ಅರಬ್ಬರ ನಾಡಿನಲ್ಲಿ -೧೮: ಆಪರೇಷನ್ ನೈಜೀರಿಯಾ!

4.8

ಅದಾಗಲೇ ಮಧ್ಯರಾತ್ರಿ ಹನ್ನೆರಡಾಗಿತ್ತು, ನಿದ್ದೆ ತುಂಬಿ ತೂಕಡಿಸುತ್ತಿದ್ದ ಕಣ್ಣುಗಳಲ್ಲೇ ಖಾಲಿ ಬಿದ್ದಿದ್ದ ಹೆಬ್ಬಾವಿನಂಥ ರಸ್ತೆಯಲ್ಲಿ ಕಾರು ಓಡಿಸುತ್ತಾ ದುಬೈನಿಂದ ಶಾರ್ಜಾಗೆ ಬರುತ್ತಿದ್ದೆ. ಆ ನಿದ್ದೆಯ ಮಂಪರಿನಲ್ಲಿಯೂ ಅವಳಾಡಿದ ಮಾತುಗಳೇ ಕಿವಿಯಲ್ಲಿ ರಿಂಗಣಿಸುತ್ತಿದ್ದವು, ಅವಳ ಧ್ವನಿಯಲ್ಲಿದ್ದ ಅಸಹಾಯಕತೆ, ಕಣ್ಣುಗಳಲ್ಲಿ ಮಡುಗಟ್ಟಿದ್ದ ಆಕ್ರೋಶ ಕಣ್ಮುಂದೆ ಸುಳಿಯುತ್ತಿತ್ತು! ಆಗೊಂದು, ಈಗೊಂದು ಭರ್ರೆಂದು ಎಡ ಬಲಗಳಿಂದ ಸಾಗಿ ಹೋಗುತ್ತಿದ್ದ ಅರಬ್ಬಿಗಳ ದೊಡ್ಡ ಕಾರುಗಳ ಆರ್ಭಟದ ನಡುವೆಯೇ ತೂಕಡಿಸುತ್ತಾ ನನ್ನ ಕಾರು ಕೊನೆಗೂ ಮನೆ ತಲುಪಿಸಿತ್ತು. ದಣಿದಿದ್ದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿತ್ತು, ಬಟ್ಟೆ ಬದಲಿಸಿ ಮಲಗಿದವನಿಗೆ ಮತ್ತೆ ಮತ್ತೆ ಅವಳಾಡಿದ ಮಾತುಗಳೇ ಮನದಲ್ಲಿ ಮಾರ್ದನಿಸಿ ನಿದ್ದೆ ಬರದೆ ಹೊರಳಾಡುವಂತಾಗಿತ್ತು.

ನೀವು ಯಾಕೆ ನಮ್ಮನ್ನು ಹೀಗೆ ನೋಡುತ್ತೀರಿ? ನಮ್ಮದು ನಿನ್ನದು ಚರ್ಮದ ಬಣ್ಣ ಒಂದೇ ಅಲ್ಲವೇ? ನಾವೂ ಮನುಷ್ಯರೇ ಅಲ್ಲವೇ? ನಮಗೆ ಮಾತ್ರ ಹೀಗೆ ಅನ್ಯಾಯ ಮಾಡಬಹುದೇ? ನಮ್ಮ ಬಳಿ ಈಗ ಊಟಕ್ಕೂ ಹಣವಿಲ್ಲ, ಇಲ್ಲಿಂದ ಬೇರೆ ಕಡೆಗೆ ಹೋಗಲು ಟ್ಯಾಕ್ಸಿಗೂ ದುಡ್ಡಿಲ್ಲ, ನಾವು ರೂಮಿನ ಬಾಡಿಗೆಗೆ ಕೊಟ್ಟ ಹಣ ಹಿಂದಿರುಗಿಸಿ ಎಂದು ಆಕೆ ದೈನ್ಯದಿಂದ ಬೇಡುತ್ತಿದ್ದರೆ ಕಲ್ಲಿನಂತೆ ನಿಂತಿದ್ದ ನನ್ನ ಮನಸ್ಸಿಗೆ ಆ ಕ್ಷಣದಲ್ಲಿ ಏನೂ ಅನ್ನಿಸಿರಲಿಲ್ಲ! ಕಂಪನಿಯ ಪಾಲಿಸಿಯಂತೆ ನಿಮಗೆ ಹಣ ಹಿಂದಿರುಗಿಸಲು ಆಗುವುದಿಲ್ಲ, ನಾಳೆ ಮಧ್ಯಾಹ್ನದವರೆಗೂ ನೀವು ರೂಮಿನಲ್ಲಿ ಉಳಿದುಕೊಳ್ಳಬಹುದು, ಆದರೆ ಯಾವುದೇ ಕಾರಣಕ್ಕೂ ನಿಮ್ಮ ರೂಮಿಗೆ ಹೊರಗಡೆಯಿಂದ ಯಾವುದೇ ಅತಿಥಿಗಳು ಬರುವುದಕ್ಕೆ ಮಾತ್ರ ಅವಕಾಶವಿರುವುದಿಲ್ಲ ಎಂದ ನನ್ನ ಖಡಕ್ ಮಾತಿನಿಂದಾಗಿ ಒಮ್ಮೆ ಕಡುಗೋಪದಿಂದ ಆಕ್ರೋಶಭರಿತರಾಗಿ ನೋಡಿದ ಆ ಮೂರು ಹೆಣ್ಣುಮಕ್ಕಳು ರೂಮ್ ಖಾಲಿ ಮಾಡಿ ಹೊರಟು ಹೋಗಿದ್ದರು! ಅವರು ದುಬೈನಲ್ಲಿ ಕೆಲಸಕ್ಕಾಗಿ ಬಂದು ಪರದಾಡಿ ಕೆಲಸ ಸಿಗದೆ ಇದ್ದಾಗ ಅನಿವಾರ್ಯವಾಗಿ ವೇಶ್ಯಾವಾಟಿಕೆಗೆ ಇಳಿದಿದ್ದ ನೈಜೀರಿಯನ್ ಹೆಣ್ಣುಮಕ್ಕಳು. ದೂರದ ಆಫ್ರಿಕಾ ಖಂಡದ ಒಂದು ಪುಟ್ಟ ರಾಷ್ಟ್ರ ನೈಜೀರಿಯಾ, ಪ್ರಾಕೃತಿಕ ಸಂಪನ್ಮೂಲಗಳಿಂದ ತುಂಬಿದ್ದರೂ, ಸಾಕಷ್ಟು ತೈಲ ಮೂಲಗಳನ್ನು ಹೊಂದಿದ್ದರೂ, ಅಲ್ಲಿನ ಅರಾಜಕತೆ ಹಾಗೂ ಬೋಕೋಹರಾಮ್ ಉಗ್ರರ ಹಾವಳಿಯಿಂದಾಗಿ ಸಾಮಾನ್ಯ ಜನರ ದೈನಂದಿನ ಬದುಕು ಎಕ್ಕುಟ್ಟಿ ಹೋಗಿದೆ. ಹೇಗೋ ಅಲ್ಲಿಂದ ಹೊರಬಿದ್ದು ಗಲ್ಫ್ ರಾಷ್ಟ್ರಗಳತ್ತ ಬರುವ ಅಲ್ಲಿನ ಯುವಕರು ಕೈಗೆ ಸಿಕ್ಕ ಯಾವುದೇ ಕೆಲಸ ಮಾಡಲು ಸಿದ್ಧರಾಗಿರುತ್ತಾರೆ, ಕೆಲಸ ಸಿಗದಿದ್ದಲ್ಲಿ ಯಾವುದೇ ಅಪರಾಧವನ್ನಾದರೂ ಮಾಡಿ ಹಣ ಸಂಪಾದನೆಗೆ ಮುಂದಾಗುತ್ತಾರೆ. ಆದರೆ ಆಫ್ರಿಕನ್ ಹೆಣ್ಣುಮಕ್ಕಳು ಬಂದ ಹೊಸದರಲ್ಲಿ ಅಲ್ಲಿಲ್ಲಿ ಅಲೆದಾಡಿ ಕೆಲಸಕ್ಕಾಗಿ ಪ್ರಯತ್ನಿಸಿ, ಸಿಗದೇ ಇದ್ದಾಗ ಸೀದಾ ವೇಶ್ಯಾವಾಟಿಕೆಗೆ ಇಳಿದು ಬಿಡುತ್ತಾರೆ!

ದುಬೈನ ವಿಮಾನ ನಿಲ್ದಾಣಕ್ಕೆ ಹತ್ತಿರವೇ ಇರುವ ನಮ್ಮ ಸಂಸ್ಥೆಯ ಹೋಟೆಲ್ಲುಗಳು ಪ್ರತಿಷ್ಠಿತ ಸಂಸ್ಥೆಯೊಂದರ ಅಂಗವಾಗಿದ್ದು ಮಧ್ಯ ಮಾರಾಟ ಹಾಗೂ ವೇಶ್ಯಾವಾಟಿಕೆಯನ್ನು ನಿಷೇಧಿಸಿದ್ದಾರೆ. ಈ ನೈಜೀರಿಯನ್ ಹೆಣ್ಣುಮಕ್ಕಳು ಹೋಟೆಲ್ಲಿಗೆ ಬಂದು ರೂಮ್ ಕೇಳಿದರೆ ಅವರನ್ನು ನೋಡುತ್ತಿದ್ದಂತೆಯೇ ಸ್ವಾಗತಕಾರಿಣಿ ನಿರಾಕರಿಸುತ್ತಾಳೆ. ಆದರೆ ತಂತ್ರಜ್ಞಾನ ಮುಂದುವರಿದಿರುವ ಈ ದಿನಗಳಲ್ಲಿ ಅವರೂ ಸಹಾ ತಮ್ಮ ವ್ಯವಹಾರಕ್ಕೆ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನೇ ಬಳಸುತ್ತಿದ್ದಾರೆ. ಇವರಿಗೆಲ್ಲಾ ಒಬ್ಬ ಮುಖಂಡನಿರುತ್ತಾನೆ, ಅವನು ತನ್ನ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಆನ್ ಲೈನಿನಲ್ಲಿ ಅವನ ಹೆಸರಿನಲ್ಲಿ ರೂಮ್ ಮುಂಗಡವಾಗಿ ಕಾದಿರಿಸುತ್ತಾನೆ. ಕ್ರೆಡಿಟ್ ಕಾರ್ಡ್ ಮೂಲಕ ಆನ್ ಲೈನಿನಲ್ಲಿ ಬುಕ್ ಮಾಡಿದಾಗ ಸ್ವಾಗತಕಾರಿಣಿ ಆ ರೂಮ್ ಬುಕ್ಕಿಂಗನ್ನು ರದ್ದುಪಡಿಸಲು ಅವಕಾಶವಿಲ್ಲ! ಇದನ್ನು ಅರಿತಿರುವ ಇವರು ಇಬ್ಬರಿಗಾಗಿ ಕಾದಿರಿಸಿದ ಆ ರೂಮಿಗೆ ತಾನೇ ಒಬ್ಬ ಹುಡುಗಿಯೊಡನೆ ಬಂದು ಅವಳನ್ನು ತನ್ನ ಹೆಂಡತಿ ಎಂದು ಪರಿಚಯಿಸಿ ಬೀಗದ ಕೈ ತೆಗೆದುಕೊಂಡು ರೂಮಿಗೆ ಹೋದ ನಂತರ ಆ ಹುಡುಗಿಯನ್ನು ರೂಮಿನಲ್ಲಿ ಬಿಟ್ಟು ಹೊರಗಡೆ ಹೋಗುತ್ತಾನೆ. ಕೆಲ ಹೊತ್ತಿನ ನಂತರ ಇನ್ನೊಬ್ಬ ಹುಡುಗಿಯೊಡನೆ ಬಂದು ಹೋಟೆಲ್ಲಿನ ಹೊರಭಾಗದಲ್ಲಿ ಅವಳನ್ನು ಇಳಿಸಿ, ಅತ್ತಿತ್ತ ನೋಡದೆ ಲಿಫ್ಟ್ ಮೂಲಕ ಸೀದಾ ರೂಮಿಗೆ ಹೋಗಲು ತಿಳಿಸಿ ಹೊರಟು ಹೋಗುತ್ತಾನೆ. ನಂತರ ಶುರುವಾಗುತ್ತದೆ ಇವರ ಭರ್ಜರಿ ವಹಿವಾಟು!

ಫೇಸ್ಬುಕ್ ಪೇಜುಗಳಲ್ಲಿ, ವಾಟ್ಸಪ್ ಗ್ರೂಪುಗಳಲ್ಲಿ ಸುಂದರ ಹುಡುಗಿಯರ ಚಿತ್ರಗಳನ್ನು ತೋರಿಸಿ, ಮಸಾಜ್ ಹಾಗೂ ಲೈಂಗಿಕ ಸುಖದ ಆಮಿಷ ಒಡ್ಡಿ ಗಿರಾಕಿಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ. ತಮ್ಮ ಮೊಬೈಲ್ ನಂಬರ್ ಕೊಟ್ಟು ನಮ್ಮ ಹೋಟೆಲ್ಲಿನ ಹೆಸರನ್ನು ಹಾಕಿ, ಗಿರಾಕಿಗಳು ಕರೆ ಮಾಡಿದಾಗ, ಸ್ವಾಗತಕಾರನ ಬಳಿಗೆ ಹೋಗದೆ ಲಿಫ್ಟ್ ಮೂಲಕ ಸೀದಾ ಇಷ್ಟನೆಯ ಮಹಡಿಯಲ್ಲಿರುವ ಇಂಥಾ ನಂಬರಿನ ರೂಮಿಗೆ ಬನ್ನಿ ಎಂದು ಹೇಳುತ್ತಾರೆ. ಮೊದಮೊದಲು ಅವರು ಗಂಡ ಹೆಂಡತಿಯೇ ಇರಬೇಕು ಎಂದುಕೊಂಡಿದ್ದ ಹೋಟೆಲ್ ಸಿಬ್ಬಂದಿಗೆ ಯಾವಾಗ ಹೆಚ್ಚು ಜನರು ಒಂದು ರೂಮಿಗೆ ಬಂದು ಹೋಗುತ್ತಿರುವುದು ಕಂಡು ಬಂದಿತೋ ಆಗ ನಮ್ಮ ಭದ್ರತಾ ಇಲಾಖೆಗೆ ದೂರುಗಳು ಬರಲಾರಂಭಿಸಿದವು. ಹೋಟೆಲ್ಲಿನ ಎಲ್ಲೆಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೆಲವು ರೂಮುಗಳಿಗೆ ಹೊರಗಡೆಯಿಂದ ಕೆಲವು ವ್ಯಕ್ತಿಗಳು ಬಂದು ಹೋಗುತ್ತಿರುವುದು ಕಂಡು ಬಂದಿತ್ತು. ಅಂದಿನಿಂದ ನಾನು ನಮ್ಮ ಭದ್ರತಾ ಸಹಾಯಕರಿಗೆ ಹೆಚ್ಚು ಮುತುವರ್ಜಿಯಿಂದ ಎಲ್ಲವನ್ನೂ ಪರಿಶೀಲಿಸುವಂತೆ ತಾಕೀತು ಮಾಡಿ ನಾನೂ ಸಹಾ ತಡ ರಾತ್ರಿ ಗಸ್ತು ಆರಂಭಿಸಿದ್ದೆ. ತತ್ಪರಿಣಾಮವಾಗಿ ಕಂಡುಬಂದ ವಿಷಯಗಳು ತುಂಬಾ ಕುತೂಹಲಕರವಾಗಿದ್ದವು.

ಹಾಗೆ ರೂಮಿಗೆ ಬಂದು ಹೋಗುತ್ತಿದ್ದವರಲ್ಲಿ ಕೆಲವು ಭಾರತೀಯರು, ಪಾಕಿಸ್ತಾನೀಯರು, ಅರಬ್ಬರು ಸಹಾ ಇದ್ದರು. ಅವರಲ್ಲಿ ಕೆಲವರು ಸುಂದರ ಹುಡುಗಿಯರ ಚಿತ್ರಗಳನ್ನು ನೋಡಿ ಆಸೆಯಿಂದ ಬಂದು, ಅಲ್ಲಿ ನೈಜೀರಿಯನ್ ಕಪ್ಪು ಹುಡುಗಿಯರನ್ನು ನೋಡಿ ನಿರಾಸೆಯಿಂದ ವಾಪಸ್ ಹೋಗುತ್ತಿದ್ದರು! ಹಾಗೊಮ್ಮೆ ವಾಪಸ್ಸಾಗುತ್ತಿದ್ದವನೊಬ್ಬನನ್ನು ಹಿಡಿದು ಪ್ರಶ್ನಿಸಿದಾಗ ಅವನು ತನ್ನ ಮೊಬೈಲಿನಲ್ಲಿದ್ದ ವಾಟ್ಸಪ್ ಸಂದೇಶವನ್ನು ತೋರಿಸಿದ್ದ! ಆ ಸಂದೇಶದಲ್ಲಿ ಸುಂದರವಾಗಿದ್ದ ಬ್ರೆಜಿಲ್ ಹುಡುಗಿಯರ ಫೋಟೋ ಹಾಕಿ "ಬ್ರೆಜಿಲಿಯನ್ ಮಸಾಜ್ ಜೊತೆಗೆ ಲೈಂಗಿಕ ಸೇವೆ, ಬಹಳ ಕಡಿಮೆ ಬೆಲೆಯಲ್ಲಿ" ಎಂದು ಅತ್ಯಾಕರ್ಷಕವಾಗಿ ಜಾಹೀರಾತೊಂದನ್ನು ಕಳುಹಿಸಿದ್ದರು. ಅದನ್ನು ನೋಡಿ ಆಸೆಯಿಂದ ಬಾಯಿ ತುಂಬಾ ನೀರು ತುಂಬಿಕೊಂಡು ಬಂದಿದ್ದ ಆ ವ್ಯಕ್ತಿ ಅಲ್ಲಿದ್ದ ಕಪ್ಪು, ಕುರೂಪಿ ನೈಜಿರಿಯನ್ ಹುಡುಗಿಯರನ್ನು ನೋಡಿ ಸಿಟ್ಟಿಗೆದ್ದು, ನಿರಾಸೆಯಿಂದ ಅವರಿಗೆ ಬೈದು ಹಿಂದಿರುಗಿ ಬಂದಿದ್ದ! ಆ ಬಗ್ಗೆ ಸ್ವಾಗತಕಾರನ ಬಳಿ ದೂರನ್ನೂ ಕೊಟ್ಟಿದ್ದ. ಒಮ್ಮೆ ಬೆಳಗಿನ ಮೂರು ಘಂಟೆಯ ಸಮಯದಲ್ಲಿ ಬಂದ ಒಬ್ಬ ಗಿರಾಕಿ ಕಪ್ಪು ಹುಡುಗಿಯರನ್ನು ಕಂಡು ವಾಪಸ್ ಹೋಗಲು ಯತ್ನಿಸುತ್ತಿದ್ದಾಗ ಒಬ್ಬಳು ಧಡೂತಿ ಹುಡುಗಿ ಅವನನ್ನು ಅನಾಮತ್ತಾಗಿ ರೂಮಿನೊಳಕ್ಕೆ ಎಳೆದುಕೊಂಡು ಹೋಗಿ ಅವನಲ್ಲಿದ್ದ ಹಣವನ್ನೆಲ್ಲಾ ಕಿತ್ತುಕೊಂಡು ಕಳುಹಿಸಿದ್ದಳು. ಅವಳ ಕೈಯ್ಯಿಂದ ತಪ್ಪಿಸಿಕೊಂಡು ಬಂದ ಆ ಬಡಪಾಯಿ ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದ! ಈ ದೃಶ್ಯಾವಳಿ ನಮ್ಮ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿತ್ತು. ಆದರೆ ಮರುದಿನ ನಾನು ಕರ್ತವ್ಯಕ್ಕೆ ಬರುವ ಹೊತ್ತಿಗೆ ಆ ಹುಡುಗಿಯರು ರೂಮ್ ಖಾಲಿ ಮಾಡಿ ಹೊರಟು ಹೋಗಿದ್ದರು.

ಈಗ ನಮ್ಮ ಭದ್ರತಾ ತಂಡ ಚುರುಕಾಗಿ ಕೆಲಸ ಮಾಡಬೇಕಿತ್ತು, ಪ್ರತಿಷ್ಠಿತ ಹೋಟೆಲ್ ಎಂದು ಪ್ರಖ್ಯಾತವಾಗಿದ್ದದ್ದು ನೈಜೀರಿಯನ್ ಹುಡುಗಿಯರ ಅಡ್ಡೆಯಾಗಿ ಬದಲಾಗುವುದನ್ನು ತಪ್ಪಿಸಬೇಕಿತ್ತು, ತನ್ಮೂಲಕ ಹೋಟೆಲ್ಲಿನ ಗೌರವವನ್ನು ಕಾಪಾಡಬೇಕಿತ್ತು. ಹಾಗೆ ಶುರುವಾದದ್ದು "ಆಪರೇಷನ್ ನೈಜೀರಿಯಾ", ನಮ್ಮ ಹೋಟೆಲ್ಲಿನ ಹಿರಿಯ ವ್ಯವಸ್ಥಾಪಕರು ಮತ್ತಿತರ ಅಧಿಕಾರಿಗಳು, ಜೊತೆಗೆ ದುಬೈ ಪೊಲೀಸ್ ಅಧಿಕಾರಿಗಳು, ಸಿಐಡಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಒಂದು ಯೋಜನೆಯನ್ನು ಸಿದ್ಧಪಡಿಸಿದೆವು. ಅದರಂತೆ ಆನ್ ಲೈನಿನಲ್ಲಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ನೈಜೀರಿಯನ್ನರು ರೂಮ್ ಬುಕ್ ಮಾಡಿದರೆ ಅವರಿಗೆ ರೂಮ್ ಕೊಡುವುದು, ಆದರೆ ಅವರ ರೂಮಿಗೆ ಒಬ್ಬನೇ ಒಬ್ಬ ಗಿರಾಕಿಯೂ ಹೋಗದಂತೆ ತಡೆಯುವುದು, ತನ್ಮೂಲಕ ಅವರ ವ್ಯಾಪಾರ ನಡೆಯದಂತೆ ತಡೆಯುವುದು, ಆದರೆ ನಮ್ಮ ಹೋಟೆಲ್ಲಿನ ವ್ಯಾಪಾರಕ್ಕೆ ಯಾವುದೇ ಭಂಗವಾಗಬಾರದು, ಜೊತೆಗೆ ಇತರ ಅತಿಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು. ಯಾವಾಗ ಅವರಿಗೆ ವ್ಯಾಪಾರ ಆಗುವುದಿಲ್ಲವೋ ಆಗ ಅವರಾಗಿಯೇ ನಮ್ಮ ಹೋಟೆಲ್ಲಿಗೆ ಬರುವುದನ್ನು ನಿಲ್ಲಿಸಿಬಿಡುತ್ತಾರೆ ಎನ್ನುವುದು ನನ್ನ ತರ್ಕವಾಗಿತ್ತು. ಇದಕ್ಕಾಗಿ ನಾಲ್ಕಾರು ಹೊಸ ಕ್ಯಾಮರಾಗಳನ್ನು ಅಳವಡಿಸಿ ಅವರ ಎಲ್ಲ ಚಲನವಲನಗಳನ್ನು ಕೂಲಂಕುಷವಾಗಿ ನೋಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿದ್ದೆವು. ಈಗ ಸುಮಾರು ನಾಲ್ಕೈದು ವಾರಗಳಿಂದಲೂ ನೈಜೀರಿಯನ್ ಹುಡುಗಿಯರು ನಮ್ಮ ಹೋಟೆಲ್ಲಿನಲ್ಲಿ ರೂಮ್ ಬುಕ್ ಮಾಡಿ ಬರುವುದು, ಆದರೆ ಅವರ ಗಿರಾಕಿಗಳನ್ನು ನಮ್ಮ ಭದ್ರತಾ ರಕ್ಷಕರು ತಡೆದು ವಾಪಸ್ ಕಳುಹಿಸುವುದು ನಡೆದೇ ಇತ್ತು. ಕೊನೆಗೆ ಅವರು ನಿರಾಶರಾಗಿ ಯಾವುದೇ ವ್ಯವಹಾರ ನಡೆಯದೆ ರೂಮ್ ಖಾಲಿ ಮಾಡಿ ಹೋಗುತ್ತಿದ್ದರು. ಆದರೆ ಅವರೊಡನೆ ಮುಖಾಮುಖಿ ಮಾತನಾಡುವ ಸಂದರ್ಭ ನನಗೆ ಸಿಕ್ಕಿರಲಿಲ್ಲ!

ಆದರೆ ನಿನ್ನೆ ಮಧ್ಯಾಹ್ನ ಎರಡು ಘಂಟೆಯ ಹೊತ್ತಿಗೆ ಆನ್ಲೈನಿನಲ್ಲಿ ರೂಮ್ ಬುಕ್ ಮಾಡಿ ಹೋಟೆಲ್ಲಿಗೆ ಬಂದ ಮೂವರು ನೈಜೀರಿಯನ್ ಹುಡುಗಿಯರು ತಕ್ಷಣವೇ ವ್ಯವಹಾರ ಶುರು ಹಚ್ಚಿಕೊಂಡಿದ್ದರು. ಸಾಮಾನ್ಯವಾಗಿ ಅವರು ಬರುತ್ತಿದ್ದುದು ಸಂಜೆಯ ಹೊತ್ತಿನಲ್ಲಿ ಮತ್ತು ಗಿರಾಕಿಗಳು ಬರಲಾರಂಭಿಸುತ್ತಿದ್ದುದು ರಾತ್ರಿಯ ಹೊತ್ತಿನಲ್ಲಿ! ಆದರೆ ನಿನ್ನೆಯ ದಿನ ಮಟಮಟ ಮಧ್ಯಾಹ್ನಕ್ಕೇ ಗಿರಾಕಿಗಳು ಬರಲು ಶುರು ಹಚ್ಚಿಕೊಂಡಿದ್ದರು. ಶುಕ್ರವಾರದಂದು ಸಾಮಾನ್ಯವಾಗಿ ನಮ್ಮ ಎರಡೂ ಹೋಟೆಲ್ಲುಗಳನ್ನು ನಾನು ಸುತ್ತು ಹೊಡೆಯುತ್ತಿರುತ್ತೇನೆ, ಒಂದು ಹೋಟೆಲ್ ನೋಡಿಕೊಂಡು ಎರಡನೆಯ ಹೋಟೆಲ್ಲಿಗೆ ಬರುವ ಹೊತ್ತಿಗೆ ಅಲ್ಲಿ ಈ ನೈಜೀರಿಯನ್ ಹುಡುಗಿಯರ ವ್ಯವಹಾರ ಶುರುವಾಗಿಬಿಟ್ಟಿತ್ತು. ನಮ್ಮ ಭದ್ರತಾ ರಕ್ಷಕರ ವರದಿಯನ್ನು ನೋಡಿದ ನಂತರ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ಅವರ ಓಡಾಟದ ದೃಶ್ಯಾವಳಿಗಳನ್ನೆಲ್ಲ ವೀಕ್ಷಿಸಿದ ನನಗೆ ಸಿಟ್ಟು ನೆತ್ತಿಗೇರಿತ್ತು. ಅವರು ರೂಮ್ ತೆಗೆದುಕೊಂಡಿದ್ದ ಎರಡನೆಯ ಮಹಡಿಯಲ್ಲಿಯೇ ಒಬ್ಬ ಭದ್ರತಾ ರಕ್ಷಕನನ್ನು ನಿಲ್ಲಿಸಿ, ಮತ್ತೊಬ್ಬನನ್ನು ಮುಖ್ಯದ್ವಾರದಲ್ಲಿ ನಿಲ್ಲಿಸಿ, ಸಿಸಿಟಿವಿ ರೂಮಿನಲ್ಲಿದ್ದವನನ್ನು ಎಲ್ಲವನ್ನೂ ಪರಿಶೀಲಿಸುತ್ತಾ ಮತ್ತೆ ಯಾರಾದರೂ ಬಂದಲ್ಲಿ ನನಗೆ ತಕ್ಷಣ ತಿಳಿಸುವಂತೆ ಆದೇಶಿಸಿ ಸಿಐಡಿ ಅಧಿಕಾರಿ ಅಬ್ದುಲ್ಲಾನಿಗೆ ಫೋನಾಯಿಸಿದ್ದೆ. "ಆಪರೇಶನ್ ನೈಜೀರಿಯಾ" ಅಂದ ನನ್ನ ಧ್ವನಿ ಕೇಳಿದ ಅಬ್ದುಲ್ಲಾ ಜೋರಾಗಿ ನಗುತ್ತಾ "ಆಪರೇಷನ್ ಕರ್ದೋ ಮಂಜು ಭಾಯ್" ಅಂದಿದ್ದ!

ಹಾಗೆ ಅಖಾಡಕ್ಕಿಳಿದ ನಮಗೆ ಸಿಕ್ಕಿದ್ದು ಸುಮಾರು ಎಂಟು ಜನ ಗಿರಾಕಿಗಳು! ಅವರನ್ನು ಹುಡುಗಿಯರಿದ್ದ ರೂಮಿಗೆ ಹೋಗದಂತೆ ತಡೆದು ವಾಪಸ್ ಕಳುಹಿಸಿದ್ದ ಭದ್ರತಾ ರಕ್ಷಕರು ಒಬ್ಬ ಪಾಕಿಸ್ತಾನಿ ಯುವಕ ಸ್ವಲ್ಪ ತಗಾದೆ ಮಾಡುತ್ತಿರುವ ಬಗ್ಗೆ ಮಾಹಿತಿ ಕೊಟ್ಟಿದ್ದರು. ಸ್ವಾಗತಕಾರನ ಬಳಿಯಲ್ಲಿ ನಿಂತಿದ್ದ ಅವನನ್ನು ಸರಿಯಾಗಿ ದಬಾಯಿಸಿ ಸುಮ್ಮನೆ ಆಚೆಗೆ ಹೋದರೆ ಸರಿ, ಇಲ್ಲದಿದ್ದರೆ ಈಗಲೇ ಒಳಗೆ ಹಾಕಿಸುತ್ತೇನೆ ಅಂದ ತಕ್ಷಣ ಅವನು ಜಾಗ ಖಾಲಿ ಮಾಡಿದ್ದ! ಆದರೆ ಹೋಗುವ ಮುನ್ನ ಅಷ್ಟೂ ಜನರು ಆ ಹುಡುಗಿಯರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದರು. ತಮ್ಮ ರೂಮಿನಿಂದ ಹೊರಬಂದ ಆ ಹುಡುಗಿಯರು ತಮ್ಮ ರೂಮಿನ ಅನತಿ ದೂರದಲ್ಲಿ ನಿಂತಿದ್ದ ಆಜಾನುಬಾಹು ಭದ್ರತಾ ರಕ್ಷಕ, ಎಲ್ಲೆಡೆ ಇದ್ದ ಕ್ಯಾಮರಾಗಳು, ಕೆಳಗಿನ ಮಹಡಿಯಲ್ಲಿದ್ದ ಇನ್ನಿತರ ಭದ್ರತಾ ರಕ್ಷಕರನ್ನು ನೋಡಿ ತಕ್ಷಣ ರೂಮ್ ಖಾಲಿ ಮಾಡಿ ಕೆಳಗೆ ಬಂದಿದ್ದರು. ಸ್ವಾಗತಕಾರನ ಬಳಿಯೇ ಇದ್ದ ನನ್ನನ್ನು ನೋಡಿ ಆಕ್ರೋಶದಿಂದ ಅವರಾಡಿದ ಮಾತುಗಳು ಮಾತ್ರ ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ಅದೆಷ್ಟೋ ದಿನಗಳಿಂದ ಹೊಟ್ಟೆಗೆ ತಿನ್ನದವರಂತೆ ಕೃಶರಾಗಿದ್ದ ಅವರ ಮುಖದಲ್ಲಿ ಅಸಹಾಯಕತೆ ಎದ್ದು ಕಾಣುತ್ತಿತ್ತು. ಅವರ ಆ ದಯನೀಯ ಪರಿಸ್ಥಿತ್ಯನ್ನು ಕಂಡು ಮನಸ್ಸು ಮರುಗಿದರೂ ನಾನು ನನ್ನ ಕರ್ತವ್ಯ ಮಾಡಲೇಬೇಕಿತ್ತು. "ಆಪರೇಷನ್ ನೈಜೀರಿಯಾ" ಯಶಸ್ವಿಯಾಗಿತ್ತು, ಆದರೆ ಮನದ ಮೂಲೆಯಲ್ಲೆಲ್ಲೋ ಮಾನವೀಯತೆ ಸತ್ತ ಸದ್ದು ಕೇಳಿಸುತ್ತಿತ್ತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ‌ ಮಂಜು ಅವರೇ, ಇಂಥ‌ ಬಹು ಆಯಾಮವುಳ್ಳ‌ ಸ್ಥಿತಿಗಳಲ್ಲಿ, ಮಾನವೀಯತೆ ಹಾಗೂ ನೈತಿಕತೆಗಳ‌ ನಡುವಣ‌ ತಾಕಲಾಟ‌ ಇದ್ದದ್ದೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆ ತಾಕಲಾಟ ಒಮ್ಮೊಮ್ಮೆ ನಮಗೆ ಧರ್ಮಸಂಕಟವಾಗಿಬಿಡುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರಿಗೆ ನಮಸ್ಕಾರಗಳು.ಪರಿಸ್ಥಿತಿ ಯಾರನ್ನು ಏನುಬೇಕಾದ್ದನು ಮಾಡಿಸಬಹುವುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ, ನಿಮ್ಮ ಮಾತು ನಿಜ, ಎಷ್ಟಾದರೂ ಮನುಜ ಪರಿಸ್ಥಿತಿಯ ಕೈಗೊಂಬೆಯಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೇಶ್ಯಾವಾಟಿಕೆಗೆ ಹಲವು ಮುಖಗಳಿವೆ. ಈ ಪ್ರಕರಣದಲ್ಲಿ ಮುಖ್ಯ ಆರೋಪಿ ಬೊಕೊಹರಾಂ ಆಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.