ಇತ್ತೀಚೆಗೆ ಸೇರಿಸಿದ ಪುಟಗಳು

llಪ್ರೀತಿಯ ಬೇಡಲೇನುll

ನಿಲ್ಲದ ತುಂತುರು ನೀನು
ಮಳೆಯಲ್ಲಿ ನಾ ನೆನೆಯಲೇನು ?
ಕಾಣುವ ದೇವತೆ ನೀನು
ನಾ ನಿನ್ನ ಧ್ಯಾನಿಸಲೇನು ?

ಬಲು ಮೋಹಕ ರೂಪಸಿ ನೀನು
ನಿನ್ನ ನಾ ಮೋಹಿಸಲೇನು ?
ಅತಿ ಕೋಪಿಸಿಕೊಳ್ಳುವೆ ನೀನು
ನಾ ನಿನ್ನ ಮುದ್ದಿಸಲೇನು ?

ಧರೆಗಿಳಿದ ರತಿ ದೇವಿಯೇ ನೀನು
ನಾ ನಿನ್ನ ಮನ್ಮಥನಾಗಲೇನು ?
ಬತ್ತದ ಮಕರಂದದ ಹೂವು ನೀನು
ದುಂಬಿಯಾಗಿ ಹೀರಲು ಬರಲೇನು ?

ಜಿಂಕೆಯ ಕಣ್ಣೋಳು ನೀನು
ನಿನ್ನ ನಾ ಹಿಂಬಾಲಿಸಲೇನು ?
ಕೋಗಿಲೆಯ ದನಿಯೋಳು ನೀನು
ಮಾತಿನ ಮಾಧುರ್ಯಕ್ಕೆ ತನ್ಮಯನಾಗಲೇನು ?

ಕುಣಿಯುವ ನವಿಲು ನೀನು
ನಟರಾಜ ನಾನಾಗಲೇನು ?
ಮರುಭೂಮಿಯ ಮರೀಚಿಕೆ ನೀನು
ನಿನಗಾಗಿ ನಾ ಅಲೆಯಲೇನು ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಕಲಹll

ಕಣ್ಣ ಅಂಚಲ್ಲಿ ನಿಂತ ಕಂಬನಿ
ಕೇಳುತ್ತಿದೆ ಜಾರಿ ಬಿಡಲೇ ?
ಇಲ್ಲ ಒಳಗೆ ಇಂಗಿ ಬಿಡಲೇ ?

ತುಟಿ ಅಂಚಿಗೆ ಬಂದ ಪದವ
ಜೋರಾಗಿ ಹೇಳಿ ಬಿಡಲೇ ?
ಇಲ್ಲ ತುಟಿಗಚ್ಚಿ ಸುಮ್ಮನಿರಲೇ ?

ಜಾರುವ ಕಣ್ಣ ಹನಿಯ ಒರೆಸಲು
ಕೈಗಳಿಗೂ ಯಾಕೋ ಬೇಸರ
ಆಡುವ ಮಾತು ಕೇಳಿಸಿಕೊಳ್ಳಲು
ಕಿವಿಗಳಿಗೂ ಬಂದಿದೆ ಬರ

ಮನದ ಪುಸ್ತಕದಿ ಮೂಡಿದ ವಾಕ್ಯಗಳ
ತಿಳಿಯಲು ಗಾಢವಾಗಿ ಯೋಚಿಸಲೇ ?
ಇಲ್ಲ ಅರಿಯಲಾಗದೆಂದು ಬಿಟ್ಟು ಬಿಡಲೇ ?

ಸಮಚಿತ್ತಕ್ಕೆ ಕತ್ತಿ ಮಸೆಯುತ್ತಿರುವ ಭಾವನೆಗಳ
ವಿರುದ್ಧವೀಗ ಏಕಾಂಗಿಯಾಗಿ ಹೋರಾಡಲೇ ?
ಇಲ್ಲ ಭಯದಿ ಮೊದಲೇ ಶರಣಾಗಲೇ ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

llತೆರೆಯಿತು ಕಣ್ಣುll

ಹಿತವೆನಿಸುವ ಈ ಮಳೆಗಾಲದ ಹವಮಾನವು
ಮರುಕಳಿಸಿದೆ ಕಳೆದುಕೊಂಡ ಮಧುರ ಭಾವವು

ಆಕಾಶದಿಂದ ಸೋರುವ ಹನಿಯ
ಹಿಡಿದಿಡುವ ಭೂಮಿಯ ಪರಿಯ
ನೋಡಲು ಸಾಲದೆ ಹೋಯಿತು ಈ ಎರಡು ಕಣ್ಣು
ತೆರೆಯಲು ಶುರುವಾಯಿತು ಕವಿಯ ಮೂರನೆ ಕಣ್ಣು

ಎಲೆ ತುದಿಯಲ್ಲಿ ಜೋತಾಡುವ ಇಬ್ಬನಿಯ
ಹೊಳೆವಂತೆ ಮಾಡುವ ಮೂಡಣದ ರವಿಯ
ಸೆರೆಹಿಡಿಯಲು ಕಾದಿದೆ ಇರುವ ಎರಡು ಕಣ್ಣು
ಕಣ್ಮುಚ್ಚಿದರೂ ನೋಡುತ್ತಲಿದೆ ಕವಿಯ ಮೂರನೆ ಕಣ್ಣು

ಹಸಿರು ಸೀರೆಯ ಉಟ್ಟು ಮೆರೆವ ಪ್ರಕೃತಿಯ
ತುಂಬಿ ಹರಿಯುತ್ತಿರುವ ನೀರಿನ ಝರಿಯ
ನೋಡುತ್ತ ಅನುಭವಿಸುತ್ತಿದೆ ಹೊರಗಿನ ಎರಡು ಕಣ್ಣು
ಸೃಷ್ಟಿಯ ವಿಸ್ಮಯಕ್ಕೆ ವಿಕಸನಗೊಂಡಿದೆ ಕವಿಯ ಮೂರನೆ ಕಣ್ಣು

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸೂರ್ಯ-ಸಾಗರ ಜೀವನ-ಸಾರ....

             ಸೂರ್ಯ-ಸಾಗರ ಜೀವನ-ಸಾರ....
 
ನಿಶೆಯ ನೀರವ ಗರ್ಭದಿಂದ ಮೂಡಣ ರವಿಯ ಚುಮು ಚುಮು ಬೆಳಗಿನ ಬೆಚ್ಚಗಿನ ಹೊಂಗಿರಣ ಸೋಕಿ ನಿಸರ್ಗ ಕೂಸು ತುಸು ತಡ ಮಾಡದೆ  ಸಾಗರದಲಿ ಸೆರೆಯಾಗಿ ಕಣ್ಸೂರೆ ಗೊಳಿಸಿತು. 
 
ಮಟ ಮಟ ಮಧ್ಯಾಹ್ನ ಹರೆಯದ ಹುರುಪಿನ ಸುಡು ಬಿಸಿಲ ನೀಲ ಗಗನ ಸಾಗರದಲೆಗಳ ಬಡಿದೆಬ್ಬಿಸಿ ಬಡಬಡನೆ ಬದಿಗೆ ಬಡಿದು ಮರಳ ಕೋಟೆಯನ್ನು ಉರುಳಿಸಿ ನೀಲ್ಗಡಲ ಒಡಲು ಮನವ ಕಲಕಿತು.
 
ಇಳಿ ಸಂಜೆಯ ಕಿತ್ತಲೆ ರಂಗಿನ ಪಡುವಣ ನೇಸರ ಮುಂಜಾವಿನ ಬೆಚ್ಚಗಿನ ಹೊಂಗಿರಣಗಳ ನೆನಪಿನಂಗಳಕೆ ತೂರಿ ವಾರಿಧಿಯ ಸರಹದ್ದನು ಮುದ್ದಿಸಿ ಜಾರಿತು.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

llಯೋಗದ ಹಾದಿll

ಆಧ್ಯಾತ್ಮದ ಕಡಗೋಲಲ್ಲಿ
ಕಡೆಯುತ್ತಿರುವೆನು ಮನೋಸಾಗರವನೀಗ
ಅನವರತ ಅಭ್ಯಾಸದಲ್ಲಿ
ಕಡಿಮೆಯಾಗುತ್ತಿರುವುದು ಇಂದ್ರಿಯದ ವೈಭೋಗ

ಕಾಣದ ಪದರಗಳ ಅನಾವರಣ,
ಮೌನದಿ ಮನಸ್ಸಿನ ಒಳ ಹೊಕ್ಕಾಗ
ಎಂದೂ ಕೇಳದ ನಾದಗಳ ಶ್ರವಣ,
ಧ್ಯಾನದಿ ಅನಾಹತ ತೆರೆದಾಗ

ಮಲಗಿದ್ದ ಕುಂಡಲಿನಿಯು ಎದ್ದು ಬುಸುಗುಡುತ್ತ
ಸೀಳಿ ಷಟ್ಚಕ್ರಗಳ, ಸಾಗಿದೆ ಸಹಸ್ರಾರದತ್ತ

ಸುಸ್ಪಷ್ಟ ತೇಜೋಮಯ ಕಿರಣ,
ಗೋಚರ ಆಜ್ಞೆಯ ಕಣ್ಣಲ್ಲಿ ಕಂಡಾಗ
ಆ ಬೆಳಕಿನ ಮೇಲೆಯೇ ಧಾರಣ,
ಆಗಿದೆ ಸಮಾಧಿ ಧ್ಯಾನದಿ ಮೈಮರೆತಾಗ

ಜೀವ ಬ್ರಹ್ಮನ ಜೊತೆ ಸೇರಿ ನಲಿಯುತ್ತ
ಒಡೆದು ಪುಡಿಯಾಗಿದೆ, ಕಟ್ಟಿಕೊಂಡಿದ್ದ ಬಂಧನದ ಹುತ್ತ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llರುದ್ರll

ಜಡೆಯನ್ನು ಬಿಚ್ಚಿದ
ಡಮರುಗ ಕುಟ್ಟಿದ
ತ್ರಿಶೂಲ ಹಿಡಿದು ನಾಟ್ಯ ಮಾಡುತ್ತಿರುವ ರುದ್ರನು

ಮೂರನೆ ಕಣ್ಣನ್ನು ತೆರೆದ
ಮೈಯಿಗೆ ವಿಭೂತಿ ಬಳಿದ
ಕ್ರೋದಗ್ನಿಯ ಜ್ವಾಲೆ ಪಸರಿಸುತ್ತಿರುವ ರುದ್ರನು

ಶಾಂತ ಶಿವನು ಈಗ ಕೆರಳಿದನೋ
ರೌದ್ರ ರೂಪದ ರುದ್ರ ಆಗಿಹನೋ

ಬಾ ಬಾರೋ ಮೃತ್ಯುಂಜಯ ಬೇಗ ಬಾರೋ
ಈ ಮೋಸ ಅನ್ಯಾಯವ ಕೊನೆ ಮಾಡು ಬಾರೋ

ನೊಂದಿರುವ ಮುಗ್ಧ ಜನರು
ಕೂಗುತ್ತಿರುವರು ನಿನಗೆ
ಹಿಂದೆ ಮುಂದೆ ಯೋಚಿಸದೆ
ನೀ ಹೋಗೋ ಅವರ ಬಳಿಗೆ

ಕಣ್ಣ ನೀರು ವರೆಸು, ನೀ ಕೈಯ ಹಿಡಿದು ನಡೆಸು
ನಿನ್ನ ನಂಬಿಕೊಂಡ ಬಾಳು ವ್ಯರ್ಥವಾಗದೆಂದು ತಿಳಿಸು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages