್ ಕೊಲೆಯ ನಿಜಘಟನೆಯನ್ನು ಅದಾರವಾಗಿಟ್ಟುಕೊಂಡು, ಪತ್ರಿಕೆ ಹಾಗು ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಜೊತೆ ನನ್ನ ಕಲ್ಪನೆಯನ್ನು ಸೇರಿಸಿ ಕತೆ ಹೆಣಿದಿರುವೆ. ಬಳಸಿರುವ ಹೆಸರುಗಳು ಕೆಲವು ನಿಜ, ಕೆಲವು ಕಲ್ಪಿತ. ಅಲ್ಲದೆ ಪೋಲಿಸ್ ಇಲಾಖೆಯ ನಿಜ ಕಾರ್ಯವೈಖರಿ ವರ್ಣಿಸಲು ನನಗೆ ಹೆಚ್ಚು ತಿಳಿದಿಲ್ಲ. ಹಾಗಾಗಿ ಓದುವಾಗ ಕೆಲವೊಮ್ಮೆ ಅಸಂಗತ ಎನಿಸಿದರೆ ಕ್ಷಮೆ ಇರಲಿ. ನಿಜ ಘಟನೆಯಾದರು, ನನ್ನ ಕತೆ ಮಾತ್ರ ಕಾಲ್ಪನಿಕ, ಅನುಕೂಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಂಡಿರುವೆ. ನಿಮ್ಮೆಲ್ಲರ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬ...ನಿಮ್ಮ ಲೇಖನ ಒದುತಿದ್ದರೆ ಹಾಡಹಗಲೇ ದುಷ್ಟರಿಂದ ಹತ್ಯೆಯಾದ ಮಹಾಂತೇಶ್ ರವರ ಶಾಂತಿ ಸಿಗದ ಅತೃಪ್ತ ಆತ್ಮ ವೇ ತನ್ನ ನೋವನ್ನು ನಿಮ್ಮ ಮೂಲಕ ಬರೆಸಿರುವಂತಿದೆ.ಹತ್ಯೆ ಮಾಡಿದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಈ ಲೇಖನದ ಆಶಯವಾಗಲಿ. ನಿಮ್ಮ ಪ್ರೇತ ಗಳ ಕಥೆ ತುಂಬಾನೇ ಸ್ವಾರಸ್ಯಕರವಾಗಿದೆ.ನೀವು ಇನ್ನು ಹೆಚ್ಚಿನ ಪ್ರೇತ ಕಥೆಗಳನ್ನು ಪ್ರಕಟಿಸಿ ಎಂದು ಕೇಳಿಕೊಳ್ಳುತ್ತೇನೆ. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನೋಡು ಈ ಪೋಲಿಸರು, ಸತ್ತ ವ್ಯಕ್ತಿಯ ಜೇಬನ್ನು ಬಿಡಲ್ಲ ಅಲ್ಲಿ ಏನಾದರು ಹಣ ಒಡವೆ ಇದ್ದರೆ ಇವರು ಹೊಡೆದು ಬಿಡುತ್ತಾರೆ, ಪಕ್ಕಾ ಕಳ್ಳರು ಅಂದರೆ ಇವರೆ" , ಆ ಮಾತು ಕೇಳಿದ ವ್ಯಕ್ತಿ ತಲೆ ಆಡಿಸಿದ ನಿಜ ಅನ್ನುವಂತೆ. :())))) ಗುರುಗಳೆ- ಇದು ನಿಮ್ಮ ಮೊದಲ ಪತ್ತೇಧಾರಿ ಬರಹದ ಪ್ರಯತ್ನ ಅಲ್ಲ...???? ನೀವು ಬಹು ಹಿಂದೆಯೇ ಅಣ್ಣಿಗೆರೆ ಬುರುಡೆ ಬಗ್ಗೆ ಪತ್ತೇಧಾರಿಕೆ ನಡೆಸಿ.... ಬರೆದಿರುವಿರಿ...: :())) ನಿಮ್ಮ ಈ ಪತ್ತೇಧಾರಿ ಕಥೆ- ಮೊದಲ ಭಾಗ ಸಖತ್ , ಪತ್ರಿಕೆ- ದೂರ ದರ್ಶನ ಸುದ್ಧಿ ವಿವರದ ಮೇಲೆ ನೀವ್ ಬರೆದ ಬರಹ ಸನ್ನಿವೇಶಗಳು ಕಣ್ಣಿಗೆ ಕಟ್ಟಿದಂತೆ ಇವೆ... ಇನ್ನೂ ಶ್ರಾವ್ಯ -ಮುದ್ರಣ-ದೃಶ್ಯ ಮಾಧ್ಯಮದವರು ಬ್ರೇಕೀಂಗ್ ನ್ಯೂಸ್ ನೀಡುವ ಕೊಡುವ ಭರದಲ್ಲಿ ಯಾರ್ಯಾರಿಗೋ ಲಿಂಕ್ ಹಾಕಿ....!! :((( ಒಂದು ಕೊಲೆ ಯತ್ನ(ಈಗ ಅವರು ಮೃತರಾಗಿ ಕೆಲವು ದಿನಗಳು ಆಯ್ತು) ಕುರಿತು ಊಹೆ ಆಧಾರದ ಮೇಲೆ ಬರೆದ ಮೊದಲ ಭಾಗ ನೀವ್ ಪತ್ತೇಧಾರಿ ಕಥೆಯನ್ನು ನಿಮ್ಮ ಇನ್ನಿತರ ವಿಭಿನ್ನ ಬರಹಗಳ ಶೈಲಿಯಂತೆ ಬರೆಯಬಲ್ಲಿರಿ ಎಂದು ತೋರಿಸಿದೆ.... ನನಗನ್ನಿಸಿದಂತೆ ಈ ತರಹದ ಘಟನೆಗಳು ನಡೆದಾಗ ಆ ಬಗ್ಗೆ ಈ ತರಹದ ಪ್ರಯತ್ನದ ಬರಹಗಳು ಬರುವುದು ಕಡಿಮೆ- ಏನಿದ್ದರೂ ಚಲನ ಚಿತ್ರಗಳೆ ಜಾಸ್ತಿ ಬರುವುವು..:(( ಈಗ ನೀವ್ ಆ ಬಗ್ಗೆ ಶೀಘ್ರದಲ್ಲಿ ಬರೆಯುವ ಮೂಲಕ ಹೊಸ ಪರಂಪರೆ ಹುಟ್ಟು ಹಾಕಿರುವಿರಿ... ಮುಂದಿನ ಭಾಗವೇ ಕೊನೇ ಅನ್ನಿಸುತ್ತಿದೆ..!! <<<<<<<ಮೃತರ ಆತ್ಮಕ್ಕೆ ಶಾಂತಿ ಸಿಗಲಿ..<<<< ಬರಹದಲ್ಲಿನ ಒಂದು ವಾಕ್ಯ ಅದನ್ನು ಓದಿದ ಯಾರಿಗೆ ಆದರೂ(ಅವರನ್ನು ಬಿಟ್ಟು...!!) ನಗೆ ಉಕ್ಕಿಸದೇ ಇರದು.....ಅದನ್ನು ಪ್ರತಿಕ್ರಿಯೆ ಮೊದಲಲ್ಲೇ ಹಾಕಿರುವೆ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಪಾರ್ಥವ್ರೆ ಬಹುಷಃ ಹೀಗೇ ಆಗಿತ್ತೀನೋ ಅನ್ಸತ್ತೆ ಅದರಲ್ಲೂ ಮಹಾಂತೇಶ್ ರಕ್ತದ ಮಡುವಿನಲ್ಲಿ ಬಿದ್ದು ನೆನಪಿನಗಲಕ್ಕೆ ಜಾರಿದಾಗ ಬರೆದಿರುವ ಸಂದರ್ಭ ಕಣ್ಣೀರು ತರಿಸುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೇ ಇಲ್ಲಿವರೆಗೂ ನಡೆದಿದ್ದು ನೈಜ ಘಟನೆ. ಮು೦ದಿನ ನಿಮ್ಮ ಕಲ್ಪನೆ ಹೇಗಿದೆ ಎ೦ಬ ನಿರೀಕ್ಷೆಯಲ್ಲಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ತುಂಬಾ ಚೆನ್ನಾಗಿದೆ . ಒಂದು ತಿದ್ದುಪಡಿ, ಮೊದಲನೇ ಭಾಗದಲ್ಲಿದ್ದ ಕೆಂಪು ಬಣ್ಣದ ಇಂಡಿಕ 3ನೇ ಭಾಗದಿಂದ ಆಲ್ಟೊಗೆ ಬದಲಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಮೊದಲನೆ ಭಾಗದಲ್ಲಿ ಬದಲಾಯಿಸಿದ್ದೀನಿ. ಆಲ್ಟೋ ಎಂದು ಹೇಗು ನನ್ನ ಬಳಿ ಕಾರ್ ಇಲ್ಲ ಹಾಗಿರುವಲ್ಲಿ ಆಲ್ಟೋ ಆದರೇನು ಇಂಡಿಕಾ ಆದರೇನು ಅಲ್ವೆ ? :)))) ನಿಮ್ಮ ಸೂಕ್ಷ್ಮ ಗಮನಿಸುವಿಕೆಗೆ ಅಭಿನಂದನೆಗಳು. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.