ಇರುವುದೆಲ್ಲವ ಬಿಟ್ಟು ..

1


ಪದವಿ ತರಗತಿಯಲ್ಲಿ ಓದುತ್ತಿರುವಾಗ ಇಂಗ್ಲೀಷ್ ಪ್ರಾಧ್ಯಾಪಕರೊಬ್ಬರು ಹೇಳಿದ ಮಾತು, ನಾವು ಇಷ್ಟ ಪಟ್ಟ ಯಾವುದೇ ವಸ್ತು ನಮ್ಮ ಕೈಗೆ ಸಿಗಬಾರದು, ಸಿಗುತ್ತದೆ.. ಈಗ ಸಿಗುತ್ತದೆ.. ಅಂದುಕೊಂಡು ಸಂಭ್ರಮ ಪಡುತ್ತಿರುವಾಗಿನ ಸಂತೋಷ ಅದು ನಮ್ಮ ಕೈಗೆ ಬಂದ ಮೇಲೆ ಇರೋದಿಲ್ಲ! ಸಂಭ್ರಮದ ಕ್ಷಣಗಳೂ ಹಾಗೆಯೇ ಆ ಒಂದು ಘಳಿಗೆಯನ್ನು ನಾವು ಪಡೆದೆವೆಂದರೆ ಅದರಲ್ಲಿನ ಉತ್ಸಾಹವೇ ಹೊರಟು ಬಿಡುತ್ತದೆ. ಅಂದು ತರಗತಿಯಲ್ಲಿ ಹೇಳುವಾಗ ಸುಲಭವಾಗಿ ಅರ್ಥವಾಗಲೆಂದು ಮದುವೆಯ ಉದಾಹರಣೆಯನ್ನು ನೀಡಿದ್ದರು. ಎಲ್ಲರ ಜೀವನದಲ್ಲೂ ಮದುವೆ ಅನ್ನೋದು ಸಂಭ್ರಮದ ಕ್ಷಣ. ಮದುವೆ ನಿಶ್ಚಿತವಾದ ಮೇಲಂತೂ ಎರಡೂ ಕುಟುಂಬಗಳಿಗೂ ಇರುವ ಸಂತೋಷ, ಸಂಭ್ರಮ, ಗಡಿಬಿಡಿ, ಹೇಳತೀರದು. ಅದೆಷ್ಟು ಫೋನ್ ಕಾಲ್ ಗಳು, ಹಿರಿಯರ ಭೇಟಿ-ಮಾತುಕಥೆ ಹೀಗೆ ಒಂದೇ ಎರಡೇ ಪ್ರತಿದಿನವೂ ಹಲವಾರು ರೀತಿಯ ಕೆಲಸಗಳು. ಮದುವೆ ಮಾಡಿಕೊಳ್ಳುವವರಿಗಂತೂ ಯಾವಾಗ ಆ ದಿನ ಬರುತ್ತದೆ ಎಂಬ ಕಾತುರ. ಆದರೆ ಒಮ್ಮೆ ಮದುವೆ ಮುಗಿದು ಹೋಯಿತೆಂದರೆ ನಂತರದ ದಿನಗಳಲ್ಲಿ ಆ ಗದ್ದಲ, ಸಂಭ್ರಮ ಇರುವುದಿಲ್ಲ, ಎಂದಿದ್ದರು. ಆಗಿನ ಸಂದರ್ಭದಲ್ಲಿ ಹಾಗಾದರೆ ಗಣಪತಿಯ ಮದುವೆ ತರಹ ಆಗಬೇಕಾಗತ್ತೆ ಸರ್ ಎಂದು ಹೇಳಿ ತರಗತಿಯಲ್ಲಿ ನಕ್ಕಿದ್ದೆವಾದರೂ ಇಂದು ಹಲವಾರು ಸಂದರ್ಭಗಳಲ್ಲಿ ಆ ಮಾತಿನ ನಿಜ ಅರಿವಾಗುತ್ತಿದೆ. ಆ ಕ್ಷಣಕ್ಕಾಗಿ ಇರುವ ತುಡಿತ ಇದೆಯಲ್ಲಾ ಅದು ನಿಜವಾದ ಸಂಭ್ರಮ.  

ಇತ್ತೀಚೆಗೆ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾಗ ಮೂರು ವರ್ಷದ ಮಗುವೊಂದು ಆಟದ ವಸ್ತು ಬೇಕೆಂದು ಒಂದೇ ಸಮನೆ ಅಳುತ್ತಿತ್ತು. ಮನೆಯಲ್ಲಿರುವ ಸುಮಾರು ದೊಡ್ಡ ದೊಡ್ಡ ಆಟದ ವಸ್ತುಗಳಿರುವ ಮೂಟೆಯನ್ನು ತಂದು ಅದರ ಎದುರು ಸುರುವಿದರೂ ಆ ಮಗು ಅಳು ನಿಲ್ಲಿಸಲಿಲ್ಲ. ಕಾರಣ ಪಕ್ಕದ ಮನೆಯ ಮಗುವಿನ ಜತೆ ಇದ್ದ ಪುಟ್ಟ ಸೈಕಲ್ ತನಗೆ ಬೇಕೆಂದು ಹಠ ಹಿಡಿದಿತ್ತು. ತನ್ನ ಮನೆಯಲ್ಲಿ ಅದಕ್ಕಿಂತ ಸುಂದರವಾದ ಬಗೆಬಗೆಯ ಆಟದ ವಸ್ತುಗಳಿದ್ದರೂ ಆ ಕ್ಷಣದಲ್ಲಿ ಅದಕ್ಕೆ ಬೇಕಾಗಿರಲಿಲ್ಲ. ಆಗ ನೆನಪಾದುದು ಅಡಿಗರ ಮಾತು-"ಇರುವುದೆಲ್ಲವ ಬಿಟ್ಟು..ಇರದುದರೆಡೆಗೆ ತುಡಿವುದೇ.." ಒಂದು ಹೊತ್ತು ಸಮಾಧಾನಿಸುವುದಕ್ಕಾಗಿ ಆ ವಸ್ತವನ್ನು ಅಳುತ್ತಿರುವ ಮಗುವಿನ ಕೈಗೆ ಕೊಟ್ಟಿದ್ದಾದರೂ, ಕೇವಲ ಎರಡೇ ನಿಮಿಷ ! ಆ ಸೈಕಲ್ ನ್ನು ದೂರ ತಳ್ಳಿ ಸಾಗಿತ್ತು.

ಹೌದು, ಈ ತುಡಿತ ಬಾಲ್ಯದಿಂದಲೇ ನಮ್ಮನ್ನು ಕಾಡುವಂತಾದ್ದು. ಮನೆಯಲ್ಲಿ ಹಿರಿಯರು ಯಾವ ಕೆಲಸವನ್ನು ಮಾಡಬೇಡ ಅಂತಾರೋ ಅದನ್ನೇ..ಮಾಡಿದರೆ ಏನಾಗುತ್ತದೆ ಎಂಬ ಕೆಟ್ಟ ಕುತೂಹಲ, ತನ್ನಲ್ಲಿರುವ ಮೊಬೈಲ್ ಸೆಟ್ ಎಷ್ಟೇ ಚೆನ್ನಾಗಿದ್ದರೂ ನವೀನ ಮಾದರಿಯ ಮೊಬೈಲ್ ನ್ನು ಇನ್ನೊಬ್ಬರ ಕೈಯಲ್ಲಿ ನೋಡಿದಾಗ ಅಂತಹುದನ್ನೇ ಕೊಂಡುಕೊಳ್ಳಬೇಕೆಂಬ ಬಯಕೆ ಮನದಲ್ಲಿ ಮೂಡುವುದು, ಹೀಗೆ ಯಾವುದೇ ಒಂದು ಚೆಂದದ ವಸ್ತುವನ್ನು ಕಂಡಾಗ ಅದನ್ನು ತನ್ನದಾಗಿಸಿಕೊಳ್ಳಬೇಕೆಂಬ ತವಕ.

ಉದ್ಯೋಗವಿಲ್ಲದೆ ಅಲೆದಾಡುತ್ತಿರುವವರು  ಯಾವುದಾದರೊಂದು ಉದ್ಯೋಗ ಸಿಗುವಂತೆ ಮಾಡು ದೇವರೆ ಈ ಕಷ್ಟದಿಂದ ಪಾರು ಮಾಡು ದೇವರೆ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿರುತ್ತಾರೆ. ಆದರೆ ಕೆಲವೊಂದು ಸಾರಿ ಉದ್ಯೋಗಸ್ಥರು ಯಾಕಾದರೂ ಈ ಪರಿಯ ಕೆಲಸವೋ ಮನೆಯಲ್ಲೇ ಆರಾಮಾಗಿದ್ದುಬಿಡಬಹುದಿತ್ತು ಅನ್ನುತ್ತಿರುತ್ತಾರೆ. ಒಬ್ಬ ಇರದುದರತ್ತ ತುಡಿಯುವುದು, ಇನ್ನೊಬ್ಬ ಇದ್ದುದನ್ನು ಹಳಿಯುವುದು. ಮನುಷ್ಯನ ಸ್ವಭಾವವೇ ಹಾಗೆ..ಕೊನೆಗೆ ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅನ್ನುವುದು.
ಈ ಬರಹಕ್ಕೆ ಕಾರಣ ಇತ್ತೀಚೆಗೆ ನನ್ನ ಆತ್ಮೀಯರೊಬ್ಬರು ಹೊಸ ಮೊಬೈಲ್ ಕೊಂಡುಕೊಂಡರು. ಅದು ಅವರ ಸುಮಾರು ವರ್ಷಗಳ ಕನಸಾಗಿತ್ತು. ಹಿಂದೆ, ಮಾತನಾಡಲು ಅನುಕೂಲ ಇದ್ದರೆ ಸಾಕು ಮೊಬೈಲ್, ಉಳಿದವನ್ನೆಲ್ಲಾ ನೋಡಿಕೊಂಡಿರಲು ಬಿಡುವಾದರೂ ಎಲ್ಲಿದೆ? ಅದನ್ನು ಉಪಯೋಗಿಸುವವರಾದರೂ ಯಾರು? ಎನ್ನುತ್ತಿದ್ದವರು ಇಂದು ನವೀನ ಮಾದರಿಯ "ಸ್ಯಾಮ್ಸಂಗ್ ಗೆಲಾಕ್ಸಿ" ಯನ್ನು ತೆಗೆಯಬೇಕೆಂದು ಹೇಳುತ್ತಲೇ ಇದ್ದರು. ಹತ್ತುದಿನಗಳ ಹಿಂದೆ ಅದು ಅವರ ಕೈ ಸೇರಿತ್ತು. ಅದರಲ್ಲಿರುವ ಸೇವೆಗಳನ್ನು ನೋಡಿ ಮೆಚ್ಚಿಕೊಂಡಿದ್ದರಾದರೂ ಕೈಗೆ ಸಿಕ್ಕ ಮೇಲೆ ಯಾಕೋ ತನ್ನ ಹಳೆಯ ಮೊಬೈಲೇ ವಾಸಿ ಅನ್ನತ್ತಿದ್ದರು. ತಾನು ಹೊಸ ಮೊಬೈಲ್ ಕೊಂಡುಕೊಳ್ಳುವ ಮೊದಲು ಇದ್ದ ಉತ್ಸಾಹ, ಸಂಭ್ರಮ ಅವರಿಂದ ಬಹುದೂರ ಹೊರಟುಹೋಗಿತ್ತು.
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ, ಇರುವುದರಲ್ಲಿ ಸುಖ ಕಾಣದವರು ನಾವು! ಚೆನ್ನಾಗಿದೆ, ಮಮತಾರವರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.