ಅಮ್ಮಮ್ಮನ ಕಾಫಿಪ್ರೇಮ (ಒಂದು ಪ್ರಬಂಧ)

5

 

 

 

" ಈ ಕಾಫಿ ಅಂಬುದು ಇತ್ತಲೆ, ಇದು ಇತ್ಲಾಯಿ ನಮ್ಮ ಹಳ್ಳಿಗೆ ಬಂದದ್. ಮೊದಲ್, ಕಾಫಿ ಇರ್ಲಿಲ್ಲೆ - ಕಾಫಿನಾ, ಮಣ್ಣಾ; ಬರೀ ಜೀರಿಗೆ ಕಷಾಯ ಕುಡ್ಕಂಡ್, ನಾವೆಲ್ಲ ಕೆಲಸ ಮಾಡುಕೆ ಹೋಯ್ಕಿತ್" 

  ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುತ್ತಿದ್ದ ಅಮ್ಮಮ್ಮ, ಆಗಾಗ ಕಾಫಿಯನ್ನು ಪ್ರೀತಿಯಿಂದ ಹೊಗಳುವ ರೀತಿ ಇದು. 

"ಬರೀ ಜೀರಿಗೆ ಕಷಾಯ ಕುಡಿದ್ರೆ, ಬೆಳ್ಗ ಮುಂಚೆಯೇ ಬಾಯಿ ಒಂಥರಾ ಆತಿಲ್ಯಾ?" ಎಂದು ನಾವು ಕೇಳಿದರೆ, 

"ನಿಮಗೆ, ಮಕ್ಕಳಿಗೆ , ಒಳ್ಳೆ ಬಾಯಿರುಚಿ,ಈಗ. ಕಾಫಿನಾ - ಗೀಫಿನಾ ಎಂದು ನಮ್ಗೆ ಮೊದಲೆಲ್ಲಾ ಬೈತಿದ್ರ್. ಕಾಫಿ ಪುಡಿ ಅಂಗಡಿಗೆ ಹೊಸ್ತಾಯಿ ಮಾರಾಟಕ್ಕೆ ಬಂದ ಸಮಯದಲ್ಲಿ, ಗಂಡಸರು, ದೊಡ್ಡವರು ಮಾತ್ರ ಕಾಫೀ ಕುಡಿಲಕ್ಕಿದಿತ್. ನಮಗೆಲ್ಲ, ಹೆಂಗಸರು ಮಕ್ಕಳಿಗೆ, ಜೀರಿಗೆ ಬಿಸಿನೀರು, ಅಥವಾ ನೇರ್ಲ ಕೊಡಿ ಕಷಾಯ - ಅದಕ್ಕೆ ಹಾಲು ಸಮೇತ ಸರೀ ಹಾಕ್ ತಿರಲ್ಲೆ........" ಎಂದು, ಕಾಫಿಪುಡಿಯು ನಮ್ಮ ಊರಿಗೆ ಹೊಸದಾಗಿ ಪರಿಚಯವಾದ ದಿನಗಳನ್ನು ನೆನಪಿಸುತ್ತಿದ್ದರು. 

 "ಈಗ ಮಾತ್ರ ಬೆಳಿಗ್ಗೆ ಎದ್ ಕೂಡಲೇ, ಒಂದು ಕಾಫಿ ಇಲ್ ದಿದ್ರೆ, ಯಾವ ಕೆಲಸ ಮಾಡುಕೂ ಆತಿಲ್ಲೆ" ಎಂದು, ಹೇಳುತ್ತಾ, ಕಾಫಿ ಕುಡಿದು ಕೆಲಸ ಮಾಡಲು ವಿದ್ಯುಕ್ತರಾಗುತ್ತಿದ್ದರು. 

"ಕಾಫಿ ಪುಡಿ ಇಲ್ಲಿಗೆ ಬಂದು, ಇಷ್ಟ್ ವರ್ಷ ಆದ್ರೂ, ಕೆಲವರಿಗೆ ಒಳ್ಳೆ ಕಾಫಿ ಮಾಡುಕೇ ಬತ್ತಿಲ್ಲೆ" ಎನ್ನುತ್ತಾ, ತಾನು ಕಾಫಿ ಮಾಡುವ ವಿಧಾನವನ್ನು ವಿವರಿಸುತ್ತಿದ್ದರು.

 "ಒಳ್ಳೆ ಲಕ್ಷ್ಮಿಕಾಫಿ ಪುಡಿ ತರ್ಕ್. ಗೋಳಿಯರ ಅಂಗಡಿಲಿ ಅದು ಸಿಕ್ಕತ್. ಅದನ್ನು ನೀರಿಗೆ ಹಾಕಿ ಚಾಪುಡಿ ಥರಾ ಕೊದ್ಸುಕಾಗ, ನೀರ್ ಬಿಸಿ ಮಾಡಿ, ಕೊದ್ಸಿ, ಆಮೇಲೆ ಪುಡಿನ ನೀರಿಗೆ ಹಾಕಕ್....ಕೂಡ್ಲೆ ಒಲೆಯಿಂದ ಕೆಳಗೆ ಇಳ್ಸಕ್" ಮುದೂರಿಬೈಲಿನ ಕೆಲಸದಾಳುಗಳ ಬಳಿ, ತಾನು ಕಾಫಿ ಮಡುವ ವಿಧಾನವನ್ನು ಅವರು ಅದೆಷ್ಟು ಬಾರಿ ಹೊಗಳಿಕೊಂದಿದ್ದರೋ, ಲೆಕ್ಕವೇ ಇಲ್ಲ. 

   ವರ್ಷದ ಯಾವುದೇ ತಿಂಗಳಾಗಿರಲಿ, ಕೆಲಸ ಜಾಸ್ತಿ ಇರಲಿ, ಇಲ್ಲದಿರಲಿ, ಚಳಿಗಾಲವಿರಲಿ, ಮಳೆಗಾಲವಿರಲಿ, ಪ್ರತಿದಿನ ಅಮ್ಮಮ್ಮ ಬೆಳಿಗ್ಗೆ ಐದು ಗಂಟೆಗೆಲ್ಲಾ ಏಳುತ್ತಿದ್ದರು. ಅವರೊಂದು ರೀತಿಯ ವರ್ಕಾಲಿಕ್; ಬೆಳಿಗ್ಗೆ ಎದ್ದ ಕೂಡಲೇ ಒಂದು ಕಾಫಿ ಬೇಕೇ ಬೇಕು. ಅವರ ಯೌವ್ವನ ಕಾಲದಲ್ಲಿದ್ದ ಜೀರಿಗೆ ಕಷಾಯದ ಸ್ಥಳವನ್ನು ಕಾಫಿಯು ಆಕ್ರಮಿಸಿ ಹತ್ತಾರು ವರ್ಷಗಳೇ ಕಳೆದಿದ್ದು, ಆಗಾಗ ಕಾಫಿ ಕುಡಿಯುವ ಅಭ್ಯಾಸ ನಮ್ಮ ಮನೆಯಲ್ಲಿ ಪರಿಪಾಠವಾಗಿತ್ತು. 

   ಕಾಫಿಗಾಗಿ ನೀರನ್ನು ಕುದಿಸಲೆಂದೇ ಒಂದು ಪಾತ್ರೆ ಇತ್ತು. ಅದರಲ್ಲಿ ನೀರನ್ನು ಚೆನ್ನಾಗಿ ಮರಳಿಸುತ್ತಾರೆ, ಅದಕ್ಕೆ ಕಾಫಿ ಪುಡಿ ಹಾಕಿ, ತಕ್ಷಣ ಒಲೆಯಿಂದೀಚೆ ತೆಗೆಯುತ್ತಾರೆ - ಕಾಫಿ ಪುಡಿ ಹಾಕಿದ ನಂತರ, ನೀರನ್ನು ಕುದಿಸಬಾರದಂತೆ - ಒಂದು ಚೌಕದಲ್ಲಿ ಅದನ್ನು ಸೋಸಿ, ಡಿಕಾಕ್ಶನ್ ತಯಾರಿಸಿ, ಅದಕ್ಕೆ ಹಾಲು ಸಕ್ಕರೆ ಬೆರೆಸಿ ಕುಡಿಯುವಿಕೆ. ಸಕ್ಕರೆ ಬಳಕೆಗೆ ಬರುವ ಮುಂಚೆ , ಮುದ್ದೆ ಬೆಲ್ಲ ಹಾಕುವ ಪದ್ದತಿ ಇತ್ತು. 

"ಈ ಸರ್ತಿ ತಂದ ಕಾಫಿ ಪುಡಿ ಒಳ್ಳೆದಿತ್, ಒಳ್ಳೆ ಪರಿಮಳ ಇತ್....." ಎನ್ನುತ್ತ್ರಾ ಕಾಫಿ ಚಪ್ಪರಿಸುವ ಅಮ್ಮಮ್ಮನ ಜಾಪು ಒಂದು ರೀತಿಯಲ್ಲಿ ಚಂದ. 

"ಅದೆಂತದೇ ಇದ್ರೂ, ಬೆಂಗಳೂರಿನ ರೈಲ್ವೆ ಸ್ಟೇಷನ್ನಲ್ಲಿ ವಿಭೂತಿ ಬಳ್ಕಂಡಿದ್ದ ಆ ಮಳೆಯಾಳಿ ಮಾರುತ್ತಿದ್ದ ಕಾಫಿಯ ರುಚಿಯೇ ರುಚಿ. ಆ ಪರಿಮಳ ಇಲ್ಲ್ಲಿ ಬತ್ತಿಲ್ಲೆ" ಎನ್ನುತ್ತಾ, ತಾವು ಒಂದೆರಡು ಬಾರಿ ಬೆಂಗಳೂರಿಗೆ ಹೋದಾಗ ರೈಲ್ವೇ ಸ್ಟೇಷನ್ ನಲ್ಲಿ ಕಂಡಿದ್ದ ಕಾಫಿ ಮಾರುವವನನ್ನು ಆಗಾಗ ಹೊಗಳುವುದೂ ಉಂಟು. 

   ಕಾಫಿ ಕುಡಿದವರೇ, ಕೆಲಸ ಮಾಡಲು ಶುರು ಹಚ್ಚಿಕೊಳ್ಳುತ್ತಾರೆ. ಮೊದಲಿಗೆ, ಗಂಟಿಗೆ ಬಾಯರು ಹಾಕುವ ಕೆಲಸ. ಹಟ್ಟಿಯಲ್ಲಿರುವ ಬಾಯರು ಹರಿಗೆ ಬೆಂಕಿ ಒಟ್ಟಿ ಬಿಸಿಮಾಡಿ, ದನಗಳ ಮುಖದ ಎದುರಿರುವ ಮರದ ಮರಿಗೆಗೆ ಬಾಯರನ್ನು ಸುರಿದಾಗ, ಅವು "ಸೊರ್" ಎಂದು ಬಾಯರನ್ನು ಹೀರುವಾಗ, ಆ ಬಾಯರನ್ನು ತಾವೇ ಕುಡಿದಷ್ಟು ಖುಷಿ ಅವರಿಗೆ! 

 "ರಾತ್ರಿಯಿಂದ ಉಪವಾಸ ಇದ್ದೊ, ಬೆಳಿಗ್ಗೆ ಬಾಯರು ಹಾಕಿದ ಕೂಡ್ಲೆ ಕಾಯ್ ಕಂಡ್ ಕುಡಿತೊ. ನಾವು ಎದ್ದ ಕೂಡಲೆ ಕಾಫಿ ಕುಡಿದ ರೀತಿಯೇ ಈ ದನಗಳಿಗೂ ಬಾಯರ್. ನಾವು ಬೇಕಾದ್ದು ಮಾಡ್ಕಂಡ್ ಕುಡಿಯುವೊತ್ತಿಗೆ, ಇವ್ವನ್ ಉಪವಾಸ ಬಿಡುಕಾತ್ತಾ?" 

  ಹಟ್ಟಿಯಲ್ಲಿದ್ದ ದನಗಳು ಹಾಲು ಕೊಡುವಂತಹವು ಇದ್ದರೆ, ನಂತರ ಹಾಲು ಕರೆಯುವ ಕೆಲಸ. ಅಮ್ಮಮ್ಮ ಬೇರೆ ಕೆಲಸಗಳಲ್ಲಿ ಮಗ್ನರಾಗಿದ್ದರೆ, ಹಾಲು ಕರೆಯುವ ಕೆಲಸವನ್ನು ಅಮ್ಮ ಮಾಡುವುದುಂಟು. ಅಷ್ಟು ಹೊತ್ತಿಗೆ, ಗದ್ದೆ ಬದಿಗೆ ಹೋಗಿ, ಗದ್ದೆ ಕಂಟಕ್ಕೆ ಅಡ್ಡಲಾಗಿ ಬಿದ್ದಿದ್ದ ಬತ್ತದ ಕೆಯ್ ಯನ್ನು ದೊಡ್ಡ ಕೋಲಿನ ಸಹಾಯದಿಂದ, ಪುನ: ಗದ್ದೆಯತ್ತ ಮಗುಚಿ, ಎಲ್ಲಾ ಗದ್ದೆಗಳಿಗೂ ಒಂದು ಭೇಟಿ ನೀಡಿ,ವಾಪಸು ಬಂದಿರುತ್ತಾರೆ, ಅಮ್ಮಮ್ಮ. 

"ಬಿಸಿ ಬಿಸಿ ಹಾಲು ಕರೆದ ಕೂಡಲೇ,ಕಾಪಿ ಮಾಡಿರೆ, ರುಚಿ ಜಾಸ್ತಿ. ನಮ್ಮ ಲಕ್ಷ್ಮಿ ದನದ ಹಾಲು ಹಾಕಿದ ಕಾಫಿ ರುಚಿಯನ್ನು ನೀವು ಕುಡಿದೇ ಕಾಣ್ಕ್; ಬತ್ ಗಂದಿ ದನ ಅಲ್ದಾ, ಅದರ ಗಟ್ಟಿ ಹಾಲು ಹಾಕಿ ಮಾಡಿದ ಕಾಫಿ ರುಚಿಯೇ ರುಚಿ" ಎನ್ನುತ್ತಾ ಮತ್ತೊಮ್ಮೆ ಕಾಫಿ ಸಮಾರಾಧನೆಗೆ ಮುನ್ನುಡಿ ಹಾಡುತ್ತಿದ್ದರು. ಬೆಳಿಗ್ಗೆ ಎರಡನೆಯ ಸುತ್ತಿನ ಕಾಫಿ ಕುದಿಸುವಾಗ, ಮನೆ ತುಂಬಾ ಕಾಫಿಯ ಘಮಲು. ನಾವು ಶಾಲೆಗೆ ಹೋಗಲು ತಯಾರಿ ಮಾಡುತ್ತಿರುವಾಗ, ಎರಡನೆಯ ಸುತ್ತಿನ ಕಾಫಿಯಲ್ಲಿ ನಮಗೂ ಪಾಲುಂಟು.

 "ಮಕ್ಕಳು ಜಾಸ್ತಿ ಕಾಫಿ ಕುಡಿಯುಕಾಗ, ಸ್ವಲ್ಪ ಕುಡಿದರೆ ಅಡ್ಡಿಲ್ಲ, ಚಳಿಗೆ ಒಳ್ಳೆದು. ಈ ಬೈಲುದಾರಿಯಲ್ಲಿ ಹನಿಬಿದ್ದ ಗದ್ದೆ ಕಂಟದಲ್ಲಿ ನಡ್ಕಂಡ್ ಶಾಲೆಗೆ ಹೋಯ್ಕಲೆ, ಕಾಫಿ ಕುಡ್ಖಂಡೇ ಹೋಯ್ಕ್. ಇಲ್ಲದಿದ್ರೆ, ಕಾಲೆಲ್ಲಾ ಈ ಹನಿಯಿಂದ ಚಳಿ ಚಳೀ ಆಯಿ, ಮರಗಟ್ಟತ್ " ಎನ್ನುತ್ತಾ ನಮಗೂ ಕಾಫಿ ಕುಡಿಯಲು ಕೊಡುತ್ತಿದ್ದರು.

 ಮಳೆಗಾಲದಲ್ಲೋ, ಚಳಿಗಾಲದಲ್ಲೋ ಯಾರಿಗಾದರೂ ಸ್ವಲ್ಪ ಜ್ವರವೋ, ನೆಗಡಿಯೋ ಆದರೆ, ಅದಕ್ಕೆ ರಾಮಬಾಣವೆಂದರೆ ಕಾಫಿ ಎಂದೇ ಅಮ್ಮಮ್ಮನ ನಂಬಿಕೆ. 

"ಬಿಸಿ ಬಿಸಿ ಕಾಫಿ ಕುಡಿದು, ಕಂಬಳಿ ಹೊದ್ಕೊಂಡು ಮಲ್ಕಂಡ್ರೆ, ಸಣ್ಣ ಪುಟ್ಟ ಜ್ವರ ಎಲ್ಲಾ ಪುಡ್ಚೊ!" ಎಂದು, ಕಾಫಿ ಮಾಡಿ ಕುಡಿಸಿ, ಜ್ವರ ಬಂದವರಿಗೆ ಧೈರ್ಯ ತುಂಬುತ್ತಿದ್ದರು. 

"ಈಗ ಹಾಲು ಹಾಕಿದ ಕಾಫಿ, ನಿಮಗೆಲ್ಲಾ ಬಾಯ್ ರುಚಿಗೆ ಒಳ್ಳೆದಾತ್. ಮೊದಲ್ ಕಾಫಿ ಕಣ್ ಕುಡೀತಿದ್ದೊ, ನಾವೆಲ್ಲಾ" ಎನ್ನುತ್ತಾ ಬೆಲ್ಲ ಹಾಕಿದ ಕಾಫಿ ಕಣ್ ನೆನಪಿಸುತ್ತಿದ್ದರು. ಕಾಫೀ ಕಣ್ ಎಂದರೆ, ಹಾಲನ್ನು ಸೋಕಿಸದ ಕಾಫಿ. ಕಾಫಿಯ ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಅಥವಾ ಬೆಲ್ಲ ಹಾಕಿದರೆ ಕಾಫಿ ಕಣ್ ತಯಾರಾಗುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಕರಾವು ಇಲ್ಲದಿದ್ದವರು ಅಥವಾ ಹಾಲನ್ನು ಖರೀದಿಸಿ ತರಲು ಕಷ್ಟವಾಗುವಂತಹವರು, ಕಾಫಿ ಕಣ್ ಕುಡಿಯುತ್ತಿದ್ದರು. ಅಂದಿನ ಬಡವರ ಕಾಫಿಯೇ "ಕಾಫೀ ಕಣ್". ಪೇಟೆಗಳಲ್ಲಿರುವ ದೊಡ್ಡ ದೊಡ್ಡ ಹೋಟೆಲುಗಳಲ್ಲಿ "ಬ್ಲಾಕ್ ಕಾಫಿ" ಎಂಬ ಆಧುನಿಕ ಹೆಸರಿನ ದುಬಾರಿ ಕಾಫಿಯು, ನಮ್ಮ ಹಳ್ಳಿಯ "ಕಾಫಿ ಕಣ್" ಎಂದು ತಿಳಿದಾಗ, ನಮಗೆಲ್ಲಾ ಅಚ್ಚರಿಯೋ ಅಚ್ಚರಿ! 

     ಅಮ್ಮಮ್ಮನ ಕಾಫಿ ಪ್ರೇಮವನ್ನು ಕಂಡು, ಘಟ್ಟದ ಮೇಲಿನಿಂದ ಊರಿಗೆ ಬಂದ ಅಪ್ಪಯ್ಯ, ಒಂದು ಪುಟ್ತ ಕಾಫಿ ಫಿಲ್ಟರ್ ತಂದರು. ಸರಿಯಾದ ಕ್ರಮದಲ್ಲಿ ಫಿಲ್ಟರ್ ಕಾಫಿ ಮಾಡಲು ಕಲಿತ ನಂತರ, ಬೇರೆ ಕಾಫಿ ಅಮ್ಮಮ್ಮನಿಗೆ ರುಚಿಸುತ್ತಿರಲಿಲ್ಲ. "ಫಿಲ್ಟರ್ ಕಾಫಿ ರುಚಿ ಚಂದ ಇರತ್. ಆದರೆ, ಕಾಫಿ ಪುಡಿ ಖರ್ಚು ಮಾತ್ರ ಬರಾಬ್ಬರಿ ಆತ್" ಎಂದು ರಾಗವೆಳೆಯುತ್ತಲೇ, ಫಿಲ್ಟರ್ ಕಾಫಿ ಹೀರುತ್ತಿದ್ದರು. ಸ್ವಲ್ಪ ಸ್ವಲ್ಪ ಕಾಫಿ ಮಾಡುವುದಾದರೆ, ನೀರು ಕುದಿಸಿ, ಡಿಕಾಕ್ಶನ್ ಮಾಡುವುದೇ ಸುಲಭ ಎಂಬುದು ಅಮ್ಮಮ್ಮನ ಅನುಭವ. (ಕೆಲವು ಪದಗಳ ಅರ್ಥ: ಗಂಟಿ= ಜಾನುವಾರು. ಜಾಪು = ಶೈಲಿ. ಬಾಯರು=ಕುಡಿಯುವ ದ್ರವ. ಮರಿಗೆ = ಮರದ ಪಾತ್ರೆ. ಹಟ್ಟಿ=ದನದ ಕೊಟ್ಟಿಗೆ. ಕೆಯ್ = ಬತ್ತದ ಸಸಿ. ಕಂಟ= ಅಂಚು. ಬತ್ ಗಂದಿ=ಕರುಹಾಕಿ ಬಹಳ ದಿನವಾದ ಹಸು. ಕರಾವು = ಕರೆಯುವ ಹಸು. )

 

 

ಚಿತ್ರ ಕೃಪೆ: ಗೇಮ್ ಸ್ಫಾಟ್.ಕಾಮ್

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಶಿಧರ್ ಚೆನ್ನಾಗಿದೆ ಕಾಫಿ ಪುರಾಣ. ನನ್ನ ಅಜ್ಜಿ ಮನೆಲ್ಲು ಲಕ್ಷ್ಮಿ ಕಾಫಿ ನೇ. ನಮ್ಮ ಮನೇಲಿ ಬೆಲ್ಲ ಹಾಕಿ ಕಾಫಿ ಮಾಡುತ್ತಿದ್ದರು, ಅಜ್ಜಿ ಮನೆಗೆ ಹೋದಾಗ ಸಕ್ರೆ ಕಾಫಿ ರುಚಿ ಅನಿಸುತಿತ್ತು.ಈಗ ಇಲ್ಲಿ ಕಾರ್ಡ್ ಸ್ವೀಪ್ ಮಾಡಿ ಆ ಬ್ಲಾಕ್-ಕಾಫಿ ಕುಡಿಯುವ ಜನರನ್ನು ನೋಡಿದಾಗ ಬಾಲ್ಯದಲ್ಲಿ ಮನೆ ಆಳುಗಳಿಗೆ ಕೊಡುತ್ತಿದ್ದ ಒಂದು ಹೊತ್ತಿನ ಕಣ್ ಕಾಫಿ ಯ ನೆನಪಾಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಕ್ಷ್ಮೀ ಕಾಫಿಯನ್ನು ನೀವೂ ಕುಡಿದದ್ದು ಕೇಳಿ ನನಗೆ ಖುಷಿ ಆಗಿದ್ದು ಏಕೆಂದರೆ, ಆ ಕಂಪನಿಯ ಹೆಸರನ್ನು ಬರೆದನಂತರ, ಆ ಹೆಸರಿನ ಕಂಪನಿ ಇದ್ದಿದ್ದು ನಿಜವೇ ಎಂಬ ಅನುಮಾನವೂ ಬಂತು! ಈಗ ಆ ಕಂಪನಿ ಕಾಫಿ ಹಿಂದಿನಷ್ಘ್ಟು ಜನಪ್ರಿಯವಲ್ಲ. ಬೆಲ್ಲದ ಕಾಫಿಯನ್ನು ಈಗಲೂ ನಮ್ಮ ಮನೆಯಲ್ಲಿ ಮಾಡುವುದುಂಟು - ನೀರು ಬೆಲ್ಲ ಹಾಕಿದಕಾಫಿಗೆ ಬೇರೆಯದೇ ಆದ ರುಚಿ ಇದೆ. -ಶಶಿಧರ ಹಾಲಾಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಬ್ಬಾರರು ಸಂಪದದಲ್ಲಿ ಕಾಣದೇ ತುಂಬ ದಿನ ಆಯ್ತಲ್ಲ ಎಂದು ಯೋಚಿಸ್ತಾ ಇದೆ.ಅಷ್ಟೊತ್ನಲ್ಲಿ ಬಂದೇ ಬಿಟ್ರಿ, ಕಾಫಿ ಕುಡಿಯೋದು ಒಳ್ಳೆ ಹವ್ಯಾಸ.ಅದನ್ನು ಸಣ್ಣ ಲೋಟದಲ್ಲಿ ಅರ್ಧದಷ್ಟು ಹಾಕಿ ಚೂರುಚೂರೇ ಹೀರುವುದೇ ಖುಷಿ.ಕೆಲವರನ್ನು ನೋಡಿದೇನೆ,ಅವರು ಕಾಫಿಯನ್ನು ನೀರು ಕುಡಿದಂತೇ ಕುಡಿಯುತ್ತಿರುತ್ತಾರೆ.ಅವರು ಕುಡಿಯುವ ಲೋಟವೇನು ಚಿಕ್ಕದಲ್ಲ.ಈ ಹೋಟೆಲನಲ್ಲಿ ನೀರು ಕೊಡುತ್ತಾರಲ್ಲ ಆ ಗಾತ್ರದ ಲೋಟ.ಆ ಲೋಟದಲ್ಲಿ ದಿನಕ್ಕೆ ನಾಲ್ಕೈದು ಸಲ ಕುಡಿಯುತ್ತಿರುತ್ತಾರೆ.ಇನ್ನೂ ಕಾಫಿ ಮಾಡುವ ಪಾತ್ರೆಯೋ,ಅದರಲ್ಲಿ ನಾಲ್ಕು ಜನಕ್ಕೆ ಅಡಿಗೆ ಮಾಡಬಹುದು ಅಷ್ಟು ದೊಡ್ಡದು.ಯಾವಾಗಲೂ ಶಾಖದ ಒಲೆಯ ಮೇಲೆ ಇರುತ್ತೆ.ಇನ್ನೂ ಜೀರಿಗೆ ,ಸಂಬಾರ ಬೀಜದ ಕಷಾಯ,ರಾಗಿ-ಬೆಲ್ಲದ ಮಾಲ್ಟ ,ಅಷ್ಟು ರುಚಿ ಇಲ್ಲದಿದ್ದರೂ ಆರೋಗ್ಯಕ್ಕೆ ತುಂಬ ಒಳ್ಳೆಯದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಲೆನಾಡಿನಲ್ಲಿ ದೊಡ್ಡ ದೊಡ್ಡ ಲೋಟಗಳಲ್ಲಿ ಕಾಫಿ ಕುಡಿಯುತ್ತಾರಂತ ಕೇಳಿದ್ದೀನಿ. ನೀರು ಜಾಸ್ತಿ ಹಾಕಿ, ಪುಡಿ ಕಡಿಮೆ ಹಾಕಿ ಬಾಯಾರಿಕೆಗೆ ಕಾಪಿ ಕುಡಿಯುವ ಪದ್ದತಿ ಅಲ್ಲಿರಬಹುದು - ನೀವು ಹೇಳಿದವರು, ನೀರಿನಂತೆ ಕುಡಿಯುವವರು, ನೀರಿನ ಬದಲು ಅದನ್ನು ಕುಡಿಯುತ್ತಿರಬೇಕು; ಜಾಸ್ತಿ ಮಳೆ ಬರುತ್ತಿರುವಾಗ, ತಣ್ಣೀರು ಕುಡಿಯಲು ಛಳಿ ಅಲ್ವಾ? ಧನ್ಯವಾದ, ನಿಮ್ಮ ಪ್ರತಿಕ್ರಿಯೆಗೆ. -ಶಶಿಧರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ರೆ ಹಾಕಿದ ಕಾಪಿಗಿಂತ ಬೆಲ್ಲದ ಕಾಪಿ ಲಾಯ್ಕ್ ಅಲ್ದಾ .ನಮ್ಗೆಲ್ಲ ಹಾಲ್ ನೀರ್ ಕೊಡ್ತಿದ್ರ್..ಮಕ್ಕಳೆಲ್ಲ ಚಾ ಕಾಪಿ ಕುಡುಕಾಗ ಅಂದಳಿ..ಅದಕ್ಕೆ ಈಗ್ಲೂ ಕಾಫಿ ಟೀ ಕುಡಿಯೋದೆ ಇಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವ್ ಈಗಲೂ ಚಾ ಕಾಪಿ ಕುಡುದಿಲ್ಲೆ ಅಂದ್ರೆ ಆಶ್ಚರ್ಯ ಆತ್ ಮಾರಾಯ್ರೆ. ಇತ್ಲಾಯಿ ನಾನ್ ಬೆಲ್ಲದ ಚಾ ಕುಡುಕೆ ಕಲ್ತಿದೆ; ಚಾ ಕೊದ್ಸಿ, ಕೆಳಗೆ ಇಳ್ಸಿದ್ ಮೇಲೆ, ಒಂದು ಚಮದ ನೀರ್ ಬೆಲ್ಲ (ಮುದ್ದೆ ಬೆಲ್ಲ) ಹಾಕಿ, ಸಮಾ ಕರ್ಡಿ, ಕುಡ್ದ್ರೆ, ಲಾಯ್ಕ್ ಇರತ್.-ಶಶಿಧರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಾಯ್ಕಿತ್ತ್ ಮರ್ರೆ ಕಾಪಿ ಪುರಾಣ... ನಂದ ಒಂದ್ ಕುಂದಾಪ್ರ ಕನ್ನಡ ಬ್ಲಾಗ್ ಇತ್ತ್.... ಒಂದ್ ಗಳ್ಗಿ ಪುರ್ಸೋತ್ತ್ ಮಾಡ್ಕಂಡ್ ನೀಕಿ ಕಾಣಿ ಆಗ್ದಾ? http://kundaaprakann... ವಿಜಯರಾಜ್ ಕನ್ನಂತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ ಬ್ಲಾಗ್ ಕಂಡಿದೆ. ಚಂದ ಇತ್, ಮರಾಯ್ರೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.