ಕತೆ: ಕನಸಿನ ಮಾಯಾಜಿಂಕೆ (ಜಿಂಕೆಯ ಹಿಂದೆ)

5

ಕತೆ: ಕನಸಿನ ಮಾಯಾಜಿಂಕೆ   (ಜಿಂಕೆಯ ಹಿಂದೆ)  

 

ಭಾರತದ ಬೇರೆ ಬೇರೆ ನಗರಗಳಲ್ಲಿ ಸರ್ವೀಸಿನ ಬಹಳಷ್ಟು ವರ್ಷಗಳನ್ನು ಕಳೆದು, ನಿವೃತ್ತನಾಗಲು ಐದು ವರ್ಷಗಳು ಇವೆ ಎನ್ನುವಾಗ  ಬೆಂಗಳೂರಿಗೆ ಬಂದು ನೆಲೆಸಿದ್ದವನು ವಿಶ್ವನಾಥ.  

  ಬೆಂಗಳೂರು ಅವನಿಗೆ ಸ್ವಂತ ಸ್ಥಳವೇನಲ್ಲ. ಅವನ ತಂದೆ ಸತ್ಯನಾರಾಯಣರು ಹೈಸ್ಕೂಲ್ ಮಾಸ್ಟರ್ ಆಗಿದ್ದವರು, ಊರಿಂದೂರಿಗೆ ಓಡಾಟ ನಡೆಸಿ, ಕಡೆಯಲ್ಲಿ ನಿವೃತ್ತರಾಗುವಾಗ ಬೆಂಗಳೂರಿನ ವಿಜಯನಗರದಲ್ಲಿ ಮನೆಮಾಡಿ ಬಂದು ನೆಲೆಸಿದ್ದರು, ವಿಶ್ವನಾಥನ  ಓದು  ಎಲ್ಲವೂ ಹಿರಿಯೂರಿನಲ್ಲಿ ಆಗಿತ್ತು,  ವಿಶ್ವನಿಗೆ ಹಿರಿಯೂರು ಎಂದರೆ ಮನದಲ್ಲಿ ಎಂತದೋ ಹಸಿ ಹಸಿ, ಅವನಿಗೆ ನೆನಪಿರುವ ಸಂಪರ್ಕದಲ್ಲಿರುವ ಬಾಲ್ಯದ ಬಹಳ ಗೆಳೆಯರೆಲ್ಲ ಅಲ್ಲಿಯವರೆ. ಹಿರಿಯೂರಿನ ಚಿಕ್ಕಪೇಟೆಯ ಸಂದಿಯಲ್ಲಿ ಮನೆ, ಸುತ್ತಲೂ ಇದ್ದ ರಸ್ತೆ ಮನೆಗಳೆಲ್ಲ ಅವನ ಮನದಲ್ಲಿ ಅಚ್ಚೊತ್ತಿದ್ದಂತೆ ಇತ್ತು,

  ಹಿರಿಯೂರಿನಲ್ಲಿ ಹೈಸ್ಕೂಲ್ ಮುಗಿಸಿ, ಬೆಂಗಳೂರಿಗೆ ಕಾಲೇಜು ಓದಿಗೆ ಸೇರಿದಾಗಲು ಗೆಳೆಯರೊಂದಿಗೆ ತನ್ನ ಸಂಪರ್ಕವನ್ನು ಪತ್ರಗಳ ಮೂಲಕ ಉಳಿಸಿಕೊಂಡಿದ್ದ,   ಸ್ನೇಹಿತರಾದ ಬಸವರಾಜು, ಶೇಖರ, ಪ್ರಕಾಶ, ಲಿಂಗರಾಜು ಇವರೆಲ್ಲ ಅವನ ಜೊತೆ ಓದುತ್ತಿದ್ದು, ಬಾಲ್ಯದಿಂದಲೂ ಜೊತೆಜೊತೆಗೆ ಬೆಳೆದು ಹೈಸ್ಕೂಲು ಮುಗಿಸಿದವರು, ಕಾಲೇಜು ಮುಗಿಸಿ ಕೆಲಸ ಸೇರುತ್ತಿರುವಂತೆ ಬಹಳ ಜನರ ಜೊತೆ ಸಂಪರ್ಕ ತಪ್ಪಿಹೋಯಿತು, ಆದರೆ ಪ್ರಕಾಶನ ಜೊತೆ ಮಾತ್ರ ಅಗಾಗ್ಯೆ ಪತ್ರ ವ್ಯವಹಾರ ನಡೆದೆ ಇತ್ತು, ಪ್ರಕಾಶ ಮಾಸ್ಟರ್ ಡಿಗ್ರಿ ಮುಗಿಸಿ ಅಲ್ಲೆ ಹಿರಿಯೂರಿನ ಕಾಲೇಜಿನಲ್ಲಿಯೆ ಪ್ರಾಧ್ಯಾಪಕನಾಗಿದ್ದವನು. ಇಂಟರ್ ನೆಟ್ ಮುಂತಾದ ಸೌಲಭ್ಯಗಳು ಲಭ್ಯವಾದಂತೆ ಪ್ರಕಾಶನ ಜೊತೆ ಈಮೈಲ್ ಮೂಲಕವು ಸಂಪರ್ಕ ಮುಂದುವರೆದಿತ್ತು, ಹಾಗಾಗಿ ವಿಶ್ವನಿಗೆ ಹಿರಿಯೂರಿನ ವಿಷಯಗಳು ತಿಳಿಯುತ್ತಿದ್ದವು.  

ಪ್ರಕಾಶ ಆಗಾಗ್ಯೆ ಹೇಳುತ್ತಿದ್ದ,

"ನಾನು ಆಲದಮರದಂತೆ ಊರಿನಲ್ಲಿಯೆ ಬೇರು ಬಿಟ್ಟವನು ಹಿರಿಯೂರಿನ ಹೊರತು ಮತ್ತೇನು ನೋಡದವನು, ನೀನಾದರೊ ಆಕಾಶದಲ್ಲಿನ ಮೋಡದಂತೆ , ಭಾರತದ ಎಲ್ಲನಗರದ ಮೇಲೆ ಹಾದುಹೋಗುವೆ ಆದರೆ ಯಾವುದೆ ಊರಿನಲ್ಲಿ ನೆಲಸುವದಿಲ್ಲ, ನಿನ್ನದೂ ಅಂತ ಯಾವ ಊರು ಇಲ್ಲ ".

    

  ಒಂದೆರಡು ದಿನ ರಜಾ ಹಾಕಿ ವಿಶ್ವ ಹಿರಿಯೂರಿಗೆ ಹೊರಟುಬಿಟ್ಟಿದ್ದ. ಅದೇನೊ ಅವನಿಗೆ  ಅಲ್ಲಿ ಹೋಗಿ ಎಲ್ಲರನ್ನು ನೋಡಬೇಕು , ಊರನ್ನು  ನೋಡಬೇಕು ಅನ್ನುವ ಆಸೆ. ಅವನ ಕಲ್ಪನೆಯ ಊರು, ಗೆಳೆಯರು ಅಂದರೆ ಬಾಲ್ಯದಲ್ಲಿ ಅನುಭವಿಸಿದ್ದು ಅದೇ ನೆನಪಿಗೆ ಬರುತ್ತಿತ್ತು. ಬಸ್ಸಿನಲ್ಲಿ ಕಣ್ಣುಮುಚ್ಚಿದಾಗಲು ಅಲ್ಲಿ ತಾನು ಗೆಳೆಯರೊಡನೆ ಆಡಿದ್ದ ಸ್ಥಳಗಳು, ತನ್ನ ಮನೆ, ಹೆಂಚಿನ ಮನೆಗಳಿದ್ದ ರಸ್ತೆ, ತೋಟಗಳು, ಬಾವಿ, ಈಜಾಡಲು ಹೋಗುತ್ತಿದ್ದ ಕೆರೆ. ಮಾಧ್ಯಮಿಕ , ಹಾಗು ಪ್ರೌಡ ಶಾಲೆ ಅಲ್ಲಿಯ ಗೆಳೆಯರು, ಉಪಾದ್ಯಾಯರು ಇವೆಲ್ಲ ಕಣ್ಣಮುಂದೆ ಸುಳಿಯುತ್ತಿತ್ತು, ತಾನೀಗ ಇದ್ದಕ್ಕಿದಂತೆ ಹೋಗಿ ಎದುರಿಗೆ ನಿಂತರೆ ಅವರ ಮುಖದಲ್ಲಿ ಕಾಣುವ ಸಂತೋಷ ಆಶ್ಚರ್ಯ ಎಲ್ಲವನ್ನು ನೆನೆಯುತ್ತ ಅವನ ಮನ ಮುದಗೊಳ್ಳುತ್ತಿತ್ತು. ಪ್ರಕಾಶನಿಗೆ ಅವನು ಹಿರಿಯೂರಿಗೆ ಬರುತ್ತಿರುವ ಸಮಾಚಾರ ತಿಳಿಸಿದ್ದ.

 

  ವಿಶ್ವ  ಹಿರಿಯೂರಿನಲ್ಲಿ ಇಳಿದಾಗ ಸಂಜೆಯ ವಾತವರಣ. ಬಸ್ ನಿಲ್ದಾಣದಿಂದ ಹೊರಬಂದು ತನ್ನ ಹಳೆಯ ನೆನಪಿನೊಂದಿಗೆ  ಹೋಲಿಸಲು ನೋಡಿದ ಯಾವುದೋ ಬೇರೆ ಊರಿನಲ್ಲಿರುವಂತೆ ಅನ್ನಿಸಿತು. ಫೋನ್ ಮಾಡಲೆ ಎಂದು ಮೊಬೈಲ್ ತೆಗೆದವನು ಬೇಡ ಹಾಗೆ ಕಾಲಾಡಿಸುತ್ತ ನಡೆಯೋಣ ಅನ್ನಿಸಿತು.  ಬಾಲ್ಯದಲ್ಲಿ  ಅದೇನೊ  ಅವನ ಎದುರಿಗೆ ಬರುತ್ತಿದ್ದ ಎಲ್ಲರೂ ಪರಿಚಿತರೆ ಆಗಿದ್ದರು ಈಗ ಎಲ್ಲರೂ ಅಪರಿಚಿತರು ಅನ್ನುವಾಗ ಕಳೆದ ವರ್ಷಗಳ ನೆನಪಾಯಿತು.

 

ಬಸ್ ಸ್ಟಾಂಡಿನಿಂದ ಹೊರಬಿದ್ದು, ಆಟೋದವರ ಕರೆಯನ್ನು ನಿರ್ಲಕ್ಷಿಸಿ ಎದುರಿನ ಟಾರ್ ರಸ್ತೆಯಲ್ಲಿ ನಡೆದಂತೆ ಅನ್ನಿಸಿತು,ಈಗ ಎಲ್ಲವೂ ಬದಲಾಗಿ ಹೋಗಿದೆ, ತಾನಿದ್ದ ಬಾಲ್ಯದ ಹಿರಿಯೂರು ಬೇರೆ, ಈಗಿರುವುದೆ ಬೇರೆ. ಸ್ವಲ್ಪ ದೂರ ನಡೆಯುವದರಲ್ಲಿ ರಸ್ತೆಯ ಪಕ್ಕದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆ ಕಾಣಿಸಿತು.

 

"ಹೌದು, ಇದೆ ಶಾಲೆ ತಾನು ಓದಿದ್ದು",

  ತೀರ ಹಳೆಯದಾಗಿರುವ ಕಟ್ಟಡ ಕಾಣಿಸುತ್ತಿರುವಂತೆ ಅಪ್ಯಾಯಮಾನ ಅನ್ನಿಸಿತು,   ಬದಲಾಗದ ಇಂತಹ ಹಳೆಯ ಕಟ್ಟಡಗಳೆ ನಮ್ಮ ಹಳೆಯ ನೆನಪುಗಳಿಗೆ ಸೇತುವೆ ಅನ್ನಿಸುವಾಗ ನಗು ಬಂದಿತು. ರಸ್ತೆಯಲ್ಲಿ ನಡೆಯುತ್ತಿದ್ದಂತೆ ನೆನಪು ಬಂದಿತು,   ಶಾಲೆಯ ಪಕ್ಕದಲ್ಲಿಯೆ ಹೋಗುವ ಪುಟ್ಟ ರಸ್ತೆಯಲ್ಲಿಯೆ  ಶೇಖರನ ಮನೆ. ಅವನ ತಂದೆಗೆ ಆಗಲೆ ವಯಸ್ಸಾಗಿತ್ತು ಈಗ ಹೇಗಿದ್ದಾರೊ. ಯೋಚಿಸುತ್ತಲೆ ಆ ಪುಟ್ಟ ರಸ್ತೆಯ ಕಡೆ ತಿರುಗಿದ.

ಅವನ ಹಿಂದಿನ ನೆನಪಿಗೆ ಹೊಂದಿಕೊಳ್ಳುತ್ತಿಲ್ಲ ಈಗಿರುವ ರಸ್ತೆ.  ಮಣ್ಣಿನ ರಸ್ತೆಯ ಎರಡು ಪಕ್ಕ ಚರಂಡಿ, ಎರಡು ಸಾಲು ಹೆಂಚಿನ ಮನೆಗಳು, ಪ್ರತಿ ಮನೆಯ ಮುಂದೆ  ನೀರಿನ ನಲ್ಲಿಗಳು. ಮನೆಗಳ ನಡುವೆ ಇದ್ದ ಹಿತ್ತಲಿನ ಬೇಲಿ, ಕರಿಬೇವಿನ ಮಾವಿನ ಮರಗಳು.
ಈಗ ಏನು ಇರಲಿಲ್ಲ. ಮಣ್ಣಿನ ರಸ್ತೆ ಬದಲಿಗೆ ಟಾರಿನ ರಸ್ತೆ, ಹೆಂಚಿನ ಮನೆಗಳೆಲ್ಲ ಮಾಯವಾಗಿ ಎರಡು ಮೂರು ಅಂತಸ್ತಿನ ಸಾಲು ಸಾಲು ಮನೆಗಳು. ಮನೆಗಳ ಮುಂದೆ ಕಬ್ಬಿಣದ ಗ್ರಿಲ್ ಗಳು, ಮರಗಳಿರಲಿ ಮನೆಗಳ ನಡುವೆ ಗಾಳಿಯು ನುಸುಳದಂತಹ ಗೋಡೆಗಳು ಹೊಂದಿಕೊಂಡಂತೆ ಕಟ್ಟಿದ ಮನೆಗಳು , ಏಕೋ ಅವನ ಉಲ್ಲಾಸ ತಗ್ಗಿತು.

 

ವಿಶ್ವನಿಗೆ ತನ್ನ ಸ್ನೇಹಿತನ ಮನೆಯ ಗುರುತು ಸಿಗಲಿಲ್ಲ. ಮೋಟರ್ ಬೈಕ್ ಸ್ಟಾರ್ಟ್ ಮಾಡುತ್ತ ನಿಂತಿದ್ದ ಯುವಕನೊಬ್ಬನನ್ನು ಪ್ರಶ್ನಿಸಿದ

"ಇಲ್ಲಿ ಶೇಖರ ಅನ್ನುವರ ಮನೆ ಇತ್ತು, ಅವರ ತಂದೆ  ಪರಮೇಶ್ವರಯ್ಯನವರು ಅಂತ ಶಾನುಭೋಗರಾಗಿದ್ದರು, ಅವರು ಈಗ ಈ ರಸ್ತೆಯಲ್ಲಿ ಇಲ್ಲವ?"

"ಓ ಅವರಾ, .." ಎನ್ನುತ್ತ, ವಿಶ್ವನ ಕಡೆ ತಿರುಗಿ,

"ನೋಡಿ, ಅಲ್ಲಿ ಕಾಣ್ತಿದೆಯಲ್ಲ, ಲೈಟು ಕಂಬದ ಪಕ್ಕ ಅದೆ ಅವರ ಮನೆ, ನೀವ್ಯಾರು" ಎಂದ ಆ ಯುವಕ

"ಥ್ಯಾಂಕ್ಸ್, ನಾನು ಅವರ ಬಾಲ್ಯದ ಸ್ನೇಹಿತ, ಮೊದಲು ಇಲ್ಲೆ ಇದ್ದವನು" ಎಂದು ನುಡಿದು, ಆ ಯುವಕ ಮುಖನೋಡುತ್ತ ಇರುವಂತೆ, ನಡೆಯುತ್ತ ಹೊರಟು, ಲೈಟ್ ಕಂಬದ ಪಕ್ಕದ ಮನೆಯ ಮುಂದೆ ನಿಂತ.  ,

ಮೊದಲಿದ್ದ ತುಳಸಿಗಿಡ, ದಾಳಿಂಬರೆ ಎಲ್ಲ ಮಾಯವಾಗಿತ್ತು, ಮನೆಯ ಹೊರಬಾಗ ಪೂರ್ತಿಯಾಗಿ  ಗ್ರಿಲ್ ಮುಚ್ಚಿದ್ದು, ಜೈಲಿನಂತೆ ಕಾಣುತ್ತಿತ್ತು, , ಸಂದಿಯಲ್ಲಿ ಕೈ ತೂರಿಸಿ ಕಾಲಿಂಗ್ ಬೆಲ್ ಅದುಮಿದ.   ಪಂಚೆ , ಮೇಲೆ ಬನೀನು ಧರಿಸಿದ ವ್ಯಕ್ತಿಯೊಬ್ಬರು ಬಾಗಿಲು ತೆರೆದು ಹೊರಬಂದು, ಇವನನ್ನು ಅನುಮಾನದಿಂದ ನೋಡುತ್ತ

"ಯಾರು ಬೇಕಿತ್ತು" ಅಂದರು.

ವಿಶ್ವನಿಗೆ ಅಷ್ಟು ವರ್ಷಗಳ ನಂತರವು ಗುರುತು ಸಿಕ್ಕಿತ್ತು,

ಶೇಖರ!,

ಆಗ ಸಣ್ಣಗೆ ಕಡ್ಡಿಯಂತೆ ಇದ್ದವನು ಈಗ ದೇಹ ಆಕಾರ ಬದಲಿಸಿ, ದಪ್ಪಹೊಟ್ಟೆಯ, ಅರ್ಧತಲೆಯೆಲ್ಲ ಕೂದಲು ಉದುರಿದ, ಕನ್ನಡಕ ಹಾಕಿ ನಿಂತ ಇವನಿಗು ಬಾಲ್ಯದ ಗೆಳೆಯನಿಗೂ ಸಂಬಂಧವೇ ಇಲ್ಲ ಅನ್ನುವಂತಿದ್ದ.

ವಿಶ್ವ ನಗುತ್ತಲೆ

"ಲೋ ನಾನೊ ಗುರುತು ಸಿಗುತ್ತಿಲ್ಲ ಅಲ್ವ, ವಿಶ್ವ ಅಂತ , ನಿನ್ನ ಜೊತೆ ಓದುತ್ತಿದ್ದೆ, ಮೊದಲು ಇಲ್ಲಿಯೆ ಇದ್ದೆನಲ್ಲ" ಎಂದ .

ಶೇಖರ ಸ್ವಲ್ಪ ಗಲಿಬಿಲಿಯಾದವನಂತೆ ನಿಂತ. ನಂತರ ಚೇತರಿಸಿಕೊಂಡು, ಮುಂದೆ ಇದ್ದ ಗ್ರಿಲ್ ನ ಬಾಗಿಲು ತೆರೆಯುತ್ತ

"ವಿಶ್ವನಾ? , ಗೊತ್ತಾಯ್ತು, ಅದೇ ನಾರಯಣ ಮೇಷ್ರ ಮಗ, ಬಾ ಬಾ ಬಾ,  ಇಷ್ಟು ವರ್ಷದ ಮೇಲೆ ಹೀಗೆ ಪ್ರತ್ಯಕ್ಷ ಆದ್ರೆ ಹೇಗಪ್ಪ ಗುರುತು ಹಿಡೀಲಿ" ಎಂದ ನಗುತ್ತ.

ವಿಶ್ವ ನಗುತ್ತ

"ಆದೇನಪ್ಪ ಮನೆನ ಜೈಲ್ ತರ ಮಾಡಿಬಿಟ್ಟಿದ್ದಿ, ಎಲ್ಲ ಬದಲಾಗಿ ಹೋಗಿದೆ ಗುರುತೆ ಸಿಗುತ್ತಿಲ್ಲ" ಅಂದ.

"ನೀನು ನೋಡಿದ ಹಾಗೆ ಈಗ ಹೇಗಿರಲು ಸಾದ್ಯ, ಎಷ್ಟು ವರುಷವಾಯಿತು ಏನು ಕತೆ, ಹೇಗಿದ್ದಾರೆ ಮೇಷ್ಟ್ರು, ಈಗ ಅವರಿಗೂ ವಯಸ್ಸಾಗಿರಬೇಕು, ಅವರಿಗೆ ಏನು ನಮಗೇ ವಯಸ್ಸಾಯಿತಲ್ಲ" ಎಂದ ಶೇಖರ

"ಇಲ್ಲಪ್ಪ ಅಪ್ಪ ಹೋಗಿ ಆಗಲೆ ಹತ್ತು ವರುಷದ ಮೇಲಾಯಿತು, ಈಗ ಅಮ್ಮಾನು ಇಲ್ಲ, ಸ್ವಲ್ಪ ಬೇಗಾನೆ ಅಂದುಕೊ ಅವರಿಬ್ಬರು ಹೋಗಿದ್ದು, ಏನು ನೀನು ಒಬ್ಬನೆ ಕಾಣುತ್ತಿದಿ ಮನೆಯಲ್ಲಿ" ವಿಶ್ವ.

"ಎಲ್ಲಪ್ಪ ಈಗೆಲ್ಲ ಅಷ್ಟೆ ನಮ್ಮ ಅಪ್ಪನು  ಎಂಟು ವರುಷವಾಯಿತೇನೊ ತೀರಿಕೊಂಡರು, ಸಾಯುವಾಗ ಕಡೆಯಲ್ಲಿ ಒಂದೆರಡು ವರ್ಷ ಸ್ವಲ ಅನುಭವಿಸಿದರು ಬಿಡು, ಹಾಸಿಗೆ ಹಿಡಿದಿದ್ದರು. ಈಗ ನಾನು ಹೆಂಡತಿ ಇಬ್ಬರೆ ಮನೆಯಲ್ಲಿ, ಒಳಗೆ ಮಲಗಿದ್ದಾಳೆ, ಕೂಗುತ್ತೇನೆ ಇರು" ಅಂದವನು

"ಲೇ ಸುಕನ್ಯ ಸ್ವಲ ಹೊರಗೆ ಬಾ , ಮನೆಗೆ ನನ್ನ ಹಳೆಯ ಗೆಳೆಯರೊಬ್ಬರು ಬಂದಿದ್ದಾರೆ " ಎಂದು ಗಟ್ಟಿಯಾಗಿ ಕೂಗಿದ,

"ಮಕ್ಕಳು ಎಲ್ಲ ಎಲ್ಲಪ್ಪ , ಏನು ಕತೆ" ಎಂದ ಶೇಖರ .

"ಮಕ್ಕಳೂ!! ಇಲ್ಲಪ್ಪ ನನಗೆ ಮಕ್ಕಳಿಲ್ಲ, ಈಗ ಆ ವಿಷಯ ಬೇಡ ಬಿಡು ಅವಳ ಮುಂದೆ" ಎಂದ ದ್ವನಿ ತಗ್ಗಿಸಿ

 

ಕ್ಷಣಕಾಲ, ಶೇಖರನ ಪತ್ನಿ ರೂಮಿನಿಂದ ಎದ್ದು ಬಂದರು.

 

"ಇವನು ನೋಡೆ  ವಿಶ್ವ ಅಂತ ನನ್ನ ಬಾಲ್ಯದ ಗೆಳೆಯ, ಮೊದಲು ಇದೇ ಊರಿನಲ್ಲಿ ಇದ್ದವನು ಈಗ  ಬೆಂಗಳೂರಿನಲ್ಲಿ ಇದ್ದಾನೆ. ಚಿಕ್ಕವಯಸಿನಲ್ಲಿ ನಾವೆಲ್ಲ ತುಂಬಾನೆ ಜೊತೆ" ಅಂದ ಶೇಖರ.

ಆಕೆ  ಕೈಮುಗಿದು

"ಸಂತೋಷ ಅಷ್ಟು ದೂರದಿಂದ ಬಂದವರು ನಮ್ಮವರನ್ನು ನೆನಪಿಸಿಕೊಂಡು ಬಂದಿರಲ್ಲ ಬಿಡಿ, ಇಲ್ಲಿ ಯಾರ ಮನೆಗೆ ನೀವು ಬಂದಿದ್ದು?"  ಆಕೆ ಕೇಳಿದಳು.

ವಿಶ್ವ ಗಲಿಬಿಲಿಗೊಂಡ, ಬೆಂಗಳೂರಿನಿಂದ ಹೊರಟ ಅವನಿಗೆ ತನ್ನ ಬಾಲ್ಯ ಸ್ನೇಹಿತರನ್ನೆಲ್ಲ ಬೇಟಿಮಾಡಬೇಕು, ಹಳೆಯ ಊರನ್ನು ಮತ್ತೆ ನೋಡಬೇಕು ಅನ್ನುವ ಉತ್ಸಾಹದ ಹೊರತಾದ ಇಂತ ಪ್ರಶ್ನೆಗಳೆಲ್ಲ ಹೊಳೆದಿರಲಿಲ್ಲ. ಅಕೆಯ ಪ್ರಶ್ನೆಗೆ ಉತ್ತರಿಸುವದರಲ್ಲಿ ಶೇಖರನೆ ಅಂದ

"ಯಾರ ಮನೆಗೇನೆ, ನಮ್ಮ ಮನೆಗೆ ಬಂದಿದ್ದಾನೆ ಇಲ್ಲೆ ಇರುತ್ತಾನೆ ಅಷ್ಟೆ, ನಿನ್ನದೊಳ್ಳೆ ಪ್ರಶ್ನೆ ಆಯಿತಲ್ಲ" ಅಸಹನೆ ತೋರಿದ,

ಆಕೆ ಅವಮಾನಗೊಂಡಂತೆ

"ಹಾಗಲ್ಲ ರೀ, ನನಗೇನು ಗೊತ್ತು, ಇಷ್ಟು ದೂರ ಬರುವಾಗ ಯಾವುದೋ ಮದುವೆಯೊ ಮುಂಜಿಯೊ ಮತ್ತೇನೊ ಅಂತ ಯಾವುದಾದರು ಕಾರ್ಯಕ್ರಮವಿದೆಯೇನೊ ಅದಕ್ಕೆ ಬಂದರೇನೊ ಅಂದುಕೊಂಡೆ"  ಎನ್ನುತ್ತ.

"ಕುಡಿಯಲು ಏನಾದರು ಕೊಡುವೆ " ಎನ್ನುತ್ತ ಎದ್ದರು.

"ದೂರದಿಂದ ಬಂದಿದ್ದಾನೆ ಹಸಿವಾಗಿರುತ್ತೆ ಏನಾದರು ತಿಂಡಿ ಮಾಡಿಬಿಡು, ಮೊದಲು ಒಂದು ಕಾಫಿ ಕೊಡು, ರಾತ್ರಿ  ನಿಧಾನವಾಗಿ ಮಾತನಾಡುತ್ತ ಊಟ ಮಾಡಿದರಾಯಿತು ಅಲ್ಲವೇನೊ?" ಎಂದ

ವಿಶ್ವನಿಗೆ ನಿಜಕ್ಕು ಏನಾದರು ಕುಡಿಯಬೇಕು ತಿನ್ನಬೇಕು ಅನ್ನಿಸುತ್ತ ಇದ್ದು, ಶೇಖರನ ಮಾತು ಅಪ್ಯಾಯಮಾನವೆನಿಸಿ ಸುಮ್ಮನಿದ್ದ ಅವನು ಎದ್ದು ಹೋಗಿ ಜಗ್ ನಲ್ಲಿ ನೀರು, ಲೋಟ ತರುತ್ತ,

"ಆಗಿನ ಸೀಹಿನೀರಿನ ಭಾವಿಯ ನೀರು ಅಲ್ಲಪ್ಪ,   ವೇದವತಿ  ಡ್ಯಾಮಿನ ನೀರು" ಅನ್ನುತ್ತ ಕೊಟ್ಟ

"ಅಂದ ಹಾಗೆ ಆಗಿನ ಸಿಹಿನೀರಿನ ಭಾವಿ, ಸುತ್ತಲ ತೋಟ, ಅವೆಲ್ಲ ಹಾಗೆ ಇದೆಯ ?" ಎಂದೆ

"ಎಲ್ಲಿಯ ಸಿಹಿನೀರಿನ ಭಾವಿ, ಅದೆಲ್ಲ ಆಯಿತು ಅದರಲ್ಲಿ ನೀರು ಹೋಯಿತು, ಈಗ ಭಾವಿಯು ಇಲ್ಲ ತೋಟವೂ ಇಲ್ಲ ಎಲ್ಲವೂ ಸೈಟು, ಮನೆಗಳೆ ಆಯಿತು. ಊರಿನಲ್ಲಿ ಮೊದಲಿದ್ದ ಹಾಗೆ ಏನು ಇಲ್ಲಪ್ಪ, ಎಲ್ಲವೂ ಬದಲಾಗಿದೆ, ಮರಗಿಡಗಳೆಲ್ಲ ಮಾಯವಾಗಿದೆ, ಏನಿದ್ದರು   ಬರಿ ರಿಯಲ್ ಎಸ್ಟೇಟ್ ಅಷ್ಟೆ ಈಗೆಲ್ಲ" ಎಂದ

"ಆಯಿತು ನಾನೆಲ್ಲೊ ಬೆಂಗಳೂರಿನಲ್ಲಿ ಮಾತ್ರ ಈ ಭೂತ ಹಿಡಿದಿದೆ, ಮತ್ತೆಲ್ಲ ಊರುಗಳು ಸ್ವಲ್ಪವಾದರು ಹಳೆಯದನ್ನು ಉಳಿಸಿಕೊಂಡಿರುತ್ತವೆ ಅಂದುಕೊಂಡಿದ್ದೆ, ಹೋಗಲಿ ಬಿಡು, ನಾವೆಲ್ಲ ಈಜಲು ಹೋಗುತ್ತಿದ್ದ ಕೆರೆಯಾದರು ಇದೆಯಾ ಅಥವ ಅದು ಮುಚ್ಚಿ ಹೋಯಿತಾ?" ಎಂದ ವಿಶ್ವ , ಮನದ ಉತ್ಸಾಹವೇಕೊ ತಗ್ಗಿತ್ತು

"ಕೆರೆಯಾ? ನೀನು ಯಾವ ಕಾಲದಲ್ಲಿ ಇದ್ದೀಯ? , ಕೆರೆಯ ಜಾಗವನ್ನೆಲ್ಲ ಪುಡಾರಿಗಳು, ರಿಯಲ್ ಎಸ್ಟೇಟ್ ನವರು ಸೇರಿ ಎತ್ತಿ ಹಾಕಿದರು, ಅದೀಗ ಅಲಕಾನಂದ ನಗರವಾಗಿದೆ ಅಲ್ಲಿ ಇರುವರೆಲ್ಲ ದೊಡ್ಡ ದೊಡ್ಡ ಮನುಷ್ಯರು ಬಿಡು ನಮ್ಮಂತವರೆಲ್ಲ ಅವರಿಗೆ ಲೆಕ್ಕವಿಲ್ಲ"

ಅವನ ದ್ವನಿಯಲ್ಲಿ ಅದೇನೊ ವಿಷ ತುಂಬಿ ತುಳುಕುತ್ತಿತ್ತು

ಅಷ್ಟರಲ್ಲಿ ಅವನ ಪತ್ನಿ ಒಳಗಿನಿಂದ ಅವಲಕ್ಕಿ ಒಗ್ಗರಣೆ ಹಾಕಿದ್ದನ್ನು ತಂದರು,  ಅದು ನಂತರ ಸ್ವಲ್ಪ ಕಾಫಿಯ ಉಪಚಾರ ಎಲ್ಲವೂ ನಡೆಯಿತು.

 

ವಿರಾಮದಲ್ಲಿ ಮಾತೆಲ್ಲ ನಡೆಯಿತು, ಶೇಖರ ತನ್ನ ಕೆಲಸ ಮನೆ ಇತ್ಯಾದಿ ವಿವರ  ತಿಳಿಸಿದ, ಅವನ ತಂದೆಯಕಾಲದಲ್ಲಿದ್ದ ಹಳೆಯ ಮನೆ ಬೀಳಿಸಿ, ಅವನು ಹಾಗು ಅವನ ಅಣ್ಣ  ಗಂಗಾದರ ಇಬ್ಬರೂ ಅರ್ಧ ಅರ್ಧ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರು. ಅವನಿಗೆ ಮಕ್ಕಳಿಲ್ಲ , ಪತ್ನಿಗೆ ಅದೆ ಮನೋವ್ಯಥೆ ಹಾಗಾಗಿ ಇಳಿವಯಸಿನಲ್ಲಿ ಕಾಯಿಲೆ ಅನುಭವಿಸುತ್ತಿರುವಳು. ಅವನಿಗೆ ರಿಟೈರ್ಡ್ ಆಗಲು ಐದು ವರ್ಷ ಬಾಕಿ ಇದೆ ಇಂತವೆ ಸುದ್ದಿಗಳು. ನಡುವೆ ಅವರ ಬಾಲ್ಯದ ಆಟಗಳು ಸುಳಿದುಹೋಗುತ್ತಿದ್ದವು

ವಿಶ್ವ ಗಮನಿಸಿದ, ಶೇಖರ ಮಾತನಾಡುವಾಗ ಬೇಕೆಂದೆ ಅನ್ನುವಂತೆ ಪ್ರಕಾಶ ಲಿಂಗರಾಜು ಬಸವರಾಜು ಇವರೆಲ್ಲರ ಹೆಸರು ಬರುವದನ್ನು ತಪ್ಪಿಸುತ್ತಿದ್ದ.  ವಿಶ್ವ ಹೇಳಿದ

"ಬಾ ಹಾಗೆ ಊರಲ್ಲಿ ಒಂದು ಸುತ್ತು ಹೋಗಿಬರೋಣ, ಎಲ್ಲರನ್ನು ನೋಡಿದ ಹಾಗೆ ಆಗುತ್ತೆ. ನನಗೂ ಊರು ನೋಡಬೇಕು ಅಂತಲೇ ಬಂದದ್ದು, ಜೀವನ ಪೂರ್ತಿ  ದೆಹಲಿ, ಕಲಕತ್ತ, ಚಂಡಿಗಡ  ಮದ್ರಾಸ್ ಅಂತ ಸುತ್ತಿದ್ದೆ ಬಂತು ಬೇಸರ ಬಂದಿತ್ತು. ನನಗೂ ರಜಾ ಸಿಗ್ತು ಮನೇಲಿ ಕುಳಿತಿರೋ ಬದ್ಲು , ಏಕೊ ಸದಾ ಕಾಡ್ತಾ ಇತ್ತು ಈ ಊರು ನೋಡಿ ಹೋಗೋಣ ಅನ್ನಿಸ್ತು ಬಂದುಬಿಟ್ಟೆ" ಅಂದೆ.

"ಸರಿಯಪ್ಪ ನಿನಗೆ ಊರು ಊರು ಸುತ್ತಿ ಬೇಸರ, ನಮಗೋ ಇದ್ದಲ್ಲೆ ಬೇರು ಬಿಟ್ಟು ಬೇಸರ, ಊರು ನೋಡೋಣ ಬಿಡು ಅದೇನು ಎಲ್ಲಿ ಓಡಿ ಹೋಗಲ್ಲ. ನೀನು ಎರಡು ದಿನ ಇಲ್ಲೆ ಇರುವೆಯಂತೆ. ನೀನು ಬರುವ ಮುಂಚೆ ಒಂದು ಪತ್ರವನ್ನಾದರು ಎಸೆದು ಬರುವದಲ್ವ, ಹೇಗು ನನ್ನ ವಿಳಾಸ ತಿಳಿದಿತ್ತು. ಸುತ್ತಮುತ್ತ ಎಲ್ಲಿಯಾದರು ಟೂರ್ ಹೋಗುವ ಕಾರ್ಯಕ್ರಮ ಯೋಚಿಸಬಹುದಿತ್ತು"

ಅಂದ ಶೇಖರ

"ಪತ್ರವೇನು, ಒಂದು ವಾರ ಮೊದಲೆ ಮೇಲ್ ಮಾಡಿದ್ದೆನಲ್ಲಪ್ಪ,  ಪ್ರಕಾಶನಿಗೆ ಮೈಲ್ ಮಾಡಿ ನಿಮ್ಮೆಲ್ಲರಿಗೂ ತಿಳಿಸುವಂತೆ ಬರೆದಿದ್ದೆ, ಅವನು ನಿನಗೆ ಹೇಳಲೆ ಇಲ್ಲ ಅನ್ನಿಸುತ್ತೆ ಅಥವ  ನೀನು ಅವನಿಗೆ ಸಿಗಲಿಲ್ಲವೋ ಏನೊ" ಎಂದೆ.

 

ಪ್ರಕಾಶನ ಹೆಸರು ಎತ್ತುವಾಗಲೆ ಶೇಖರನ ಮುಖ ಕಪ್ಪಿಟಿತು.

 

"ನೀನು ಅವನಿಗೆ ತಿಳಿಸಿದ್ದೆ ಅನ್ನು,   ಅವರಿಗೆಲ್ಲ ನಾವು ಎಲ್ಲಪ್ಪ ಕಾಣುತ್ತೇವೆ, ನಾವೇನಿದ್ದರು  ಬರಿ ಚಡ್ಡಿ ಹಾಕುವ ಪ್ರೈಮರಿ ಮಕ್ಕಳಿಗೆ ಪಾಠ ಹೇಳುವ ಮೇಷ್ಟರುಗಳು. ಅವರಾದರೆ ಲೆಕ್ಚರರ್ಸ್ , ಅವರ ಲೆವೆಲ್ ಗೆ ನಾವೆಲ್ಲಿ, ನೀನು ಅವನಿಗೆ ಪತ್ರ ಹಾಕಿದ್ದು ನನಗೆ ತಿಳಿದಿರಲಿಲ್ಲ"   

ಶೇಖರನ ದ್ವನಿಯಲ್ಲಿ ಎಂತದೋ ಮತ್ಸರ, ತನ್ನ  ಬಗ್ಗೆ ಅದೇನೊ ವಿಶ್ವಾಸ ಕಡಿಮೆ ಆಗಿಹೋಯಿತೇನೊ ಅನ್ನಿಸಿತು ವಿಶ್ವನಿಗೆ ಅವನ ಮುಖ ನೋಡುವಾಗ.

"ಅದೇನು ನಿಮ್ಮಿಬ್ಬರ ಕೋಳಿಜಗಳ, ಹುಡುಗರಲ್ಲಿಯೂ ಹೀಗೆಯೆ ನನಗಂತು ನಿಮ್ಮಿಬ್ಬರ ಜಗಳ ಬಿಡಿಸುವುದೆ ಕೆಲಸ ಆಗಿತ್ತು, ಅದು ಹೋಗಲಿ, ಈಗ ನಮ್ಮ ಜೊತೆ ಇದ್ದರಲ್ಲ ಬಸವರಾಜು, ಲಿಂಗರಾಜು  ಎಲ್ಲ ಹೇಗಿದ್ದಾರೆ ಈಗ ಎಲ್ಲರಿಗೂ ನಮ್ಮ ರೀತಿಯೇ ವಯಸ್ಸಾಗಿರುತ್ತದೆ ಅಲ್ವ ಅಂದ ಹಾಗೆ ಬಸವರಾಜ ಹಾಗು ಲಿಂಗರಾಜು ಇಬ್ಬರೂ ನಿನಗೆ ನೆಂಟರೇ ಆಗಬೇಕು ಅಲ್ವ " ಎಂದು ನಗುತ್ತಿದ್ದ ವಿಶ್ವ.

ಅದೇನೊ ಶೇಖರನ ಮುಖದಲ್ಲಿ ಮೊದಲಿನ ನಗುವೆ ಮಾಯವಾಗಿತ್ತು. ಸಪ್ಪಗೆ ನುಡಿದ.

 

"ಎಲ್ಲರೂ ಚೆನ್ನಾಗಿಯೆ ಇರ್ತಾರೆ ಬಿಡಪ್ಪ. ನಮಗೆ ಅವರ ಸಹವಾಸ ಏಕಿದ್ದಿತ್ತು, ಯಾವ ನೆಂಟರು ಬೆಂಕಿಬಿತ್ತು ಅವರ ಬಂದುತ್ವಕ್ಕೆ, ಅಪರೂಪಕ್ಕೆ ಬಂದಿದ್ದಿ ನಿನ್ನ ಮುಂದೆ ಏಕೆ ಬಿಡು ಇಲ್ಲಿಯ ಪುರಾಣ, ಹೇಗೂ ನಿನಗೆ ಪ್ರಕಾಶ ಎಲ್ಲ ಬರೆದು ತಿಳಿಸುತ್ತ ಇರಬೇಕಲ್ಲ" ಎಂದ ವ್ಯಂಗ್ಯವಾಗಿ.

 

ವಿಶ್ವನಿಗೆ ಬೇಸರ ಅನ್ನಿಸಿತು,   ನೋಡಿದರೆ  ಶೇಖರನಿಗೆ ಉಳಿದ ಯಾರ ಜೊತೆಯು ಉತ್ತಮ ಸಂಬಂದವಿರುವಂತೆ ಕಾಣಿಸಲಿಲ್ಲ. ಇಲ್ಲಿಯ ಸಮಸ್ಯೆಗಳೇನೊ ಎಂದುಕೊಂಡ ವಿಶ್ವ ಮೌನವಾಗಿ ಕುಳಿತ.

ಸ್ವಲ್ಪ ಕಾಲ ಕಳೆದಿತ್ತು, ಶೇಖರನೆ ಮತ್ತೆ ಚೇತರಿಸಿಕೊಂಡ.

"ಅದೇನಪ್ಪ ಸುಮ್ಮನೆ ಕುಳಿತುಬಿಟ್ಟೆ, ಬೇಜಾರಾಯಿತ , ಹೋಗಲಿಬಿಡು, ಅದಿರಲಿ ನಿನ್ನ ಸಮಾಚಾರವನ್ನೆಲ್ಲ ತಿಳಿಸು, ಇಷ್ಟು ವರ್ಷ ನೀನು ಎಲ್ಲಿದ್ದೆ, ಏನೇನು ಕೆಲಸ ಮಾಡಿದೆ, ಹೆಂಡತಿ ಮಕ್ಕಳು ಎಲ್ಲಿ? , ಯಾವ ವಿವರವನ್ನು ತಿಳಿಸಲಿಲ್ಲ. ನಾರಾಯಣ ಮೇಷ್ಟ್ರು ಪಾಪ ತುಂಬಾನೆ ಒಳ್ಳೆಯವರು ಬಿಡು , ನಾವು ಅವರ ಹತ್ತಿರ ಕಲಿತ್ತಿದ್ದು ಇನ್ನು ಮರೆತಿಲ್ಲ ನಿಜ ಹೇಳಬೇಕು ಅಂದರೆ ಇಂದಿಗೂ ನಾನು ಅವರ ಹತ್ತಿರ ಕಲಿತ್ತಿದ್ದನ್ನೆ ಮಕ್ಕಳಿಗೆ ಕಲಿಸುತ್ತಿರುವುದು" ಎಂದ

ವಿಶ್ವನು ತನ್ನ ತಂದೆಯನ್ನು ತಾಯಿಯನ್ನು ನೆನೆಯುತ್ತ ಮಾತನಾಡಿದ.

 

ಸಮಯ ಆಗಲೆ ರಾತ್ರಿ ಒಂಬತ್ತನ್ನು ದಾಟುತ್ತಿತ್ತು, ಇನ್ನು ಈಗ ಹೊರಗೆ ಹೋಗುವುದು ಬೇಡವೇನೊ, ಇನ್ನು ತನಗೆ ಹಳೆಯ ಊರಾದರು ಈಗ ಪೂರ್ತಿ ಬದಲಾಗಿದೆ, ಎಲ್ಲೆಲ್ಲಿ ಏನೇನೊ, ಯಾವ ರಸ್ತೆಯೊ   ಗುಂಡಿಗಳೊ, ಅಲ್ಲದೆ ಶೇಖರನು ಹೊರಗೆ ಬರುವ ಹಾಗೆ ಕಾಣಿಸಲ್ಲ, ಇಂದು ಇಲ್ಲೆ ಇದ್ದು ಬೆಳಗ್ಗೆ ಎಲ್ಲರನ್ನು ಹೋಗಿ ನೋಡುವುದು ಎನ್ನುವ ನಿರ್ಧಾರದಲ್ಲಿ ಸುಮ್ಮನೆ ಕುಳಿತ. ಅಲ್ಲದೆ ಅವನಿಗೆ ಪುನಃ ಸ್ನೇಹಿತರ ವಿಷಯವೆತ್ತಲು ಮುಜುಗರ ಅನ್ನಿಸುತ್ತಿತ್ತು. ಶೇಖರನ ಪತ್ನಿ ಅಡಿಗೆ ಮಾಡಿದ್ದಳು.

"ಊಟಕ್ಕೆ ಏಳು" ಅಂತ ಎಬ್ಬಿಸಿದ ಶೇಖರ,

ಸಂಕೋಚಪಟ್ಟ ವಿಶ್ವ

"ಇರಲಿ ಏಳಪ್ಪ, ಆಗಲೂ ಅಷ್ಟೆ ನೀನು ನಮ್ಮ ಮನೆಯಲ್ಲಿ ತಿನ್ನಲು ಸಂಕೋಚ ಪಡುತ್ತಿದ್ದೆ, ಮನೆಯಲ್ಲಿ ಅಪ್ಪ ಅಮ್ಮ ಏನು ಅನ್ನುತ್ತಾರೊ ಎಂದು".

"ಸಂಕೋಚ ಏನಿರಲಿಲ್ಲ ಬಿಡು ನಿಮ್ಮ ಅಮ್ಮ ಮಾಡುತ್ತಿದ್ದ ಅಡಿಗೆ ಸಾಕಷ್ಟು ರುಚಿಯಾಗೆ ಇರುತ್ತಿತ್ತು ಅದರಲ್ಲು ತಂಬುಳಿಯಲ್ಲಂತು ನಿಮ್ಮ ಅಮ್ಮ ಎತ್ತಿದ ಕೈ" ಹೀಗೆಲ್ಲ ಮಾತನಾಡುತ್ತ ಇಬ್ಬರೂ ಊಟ ಮುಗಿಸಿದರು.

ಅಡಿಗೆ ಚೆನ್ನಾಗಿದೆ ಎಂದು ಶೇಖರನ ಪತ್ನಿಗೂ ವಿಶ್ವನಿಂದ ಒಂದು ಸರ್ಟಿಫಿಕೇಟ್ ಸಿಕ್ಕಿತು. ಅದು ಇದು ಮಾತನಾಡಿ ರಾತ್ರಿ ಇವನಿಗೆಂದು ಅವರು ಹಾಸಿಕೊಟ್ಟ ಹಾಸಿಗೆಯಲ್ಲಿ ರೂಮಿನಲ್ಲಿ ಮಲಗುವಾಗ ರಾತ್ರಿ ಹತ್ತೂವರೆ ದಾಟಿತ್ತು .

 

ಮುಂದುವರೆಯುವುದು …...

 

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಹಳ ದಿನಗಳ ಅಂತರದಲ್ಲಿ ನಮ್ಮ ಊರಿಗೆ ಹೋದರೆ ನಮಗೂ ಇಂತಹುದೇ ಪರಿಸ್ಥಿತಿ ಎದುರಾಗುತ್ತಿತ್ತೋ ಏನೋ ಅನ್ನುವಷ್ಟು ಕಥೆ ನೈಜವಾಗಿದೆ, ಮುಂದಿನ ಕಂತಿಗಾಗಿ ಎದುರು ನೋಡುತ್ತಿದ್ದೇನೆ ಪಾರ್ಥರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶ: ತುಂಬಾ ವರ್ಷಗಳ‌ ನಂತರ‌ ಹೋದರೆ ಎಲ್ಲರೂ ಅದೇ ಪರಿಸ್ಥಿಥಿ ಎದುರಿಸಬಹುದು ಹುಟ್ಟಿ ಬೆಳೆದ‌ ಊರಿನಲ್ಲಿ ಅಪರಿಚಿತರಂತೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶ: ತುಂಬಾ ವರ್ಷಗಳ‌ ನಂತರ‌ ಹೋದರೆ ಎಲ್ಲರೂ ಅದೇ ಪರಿಸ್ಥಿಥಿ ಎದುರಿಸಬಹುದು ಹುಟ್ಟಿ ಬೆಳೆದ‌ ಊರಿನಲ್ಲಿ ಅಪರಿಚಿತರಂತೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶ: ತುಂಬಾ ವರ್ಷಗಳ‌ ನಂತರ‌ ಹೋದರೆ ಎಲ್ಲರೂ ಅದೇ ಪರಿಸ್ಥಿಥಿ ಎದುರಿಸಬಹುದು ಹುಟ್ಟಿ ಬೆಳೆದ‌ ಊರಿನಲ್ಲಿ ಅಪರಿಚಿತರಂತೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಿಂಕೆ..ಅಲ್ಲ.. ಮಾಯಾಜಿಂಕೆ... ಅದೂ ಕನಸಿನ ಮಾಯಾಜಿಂಕೆ! ಶೀರ್ಷಿಕೆಯೇ ಸೆಳೆಯಿತು. ಮಾಯಾಜಿಂಕೆಯ ಹಿಂದೆ ಓ(ಡಿ)ದಿದೆ.. (ಮುಂದುವರೆಯುವುದು..) ತಪ್ಪಿಸಿಕೊಂಡಿತು ಪಾರ್ಥರೆ.. ಮುಂದಿನ ಭಾಗದ ನಿರೀಕ್ಷೆಯಲ್ಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಗಣೇಶರೆ ಮಾಯಾ ಜಿಂಕೆ ! ಚಿಕ್ಕವಯಸ್ಸಿನಲ್ಲಿ ನಾವು ಬೆಳೆದ‌ ವಾತವರಣಾವನ್ನು ನಾವು ನಮ್ಮೊಳಗೆ ಕಲ್ಪಿಸಿಕೊಂಡಿರುತ್ತೇವೆ ಆದರೆ ನಂತರ‌ ಅಲ್ಲಿ ಹೋದರೆ ಆದೇ ಜಾಗ‌, ಜನ‌ , ಮನೆ ಮನಗಳಿರಲ್ಲ‌ , ಕಾಲದ‌ ಪ್ರಭಾವಕ್ಕೆ ಸಿಕ್ಕು ನಮ್ಮ‌ ಬಾಲ್ಯವೆಲ್ಲ‌ ಕರಗಿಹೋಗಿರುತ್ತದೆ , ಮುಂದಿನ‌ ಬಾಗ‌ ಹಾಗು ಕಡೆಯ‌ ಬಾಗ‌ ಎಲ್ಲವನ್ನು ಹಾಕಿಯಾಯಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ. ನಿರೀಕ್ಷೆ ನಿರಾಶೆ ತರುತ್ತದೆ ಅನ್ನುತ್ತಾರೆ. ನಮ್ಮ ಊರು ನಮಗೇ ಅಪರಿಚಿತವೆನಿಸುವಂತಾಗ ಏನೋ ಕಳೆದುಕೊಂಡಂತೆ ಆಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೆ ಕಲ್ಪನೆಯ‌ ಹಿಂದೆ ಹೋಗುವಾಗ‌ , ಅದು ನಿಜವೆಂದೆ ಬ್ರಮಿಸಿ ಹೋಗುವೆವು ಆದರೆ ಅ ಕಲ್ಪನೆ ಮಾಯಾಜಿಂಕೆಯಂತೆ ತೋರಿ ಕಡೆಯಲ್ಲಿ ಕರಗಿಹೋಗುವುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.