ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ

4.75

ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ
ಚೆಲುವೆ ಮಾಯವ್ವ ಎಂಥ ಮಕ್ಕಳ ಹೆತ್ತಿ | || ಪ ||

ಸುಖವು ಸಿಕ್ಕುವುದೆಂದು ಕುಣಿಸುವನು ಒಬ್ಬ
ವಿವೇಕವನೆ ಮರೆಸಿ ತುಳಿಯುವವನೊಬ್ಬ
ಕೂಡಿಡುವ ಕಟಪವನು ಕಲಿಸುವವನೊಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಹಾಳವ್ವ || ೧ ||

ನನದೆಂಬ ಭಾವವನು ಮೂಡಿಸುವನೊಬ್ಬ
ಸೊಕ್ಕಿನಿಂ ಮೆರೆಯೆನುತ ಉಬ್ಬಿಸುವನೊಬ್ಬ
ಉರಿವ ಒಡಲಿಗೆ ತುಪ್ಪ ಹಾಕುವನು ಒಬ್ಬ
ಒಬ್ಬೊಬ್ಬರೇ ಸಾಕು ನರಬಾಳು ಗೋಳವ್ವ || ೨ ||

ಅರಿಗಳಾರೆನಿಸಿ ಜಗದಿ ಮೆರೆದಿಹರವ್ವ್ವ
ಒಬ್ಬರಿಗೆ ಒಬ್ಬರು ಜೊತೆಯಾಗಿ ಇಹರವ್ವ
ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ
ಮೋಹಿನಿ ಮಾಯವ್ವ ನಿಷ್ಕರುಣಿ ನೀನವ್ವ || ೩ ||

ಕಾಮ ಕ್ರೋಧಗಳು ಹಾಳು ಮಾಡಿದವವ್ವ
ಮದ ಮಚ್ಚರಗಳು ಚೂರಿ ಹಾಕಿಹವವ್ವ
ಲೋಭ ಮೋಹಗಳು ತುಳಿದಿಹವು ಕಾಣವ್ವ
ಎಷ್ಟು ಕಾಡುತಿಯವ್ವ ದೇವರೇ ದಿಕ್ಕವ್ವ || ೪ ||

*************
-.ಕವೆಂ.ನಾಗರಾಜ್.
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅರಿಷಡ್ವರ್ಗಗಳ ಮಾಯಾ ಪಾಶದ ಬಗೆಗಿನ ಪದ್ಯ ಸೊಗಸಾಗಿ ಮೂಡಿಬಂದಿದೆ >> ಶೂರಾಧಿಶೂರರೇ ಮಣ್ಣು ಮುಕ್ಕಿಹರವ್ವ << ನಿಜ, ಇವನ್ನು (ಅರಿಷಡ್ವರ್ಗಗಳನ್ನು) ಜಯಿಸುವುದು ಕಷ್ಟ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅನಿಸಿಕೆಗೆ ಧನ್ಯವಾದ, ಸತೀಶರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೇ ಮೊದಲಿಗೆ ನೀವು ಯಾರ ಬಗ್ಗೆ ಬರೆದದ್ದು? ಯಾರು ಆ ೬ ಮಕ್ಕಳನ್ನು ಹೆತ್ತ ತಾಯಿ ಯಾರು ಅಂತೆಲ್ಲಾ ಯೋಚಿಸಿದೆ ,.... ಆಮೇಲೆ ಬರಹ ಓದಿ ಮತ್ತು ಸತೀಶ್ ಅವ್ರ ಪ್ರತಿಕ್ರಿಯೆ ಗಮನಿಸಿದ ಮೇಲೆ ನೀವು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಗ್ಗೆ ಹೇಳಿದ್ದು ಅಂತ ತಿಳೀತು...!! ಸಖತ್.... ಅವುಗಳನ್ನು ಜಯಿಸಿದವರು- ಆಂಕೆಯಲ್ಲಿ ಇಟ್ತವರೂ ಕಡಿಮೆ ಅನ್ಸುತ್ತೆ....!! ಜೀ ಅವರ ಪ್ರತಿಕ್ರಿಯೆ ಮೂಲಕ ಇನ್ನಸ್ತು ವಿವರ ತಿಳೀಯಿತು... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳೆ, ಇತ್ತೀಚೆಗೆ ಸ್ವಾಮಿ ಸೋಮನಾಥಾನಂದರು ಬರೆದಿರುವ ಭಗವತ್ ಪ್ರೇಮ ಎನ್ನುವ ಚಿಕ್ಕ ಪುಸ್ತಕವನ್ನು ತಿರುವಿ ಹಾಕುತ್ತಿದ್ದೆ. ಅದರ ಪೀಠಿಕೆಯಲ್ಲಿ ಅವರು ಆದಿ ಶಂಕರಾಚಾರ್ಯ ವಿರಚಿತ ವಿವೇಕಚೂಡಾಮಣಿಯ ಶ್ಲೋಕವೊಂದನ್ನು ಪ್ರಸ್ತಾವಿಸುತ್ತಾ ಅದರ ಅರ್ಥವನ್ನು ಕೊಡುತ್ತಾರೆ. ಆ ಶ್ಲೋಕದಲ್ಲಿ ಜಿಂಕೆ, ಆನೆ, ಮಿಡತೆ, ಮೀನು ಮತ್ತು ದುಂಬಿ ಇವುಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವುಗಳಿಗೆ ಆಕರ್ಷಿತವಾಗಿ ಕಷ್ಟವನ್ನು ತಂದುಕೊಳ್ಳುತ್ತವೆ. ಅದರಲ್ಲಿ ಜಿಂಕೆ ಸಿಂಹದ ಘರ್ಜನೆಯನ್ನು ಕೇಳಿ ಆ ಶಬ್ದಕ್ಕೆ ಹೆದರಿ ಮಂತ್ರಮುಗ್ದನಂತೆ ನಿಂತು ದೂರ ಓಡಿಹೋಗದೆ ಅದಕ್ಕೆ ಆಹಾರವಾಗುತ್ತದೆ. ಆನೆಯು ತನ್ನ ಕಿವಿಯ ಬಳಿ ಮಾವುತನ ಅಂಕುಶದ ಸ್ಪರ್ಶಕ್ಕೆ ಹೆದರಿ ಅವನ ದಾಸನಾಗುತ್ತದೆ. ಮಿಡತೆಯು ಕತ್ತಲಿನಲ್ಲಿ ಬೆಂಕಿಯ ರೂಪವನ್ನು ಕಂಡು ಅದರಲ್ಲಿ ಬಿದ್ದು ತನ್ನ ಪ್ರಾಣಕ್ಕೆ ಎರವಾಗುತ್ತದೆ. ಹಾಗೆಯೇ ಮೀನು ಎರೆಹುಳುವಿನ ಆಸೆಗೆ ಬೆಸ್ತನ ಗಾಳಕ್ಕೆ ಸಿಕ್ಕು ಒದ್ದಾಡುತ್ತದೆ. ದುಂಬಿಯಾದರೋ ಕಮಲದ ಸುವಾಸನೆಗೆ ಆಕರ್ಷಿತವಾಗಿ ರಾತ್ರಿಯಲ್ಲಿ ಅದರೊಳಗೆ ಬಂಧಿಯಾಗುತ್ತದೆ. ಇನ್ನು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವೆಲ್ಲವಕ್ಕೂ ಸ್ಪಂದಿಸುವ ಪಂಚೇಂದ್ರಿಯಗಳಿರುವ ಮಾನವನ ಪಾಡೇನಾಗಬೇಡ ಎಂದು ಪ್ರಶ್ನಿಸುತ್ತಾರೆ. ಅದರೊಂದಿಗೆ ಕಾಮ, ಕ್ರೋಧಾದಿ ಅರಿಷಡ್ವರ್ಗಳಿಗೆ ಸ್ಪಂದಿಸುವ ಮನಸ್ಸೂ ಕೂಡಾ ಈ ನರಮನುಷ್ಯನಿಗಿದೆ ಎಂದ ಮೇಲೆ ಅವನ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ ಎನ್ನುತ್ತಾರೆ ಸ್ವಾಮಿ ಸೋಮನಾಥನಂದರು. ನಿಮ್ಮ ಕವನ ಈ ಮೇಲಿನ ವಿಷಯವನ್ನು ಮತ್ತೆ ಜ್ಞಾಪಿಸಿಕೊಳ್ಳುವಂತೆ ಮಾಡಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾದ ಉಪಮೇಯ ಶ್ರೀಧರ್ ರವರೇ ..ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ರೀಧರರೇ. ಋಗ್ವೇದದ ಈ ಮಂತ್ರದ ಆಶಯವೂ ಇದೇ ಆಗಿದೆ: ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಂ ಉತ ಕೋಕಯಾತುಮ್| ಸುಪರ್ಣಯಾತುಂ ಉತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ|| (ಋಗ್ವೇದ.7.104.22.) ನಮ್ಮೊಳಗಿರುವ ಗೂಬೆಯ ನಡೆ (ಮೋಹ), ತೋಳನ ನಡೆ (ಕ್ರೋಧ), ನಾಯಿಯ ನಡೆ (ಮಾತ್ಸರ್ಯ), ಕೋಕಪಕ್ಷಿಯ ನಡೆ (ಕಾಮ) ಗರುಡನ ನಡೆ (ಮದ), ಹದ್ದಿನ ನಡೆ (ಲೋಭ) - ಇವುಗಳನ್ನು ಹೇ ಭಗವಂತ ಕಲ್ಲಿನಿಂದ ತಿಕ್ಕಿ ತೀಡಿಹಾಕಿಬಿಡು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರಿಷಡ್ವರ್ಗಗಳ ಬಗೆಗಿನ ಈ ಶ್ಲೋಕವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಕವಿಗಳೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೆ, ಕವಿತೆ ಬಹಳ ಬಹಳ ಬಹಳ ಚೆನ್ನಾಗಿದೆ. ಕಾಮ ಕ್ರೋಧಾದಿಗಳನ್ನು "ಅರಿ" "ಮಾಯೆ" "ಅಂಕೆಯಲ್ಲಿ ಇಡುವುದು" "ಜಯಿಸುವುದು" ...ಏನಿದೆಲ್ಲಾ? ಇದೆಲ್ಲಾ ಹೋರಾಟ ಮಾಡುವುದರಲ್ಲೇ ಜೀವನ ಕಳೆದಿರುತ್ತೇವೆ.. ದೇವರಲ್ಲಿ ಮನವನಿಡಿ...ಉಳಿದದ್ದು ತನ್ನಷ್ಟಕ್ಕೆ ಹದ್ದುಬಸ್ತಿಗೆ ಬರುವುದು. -ಅಂಡಾಂಡ ಭಂಡ ಸ್ವಾಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ದೇವರಲ್ಲಿ ಮನವನಿಡಿ...ಉಳಿದದ್ದು ತನ್ನಷ್ಟಕ್ಕೆ ಹದ್ದುಬಸ್ತಿಗೆ ಬರುವುದು<<....+100 ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗಲಿ, ಅಂಡಾಂಡ ಭಂಡರೇ. ನೀವಂದಂತೆ ಜೀವನ ಕಳೆದ ಮೇಲೇ ಇದು ಗೊತ್ತಾಗುವುದು!! ದೇವರಿದ್ದಾನೆ ಬಿಡಿ, ನೋಡಿಕೊಳ್ಳುತ್ತಾನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ದೇವರಿದ್ದಾನೆ ಬಿಡಿ, ನೋಡಿಕೊಳ್ಳುತ್ತಾನೆ. ಇದೇನು ಬೆದರಿಕೆಯೊ ? ಅಥವ ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇದೇನು ಬೆದರಿಕೆಯೊ ?.. ಬಿನ್ನಾಣಗಿತ್ತಿಯ ಏಳನೇ ಮಗು? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಗಣೇಶ, ಪಾರ್ಥರೇ, ಇರುವ ಆರು ಮಕ್ಕಳೇ ಸಾಕು. ಇನ್ನು ಏಳನೇ, ಎಂಟನೇ ಮಕ್ಕಳು ಬಂದರೆ!! ಬಿನ್ನಾಣಗಿತ್ತಿಯ ಏಳು/ಎಂಟನೇ ಮಕ್ಕಳ ಪಿತೃಗಳು ಅಂಡಾಂಡ ಭಂಡರೋ ಅಠವ ಅವರ ಶಿಷ್ಯರೋ ಇರಬಹುದು! ದೇವರ ಬೆದರಿಕೆಯನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ???
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜ ರವರಿಗೆ ವಂದನೆಗಳು " ಆರು ಮಕ್ಕಳ ತಾಯಿ ಬಿನ್ನಾಣಗಿತ್ತಿ " ಒಂದು ಅತ್ಯತ್ತಮ ಕವನ. ಕೊನೆಯ ನುಡಿಯಂತೂ ಬಹಳ ಅರ್ಥಗರ್ಭಿತ ವಾಗಿದೆ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಕೃತಜ್ಞ, ಪಾಟೀಲರೇ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಸಬದ್ಧವಾಗಿ ಕವಿತೆ ತು0ಬಾ ಚೆನ್ನಾಗಿ ಮೂಡಿಬ0ದಿದೆ....ವ0ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ವಂದನೆ, ಗೋಪಾಲರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.