ಇತ್ತೀಚೆಗೆ ಸೇರಿಸಿದ ಪುಟಗಳು

ಆ ನನ್ನ ಮನಸ್ಸು

       ಅನಾಮಿಕ ಬೆರಳ ಉಂಗುರದ ಹೊಳಪು ಕುಂದಿದೆ...ಎರಡು ತಿಂಗಳ ಹಿಂದೆಯೇ ನಿಶ್ಚಿತವಾದರೂ, ಅರ್ಥವಾಗುತ್ತಿಲ್ಲ ನೀನೇಕೆ ಜೊತೆಗಿಲ್ಲವೆಂದು. ವಿರಹದ ವೇದನೆಯೆಂದರೆ ಏನೆಂದು ತಿಳಿಸುವ ಪರಿಯೇ...? ನಿನ್ನ ಕಾಣದೆ, ನೋಡದೆ, ಸುಳಿವೇ ಇಲ್ಲದೆ ನನ್ನಿನಿಯನೇ ನನಗಿಲ್ಲವೆಂಬ ದುಃಖ ಬೇರೂರಿದೆ. ಬಿರುಗಾಳಿಯಂತಹ ಈ ಆವೇಗ ನನ್ನಿಂದ ತಡೆಯಲಸಾಧ್ಯವಾಗಿದೆ. ನೀನು ಸಿಗದೇ ಇದ್ದಿದ್ದರೆ ನನಗಾವ ಚಿಂತೆಯೂ ಕಾಡುತ್ತಿರಲಿಲ್ಲ. ಈಗ ಸಿಕ್ಕಿದರೂ ಸಿಗದಂತೆ ಮರೆಯಾದರೆ, ಕಣ್ಣಿದ್ದೂ ಕಾಣದಂತಲ್ಲವೆ...? ಯಾರ ಬಳಿ ಹೇಳಿ ಕಳುಹಿಸಲಿ, ನಿನಗಾಗಿ ಬಕಪಕ್ಷಿಯಂತೆ ಕಾದಿಹೆನು ನಾನೆಂದು. ಬೇಜಾರಿನ ಈ ಮನತರಂಗಗಳು ಕಂಗಳಲ್ಲಿ ಅಬ್ಭರಿಸುತ್ತಿವೆ. ನನ್ನ ಅಂತರಂಗದ ಆಕಾಶ ಖಾಲಿ ಖಾಲಿ ಎನಿಸುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

llತಿಳಿಯದೆll

ಬಯಕೆಗಳು ಹುಟ್ಟುವುದು,
ತಿಳಿಯಲು ಆಗುವುದೇ?
ಬೇಕೆಂದು ಅನ್ನಿಸುವುದು,
ಸುಲಭದಲ್ಲಿ ಸಿಗಬಹುದೇ?

ಸಿಕ್ಕದೇ ಹೋದಾಗ,
ಆಗುವ ನೋವನ್ನು,
ವಿಧವಿಧ ಪದಗಳ ಬಳಸಿ,
ವಿವರಿಸಲು ಆಗುವುದೇ?

ಹೇಳಲು ಹೋದಾಗ,
ಕೇಳುವ ಕಿವಿಯನ್ನು,
ನೀಡದೇ ಹೋದರೆ ಹೇಗೆ,
ಮನಸ್ಸು ಹಗುರ ಆಗುವುದೇ?

ಬರೆಯುವೆ ಯಾಕೆ ಹೀಗೆ ?
ಹೇಳಬೇಕಿರುವುದು ಏನೆಂದು ತಿಳಿಯದೆ!
ಹುಡುಕುವೆ ನನ್ನ ನಾನೇ!
ಕಳೆದಿರುವೆನೆಲ್ಲಿ ಎಂದು ಅರಿಯದೆ!!

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಯೋಗಿll

ನಿನ್ನಂತೆಯೇ ನಾನಾಗಬೇಕು ಯೋಗಿ
ಆಧ್ಯಾತ್ಮದ ಜಗತ್ತಿಗೆ ಕರೆದೊಯ್ಯೋ ವೇಗವಾಗಿ

ಕಾಮವನ್ನು ಸುಟ್ಟು
ಪ್ರೇಮವನ್ನು ನೆಟ್ಟು
ಮನದ ಹೊಲದಲ್ಲಿ
ಪರಮಾರ್ಥಕ್ಕೆ ಉಳುತ್ತಿರುವ ಯೋಗಿ

ಭೋಗದ ಆಸೆ ಬಿಟ್ಟು
ಯೋಗದ ಬಯಕೆಯಿಟ್ಟು
ದೇಹವ ಪಳಗಿಸುತ್ತಾ
ದೃಢಕಾಯವ ಪಡೆದ ಯೋಗಿ

ಕ್ಷಣ ಸುಖಕ್ಕೆ ಪೆಟ್ಟು
ಚಂಚಲತೆಗೂ ಕೊಟ್ಟು
ಚಿತ್ತ ಏಕಾಗ್ರಗೊಳಿಸಿ
ಸ್ಥಿರಮನದಲ್ಲಿ ನಲಿಯುತ್ತಿರುವ ಯೋಗಿ

ಅರಿಯಲು ಬ್ರಹ್ಮನ ಗುಟ್ಟು
ಹಸಿವನ್ನೇ ಮರೆತು ಬಿಟ್ಟು
ಧ್ಯಾನದಿ ಕುಳಿತುಕೊಂಡು
ಜ್ಞಾನವ ಪಡೆದು ಬೆಳಗಿದ ಯೋಗಿ

ನಿನ್ನಂತೆಯೇ ನಾನಾಗಬೇಕು ಯೋಗಿ
ಅದ್ವೈತದಲ್ಲಿ ನೆಲೆಯಾಗಬೇಕು ಸ್ಥಿರವಾಗಿ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಆಧ್ಯಾತ್ಮದ ಬೆತ್ತll

ಹಸಿರನ್ನಾವರಿಸಿರುವ ಮರ ಗಿಡಗಳ ನಡುವೆ
ಮೌನವ ಹೊತ್ತು ಏಕಾಂತದಿ ಕುಳಿತಿರುವೆ
ಮುಂಜಾನೆಯ ರವಿಯ ಕಿರಣ ಸೋಕಿದೊಡನೆ
ಜೀವ ಚೈತನ್ಯವನ್ನು ಅತಿಯಾಗಿ ಪಡೆದಿರುವೆ

ಪಕ್ಷಿಗಳ ಕಲಕಲರವವು ತುಂಬಿದೆ ಸುತ್ತ
ದೂರದ ತಣ್ಣನೆ ಗಾಳಿಯ ಆಗಮನ ನನ್ನತ್ತ
ಒಡೆಯುತ್ತಿದೆ ಕಟ್ಟಿರುವ ಅಶಾಂತಿಯ ಹುತ್ತ
ಹೊಡೆಯುತ್ತಿದೆ ಹಿಡಿದು ಆಧ್ಯಾತ್ಮದ ಬೆತ್ತ

ಒಳ ಹೊರಗಿನ ಅಂತರವು ಸರಿಯುತ್ತಿದೆ
ಅದ್ವೈತದ ಭಾವನೆಯು ಅರಿವಿಗೆ ಬರುತ್ತಿದೆ
ಆನಂದದ ಭಾಷ್ಪ ಕಣ್ಣಲ್ಲಿ ಸುರಿಯುತ್ತಿದೆ
ಜೀವ, ಯೋಗದ ಕೊನೆಯ ಮೆಟ್ಟಿಲೇರುತ್ತಿದೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

llಪ್ರೇಮಜಾಲll

ಸೋಕುತ್ತಿದೆ ಮಳೆಹನಿಯು ನನ್ನ ಮೈಯ
ಜ್ಞಾಪಿಸುತ್ತಿದೆ ಹೃದಯದಲ್ಲಿ ಆದ ಗಾಯ

ನೀನು ದೂರ ಹೋಗುವಾಗ,
ಒಮ್ಮೆ ತಿರುಗಿ ನೋಡದೆ ಹೋದೆ
ನಾನು ತೀರ ಬರುವೆ ಎಂದಾಗ,
ಸನಿಹ ಸಿಗದೆ ನಾ ತುಂಬ ನೊಂದೆ

ಮರೆತು ಹೋಗಲು ಸಾಧ್ಯವೇ?
ಅತಿಯಾಗಿ ಪ್ರೀತಿಸಿರುವ ನಿನ್ನನು
ಜೋಪಾನವಾಗಿ ಕೂಡಿ ಇಡುವೆ
ನೀನು ತುಂಬಿರುವ ನೆನಪನು

ಒಂಟಿಯಾಗಿ ನಾನೀಗ ನಡೆವಾಗ,
ಸಿಗಬಾರದೆ ನೀನು ನನ್ನ ಮುಂದೆ
ಹೇಳದಿರುವ ಮಾತೆಲ್ಲ ಹೇಳುವೆ ಆಗ,
ಆಗುವುದು ಹೃದಯ ಹಗುರ ಅಂದೆ

ಖಾಲಿ ಮಾಡಲು ಆಗುವುದೆ?
ನೀನು ತುಂಬಿರುವ ಮನಸ್ಸನ್ನು
ಬಿಡಿಸಿ ಹೊರಗೆ ಬರಬಹುದೆ?
ಭ್ರಮಿಸಿ ಹೆಣೆದ ಪ್ರೇಮ ಜಾಲವನ್ನು

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

Pages