ಕತೆ : ದೂರ ತೀರದ ಕರೆ [ ಬಾಗ : 2 ]

5

 

ಇಲ್ಲಿಯವರೆಗು...

ದೂರ ತೀರದ ಕರೆ [ಬಾಗ - 1]

ಬಾಗ - ೨ 
 
ಮುಂದೆ ಓದಿ.....
 
ನಾನು ಕಾಣುತ್ತಿರುವದೇನು ??!!   
ಸಾಮಾನ್ಯಕ್ಕಿಂತ ಅಗಲವಾದ ಬುಜ  ಆದರೆ  ಬುಜದ ಹತ್ತಿರ ಮರವೊಂದು ಕವಲು ಒಡೆದಂತೆ ಎರಡು ವಿಭಾಗವಾಗಿ ಎರಡು ಕುತ್ತಿಗೆ ಹಾಗು  ಎರಡು ತಲೆಗಳು. ನೋಡಲು ಹೆಚ್ಚು ಕಡಿಮೆ ತದ್ರೂಪು.  ಸುಂದರವಾದ ಮುಖಗಳು. ದೇಹ ಮಾತ್ರ ಒಂದೆ. ಸಡಿಲವಾದ ಬಿಳಿ ಶರ್ಟ್ ಹಾಗು ಜಿನ್ಸ್ ಪ್ಯಾಂಟ್ ದರಿಸಿದ್ದ ಆಕೆ ನನ್ನನ್ನು ಎರಡು ಮುಖದಿಂದಲು ನಗುತ್ತ ನೋಡುತ್ತ ನಿಂತಿದ್ದರು. ನಾನು ತಿಳಿದಂತೆ ವಯಸ್ಸು ಹೆಚ್ಚಿರಲಿಲ್ಲ ಜಾಸ್ತಿ ಎಂದರೆ ಇಪ್ಪತ್ತು ಅನ್ನಬಹುದೇನೊ.  
 
ನನ್ನಿಂದ ಯಾವ ಮಾತು ಹೊರಡಲಿಲ್ಲ. ನನ್ನ ಮೌನ ಪ್ರತಿಕ್ರಿಯೆಯನ್ನು ಆಕೆ ಮೊದಲೆ ನಿರೀಕ್ಷಿಸಿದ್ದರು ಅನ್ನಿಸುತ್ತೆ. ನಗುತ್ತ ನುಡಿದರು ಆಕೆ
"ಸಾರಿ, ತುಂಬಾ ಆಘಾತವಾಯಿತ ನನ್ನನ್ನು ನೋಡಿ, ನಿಮಗೆ ಮೊದಲೆ ತಿಳಿಸಿರಲಿಲ್ಲ ನಮ್ಮನ್ನು ಕ್ಷಮಿಸುತ್ತೀರ"
ನನ್ನ ಜೊತೆ ಮಾತನಾಡಿದವರು ಯಾರು ಆಂಡ್ರಿಯಾನೊ ಅಥವ ಆಂಜಾಲಿನನೊ ತಿಳಿಯಲಿಲ್ಲ. 
ಎಡಬಾಗದ ಮುಖದಿಂದ ಆಕೆ ಮಾತನಾಡುತ್ತಿದ್ದರು. ಆಕೆಯ ಎಡಮುಖ ಸ್ವಲ್ಪ ಎತ್ತರಕ್ಕಿದ್ದು ಸುಮಾರು ಐದು ಡಿಗ್ರಿಯಷ್ಟು ಎಡಕ್ಕೆ ವಾಲಿತ್ತು, ನನ್ನನ್ನು ನೋಡಿ ನಗುತ್ತಿದ್ದ ಬಲಮುಖ ಸುಮಾರು ಹದಿನೈದು ಡಿಗ್ರಿಯಷ್ಟು ಬಲಕ್ಕೆ ವಾಲಿತ್ತು. ನನಗೆ ಅಘಾತವಾಗಿದ್ದಂತು ನಿಜ. ಆದರು ಮಾತನಾಡಿದೆ
'ಹಾಗೇನು ಇಲ್ಲ, ನೀವು ಅವಳಿ ಜವಳಿ ಎಂದು ತಿಳಿಯಲಿಲ್ಲ ಉಹಿಸಿದ್ದೆ'
ಆಕೆ ನನಗೆ ಹೇಳಿದಳು, 
'ದಯಮಾಡಿ ಕುಳಿತುಕೊಳ್ಳಿ, ನಾವು ಅವಳಿ ಜವಳಿಯಾದರು ಪ್ರತ್ಯೇಕವಾದ ಕೇಸ್, ನಮ್ಮನ್ನು ಕೋಜಾಯಿಂಡ್ ಟ್ವಿನ್ಸ್ ಎನ್ನುತ್ತಾರೆ, ಅದರಲ್ಲಿಯು ''ಡೈಸಿಪಲಿ' ಅಥವ 'ಪಾಲಿಸಿಪಲಿ' ಎಂಬ ಪ್ರತ್ಯೇಕ ಹೆಸರಿನಲ್ಲಿ ಗುರುತಿಸುತ್ತಾರೆ, ಹುಟ್ಟುವಾಗಲೆ ಒಂದೆ ದೇಹದಲ್ಲಿ ಎರಡು ತಲೆಗಳು'  
ಎಡಬಾಗದಲ್ಲಿದ್ದ ತಲೆಯಿಂದ ಆಕೆ ಮಾತನಾಡುತ್ತಿದ್ದರೆ, ಬಲಬಾಗದ ತಲೆಯಿಂದ ನನ್ನನ್ನು ಗಂಭೀರವಾಗಿ ನೋಡುತ್ತಿದ್ದಳು.  ನನಗೆ ಮಾತನಾಡಲು ತಡವರಿಸುವಂತೆ ಆಗಿತ್ತು. 
"ಇರಲಿ ಬಿಡಿ , ಕೆಲವೊಮ್ಮೆ ದೇಹ ಪ್ರಕೃತಿ , ನಿಸರ್ಗದ ನಿಯಮದ ಮುಂದೆ ನಾವು ಅಸಹಾಯಕರು, ತೊಂದರೆ ಅಂದುಕೊಳ್ಳುವ ಬದಲಿಗೆ ಅನುಕೂಲ ಅಂದುಕೊಳ್ಳುವುದು" ಎಂದೆ. 
ಆಕೆ ನಗುತ್ತ
"ನೋಡಿದೆಯ ಆಂಜಲೀನ, ಬರುವಾಗಲೆ ತಮ್ಮ ವೇದಾಂತ ಪ್ರಾರಂಬಿಸಿದರು,  ಅದಕ್ಕಾಗಿಯೆ ಅಲ್ಲವೆ ಇವರನ್ನು ಕರೆಸಿದ್ದು"  ಎನ್ನುತ್ತ ನನ್ನ ಕಡೆ ತಿರುಗಿ 
"ಈಗ ಸ್ವಲ್ಪ ರಿಲಾಕ್ಸ್ ಆಗಿ,  ನಮ್ಮನ್ನು ನೋಡಿ ಹೆದರಿದ್ದು ಸಾಕು, ಈಗ ಏನು ತೆಗೆದುಕೊಳ್ಳುವಿರಿ, ನನಗೆ ಗೊತ್ತು, ನೀವು ದಕ್ಷಿಣಭಾರತೀಯರು ಕಾಫಿ ಇಷ್ಟ ಪಡುವಿರಿ "  ಎನ್ನುತ್ತ ತಂದೆಯ ಕಡೆ ತಿರುಗುತ್ತ,
 
"ದ್ಯಾಡ್, ಇವರಿಗೆ ಕಾಫಿ ಮತ್ತೆ ನಮಗೆಲ್ಲ ಮಾಮೂಲಿ ಕೋಕ್ " ಎಂದಳು.  
ನನಗೀಗ ಅರ್ಥವಾಗಿತ್ತು ನನ್ನ ಜೊತೆ ಮಾತನಾಡುತ್ತಿರುವ ತಲೆ ಆಂಡ್ರಿಯಾದ್ದು, ಸುಮ್ಮನೆ ಮೌನವಾಗಿರುವ ತಲೆ ಆಂಜಾಲಿನದ್ದು. ಅಂತ.
"ಹಾಯ್ ಆಂಜಲೀನ ನೀವೇಕೆ ಮಾತನಾಡುತ್ತಿಲ್ಲ, ನನ್ನ ಆಗಮನ ನಿಮಗೆ ಹಿತವಾಯಿತೆ" ಎಂದೆ. 
ಆಂಡ್ರಿಯ ಬಲಕ್ಕೆ ತಿರುಗಿ ಆಂಜಾಲಿನಳನ್ನು ನೋಡಿದಳು. ಈಗ ಆಂಜಾಲಿನ ಮಾತನಾಡಿದಳು.
"ಇಷ್ಟವಾಗದೆ ಏನು, ಅಸಲಿಗೆ ನಾನಂತು ನಿಮ್ಮ ಬರವನ್ನು ಕಾಯುತ್ತ ಇದ್ದೆ, ನಿಮ್ಮನ್ನು ಕಂಡು ತುಂಬಾ ಸಂತಸ ಸಮಾದಾನ ಎನಿಸಿತು" ಎಂದಳು.   ನಾನು, 
"ಮತ್ತೇನು , ನೀವು ಇಬ್ಬರೇನಾ ಬಂದಿರುವುದು, ನಿಮ್ಮ ತಾಯಿಯವರು ಅಥವ ಮತ್ಯಾರಾದರು ಬಂದಿರುವರ ?" ಎಂದೆ
ಆಕೆ ಆಶ್ಚರ್ಯದಿಂದ " ಇಬ್ಬರಲ್ಲ ನಾವು ಮೂವರು ಬಂದಿರುವುದು, ನಾನು ಆಂಡ್ರಿ, ಮತ್ತು ನಮ್ಮ ತಂದೆ" ಎಂದಳು, 
ಓಹ್ ನಾನು ಅವರಿಬ್ಬರನ್ನು ಒಂದೆ ವ್ಯಕ್ತಿಯಾಗಿ ಎಣಿಸಿ , ತಂದೆಯ ಜೊತೆ ಸೇರಿಸಿ ಇಬ್ಬರು ಎಂದು ಕೇಳಿದ್ದೆ!  ಇದೊಂದು ರೀತಿ ಕನ್ ಫ್ಯೂಶನ್ . 
 
ಅಷ್ಟರಲ್ಲಿ ನನಗೆ ಕಾಫಿ ಹಾಗು ಅವರಿಗೆ ಅವರವರ ಪಾನೀಯಗಳು ಬಂದವು. ಅವರ ತಂದೆ ಎರಡು ಕೋಕೊ ಬಾಟಲನ್ನು  ನೀಡಿದ, ಅವರು ಎಡಕೈಲಿ ಒಂದು ಬಲಗೈಲಿ ಒಂದು ಹಿಡಿದು ಎರಡು ಬಾಯಿಯಿಂದ ಕುಡಿಯುವ ರೀತಿ ನನ್ನಲ್ಲಿ ಅಚ್ಚರಿ ಹುಟ್ಟಿಸಿತ್ತು. ಆದರೆ ಎಲ್ಲ ಪ್ರಶ್ನೆಗಳನ್ನು ಕೇಳಿ ಅವರಲ್ಲಿ ಮುಜುಗರ ಹುಟ್ಟಿಸುವುದು ಬೇಡವೆಂದು ಸುಮ್ಮನಾದೆ. 
-------------------------------------------------------------------------------------------------------------------------
 
 
 
----------------------------------------------------------------------------------------------------------------------
 
ನಂತರ ಮಾತು ಅವರು ಹೋಗಿ ಬಂದ ವಾರಣಾಸಿಯ ಪ್ರಯಾಣದತ್ತ ತಿರುಗಿತು. 
 
ನನಗೆ ಅಚ್ಚರಿ ಎನಿಸಿದ್ದು ಎಂದರೆ, ಎಲ್ಲ ಸುದ್ದಿಗಳ ಹಿಂದಿ ಬಿದ್ದು ಹೋಗುವ ಮಾದ್ಯಮಗಳು ಇವರನ್ನು ಹೇಗೆ ಬಿಟ್ಟಿದ್ದಾರೆ ಇವರ ಬೆನ್ನು ಏಕೆ ಹತ್ತಿಲ್ಲ ಎಂದು ಅರ್ಥವಾಗಲಿಲ್ಲ. ಭಾರತದ ಸಂಸ್ಕೃತಿ ಆಚರಣೆ ಇಲ್ಲಿಯ ಹಬ್ಬಗಳು ಹೀಗೆ ಅವರ ಜೊತೆ ಹತ್ತು ಹಲವು ವಿಷಯಾಗಳು ಚರ್ಚೆಯಾದವು. ಮತ್ತೆ ನನ್ನನ್ನು ಕೇಳುತ್ತ ಅವರು ಊಟಕ್ಕೆ ಆರ್ಡರ್ ಮಾಡಿದರು. ನನ್ನದು ಶುದ್ದ ಸಸ್ಯಾಹಾರವೆಂದು ತಿಳಿಸಿದೆ, ಆಂಡ್ರಿಯಾ ನಗುತ್ತ
"ಹೆದರಬೇಡಿ, ನಾವು ನೋಡುವದಕ್ಕೆ ಈ ರೀತಿ ರಾಕ್ಷಸರ ತರ ಇದ್ದರು, ನಾವಿಬ್ಬರು ಶುದ್ದ ಸಸ್ಯಾಹಾರಿಗಳು, ಅಮೇರಿಕದಲ್ಲಿ ಮಾಂಸಹಾರ ಸೇವನೆ ಸಾಮಾನ್ಯವಾದರು, ಡಾಕ್ಟರ ಗಳ ಸಲಹೆ ಮೇರೆಗೆ ನಾವು ಬರಿ ಸಸ್ಯಹಾರ ತೆಗೆದುಕೊಳ್ಳುವೆವು, ಹೀಗಾಗಿ ಕೊಬ್ಬುಸೇರುವದನ್ನು ತಡೆಯುವ ಉಪಾಯ " ಎಂದರು. 
 
ಊಟದ ನಂತರ ಅವರಿಬ್ಬರು ನನಗೆ " ನೀವು ನಿಮ್ಮ ರೂಮಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಿರಿ, ಸಂಜೆ ಸಿದ್ದವಿರಿ ಹೊರಗೆ ಹೋಗುವ ಕಾರ್ಯಕ್ರಮವಿದೆ, ಒಟ್ಟಿಗೆ ಹೋಗೋಣ " ಎಂದರು. ನಾನು ಸಹ ಊಟ ಮುಗಿಸಿ, ನನಗಾಗಿ ಮೀಸಲಿದ್ದ ರೂಮಿಗೆ ಬಂದೆ. ಆದರೆ ಅವರನ್ನು ನೋಡಿದ ವಿಶೇಷ ಸಂದರ್ಭ ಅಲ್ಲದೆ ಇಂತಹ ಹೋಟಲಿನ ವಾತವಾರಣ ಎಲ್ಲ ಸೇರಿ ನಿದ್ದೆ ಮಾಡಲು ಬಿಡಲಿಲ್ಲ. ಸುಮ್ಮನೆ ವಿಶ್ರಾಂತಿಗಾಗಿ ಹಾಸಿಗೆಯ ಮೇಲೆ ಮಲಗಿದೆ ಅಷ್ಟೆ. 
 
 ಸಂಜೆಯಾಗುತ್ತಿರುವಂತೆ ನನ್ನ ರೂಮಿಗೆ ಫೋನ್ ಕಾಲ್ ಬಂದಿತು. ನಿರೀಕ್ಷಿಸಿದಂತೆ ಆಂಡ್ರಿಯ  ಕರೆ ಮಾಡಿದ್ದರು, ಇನ್ನು ಅರ್ದ ಘಂಟೆಯಲ್ಲಿ ಸಿದ್ದವಾಗುವಂತೆ ತಿಳಿಸಿ ಕಾರಿನಲ್ಲಿ ಹೊರಗೆ ಹೋಗುವದಾಗಿ ತಿಳಿಸಿದರು. 
 
 ನನಗೆ ಸ್ವಲ್ಪ ಆತಂಕ. ಇವರಿಬ್ಬರ ಜೊತೆ ಹೊರಟರೆ ಹೊರಗೆ ಎಲ್ಲರು ಇವರನ್ನೆ ಖಂಡೀತ ಮುತ್ತಿಗೆ ಹಾಕುವರು ಸುಮ್ಮನೆ ಜನರ ದೃಷ್ಟಿಯಲ್ಲಿ ಕುತೂಹಲದ ವಸ್ತುವಾಗಿ ಇವರು ನಿಂತರೆ ಪಕ್ಕದಲ್ಲಿ ನಾನಿರಬೇಕಲ್ಲ ಎಂದು. ಅದನ್ನು ಹೇಳಲಾಗಲಿಲ್ಲ. ಸರಿ ಸಿದ್ದವಾಗಿ ಹೊರಗೆ ಬಂದೆ, 
 ನನ್ನ ರೂಮಿನ ಬಾಗಿಲಿನ ಹತ್ತಿರ ಕಾರಿಡಾರಿನಲ್ಲಿ  ಆಂಡ್ರಿಯ ಹಾಗು ಆಂಜಾಲೀನರ ತಂದೆ ರಾಬರ್ಟ್ ಕಾಯುತ್ತ ನಿಂತಿದ್ದರು, 
 
 ನಾನು ಸಂಕೋಚದಿಂದ 'ಒಳಗೆ ಬರಬಹುದಿತ್ತಲ್ಲ' ಎಂದೆ . 
 ಆತ 'ಇಲ್ಲ ನಾನು ಸಹ ಈಗ ಬಂದೆ , ಕರೆಯುವದರಲ್ಲಿ ನೀವು ಸಹ ಹೊರಬಂದಿರಿ' ಎನ್ನುತ್ತ 
 'ಸ್ವಲ್ಪ  ಹಾಗೆ ಕೆಳಗೆ ಹೋಗಿ ವಾಹನದ ಏರ್ಪಾಡು ಮಾಡಿಬರುವ ಬನ್ನಿ' ಎಂದರು . 
 ನಾನು ಸರಿ ಎನ್ನುತ್ತ ಅವರ ಜೊತೆ ಹೊರಟೆ. 
 ನಮಗೆ ಕೊಟ್ಟಿದ್ದ ರೂಮಿನಲ್ಲಿ ಒಂದು ಪ್ರತ್ಯೇಕತೆ ಇತ್ತು. ರೂಮಿನ ಪಕ್ಕದಲ್ಲಿ ಕೆಳಗೆ ಹೋಗಲು ಪ್ರತ್ಯೇಕ ಮೆಟ್ಟಿಲುಗಳಿದ್ದು, ಅದು ನೇರವಾಗಿ ಹೋಟಲಿನ ಹಿಂಬಾಗಕ್ಕೆ ಹೋಗುತ್ತಿತ್ತು, ಆ ಮೆಟ್ಟಿಲುಗಳನ್ನು ಉಪಯೋಗಿಸುವುದು ತುಂಬಾ ಕಡಿಮೆ ಎಂದು ತೋರುತ್ತಿತ್ತು. ಎಲ್ಲರು ನಡೆದು ಹೋಗಿ ಕಾರಿಡಾರ್ ನ ಕಡೆಯಲ್ಲಿದ್ದ ಲಿಫ್ಟ್ ಗಳನ್ನೆ ಉಪಯೋಗಿಸುತ್ತಿದ್ದರು. ಇಬ್ಬರು ಮೆಟ್ಟಲಿನಮೂಲಕ ಕೆಳಗೆ ಬಂದೆವು, ರಾಬರ್ಟ್ ರವರು ಟೆಲೆಪೋನಿನಲ್ಲಿ ಯಾರೊಂದಿಗೊ ಮಾತನಾಡಿದರು, ಸ್ವಲ್ಪ ಕಾಲದಲ್ಲಿಯೆ ಕಾರೊಂದು ಹಿಂಬಾಗಕ್ಕೆ ಬಂದು ನಿಂತಿತು, 
 
ಅದರ ಡ್ರೈವರ್ ಕೆಳಗಿಳಿದು ಬಂದು " ಸಾರ್ ಸಿದ್ದವ ಹೊರಗೆ ಹೊರಡಲು" ಎನ್ನುತ್ತ ಹಿಂದಿಯಲ್ಲಿ ಕೇಳಿದ. 
ರಾಬರ್ಟ್ ಆತನಿಗೆ ಹಿಂದಿಯಲ್ಲಿ ಉತ್ತರಿಸಿ, ನೀನು ಸ್ವಲ್ಪ ಕಾರಿನಲ್ಲಿಯೆ ಕುಳಿತು ಕಾದಿರು, ಮೇಲೆ ಹೋಗಿ ಬರುತ್ತೇನೆ ಎನ್ನುತ್ತ, ನನ್ನ್ನನ್ನು ಕುರಿತು ಅಂಗ್ಲದಲ್ಲಿ ,
" ನೀವು ಕಾರಿನಲ್ಲಿ ಹಿಂಬಾಗದಲ್ಲಿ ಕುಳಿತುಕೊಳ್ಳಿ, ಎರಡು ನಿಮಿಷ ' ಎನ್ನುತ್ತ ಮತ್ತೆ ಮೇಲೆ ಹೊರಟರು.
 
'ಈತನಿಗೆ ಹಿಂದಿ ಸಹ ಗೊತ್ತಿದೆ' ಎಂದು ಕೊಳ್ಳುತ್ತ, ಕಾರಿನ ಒಳಗೆ ಕುಳಿತೆ,. 
ಅದೊಂದು ಐಶರಾಮಿಯಾದ ಕಾರು, ಡ್ರೈವರ್ ಇರುವನಾದರು, ಮುಂದಿನ ಸೀಟಿಗು ಹಿಂದಿನ ಸೀಟಿಗು ನಡುವೆ ಒಂದು ಗಾಜಿನಪರದೆಯಿಂದ ಬೇರ್ಪಟ್ಟಿತ್ತು. ಹಿಂದೆ ಕುಳಿತವರು ಹಾಗು ಅವರ ಮಾತು ಡ್ರೈವರನಿಗೆ ಸಿಗದು. ಎರಡು ಮೂರು ನಿಮಿಷ , ನೋಡುತ್ತಿರುವಂತೆ, ತಂದೆಯ ಹಿಂದೆಯೆ ಇಳಿದ, ಆಂಡ್ರಿಯ ಹಾಗು ಆಂಜಾಲಿನ , ( ಕ್ಷಮಿಸಿ ಇಬ್ಬರು ಒಬ್ಬರೆ ) , ಹಿಂದಿನ ಸೀಟಿಗೆ ಬಂದರು. 
ಒಳಗೆ ಕುಳಿತುಕೊಳ್ಳುತ್ತ "ನಿಮಗೆ ಕಂಫರ್ಟ್ ಬಲ್ ಆಗಿದೆಯ ಯಾವ ಮುಜುಗರವು ಇಲ್ಲವಲ್ಲ" ಎಂದರು. 
ನನ್ನೊಳಗೆ ಎಂತದೊ ಮುಜುಗರವಿತ್ತು, ಆದರೆ ಅವರ ಪ್ರಶ್ನೆ ಕೇಳಿದ ತಕ್ಷಣ ನನ್ನ ಮನ ಸ್ಥಿರವಾಯಿತು. 
"ಮುಜುಗರ ಎಂತದು, ನಿಮ್ಮ ಜೊತೆ ಪ್ರಯಾಣ ನನಗೆ ಖುಷಿ ಕೊಡುತ್ತಿದೆ ಬನ್ನಿ " ಎಂದೆ. 
ಅವರ ತಂದೆ ರಾಬರ್ಟ್ ಕಾರಿನ ಮುಂಬಾಗಕ್ಕೆ ಹೋದರು, ಬಾಗಿಲುಗಳು ಮುಚ್ಚಲ್ಪಟ್ಟು ನಾವು ಹೊರಟೆವು. 
'ನಿಮ್ಮ ತಂದೆ ಹಿಂದಿಯನ್ನು ಅರಿತಿರುವರು' ಎಂದೆ ಸ್ವಲ್ಪ ಕುತೂಹಲದಿಂದ, ಅದಕ್ಕೆ ಆಂಡ್ರಿಯಾ
"ಹೌದು, ಅವರು ಈಗ ಬಿಸಿನೆಸ್ ಮನ್ , ಆದರೆ ಮೊದಲಿಗೆ, ಅಮೇರಿಕದ ರಾಯಬಾರ ಕಚೇರಿಯಲ್ಲಿ  ದುಭಾಷಿಯಾಗಿ ಕೆಲಸ ಮಾಡುತ್ತಿದ್ದರು' ಎಂದಳು. ನನಗೆ ಅರ್ಥವಾಯಿತು. 
 
 
ಅದೊಂದು ಪ್ರತ್ಯೇಕ ವ್ಯವಸ್ಥೆ ಇದ್ದ ಕಾರು, ನಾವು ಹೊರಗಿನವರಿಗೆ ಕಾಣುವ ಸಂದರ್ಭವಿಲ್ಲ ಆದರೆ ನಮಗೆ ಹೊರಗೆ ಎಲ್ಲವು ಸ್ವಷ್ಟವಾಗಿ ಕಾಣುತ್ತಿತ್ತು. ನಿಜವಾಗಿ ಹೇಳುವಾಗ ಮುಂಬಯಿ ರಸ್ತೆಗಳಲ್ಲಿ ನನಗೆ ಸಹ ಇದು ಮೊದಲನೆ ಓಡಾಟ. ಕಿಟಕಿಯಿಂದ ನೋಡುತ್ತ, ಪಕ್ಕದಲ್ಲಿದ್ದ ಆಕೆಯ ಜೊತೆ ಮಾತನಾಡುತ್ತ ಹೊರಟೆ. ಸಂಜೆಯ ಕತ್ತಲಲ್ಲಿ ರಸ್ತೆಗಳಲ್ಲಿ ಓಡಾಟ, ಬೇಕಾದ ಕಡೆ ಕಾರನ್ನು ಸ್ವಲ್ಪ ನಿಲ್ಲಿಸಲಾಗುತ್ತಿತ್ತು, ಹಾಗೆ ಮುಂದೆ ಹೋಗುತ್ತಿದ್ದೆವು, ನನ್ನ ಜೊತೆ ಅವರು ಸಾಕಷ್ಟು ಮಾತನಾಡಿದರು, ಭಾರತದ  ದರ್ಮ, ಪುರಾಣಗಳು, ನಂಬಿಕೆ, ರಾಮಯಣ ಮಹಾಭಾರತದ ಕತೆಗಳು, ಇಲ್ಲಿಯ ರಾಜಕೀಯ ಪರಿಸ್ಥಿಥಿ ಹೀಗೆ ಸಾಗುತ್ತಿತ್ತು. 
 
 ನಮ್ಮ ಪುರಾಣದಲ್ಲಿಯ ಕತೆಗಳ ಪ್ರಸ್ತಾಪ , ನಾಲಕ್ಕು ತಲೆಯ ಬ್ರಹ್ಮನ ವಿಚಾರ ಬಂದಾಗ ಅವರು ಸಾಕಷ್ಟು ಕುತೂಹಲದಿಂದ ಅದರ ಬಗ್ಗೆ ವಿಚಾರಿಸಿದರು. ಅಂತಹ ಕಲ್ಪನೆ ಅಷ್ಟು ಪುರಾಣಕಾಲದಲ್ಲಿಯೆ ಹೇಗೆ ಅವರಿಗೆ ಬಂದಿತು ಅಂತ ಆಶ್ಚರ್ಯ ಅವರಿಗೆ.  ಹೆಚ್ಚು ಮಾತನಾಡುವ ಆಂಡ್ರಿಯ ಹೇಳಿದಳು
"ಬಹುಷಃ ಇದು ಪೂರ್ತಿ ಕಲ್ಪನೆಯು ಆಗಿರಲಾರದು, ಆಗಿನ ಕಾಲಕ್ಕೆ ನಮ್ಮಂತೆ ಯಾರಾದರು, ಎರಡು ಅಥವ ನಾಲಕ್ಕು ತಲೆಯ ಮನುಷ್ಯರು ಹುಟ್ಟಿದ್ದರೊ ಏನೊ" ಎಂದಳು. 
ನನಗೂ ಅವಳ ಮಾತು ನಿಜವಿರಬಹುದೆ ಎನ್ನಿಸಿತು. 
ಮತ್ತೆ ಹತ್ತು ತಲೆಯ ರಾವಣನ ವಿಷಯ ಬಂದಾಗ, ಆಂಜಾಲೀನ ತನ್ನ ಗಾಂಭೀರ್ಯ ಬಿಟ್ಟು  ಜೋರಾಗಿ ನಗುತ್ತಿದ್ದಳು, ನನಗು ಕುತೂಹಲ ಕೇಳಿದೆ ಏಕೆ ಅಷ್ಟೊಂದು ನಗು ಎಂದು. ಅದಕ್ಕವಳು
"ಮತ್ತೇನಿಲ್ಲ , ಎರಡು ತಲೆ ಜೊತೆಯಾಗಿ ಹುಟ್ಟಿರುವ ನಮಗೆ ಇಂತಹ ಪಾಡು, ಹಲವು ಸಂಕಷ್ಟಗಳು ಯಾವ ಸ್ವತಂತ್ರ್ಯವು ಇಲ್ಲ, ಇನ್ನು ಹತ್ತು ತಲೆಯ ಆತ ಅದೇಗೆ ಬಾಳಿದನೊ, ಎಷ್ಟು ಕಷ್ಟ ಪಟ್ಟನೊ ಎನ್ನಿಸಿ ನಗುಬಂದಿತು" ಎಂದಳು. ನನಗೂ ಮತ್ತು ಆಂಡ್ರಿಯಾಗು ಆಕೆಯ ಮಾತಿನಿಂದ ನಗು ಉಕ್ಕಿ ಬಂದಿತು. 
 
 ನಡುವೆ ಮತ್ತೊಂದು ವಿಷಯ ಗಮನಿಸಿದ್ದೆ. ಈ ಅವಳಿಗಳಲ್ಲಿ ಒಮ್ಮೆ ಒಬ್ಬಳು  ಮಾತನಾಡುವಳು. ಒಬ್ಬಳು ಮಾತನಾಡುವಾಗ ಮತ್ತೊಬ್ಬಳು ಮೌನ ವಹಿಸುತ್ತಿದ್ದರು. ನನಗೆ ಕುತೂಹಲವೆನಿಸಿ ಅದೇ  ಕೇಳಿದೆ. ಈಗ ಅವರು ನನ್ನ ಬಗ್ಗೆ ಏನಾದರು ತಪ್ಪು ಭಾವಿಸುವರು ಎನ್ನುವ ನನ್ನ ಹಿಂಜರಿಗೆ ಸ್ವಲ್ಪ ಮಾಯವಾಗಿತ್ತು. 
ಆಂಜಾಲೀನ ನುಡಿದಳು 
"ನಿಮ್ಮ ಅನಿಸಿಕೆ ನಿಜ, ನಾವು ಒಟ್ಟಿಗೆ ಮಾತನಾಡುವದಿಲ್ಲ, ಅದಕ್ಕೆ ಕಾರಣ ನಮ್ಮ ದೇಹ ರಚನೆ ಅದನ್ನು ಪೂರ್ಣವಾಗಿ ನಿಮಗೆ ವಿವರಿಸಲೆ ಬೇಕು" ಎನ್ನುತ್ತ ಹೇಳಿದಳು.
' ಅದಕ್ಕೆ ಮುಂಚೆ ನಿಮ್ಮ ಬಗ್ಗೆ ಕೇಳಬೇಕು ' ಎಂದಳು ನಗುತ್ತ,
ನನಗೆ ಆಶ್ಚರ್ಯ ಎನಿಸಿತು 'ನನ್ನ ಬಗ್ಗೆಯೆ' ಎಂದೆ. 
ಅದಕ್ಕವಳು
"ಹೌದು ನಿಮ್ಮ ಬಗ್ಗೆಯೆ, ನಿಮಗೆ ತಿಳಿಯದು, ನನ್ನ ತಂದೆಗೆ ಒಬ್ಬ ತಮ್ಮನಿದ್ದ ತುಂಬ ಚಿಕ್ಕವನು, ನಮಗಿಂತ ಒಂದೆರಡು ವರ್ಷ ದೋಡ್ಡವನಿರಬಹುದು,  ಚಿಕ್ಕವಯಸ್ಸಿನಿಂದಲು ನಮ್ಮ ಬಗ್ಗೆ ಅದೆಂತದೊ ವ್ಯಾಮೋಹ ಅವನಿಗೆ, ನಮ್ಮ ಮಾತು ಆಟ ಊಟ ಎಲ್ಲವು ಜೊತೆಯಾಗಿಯೆ ಸಾಗುತ್ತಿತ್ತು, ಆದರೆ ದುರಾದೃಷ್ಟ, ಮೂರುವರ್ಷದ ಕೆಳಗೆ ಹೆದ್ದಾರಿಯ ಅಪಘಾತ ಒಂದರಲ್ಲಿ ಅವನು ತೀರಿಕೊಂಡ ನಮ್ಮಿಬ್ಬರಿಗು ಪ್ರಪಂಚದ ಜೊತೆಗೆ ಇದ್ದ ಒಂದು ಸಂಬಂಧವೆ ಅಳಿಸಿಹೋಗಿ ಒಬ್ಬಂಟಿಗರಂತೆ ಬಾಸವಾಯಿತು. ಒಮ್ಮೆ ಇಂಟರ್ನೆಟ್ ನಲ್ಲಿ ಭಾರತದ ಬಗ್ಗೆ ನೋಡುತ್ತಿರುವಾಗ ಏನನ್ನೊ ಹುಡುಕುತ್ತ ಇರಬೇಕಾದರೆ, ನಿಮ್ಮ ಪ್ರೊಪೈಲ್ ನ ಚಿತ್ರ ಇದ್ದಕ್ಕಿದಂತೆ ಎದುರಿಗೆ ಬಂದಿತು, ವಯಸಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ನಿಜ,  ಆದರೆ ಅದೇನೊ ನಿಮ್ಮನ್ನು ನೋಡುವಾಗ ಅವನನ್ನು ನೋಡಿದ ಬಾಸವಾಗುತ್ತೆ, ಹಾಗಾಗಿ ನಿಮ್ಮ ಜೊತೆ ಪ್ರೆಂಡ್ ರಿಕ್ವೆಸ್ಟ್ ಕಳಿಸಿದೆ , ನೀವು ಒಪ್ಪಿಗೆ ಎಂದಿರಿ, ಹಾಗಾಗಿ ನಿಮ್ಮ ಬಗ್ಗೆ ನಮ್ಮ ವಾತ್ಸಲ್ಯದ ಭಾವನೆ ಬೆಳೆಯುತ್ತ ಹೋಯಿತು, ಈಗಲು ನಮ್ಮಿಬ್ಬರಿಗೆ ನಿಮ್ಮನ್ನು ನೋಡುವಾಗ ಅದೆ ಕ್ರಿಸ್ ಚಿತ್ರವೆ ಮನದಲ್ಲಿ ತುಂಬುತ್ತೆ, ನಿಮ್ಮ ಅಭ್ಯಂತರವಿಲ್ಲ ಎನ್ನುವದಾದರೆ ನಾವಿಬ್ಬರು ನಿಮ್ಮನ್ನು ಅದೇ ಹೆಸರಿನಿಂದ ಕರೆಯೋಣವೆ" ಎಂದಳು.
 
ಇದೆಂತ ವಿಚಿತ್ರ ! ಪ್ರಪಂಚದ ಮತ್ಯಾವುದೋ ಮೂಲೆಯಲ್ಲಿನ ಕ್ರಿಸ್ ನನ್ನನ್ನು ಹೋಲುವುದು, ಅವನ ಮರಣದ ನಂತರ ನನ್ನ ಚಿತ್ರ ಇವರ ಕಣ್ಣಿಗೆ ಬೀಳುವುದು, ನನ್ನ ಜೊತೆ ಇವರ ಫೇಸ್ ಬುಕ್ ಒಡನಾಟ, ಈಮೈಲ್ ನ ವ್ಯವಹಾರ ಎಲ್ಲವು  ಅಯೋಮಯವೆನಿಸಿತು!. ಕೆಲವೊಮ್ಮೆ ಈ ಸಂಬಂಧ ಬೆಸೆಯುವ ಪರಿ ಯಾರಿಗು ಅರ್ಥವಾಗುವುದೆ ಇಲ್ಲ. ನಾನು ಎಲ್ಲವನ್ನು ಮನದಲ್ಲಿ ಯೋಚಿಸುತ್ತ, 
"ಸರಿ ನನ್ನನ್ನು ಕ್ರಿಸ್ ಹೆಸರಿನಿಂದ ಕರೆಯಲು ನನ್ನ ಯಾವ ಅಭ್ಯಂತರವು ಇಲ್ಲ, ಹಾಗೆ ನೀವು ಬಯಸಿದರೆ ನನ್ನನ್ನು ಏಕವಚನದಲ್ಲಿ ಕರೆಯಬಹುದು " ಎಂದೆ , 
ಅಸಲಿನಲ್ಲಿ ಇವರು ಮಾತನಾಡುವ ಇಂಗ್ಲೀಷ್ ನಲ್ಲಿ ಏಕವಚನಕ್ಕು ಬಹುವಚನಕ್ಕು ಬಹಳ ವ್ಯತ್ಯಾಸವೇನಿಲ್ಲ.  
"ಸರಿ ಆಂಡ್ರಿಯ ನಿಮ್ಮ ದೇಹ ರಚನೆಯ ಬಗ್ಗೆ ಏನನ್ನೊ ಹೇಳುತ್ತೀನಿ ಅಂದಿದ್ದರಲ್ಲ, ಈಗ ಹೇಳಬಹುದೆ ಅಂದೆ" ಅದಕ್ಕೆ ಆಕೆ, 
"ನೋಡಿದೆಯ ಕ್ರಿಸ್ ನಿನಗೆ ಎಷ್ಟು ಮರೆವು , ಹಾಗೆ ಹೇಳಿದ್ದು ನಾನಲ್ಲ ಆಂಜಲೀನ" ಎಂದಳು.  
ನಾನು ನಗುತ್ತ
'ನೋಡಿದೆಯ ನಾನು ಮೋಸ ಹೋದೆ, ಆದರೆ ನಿಮ್ಮಿಬ್ಬರನ್ನು ಬೇರೆ ಬೇರೆ ಎಂದು ಒಪ್ಪಿಕೊಳ್ಳುವುದೆ ಒಂದು ಕಷ್ಟ, ಇರಲಿ ಅದೇನೊ ಹೇಳು ಆಂಜಾಲಿನ" ಎಂದೆ
ಈಗ ಬಲಗಡೆಯ ಮುಖದ ಆಂಜಾಲೀನ ನಗುತ್ತ
"ಸರಿ, ತಿಳಿಸುವೆ, ವೈದ್ಯಕೀಯ ಶಾಸ್ತ್ರದ ಪ್ರಕಾರ ನಾವಿಬ್ಬರು ಕೋಜಾಯಿಂಡ್ ಟ್ವಿನ್ಸ್, ನಮ್ಮನ್ನು  'ಡಯಾಸಿಪಲಿ' ಎನ್ನುತ್ತಾರೆ,  ಅಥವ 'ಪಾಲಿಸಿಫಲಿಯು' ಆಗಬಹುದು. ಮೇಲ್ನೋಟಕ್ಕೆ ಒಂದೆ ದೇಹವಿದ್ದರು, ಎರಡು ದೇಹ ಬೆಸೆದುಕೊಂಡ ದೇಹ ನಮ್ಮದು, ಬುಜದ ಮೇಲೆ ಮಾತ್ರ ಎರಡು ತಲೆಗಳಿವೆ,  ಆದರೆ ಕೈ ಕಾಲುಗಳು ಮಾತ್ರ ಒಂದೆ ದೇಹದ್ದು,  ಎರಡು ಕುತ್ತಿಗೆ ಇರುವ ಕಾರಣ ಶ್ವಾಸಕೋಶ ಎರಡು ಜೊತೆ ಇವೆ, ಹೃದಯ ಮಾತ್ರ ಒಂದೆ, ಜೀರ್ಣಾಂಗಗಳು ಎರಡು ಜೊತೆ ಇವೆ ಹಾಗಾಗಿ ಪ್ರತ್ಯೇಕವಾಗಿ ಅಹಾರ ಸೇವನೆ, ಆದರೆ ಕಿಡ್ನಿ ಮಾತ್ರ ಹಂಚಿಕೊಳ್ಳ ಬೇಕು ಎರಡೆ ಇವೆ. 
 ಒಬ್ಬರು ಮಾತನಾಡುವಾಗ ಮತ್ತೊಬ್ಬರು ಮಾತನಾಡಲು ಹೋದರೆ ಶ್ವಾಸಕೋಶ ಒತ್ತಿದಂತೆ ಆಗಿ ತಡೆಯುತ್ತದೆ ಹಾಗಾಗಿ ಒಮ್ಮೆ ಒಬ್ಬರು ಮಾತ್ರ ಮಾತನಾಡುವೆವು, ಹಾಗೆ ಕೈಕಾಲುಗಳೆಲ್ಲ ಆಂಡ್ರಿಯಾ ಮಾತ್ರ ಉಪಯೋಗಿಸುವಳು. ಇದೆಲ್ಲ ನಮ್ಮಲಿಯ ವೈಪರೀತ್ಯ. ಇದೆಲ್ಲ ದೇಹಕ್ಕೆ ಸಂಬಂದಿಸಿದ್ದಾಯಿತು, ಆದರೆ ಇಬ್ಬರಿಗು ಯಾವುದೆ ಸ್ವತಂತ್ರ್ಯ ವಿಲ್ಲ, ಒಬ್ಬರೆ ಸ್ವತಂತ್ರವಾಗಿ ಏನು ಮಾಡಲಾರೆವು, ಇಬ್ಬರು ಜೊತೆ ಇರಲೆ ಬೇಕು" ಎಂದಳು. ಅದಕ್ಕೆ ತಕ್ಷಣ ಆಂಡ್ರಿಯ
"ಹಾಗೇನು ಇಲ್ಲ ದೇಹ ಪೂರ್ಣ ನನ್ನ ವಶದಲ್ಲಿದೆ, ಕೈ ಕಾಲುಗಳೆಲ್ಲ ನನ್ನವೆ , ನಾನಿಲ್ಲದೆ ಆಂಜಾಲಿನ ಏನು ಮಾಡಲಾರಳು" ಎನ್ನುತ್ತ ನಕ್ಕಳು, ಅದೇಕೊ ಆಂಜಾಲಿನಳ ಮುಖ ಸಪ್ಪೆಯಾಯಿತು. 
ನಾವು ಸಮುದ್ರದ ದಡದಲ್ಲಿದ್ದವು, ಸುತ್ತಲು ನೋಡುವಾಗ ಯಾರು ನಮ್ಮನ್ನು ಗಮನಿಸುತ್ತಿಲ್ಲ ಅನ್ನುವಾಗ, ನಿದಾನಕ್ಕೆ ಕಾರಿನ ಬಾಗಿಲು ತೆರೆದು, ಆಕೆ ಸ್ವಲ್ಪ ಗಾಳಿಗೆ ಮುಖ ಒಡ್ಡಿ ನಿಂತಳು, ಸಮುದ್ರದ ಸಂಜೆಗತ್ತಲಿನ ನೋಟ ಆಕರ್ಷಕವಾಗಿತ್ತು, ದೂರದಲ್ಲಿ ಮಾರುತ್ತಿರುವ ತಿನಿಸುಗಳನ್ನು ನೋಡುತ್ತಿದ್ದರು. ಆಂಜಾಲಿನ ಕೇಳಿದಳು, 'ಅದೇನು ಅಲ್ಲೆಲ್ಲ ಗಾಡಿಗಳಲ್ಲಿ ಮಾರುತ್ತಿರುವ ತಿನಿಸುಗಳು , ತಿನ್ನುವಂತದ'. 
ನಾನೆ ಹೇಳಿದೆ
"ಹೌದು  ಮುಂಬಯಿ ನಗರದ ಸ್ಪೆಶಲ್ ಎಂದರೆ ವಡಾಪಾವ್ ಇಲ್ಲಿ ಎಲ್ಲರಿಗು ಅಚ್ಚುಮೆಚ್ಚು, ತಿನ್ನುವಿರ ಹೋಗಿ ತರುವೆ" ಎಂದು ಕೇಳಿದೆ, 
ಅವರು ನಗುತ್ತಿರುವಂತೆ , ಅಲ್ಲಿಂದ ಹೊರಟೆ, ಕೆಳಗೆ ಇಳಿದ ರಾಬರ್ಟ್ ಗಾಭರಿಯಾದಂತೆ ನಾನು, 
"ಏನು ಆಗುವದಿಲ್ಲ ಬನ್ನಿ ಹೋಗಿ ಬರೋಣ" ಎನ್ನುತ್ತ ಬಲವಂತವಾಗಿ ಹೊರಟು, ಅಲ್ಲಿ ಇದ್ದ ತಳ್ಳುಗಾಡಿಯ ಹತ್ತಿರ ಹೋಗಿ, ಎಲ್ಲರಿಗು ಸಾಲುವಷ್ಟು ವಡಪಾವ್ ಕಟ್ಟಿಸಿ ತಂದೆ. ಕಾರಿನ ಹತ್ತಿರ ಬಂದಂತೆ , 
ನಗುತ್ತ ನುಡಿದಳು ಆಂಜಾಲೀನ ಅವರ ತಂದೆಯ ಹತ್ತಿರ
"ನಾನು ಹೇಳಲಿಲ್ಲವೆ ಡ್ಯಾಡ್, ಇವನು ಕ್ರಿಸ್ ಎಂದು,  ನೋಡು ಎಲ್ಲ ಅವನದೆ ನಡವಳಿಕೆ, ನಮ್ಮ ಬಾಯಲ್ಲಿ ಬರುತ್ತಿರುವಂತೆ ಅದು ಏನೆ ಆಗಲಿ ಹೋಗಿ ತಂದು ಬಿಟ್ಟ" ಎಂದಳು ಸಂತಸದಿಂದ. ರಾಬರ್ಟ್ ಸಹ ನಗುತ್ತ ನನ್ನತ್ತ ನೋಡುತ್ತಿದ್ದರು.. ಅದನ್ನೆಲ್ಲ ಮುಗಿಸಿ , ನಾವು ಪುನಃ ಹೊರಟು, ಅದೆ ಹೋಟೆಲಿನ ಹಿಂಬಾಗದ ಬಾಗಿಲಿಗೆ ಸೇರಿ ಹೋಟೆಲಿನ ರೂಮ್ ಸೇರಿದಾಗ ರಾತ್ರಿ ಊಟದ ಸಮಯ. 
 
ಊಟದ ಅಗತ್ಯವಿಲ್ಲದಿದ್ದರು, ರಾಬರ್ಟ್ ಊಟ ರೂಮಿಗೆ ತರುವಂತೆ ಆರ್ಡರ್ ಮಾಡಿದರು. ಮಾತನಾಡುತ್ತ ಊಟ ಮುಗಿಸಿದೆವು. 
ರಾಬರ್ಟ್ , 
"ಸರಿ ಕ್ರಿಸ್ , ನೀವು ಸ್ವಲ್ಪ ಕಾಲ ಬೇಕಿದ್ದಲ್ಲಿ ಇವರೊಡನೆ ಹರಟೆ ಹೊಡೆಯುತ್ತ ಕುಳಿತಿರಿ, ನಾನು ನನ್ನ ರೂಮಿಗೆ ಹೋಗುವೆ ' ಎನ್ನುತ್ತ ಹೊರಟಾಗ, ಆತ ಸಹ ನನ್ನನ್ನು ಕ್ರಿಸ್ ಎಂದು ಕರೆದಿದ್ದಕ್ಕೆ ನನಗೆ ಆಶ್ಚರ್ಯವೆನಿಸಿತು. 
ರಾಬರ್ಟ್ ಹೊರಟ ನಂತರ ಸ್ವಲ್ಪ ಕಾಲ ಮತ್ತೇನೆನೊ ಮಾತು ಮುಂದುವರೆಯಿತು. ಮತ್ತೆ ಅದೇನೊ ಕೋಜಾಯಿಂಡ್ ಟ್ವಿನ್ಸ್  ಕಡೆಗೆ ಮಾತು ಹೊರಳಿತು. ನಂತರ   ನಾನು ಕೇಳಿದೆ
"ಕೆಲವು ಪ್ರಕರಣಗಳಲ್ಲಿ  ಜಾಯಿನ್ ಆಗಿರೊ ಮಕ್ಕಳನ್ನು ಅಪರೇಷನ್ ಮಾಡಿ ಬೇರ್ಪಡಿಸುತ್ತಾರೆ ಅಲ್ಲವೆ?" 
ಅದಕ್ಕೆ ಆಂಡ್ರಿಯ ಉತ್ತರಿಸಿದಳು
"ಅದೇನೊ ಸರಿ , ಆದರೆ ಅದು ಹೇಗೆ ಅಂಟಿಕೊಂಡಿದ್ದಾರೆ ಅನ್ನುವದರ ಮೇಲೆಯೆ ಅವಲಂಬಿಸಿದೆ, ಕೆಲವು ಪ್ರಕರಣದಲ್ಲಿ ಅವುಗಳಿಗೆ ಅಪಾಯವಾಗುವುದು ಇದೆಯಲ್ಲವೆ"" ಎಂದಳು. 
"ಇರಬಹುದು ಈಗಂತು ವೈದ್ಯವಿಜ್ಞಾನ ಬಹಳ ಮುಂದುವರೆದಿದೆ, ಸೂಕ್ಷ್ಮ ರೀತಿಯ ಉಪಕರಣಗಳ ಅವಿಷ್ಕಾರ ಎಲ್ಲವು ಸೇರಿ , ಕೆಲವೊಮ್ಮೆ ಅಂತಹ ಪ್ರಕರಣದಲ್ಲಿ ಯಶಸ್ಸು ಸಿಗುವುದು ಇರುತ್ತದೆ" ಎಂದೆ
ಆಗ ಆಂಡ್ರಿಯ ನುಡಿದಳು
"ನಾವು ಅದರ ಬಗ್ಗೆಯೆ ಚಿಂತಿಸಿದೆವು, ನಿಜ ಹೇಳಬೇಕೆಂದರೆ ಭಾರತಕ್ಕೆ ಬರುವ ಕಾರಣಗಳಲ್ಲಿ ಅದು ಒಂದು, ಇಲ್ಲಿ ಕುಳಿತು ಒಂದು ನಿರ್ದಾರಕ್ಕೆ ಬರಬಹುದಾ ಎಂದು, ಅದಕ್ಕೆ ನಿನ್ನ ಸಲಹೆಯನ್ನು ನಿರೀಕ್ಷಿಸಿದ್ದೇವೆ, ಅದೇನೊ ನಿನ್ನ ಬಳಿ ಮಾತನಾಡುವಾಗ ಕ್ರಿಸ್ ಬಳಿ ಮಾತನಾಡುವಂತೆ ಅನ್ನಿಸುತ್ತೆ, ನೀನು ಕೆಲವೊಮ್ಮೆ ತುಂಬಾ ತರ್ಕಬದ್ದ ವಾಗಿ ಮಾತನಾಡುತ್ತೀಯ, ಅದು ನಮಗೆ ಸಹಾಯ ಮಾಡಬಹುದು" ಎಂದಳು. 
"ಅದೇನೊ ಸರಿ, ಆದರೆ ಇದು ವೈದ್ಯಕೀಯ ಕ್ಷೇತ್ರ ಹಾಗು ನಿಮ್ಮಿಬ್ಬರ ನಿರ್ಧಾರಕ್ಕೆ ಸೇರಿರುವಂತದ್ದು, ಅಲ್ಲದೆ ನಿಮ್ಮಿಬ್ಬರಲ್ಲಿ ಬೇರೆಯಾಗುವ ಸಾದ್ಯತೆಗಳೆ ಇಲ್ಲ, ನೀವು ಹೆಚ್ಚು ಕಡಿಮೆ ಒಂದೆ ದೇಹ ಹಂಚಿಕೊಂಡಿರುವಿರಿ, ಹಾಗಿರುವಾಗ ಆಪರೇಷನ್ ಬಗ್ಗೆ ಅದು ಹೇಗೆ ಚಿಂತಿಸಲು ಸಾದ್ಯ?" ಎಂದೆ
"ಅದೇನೊ ನಿಜ ಆದರೆ, ಜೀವನ ಪೂರ್ತಿ ಈ ರೀತಿಯ ನರಕ ಸದೃಷ್ಯವಾದ ಬಾಳು ಹೇಗೆ ಬಾಳುವುದು ಕ್ರಿಸ್ , ಯಾವುದಕ್ಕು ಸ್ವಾತಂತ್ರ್ಯವಿಲ್ಲ, ಎಲ್ಲಿಯು ಹೋಗುವಂತಿಲ್ಲ, ಹೋದರೆ ಸಾಕು ಜನರ ಪಾಲಿಗೆ ನಾವು  ಪ್ರಾಣಿಸಂಗ್ರಹಾಲದಲ್ಲಿನ ಪ್ರಾಣಿಗಳಂತೆ ಭಾವಿಸುತ್ತಾರೆ, ವಿಚಿತ್ರ ಪ್ರಶ್ನೆಗಳಿಂದ ಮನ ನೋಯಿಸುತ್ತಾರೆ, ಇದಕ್ಕಿಂದ ಅಪರೇಶನ್ ಉತ್ತಮ ಎಂದು ಇಬ್ಬರು ಅಂದುಕೊಂಡೆವು, ಆದರೆ ಡಾಕ್ಟರಗಳ ಅಭಿಪ್ರಾಯ ಬೇರೆ, ಅವರು ನಮ್ಮ ದೇಹದ ರಿಪೋರ್ಟ್ ನೋಡಿ, ಒಬ್ಬರು ಮಾತ್ರ ಉಳಿದು ಕೊಳ್ಳಬಹುದು, ಒಂದು ತಲೆ, ಕರುಳು, ಮತ್ತು ಕಿಡ್ನಿಗಳನ್ನು ತೆಗೆಯಬಹುದೆ,  ಸ್ವಲ್ಪ ಪ್ರಯತ್ನ ಪಟ್ಟಲಿ ಹಣೆದುಕೊಂಡಿರುವ ಬೆನ್ನೆಲಬು ಬೇರೆ ಮಾಡಬಹುದು, ಆದರೆ ಉಳಿಯುವ ಒಬ್ಬರ ಜೀವನ ಸಹ, ಹೀಗೆ ಎಂದು ಹೇಳಲು ಸಾದ್ಯವಿಲ್ಲ, ಮೆದುಳಿಗೆ ಅಪಾಯ ಆಗುವ ಸಾದ್ಯತೆ ಇದೆ, ಎನ್ನುತ್ತಾರೆ, ನನಗಂತು ಇಂತ ಬದುಕು ಬೇಸತ್ತು ಹೋಗಿದೆ, ನಾನು ಹೇಳಿರುವೆ ನನ್ನ ತಲೆಯನ್ನೆ ತೆಗೆದು ಬಿಡಿ, ಬೇಕಿದ್ದಲ್ಲಿ ಅಂಜಾಲೀನ ಇರಲಿ ಎಂದು" ಎಂದಳು, ಅವರಿಬ್ಬರ ಕಣ್ಣುಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು, 
 
"ಇಲ್ಲ ಅಷ್ಟು ಸುಲುಭವಾಗಿ ನಿರ್ದರಿಸಬೇಡಿ, ಕೇವಲ ದೇಹದ ತೊಂದರೆ , ಮತ್ತು ಹೊರಗಿನವರ ಭಾವನೆ ನಿಮ್ಮ ನಿರ್ದಾರಕ್ಕೆ ಕಾರಣವಾಗಬಾರದು" ಎಂದೆ.
 
ಆಂಡ್ರಿಯ ಏಕೊ ಮಾತನಾಡುವ ಮೂಡ್ ಕಳೆದುಕೊಂಡಳು ಅನ್ನಿಸುತ್ತೆ, 
"ಕ್ರಿಸ್  ಆಂಜಾಲಿನ ನೀವಿಬ್ಬರು ಮಾತನಾಡುತ್ತಿರಿ, ಅದೇಕೊ ನನಗೆ ಈ ವಿಷಯ ಚರ್ಚಿಸಲು ಮನಸಾಗುತ್ತಿಲ್ಲ, ನನಗೇನೊ ಅಪರೇಶನ್ ಉತ್ತಮ ನಿರ್ದಾರ ಅನ್ನಿಸುತ್ತೆ,  ಬದುಕಿಗಿಂತ ಸಾವೆ ಮನಸಿಗೆ ಹತ್ತಿರವೆನ್ನಿಸುತ್ತೆ"  
ಎನ್ನುತ್ತ ಆಂಡ್ರಿಯ, ಎದ್ದು ಹಾಗೆ ನಿದಾನಕ್ಕೆ ಮಂಚದ ಮೇಲೆ ಒರಗಿದಳು, ದಿಂಬನ ಮೇಲೆ ತಲೆಯಿಟ್ಟು ನಿದ್ದೆ ಮಾಡುವಳಂತೆ ಕಣ್ಣು ಮುಚ್ಚಿದಳು,.
ನಾನು 
"ಸರಿ , ನಿಮಗೆ ನಿದ್ದೆಯ ಸಮಯ ಆಯಿತು ಅನ್ನಿಸುತ್ತೆ, ನಾನು ನನ್ನ ರೂಮು ಸೇರುತ್ತೇನೆ" ಎನ್ನುತ್ತ ಎದ್ದೆ. ಆಂಜಾಲೀನ ತಕ್ಷಣ ಎಂಬಂತೆ
"ಬೇಡ ಕ್ರಿಸ್ ಮತ್ತು ಸ್ವಲ್ಪ ಹೊತ್ತು ಕುಳಿತಿರು, ನನಗೆ ಅದೇನೊ ನಿನ್ನ ಜೊತೆ ಇನ್ನು ಮಾತನಾಡಬೇಕು ಎಂದು ಅನಿಸುತ್ತದೆ" ಎಂದಳು. 
"ಆದರೆ ನಿನ್ನ ಮಾತಿನಿಂದ, ಆಂಡ್ರಿಯಾಗೆ ತೊಂದರೆ ಅನಿಸುವದಲ್ಲವೆ" ಎಂದೆ. ಆಕೆ ನಗುತ್ತಿದ್ದಳು
"ಅದೇನು ಇಲ್ಲ, ನೋಡು ಆಗಲೆ ಅವಳು ನಿದ್ದೆಗೆ ಜಾರಿದಳು, ಇದೇ ನೋಡು ಕ್ರಿಸ್ ಮತ್ತೊಂದು ವಿಚಿತ್ರ, ಆಂಡ್ರಿಯಾಗೆ ಹಾಸಿಗೆಗೆ ತಲೆಯಿಡುವಾಗಲೆ ನಿದ್ದೆ ಬಂದುಬಿಡುತ್ತದೆ, ನನಗೆ ಹಾಗಲ್ಲ, ರಾತ್ರಿ ಎಲ್ಲ ಕೆಲವೊಮ್ಮೆ ಎಚ್ಚರ ಇದ್ದೆ ಇರುತ್ತದೆ.  ಮತ್ತೊಂದು ಸಂಗತಿ ಗೊತ್ತ, ಒಮ್ಮೆ  ಅವಳು ಮಲಗಿದಳು ಎಂದರೆ ಮುಗಿಯಿತು, ನಾನು ಎಷ್ಟು ಕೂಗಿದರು ಅವಳಿಗೆ ಎಚ್ಚರವಾಗಲ್ಲ, ಅವಳಿಗೆ ಎಚ್ಚರಿಸಲು ಹೊರಗಿನವರು ಯಾರಾದರು ಕೂಗಲೆ ಬೇಕೆ, ನಾನು ಎಷ್ಟು ಜೋರಾಗಿ ಕೂಗಾಡಿದರು ಎಚ್ಚರವಾಗದ ಅವಳಿಗೆ ಹೊರಗಿನವರು ಸಣ್ಣಗೆ ಒಮ್ಮೆ ಕೂಗಿದರು ಸಾಕು ಎದ್ದು ಕೂಡುವಳು. ಅವಳು ಏಳುವ ತನಕ ನಾನು ಕಾಯಲೆ ಬೇಕು, ನನಗಂತು ಈ ದೇಹದ ಮೇಲೆ ಯಾವ ಸ್ವಾತಂತ್ರ್ಯವು ಸಹ ಇಲ್ಲ" ಎಂದಳು
"ಆಂಜಾಲೀನ , ಕೆಲವು ಸಂದರ್ಭ ಹಾಗಿನ್ನಿಸಬಹುದು ಆದರೂ ಸಹ ನನಗೇಕೊ ಈ ಆಪರೇಶನ್ ಸರಿಯಲ್ಲ ಎಂದೆ ಅನ್ನಿಸುತ್ತದೆ, ಅಲ್ಲದೆ ಅಪರೇಷನ್ ನಂತರ ಎಲ್ಲ ಸರಿ ಹೋಗುತ್ತದೆ ಅನ್ನುವಾಗಲು, ನಿಮ್ಮಿಬ್ಬರಲ್ಲಿ ಯಾರೊ ಒಬ್ಬರು ಇರಲ್ಲವಲ್ಲ" ಎಂದೆ. 
ಅವಳು ನೋವಿನಿಂದ ನಕ್ಕಳು.
"ಯಾರೊ ಏನು ಕ್ರಿಸ್, ನಿಮಗೆ ಇಷ್ಟಾದ ಮೇಲು ಅರ್ಥವಾಗಲಿಲ್ಲವೆ,  ನಾನು ಡಾಕ್ಟರಗಳ ಎಲ್ಲ ಅಭಿಪ್ರಾಯ ಕೇಳಿಸಿಕೊಂಡಿರುವೆ, ಅವರು ಹೇಳುವದಾದರು ಏನು, ಒಂದು ಶಿರವನ್ನು ಉಳಿಸಿಕೊಂಡು, ಮತ್ತೊಂದು ಶಿರ ಮತ್ತು ಅದಕ್ಕೆ ಸಂಬಂದಿಸಿದ ಬಾಗ ಆಪರೇಶನ್ ನಿಂದ ತೆಗೆಯಬಹುದು ಎಂದು, ನೀವೆ ಯೋಚಿಸಿ, ನನಗೆ ಈ ದೇಹದ ಕೈ, ಕಾಲುಗಳ ಮೇಲೆ ಸ್ವತಂತ್ರವಿಲ್ಲ, ನಾನಿದ್ದು ಅವಳ ತಲೆ ತೆಗೆಯುತ್ತಾರೆ ಅನ್ನುವದಾದರೆ, ಆಗ ದೇಹ ನಿಶ್ಚಲವಾಗಿರುತ್ತದೆ, ಸ್ವಲ್ಪ ಯೋಚಿಸಿದರು ತಿಳಿಯುತ್ತೆ ನನ್ನನ್ನೆ ಬೇರ್ಪಡಿಸುತ್ತಾರೆ ಎಂದು, ಅದು ಆಂಡ್ರಿಯಾಗು ಸಹ ತಿಳಿಯದೆ ಏನಿಲ್ಲ ಆದರು, ಗೊತ್ತಿಲ್ಲದಂತೆ ನಟಿಸುತ್ತಾಳೆ" ಎಂದಳು, ಅವಳ ದ್ವನಿ ಕಟ್ಟಿಕೊಂಡು ಅಳುವಂತೆ ಇತ್ತು.
ಅವಳು ಮತ್ತೆ ಹೇಳಿದಳು, 
"ನಿನಗೆ ಹೇಗೆ ಹೇಳಲಿ ಕ್ರಿಸ್, ಆಂಡ್ರಿಯ ಸ್ವಭಾವ ಸದಾ ಜೊತೆಗಿರುವ ನನಗೆ ಎಂದು ಅರ್ಥವಾಗಿಲ್ಲ, ಒಮ್ಮೆ ನನ್ನನ್ನು ಅತಿಯಾಗಿ ಪ್ರೀತಿಸುವಳು ಅನ್ನಿಸುತ್ತೆ, ಮತ್ತೊಮ್ಮೆ ನನ್ನನ್ನು ಅಷ್ಟೆ ತೀವ್ರವಾಗಿ ದ್ವೇಷಿಸುವಳು, ಸದಾ ನಾನು ಜೊತೆಗಿರುವುದು ಅವಳಿಗೆ ಇಷ್ಟವಿಲ್ಲ, ಹಾಗಾಗಿಯೆ ಈ ಅಪರೇಶನ್ ಪ್ರಸ್ತಾಪ, ನನಗಂತು ಅದು ಭಯ ಅನ್ನಿಸುತ್ತೆ ,ಇಷ್ಟವು ಇಲ್ಲ" ಎಂದಳು.
 
ನಾನು ಬೇಕೆಂದೆ ಸ್ವಲ್ಪ ಅಸಂಬದ್ದವಾಗಿ ಕೇಳಿದೆ.
 
"ನೀನು ಏಕೆ, ಕೈ ಕಾಲುಗಳನ್ನು ಅಲುಗಾಡಿಸಲು ಪ್ರಯತ್ನಿಸಲ್ಲ, ಅದೇಕೆ ಹಾಗೆ, ಇಬ್ಬರಿಗು ಮೆದುಳು ಹಾಗು ಬೆನ್ನುಮೂಳೆ ಇರಬೇಕಾದರೆ, ನಿನಗು ಕೈಕಾಲುಗಳ ಮೇಲಿನ ಹಿಡಿತ ಸಾದ್ಯವಾಗಬೇಕಲ್ಲವೆ "ಎಂದೆ
"ಅದೇನೊ ಮೊದಲಿನಿಂದಲು ಹಾಗೆ,  ಅವಳು ಮಾತನಾಡುವಾಗ ನಾನು ಆಡಲ್ಲ, ಶ್ವಾಸಕೋಶ ಒತ್ತಿದಂತೆ ಆಗುತ್ತೆ , ಇಬ್ಬರು ಒಟ್ಟಿಗೆ ಮಾತನಾಡಲ್ಲ, ಹಾಗೆ ಕೈಕಾಲುಗಳು ಅವಳ ವಶದಲ್ಲಿವೆ ನಾನು ಎಂದು ಅದನ್ನು ಉಪಯೋಗಿಸಲು ಪ್ರಯತ್ನಿಸಿಲ್ಲ " ಎಂದಳು.
 ನನಗೆ ಈಗ ಅರ್ಥವಾಗಿತ್ತು, ಅದು ಅವರಿಬ್ಬರ ಮನಸಿನಲ್ಲಿ ಅವರೆ ಕಟ್ಟಿ ಬಿದ್ದಿರುವ ಅಭ್ಯಾಸ, ಅವರಿಗೆ ಅವರೆ ನಿಯಮಿಸಿಕೊಂಡಿರುವ ಮಾನಸಿಕ ನಿಯಮ. ಕೇವಲ ಅನುಕೂಲಕ್ಕಾಗಿ, ಇಬ್ಬರು ಒಟ್ಟಿಗೆ ಪ್ರಯತ್ನಿಸಿದರೆ ದೇಹದಲ್ಲಿ ಗೊಂದಲ ಹಾಗಾಗಿ ಮೊದಲಿನಿಂದ ಆಂಜಾಲೀನ ಸುಮ್ಮನೆ ಇದ್ದು , ಆಂಡ್ರಿಯ ದೇಹದ ಮೇಲೆ ಹಿಡಿತ ಸಾದಿಸಿದ್ದಾಳೆ ಅನ್ನಿಸಿತು. ಡಾಕ್ಟರ್ ಗಳು ಇವರ ದೇಹ ಬಾಷೆಯನ್ನು ಅರ್ಥಮಾಡಿಕೊಂಡಿದ್ದಾರೆ ಆದರೆ ಮನಸಿನ ಬಾಷೆ ಅಭ್ಯಾಸಿಸಲಿಲ್ಲ ಅನ್ನಿಸುತ್ತೆ,  ಆದರೆ ಅದನ್ನು ಆಂಜಾಲೀನಬಳಿ ಹೇಳಲು ಹೋಗಲಿಲ್ಲ. 
ಆಗ ಆಕೆ, "ಸರಿ ಕ್ರಿಸ್, ಅದೇನೊ ನನಗು ಆಯಾಸ ಅನ್ನಿಸುತ್ತಿದೆ, ಸ್ವಲ್ಪ ನಿದ್ದೆ ಮಾಡುವೆ , ರಾತ್ರಿ ತಡವಾಯಿತು, ನೀನು ಹೋಗಿ ಮಲಗು, ಒಂದು ಸಹಾಯ ಮಾಡು, ನನ್ನ ತಲೆಯ ಕೆಳಗಿರುವ ದಿಂಬನ್ನು ಸರಿಯಾಗಿ ಹೊಂದಿಸು, ಅವಳ ಕುತ್ತಿಗೆ ಎತ್ತರ ಆದ್ದರಿಂದ ಈ ತೊಂದರೆ ಎಂದಳು" 
ನಾನು ಸರಿ ಎನ್ನುತ್ತ ಅವಳ ಹತ್ತಿರ ಹೋಗಿ, ಅವಳು ಹೇಳಿದಂತೆ ದಿಂಬನ್ನು ಸರಿ ಪಡಿಸಿದೆ, ಮತ್ತೆ ಕಾಲ ಕೆಳಗಿದ್ದ ಬೆಡಶೀಟನ್ನು ಸೊಂಟದವರೆಗು ಬರುವಂತೆ ಹೊದ್ದಿಸಿ,
"ಸರಿ ಆಂಜಾಲೀನ, ಬೆಳಗ್ಗೆ ಮಾತನಾಡುವ ಮತ್ತೆ ಸಿಗುವೆ, ಗುಡ್ ನೈಟ್ " ಎನ್ನುತ್ತ, ಕೈ ಆಡಿಸಿದೆ, 
ಆಕೆಯು ಗುಡ್ ನೈಟ್ ಆನುವಾಗ ಅದೇಕೊ ನನ್ನ ಗಮನ ಅವಳ ಬಲಗಡೆಯ ಕೈಗಳ ಕಡೆ ಹೋಯಿತು, ಕೈ ಪೂರ್ತಿ ಎತ್ತದಿದ್ದರು ಸಹ, ಮುಂಗೈ ನಿದಾನಕ್ಕೆ ನನ್ನ ಕಡೆ ಬೈ ಅನ್ನುವಂತೆ ಚಲಿಸಿತು. ನನ್ನ ಮುಖದ ಮೇಲೆ ನಗುವೊಂದು ಹರಿಯಿತು ಅನ್ನಿಸುತ್ತೆ, ಅವರ ದೇಹಭಾವದ ಅರ್ಥ ನನಗೇನೊ ಸ್ವಲ್ಪ ಆದಂತೆ ಅನ್ನಿಸಿತು. ನಾನು ರೂಮಿನ ಹೊರಬಾಗಿಲಿನ ಆಟೊ ಲಾಕ್ ರಿಲೀಸ್ ಮಾಡಿ ಹೊರಬಂದು, ಬಾಗಿಲು ಎಳೆದುಕೊಂಡೆ, ಬಾಗಿಲು ಒಳಗಿನಿಂದ ಲಾಕ್ ಆಯಿತು.
.
.
 
 
ಬೆಳಗ್ಗ್ಗೆ ಸ್ನಾನ ಮುಗಿಸಿ, ಎಲ್ಲರು ಒಟ್ಟಿಗೆ ಬೆಳಗಿನ ಉಪಹಾರಕ್ಕೆ ಕುಳಿತಿದ್ದೆವು,  ರಾಬರ್ಟ್ ಹಾಗು ಆಂಜಾಲಿನ, ಆಂಡ್ರಿಯಾಗೆ ಸಂಜೆಯ ಪ್ಲೈಟ್ ನಲ್ಲಿ ಅಮೇರಿಕಾಗೆ ಸೀಟ್ ರಿಸರ್ವ ಆಗಿತ್ತು, ನಾನು ಸಹ ಹೋಟೆಲಿನಿಂದಲೆ, ಬೆಂಗಳೂರಿಗೆ ಟ್ರೈನ್ ನಲ್ಲಿ ತತ್ಕಾಲ್ ನಲ್ಲಿ ಟೆಕೆಟ್ ಗಳಿಸಿದ್ದೆ. ಉಪಹಾರದ ನಂತರ ಹೇಳಿದೆ. 
"ಆಂಜಾಲಿಯ ಹಾಗು ಆಂಡ್ರಿಯಾ, ನನಗೆ ನಿಮ್ಮಿಬ್ಬರ ನಿರ್ಧಾರ ಸರಿ ಎಂದು ಅನ್ನಿಸುತ್ತಿಲ್ಲ, ಅಪರೇಶನ್ ಇದೆಲ್ಲ ಯೋಚನೆ, ಕೈಬಿಡಿ " ಎಂದೆ
ಆಂಡ್ರಿಯ "ಅದೇಕೆ ತಪ್ಪು ನಿರ್ದಾರ ಎಂದು ಬಿಡಿಸಿ ಹೇಳು ಕ್ರಿಸ್" ಎಂದಳು . 
ನಾನು
"ಬಹುಷಃ ನಿಮ್ಮ ಈ  ತಪ್ಪು ನಿರ್ದಾರಕ್ಕೆ ನಿಮ್ಮ ತಂದೆಯ ತಪ್ಪು  ಕಾರಣವಿದೆ"  ಎಂದೆ. 
ಆಗೊಂದು ವಿಚಿತ್ರ ನಡೆಯಿತು ಆಂಡ್ರಿಯಾ ಹಾಗು ಆಂಜಾಲೀನ ಒಟ್ಟಿಗೆ "ಅದು ಹೇಗೆ" ಅಂದರು, ನಂತರ ಒಬ್ಬರಿಗೊಬ್ಬರು ನೋಡಿಕೊಂಡರು, ಅವರ ತಂದೆ ರಾಬರ್ಟ್ ಸಹ ಚಕಿತರಾದರು, 
ಎಲ್ಲರು ಆಶ್ಚರ್ಯದಿಂದ ನನ್ನತ್ತ ನೋಡಿದರು. ನಾನು ನಗುತ್ತ, 
"ಮತ್ತೇನಿಲ್ಲ, ನಿಮ್ಮ ತಂದೆ ಹೆಸರಿಡುವಾಗ, ಅದೇಕೆ ಎರಡು ಹೆಸರಿಟ್ಟರೊ ತಿಳಿದಿಲ್ಲ, ಆಗಲೆ ನಿಮ್ಮಲ್ಲಿ ಇಬ್ಬರೆಂಬ ಭಾವ ಉಂಟಾಗಿದೆ, ಅದೇ ತಪ್ಪು ಭಾವನೆ, ಎರಡು ತಲೆಯಿರಬಹುದು ಏನೆ ಇರಬಹುದೆ , ನಿಮ್ಮದು ಒಂದೆ ವ್ಯಕ್ತಿತ್ವ. ಬಹುಷಃ ನೀವು ಬೇರೆ ಬೇರೆಯಾಗಿ ಚಿಂಸಿಸುವದರಿಂದ ನಿಮಗೆ ಇಬ್ಬರು ಎಂದೆನಿಸಬಹುದು. ಆದರೆ ಒಂದುವೇಳೆ ನಿಮ್ಮಿಬ್ಬರಿಗು ಸೇರಿ ಒಂದೆ ಹೆಸರಿದ್ದರೆ ಏನು ಮಾಡುತ್ತಿದ್ದೀರಿ, ದೇಹವನ್ನು ನನ್ನದು ನನ್ನದು ಎಂದು ಹೇಗೆ ಚಿಂತಿಸುತ್ತಿದ್ದೀರಿ, ನೀವೆ ಕೇಳಿದಂತೆ , ನಮ್ಮ ಹಿಂದು ಪುರಾಣಗಳಲ್ಲಿ ಬ್ರಹ್ಮ, ಆಗಲಿ ಅಥವ ರಾವಣ ಆಗಲಿ ಅದು ಕಲ್ಪನೆಯೊ ಅಥವ ನಿಜವೊ ಆಗಲಿ ಅವರಿಗೆ ಒಂದೊಂದು ತಲೆಗು ಒಂದು ಹೆಸರಿಟ್ಟಿದ್ದರೆ ಹೇಗಿರುತ್ತಿತ್ತು, ಅಲ್ಲವ ಆಗ ಅದೆಷ್ಟು ಸಮಸ್ಯೆ ಉಂಟಾಗುತ್ತಿತ್ತು ಚಿಂತಿಸಿ. ಹಾಗಾಗಿ ನಿಮಗೆ ದೇಹದ ಮೇಲೆ ಅಧಿಕಾರದ ಚಿಂತನೆ ಹೊಕ್ಕಿದೆ" ಎಂದೆ. 
 
ಅವರಿಬ್ಬರು ಅರ್ಥವಾಗದವರಂತೆ ನೋಡಿದರು. ನಾನು ಮತ್ತೆ ಹೇಳಿದೆ
 
"ನೋಡಿ ನಮಗೆ ಎರಡು ಕೈಗಳು, ಕಾಲುಗಳಿವೆ, ನಾನೆಲ್ಲಾದರು ಇದು ಒಬ್ಬನದು , ಬಲಕೈ ಮತ್ತೊಬ್ಬನದು ಎಂದು ಚಿಂತಿಸುತ್ತೇನೆಯೆ? , ಹಾಗೆ ನಿಮಗಿರುವ ದೇಹಕ್ಕೆ ಎರಡು ತಲೆಗಳಿವೆ ಎಂದುಕೊಳ್ಳಿ, ಹಾಗಾದಾಗ, ಇಬ್ಬರ ಪ್ರಶ್ನೆಯೆ ಬರಲ್ಲ. ನಿಮಗೆ ಅರ್ಥವಾಗುತ್ತೊ ಇಲ್ಲವೊ , ನೀವು ನಮ್ಮ ಧರ್ಮದ ಬಗ್ಗೆ ಓದುವಾಗ ಆತ್ಮದ ಬಗ್ಗೆ ಕೇಳಿರುತ್ತೀರಿ ಅಥವ ನಿಮ್ಮ ಬಾಷೆಯಲ್ಲಿ soul ಎಂದುಕೊಳ್ಳಿ,  ಯಾವುದೆ ದೇಹದಲ್ಲಿ ಜೀವ ಅಥವ ಆತ್ಮ ಒಂದೆ ಇರಲು ಸಾದ್ಯ, ಹಾಗಿರುವಾಗ ನೀವು ತಲೆಗಳನ್ನು ಮಾತ್ರ ಲೆಕ್ಕ ತೆಗೆದು ನಿರ್ದಾರಿಸಲಾರಿರಿ, ಅಲ್ಲದೆ ನಮ್ಮಗಿರುವ ದೇಹ ನಮ್ಮದು, ಪ್ರಕೃತಿ ನಮಗೆ ಕೊಟ್ಟಿರುವುದು, ಅದು ಹೇಗಿದೆಯೊ ಹಾಗೆ ಸ್ವೀಕರಿಸುವುದು  ಅನಿವಾರ್ಯ, ಬದುಕಿನಲ್ಲಿ ಎಲ್ಲವನ್ನು ಅಷ್ಟೆ ನಮಗೆ ಹೇಗೆ ದೊರೆಯುತ್ತದೆ ಹಾಗೆ ಸ್ವೀಕರಿಸಬೇಕು. ಇದು ನನ್ನ ತತ್ವ,  ಯಾರಿಗೋಸ್ಕರವೊ, ಯಾವ ಕಾರಣಕ್ಕೊ ನನಗಿರುವುದು ಸರಿ ಇಲ್ಲ, ನನ್ನ ದೇಹ ವಿಕಲ್ಪ ಅಂದುಕೊಳ್ಳುವದೆಲ್ಲ ತಪ್ಪು. ಪ್ರಕೃತಿ ನಮಗೆ ಈ ದೇಹಕೊಡಲು ಏನೊ ಕಾರಣವಿದೆ , ಅದನ್ನು ಶಾಪ ಎನ್ನುವದಕ್ಕಿಂದ ವರ ಅಂದುಕೊಳ್ಳುವದರಲ್ಲಿಯೆ ಜಾಣತನವಿದೆ ಅಲ್ಲವೆ" ಎಂದೆ. 
 
ಅವರಿಬ್ಬರು ಮೌನವಾಗಿದ್ದರು. ನಾನು ಮತ್ತೆ ನುಡಿದೆ
 
"ಒಮ್ಮೆ ಯೋಚಿಸಿ, ಕ್ರಿಸ್ ನಿಮ್ಮ ಚಿಕ್ಕಪ್ಪ,  ಎಂದೊ ಜೊತೆಗಿದ್ದವ, ಈಗ ಇಲ್ಲ, ಹಾಗಿರುವಾಗ ಅವನಿಲ್ಲ ಎಂದು ಎಷ್ಟು ನೊಂದುಕೊಳ್ಳುವಿರಿ ಅಲ್ಲವೆ, ಹಾಗಿರುವಾಗ ನಿಮ್ಮದೆ ದೇಹದ ಬಾಗವಾಗಿರುವ ಒಂದು ತಲೆಯನ್ನು ತೆಗೆದ ನಂತರ ಉಳಿದ ಮತ್ತೊಬ್ಬರು ಸುಖವಾಗಿ ನೆಮ್ಮದಿಯಾಗಿ ಇರುವಿರ, ಸುಖವಾಗಿರುವೆವು ಎಂದು ನಿಮಗೆ ಅನ್ನಿಸುತ್ತದೆಯೆ. ಹುಟ್ಟಿನಿಂದ ಜೊತೆಗೆ ಇರುವ  ದೇಹದ ಬಾಗವನ್ನು ತೊರೆದು, ನೀವು ಬದುಕ ಬಲ್ಲಿರ, ಜೀವನಪೂರ್ತಿ ಅದು ಕೊರಗಾಗಿ ಕಾಡುವದಲ್ಲ, ನೀವು ಪ್ರತಿ ಸಾರಿ ಪಕ್ಕಕ್ಕೆ ತಿರುಗಿದಾಗಲು, ಮತ್ತೊಂದು ಮುಖ ನೆನಪಿಗೆ ಬರುವದಿಲ್ಲವೆ, ಅದು ಕೊಲೆ ಎಂದು ನಿಮಗನಿಸುವದಿಲ್ಲವೆ, ಈ ಎಲ್ಲ ಭಾವನೆಗಳ ಹಿನ್ನಲೆಯಲ್ಲಿ ಯೋಚಿಸಿ, ನಿಮ್ಮ ನಿರ್ದಾರವನ್ನು ಬದಲಾಯಿಸಿ ಎಂಬುದೆ ನನ್ನ ಸಲಹೆ, ನನಗಂತು ನಿಮ್ಮ ಈಗಿರುವ ದೇಹ ರೂಪವನ್ನು ಹೊರತುಪಡಿಸಿ ಬೇರೆ ರೀತಿ ಕಲ್ಪಿಸಲು ಸಾದ್ಯವಿಲ್ಲ" ಎಂದು ಮಾತು ನಿಲ್ಲಿಸಿದೆ. 
ರಾಬರ್ಟ್ ಸಹ ಗಂಭೀರವಾಗಿ ಕೇಳುತ್ತಿದ್ದರು. 
ಸ್ವಲ್ಪ ಕಾಲ ಬಿಟ್ಟು ಹೇಳಿದೆ 
'ಆಂಡ್ರಿಯ ಮತ್ತು ಆಂಜಾಲೀನ, ನಾನು ನಿಮ್ಮನ್ನು ನೋಡಿದಾಗ ಪ್ರಥಮ ಬಾರಿಗೆ ಹೇಳಿದ ವಾಕ್ಯವನ್ನೆ ಪುನಃ ಹೇಳುವೆ , ನಿಸರ್ಗದ ನಿಯಮದ ಮುಂದೆ ನಾವು ಅಸಹಾಯಕರು ನೀವು ಇದನ್ನು ತೊಂದರೆ ಅಂದುಕೊಳ್ಳುವದಕ್ಕಿಂತ ಅನುಕೂಲ ಅಂದುಕೊಳ್ಳಿ"
 
ಕಡೆಗೊಮ್ಮೆ ಹೊರಡುವ ಮುಂಚೆ ನಗುತ್ತ ಹೇಳಿದೆ "ಆಂಜಾಲೀನ ನನಗೆ ಅನ್ನಿಸುತ್ತೆ  ಆಂಡ್ರೀಯ ಮಲಗಿದ್ದಾಗ ನಿನ್ನ ದಿಂಬು ನೀನೆ ಸರಿಮಾಡಿಕೊಳ್ಳಬಲ್ಲೆ ಇಂದಿನಿಂದ ಪ್ರಯತ್ನಿಸು" 
.
.
.
;
 
.
ಸುಮಾರು ಹದಿನೈದು ದಿನವಾಗಿತ್ತು, ನನಗೆ ಒಂದು ಈ ಮೈಲ್ ಇತ್ತು
"ಕ್ರಿಸ್, ನನಗೆ ನೀನು ಹೇಳಿದ್ದೆ ಸರಿ ಅನ್ನಿಸುತ್ತಿದೆ, ಈಗ ನಿರ್ದಾರ ಬದಲಾಗಿದೆ, ನನ್ನ ದೇಹ ಈಗ ಹೇಗಿದೆಯೊ ಹಾಗೇ ಚೆನ್ನಾಗಿದೆ, ನಿನ್ನ ತಿಳುವಳಿಕೆಗಾಗಿ ಥ್ಯಾಂಕ್ಸ್" ಎಂದಿತ್ತು, 
 
ಕಡೆಯಲ್ಲಿ   "ಆಂಜಾಲೀನಆಂಡ್ರಿ" ಎಂದಿತ್ತು
- ಮುಗಿಯಿತು.
 
---------------------------------------------------------------------------------------------------------------------------------------
 
 
ಇದೊಂದು ಕಲ್ಪನೆಯ ಕತೆ. ಆದರೆ ನಾನು ಆರಿಸಿಕೊಂಡಿರುವ ವಿಷಯ ಸತ್ಯ. ದೇಹ ಪೂರ್ತಿ ಒಂದೆ ಇದ್ದು ತಲೆ ಮಾತ್ರ ಎರಡು ಇರುವ ಮನುಷ್ಯರಂತು ಇರುವುದು ನಿಜ. 
ಕೆಳಗಿನ ಕೆಲವು ಲಿಂಕ್ ಗಳನ್ನು ತೆಗೆದು ನೋಡಿ, ಪ್ರಪಂಚದಲ್ಲಿ ಇರುವ ಈ ರೀತಿಯ ಹಲವು ಅವಳಿ ಜವಳಿ ಮಕ್ಕಳ ವಿವರಗಳಿವೆ. 
 
 
ಹಾಗೆಯೆ ನನ್ನ ಕತೆಗೆ ಸ್ಪೂರ್ತಿಯಾದ, ನಾನು ಆರಿಸಿಕೊಂಡ ಚಿತ್ರ ಸಹ ಇಲ್ಲಿ ಕೊಡುತ್ತಿರುವೆ. ಈ ಸೋದರಿಯರ ವಿವರಗಳು ಸಹ ಇಂಟರ್ ನೆಟ್ ನಲ್ಲಿವೆ 
 
 
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಲ್ಪನೆಯ ಕಥೆಯಾದರೂ ವಿಷಯ ಮಾತ್ರ ನಿತ್ಯಸತ್ಯವಾಗಿ ತಿಳಿಸಿಕೊಟ್ಟಿದ್ದಕ್ಕಾಗಿ ವಿಶೇಷ ವಂದನೆಗಳು ಆಪರೇಶನ್'ಗೆ ಒಳಗಾಗದಂತೆ ಓಲೈಸಿದ ಬಗೆ, ಬ್ರಹ್ಮ, ರಾವಣರಿಗೆ ಹೋಲಿಸಿ ತಿಳಿಸಿದ ವಿಚಾರಗಳು ಚೆನ್ನಾಗಿತ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀನಾಥ್ ರವರೆ ನಿಮ್ಮ ಮೆಚ್ಚುಗೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ, ನಿಮ್ಮ ಕತೆಯನ್ನು ಓದುತ್ತಿದ್ದಂತೆ ನನಗೆ ಗಂಡಭೇರುಂಡ ಪಕ್ಷಿಯ ಕತೆಯೊಂದು ಜ್ಞಾಪಕಕ್ಕೆ ಬಂತು. ಒಮ್ಮೆ ಯಾವುದೋ ರುಚಿಕರವಾದ ಹಣ್ಣು ಸಿಕ್ಕಾಗ ಒಂದು ಮುಖ ಅದನ್ನು ಸವಿಯುತ್ತಿತ್ತಂತೆ. ಆಗ ಇನ್ನೊಂದು ಮುಖ ಆ ಹಣ್ಣನ್ನು ನನಗೂ ಸ್ವಲ್ಪ ಕೊಡು; ಅದನ್ನು ನಾನೂ ರುಚಿ ನೋಡುತ್ತೇನೆ ಎಂದಿತಂತೆ. ಆಗ ಮೊದಲನೇ ಮುಖ ಇದು ನನಗೆ ಸಿಕ್ಕ ಹಣ್ಣು ಇದನ್ನು ನನ್ನಿಷ್ಟ ಬಂದಂತೆ ತಿನ್ನುತ್ತೇನೆ, ನಮ್ಮಲ್ಲಿ ಯಾರು ತಿಂದರೂ ಒಂದೇಯಲ್ಲವೆ ಎಂದು ಹೇಳಿ ಇನ್ನೊಂದು ಮುಖವನ್ನು ಬೇಸರಪಡಿಸಿತು. ಸ್ವಲ್ಪಕಾಲದ ನಂತರ ಆ ಇನ್ನೊಂದು ಮುಖಕ್ಕೆ ಒಂದು ವಿಷದ ಹಣ್ಣು ಸಿಕ್ಕಿತು; ಆಗ ಮೊದಲನೇ ಮುಖ ಅದನ್ನು ತಿನ್ನಬೇಡವೆಂದು ಮತ್ತು ಅದನ್ನು ತಿಂದರೆ ಇಬ್ಬರೂ ಸಾಯುತ್ತೇವೆಂದು ಬೇಡಿಕೊಂಡಾಗ, ಆ ಇನ್ನೊಂದು ಮುಖ ಇದು ನನಗೆ ಸಿಕ್ಕ ಹಣ್ಣು ಅದನ್ನು ನನ್ನಿಷ್ಟದಂತೆ ತಿನ್ನುತ್ತೇನೆಂದು ಹೇಳಿ ಆ ವಿಷದ ಹಣ್ಣನ್ನು ತಿನ್ನುತ್ತದೆ. ಆಗ ಆ ಎರಡೂ ಮುಖಗಳು ಸತ್ತು ಹೋಗುತ್ತವೆ. ಪಾಪ ಅವಕ್ಕೆ ನಿಮ್ಮಂಥಹ 'ಕ್ರಿಸ್' ಸಿಕ್ಕಿದ್ದರೆ ಅವೆರಡೂ ಪ್ರಾಣ ಕಳೆದುಕೊಳ್ಳದೇ ಉಳಿದುಕೊಳ್ಳುತ್ತಿದ್ದವೇನೋ ಪಾಪ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀಧರ್ ರವರೆ >>ನಿಮ್ಮಂತ ಕ್ರಿಸ್ ಸಿಕ್ಕಿದ್ದರೆ >>> ಹೋಗಲಿ ಬಿಡಿ ನಿಮ್ಮಿಂದ ಬೇಷ್ ಗಿರಿ ಸಿಕ್ಕಿತ್ತಲ್ಲ :))) ಸುಮ್ಮನೆ ಹೀಗೆ ಕಲ್ಪನೆ ಅಷ್ಟೆ ಕತೆಯನ್ನು ಪ್ರಥಮ ಪುರುಷದಲ್ಲಿ ಬರೆಯುವುದು ಯಾವಾಗಲು ಸುಲುಭ‌ ಹಾಗಾಗಿ... ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೇ, ಉತ್ತಮವಾದ ಭಾವ ಹೊಮ್ಮಿಸುವ ಕಥೆ. ದನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ನಾಗರಾಜ್ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೇ ಕಥೆ ಚೆನ್ನಾಗಿ ಮೂಡಿಬ೦ದಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಂತ್ ವಂದನೆಗಳು ನಿಮ್ಮ ಮೆಚ್ಚುಗೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನೆಯಾದರು ವಾಸ್ತವತೆಯನ್ನು ತಿಳಿಸುವ ಕಥೆ ಸೊಗಸಾಗಿ ಮೂಡಿ ಬಂದಿದೆ. >>ಅಲ್ಲದೆ ನಮ್ಮಗಿರುವ ದೇಹ ನಮ್ಮದು, ಪ್ರಕೃತಿ ನಮಗೆ ಕೊಟ್ಟಿರುವುದು, ಅದು ಹೇಗಿದೆಯೊ ಹಾಗೆ ಸ್ವೀಕರಿಸುವುದು ಅನಿವಾರ್ಯ, ಬದುಕಿನಲ್ಲಿ ಎಲ್ಲವನ್ನು ಅಷ್ಟೆ ನಮಗೆ ಹೇಗೆ ದೊರೆಯುತ್ತದೆ ಹಾಗೆ ಸ್ವೀಕರಿಸಬೇಕು<< ಸತ್ಯವಾದ ಮಾತುಗಳು ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಹಾಗು ಅಭಿಪ್ರಾಯಕ್ಕೆ ವಂದನೆಗಳು ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರತಿಯವರೆ ಬೇಗ ೨ನೇ ಭಾಗ ಪ್ರಕಟಿಸುತ್ತೇನೆಂದು ಮಾತು ಕೊಟ್ಟು ಒಂದೂವರೆ ಗಂಟೆ ಮೊದಲೆ ಪ್ರಕಟಿಸಿದ್ದೀರಿ ಧನ್ಯವಾದಗಳು. ಅದ್ಫತವಾಗಿ ಕೋ ಜ್ಯಾಂಟ್ ಅವಳಿಗಳ ಬಗ್ಗೆ ಬರೆದಿದ್ದೀರಿ. ಕೊನೆಯಲ್ಲಿ ಕಲ್ಪನೆ ಎಂದು ಬರೆದಿದ್ದು ಓದುವವರೆಗೂ ನಿಜದ ಕತೆಯೆಂದೇ ನಂಬಿದ್ದೆ. ಮಾಹಿತಿಪೂರ್ಣ ಕತೆ. ನಿನ್ನೆ ರಾತ್ರಿ ಕತೆ ಓದಿ ಮಲಗಿದ ಮೇಲೆ ನನಗೇ ಇನ್ನೊಂದು ತಲೆ ಇರುವಂತೆ ಭಾಸವಾಗುತ್ತಿತ್ತು ಅಷ್ಟೊಂದು effectiveness ನಿಮ್ಮ ಲೇಖನದಲ್ಲಿದೆ. ಶುಭವಾಗಲಿ, >ಸೌಮ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಭಿನ್ನ ಕತೆ. ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವಂದನೆಗಳು ಪ್ರೇಮ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದಷ್ಟು ಬೇಗ ಪ್ರಕಟಿಸಬೇಕೆಂದು ಪ್ರಯತ್ನಿಸಿದೆ ಆದರೆ ಆಗಲಿಲ್ಲ ! >> ನಿನ್ನೆ ರಾತ್ರಿ ಕತೆ ಓದಿ ಮಲಗಿದ ಮೇಲೆ ನನಗೇ ಇನ್ನೊಂದು ತಲೆ ಇರುವಂತೆ ಭಾಸವಾಗುತ್ತಿತ್ತು ಇದೊಂದು ಸಾಲು ಸಾಕು ನಾನು ಬರೆದ ಕತೆ ನನಗೆ ತ್ಱುಪ್ತಿಕೊಡಲು ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

""ಮತ್ತೇನು , ನೀವು ಇಬ್ಬರೇನಾ ಬಂದಿರುವುದು, ನಿಮ್ಮ ತಾಯಿಯವರು ಅಥವ ಮತ್ಯಾರಾದರು ಬಂದಿರುವರ ?" ಎಂದೆ ಆಕೆ ಆಶ್ಚರ್ಯದಿಂದ " ಇಬ್ಬರಲ್ಲ ನಾವು ಮೂವರು ಬಂದಿರುವುದು, ನಾನು ಆಂಡ್ರಿ, ಮತ್ತು ನಮ್ಮ ತಂದೆ" ಎಂದಳು, ಓಹ್ ನಾನು ಅವರಿಬ್ಬರನ್ನು ಒಂದೆ ವ್ಯಕ್ತಿಯಾಗಿ ಎಣಿಸಿ , ತಂದೆಯ ಜೊತೆ ಸೇರಿಸಿ ಇಬ್ಬರು ಎಂದು ಕೇಳಿದ್ದೆ! ಇದೊಂದು ರೀತಿ ಕನ್ ಫ್ಯೂಶನ್ . " :()) ಗುರುಗಳೇ ಇ ತರಹ್ದ ವಿಶ್ಯದ ಬಗ್ಗೆ ನನಗೆ ಅರಿವಿರುವ ಹಾಗೆ ನಾ ಇಲ್ಲಿವರ್ಗೂ ಎಲ್ಲೂ ಕಥೆ ಓದಿದ ಹಾಗಿಲ್ಲ... ಅಬ್ಬ ,!! ಒಂದು ಮನೆಯಲ್ಲಿ ಕೈ ಕಾಲು ಬಾಯಿ ಬೇರ್ಬೇರೆ ಆಗಿರೋ ನಾವ್ ಪ್ರತಿ ವಿಶ್ಯಕ್ಕೆ ಕಿತ್ತಾಡುವುದು ಅಂಥಾದ್ದರಲ್ಲಿ ಒಂದು ದೇಹದಲ್ಲಿ ಬೆರೆತ ಈ ತರಹದ ವ್ಯಕ್ತಿಗಳು.... ಯೋಚ್ಹಿಸಲೇ ಆಗುತ್ತಿಲ್ಲ... ಈ ತರಹ್ದವರ ಬಗ್ಗೆ ಯಾವುದಾದರೂ ಸಿನೆಮಾ ಬಂದಿದೆಯಾ? ಅಂಥ ನೋಡಿದಾಗ ಯಾವುದೆ ಸಿನೆಮ ಬಂದಿಲ್ಲ ಅನ್ನಿಸಿತು... ಆದರೆ ಈ ಕೆಳಗಿನ ಕೆಲ ಮಾಹಿತಿ ಸಿಕ್ಕವು... http://www.youtube.c... http://gizmodo.com/p... ಹಿಂದೆ ಈ ತರಹ್ದ ವ್ಯಕ್ತಿಗಳನ್ನ ಪ್ರತ್ಯೇಕಿಸುವ ಚ್ಹಿಕಿತ್ಸೆ ನಡೆದು ಯಶಸ್ವಿ ಆಗಿದೆ.. ಹಾಗೆಯೆ ಬಹು ಪಾಲು ವಿಫಲ ಆಗಿವೆ.:(( ನನಗೆ ಅಚ್ಛರಿ ಅನ್ನಿಸಿದ್ದು ಈ ಬರಹ ನೋಡಲು ಓದಲು ನಿಮ್ಮ ಸ್ವ ಅನುಭವದಂತೆ ಕಂಡರೂ ನನಗೆ ಇದು ಬಹುಶ ನೈಜ ಘಟನೆ/ಬರಹ ಅಲ್ಲ ಅನ್ನಿಸಿತು..... ಕೊನೆಗೇ ಅದು ನಿಜವೂ ಆಯ್ತು..!! ಬಹು ಹಿಂದೆಯೇ ನಿಮಗೆ ಕೇಳಿದ್ದೆ ಅತ್ಯುತ್ತಮ ಕಥೆ ಬರಹ ಬರೆವ ನೀವ್ ಅದ್ಯಾಕೆ ಕಸ್ತೂರಿ ತುಶಾರ ಮಯೂರ ಇತ್ಯಾದಿ ಪತ್ರಿಕೆಗಳಿಗೆ ನಿಮ್ಮ್ ಬರಹ ಕಳುಹಿಸುವುದಿಲ್ಲ ಅಂತ, ಅದ್ಕೆ ನೀವ್ ನನ್ನ ಬರಹ ಪ್ರಕಟ ಆಗದೆ ಕಸದ ಬುಟ್ತಿ ಸೆರುವ ಬದಲಿಗೆ ಇಲ್ಲಿ(ಸಂಪದ) ಪ್ರಕಟ ಆಗಿ ಓದುಗರಿಂದ ಪ್ರತಿಕ್ರಿಯೆ ಬಂದರೆ‍ ಮೆಚ್ಛುಗೆ ಬಂದ್ರೆ ಸಾಕು ಅಂದಿದ್ದಿರಿ...!! ಈಗಲೂ ಹೇಳುವೆ... ಆ ಪತ್ರಿಕೆಗಳಿಗೆ ಕಳುಹಿಸಿ ಖಂಡಿತಾ ಪ್ರಕಟ ಆಗುತ್ತವೆ... ನನಗೆ ಆ ನಂಬಿಕೆ ಇದೆ... ಕಾರಣ ವಿಶ್ಯ ವಸ್ತು ಮತ್ತು ಕಥೆ ಹೇಳುವ ನಿಮ್ಮ ಶೈಲಿ ... ಎರಡು ಭಾಗಗಳಲಿ ಬಂದ ಈ ಬರಹ ನನ್ನ 'ಯಾವತ್ತಿನ ಮೆಚ್ಛುಗೆಯ ಪಟ್ಟಿಯಲ್ಲಿ'(ಎವರ್ ಗ್ರೀನ್) ಸೇರಿದೆ... ನೀವ್ ಬರಹ ಬರೆಯಲು ಬಹು ತಯಾರಿ ಮಾಡಿಕೊಳ್ಳುವಿರಿ ಅದ್ರಲಿ ಸಂಶಯವೇ ಇಲ್ಲ...! ಮನೆ)ಯಲ್ಲಿಯೆ ವಿಮರ್ಶಕರು(2) ಇದ್ದು ಅಲ್ಲಿಯೇ ನಿಮಗೆ ಒಂದು ಅಂದಾಜು ಸಿಗುವುದು...!!(ಇನ್ನು ಓದುಗರು ಹೇಗೆ ಪ್ರತಿಕ್ರಿಯಿಸಬಹುದು ಅಂತ.... ಬರಹ ಬಹು ಇಸ್ಟ ಆಯ್ತು.... ಬಹು ದಿನಗಳವರೆಗೆ ನೆನಪಲ್ಲಿ ಉಳಿದು ಕಾಡುವ ಕಥೆ....ಅತ್ಯುತ್ತಮ ಕಥೆ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರೆ ನಿಮ್ಮ ಅಭಿಪ್ರಾಯ ಹಾಗು ಮೆಚ್ಚುಗೆಗೆ ವಂದನೆ ನೀವು ಹೇಳಿರುವ ಸಿನಿಮಾ ಬಗ್ಗೆ ನನಗೆ ತಿಳಿದಿಲ್ಲ ಇಂಟೆರ್ ನೆಟ್ ನಲ್ಲಿ ಆ ಬಗ್ಗೆ ಕೆಲವು ಎರಡು ತಲೆಯ ಹಾವಿನ ಚಿತ್ರಗಳನ್ನು ನೋಡುವಾಗ ಮನುಷ್ಯರ ಚಿತ್ರಗಳನ್ನು ನೋಡಿದ್ದೆ ನಂತರ ಗಣೇಶ್ ಯಾವುದಾದರು ವಿಶಿಷ್ಟ ವಿಷಯದ ಬಗ್ಗೆ ಬರೆಯಿರಿ ಅಂದಾಗ ಈ ಕತೆಯ ಎಳೆಗಳು ಮನಸಿಗೆ ಬಂದವು ಅದನ್ನು ಮುಂದುವರೆಸಿದೆ. ನೀವು ಹೇಳಿದ ತಾಯ್ ಚಿತ್ರದ ಬಗ್ಗೆ ಓದಿದೆ ಸರಿಯಾಗಿ ಅರ್ಥವೆ ಆಗಲಿಲ್ಲ, ಅದರಲ್ಲಿ ದೆವ್ವದ ಬಗ್ಗೆ ಎಲ್ಲ ಇದೆ. ನಾನು ಬರೆದಿರುವುದು ಮನಸಿನ ಹೋಯ್ದಾಟದ ವಿಶಿಷ್ಟ ಸಂದರ್ಭದ ಬಗ್ಗೆ ಆ ಸಿನಿಮಾಗು ನನ್ನ ಕತೆಗು ಸಂಬಂಧವೆ ಇಲ್ಲ ಅನ್ನಿಸುತ್ತೆ ಮತ್ತೊಮ್ಮೆ ವಂದನೆಗಳೊಡನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ ಆಗ ಹುಡುಕಿದಾಗ ಸಿಗದಿದ್ದ ಮಾಹಿತಿ ಈಗ ಸಿಕ್ಕಿದೆ... ಈ ಹಿಂದೆ ಥಾಯ್ ಚ್ಹಿತ್ರ ಅಲೋನ್ ಅಂತ 2007 ರಲ್ಲಿ ಬಂದಿದೆ... ಅದು ಸಯಾಮೀಸ್ ಅವಳಿಗಳ ಬಗ್ಗೆ... ಇದೇ ಚ್ಹಿತ್ರವನ್ನು ಕನ್ನಡ ತಮಿಳ್ ತೆಲುಗಲ್ಲಿ ದ್ವಾರಕೀಶ್ ರಿಮೆಕ್ ಮಾದುತ್ತಿರುವರು ಚ್ಹಾರುಲತ ಅಂತ... ತಮಿಳಲ್ಲಿ ಮತ್ತೊಬ್ಬರು ಸಹಾ ತೆಗೆದಿರುವರು(ಇನ್ನು ರಿಲೀಜ್ ಆಗಿಲ್ಲ) ನಟ ಸೂರ್ಯ... ಚ್ಹಿತ್ರದ ಹೆಸರು ಮಾತ್ರನ್ ಅಂತ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಈ ಸಿನಿಮಾ ಬಗ್ಗೆ ನನಗೆ ತಿಳಿದಿರಲಿಲ್ಲ. ಸದ್ಯ ಅದಿನ್ನು ರಿಲೀಸ್ ಆಗಿಲ್ಲ ಎಂದಿರುವಿರಿ ಇಲ್ಲದಿದ್ದಲ್ಲಿ ಕತೆ ಕೃತಿಚೌರ್ಯವಾಗುತ್ತಿತ್ತೇನೊ ನೋಡೋಣ ಮುಂದಿನ ಕತೆ ಇಲ್ಲಿಯವರೆಗು ಪ್ರಪಂಚದಲ್ಲಿಯೆ ಯಾರಿಗು ಹೊಳೆದಿರಬಾರದು ಅಂತದನ್ನು ಹುಡುಕುವೆ :)))))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು, ' ದೂರ ತೀರದ ಕರೆ ' ( ಕಥೆ ) ಭಾಗ 1 ಮತ್ತು 2, ಬಹಳ ಚೆನ್ನಾಗಿ ಮೂಡಿಬಂದಿವೆ, ವಿಭಿನ್ನ ಶೈಲಿಯ ಆಕರ್ಷಕ ಕಥೆ, ಉತ್ತಮ ಕಥೆ ನೀಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ ತಮ್ಮ ಮೆಚ್ಚುಗೆಗಾಗಿ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ದೂರ ತೀರದ ಕರೆಯ ಎರಡೂ ಭಾಗಗಳನ್ನು ಈದಿನ ಒಟ್ಟಿಗೆ ಓದಿದೆ. ಪ್ರಥಮ ಭಾಗವನ್ನು- >>>ತಂಪಾದ ಗಾಳಿ ಎಲ್ಲವು ಸುಖಕರ. ಕಿಟಕಿಯ ಹತ್ತಿರದ ಸೋಫದಲ್ಲಿ ಕುಳಿತಿದ್ದ ಆಕೆಯತ್ತ ನಾವು ನಡೆದವು, ಆಕೆ ಇತ್ತ ತಿರುಗಿ.... ಅಲ್ಲಿಗೇ ನಿಲ್ಲಿಸುತ್ತಿದ್ದರೆ... ಈ ಸಯಾಮಿ ಟ್ವಿನ್ಸ್ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ನಾನು ಮೊದಲು ಪ್ರತಿಕ್ರಿಯೆಗಳನ್ನು ಓದಿ, ನಂತರ ಕತೆ ಓದಿದೆ. ಆದರೂ ಕತೆ ಬಹಳ ಕುತೂಹಲಕಾರಿಯಾಗಿತ್ತು, ಆಸಕ್ತಿದಾಯಕವಾಗಿತ್ತು. ಅದರಲ್ಲೂ ಕೊನೆಯಲ್ಲಿ ನಿಮ್ಮ ಬುದ್ಧಿವಾದದ ಮಾತು..ವ್ಹಾ.. ಆಂಡ್ರಿಯಾ ಅಂಜಲೀನಾರಿಗೆ ನಮ್ಮ ಕ್ರಿಸ್ "ಗೀತೆ" ಬೋಧಿಸಿದಂತೆ ಆಯಿತು. ಡೈಸಿಫೆಲಿ / ಕನ್‌ಜೊಯಿಂಡ್‌ಗಳ ( http://www.thefreedi... ) ಬಗ್ಗೆ ವಿಶಿಷ್ಟ ಕತೆ ನೀಡಿದ್ದಕ್ಕೆ ತಮಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ ನಿಮ್ಮ ಮೆಚ್ಚುಗೆಗೆ ವಂದನೆಗಳು ಹಾಗೆ ನೀವು ನೀಡಿರುವ ಲಿಂಕ್ ಸಹ ಆಸಕ್ತಿಧಾಯಕವಾಗಿದೆ ಹೀಗೆ ಒಂದು ಕಲ್ಪನೆಯಷ್ಟೆ ,ಅದಕ್ಕು ನೀವೆ ಕಾರಣ‌ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿ ಅವರೆ, ತಮ್ಮ ಲೇಖನಗಳು ಇತ್ತೀಚೆಗೆ ತುಂಬಾ ವೈವಿಧ್ಯಮಯವಾಗಿ ಕುತುಹಲ ಭರಿತವಾಗಿರುತ್ತವೆ.ಓದುವದಕ್ಕೆ ಬಹಳ ಮುದ ವಾಗುತ್ತದೆ.ಅದಕ್ಕೆ "ದೂರ ತೀರದ ಕರೆ ಭಾಗ:1 ಮತ್ತು ಭಾಗ :2 " ಒಂದು ಉದಾಹರಣೆ ಅಷ್ಟೆ.ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸಿದ ಈ ಕಥೆ ತುಂಬಾ ಸೊಗಸಾಗಿತ್ತು . ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ರಮೇಶ್ ಕಾಮತ್ ರವರೆ ತಮ್ಮ ಮೆಚ್ಚುಗೆ ನನಗೆ ಸಂತಸ ನೀಡಿತು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಭಿನ್ನ ಕಥೆ, ಚೆನ್ನಾಗಿದೆ ಪಾರ್ಥವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದಕ್ಕೆ ಹಾಗು ಪ್ರತಿಕ್ರಿಯೆಗೆ ವಂದನೆಗಳು ಚೇತನ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.