ಅರಬ್ಬರ ನಾಡಿನಲ್ಲಿ - ೧೬ - ಹರ್ಷದ ಹಿಂದೆಯೇ ಹೊಂಚು ಹಾಕುವ ಸಾವು!

5

ದಿನಾಂಕ ೨/೩/೨೦೧೫ರಂದು ನಾನು ಕೆಲಸ ಮಾಡುವ ಸಮೂಹದ ಒಂದು ಹೋಟೆಲ್ಲಿನಲ್ಲಿ "ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ" ಆಯೋಜಿಸಿದ್ದರು. ಹೋಟೆಲ್ಲಿನಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಬಗೆಬಗೆಯ ಉಡುಪು ಧರಿಸಿ ತಮ್ಮ ಕಲಾಚಾತುರ್ಯವನ್ನು ತೋರಿಸಲು ಸಿದ್ಧರಾಗಿ ಬಂದಿದ್ದರು. ಕೆಲವರು ಹಾಡು ಹೇಳಿದರೆ ಮತ್ತೆ ಕೆಲವರು ಜನಪ್ರಿಯ ಚಿತ್ರಗೀತೆಗಳಿಗೆ ನೃತ್ಯ ಮಾಡಿ ತಮ್ಮ ಪ್ರತಿಭೆ ತೋರಿಸುತ್ತಿದ್ದರು. ಭಾರತ, ಪಾಕಿಸ್ತಾನ, ನೇಪಾಳ, ಫಿಲಿಫೈನ್ಸ್, ನೈಜೀರಿಯಾ, ಭೂತಾನ್, ಇಂಡೋನೇಶಿಯಾ, ಬಾಂಗ್ಲಾದೇಶ, ಶ್ರೀಲಂಕಾ ಹೀಗೆ ಹಲವಾರು ದೇಶಗಳಿಂದ ಉದ್ಯೋಗಕ್ಕಾಗಿ ಬಂದವರು ತಮ್ಮೆಲ್ಲ ಬೇಧಭಾವಗಳನ್ನು ಮರೆತು ಒಂದೇ ಕುಟುಂಬದಂತೆ ಬದುಕುತ್ತಿರುವ ವಲಸೆ ಹಕ್ಕಿಗಳೆಲ್ಲ ಒಂದೆ ಸೂರಿನಡಿಯಲ್ಲಿ ಸಂತೋಷವಾಗಿದ್ದ ಕ್ಷಣವದು. ಕುವೆಂಪುರವರ ವಿಶ್ವಮಾನವತತ್ವವನ್ನು " ಮನುಜ ಕುಲಂ ತಾನೊಂದೆ ವಲಂ" ನುಡಿಯನ್ನು ಎತ್ತಿಹಿಡಿದ ಘಳಿಗೆಯದು. ಹೋಟೆಲ್ಲಿನ ಮುಖ್ಯಸ್ಥರು ಈ ವರ್ಷದ ಆಗು ಹೋಗುಗಳನ್ನೆಲ್ಲ ವಿವರಿಸಿ ಉತ್ತಮ ಕೆಲಸಗಾರರಿಗೆ ಬಹುಮಾನಗಳನ್ನು ವಿತರಿಸಿದರು. ಒಟ್ಟಾರೆ ಹರ್ಷದ ವಾತಾವರಣ ಎಲ್ಲೆಡೆ ತುಂಬಿತ್ತು, ಎಲ್ಲರ ಮುಖದಲ್ಲೂ ಅದಮ್ಯ ಉತ್ಸಾಹ ಎದ್ದು ಕಾಣುತ್ತಿತ್ತು. ಎರಡು ಹೋಟೆಲ್ಲುಗಳ ಭದ್ರತೆಯ ಉಸ್ತುವಾರಿ ವಹಿಸಿದ್ದ ನಾನೂ ಸಹ ಕಾರ್ಯಕ್ರಮದಲ್ಲಿ ನನ್ನ ತಂಡದೊಡನೆ ಭಾಗಿಯಾಗಿದ್ದೆ. ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ನಡೆಯುವುದು ಹಾಗೂ ಅದೇ ಸಮಯದಲ್ಲಿ ಹೋಟೆಲ್ಲಿನಲ್ಲಿದ್ದ ಅತಿಥಿಗಳ ಹಾಗೂ ಎಲ್ಲ ಕೆಲಸಗಾರರ ಭದ್ರತೆಯನ್ನು ನೋಡಿಕೊಳ್ಳುವುದು ನಮ್ಮ ಜವಾಬ್ಧಾರಿಯಾಗಿತ್ತು!

ಇದೇ ಸಮಯದಲ್ಲಿ ನಮ್ಮ ಹೋಟೆಲ್ಲಿನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ರಿಚರ್ಡ್ ಎನ್ನುವವರು, ತುಂಬಾ ಒಳ್ಳೆಯ ವ್ಯಕ್ತಿ, ಎಲ್ಲರೊಡನೆ ಉತ್ತಮ ಸ್ನೇಹವನ್ನು ಹೊಂದಿದ್ದು, ನಗುನಗುತ್ತಾ ಮಾತನಾಡುತ್ತಾ, ಎಲ್ಲರನ್ನೂ ನಗಿಸುತ್ತಾ ಸದಾ ಚೈತನ್ಯದ ಚಿಲುಮೆಯಂತಿದ್ದವರು, ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಅವರ ಜೊತೆಯಲ್ಲಿಯೇ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಅಂತೋಣಿ ಎಂಬಾತ ಇವರನ್ನು ಹುಡುಕುತ್ತಾ ಹೋಗಿದ್ದಾರೆ. ಕೆಳಮಹಡಿಯ ಉಗ್ರಾಣದಲ್ಲಿ ಕುರ್ಚಿಯ ಮೇಲೆ ಕುಳಿತು ನಿದ್ರಿಸುತ್ತಿದ್ದ ರಿಚರ್ಡ್ ಅವರನ್ನು ಕಂಡು ಅರೆ, ಇನ್ನೂ ಮಲಗಿದ್ದೀರಲ್ಲಾ, ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ, ಎಲ್ಲರೂ ನಿಮ್ಮನ್ನು ಕೇಳುತ್ತಿದ್ದಾರೆ, ಎದ್ದೇಳಿ ಹೋಗೋಣ ಎಂದು ಅಲುಗಾಡಿಸಿದ್ದಾರೆ. ಆದರೆ ಕುಳಿತ ಭಂಗಿಯಲ್ಲಿದ್ದ ರಿಚರ್ಡ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ! ಗಾಭರಿಯಾದ ಆಂತೋಣಿ ತಕ್ಷಣ ಕಾರ್ಯಕ್ರಮ ನಡೆಯುತ್ತಿದ್ದ ಮೇಲ್ಮಹಡಿಗೆ ಬಂದು ತನ್ನ ಮೇಲ್ವಿಚಾರಕರಿಗೆ ಸುದ್ಧಿ ಮುಟ್ಟಿಸಿದ್ದಾನೆ. ಶ್ರೀಲಂಕಾದ ಆ ಮೇಲ್ವಿಚಾರಕರು ತಕ್ಷಣ ನನ್ನ ಬಳಿಗೆ ಬಂದು ಪರಿಸ್ಥಿತಿಯನ್ನು ವಿವರಿಸಿದರು, ಒಡನೆಯೇ ನಾವಿಬ್ಬರೂ ಕೆಳಮಹಡಿಯ ಉಗ್ರಾಣಕ್ಕೆ ಬಂದೆವು. ಕುಳಿತ ಭಂಗಿಯಲ್ಲಿದ್ದ ರಿಚರ್ಡ್ ಅವರನ್ನು ನೋಡುತ್ತಿದ್ದಂತೆಯೇ ನನ್ನ ಅನುಭವಿ ಕಣ್ಣುಗಳಿಗೆ ಆತ ಇನ್ನಿಲ್ಲವೆಂಬ ಸತ್ಯ ಗೊತ್ತಾಗಿ ಹೋಯಿತು. ತಕ್ಷಣವೇ ಹೋಟೆಲ್ಲಿನ ಮುಖ್ಯಸ್ಥರನ್ನು ಸ್ಥಳಕ್ಕೆ ಕರೆತರುವಂತೆ, ಕಾರ್ಯಕ್ರಮದ ನಡುವೆ ಯಾರಿಗೂ ವಿಚಾರ ಗೊತ್ತಾಗದಂತೆ ಗೌಪ್ಯತೆಯನ್ನು ಕಾಯ್ದುಕೊಳ್ಳುವಂತೆ ತಾಕೀತು ಮಾಡಿ ನನ್ನೊಬ್ಬ ಸಹಾಯಕನನ್ನು ಕಳುಹಿಸಿದೆ. ಎರಡು ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಮುಖಸ್ಥರಿಗೆ ವಿಚಾರ ತಿಳಿಸಿ ಅವರ ನಿರ್ದೇಶನದಂತೆ ತಕ್ಷಣ ಪೊಲೀಸ್ ಹಾಗೂ ಆಂಬುಲೆನ್ಸ್ ವಾಹನಕ್ಕೆ ಫೋನ್ ಮಾಡಿ, ಆ ಸ್ಥಳಕ್ಕೆ ಯಾರೂ ಬರದಂತೆ ಎಲ್ಲ ಭದ್ರಪಡಿಸಿ, ಕಾರ್ಯಕ್ರಮ ನಡೆಯುತ್ತಿದ್ದ ಮೇಲ್ಮಹಡಿಗೆ ಬಂದು, ಅಲ್ಲಿದ್ದ ಮಾನವ ಸಂಪನ್ಮೂಲ ಅಧಿಕಾರಿಗೆ ಕಾರ್ಯಕ್ರಮವನ್ನು ಸಾಂಗವಾಗಿ ಮುಗಿಸುವಂತೆ ತಿಳಿಸಿದೆ.

ಕೇವಲ ಐದು ನಿಮಿಷಗಳಲ್ಲಿ ಹೋಟೆಲ್ಲಿಗೆ ಆಗಮಿಸಿದ ಆಂಬುಲೆನ್ಸ್ ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿಯವರು ರಿಚರ್ಡ್ ಅವರ ದೇಹವನ್ನು ಪರೀಕ್ಷಿಸಿ ಅವರು ನಿಧನ ಹೊಂದಿರುವುದನ್ನು ಧೃಡಪಡಿಸಿದರು. ಅವರ ಜೊತೆಗೇ ಬಂದ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಮ್ಮಿಂದ ಎಲ್ಲಾ ವಿವರಗಳನ್ನೂ ಪಡೆದುಕೊಂಡರು. ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ಎಲ್ಲ ದೃಶ್ಯಾವಳಿಗಳನ್ನು ವೀಕ್ಷಿಸಿ, ರಿಚರ್ಡ್ ಅಲ್ಲಿ ಹೋಗಿ ಕುಳಿತ ನಂತರ ಆ ಜಾಗಕ್ಕೆ ಬಂದಿದ್ದ ಮೂವರು ಕೆಲಸಗಾರರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಬರುವಂತೆ ಆದೇಶಿಸಿದರು. ನಂತರದ ಹತ್ತು ನಿಮಿಷಗಳಲ್ಲಿ ಬಂದ ಶವ ವಾಹನದಲ್ಲಿ ರಿಚರ್ಡ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಶೀದ್ ಆಸ್ಪತ್ರೆಗೆ ಸಾಗಿಸಲಾಯಿತು. ಶವವಾಹನದ ಜೊತೆಗೆ ಬಂದಿದ್ದ ಕೇವಲ ಇಬ್ಬರು ಸಿಬ್ಬಂದಿಗೆ ರಿಚರ್ಡ್ ಅವರ ದೇಹವನ್ನು ವಾಹನಕ್ಕೆ ಸಾಗಿಸಲು ನಾನು ಹಾಗೂ ನನ್ನೊಬ್ಬ ಸಹಾಯಕ ಕೈ ಜೋಡಿಸಿದೆವು. ನನ್ನ ಕಾಲು ಶತಮಾನದ ವೃತ್ತಿಜೀವನದಲ್ಲಿ ನಾನು ಕೈಜೋಡಿಸಿ ಸಾಗಿಸಿದ ಹತ್ತೊಂಭತ್ತನೆಯ ದೇಹ ಇದಾಗಿತ್ತು. ಆ ಸ್ಥಿತಿಯಲ್ಲಿ ನನ್ನ ಮನದಲ್ಲಿ ಮೂಡಿ ಬಂದಿದ್ದು ವೀರಬಾಹುವಾಗಿ ಮಸಣ ಕಾದ ರಾಜ ಸತ್ಯ ಹರಿಶ್ಚಂದ್ರನ ಚಿತ್ರ!

ಕೇವಲ ಮುಕ್ಕಾಲು ಘಂಟೆಯಲ್ಲಿ ಇಡೀ ಕಾರ್ಯಾಚರಣೆ ಮುಕ್ತಾಯವಾಗಿತ್ತು. ಮೇಲ್ಮಹಡಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ, ಕೆಳಮಹಡಿಯಲ್ಲಿ ನಡೆದ ದುರ್ಘಟನೆಯ ವಾಸನೆಯಿಲ್ಲದೆ ಸಾಂಗವಾಗಿ ಮುಗಿದಿತ್ತು! ಆದರೆ ಕಾರ್ಯಕ್ರಮ ಮುಗಿದ ನಂತರ ಅದು ಹೇಗೋ ವಿಷಯ ಒಬ್ಬರಿಂದೊಬ್ಬರಿಗೆ ಗೊತ್ತಾಗಿ ಇಡೀ ಹೋಟೆಲ್ ಸಿಬ್ಬಂದಿ ದಂಗಾಗಿ ಹೋಗಿದ್ದರು! ಅದುವರೆಗೂ ಸಂತೋಷದಿಂದ ಕಾರ್ಯಕ್ರಮದಲ್ಲಿ ನಕ್ಕು ನಲಿದ್ದಿದ್ದವರೆಲ್ಲರ ಮುಖದಲ್ಲೂ ಒಮ್ಮೆಗೇ ದುಗುಡ, ವಿಷಾದ, ಸೂತಕದ ಛಾಯೆಗಳು ಮೇಳೈಸಿದ್ದವು. ಭಾರವಾದ ಹೃದಯದಿಂದ ಎಲ್ಲರೂ ವಸತಿಗೃಹಕ್ಕೆ ತೆರಳಿದ್ದರು. ಅದುವರೆವಿಗೂ ಹರ್ಷದ ಕಾರಂಜಿಗಳಂತೆ ನುಲಿದಾಡುತ್ತಿದ್ದ ಹೆಣ್ಣು ಮಕ್ಕಳ ಕಂಗಳಲ್ಲಿ ಕಂಬನಿಯ ಧಾರೆ ಕೋಡಿ ಹರಿದಿತ್ತು. ವಾರ್ಷಿಕ ಸಂತೋಷಕೂಟದ ದಿನವೇ ಸ್ನೇಹಿತನೊಬ್ಬನನ್ನು ಕಳೆದುಕೊಂಡ ದುಃಖ ಎಲ್ಲರನ್ನೂ ಗಾಢವಾಗಿ ಕಾಡಿತ್ತು. ಹರ್ಷದ ಹಿಂದೆಯೇ ಹೊಂಚು ಹಾಕಿ ಕಾದಿದ್ದ ಸಾವಿನ ಭಯಾನಕತೆ ಅಲ್ಲಿ ಅನಾವರಣಗೊಂಡಿತ್ತು!

ನನ್ನ ಪ್ರಾಥಮಿಕ ತನಿಖೆಯಿಂದ ನನಗೆ ತಿಳಿದು ಬಂದ ಅಂಶಗಳು ಹೀಗಿವೆ. ರಿಚರ್ಡ್ ಎಂದಿನಂತೆ ಎಲ್ಲರೊಡನೆ ಮೊದಲನೇ ಪಾಳಿಯಲ್ಲಿ ತಮ್ಮ ಕೆಲಸಕ್ಕೆ ಬಂದಿದ್ದಾರೆ. ಮಧ್ಯಾಹ್ನ ಮೂರಕ್ಕೆ ವಸತಿಗೃಹಕ್ಕೆ ತೆರಳಿ ಮತ್ತೆ ಸಂಜೆ ಐದೂವರೆಯ ಬಸ್ಸಿನಲ್ಲಿ ಇತರ ಕೆಲಸಗಾರರೊಡನೆ ಕಾರ್ಯಕ್ರಮಕ್ಕಾಗಿ ಬಂದಿದ್ದಾರೆ. ಎಲ್ಲರೂ ಮೇಲ್ಮಹಡಿಯಲ್ಲಿ ಕಾರ್ಯಕ್ರಮಕ್ಕಾಗಿ ತಯಾರಿಯಲ್ಲಿ ತೊಡಗಿಕೊಂಡಿದ್ದಾಗ ರಿಚರ್ಡ್ ಮಾತ್ರ ತಾನು ಸುಸ್ತಾಗಿರುವುದಾಗಿಯೂ, ಸ್ವಲ್ಪ ಹೊತ್ತು ವಿಶ್ರಮಿಸಿ ಎಂಟು ಘಂಟೆಯ ನಂತರ ಮೇಲಕ್ಕೆ ಬರುವುದಾಗಿ ಹೇಳಿ ಕೆಳಮಹಡಿಯ ಉಗ್ರಾಣದಲ್ಲಿ ಒಂದು ಕುರ್ಚಿಯ ಮೇಲೆ ಕುಳಿತು ಇನ್ನೊಂದು ಕುರ್ಚಿಯ ಮೇಲೆ ಕಾಲನ್ನಿಟ್ಟು ನಿದ್ದೆಗೆ ಜಾರಿದ್ದಾರೆ. ಅವರು ಅಲ್ಲಿ ಕುಳಿತ ನಂತರ ಯಾವುದೋ ಸಾಮಾನುಗಳನ್ನು ತರಲು ಅಲ್ಲಿಗೆ ತೆರಳಿದ್ದ ಮೂವರು ಕಾರ್ಮಿಕರು ರಿಚರ್ಡ್ ಗೊರಕೆ ಹೊಡೆಯುತ್ತಾ ಗಾಢ ನಿದ್ದೆಯಲ್ಲಿದ್ದುದನ್ನು ಗಮನಿಸಿದ್ದಾರೆ. ಆದರೆ ಕೊನೆಯಲ್ಲಿ, ಸುಮಾರು ಎರಡು ಘಂಟೆಗಳ ನಂತರ, ಅಲ್ಲಿಗೆ ಬಂದ ರಿಚರ್ಡ್ ಗೆಳೆಯ ಆಂತೋಣಿ ಮಾತ್ರ ಅವರನ್ನು ನಿರ್ಜೆವವಾಗಿ ನೋಡಿದ್ದಾನೆ. ಅಂದರೆ ಅಲ್ಲಿ ಬಂದು ಕುಳಿತು ನಿದ್ರೆ ಮಾಡುತ್ತಿದ್ದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. "ಹೃದಯ ಸ್ತಂಭನ"ವೇ ಅವರ ಸಾವಿಗೆ ಕಾರಣವಾಯಿತೇ? ನೋಡಲು ಗಟ್ಟಿಮುಟ್ಟಾಗಿದ್ದ ಆರಡಿ ಎತ್ತರದ ಆಜಾನುಬಾಹು ವ್ಯಕ್ತಿತ್ವದ ಹೃದಯ ಅಷ್ಟೊಂದು ಬಲಹೀನವಾಗಿತ್ತೇ? ಉತ್ತರವಿಲ್ಲದ ಪ್ರಶ್ನೆಗಳು ನನ್ನ ತಲೆಯ ತುಂಬಾ ಸುತ್ತುತ್ತಿವೆ.

ಆಂತೋಣಿ ಮತ್ತು ಇನ್ನಿಬ್ಬರನ್ನು ಪೊಲೀಸ್ ಠಾಣಿಗೆ ಹೇಳಿಕೆ ದಾಖಲಿಸಲು ನನ್ನ ಕಾರಿನಲ್ಲೇ ಕರೆದೊಯ್ಯುವಾಗ ದಾರಿಯುದ್ಧಕ್ಕೂ ಅಂತೋಣಿಯ ಕಣ್ಣಲ್ಲಿ ಕಂಬನಿ ಹರಿಯುತ್ತಿತ್ತು. ಒಂದೇ ಕೊಠಡಿಯಲ್ಲಿ ರಿಚರ್ಡ್ ಒಟ್ಟಿಗೆ ಇರುತ್ತಿದ್ದ ಆಂತೋಣಿಗೆ ಅವರ ಸಾವಿನಿಂದ ಆಘಾತವಾಗಿತ್ತು, ಪ್ರತಿದಿನ ಅವರಿಬ್ಬರ ನಡುವೆ ನಡೆಯುತ್ತಿದ್ದ ತಮಾಷೆಯ ಪ್ರಸಂಗಗಳನ್ನು ಹೇಳಿಕೊಂಡು ರೋದಿಸುತ್ತಿದ್ದ. ಕೊನೆಗೆ ನನಗೆ ತುಟಿಗಳೆಲ್ಲ ಒಣಗುತ್ತಿವೆ, ಎದೆಯೊಳಗೆ ನೋವಾಗುತ್ತಿದೆ ಎಂದಾಗ ನಾನು ಗಾಭರಿಯಾಗಿದ್ದೆ. ನನಗೆ ತಿಳಿದ ಮಟ್ಟಿಗೆ ಅವನನ್ನು ಸಾಂತ್ವನಗೊಳಿಸಿ, ಪೊಲೀಸ್ ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಆಂತೋಣಿಯ ಪರಿಸ್ಥಿತಿಯನ್ನು ವಿವರಿಸಿ, ಆದಷ್ಟು ಬೇಗ ಅವರೆಲ್ಲರ ಹೇಳಿಕೆ ದಾಖಲಾತಿಯನ್ನು ಮುಗಿಸಿ ಅವರನ್ನು ವಸತಿಗೃಹಕ್ಕೆ ತಲುಪಿಸಿ ನನ್ನ ಕೊಠಡಿಗೆ ಬಂದಾಗ ಬೆಳಿಗ್ಗೆ ಮೂರು ಘಂಟೆಯಾಗಿತ್ತು!

ಇದೇ ಸಮಯದಲ್ಲಿ ಅವರ ಕುಟುಂಬದವರಿಗೆ ವಿಷಯ ತಿಳಿಸಲಾಗಿದೆ, ರಿಚರ್ಡ್ ಅವರ ದೇಹವಿನ್ನೂ ರಶೀದ್ ಆಸ್ಪತ್ರೆಯ ಶೈತ್ಯಾಗಾರದಲ್ಲಿದೆ, ಭಾನುವಾರ ಎಲ್ಲ ದಾಖಲಾತಿ ಪ್ರಕ್ರಿಯೆಗಳನ್ನು ಮುಗಿಸಿ, ಅವರ ದೇಹವನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ. ರಿಚರ್ಡ್ ಕಳೆದ ತಿಂಗಳಷ್ಟೇ ರಜೆಗೆಂದು ಊರಿಗೆ ಹೋಗಿ ಬಂದಿದ್ದರು, ಅವರಿಗೆ ಒಬ್ಬ ಮಗನಿದ್ದಾನೆ, ಆದರೆ ಅವರ ಪತ್ನಿ ಈಗ ಗರ್ಭಿಣಿಯಂತೆ! ಆ ಹೆಣ್ಣುಮಗಳು ಈ ಸ್ಥಿತಿಯಲ್ಲಿ ತನ್ನ ಗಂಡನ ಸಾವಿನ ಸುದ್ಧಿಯನ್ನು ಹೇಗೆ ಸ್ವೀಕರಿಸುತ್ತಾಳೋ? ಅವರ ಕುಟುಂಬದವರಿಗೆ ಆ ದೇವರು ಅವರ ಅಗಲುವಿಕೆಯ ಶಕ್ತಿಯನ್ನು ಸಹಿಸುವ ಶಕ್ತಿ ನೀಡಲಿ. ಕ್ರೈಸ್ತರಿಗೆ ಪವಿತ್ರ ದಿನವಾದ "ಶುಭ ಶುಕ್ರವಾರ"ದ ಹಿಂದಿನ ದಿನವೇ ರಿಚರ್ಡ್ ಅವರ ದೇಹಾಂತ್ಯವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಗಲ್ಫ್ ದೇಶಗಳಲ್ಲಿರುವವರು ಬೇಕಾದಷ್ಟು ಹಣ ಸಂಪಾದನೆ ಮಾಡುವ ಯಂತ್ರಗಳೆಂದು ಎಲ್ಲರೂ ತಿಳಿದಿರುತ್ತಾರೆ, ಆದರೆ ತಮ್ಮವರನ್ನೆಲ್ಲ ಬಿಟ್ಟು ಬಂದು, ತಮ್ಮವರ ಏಳಿಗೆಗಾಗಿ ಹಗಲಿರುಳೂ ದುಡಿಯುತ್ತಾ, ಅನಾಥರಂತೆ ಬದುಕುವ ಅವರ ಹೃದಯಗಳು ಸಾಕಷ್ಟು ಬಲಹೀನವಾಗಿರುತ್ತವೆ, ಯಾವಾಗ ಬೇಕಾದರೂ ಸ್ತಬ್ಧವಾಗಿ ಬಿಡುತ್ತವೆ ಎನ್ನುವ ಕಟು ಸತ್ಯ ಮಾತ್ರ ಯಾರಿಗೂ ಅರ್ಥವಾಗುವುದೇ ಇಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಗಲ್ಫ್ ದೇಶಗಳಲ್ಲಿರುವವರು ಬೇಕಾದಷ್ಟು ಹಣ ಸಂಪಾದನೆ ಮಾಡುವ ಯಂತ್ರಗಳೆಂದು ಎಲ್ಲರೂ ತಿಳಿದಿರುತ್ತಾರೆ, ಆದರೆ ತಮ್ಮವರನ್ನೆಲ್ಲ ಬಿಟ್ಟು ಬಂದು, ತಮ್ಮವರ ಏಳಿಗೆಗಾಗಿ ಹಗಲಿರುಳೂ ದುಡಿಯುತ್ತಾ, ಅನಾಥರಂತೆ ಬದುಕುವ ಅವರ ಹೃದಯಗಳು ಸಾಕಷ್ಟು ಬಲಹೀನವಾಗಿರುತ್ತವೆ, ಯಾವಾಗ ಬೇಕಾದರೂ ಸ್ತಬ್ಧವಾಗಿ ಬಿಡುತ್ತವೆ ಎನ್ನುವ ಕಟು ಸತ್ಯ ಮಾತ್ರ ಯಾರಿಗೂ ಅರ್ಥವಾಗುವುದೇ ಇಲ್ಲ!
-ನಿಜ ಮಂಜಣ್ಣ. ರಿಚರ್ಡ್ ಆತ್ಮಕ್ಕೆ ಶಾಂತಿ, ಅವರ ಮನೆಯವರಿಗೆ ಆ ದೇವರು ಅವರ ಅಗಲುವಿಕೆಯ ಶಕ್ತಿಯನ್ನು ಸಹಿಸುವ ಶಕ್ತಿ ನೀಡಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಗಣೇಷಣ್ಣ‌, ದೂರದಿಂದ‌ ನೋಡುವವರಿಗೆ ಇಲ್ಲಿರುವವರ‌ ತೊಂದರೆಗಳು ಗೊತ್ತಾಗುವುದೇ ಇಲ್ಲ‌! ಅವರಿಗೆ ಕಾಣುವುದು ಕೇವಲ‌ ಹಣ‌ ಮಾತ್ರ‌!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನೋಡಲು ಗಟ್ಟಿಮುಟ್ಟಾಗಿದ್ದ ಆರಡಿ ಎತ್ತರದ ಆಜಾನುಬಾಹು ವ್ಯಕ್ತಿತ್ವದ ಹೃದಯ ಅಷ್ಟೊಂದು ಬಲಹೀನವಾಗಿತ್ತೇ?"
ಮಂಜು, ಕಾಲನ ಆಟದ ಪಗಡೆಗಳು ನಾವು. ಇಲ್ಲಿ, ವಯೋಮಿತಿಯೋ, ದೇಹ ದಾರ್ಡ್ಯತನವೋ, ಲೆಕ್ಕಕ್ಕಿಲ್ಲ. ಸುದೃಢ ಫುಟ್ಬಾಲ್, ಬಾಸ್ಕೆಟ್ ಬಾಲ್ ಆಟಗಾರರು ಆಟದ ಮೈದಾನದಲ್ಲೇ ಅವನಿಗೆ ಶರಣಾಗಿದ್ದಾರೆ.
ರಿಚರ್ಡ್ ರವರ ಅಕಾಲಿಕ ಸಾವಿನ ಸಂದರ್ಭ, ನಿಮ್ಮ ಅನುಭವ ಮನಮುಟ್ಟುವಂತಿದೆ. ಕೊಲ್ಲಿ ಬದುಕು ನೋಡುವವರಿಗೆ ರೋಮಾಂಚನ, ಇಲ್ಲೇ ಬದುಕಿ, ನೀವು ವರ್ಣಿಸಿದ ಘಟನೆಗಳನ್ನು ನೋಡುತ್ತಾ, ಅದರಲ್ಲಿ ಭಾಗಿಯಾಗುತ್ತಾ ಸಾಗುವ ವಲಸಿಗರ ನಿಜವಾದ ಪಾಡು ಬೇರೆಯವರಿಗೆ ಅರ್ಥವಾಗದು.
ವಂದನೆಗಳೊಂದಿಗೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೂರಕ‌ ಪ್ರತಿಕ್ರಿಯೆಗೆ ಧನ್ಯವಾದಗಳು ಅಬ್ದುಲ್, ಕೊಲ್ಲಿ ಬದುಕು ಹೇಗೆ ನಮ್ಮನ್ನು ಕೊಲ್ಲುತ್ತದೆನ್ನುವುದು ಅನುಭವಿಸಿದವರಿಗೆ ಮಾತ್ರವೇ ಗೊತ್ತಾಗುತ್ತದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಭಾವನೆಗಳ ಪೂರವೇ ನಿಮ್ಮ ಲೇಖನಗಳಲ್ಲಿ ಕಂಡುಬರುತ್ತದೆ, ಇಲ್ಲಿಯೂ ಸಹ! ರಾಜಸಿಕತೆ ಮತ್ತು ಸಾತ್ವಿಕತೆಯ ಸಮ್ಮಿಲನವನ್ನು ನಿಮ್ಮಲ್ಲಿ ಗುರುತಿಸಿರುವೆ. ಇದೇ ನಿಮ್ಮ ಬಗ್ಗೆ ನಾನು ಮೆಚ್ಚುವ ಸಂಗತಿಯಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹಿರಿಯರೆ, ನಿಮ್ಮ‌ ಮೆಚ್ಚುಗೆ, ಬೆಂಬಲ‌ ಸದಾ ಹೀಗೆಯೆ ಇರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.