ಎಮ್ಮವರು ಬೆಸಗೊಂಡರೆ

5
"ಅವರು ನೀನು ಹೇಳ್ತಾ ಇರೋ ಅಷ್ಟು ಒಳ್ಳೆಯವರಾಗಿದ್ರೆ ಇಂಥ ಸಿಲ್ಲಿ ರೀಸನ್ ಕೊಟ್ಟು ಮದ್ವೆ ನಿಲ್ಲಿಸ್ತಾ ಇರ್ಲಿಲ್ಲ" ರೂಮಿನಿಂದ ಕೀರ್ತಿ ಕೂಗಿದಾಗ ಜಾನಕಮ್ಮನ ಕೋಪದ ಬೆಂಕಿಗೆ ತುಪ್ಪ ಸುರಿದ ಹಾಗಾಯ್ತು. 

"ನಾವು ಮಾತ್ರ ನಮ್ ಮಕ್ಕಳ ಮನಸನ್ನ ಅರ್ಥ ಮಾಡಿಕೊಬೇಕು ಅಲ್ವಾ .. ನಮ್ ಮನಸಲ್ಲಿ ಏನು ಆಗ್ತಾ ಇದೆ ಅಂತ ಅವರು ಅರ್ಥ ಮಾಡಿಕೊಳ್ಳೊ ಪ್ರಯತ್ನಾನೂ ಮಾಡೋಲ್ಲ.ತನಗೆ ಎಲ್ಲಾ ಗೊತ್ತು ಅಂತ ಹೇಳೋಕೆ ಬರ್ತಾಳೆ. ಈಗೇನೋ ಮಾತಾಡ್ತಾಳೆ. ಮುಂದೇನು ಅಂತ ಯೋಚ್ನೆ ಮಾಡಿ  ಕಾಯಿಲೆ ತಂದುಕೊಳ್ಳೋದು ನಾವು." ಕೋಪದಲ್ಲಿ ಗುಡುಗ್ತಾನೇ‌ ಇದ್ದ ಜಾನಕಮ್ಮ ಬಾಗಿಲಲ್ಲಿ ಕಂಡ ರಾಮಪ್ಪನವರನ್ನ ನೋಡಿ "ನೋಡಿದ್ರಾ ಹೇಗ್ ಮಾತಾಡ್ತಾಳೆ ಇವ್ಳು. ಮದ್ವೆ ನಿಂತು ಹೋಗಿದೆ ಅಂತ ಸ್ವಲ್ಪನಾದ್ರೂ ಯೋಚ್ನೆ ಇದ್ಯಾ ಇವಳಿಗೆ. ಬಂದ ಎಲ್ಲಾ ಗಂಡುಗಳು ಹೀಗೆ ಹೇಳಿದ್ರೆ ಇವಳನ್ನ ಯಾರು ಮದ್ವೆಯಾಗ್ತಾರೆ. ಈ ರೀತಿ ಗಂಡುಗಳು ನಿರಾಕರಿಸ್ತಾ ಇದ್ರೆ ಇವಳಲ್ಲೇ ಏನೋ ಐಬಿದೆ ಅಂತ ಮುಂದೆ ಯಾರೂ‌ ಇವಳನ್ನ ಮದ್ವೆಯಾಗದೆ ಇದ್ರೆ ಏನು ಗತಿ." ಇಷ್ಟು ಹೊತ್ತು ತಡೆದುಕೊಂಡಿದ್ದ ದುಃಖವನ್ನೆಲ್ಲ ಹೊರಹಾಕಿದ್ರು. "ಸಮಾಧಾನ ಮಾಡಿಕೋ ಜಾನು. ಎಲ್ಲಾ ಘಟನೆಗಳು ನಮ್ಮ ಅಂಕೆಯಲ್ಲೇ ಇರೊಲ್ಲ ಅನ್ನೋದನ್ನ ನೀನು ಅರ್ಥ ಮಾಡಿಕೊಂಡ್ರೆ ಒಳ್ಳೇದು" ಮಗಳ ಮದುವೆ ನಿಂತು ಹೋದ ಯೋಚನೆಯಲ್ಲಿದ್ದ ಜಾನಕಮ್ಮನಿಗೆ ರಾಮಪ್ಪನವರ ಮಾತು ಕಿವಿಗೂ‌ ಕೇಳಲಿಲ್ಲವೆಂಬಂತೆ ತಮ್ಮಷ್ಟಕ್ಕೆ ತಾವೇ, "ಗಂಡಿನವರು ತಾನೇ‌ ಏನು ಮಾಡ್ತಾರೆ. ಆ ಮನೆಹಾಳಿಯಿಂದ ನಮಗೆ ಈ ವಯಸ್ಸಲ್ಲಿ ಇಂಥ ಪಾಡು. ಅವಳು ನಮ್ಮ ಮಗಳಾಗಿಯಾದ್ರೂ‌ ಯಾಕ್ ಹುಟ್ಟಿದ್ಳೋ?”
****
 
"ಹೂಂ ಮತ್ತೆ ಅದೇ ರಾಮಾಯಣ ಮನೇಲಿ. ಈ ಸಲ ಅಂತೂ ಅಮ್ಮನ್ನ ಸಮಾಧಾನ ಮಾಡೋಕೆ ನನ್ ಕೈಲಿ ಆಗೊಲ್ಲ ಅನಿಸುತ್ತೆ. ಮಧ್ಯಾಹ್ನ ಸುರೇಶ್ ಅಂಕಲ್ ಆ ಸುದ್ದಿ ಹೇಳಿದಾಗಿನಿಂದ ಅಮ್ಮ ಸುಮ್ನೆ ಗೊಣಗ್ತಾ ಇದ್ರು. ಅಪ್ಪ ಅಫೀಸಿಂದ ಬಂದ ಮೇಲಂತೂ ಅಳೋಕೆ ಶುರು ಮಾಡಿಬಿಟ್ರು. ಈ ಮದ್ವೆ ಒಂದು ಆದ್ರೆ ಎಲ್ಲಾ ಸಮಸ್ಯೆಗಳಿಗೂ‌ ಕೊನೆ ಸಿಗುತ್ತೆ ಅಂತ ಅಂದುಕೊಂಡಿದ್ದೆ . ಈಗ ನೋಡಿದ್ರೆ ನನ್ ಮದ್ವೆನೇ ಒಂಡು ದೊಡ್ಡ ಪ್ರಾಬ್ಲಮ್ ಆಗಿ ಹೋಗಿದೆ. ಇದಕ್ಕೆಲ್ಲಾ ಕೊನೆ ಯಾವಾಗ್ಲೋ ಗೊತ್ತಿಲ್ಲ‌" ಕೀರ್ತಿ ಫೋನಿನಲ್ಲಿ ಮಾತಾಡ್ತಾ ಇರೋವಾಗ್ಲೇ‌ ರಾಮಪ್ಪ "ಕೀರ್ತಿ ಊಟ ಮಾಡು ಬಾರಮ್ಮ " ಅಂತ ಕರೆದಿದ್ದು ಕೇಳಿ "ಸರಿ ನೀನು ಯೋಚ್ನೆ ಮಾಡ್ತಾ ಊಟ ಬಿಡ್ಬೇಡ. ಊಟ ಮಾಡು ನಾನು ನಿನಗೆ ಮತ್ತೆ ಫೋನ್ ಮಾಡ್ತೀನಿ." ಅಂತ ಹೇಳಿ ರೂಮಿನಿಂದ ಹೊರ ಬಂದವಳೇ ಅಮ್ಮನ ಕೋಪ ಕಡಿಮೆ ಆಗದೇ ಇರುವುದನ್ನು ಗಮನಿಸಿದಳು. ತಾನು ಸುಮ್ಮನಿರುವುದೇ ಲೇಸೆಂದು ತನ್ನ ಪಾಡಿಗೆ ತಾನು ಊಟ ಮಾಡುತ್ತಿದ್ದಾಗ ರಾಮಪ್ಪನವರೇ‌ ಮಾತು ಶುರು ಮಾಡಿದರು.
"ಯಾರ ಜತೆ ಫೋನಲ್ಲಿ ಮಾತಾಡ್ತಾ ಇದ್ದಿದ್ದು?"
"ನನ್ನ ಫ್ರೆಂಡ್ ಅಪ್ಪಾಜಿ"
"ಆ ಫ್ರೆಂಡ್ ಗೂ‌ ಒಂದು ಹೆಸರು ಇರ್ಬೇಕಲ್ಲ "
"ಅದೂ..."
"ನಿನಗೆ ಎಷ್ಟು ಸಲ ಹೇಳಿದ್ದೀನಿ ನೀನು ಶ್ರುತಿ ಜೊತೆ ಮಾತಾಡೋದು ನನಗೆ ಇಷ್ಟ ಇಲ್ಲ ಅಂತ. ಆದ್ರೂ‌ ನನ್ ಮಾತು ನಿನ್ ಕಿವಿಗೆ ಹೋಗೋದೇ ಇಲ್ಲ ಅಲ್ವಾ? ನಮ್ ಮಾತನ್ನ ಕೇಳೋ ತಾಳ್ಮೆ ಇಲ್ಲದವಳಿಗೆ ನಿನ್ ಜೊತೆ ಏನು ಮಾತು?”
"ಅಪ್ಪಾ ಅವಳೇನು ಫೋನ್ ಮಾಡಿರಲಿಲ್ಲ.ನಾನೇ ಮಾಡಿದ್ದು. ನೀವು ಸುಮ್ನೆ ವಿಷ್ಯ ದೊಡ್ಡದು ಮಾಡ್ತಾ ಇದ್ದೀರಿ. ನಾನು ಚಿಕ್ಕವಳಿದ್ದಾಗಿಂದ ನನ್ನ ಫ್ರೆಂಡ್ ಅಂತ ಇರೋಳು ಅವಳೊಬ್ಬಳೇ. ಅಮ್ಮ ಏನೋ ಕೂಗಾಡಿ ಅವರ ಸಂಕಟ ಹೇಳಿಕೊಳ್ತಾರೆ. ಆದ್ರೆ ನನಗೆ ಹಾಗೆ ಮಾಡೋಕೆ ಆಗೊಲ್ಲ .ಇದನ್ನೆಲ್ಲಾ ನಾನು ಶ್ರುತಿ ಬಿಟ್ರೆ ಬೇರೆ ಯಾರ್ ಹತ್ರ ಹೇಳಲಿ. ಮನೆ ವಿಷ್ಯಾನಾ ಬೀದೀಲಿ ನಿಂತು ಕಿರುಚೋಕಾಗುತ್ತಾ?"
ಅಪ್ಪ ಮಗಳ ಮಾತಿನ ನಡುವೆ ಬಾಯಿ ಹಾಕಿ ಜಾನಕಮ್ಮ
"ನೀನ್ಯಾವಾಗ್ಲೂ‌ ಅವಳ ಪರಾನೇ. ನೀನು ತಾನೆ ಯಾಕೆ ಇನ್ನೂ‌ ಹೀಗೆ ಇದ್ದೀಯಾ. ಅವಳ ಥರ ನೀನು ಯಾರಾದ್ರೂ‌ ಹುಡುಗನ ಹಿಂದೆ ಹೋಗ್ಬಿಡು. ನನಗೆ ಮಕ್ಕಳೇ ಆಗ್ಲಿಲ್ಲ ಅಂತ ಅಂದುಕೊಂಡು ಪ್ರಾಣ ಬಿಟ್ಟುಬಿಡ್ತೀನಿ."
"ಪ್ರಾಣ ಬಿಡೋದು ಬಿಟ್ರೆ ಬೇರೆ ದಾರೀನೇ ಕಾಣೊಲ್ಲ ಅಲ್ವಾ ನಿಂಗೆ" ಜಾನಕಮ್ಮನ ಮೇಲೆ ಸಿಡುಕಿದರು ರಾಮಪ್ಪ.
"ಅಮ್ಮ... ಅಪ್ಪ... ನಾನಿಲ್ಲಿ ಕೂತಿರೋದು ಊಟ ಮಾಡೋಕೆ. ಊಟ ಮಾಡೋವರಗೆಯಾದ್ರೂ‌ ಸುಮ್ಮನಿರೋಣ್ವಾ?" ಗಂಭೀರ ಸಂಭಾಷಣೆಗೆ  ಒಂದು ವಿರಾಮ ಹಾಕಿದಳು ಕೀರ್ತಿ. ಏನಾದ್ರೂ‌ ಮಾತಾಡಿದ್ರೆ ಇನ್ನೆಲ್ಲಿ ಮಗಳು ಮತ್ತು ಯಜಮಾನರು ಊಟ ಬಿಟ್ಟು ಏಳುತ್ತಾರೋ ಅಂತ ಜಾನಕಮ್ಮನವರೂ ತಮ್ಮ ಪಾಡಿಗೆ ತಾವು ಊಟ ಮಾಡಿ ಮುಗಿಸಿದರು.
 
ಊಟ ಮುಗಿದ ಮೇಲೆ ಮತ್ತೆ ವಿಷಯ ಪ್ರಸ್ತಾಪಿಸಬಹುದೇನೋ ಅಂತ ಸ್ವಲ್ಪ ಹೊತ್ತು ಹಾಲಿನಲ್ಲೇ ಕುಳಿತು ಟಿ.ವಿ.ಯಲ್ಲಿ ಚಾನೆಲ್ ಬದಲಿಸ್ತಾ ಇದ್ದ ಕೀರ್ತಿ ಅರ್ಧ ಗಂಟೆಯಾದ್ರೂ ಯಾರೂ‌ ಮಾತಾಡದೇ ಇದ್ದಾಗ ಎದ್ದು ರೂಮಿಗೆ ಹೋದಳು. ಅಲ್ಲಾ ಶ್ರುತಿ ಪ್ರೀತಿಸಿ ಮದ್ವೆಯಾಗಿದ್ದೆ ತಪ್ಪಾ ಅಂತ ಯೋಚ್ನೆ ಒಂದು ಕಡೆಯಾದ್ರೆ ನಂದು ಮಾತ್ರ ಅರೇಂಜ್ಡ್ ಮಾರೇಜೇ ಅಂತ ಹೇಳ್ತಿದ್ದ ಶ್ರುತಿ ಬದಲಾಗಿದ್ದಾದ್ರೂ‌ ಯಾಕೆ ಅನ್ನೋ ಯೋಚ್ನೆ ಇನ್ನೊಂದು ಕಡೆ. ಚಿಕ್ಕ ವಯಸಿನಿಂದ ಶ್ರುತಿ ಯಾವಾಗಲೂ‌ ತನ್ನಿಷ್ಟದಂತೆ ನಡೆದುಕೊಂಡಿದ್ದರೂ‌ ಅಪ್ಪನ ವಿರುಧ್ಧ ಮಾತಾಡಿದವಳಲ್ಲ. ಅಂಥವಳು ಅಪ್ಪ ಅಮ್ಮನನ್ನು ಎದುರು ಹಾಕಿಕೊಂಡು ಸಿದ್ಧಾರ್ಥನನ್ನು  ಕೈಹಿಡಿಯುವ ನಿರ್ಧಾರ ಮಾಡಿದ್ಳು ಅಂದ್ರೆ ಪ್ರೀತಿಗೆ ಅಷ್ಟು ಶಕ್ತಿಯಿರುತ್ತಾ? ಪ್ತೀತಿ ಒಂದು ಮಧುರ ಅನುಭೂತಿ ಅಂತ ಹೇಳೊ ಅಪ್ಪ ಶ್ರುತಿ ತಾನು ಪ್ರೀತಿಸಿದವನ ಜೊತೆ ಮದುವೆ ಮಾಡಿ ಅಂತ ಕೇಳಿಕೊಂಡಾಗ ಜಾತಿ ವಿಷ್ಯ ಮುಂದಿಟ್ಟು ನಿರಾಕರಿಸಿದ್ದಾದ್ರೂ‌ ಯಾಕೆ?‌ ಪ್ರೀತಿ ಜಾತಿಗೂ‌ ಮೀರಿದ್ದು ಅನ್ನೋ ಅವರ ಮಾತು ಮಾತಾಗೇ ಉಳಿದು ಬಿಡ್ತಲ್ಲ. ಸಮಾಜ ಏನನ್ನುತ್ತೋ ಅನ್ನೋ ಭಯ ಅವರನ್ನ ಕಾಡ್ತಾ ಇತ್ತಾ??‌
 
ಅಲ್ಲಾ... ಶ್ರುತಿ ಮಾಡಿದ ಕೆಲಸದಿಂದಾಗಿ ಅಪ್ಪ ಅಮ್ಮನಿಗಾದ ಬೇಜಾರು ನನ್ನಿಂದ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲಿ ಅಂತ ನೀವು ಆರಿಸಿದ ಹುಡುಗನನ್ನೇ ಮದ್ವೆಯಾಗ್ತೀನಿ ಅಂತ ಏನೋ ಹೇಳಿಬಿಟ್ಟೆ ಆದ್ರೆ ಶ್ರುತಿ ಸಿದ್ಧುನ ಪ್ರೀತಿಗೆ ಸೋತ ಹಾಗೆ ನಾನು ಯಾರಿಗಾದರೂ ಸೋತರೆ...ಛೆ ಛೆ ಹಾಗೆಲ್ಲಾ ಯೋಚ್ನೆನೂ‌ ಮಾಡೋದ್ ಬೇಡ. ಯೋಚ್ನೆ ಮಾಡಿದ್ದೆ ನಿಜ ಆಗಿಬಿಟ್ರೆ ಅಮ್ಮ ಕೊರಗಿ ಕೊರಗಿ ಸತ್ತೇ ಹೋಗಿಬಿಡ್ತಾರೆ. ಈ ಯೋಚ್ನೆನೆಲ್ಲ ತಲೆಯಿಂದ ದೂರ ಹಾಕಿಬಿಡಬೇಕು ಅಂತ ಬಾರದ ನಿದ್ರೆಯನ್ನು ಅರಸುತ್ತ ಮುಸುಕನ್ನೆಳೆದುಕೊಂಡಳು ಕೀರ್ತಿ.
 
*****
 
ತನ್ನಿಂದಾಗಿ ತನ್ನ ಮನೆಯವರೆಲ್ಲಾ ಕೊರಗುವಂತಾಯ್ತಲ್ಲ ಎಂದು ಆಲೋಚಿಸುತ್ತಾ ಇದ್ದ ಶ್ರುತಿ, ಸಿದ್ಧು  ಕಾಲಿಂಗ್ ಬೆಲ್ ಒತ್ತಿದಾಗ ತನ್ನ ಯೊಚನೆಗಳಿಗೆಲ್ಲಾ ಒಂದು ಬ್ರೇಕ್ ಹಾಕಿ ಬಾಗಿಲು ತೆಗೆದಳು. ಅವಳ ಬಾಡಿದ ಮುಖ ನೋಡಿ ಸಿದ್ಧು"ಏನಾಯ್ತು? ಕೀರ್ತಿ ಮದ್ವೆ ವಿಷ್ಯ ಏನಾದ್ರೂ...?" ಎಂದು ಕೇಳುತ್ತಿರುವಾಗೆಲೇ ಶ್ರುತಿ "ನಾವು ಅರ್ಜೆಂಟ್ ಮಾಡಿಬಿಟ್ವಿ ಅನಿಸುತ್ತೆ. ಕೀರ್ತಿ ಮದ್ವೆ ಆದ ಮೇಲೆ ನಾವು ಮದ್ವೆ ಆಗಬೇಕಿತ್ತು. ಆಗ ಇದೆಲ್ಲಾ ತೊಂದ್ರೆ ಆಗ್ತಾ ಇರ್ಲಿಲ್ಲವೇನೋ". "ಬಿಡು ಶ್ರು... ಆಗಿದ್ದಕ್ಕೆ ತಲೆ ಕೆಡಿಸಿಕೊಂಡು ಪ್ರಯೋಜನ ಇಲ್ಲ. ಯಾರೋ‌ ತುಂಬಾ ಲಕ್ಕಿ ಫೆಲೋ ನಮ್ ಕೀರ್ತಿ ಕೈ ಹಿಡಿಯೋಕೆ ಕಾಯ್ತಾ ಇದ್ದಾನೆ ಅಂತ ನಾವು ಸುಮ್ಮನಾಗಬೇಕಷ್ಟೇ." ಇನ್ನೂ ಇದರ ಬಗ್ಗೆ ಮಾತಾಡೋದ್ರಿಂದ ಸಿದ್ಧುಗೂ‌ ಬೇಜಾರಾಗುತ್ತೆ ಅಂತ ಶ್ರುತಿ ತಾನಾಗೆ ಮಾತು ಬದಲಿಸಿ
"ಅತ್ತೆ ಫೋನ್ ಮಾಡಿದ್ರು ನಾಳೆ ಸಂಜೆ ಇಬ್ರೂ ಅಲ್ಲಿಗೆ ಊಟಕ್ಕೆ ಹೋಗಬೇಕಂತೆ,"
"ನನ್ಗೂ‌ ಹೇಳಿದ್ರು. ಆಫೀಸಲ್ಲಿ ತುಂಬಾ ಕೆಲ್ಸ ಇದೆ. ಆದಷ್ಟೂ ಬೇಗ ಬರೋದಿಕ್ಕೆ ಟ್ರೈ ಮಾಡ್ತೀನಿ. ೭ ಗಂಟೆಯೊಳಗೆ ಮನೆಗೆ ಬರ್ಲಿಲ್ಲ ಅಂದ್ರೆ ನೀನು ಹೋಗಿಬಿಡು. ನಾನು ಸೀದಾ ಅಲ್ಲಿಗೆ ಬರ್ತೀನಿ. ಸರಿ ಈಗ ಅಡುಗೆ ರೆಡಿ ಇದ್ಯಾ ಇಲ್ಲ ಮಾಡ್ಬೇಕಾ?"
"ಇಲ್ಲ ರೆಡಿ ಇದೆ. ನೀವು ಮುಖ ತೊಳೆದು ಬನ್ನಿ. ನಾನು ತಟ್ಟೆ ಹಾಕ್ತೀನಿ " ಅಂತ ಊಟಕ್ಕೆ ತಯಾರಿ ಮಾಡಿದಳು ಶ್ರುತಿ.
 
*****
 
"ಅಪ್ಪನ್ನ ನೋಡ್ಬೇಕು ಅವರ ಜೊತೆ ಮಾತಾಡ್ಬೇಕು ಅಂತ ಅನ್ನಿಸ್ತಿದೆ.ಇವತ್ತು ಸಂಜೆ ನಮ್ಮತ್ತೆ ಮನೆಗೆ ಹೋಗ್ತಾ ಇದ್ದೀನಿ ಹಾಗೆ ಬಂದು ಹೋಗ್ಲಾ?"
"ಬೇಡ ಕಣೇ... ಅಮ್ಮ ನಿನ್ನನ್ನ ನೋಡಿದ್ರೆ ಮನೆ ಒಳಗೂ‌ ಬಿಡೊಲ್ಲ . ನಿನ್ನೆ ಏನೆಲ್ಲಾ ಆಯ್ತು ಅಂತ ಹೇಳಿದೆನಲ್ಲ.ತುಂಬಾ ಸಿಟ್ಟು ಮಾಡಿಕೊಂಡಿದ್ದಾರೆ. ಇನ್ನೂ‌ ಸ್ವಲ್ಪ ದಿನ ಬಿಟ್ಟು ಬರೋದೇ ಒಳ್ಳೇದು ಅನಿಸುತ್ತೆ."
"ಅಲ್ವೇ ಇವತ್ತು ಅಪ್ಪನ ಬರ್ತ್ ಡೇ. ಫೋನ್ ಮಾಡಿ ಮಾತಾಡಿಸೋದಕ್ಕಿಂತ ಎದುರು ನಿಂತು ವಿಶ್ ಮಾಡ್ಬೇಕು ಅನ್ನಿಸ್ತಿದೆ.ಅಪ್ಪ ಅಮ್ಮ ಏನಂದ್ರೂ‌ ಪರವಾಗಿಲ್ಲ ನಾನು ಇವತ್ತು ಸಂಜೆ ೬ ಗಂಟೆಗೆ ಮನೆಗೆ ಬರ್ತೀನಿ. ಹೇಳ್ಬೇಕು ಅನಿಸಿದ್ರೆ ಅಪ್ಪ ಅಮ್ಮಂಗೆ ಹೇಳು. ಇಲ್ಲಾಂದ್ರೆ ಸುಮ್ನಿರು."
"ಸಿದ್ಧುಗೆ ನೀನು ನಮ್ ಮನೆಗೆ ಬರ್ತಾ ಇರೋ ವಿಷ್ಯ ಗೊತ್ತಾ?"
"ನಮ್ ಮನೆಗೆ ನಾನು ಹೋಗೋಕೆ ಅವರ ಅಪ್ಪಣೆ ಬೇರೆ ಕೇಳ್ಬೇಕಾ? ನಾನು ಇವತ್ತು ಸಂಜೆ ಬರ್ತಾ ಇದ್ದೀನಿ ಅಷ್ಟೇ." ಕೀರ್ತಿಯ ಉತ್ತರಕ್ಕೂ ಕಾಯದೆ ಫೋನ್ ಡಿಸ್ಕನೆಕ್ಟ್ ಮಾಡಿದ್ಳು ಶ್ರುತಿ. ಶ್ರುತಿ ಸಿದ್ಧು ತಮ್ಮಿಷ್ಟದಂತೆ ಮದ್ವೆ ಮಾಡಿಕೊಂಡು ಮನೆಗೆ ಬಂದಾಗ ನೆಡೆದ ರಂಪಾಟ ನೆನೆಸಿಕೊಂಡ ಕೀರ್ತಿಗೆ ಇಂದು ಇನ್ನ್ಯಾವ ಯುದ್ಧ ಕಾದಿದೆಯೋ ಅಂತ ದಿಗಿಲಾಯ್ತು. ಕೆಲಸ ಮಾಡಲು ಆಸಕ್ತಿಯಿಲ್ಲದೆ ಅರ್ಧ ದಿನ ಸಿಕ್ ಲೀವ್ ಹೇಳಿ ಮನೆಗೆ ಹೋಗಿಬಿಡ್ಲಾ ಅಂತ ಯೋಚಿಸಿದವಳು ಮನೆಗೆ ಹೋದರೆ ಮತ್ತೆ ಅಮ್ಮನ ಗೊಣಗಾಟ ಕೇಳಬೇಕಲ್ಲ ಎಂದು ಶ್ರುತಿ ಮನೆಗೆ ಬರುವುದರೊಳಗೆ ಹೋದರಾಯಿತು ಎಂದು ನಿರ್ಧರಿಸಿ ಕೆಲಸದ ಕಡೆ ಗಮನ ಹರಿಸಲು ಪ್ರಯತ್ನಿಸಿ ಸೋತಳು. ಹಾಗೂ‌ ಹೀಗೂ ಸಮಯ ತಳ್ಳಿ ೫ ಗಂಟೆಗೆ ಹೊರಟು ಮನೆಗೆ ಬಂದಳು .
 
*****
 
ಬಟ್ಟೆಯನ್ನೂ‌ ಬದಲಿಸದೆ ಹಾಲಿನಲ್ಲಿ ಯಾವುದೋ ಚಿಂತೆಯಲ್ಲಿದ್ದ ಮಗಳನ್ನು ಕಂಡ ರಾಮಪ್ಪ "ಯಾಕಮ್ಮ ಸಪ್ಪಗಿದ್ದೀಯಾ?? ಇನ್ನೂ‌ ನಿನ್ನೆ ನಡೆದಿದ್ದರ ಬಗ್ಗೆ ಯೋಚ್ನೆ ಮಾಡ್ತಾ ಇದ್ದೀಯಾ? ಶ್ರುತಿಯ ವಿಚಾರ ಗಂಡಿನ ಕಡೆಯವರಿಂದ ಗುಟ್ಟಾಗಿಟ್ಟಿದ್ದು ನಮ್ಮ ತಪ್ಪು. ಮುಂದೆ ಹೀಗೆ ಆಗದ ಹಾಗೆ ನೋಡಿಕೊಂಡ್ರಾಯ್ತು. ಸುಮ್ನೆ ಯೋಚ್ನೆ ಮಾಡಿ ತಲೆ ಕೆಡಿಸಿಕೊಬೇಡ. ಏಳು ಕಾಫಿ ಮಾಡಿಕೊಂಡು ಬಾ ಇಬ್ರೂ‌ ಕುಡಿಯೋಣ" ಎಂದರು. ನನ್ನ ಮನಸಿನ ಗೊಂದಲ ನಿಮಗೆಲ್ಲಿ ಅರ್ಥ ಆಗಬೇಕು. ಇನ್ನೂ ಕೆಲವೇ ನಿಮಿಷಗಳಲ್ಲಿ ನಿಮಗೆ ಎಲ್ಲ ಗೊತ್ತಾಗುತ್ತೆ ಅಂದುಕೊಂಡು "ಸರಿ ಅಪ್ಪ" ಎಂದು ಕಷ್ಟಪಟ್ಟು ಮುಗುಳ್ನಗೆ ಸೂಸಿ ಅಡುಗೆ ಮನೆಗೆ ನಡೆದಳು.ಅಷ್ಟರಲ್ಲಿ ಮನೆಯ ಗೇಟ್ ತೆಗೆದ ಸದ್ದಾಯಿತು. ಹೊರ ಬಂದು ನೋಡಿದ್ರೆ ಶ್ರುತಿ ಸಿದ್ಧು ಇಬ್ಬರೂ ಬಾಗಿಲಲ್ಲಿ ನಿಂತಿದ್ದರು.
 
"ನಾನ್ ಹೇಳ್ದೆ ಬರಬೇಡ ಇವತ್ತು ಅಂತ ನನ್ ಮಾತು ಕೇಳೋಕೆ ಏನು ಕಷ್ಟ ನಿಂಗೆ? ನೀವಾದ್ರೂ‌ ಇವಳಿಗೆ ಹೇಳ್ಬಾರ್ದಾ ಸಿದ್ಧು?"
"ಇಲ್ಲ ಕೀರ್ತಿ . ಶ್ರುತಿ ನಿರ್ಧಾರ ನನಗೂ ಸರಿ ಅನ್ನಿಸ್ತು. ನಾವು ಹತ್ತಿರ ಆಗೋ ಪ್ರಯತ್ನಾನೂ ಮಾಡ್ಲಿಲ್ಲ ಅಂದ್ರೆ ನಮ್ಮಿಬರ ಫ್ಯಾಮಿಲಿ ನಾಡುವಿರೋ ಗ್ಯಾಪ್ ಕಡಿಮೆಯಾಗೋದಾದ್ರೂ ಹೇಗೆ? ನಾವು ಮದ್ವೆ ಮಾಡಿಕೊಂಡು ಇಲ್ಲಿಗೆ ಬಂದಾಗ ಇಷ್ಟು ದಿನ ಮುದ್ದಾಗಿ ಸಾಕಿದ ಮಗಳು ತಮ್ಮ ಮಾತನ್ನು ಮೀರಿ ಮದುವೆ ಮಾಡಿಕೊಂಡು ಬಂದಿದ್ದಾಳಲ್ಲಾ ಅನ್ನೋ ದುಃಖ ನಿಮ್ಮಪ್ಪ ಅಮ್ಮನಲ್ಲಿತ್ತು. ಆಗ ಅವರು ನಮ್ ಮಾತು ಕೇಳೊ ಸ್ಥಿತಿಯಲ್ಲಿರಲಿಲ್ಲ. ಆದ್ರೆ ಅದನ್ನೆ ಮನಸಲ್ಲಿಟ್ಟುಕೊಂಡು ನಾವು ದೂರ ಆಗೋಕೆ ಆಗೊಲ್ಲ.ನನಗೆ ನನ್ನ ಅತ್ತೆ ಮಾವ ಬೇಕು. ಶ್ರುತಿಗೆ ಅವರ ಅಪ್ಪ ಅಮ್ಮ ಬೇಕು." ಸಿದ್ಧು ಹೇಳುತ್ತಲೇ ಇದ್ದ
ಇದನ್ನೆಲಾ ಕೇಳಿಸಿಕೊಂಡ ಜಾನಕಮ್ಮ "ಅಪ್ಪ ಅಮ್ಮ ಬೇಕು ಅನ್ನೋದನ್ನ ಮದ್ವೆಗೆ ಮುಂಚೆನೆ ಯೋಚ್ನೆ ಮಾಡ್ಬೇಕಿತ್ತು. ಈಗ ಏನ್ ಮಾಡಿದ್ರೆ ತಾನೆ ಏನು ಪ್ರಯೋಜನ" ಎಂದು ಬೀದಿಯಲ್ಲೆ ಜಗಳ ತೆಗೆಯಲು ಸಿದ್ಧರಾದಾಗ, "ಜಾನು ಬೀದಿ ರಂಪ ಮಾಡ್ಬೇಡ ಅವರಿಬ್ಬರನ್ನೂ‌ ಮನೆಯೊಳಗೆ ಕರಿ" ಎಂದರು ರಾಮಪ್ಪ."ಅಲ್ರೀ ನೀವೇನ್ರೀ ಮನೆಯೊಳಕ್ಕೆ ಕರೀತಿದ್ದೀರ.ನಮ್ ಮನೆ ಹೊಸಿಲು ತುಳಿಯೋಕು ಯೋಗ್ಯತೆಯಿಲ್ಲ ಇವ್ಳಿಗೆ," ಎಂದ ಜಾನಕಮ್ಮನವರನ್ನೂ ನಿರ್ಲಕ್ಷಿಸಿ "ಬಾರಮ್ಮ ಒಳಗೆ" ಎಂದು ಶ್ರುತಿಯನ್ನು ಕರೆದರು. "ನೀವು ಬನ್ನಿ" ಎಂದು ಸಿದ್ಧಾರ್ಥನನ್ನು ಕರೆದು ತಾವೆ ಮುಂದಾಗಿ ಮನೆಯೊಳಗೆ ಅಡಿಯಿಟ್ಟರು.
 
ಎಲ್ಲರೂ ಮನೆಯೊಳಗೆ ಬಂದ ನಂತರ ರಾಮಪ್ಪ ತಾವೇ ಮಾತನಾಡಲು ಆರಂಭಿಸಿದರು
" ನೋಡಮ್ಮಾ ಶ್ರುತಿ. ನನ್ ಮರ್ಯಾದೆ ಬೀದಿ ಪಾಲಾಗುತ್ತಲ್ಲಾ ಅಂತ ನಿನ್ನನ್ನ ಒಳಗೆ ಕರೆದಿದ್ದೇನೆ ಹೊರತು ನಿನ್ನ ಮೇಲಿನ ಪ್ರೀತಿಯಿಂದಲ್ಲ. ಇನ್ನೊಮ್ಮೆ ಈ ಮನೆ ಕಡೆ ಬರೋ ವಿಷ್ಯಾನ ಮರೆತುಬಿಡು"
" ಅಪ್ಪ ಇದು ನನ್ನ ಮನೆ" ಎಂದ ಶ್ರುತಿಯನ್ನು ಅರ್ಧದಲ್ಲೇ ನಿಲ್ಲಿಸಿ "ಅದು ನೀನು ಮದ್ವೆಯಾಗೋಕು ಮುಂಚೆ" ಎಂದರು ಜಾನಕಮ್ಮ.
"ಅಪ್ಪ ಎಲ್ಲ ಅಪ್ಪ ಅಮ್ಮನೂ ಮಕ್ಕಳು ಸಂತೋಷವಾಗಿರಬೇಕು ಅಂತ ತಾನೇ ಬಯಸೋದು. ನಾನು ಸಿದ್ಧು ಜೊತೆ ಸಂತೋಷವಾಗಿದ್ದೀನಿ. ನಮ್ಮನ್ನ ಒಪ್ಪಿಕೊಳ್ಳೋಕೆ ನಿಮಗೆ ತೊಂದ್ರೆಯಾದ್ರೂ‌ಏನು?"
"ಈಗ ನಿನ್ನಿಂದಾಗಿ ಕೀರ್ತಿ ಮದ್ವೆಗೂ‌ ತೊಂದ್ರೆಯಾಗ್ತಾ ಇದೆ. ಇದು ಸಾಕಲ್ವ . ಇನ್ನೂ‌ ಏನ್ ಆಗ್ಬೇಕು ಹೇಳು?"
"ಅಪ್ಪ ಅದು ಅವರ ಸಂಕುಚಿತ ಮನೋಭಾವಾನ ತೋರಿಸುತ್ತೆ. ಅಂಥವರ ಮನೆಗೆ ನಮ್ ಕೀರ್ತಿ ಹೋಗದೇ ಇದ್ದಿದ್ದು ಒಳ್ಳೇದೇ ಆಯ್ತು ಅಂತ ನನಗನಿಸುತ್ತೆ"
"ಎಲ್ಲಾ ನಿನ್ ಥರಾನೇ ಯೋಚ್ನೆ ಮಾಡೊಲ್ಲಮ್ಮ. ನಮ್ಮಂಥ ಸಂಪ್ರದಾಯಸ್ಥರೂ ಇರ್ತಾರೆ. ಈಗ ನಿಮ್ಮನ್ನ ಒಪ್ಪಿಕೊಂಡ್ರೆ ಹೋದ ನನ್ನ ಮಾನ ವಾಪಸ್ ಬರುತ್ತಾ?"
"ಅಲ್ಲ ನಾನು ಇಷ್ಟ ಪಟ್ಟವನನ್ನು ಮದ್ವೆಯಾದರೆ ನಿಮ್ಮ ಮಾನ ಯಾಕೆ ಹೋಗುತ್ತೆ, ಅಕಸ್ಮಾತ್ ಹೋಗಿದೆ ಅಂತ ಅಂದುಕೊಂಡ್ರೂ ನಮ್ಮನ್ನ ಒಪ್ಪಿಕೊಳ್ಳಲಿಲ್ಲ ಅಂದ್ರೆ ಅದು ವಾಪಸ್ ಬರುತ್ತಾ?"
"ನೀನೇ ಯೋಚ್ನೆ ಮಾಡು ಶ್ರುತಿ. ಮುಂದೊಮ್ಮೆ ನಿನಗೂ‌ ಒಂದು ಮಗು ಆಗುತ್ತೆ.ಅದರ ಬದುಕಿನ ಬಗ್ಗೆ ನೀನು ತುಂಬಾ ಕನಸು ಕಂಡಿರ್ತೀಯಾ. ಚಿಕ್ಕಂದಿನಿಂದ ಸಾಕಿ ಬೆಳೆಸಿದ ಆ ಮಗು ಮದುವೆ ನನ್ನ ವೈಯಕ್ತಿಕ ವಿಚಾರ. ಈ ವಿಷಯದಲ್ಲಿ  ತಲೆ ಹಾಕೋ ಹಕ್ಕು ನಿಮಗಿಲ್ಲ ಅಂತ ನಿನ್ಗಂದ್ರೆ ನಿನಗೆಷ್ಟು ನೋವಾಗೊಲ್ಲ."
"ಅಪ್ಪ ನಾನೇನೂ‌ ನಿಮಗೆ ಹೇಳದೆ ಮದುವೆಯಾಗಲಿಲ್ಲ. ಜಾತಿ ಬೇರೆ ಅನ್ನೋ ಒಂದೇ ಕಾರಣಕ್ಕೆ ನೀವು ಸಿದ್ಧಾರ್ಥನನ್ನು ತಿರಸ್ಕರಿಸಿದ್ದು ನನಗೆ ಬೇಜಾರಾಯ್ತು. ನೀವೇ ಹುಡುಕಿದ್ರೂ‌ ಸಿದ್ಧಾರ್ಥನಂಥ ಒಳ್ಳೆ ಹುಡುಗ ನನಗೆ ಸಿಗ್ತಾನೆ ಅನ್ನೋ ನಂಬಿಕೆ ನನಗಿರಲಿಲ್ಲ. ಅದಕ್ಕೆ ನಾನೆ ಮುಂದಿನ ನಿರ್ಧಾರ ತಗೋಬೇಕಾಯ್ತು.ಎಲ್ಲದರಲ್ಲೂ‌ ನಿಮ್ಮ ಮಗಳ ನಿರ್ಧಾರವನ್ನು ಸಮರ್ಥಿಸುತ್ತಾ ಇದ್ದ ನೀವು ಈ ವಿಷಯದಲ್ಲಿ ಮಾತ್ರ ಯಾಕೆ ಎದುರಾಡಿದ್ದು ಅಂತ ನಾನೂ ಕೇಳಬಹುದಲ್ವಾ..."
" ನಿನ್ನ ತಂದೆ ತಾಯಿ ಯಾವತ್ತೂ ನಿನ್ನ ಒಳ್ಳೇದನ್ನೇ ಬಯಸ್ತಾರೆ ಅನ್ನೋ ನಂಬಿಕೆ ನಿನಗಿರಬೇಕಿತ್ತು "
"ನಿಮ್ಮ ಮಗಳ ನಿರ್ಧಾರವನ್ನು ಗೌರವಿಸೋ ಗುಣ ನಿಮ್ಮಲ್ಲೂ‌ ಇರಬೇಕಿತ್ತು"
 
ಶ್ರುತಿ ವಾದಕ್ಕೆ ವಾದ ಬೆಳೆಸುತ್ತಿರುವುದನ್ನು ಕಂಡು ಸಿದ್ಧಾರ್ಥ್ "ಶ್ರುತಿ, ಅವರ ಭಾವನೆಗಳ ವಿರುದ್ಧ ನಡೆದು ಅವರ ದೃಷ್ಟಿಯಲ್ಲಿ  ನಾವು ತಪ್ಪು ಮಾಡಿದ್ದೀವಿ. ಆ ತಪ್ಪಿಗೆ ಕ್ಷಮೆ ಕೇಳೋಕೆ ನಾವು ಬಂದಿರೋದೆ ಹೊರತು ವಾದ ಮಾಡೋಕಲ್ಲ. ಅಂಕಲ್, ಶ್ರುತಿ ಇವತ್ತು ನಿಮ್ ಬರ್ತ್ ಡೇ ಅಂತ ಹೇಳಿದ್ದಕ್ಕೆ ವಿಶ್ ಮಾಡೋದಿಕ್ಕೆ ನಾವು ಬಂದದ್ದೇ ಹೊರತು ನಿಮ್ಮ್ ಮನಸಿಗೆ ನೋವು ಕೊಡೊದಕ್ಕಲ್ಲ. ಅಷ್ಟಕ್ಕೂ ಈ ಜಾತಿ ಅನ್ನೋದು ನಮಗೆ ನಾವೇ ಹಾಕಿಕೊಂಡಿರೋ ಬೇಲಿ. ಜಾತೀಯತೆ ಅಳಿಸಬೇಕು ಅಂತ ಹೋರಾಡಿದ ಬಸವಣ್ಣನವರ ಹಿಂಬಾಲಕರದ್ದೇ ಒಂದು ಜಾತಿ ಅಂತ ಮಾಡಿದವರು ನಾವು. ಆವಾಗಿನಿಂದಲೂ ಜಾತಿ ವಿರುದ್ಧ ಹೋರಾಟ ನಡೆದೆ ಇದ್ರೂ‌ ಅಂತ್ಯ ಕಂಡಿಲ್ಲ. ಜಾತಿಗಿಂತ ಮಿಗಿಲಾದದ್ದು ಗುಣ ಅಂತ ನಂಬೋರು ನಾವು.ನಿಮ್ಮಲ್ಲಿ ಆ ಒಳ್ಳೆ ಗುಣ ಇರೋದ್ರಿಂದಾನೆ ನಿಮ್ಮ ಮಗಳೂ ಗುಣವತಿಯಾಗಿರೋದು. ನಮ್ಮಮ್ಮನ ಮುದ್ದಿನ ಸೊಸೆಯಾಗಿರೋದು. ಅಂಕಲ್ ಬೇರೆ ಬೇರೆ ಜಾತಿಯವರ ನಡವಳಿಕೆ, ಜೀವನ -ಆಹಾರ ಶೈಲಿ ಬೇರೆ ಇರಬಹುದು ಆದರೆ ಪ್ರೀತಿ ಇದೆಲ್ಲಕ್ಕೂ ಮಿಗಿಲಾದದ್ದು. ಪ್ರೀತಿ ಹೊಂದಾಣಿಕೆಯನ್ನೂ ಕಲಿಸುತ್ತೆ ಅಲ್ವಾ. ನಮ್ಮ ಮನೆಯವರು ನಮ್ಮಿಬ್ಬರನ್ನೂ ನಿಮ್ಮನ್ನೂ ಒಪ್ಪಿಕೊಂಡಿದ್ದಾರೆ. ಅದೇ ವಿಶಾಲ ಮನೋಭಾವ ನಿಮ್ಮಲ್ಲೂ ಬಯಸ್ತೀವಿ ಅಷ್ಟೇ. ನಾವು ನಿಮ್ಮಿಂದ ಪ್ರೀತಿ ಬಿಟ್ರೆ ಬೇರೇನನ್ನೂ ಬಯಸೊಲ್ಲ. ಇನ್ನೂ‌ ನಿಮ್ಮ ಮನಸ್ಸು ಬದಲಾಗಿಲ್ಲ ಅಂದ್ರೆ ನಾವು ಇಲ್ಲೇ ಇದ್ದು ನಿಮ್ಮ ಸಮಯವನ್ನೂ‌ ಹಾಳು ಮಾಡೋಲ್ಲ. ನಾವಿನ್ನು ಬರ್ತೀವಿ ಅಂಕಲ್.ನಿಮ್ಮ ಕೋಪ ಇಳಿದ ಮೇಲೆ ನೀವು ಮತ್ತೆ ನಮ್ಮನ್ನ ಕರೀತೀರಿ ಅಂತ ಅಂದುಕೊಳ್ತೀನಿ. ಕರೆಯಲಿಲ್ಲ ಅಂದ್ರೂ‌ ಮತ್ತೊಮ್ಮೆ  ಬರ್ತೀವಿ. ನಿಮ್ ಮನಸ್ಸಿಗೆ ನೋವುಂಟು ಮಾಡೋಕಲ್ಲ. ನಿಮ್ ಮನಸಲ್ಲಿ ನಮ್ಮ ಬಗ್ಗೆ ಪ್ರೀತಿ ಹುಟ್ಟಿಸೋದಕ್ಕೆ. ಹ್ಯಾಪಿ ಬರ್ತ್ ಡೇ ಅಂಕಲ್" ಇಷ್ಟನ್ನು ಹೇಳಿ ಸಿದ್ಧಾರ್ಥ್ ತನ್ನ ಪಾಡಿಗೆ ತಾನು ಹೊರ ನಡೆದ."ಮತ್ತೆ ಕರೀತೀರಾ ಅಲ್ವಾ ಅಪ್ಪ"ಎಂದು ಹೇಳಿ ಶ್ರುತಿ ಕೂಡ ಅವನನ್ನು ಹಿಂಬಾಲಿಸಿದಳು.ಜಾನಕಮ್ಮ-ರಾಮಪ್ಪನವರ ಮನೆ ಮನದಲ್ಲಿ ಮೌನ ಆವರಿಸಿತ್ತು. ಸಂಜೆಯಾಯ್ತು ದೀಪ ಹಚ್ತೀನಿ ಅಂತ ಕೀರ್ತಿ ಮುಖ ತೊಳೆಯಲು ಹೊರಟಳು.
 
*****
 
ವಾರ ಕಳೆದರೂ‌ ಕೀರ್ತಿಯಿಂದ ಯಾವುದೇ ಕರೆ ಬಾರದಿದ್ದಾಗ ಕೀರ್ತಿಯನ್ನೂ‌ ನನ್ನಿಂದ ಅಪ್ಪ ದೂರ ಮಾಡುತ್ತಿರುವರೇ ಎಂದೆನಿಸಿದರೂ ಆ ರೀತಿಯಿರಲಾರದು ಎಂದೆನಿಸಿ ತಾನೇ ಆಫೀಸಿನಿಂದ ಬಂದ ಮೇಲೆ ಬಿಡುವಾದಾಗ ಕರೆ ಮಾಡಬೇಕೆಂದುಕೊಂಡು ಶ್ರುತಿ ತಿಂಡಿ ತಯಾರಿಸಲು ತರಕಾರಿ ಹೆಚ್ಚುತ್ತಿರುವಾಗ ಅವಳ ಮೊಬೈಲ್ ರಿಂಗಾಯಿತು. ಸ್ಕ್ರೀನ್ ಮೇಲೆ ಕೀರ್ತಿಯ ನಂಬರ್ ಕಂಡ ಕೂಡಲೇ ಸಂತೋಷದಿಂದ ರಿಸೀವ್ ಮಾಡಿದಳಾದರೂ‌ ಏನು ವಿಷಯವೋ ಎಂದು ಹಿಂಜರಿಯುತ್ತಲೇ "ಹಲೋ" ಎಂದಳು. ಅತ್ತ ಕಡೆಯಿಂದ ರಾಮಪ್ಪ "ಶ್ರುತಿ , ಇವತ್ತು ಸಂಜೆ ನಿನ್ನ ತಂಗಿಯನ್ನು ನೋಡೋಕೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ನೀನು ನಿಮ್ಮೆಜಮಾನ್ರು ಸ್ವಲ್ಪ ಮುಂಚೇನೆ ಬರ್ತೀರಲ್ವಾ?" ಎಂದಾಗ ತಾನು ಆಫೀಸಿಗೆ ಹೋಗುವುದನ್ನೂ‌ ಬಿಟ್ಟು ತವರಿಗೆ ಹೊರಟಳು ಶ್ರುತಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮವಾದ ಬರವಣಿಗೆ. ಬಹುಶ: ಈ ಕತೆ ನಿಮ್ಮ ಅನುಭವವಾಗಿರುತ್ತದೆ! ನಾನು ಕತೆಯಲ್ಲಿನ ಶ್ರುತಿಯಂತೆ, ಪ್ರೇಮ ವಿವಾಹವಾಗಿದ್ದೇನೆ, ನಿಮ್ಮ ಕತೆಯ ಕೊನೆಯ ಸಾಲಂತೆ ನನಗೂ ನನ್ನ ಮನೆ ಇಂದ ಸೊಸೆಯನ್ನು ಕರೆದುಕೊಂಡು ಬಾರೋ ಎಂಬೊಂದು ಅನಿರೀಕ್ಷಿತ ಫೋನ್ ಕಾಲ್ ಬರಲಾರದೆ ಎಂದು ೫ ವರುಷಗಳಿಂದ ಕಾಯುತ್ತಿದೇನೆ! ಎಂದು ಬರುವುದೋ ನಾ ತಿಳಿಯೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ ಇದು ನನ್ನ ಅನುಭವವಲ್ಲ... ಆದರೆ ನಿಮ್ಮ ಬಯಕೆಯಂತೆ ನಿಮಗೆ ಆ ಕರೆ ಬೇಗ ಬರಲಿ ಎಂದು ಆಶಿಸುತ್ತೇನೆ... ಆದ್ರೆ ಹತ್ತಿರವಾಗುವ ಪ್ರಯತ್ನ ನಿಮ್ಮ್ ಕಡೆಯಿಂದ ಕೂಡ ಇರಲಿ... ಸಂಬಂಧ ಬೆಸೆಯಲು, ಬೆಳೆಯಲು ಇಬ್ಬರೂ‌ ಆ ಸಂಬಂಧದ ಎಳೆಯೊಳಗೊಂದಾಗಬೇಕು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ ಅವರೇ ಕಥೆ ಸೊಗಸಾಗಿದೆ ... ಕಥೆಗಿಂತಲೂ ನಿರೋಪಣೆಯ ಶೈಲಿ ಇಷ್ಟವಾಯಿತು ... ಆಡು ಭಾಷೆಯಲ್ಲಿನ ಓದಿಸಿಕೊಂಡು ಹೋಯಿತು ... "ಐಬು" ಅನ್ನೊ ಪದ ಕೇಳಿ ತುಂಬಾ ದಿನವಾಗಿತ್ತು :‍) <<"ಏನಾದ್ರೂ‌ ಮಾತಾಡಿದ್ರೆ ಇನ್ನೆಲ್ಲಿ ಮಗಳು ಮತ್ತು ಯಜಮಾನರು ಊಟ ಬಿಟ್ಟು ಏಳುತ್ತಾರೋ ಅಂತ ಜಾನಕಮ್ಮನವರೂ ತಮ್ಮ ಪಾಡಿಗೆ ತಾವು ಊಟ ಮಾಡಿ ಮುಗಿಸಿದರು">> ಅಮ್ಮ ಎಷ್ಟೇ ಆದರೂ ಅಮ್ಮ ಅನ್ನೋದು ನಿಜ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತೆ ತುಂಬಾ ಚೆನ್ನಾಗಿದೆ ಹಾಗೆ ಅಂತ್ಯ ಕೂಡ ಆದರೆ ಕಡೆಯಲ್ಲಿ ತಂದೆ ತಾಯಿಯಲ್ಲಿ ಕಂಡುಬಂದ ಬದಲಾವಣೆಯ ಹಿನ್ನಲೆ ತಿಳಿಸಿದ್ದರೆ ಕತೆ ಪೂರ್ಣ ಅನಿಸುತ್ತಿತ್ತೇನೊ. ಇದು ನನ್ನ ಅನಿಸಿಕೆ ಮಾತ್ರ. ವಂದನೆಗಳೊಡನೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>ಒಂದು ದೊಡ್ಡ ಕನಸನ್ನು ನನಸಾಗಿಸುವತ್ತ ಸಾಗ್ತಾ ಇದ್ದೀನಿ... ಸಧ್ಯಕ್ಕೆ ಇಷ್ಟೇ ನನ್ನ ಬಗ್ಗೆ ನನಗೆ ಗೊತ್ತಿರೋದು... ಇನ್ನು ಹೆಚ್ಚು ಗೊತ್ತಾದಾಗ ಇಲ್ಲಿ ಬರೀತೀನಿ :) ----------------------------- ಇಂದುಶ್ರೀ ಅವ್ರೆ- ನಿಮ್ಮ ಸ್ವವಿವರ-ಪರಿಚಯ ಓದಿದೆ.... ೩ ವರ್ಷ -ನೀವ್ ಸಂಪದ ಸೇರಿ, ನಿಮ್ಮ ಆ ದೊಡ್ಡ ಕನಸು ಈಡೇರಿತ? ಇಲ್ಲವಾದರೆ ಅದು ಶೀಘ್ರ ಈಡೇರಲೀ... ನನ್ನ ಶುಭಾಷಿಸ್ಸುಗಳೂ ಸದಾ................. ಇದನ್ನ ಆಗಲೇ ನಾ ಓದಿದ್ದರೂ ಸಂಪದ ನಿರ್ವಹಣೆಯಲ್ಲಿದುದರಿಂದ ಈಗ ಪ್ರತಿಕ್ರಿಯಿಸುತ್ತಿರುವೆ... ಬರಹ ಮತ್ತು ಕವನ ಎರಡನ್ನೂ ಭಲೇ ಸೊಗಸಾಗಿ ಬರೆವಿರಿ.. ಆದಾಗಲೇ ನಿಮ್ಮ ಬರಹವೊಂದಕ್ಕೆ ನಾ ಪ್ರತಿಕ್ರಿಯಿಸಿರುವೆ... ಈ ಬರಹವೂ ನನಗೆ ಬಹು ಹಿಡಿಸಿತು... ಮೊದಲಿಗೆ ಸಿಟ್ ತೋರಿದರೂ ಆಮೇಲೆ ಕಾಲ ಕ್ರಮೇಣ ಅದನ್ನು ಮರೆತು ತಮ್ಮಗಳನ್ನ ಮನೆಗೆ ಆಹ್ವಾನಿಸಿದ ರೀತಿ ಹಿಡಿಸಿತು. ಅಳಿಯ ಮಾವನ ಮನೆಗೆ ಬಂದಾಗ ಆಡಿದ ಮಾತುಗಳು ಅರ್ಥಪೂರ್ಣ .... ಮೊದಲಿಗೆ ಕಥೆ ಓದಿ ಮನ ಭಾವುಕ ಆದರೂ ಕೊನೆಗೆ ಅಂತ್ಯ ಖುಷಿ ಕೊಟ್ಟಿತು..... ಸಂಜೆಯಲ್ಲಿ ಈ ಬರಹ ಓದಿ ಮನ ಮುದಗೊಂಡಿತು.... ಈ ಸಂಜೆ ಆಹ್ಲಾದಕರ ಅನ್ನಿಸಿತು... ನಿಮ್ಮಿಂದ ಮತ್ತಸ್ತು ಬರಹ ನಿರೀಕ್ಷಿಸುತ್ತಾ ಹಾಗೆಯೇ ಈ ಬರಹಕ್ಕೆ ಬಂದ ಹರೀಶ್ ಅವ್ರ ಪ್ರತಿಕ್ರಿಯೆ ಓದಿದೆ, ಅವರು ಆಶಿಸಿದ್ದು ಶೀಘ್ರ ಈಡೇರಲಿ ***********ಶುಭವಾಗಲಿ***************
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಕಥೆ ಬರೆಯುವಲ್ಲಿ ನನ್ನ ಮೊದಲ ಪ್ರಯತ್ನ... ಬರೆದು ಸುಮಾರು ತಿಂಗಳುಗಳಾದರೂ ಪ್ರಕಟಿಸುವ ಧೈರ್ಯ ಸಾಲದೇ google docsನಲ್ಲೇ ಇದ್ದು ಈಗ ಪ್ರಕಟಣೆ ಕಂಡಿದೆ... ಮೆಚ್ಚಿದ ಎಲ್ಲರಿಗೂ ನನ್ನ ಧನ್ಯವಾದಗಳು :) @ ಸಪ್ತಗಿರಿವಾಸ ಸಂಪದಕ್ಕೆ ಸೇರಿ ೩ ವರ್ಷವಾದರೂ ನನ್ನ್ ದೊಡ್ಡ ಕನಸನ್ನು ನನಸಾಗಿಸುವತ್ತ ಸಾಗ್ತಾ ಇರೋದು ಕಳೆದ ಕೆಲವು ತಿಂಗಳಿಂದ ಮಾತ್ರ... ಕನಸನ್ನ ಹಂಚಿಕೊಂಡ್ರೆ ಅದು ನಿಜ ಆಗೊಲ್ಲ ಅಂತ ಒಂದು (ಮೂಢ) ನಂಬಿಕೆ. ಹಾಗಾಗಿ ಕನಸು ನನಸಾದ ಮೇಲೆ ನನ್ನ ಸ್ವವಿವರದಲ್ಲೇ ಪ್ರಕಟಿಸುತ್ತೇನೆ.... ಹಾಗೆಯೇ ನಿಮ್ಮ ಶುಭ ಹಾರೈಕೆಗಳಿಂದ ನನ್ನ ಕನಸು ಬೇಗ ಕೈಗೂಡಲಿ ಎಂಬುದು ಇನ್ನೊಂದಾಸೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲ ಪ್ರಯತ್ನವೆಂದಿದ್ದೀರಿ. ಹಾಗೆ ಅನ್ನಿಸಲಿಲ್ಲ. ಚೆನ್ನಾಗಿದೆ. ಶುಭವಾಗಲಿ, ಇಂದುಶ್ರೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆ ಸೊಗಸಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.