ಆಶಯ

5

 

ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು 
ಅನುಸರಿಸಿ ನಡೆದೇವು ಸಾಧನೆಯ ಮಾಡೇವು

ಹೆತ್ತವರ ಪೋಷಕರ ಪ್ರೀತಿಯಲಿ ಬೆಳೆದಿಹೆವು 
ಬಂಧುಗಳ ಸ್ನೇಹಿತರ ವಿಶ್ವಾಸ ಸವಿದಿಹೆವು
ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು
ಎಲ್ಲರನು ನೆನೆದೇವು ಎಲ್ಲರಿಗೆ ನಮಿಸೇವು

ಸ್ವಂತಿಕೆಯ ಮೆರೆದಿರುವ ಪೂರ್ವಜರ ನೆನೆದೇವು
ಬಾಳಿಗೊಂದು ದಿಸೆಯನಿತ್ತ ಚೇತನಕೆ ಬಾಗೇವು
ಸಾಧಕರ ಪಥವಿಹುದು ತೆರೆದಿರುವ ಹಾದಿಯದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಗೆದ್ದು ನಗೆಯ ಬೀರೇವು

ಬರಿಗೈಲಿ ಬಂದವರು ಸಂಪದವ ಪಡೆದಿಹೆವು
ಅಶನ ವಸನ ಸೂರನಿತ್ತ ಭೂತಾಯಿಗೆ ಮಣಿದೇವು
ದುಷ್ಟತನವ ಮೆಟ್ಟೇವು ಶಿಷ್ಟತನವ ಮೆರೆದೇವು
ಮನುಜಪಥದಿ ನಡೆದೇವು ದೇಶಕಾಗಿ ಮಡಿದೇವು 
*********************
-ಕ.ವೆಂ.ನಾಗರಾಜ್.
 
ಮನವಿ:
ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಹಾಸನದಲ್ಲಿ 25-12-2011ರಂದು ನಡೆಯಲಿದ್ದು, ಇದನ್ನು ಸಮಾವೇಶದ ಹಾಡಾಗಿ ಹಾಡಿಸುವ ಸಲುವಾಗಿ ರಚಿಸಿದೆ. ಪದಗಳ ಬಳಕೆ ಸರಿಪಡಿಸಲು, ಪ್ರಾಸಬದ್ಧಗೊಳಿಸಲು ಮತ್ತು ಇದನ್ನು ಉತ್ತಮಗೊಳಿಸಲು ಸಂಪದಿಗರು ಕೈಜೋಡಿಸಬಹುದು, ಸಲಹೆ ಕೊಡಬಹುದು. ಸಮಾವೇಶ ಗೀತೆ ಸಮೂಹದಿಂದಲೇ  ರಚಿತವಾಗಲಿ!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವಿಗಳೆ, ನಿಮ್ಮ ಆಶಯ ಚೆನ್ನಾಗಿ ಮೂಢಿ ಬಂದಿದೆ. ನಿಮಗೆ ಹೇಳುವಷ್ಟು ದೊಡ್ಡವನಲ್ಲ, ಆದರೂ ಆಶಯಕ್ಕೆ ಸ್ವಲ್ಪ ಭಂಗ ಬರಬಹುದೇನೋ ಈ ಪಂಕ್ತಿಯ ಕಡೆಯ ಸಾಲು ಎನ್ನುವುದು ನನ್ನ ಅನುಮಾನ. <<ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು ಎಲ್ಲರನು ನೆನೆದೇವು ಎಲ್ಲರಿಗೆ ನಮಿಸೇವು>> ಇಲ್ಲಿ ಪ್ರಾಸವೇನೋ ಸರಿ ಆದರೆ ಎಲ್ಲರನು ನೆನದೇವು, ಎಲ್ಲರಿಗೆ ನಮಿಸೇವು ಅನ್ನುವುದನ್ನು ಸ್ವಲ್ಪ ಅನುಮಾನದಿಂದ ಹೇಳಿದಂತಿದೆ ಎನ್ನುವುದು ನನ್ನ ಅನಿಸಿಕೆ. ಎಲ್ಲರನು ನೆನೆಯುವೆವು, ಎಲ್ಲರಿಗೆ ನಮಿಸುವೆವು ಎಂದರೆ ಚೆನ್ನಾಗಿತ್ತೇನೋ? ಆದರೆ ಇದರಿಂದ ಪ್ರಾಸಕ್ಕೆ ತ್ರಾಸವಾಗ ಬಹುದೇನೋ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೇ, ನಿಮ್ಮ ಅನಿಸಿಕೆ ಸರಿಯಿರಬಹುದು. ಮಿತ್ರ ಹರಿಹರಪುರ ಶ್ರೀಧರರ ಅಭಿಪ್ರಾಯವೂ ಇದೇ ಆಗಿದೆ. ಇತರ ಮಿತ್ರರ ಸಲಹೆಗಳನ್ನೂ ಸ್ವೀಕರಿಸಿ ಅಂತಿಮಗೊಳಿಸುವೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆಶಯವೇ ನಮ್ಮ "ಆಶಯ" ನಾಗರಾಜ್ ರವರೇ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಧನ್ಯವಾದ, ಸತೀಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.