ಅಮ್ಮನ ಮನೆಗೆ ಡ್ರಾಪ್

3.5

ಅಮ್ಮನ ಮನೆಗೆ ಡ್ರಾಪ್
=================

ಬೆಳಗ್ಗೆ ಆಫೀಸಿಗೆ ಹೊರಡುವ ತರಾತುರಿ. ಪತ್ನಿ ಬೇರೆ ಸಿದ್ದವಾಗಿ ನಿಂತಿದ್ದಳು,
"ಈವತ್ತು ವಾಟರ್ ಬಿಲ್ ಕಟ್ಟಲು ಕಡೆ ದಿನ. ಹಾಗೆ ನನ್ನನ್ನು ಕತ್ರಿಗುಪ್ಪದ ವಾಟರ್ ಬಿಲ್ಲಿಂಗ್ ಸ್ಟೇಶನ್ ಹತ್ತಿರ ಇಳಿಸಿಬಿಡಿ. ನಾನು ಅಲ್ಲಿ ದುಡ್ಡು ಕಟ್ಟಿ ಹಾಗೆ ಅಮ್ಮನ ಮನೆಗೆ ಹೋಗಿ ಬಂದುಬಿಡುತ್ತೇನೆ"
ಎಷ್ಟೆ ಆತುರವಿದ್ದರು ಪತ್ನಿಯ ಮಾತು ಮೀರಲಾದೀತೆ, ಸರಿ ಎಂದು ಸಿದ್ದನಾದೆ. ಮನೆಗೆ ಬೀಗ ಹಾಕಿ ಸ್ಕೂಟರ್ ನ ಹಿಂದೆ ಬಂದು ಕುಳಿತಳು. ಸೋಮವಾರ ಬೆಳಗ್ಗೆ ಎಂದರೆ ಸ್ವಲ್ಪ ವಾಹನಗಳ ಗಲಾಟೆ ಜಾಸ್ತಿ ಅನ್ನಿ, ನೀರು ಸರಬರಾಜು ಆಫೀಸಿನ ಹತ್ತಿರ ಗಾಡಿ ನಿಲ್ಲಿಸಿದೆ, ನನ್ನವಳು
"ಸ್ವಲ್ಪ ಹಾಗೆ ಇರಿ, ಹಣ ಕಟ್ಟಲು ಕ್ಯೂ ಏನು ಜಾಸ್ತಿ ಇಲ್ಲ, ಎರಡು ನಿಮಿಷ ಕಟ್ಟಿ ಬಂದು ಬಿಡುವೆ, ನನ್ನನ್ನು ಅಮ್ಮನ ಮನೆ ಹತ್ತಿರ ಇಳಿಸಿ ಹೋಗಿ " ಎಂದಳು,
ಗಡಿಯಾರ ನೋಡಿಕೊಂಡೆ, ಪರವಾಗಿಲ್ಲ, ಸರಿಸಮಯದಲ್ಲಿ ಆಫೀಸಿಗೆ ಹೋಗಬಹುದು, ಹತ್ತು ನಿಮಿಷ ಮುಂಚೆ ಹೊರಟಿರುವುದು ಸರಿಯಾಗುತ್ತೆ ಎಂದು. ಗಾಡಿ ಆಫ್ ಮಾಡಿ, ಹಾಗೆ ಗಾಡಿಯ ಮೇಲೆ ಕುಳಿತೆ, ಮುಂದೆ ನೋಡುತ್ತಿದ್ದೆ.  ಮೂರು ನಾಲಕ್ಕು ನಿಮಿಷವಾಗಿರಬಹುದು, ಗಾಡಿಯ ಕನ್ನಡಿಯಲ್ಲಿ ನನ್ನವಳು ಆತುರದಿಂದ ಬರುತ್ತಿರುವುದು ಕಾಣಿಸಿತು. ಬಂದವಳೆ ಗಾಡಿ ಹತ್ತಿ ಕುಳಿತಳು, ನಾನು ಇವತ್ತೇನು ಕ್ಯೂ ಜಾಸಿ ಇಲ್ಲ ಬೇಗ ಆಗಿಹೋಯಿತೆ ಎಂದು ಕೊಳ್ಳುತ್ತಲೆ, ಗಾಡಿ ಸ್ಟಾರ್ಟ್ ಮಾಡಿದೆ, ಅಲ್ಲಿಂದ ಬರೀ ಐದು ನಿಮಿಷದ ದಾರಿ ಅಷ್ಟೆ , ನನ್ನವಳ ಅಮ್ಮನ ಮನೆ. ನಾನು ಹೊರಡುತ್ತಿದ್ದಂತೆ, ಹಿಂದಿನಿಂದ ಹೆಗಲ ಮೇಲೆ ಕೈ ಹಾಕಿ ಕುಳಿತಳು,

 ನನಗೆ ಅದೇನೊ ವಿಶೇಷವೆನಿಸಿತು, ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಗಾಡಿಯಲ್ಲಿ ಕುಳಿತರು, ಗಂಭೀರವೆ ಹೊರತು ಹಾಗೆಲ್ಲ ಹೆಗಲ ಮೇಲೆ ಕೈ ಹಾಕುವುದು, ಸೊಂಟ ಹಿಡಿದು ಕುಳಿತು ಕೊಳ್ಳುವುದು ಸುತಾರಂ ’ಊಹೂಊಊ’ ಎಲ್ಲವೆ ಇಲ್ಲ. ನಗುತ್ತ ಅವರ ಅಮ್ಮನ ಮನೆಯ ಕಡೆ ತಿರುಗಿಸಿದೆ. ಐದು ನಿಮಿಷವಾಗಿಲ್ಲ, ಅವರ ಮನೆ ಮುಂದೆ ಗಾಡಿ ನಿಲ್ಲಿಸಿ,
’ಸರಿ ಇಳಿದುಕೊ, ನಾನು ಒಳಗೆ ಬರಲ್ಲ ಟೈಮ್ ಆಗಿ ಹೋಗಿದೆ, ನಾನು ಹೊರಡುತ್ತೇನೆ" ಎಂದೆ
ಹಿಂದೆ ಇಳಿದ ಅವಳು,
"ಇದೇನ್ರಿ ಇಲ್ಲಿ ತಂದು ಇಳಿಸುತ್ತೀದ್ದೀರಿ, ಯಾಕೆ ?" ಎನ್ನುತ್ತಿದ್ದಳು, ಹಾಳು ಹೆಲ್ಮೆಟ್ ಸರಿಯಾಗಿ ಕೇಳಿಸುವುದು ಇಲ್ಲ
"ನೀನೆ ಹೇಳಿದೆಯಲ್ಲ ಅಮ್ಮನ ಮನೆಗೆ ಬಿಡಿ ಎಂದು" ಎನ್ನುತ್ತ ಅವಳತ್ತ ತಿರುಗಿದೆ, ಗಾಡಿ ಇಳಿದು ನಿಂತಿದ್ದ ಅವಳು ಏಕೊ ಗಾಭರಿಯಾದಳು,
"ರೀ ಯಾರ್ರಿ ನೀವು" ಎನ್ನುತ್ತ ಬೆಚ್ಚಿ ಬಿದ್ದಳು,
ಅಯ್ಯಯ್ಯೋ ಹೌದಲ್ಲ ಈಕೆ ನನ್ನ ಹೆಂಡತಿಯಲ್ಲ. ಇವಳು ಯಾರೋ ಅದು ಹೇಗೆ ನನ್ನ ಹಿಂದೆ ಬಂದಳು , ನಾನು ಗಾಭರಿಯಾಗಿ ಹೆಲ್ಮೆಟ್ ತೆಗೆದು ಕೈಯಲ್ಲಿ ಹಿಡಿದು
"ಅರೆ ನೀವು ಯಾರ್ರಿ ನನ್ನ ಗಾಡೀಲಿ ಹೇಗೆ ಬಂದಿರಿ, ಹಿಂದೆ ಕುಳಿತ್ತಿದ್ದ ನನ್ನ ಹೆಂಡತಿ ಎಲ್ಲಿ ಹೋದಳು" ಎಂದು ಗಾಡಿ ಆಫ್ ಮಾಡಿ, ಕೆಳಗಿಳಿದು, ಸೈಡ್ ಸ್ಟಾಂಡ್ ಹಾಕಿದೆ
ಇಬ್ಬರಿಗು ಕಸಿವಿಸಿ, ಆಕೆ ನನಗೆ ಅಪರಿಚಿತಳು ಹಾಗೆ ನಾನು ಸಹ ಅವಳಿಗೆ ಅಪರಿಚಿತ. ಏನು ಮಾಡುವುದು ತೋಚಲಿಲ್ಲ, ಆಕೆಯೆ ಅಂದಳು
"ಸಾರ್, ವಾಟರ್ ಆಫೀಸಿನ ಮುಂದೆ ನಾನೆಲ್ಲೊ ಕನ್ ಪ್ಯೂಸ್ ಆಗಿ ನಿಮ್ಮ ಗಾಡಿ ಹತ್ತಿಬಿಟ್ಟಿದ್ದೀನಿ ಅನ್ನಿಸುತ್ತೆ, ಸಾರಿ " ಎಂದಳು.

ನನಗೆ ಆಗಿದ್ದ ತಪ್ಪು ಹೊಳೆದಿತ್ತು. ನಾನು ಗಾಡಿಯ ಕನ್ನಡಿಯಲ್ಲಿ ನೋಡುತ್ತಿದ್ದವನು, ನನ್ನ ಪತ್ನಿ ಬಂದು ಕುಳಿತಳೆಂದೆ ಭಾವಿಸಿ ಬಂದು ಬಿಟ್ಟಿರುವೆ ಅನ್ನಿಸುತ್ತೆ, ಅಲ್ಲದೆ ಅವಳು ಹಾಕಿದ್ದ ಚೂಡಿದಾರ್ ಸಹ ಅದೆ ಬಣ್ಣದ್ದೆ. ಈಗ ಏನು ಮಾಡುವುದು. ಪುನಃ ವಾಟರ್ ಆಫೀಸ್ ಹತ್ತಿರ ಹೋಗುವುದೆ ಸರಿ,ಆದರೆ ಈಕೆಯನ್ನು ಏನು ಮಾಡುವುದು, ನನ್ನ ಗಾಡೀಲಿ ಬರುತ್ತೀರ ಎಂದು ಕೇಳಿದರೆ ಏನು ಹೇಳುವಳೊ? .
"ಸಾರಿ,  ನಾನು ಗಮನಿಸಲಿಲ್ಲ, ಪುನಃ ವಾಟರ್ ಆಫೀಸಿಗೆ ಹೋಗಿ ನನ್ನ ಪತ್ನಿಯನ್ನು ಕರೆದು ತರಬೇಕು, ನೀವು ಬರುವದಾದರೆ ಅಲ್ಲಿಯೆ ಇಳಿಸುವೆ " ಎಂದೆ ತಪ್ಪು ಮಾಡಿದ ಪ್ರಾಯಶ್ಚಿತದ ದ್ವನಿಯಲ್ಲಿ.

ಆಕೆಗೆ ಬೇರೆ ದಾರಿ ಇರಲಿಲ್ಲ. ನಾನು ಗಾಡಿ ತಿರುಗಿಸಿದೆ, ಆಕೆ ಪುನಃ ಹತ್ತಿ ಕುಳಿತಳು,  ಈ  ಬಾರಿ ನನ್ನಿಂದ ಸಾಕಷ್ಟು ದೂರದಲ್ಲಿ ಕುಳಿತಳು, ಹೆಗಲ ಮೇಲೆ ಕೈ ಹಾಕದೆ. ನನಗೆ ಅರ್ಧ ನಗು ಅರ್ಧ ಗಾಭರಿ

ವಾಟರ್ ಆಫೀಸಿನ ಹತ್ತಿರ , ನನ್ನ ಪತ್ನಿ ಮರದ ಕೆಳಗೆ ನಿಂತು ಸುತ್ತಲು ನೋಡುತ್ತಿರುವುದು ಕಾಣಿಸಿತು, ನಾನು ಯಾರನ್ನೊ ಹಿಂದೆ ಕೂಡಿಸಿಕೊಂಡು ಬರುವುದು ಕಂಡು ಅವಳಿಗೆ ಆಶ್ಚರ್ಯ. ಗಾಡಿ ನಿಲ್ಲುತ್ತಿದ್ದಂತೆ, ಇಳಿದ ಆಕೆ ನನಗೆ ಸಾರಿ ಎಂದು ಹೇಳಿ ನನ್ನಿಂದ ಸ್ವಲ್ಪ ದೂರದಲ್ಲಿ, ನಿಂತದ್ದ ಮತ್ತೊಂದು ಸ್ಕೂಟರ್ ಹತ್ತಿರ ಹೋದಳು.
ನಾನು ತಿರುಗಿ ನೋಡಿದೆ, ಆತನ ಸ್ಕೂಟರ್ ಸಹ ನನ್ನದೆ ರೀತಿಯದೆ ಅದೇ ಬಣ್ಣ, ಕಂಪನಿ, ಎಲ್ಲವು, ಅವನು ಸಹ ನನ್ನಂತೆಯೆ ಕಪ್ಪು ಬಣ್ಣದ ರೈನ್ ಕೋಟ್ ಹಾಕಿ, ಹೆಲ್ಮೆಟ್ ಕೈಯಲ್ಲಿ ಹಿಡಿದಿದ್ದ. ಅವಳು ಮುಖ ಕೆಂಪು ಮಾಡಿ ಅವನ ಬಳಿ ಕೂಗಾಡುತ್ತಿದ್ದಳು, ಅವನಾದರೊ ನಗುತ್ತ ನನ್ನ ಕಡೆ ನೋಡುತ್ತಿದ್ದ, ಅವನು ಹೇಳುತ್ತಿರುವುದು ಕೇಳಿಸುತ್ತ ಇತ್ತು
"ಅಲ್ಲವೆ ನಾನು ಕೂಗುತ್ತಲೆ ಇದ್ದೀನಿ, ನೀನು ಹೋಗಿ ಅವರ ಹಿಂದೆ ಕುಳಿತೆ, ಅವರು ಸಹ ಬುರ್ ಎಂದು ಹೊರಟು ಹೋದರು, "ಈ ಹಳೆ ಗಂಡ"  ನಿನಗೆ ಬೇಸರವಾದನೇನೊ ಎಂದು ಸುಮ್ಮನಾದೆ"
ಅವರ ನಗು ಆಕೆಯ ಕೋಪ ಎಲ್ಲವನ್ನು ನೋಡುತ್ತ, ನಾನು ಸಹ , ಅಸಹಾಯಕ ನಗೆ ನಕ್ಕು, ನನ್ನವಳನ್ನು ಗಾಡಿ ಹತ್ತು ಎಂದೆ
ಹಿಂದೆ ಕುಳಿತ, ಆಕೆ ಏನಾಯ್ತು ಎಂದಳು, ನಾನು ಎಲ್ಲವನ್ನು ಹೇಳಿದ ನಂತರ ಆಕೆ ನಗುತ್ತ ನಿಮ್ಮದೆ ಬರಿ ಇಂತಹ ಎಡವಟ್ಟುಗಳೆ , ಹೋಗಲಿ, ಅಮ್ಮನ ಮನೆ ಮುಂದೆ ಗಾಡಿ ನಿಲ್ಲಿಸಿ ಅವಳನ್ನು ಇಳಿಸಿದಾಗ, ಬಾಗಿಲು ತೆರೆದಿತ್ತ, ಯಾರಾದರು ನೋಡಿದರ? ಅಲ್ಲಿ ನಿಮ್ಮನ್ನು ಎಂದು ಕೇಳಿದಳು,
ಹೌದಾ , ನನಗೀಗ ಡೌಟ್ ಪ್ರಾರಂಭವಾಯಿತು, ನಾನು ಆ ಗಡಿಬಿಡಿಯಲ್ಲಿ, ನಮ್ಮ ಮಾವನ ಮನೆ ಕಡೆ ತಿರುಗಿನೋಡಿರಲೆ ಇಲ್ಲ, ಅಲ್ಲಿ ಯಾರಾದರು, ಅತ್ತೆ ಮಾವ, ಭಾವಮೈದುನ ನನ್ನ ನೋಡಿದರ? ಗೊತ್ತಾಗ್ತ ಇಲ್ಲವೆ.

(ನಿಜವಲ್ಲ ಕಲ್ಪನೆ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಜವಾಗಿದೆ ಪ್ರಸಂಗ :-)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಲ್ಲೆಯವರೆ ಮಜವಾಗಿದೆಯ ! ತಥಾಸ್ತು ! ನಿಮಗೂ ಒಮ್ಮೆ ಅನುಭವವಾಗಲಿ !! :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್,
ದಾರಿ ತಪ್ಪಿದ ಮಗ ಚಿತ್ರದಲ್ಲಿ ಮರೆಗುಳಿ ಪ್ರೊಫೆಸರ್ ರಾಜಕುಮಾರ್ ಮಾರ್ಕೆಟ್ಟಿನಲ್ಲಿ ಕೆಂಪು ಸೀರೆ ಉಟ್ಟಿದ್ದ ಇನ್ನೊಬ್ಬ ಹೆಂಗಸನ್ನು ತನ್ನ ಹೆಂಡತಿ ಕಲ್ಪನ ಎಂದು ಕರೆದುಕೊಂಡು ಹೋದ ಹಾಸ್ಯಮಯ ಸನ್ನಿವೇಶ ನೆನಪಿಗೆ ತಂದಿತು; ನಿಮ್ಮ ಈ ಹಾಸ್ಯ ಪ್ರಸಂಗ. ಬಹಳ ರಸವತ್ತರವಾಗಿದೆ :)
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಶ್ರೀಧರ್ ಬಂಡ್ರಿಯವರಿಗೆ. ನಿಮ್ಮ ಲಲಿತ ಸಹಸ್ರದ ವಿವರಣೆ ಓದುತ್ತಿರುವೆ ಖಂಡೀತ ಮುಂದುವರೆಯಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.