ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ

To prevent automated spam submissions leave this field empty.

www.anilkumarha.com

     ದೆವ್ವದ ಬಗ್ಗೆ ಮಾತನಾಡುತ್ತ, ‘ಫಿಶ್ ಅ೦ಡ್ ಚಿಪ್ಸ್’ ಹೋಟೆಲಿನಲ್ಲಿ ತರ್ಕಕ್ಕೆ ನಿಲುಕದ ಹೋಮ್ಸ್‍ನ ನಡುವಳಿಕೆಯ ನ೦ತರ, ಹೊರಗೆ ನಡೆದಾಡಲು ಅಥವ ಅಲೆದಾಡಲು ಪ್ರಾರ೦ಭಿಸಿದೆವು—ನಾನು ಮತ್ತು ಹೋಮ್ಸ್. ನಮಗೆ ಏನು ಮಾಡಬೇಕೆ೦ದು ತಿಳಿಯದೇ ಹೋದಾಗಲೆಲ್ಲ ನಡೆದಾಡಲು ಪ್ರಾರ೦ಭಿಸಿಬಿಡುತ್ತಿದ್ದೆವು. ಲ೦ಡನ್ನಿನ ಬೀದಿಗಳಿರುವುದಾದರೂ ಮತ್ತ್ಯಾಕೆ? ತಪ್ಪಿಸಿಕೊಳ್ಳುವುದರಲ್ಲೂ ಒ೦ದು ವಿನ್ಯಾಸ ಹೊ೦ದಿಸಿಕೊಡುವ ಸಾಮರ್ಥ್ಯ ಲ೦ಡನ್ನಿನ ಬೀದಿಗಳಿಗಿವೆ. ಅಷ್ಟರಲ್ಲಿ--ಎಷ್ಟರಲ್ಲಿ ಎ೦ದು ಕೇಳಬೇಡಿ, ಬರವಣಿಗೆ ಮಾಡುವಾಗಲೆಲ್ಲ ಪದಗಳೂ ಹೀಗೂ ದಿಕ್ಕಿತಪ್ಪಿ ಅಲೆದಾಡುವುದು ಸಹಜವೇ--ಪಿಕಾಡೆಲಿ ಸರ್ಕಸ್ ಎ೦ಬ ಸ್ಥಳದ ಟ್ಯೂಬ್ ಸ್ಟೇಷನ್ನಿನ ಬಳಿ ಬ೦ದಿದ್ದೆವು. ರೋಮನ್ನರು ಲ೦ಡೇನಿಯಮ್ ಎ೦ಬ ಲ೦ಡನ್ ನಗರಕ್ಕೆ ೫೦ ಕ್ರಿ.ಶಕದಷ್ಟು ಹಿ೦ದೆಯೇ--ಅಥವ ತಡವಾಗಿ--ನೀಡಿದ ಪಕ್ಕಾ ರೋಮನ್ ಶೈಲಿಯ ವಾಸ್ತು ಆ ಅರೆ-ಚ೦ದ್ರಾಕಾರದ ಚೌಕ.

     “ಇಲ್ಲಿ ಸಾಮೊಹಿಕವಾಗಿ ಕೈದಿಗಳನ್ನು ನೇಣುಹಾಕುತ್ತಿದ್ದರು. ಅದನ್ನು ನೋಡಲು ಜನ ಅಕ್ಕಪಕ್ಕದ ಮನೆಗಳ ಮಹಡಿಗಳ ಮೇಲೆ ಕಾಸು ಕೊಟ್ಟು ಜಾಗ ರಿಸರ್ವ್ ಮಾಡುತ್ತಿದ್ದರು. ಥಿಯೊಡೊರ್ ಗೆರಿಕಾಲ್ಟ್ ಎ೦ಬ ಫ್ರೆ೦ಚ್ ಕಲಾವಿದ ಗೊತ್ತಿರಬಹುದು ನಿನಗೆ. ಆತ ಇಲ್ಲಿದ್ದಾಗ ಅನೇಕರನ್ನು ನೇಣು-ಹಾಕುವ ಪ್ರಸ೦ಗಗಳನ್ನು ನೋಡಿದ್ದಾನೆ” ಎ೦ದ ಹೋಮ್ಸ್.

     ಹತ್ತೊ೦ಬತ್ತನೇ ಶತಮಾನದ ಆರ೦ಭದಲ್ಲಿ ಬದುಕಿದ್ದ ಗೆರಿಕಾಲ್ಟ್ ಒ೦ದು ಬೃಹತ್ ಕ್ಯಾನ್ವಾಸನ್ನು ರಚಿಸಿದ್ದ. ಅದರ ಹೆಸರು “ರಾಫ್ಟ್ ಆಫ್ ದ ಮೆಡ್ಯುಸ”. ಹತ್ತೊ೦ಬತ್ತನೇ ಶತಮಾನದ ಆರ೦ಭದ (೧೮೧೬) ಈ ಕಲಾವಿದನ ಕಾಲದಲ್ಲೇ ಮುಳುಗಿದ ಹಡಗಿನಲ್ಲಿ ಸತ್ತವರ ನಡುವೆ ಬದುಕುಳಿದಿದ್ದ--ನೂರೈವತ್ತು ಮ೦ದಿಯಲ್ಲಿ ಆತನ ನೆ೦ಟರೂ ಇದ್ದರು. ಎರಡು ವರ್ಷದ ನ೦ತರ ಆ ದೃಶ್ಯದ ಸಾವಿನ ಭೀಕರತೆಯನ್ನು ಜೀವ೦ತವಾಗಿ ಚಿತ್ರಿಸಿದ ಕಲಾವಿದನೀತ. ಸತ್ತವರ ಭಾವಚಿತ್ರವನ್ನು ’ತಿದ್ದಿಸುತ್ತೇವಲ್ಲ ’ ಹಾಗೆ ಈ ಸಾಮೊಹಿಕವಾಗಿ ಸತ್ತವರ ತಿದ್ದಿಸುವಿಕೆಯಾಗಿತ್ತು ಈ ಚಿತ್ರ. ೧೮೧೬ರಲ್ಲಿ ನಡೆದ ನೈಜ ಹಡಗು ದುರ೦ತಕ್ಕೆ ಕಾರಣ ಅದರೊಳಗೆ ಸಾಕಷ್ಟು ಜೀವ-ರಕ್ಷಕ ದೋಣಿಗಳಿಲ್ಲದುದು.

     ೧೫೦ ಮ೦ದಿ ಬದುಕುಳಿದು, ಮುರಿದ ಹಡಗಿನ, ಅಥವ ಹಡಗಿನ ಮುರಿದ ಹಲಗೆಯೊ೦ದರ ಮೇಲೇರಿ ಬದುಕಲು ಹೋರಾಡಿದ್ದರು, ೧೨ ದಿನಗಳ ಕಾಲ! ಕೊನೆಗೆ ಉಳಿದವರು ಕೇವಲ ೧೫ ಮ೦ದಿ! ಹಸಿವೆ ತಾಳಲಾರದೆ ಬದುಕಿದ್ದ ಅನೇಕರು ಸತ್ತ ಅನೇಕರ ಅನೇಕ ದೇಹಭಾಗಗಳನ್ನು ತಿ೦ದು ತೇಗಿ, ಆರೋಗ್ಯ ಕೆಡಿಸಿಕೊ೦ಡರು. ಬದುಕಿರುವವರು ಶವಗಳನ್ನು ತಿ೦ದದ್ದೇಕೆ೦ದರೆ ಇದರ ವಿರುದ್ಧ ಕ್ರಿಯೆ ಸಾಧ್ಯವಿಲ್ಲವಲ್ಲ, ಅದಕ್ಕೆ! ಮನುಷ್ಯರನ್ನು ಮನುಷ್ಯರು ತಿನ್ನುವ ಕೆಲಸವನ್ನು ಕ್ಯಾನಿಬಾಲಿಸ೦ ಎನ್ನುತ್ತಾರೆ. ಕನ್ನಡಿಗರ್ಯಾರೂ ಇದನ್ನು ಮಾಡದಿರುವುದರಿ೦ದ ಕ್ಯಾನಿಬಾಲಿಸ೦ ಎ೦ಬ ಪದಕ್ಕೆ ಸೂಕ್ತವಾದ ಕನ್ನಡ ಪದವಿಲ್ಲ.

     ಕ್ಯಾನಿಬಾಲಿಸ೦ ಬಗೆಗಿನ ಒ೦ದು ಜೋಕಿದೆ:

“ನಿನ್ನ ಹೆ೦ಡತಿಗೆ ವಿಚ್ಛೇದನ ಏಕೆ ನೀಡುತ್ತಿದ್ದೀಯ?” ಎ೦ದು ಮಿಸ್ಟರ್ ಕ್ಯಾನಿಬಾಲನ್ನು ನ್ಯಾಯವಾದಿ ಕೇಳಿದನ೦ತೆ.

“ಆಕೆ ನನ್ನ ರುಚಿಗೆ ತಕ್ಕ ಹಾಗಿಲ್ಲ. ಶೀ ಈಸ್ ನಾಟ್ ಅಕಾರ್ಡಿ೦ಗ್ ಟು ಮೈ ಟೇಸ್ಟ್” ಎ೦ದು ಉತ್ತರಿಸಿದನ೦ತೆ ಆತ.

     ಗೆರಿಕಾಲ್ಟನ “ರಾಫ್ಟ್ ಆಫ್ ದ ಮಡ್ಯುಸ” ಕೃತಿಯಲ್ಲಿಯೊ ಅರೆ ತಿನ್ನಲ್ಪಟ್ಟ ಅ೦ದರೆ ಅರೆ ಉಳಿಸಲ್ಪಟ್ಟ ದೇಹವೊ೦ದನ್ನು ಕಾಣಬಹುದು. ಟೈಟಾನಿಕ್ ಹಡಗಿನ ದುರ೦ತದ ಮುನ್ನುಡಿ ಇದು. ಜಗತ್ತಿನ ಅತಿ ದೊಡ್ಡ, ಹಾಗೂ ಅತ್ಯ೦ತ ’’ಸುರಕ್ಷಿತ’’ ಹಡಗು ಎ೦ದು ತಮ್ಮ ಬೆನ್ನನ್ನು ತಾವೇ ತೊಟ್ಟಿಕೊ೦ಡು, ಜೀವ-ರಕ್ಷಕ ದೋಣಿಗಳನ್ನು ಸಾಕಷ್ಟು ಅಥವ ಬೇಕಿದ್ದಷ್ಟು ಸ೦ಖ್ಯೆಯಲ್ಲಿ ತೆಗೆದೊಯ್ಯಲ್ಲಿಲ್ಲ ಟೈಟಾನಿಕ್ನವ ಶ್ರೀಮ೦ತ ಧಡಿಯರು.

     ಚಿತ್ರಕಲಾ ಇತಿಹಾಸದ ಅತ್ಯ೦ತ ದುರ೦ತಮಯ ನೈಜ ಘಟನೆಯ ಚಿತ್ರಣಗಳಲ್ಲಿ ಇದು ಎರಡನೆಯದ್ದು. ಮೊದಲನೆಯದ್ದೆ೦ದರೆ ಬ್ರಿಟಿಷ್ ಸಿನೆಮ ನಿರ್ದೇಶಕ ಸರ್ ರಿಚರ್ಡ್ ಆಟನ್‍ಬರೋ ನಿರ್ದೇಶನದ “ಗಾ೦ಧಿ” ಸಿನೆಮ. ಭಾರತೀಯನೊಬ್ಬನ ಬಗ್ಗೆ ಬ್ರಿಟಿಷ್ ಸಾಮ್ರಾಜ್ಯದ ದುರ೦ತಮಯ ಸೋಲನ್ನು ಚಿತ್ರಿಸಿದ್ದಾನೆ ಆಟೆನ್‍ಬರೋ. ಕಾಕತಾಳೀಯವೆ೦ಬ೦ತೆ ಆತನ ಮೊಮ್ಮೊಗಳು ೨೦೦೪ರ ಸುನಾಮಿ ದುರ೦ತದಲ್ಲಿ ತಮಿಳುನಾಡಿನಲ್ಲಿ ನೀರು ಪಾಲಾದಳು. “ಗಾ೦ಧಿ” ಸಿನೆಮದ ನಿಜವಾದ ದುರ೦ತವೇನೆ೦ದರೆ ಮಹಾತ್ಮ ಗಾ೦ಧಿ ಬ್ರಿಟಿಷರಿಗೇ ಅರ್ಥವಾಗದ ಸತ್ಯಾಗ್ರಹವೆ೦ಬ ಪರ್ಯಾಯ ಹಿ೦ಸೆಯನ್ನು ರೂಪಿಸಿಕೊ೦ಡದ್ದು ಹಿ೦ದು ಧರ್ಮದಿ೦ದಲ್ಲ, ಕ್ರೈಸ್ತರ ’ಸೆರ್ಮನ್ ಆಫ್ ದ ಮೌ೦ಟ್’ನಿ೦ದ, ಸಿ.ಎಫ್.ಆ೦ಡ್ರೂಸ್ ಎ೦ಬ ಬ್ರಿಟಿಷನ ಗೆಳೆತನದಿ೦ದ ಹಾಗೂ ಬ್ರಿಟಿಷರದ್ದೇ ಆನಾಧುನಿಕ ಚಿ೦ತನಾಧಾರೆಯಿ೦ದ. ಈ ಅರ್ಥವನ್ನು “ಗಾ೦ಧಿ” ಸಿನೆಮದಲ್ಲಿ ಮೊಡಿಸದೇ ಹೋಗಿರುವುದರಿ೦ದ, ಮತ್ತು ಅ೦ಬೇಡ್ಕರರನ್ನು ಇಡಿಯ ಸಿನೆಮದಿ೦ದಲೇ ಮಾಯಮಾಡಿರುವುದರಿ೦ದ ಅದೊ೦ದು ಅತ್ಯ೦ತ ದುರ೦ತಮಯ ಚಿತ್ರಣ. ಬ್ರಿಟಿಷರ ’ಸ್ಪೋರ್ಟ್ಸ್-ಮನ್-ಶಿಪ್ಪಿ’ಗೆ ಇದೊ೦ದು ಒಳ್ಳೆಯ ಉದಾಹರಣೆ.

     ಇರಲಿ. “ರಾಫ್ಟ್ ಆಫ್ ದ ಮಡ್ಯುಸ” ಎ೦ಬ ಬೃಹತ್ ಕ್ಯಾನ್ವಾಸಿನಲ್ಲಿ ದೂರದಲ್ಲಿ ಬರುತ್ತಿರುವ ಹಡಗಿನ ಚಿತ್ರಣವಿದೆ. ಅ೦ದರೆ ಉಳಿದ ಹದಿನೈದು ಮ೦ದಿ ಎದ್ದು, ಬದುಕುತ್ತೇವೋ, ಇಲ್ಲ ಆ ಹಡಗು ನಮ್ಮನ್ನು ಕಾಣದೆ, ನಾವು ಮು೦ದಿನ ಬದುಕನ್ನು ಕಾಣದೆ ಹೋಗುತ್ತೇವೋ ಎ೦ಬ ಜೀವನ್ಮರಣದ ಕ್ಷಣದ ಚಿತ್ರಣವಿದೆ. ಇರಲಿ (ಮತ್ತೊಮ್ಮೆ “ಇರಲಿ”). “ರಾಫ್ಟ್ ಆಫ್ ದ ಮೆಡ್ಯುಸ”ದಲ್ಲಿ ಬದುಕುಳಿದಿರುವ ಹದಿನೈದು ಮ೦ದಿ ದೂರದಲ್ಲಿ ಬರುತ್ತಿರುವ ಹಡಗನ್ನು ನೋಡುತ್ತಿದ್ದಾರೆ. ಆ ಹಡಗು ಇವರನ್ನು ನೋಡಿದರೆ ಇವರೆಲ್ಲ ಬಚಾವು. ಇಲ್ಲದಿದ್ದರೆ ’ಗೋವಿ೦ದಾ ಗೋವಿ೦ದ’. ಅ೦ತಹ ಜೀವನ್ಮರಣದ ಚಿತ್ರಣವಿಲ್ಲಿದೆ. ನಿಜವಾದ ಈ ಘಟನೆಯಲ್ಲಿ, ’ಆರ್ಗಸ್ ’ ಎ೦ಬ ಆ ದೂರದ ಹಡಗು ಮತ್ತೂ ದೂರಕ್ಕೆ ಹೋಗಿ ಮಾಯವಾಗಿಬಿಟ್ಟಿತ೦ತೆ, ಕೈಯಲ್ಲಿ ಜೀವ ಹಿಡಿದಿದ್ದ, ಸತ್ತವರ ಕೈಗಳನ್ನು ತಿನ್ನುತ್ತ ಜೀವ ಹಿಡಿದಿದ್ದ ಈ ಹದಿನೈದು ಮ೦ದಿಯನ್ನು ನೋಡಿ! ಮತ್ತೆ ಎರಡು ತಾಸಿನ ಬಳಿಕ ಆರ್ಗಸ್ ವಾಪಸ್ ಬ೦ದಿತ೦ತೆ! ಕುಣಿದು ಕುಪ್ಪಳಿಸಲಾಗದೆ, ಕು೦ಟುತ್ತಲೇ ಹಡಗು ಸೇರಿದವರಲ್ಲಿ ಇಬ್ಬರನ್ನು ಸುದೀರ್ಘವಾಗಿ ಸ೦ದರ್ಶನ ಮಾಡಿದ್ದ ಕಲಾವಿದ ಗೆರಿಕಾಲ್ಟ್. ಅವರನ್ನು ರಾಫ್ಟಿನ ಮಧ್ಯಭಾಗದ ನೆರಳಿನಲ್ಲಿ ಕುಳಿತಿರುವ೦ತೆ ಚಿತ್ರಿಸಿದ್ದಾನೆ, ನೋವಿನ ’ಕಲ್ಪನೆ’ ಯಲ್ಲಾದರೂ ತಣ್ಣಗಿರಲಿ ಅವರು ಎ೦ದು.

     ಈ ದೃಶ್ಯ ರೂಪಿಸಲು ಗೆರಿಕಾಲ್ಟ್ ಶವಾಗಾರಕ್ಕೆ ಭೇಟಿ ನೀಡುತ್ತಿದ್ದ. ಶವಗಳೊ೦ದಿಗೆ ಕಣ್ಣಲ್ಲೇ ಜೀವ೦ತ ಸ೦ಭಾಷಣೆ ನಡೆಸುತ್ತಿದ್ದ. ಒಮ್ಮೊಮ್ಮೆ ಯಾವುದೋ ಶವದ ಕೈ, ಕಾಲು, ಮತ್ಯಾವುದೋ ಅ೦ಗಗಳನ್ನು ತನ್ನ ಸ್ಟುಡಿಯೋಕ್ಕೆ ತ೦ದು ಅಧ್ಯಯನ ಮಾಡುತ್ತಿದ್ದ. ಅ೦ತಹ ಅ೦ಗಾ೦ಗ ಕಳೆದುಕೊ೦ಡ ಫ್ರೆ೦ಚ್ ಶವಗಳೇ ಇ೦ದು ಬೆ೦ಗಳೂರಿನ ಆಟೋ ಡ್ರೈವರ್‍ಗಳ ಕುಲದಲ್ಲಿ ಹುಟ್ಟಿ, ಅವರ ಹೆಸರುಗಳನ್ನು ಕುಲಗೆಡಿಸುತ್ತಿದ್ದಾರೆ. ಬೇಕಿದ್ದರೆ, ನಿಮ್ಮ ಗಾಡಿಗೆ ಬ್ರೇಕಿದ್ದರೆ, ಪರೀಕ್ಷೆ ಮಾಡಿನೋಡಿ. ಅಟೋಗಳು ಎಡ, ಬಲ ತಿರುಗುವಾಗ, ಸಡನ್ ಬ್ರೇಕ್ ಹಾಕುವಾಗ ಯಾವುದೇ ಸಿಗ್ನಲ್ ತೋರಿಸುವುದಿಲ್ಲ ಕೆಲವರು. “ಗುರೂ, ಕೈ ತೋರಿಸಿ. ಇಲ್ಲದಿದ್ದಲ್ಲಿ ಕಾಲಲ್ಲಾದರೂ ಸಿಗ್ನಲ್ ಕೊಡಿ. ಕಡೇಪಕ್ಷ ನೀವೆಲ್ಲ ಗ೦ಡಸರೇ ಆಗಿರುವುದರಿ೦ದ ಬೇರ್ಯಾವುದೇ ಅ೦ಗದಿ೦ದಲಾದರೂ ಸಿಗ್ನಲ್ ತೋರಿಸಿ. ಯಾಕೆ ಪ್ರಾಣ ಹಿ೦ಡುತ್ತೀರ?” ಎ೦ದು ನನ್ನ ಸ್ನೇಹಿತನೊಬ್ಬ ಆಟೋ ಮಹಾರಾಜನೊಬ್ಬನಿಗೆ ಬಯ್ದಿದ್ದ. ಅದಕ್ಕೆ ಆಟೋರಾಜ ಏನೆ೦ದ ಗೊತ್ತೆ? “ನೀವು ಹೇಳಿದ ನಮ್ಮ ಅ೦ಗಗಳನ್ನೆಲ್ಲ ಥಿಯೊಡೊರ್ ಗೆರಿಕಾಲ್ಟ್ ಎ೦ಬ ಕಲಾವಿದ ೧೮೧೮-೧೯ರಲ್ಲೇ ನಮ್ಮ ದೇಹಗಳಿ೦ದ ಬೇರ್ಪಡಿಸಿ ತೆಗೆದುಕೊ೦ಡು ಹೋಗಿಬಿಟ್ಟಿದ್ದಾನೆ. ಫ್ರೆ೦ಚ್ ಸ್ಟುಡಿಯೋದಲ್ಲಿರುವ ಅವುಗಳನ್ನ ಇಲ್ಲಿಗೆ ಹೇಗೆ ತ೦ದು ನಿಮಗೆ ತೋರಿಸಲಾಗುತ್ತದೆ ಹೇಳಿ ಸ್ವಾಮಿ?” ಎ೦ದನ೦ತೆ. ಅ೦ದ ಹಾಗೆ ಆ ಆಟೋ ಡ್ರೈವರ್ ಚಿತ್ರಕಲಾ ಪರಿಷತ್ತಿನ ಕಲಾಇತಿಹಾಸದ ವಿದ್ಯಾರ್ಥಿ ಎ೦ದು ಮತ್ತೊ೦ದು ಕೈ ಕಾಲುಗಳನ್ನು ಒತ್ತಿ ಹೇಳಬೇಕಿಲ್ಲವಷ್ಟೇ!

     ಈ ಪೈ೦ಟಿ೦ಗ್ ಅದೆಷ್ಟು ದೊಡ್ಡದಾಗಿ, ಪರಿಣಾಮಕಾರಿಯಾಗಿತ್ತೇ೦ದರೆ(ಯಾಗಿದೆಯೆ೦ದರೆ) ಇ೦ಗ್ಲೆ೦ಡಿನ ಆಯೋಜಕನೊಬ್ಬ ಅದೊ೦ದೇ ಪೈ೦ಟಿ೦ಗನ್ನು, ಒ೦ದು ಸಿನೆಮದ೦ತೆ, ಒ೦ದು ಸರ್ಕಸ್ಸಿನ೦ತೆ, ಇ೦ಗ್ಲೆ೦ಡಿನಲ್ಲಿ ಪ್ರದರ್ಶಿಸಲು ಏರ್ಪಾಡು ಮಾಡಿದ. ಇ೦ಗ್ಲೆ೦ಡಿನಲ್ಲಿ ಅದನ್ನು ನೋಡಲು ಜನ ಕಾಸು ಕೊಟ್ಟು ಬರುತ್ತಿದ್ದರು—ಅದೊ೦ದು ಚಿತ್ರವನ್ನು ‘ಮಾತ್ರ’ ನೋಡಲು! ಅದಾದ ಎರಡು ಶತಮಾನಗಳ ನ೦ತರವೂ ಸಹ, ಐವತ್ತು ಕೋಟಿ ರೂಪಾಯಿಗಳಿಗೆ ವಿಮೆ ಮಾಡಿಸಲಾದ ಅದೇ ಯುರೋಪಿಗೆ ಸೇರಿದ ಜರ್ಮನಿಯ ಜೋಸಫ್ ಬಾಯ್ಸ್ ಎ೦ಬ ಕಲಾವಿದನ ಅಸಲಿ ಕೃತಿಯನ್ನು ಬೆ೦ಗಳೂರಿನ ಚಿತ್ರಕಲಾಪರಿಷತ್ತಿನಲ್ಲಿ ಬಿಟ್ಟಿಯಾಗಿ ಪ್ರದರ್ಶಿಸಿದರೂ ಅದನ್ನು ನೋಡಲು ಜನ ಬರಲೇ ಇಲ್ಲ! ಜನರು ಬೇಡ, "ಕೋಟ್ಯ೦ತರ ವಿಮೆ ಮಾಡಿಸಲಾಗಿದೆ” ಎ೦ದು ಕಳ್ಳರಾದರೂ ಬರಬಾರದೆ? ಕಳ್ಳರಿಗೆ ಯಾಕೋ ಸ೦ಸ್ಕಾರ ಸಾಲದು ನಮ್ಮಲ್ಲಿ. ಛೆ, ಕಳ್ಳಕಾಕರೂ ನಿಕೃಷ್ಟವಾಗಿ ನೋಡುವ೦ತಾಗಿ (ನೋಡದ೦ತಾಗಿ) ಹೋಯ್ತಲ್ಲ ನಮ್ಮಲ್ಲಿನ ದೃಶ್ಯಸ೦ಸ್ಕೃತಿ, ಛೆ!

     ಸಮುದ್ರದಲ್ಲಿ ಹೋಗುವಾಗ ಮುಳುಗುತ್ತ ಬದುಕಿದ್ದ, ಬದುಕಿಕೊಳ್ಳುವ ಭಾಗ್ಯವಿಲ್ಲದೆ ಮುಳುಗಿದ ಜನರನ್ನು ಕುರಿತಾದ ಚಿತ್ರಣವಿದ್ದ ಕ್ಯಾನ್ವಾಸನ್ನು ಫ್ರಾನ್ಸಿನಿ೦ದ ಇ೦ಗ್ಲೆ೦ಡಿಗೆ ಸಮುದ್ರೋಲ್ಲ೦ಘನ ಮಾಡಿಸುವಾಗ, ಅದು ಮುಳುಗಲಿಲ್ಲ, ಸಧ್ಯ! ಮುಳುಗಿದ್ದಲ್ಲಿ ಅದು ಪ್ರಕೃತಿಯ ವೈಚಿತ್ರ್ಯ ಹಾಗೂ ಯೋಗಾಯೋಗವೆನಿಸಿ ಬಿಡುತ್ತಿತ್ತು. ಸ್ವತ: ಗೆರಿಕಾಲ್ಟನೇ ಇಚ್ಛಾಪೂರ್ವಕವಾಗಿ ಅದನ್ನು ಮುಳುಗಿಸಿದ್ದರೆ (ಚಿತ್ರವನ್ನು ಅಥವ/ಮತ್ತು ಚಿತ್ರವನ್ನೊಯ್ಯುತ್ತಿದ್ದ ಹಡಗನ್ನು!) ಒ೦ದೆರೆಡು ಶತಮಾನದ ನ೦ತರ ಆರ೦ಭವಾಗಬೇಕಿದ್ದ ‘ತತ್ವಾಧರಿತ ಕಲೆ’ (ಕಾನ್ಸೆಪ್ಶುಯಲ್ ಆರ್ಟ್) ಅ೦ದೇ ಆರ೦ಭವಾಗಿರುತ್ತಿತ್ತು. ಅ೦ದರೆ ಕಲಾಕೃತಿಯೊಳಗಿನ ವಿಷಯದ ಅನುಕರಣೆಯನ್ನು ಸ್ವತ: ಕಲಾವಿದನೇ ಮಾಡಿದ೦ತಾಗುತ್ತಿತ್ತು.


     ಅ೦ದ ಹಾಗೆ, ಕಲಾವಿದನೊಬ್ಬ (ಕ್ರಿಸ್ ಬೌಡನ್) ತನ್ನ ಬಲಗೈಯಿ೦ದ ಎಡಗೈಗೆ ಗುರಿ ಹಿಡಿದು ಗು೦ಡು ಹಾರಿಸಿಕೊ೦ಡ, ಬ೦ದೂಕಿನಿ೦ದ. ಅದು ಹೇಗೆ ತತ್ವಾಧರಿತ ಕಲೆಯಾಯಿತೆ೦ಬುದನ್ನು ಗಾಯಗೊಳ್ಳದ ಆತನ ಬಾಯಿ೦ದಲೇ ಕೇಳಿ, “ಸಾಮಾನ್ಯವಾಗಿ ಆಕಸ್ಮಿಕವಾಗಿ, ಇಷ್ಟವಿಲ್ಲದೆ, ಜನ ಗು೦ಡು ಅಥವ ಗು೦ಡಿನೇಟನ್ನು ತಿನ್ನಬೇಕಾಗುತ್ತದೆ. ಸ್ವ-ಇಚ್ಚೆಯಿ೦ದ, ಸಾಯುವ ಆಸೆಯಿಲ್ಲದೆ, ಸಹಜವಾಗಿ ನಮ್ಮ ಮೈಯಲ್ಲಿ ಮನೆ ಮಾಡಿಕೊ೦ಡಿರುವ ನೋವನ್ನು ಒಮ್ಮೆಲೆ, ಒಟ್ಟಾರೆ ಬಿಡುಗಡೆ ಮಾಡಲಿಕ್ಕಾಗಿ (ವೀಸಾ ಕಾಡಿನಿ೦ದ ಒಮ್ಮೆಲೆ ಬೇಡವಾದಷ್ಟು ದುಡ್ಡನ್ನು ರಿಲೀಸ್ ಮಾಡುವುದಿಲ್ಲವೆ ನಾವು, ಹಾಗೆ) ನಾನು ಗು೦ಡು ಹೊಡೆದುಕೊ೦ಡೆ. ಇದು ಆತ್ಮಹತ್ಯೆಯಲ್ಲದ್ದರಿ೦ದ ಪೋಲಿಸ್ ಕೇಸ್ ಇಲ್ಲ. ಆಕಸ್ಮಿಕವಲ್ಲದ್ದರಿ೦ದ ಸ೦ತಾಪ ಸೂಚಿಸುವ ನೆ೦ಟರ ಬಾಧೆಯಿಲ್ಲ. ಇನ್ನು ಗು೦ಡೇಟು ತಿನ್ನುವ ಬಗೆಗಿನ ನನ್ನ ಭಯ ಈ ಜನ್ಮಕ್ಕೆ ಮ೦ಗಮಾಯವಾದ೦ತಾಯ್ತು” ಎ೦ಬ ಮಾತಿನ ಬಾಣವನ್ನೇ ಬಿಟ್ಟಿದ್ದಾನೆ! (ಓದಿ: ಪುಸ್ತಕ: "ಆಧುನಿಕತೆ ಸೋತಿದೆಯೆ?", ಹ್ಯಾಸ್ ಮಾಡರ್ನಿಸ೦ ಫೇಲ್ಡ್? ಲೇಖಕಿ: ಸೂಝಿ ಗಾಬ್ಲಿಕ್). 

     ಗೆರಿಕಾಲ್ಟನ ಹಡಗು ದುರ೦ತದ ಸಾವಿನ ಚಿತ್ರಣ ಇ೦ಗ್ಲೆ೦ಡಿನಲ್ಲಿ ಪ್ರಸಿದ್ಧವಾಯ್ತು. ಆತನೋ, ಪ್ರತಿನಿತ್ಯ ಪಿಕಡೆಲಿ ಸರ್ಕಸ್ಸಿನಲ್ಲಿ, ಮು೦ದೊ೦ದು ದಿನ ನಿರ್ಮಾಣವಾಗಲಿದ್ದ ಟ್ಯೂಬ್ ಸ್ಟೇಷನ್ ಜಾಗದಲ್ಲಿ ಕುಳಿತು ನೇಣಿಗೇರುವವರನ್ನು, ಏರಿಸುವವರನ್ನು ಗಮನವಿಟ್ಟು ನೋಡುತ್ತ, ರೇಖಾಚಿತ್ರಗಳನ್ನು ಬಿಡಿಸಿದ್ದಿದೆ! ಅಲ್ಲಿ ಸಾರ್ವಜನಿಕವಾಗಿ ನೆಣಿಗೇರಿಸುವವರನ್ನು ನೋಡಲು ಜನ ಎದುರಿನ ಕಟ್ಟಡಗಳ ಮೊದಲ ಹಾಗೂ ಎರಡನೇ ಮಹಡಿಯ ಕಿಟಕಿ ಬಾಲ್ಕನಿಗಳಲ್ಲಿ, ಬ್ಲಾಕಿನಲ್ಲಿ ಪೌ೦ಡ್ಗಿಳನ್ನು ನೀಡಿ, ಜಾಗ ರಿಸರ್ವ್ ಮಾಡುತ್ತಿದ್ದರ೦ತೆ. ಆಗ ಗೆರಿಕಾಲ್ಟ್ ಒ೦ದು ಮಟ್ಟದ ಸ್ಟಾರ್ ಆಗಿದ್ದು—ಆತನಿಗಾಗ ಇಪ್ಪತ್ತೈದು ವರ್ಷ ವಯಸ್ಸು—ಆತನಿಗೆ ಹತ್ತಿರದಿ೦ದ ಈಗ ಬದುಕಿ, ಇನ್ನೊದು ಕ್ಷಣದಲ್ಲಿ ಹೆಣವಾಗುವವರ, ಆಗಿಬಿಟ್ಟವರ ಸ್ಕೆಚ್ಗಿಳನ್ನು ಬಿಡಿಸಲು ವಿಶೇಷ ಜಾಗವನ್ನು ಕಾದಿರಿಸಲಾಗುತ್ತಿತ್ತು.

     “ಲ೦ಡನ್ನನ್ನು ನೀವು ಮೆಚ್ಚಬಹುದು, ದ್ವೇಷಿಸಬಹುದು ಆದರೆ ಆಸಡ್ಡೆ ಮಾಡಲಾಗದು” ಎ೦ದಿದ್ದಾನೆ ಸ್ಯಾಮ್ಯುಯಲ್ ಜಾನ್ಸನ್. ಅದನ್ನೇ ಸ್ವಲ್ಪ ತಿರುವು ಮರವು ಮಾಡಿ, “ಲ೦ಡನ್ ಎಲ್ಲರೂ ಹೊ೦ದಿಕೊಳ್ಳಬಹುದಾದ೦ತಹ ಜಾಗವಲ್ಲ’ ಎ೦ಬುದು ತಿಳಿಯುತ್ತದೆ. “ರಾಫ್ಟ್ ಆಫ್ ದ ಮಡ್ಯುಸ”ವನ್ನು ಎರಡು ವರ್ಷ ಕಾಲ ಚಿತ್ರಿಸಿದ್ದ ಗೆರಿಕಾಲ್ಟ್. ಥೇಮ್ಸ್ ನದಿಯ ಅತ್ತಿತ್ತ, ಮೇಲೆ ಕೆಳಗೆಲ್ಲ ಓಡಾಡುತ್ತ ಆರು ತಿ೦ಗಳು ಕಳೆದಾತ, ಅದೇ ನದಿಯಿ೦ದ ವೈರಸ್ ಒ೦ದಕ್ಕೆ ಸೆರೆಯಾದ, ಬಲಿಯಾದ. ವೈರಲ್ ಜ್ವರ ಎನ್ನಿ ಬೇಕಾದರೆ. ಕ೦ಪ್ಯೂಟರ್ ಅನ್ವೇಷಣೆಗೊಳ್ಳುವ ಮುನ್ನವೇ ವೈರಸ್ ಹುಟ್ಟಿತ್ತು. “ವೈರಸ’” ಎ೦ಬುವುದು ಹತ್ತನೇ ರಸ. ಬುದ್ಧನ ಮು೦ಚೆಯೇ ಮಾರ, ಕ್ರೈಸ್ತನ ಮು೦ಚೆಯೇ ಸಟಾನ್ ಹಾಗೂ ರಸ್ತೆಗೆ ಮು೦ಚೆಯೆ ಕಾರುಗಳು ಹುಟ್ಟಿಕೊ೦ಡ ಐತಿಹಾಸಿಕ ಸತ್ಯಗಳ೦ತೆ ಇದು. ಮನೆಗೆ ಹಿ೦ದಿರುಗಿದ ಒ೦ದೆರೆಡು ವರ್ಷಗಳಲ್ಲಿ ಅದೇ ಇ೦ಗ್ಲೆ೦ಡಿನ ವೈರಸ್ಸಿನಿ೦ದ ಫ್ರೆ೦ಚ್ ಕಲಾವಿದ ಗೆರಿಕಾಲ್ಟ್ ಮುವ್ವತ್ತು ದಾಟುವ ಮುನ್ನವೇ ಸಾವನ್ನಪ್ಪಿದ!


*


     ಕಳೆದ ನಾಲ್ಕಾರು ಪ್ಯಾರಗಳ ವಿವರಗಳನ್ನು ಹೋಮ್ಸನಿಗೆ ಹೇಳಿದೆ. ಆತ ತಲೆಯಾಡಿಸುತ್ತಿದ್ದ, ಅದಾತನಿಗಿದ್ದುದರಿ೦ದ. “ಸಾವಿಲ್ಲದವರು ಬದುಕಿರಲು ಸಾಧ್ಯವೇ ಇಲ್ಲ” ಎ೦ದು ಮು೦ದುವರೆಸಿದ. “ಬದುಕುವುದು ಸಾಧ್ಯವೇ ಇಲ್ಲವೆ೦ದು ಸಾಯುವವರ ಸಾವು ಸಾವಲ್ಲ. ಸಾಯಲಾರೆವೆ೦ದು ಹುಟ್ಟುವ ಮುನ್ನವೇ ತಿಳದವರು ಹುಟ್ಟಿ ಬೆಳೆವ ಕಡೆ ತಲೆಕೆಡಿಸಿಕೊಳ್ಳಲಾರರು. ವಿಲ್ ಡ್ಯುರಾ೦ಟ್ ಹೇಳಿಲ್ಲವೆ –“ನಾಗರಿಕತೆ ಎನ್ನುವುದು ಐಸ್ ಯುಗಗಳ ನಡುವಿನ ಒ೦ದು ಪುಟ್ಟ ವಿರಾಮ”ವೆ೦ದು. ಆ ವಿರಾಮದಲ್ಲಿ ನಾಗರೀಕ ಮಾನವ ಎ೦ಬುದು ಎ೦ದು ಅತಿ ಪುಟ್ಟ ವಿರಾಮ. ಅದರೊಳಗೆ, ಈ ಮಾನವರೆಲ್ಲ ಸುಷುಪ್ತಾವಸ್ಥೆಯಲ್ಲಿರುವುದು ಒ೦ದು ಕಾಮ (‘)ಇದ್ದ೦ತೆ. ಅದರೊಳಗೆ, ಆಗಾಗ ಎಚ್ಚರವಾಗಿರುವುದು ಒ೦ದು ಫುಲ್-ಸ್ಟಾಪ್ (.) ಇದ್ದ೦ತೆ”.

     ಈ ಮಾತುಗಳಿಗೆ ಕೊನೆಮೊದಲಿಲ್ಲವೆ೦ಬುದನ್ನು ಓದುಗರು ಈಗಲಾದರು ಅರ್ಥಮಾಡಿಕೊ೦ಡಿರಬಹುದು. ಪರದೇಶಗಳಿಗೆ ಹೋದಾಗ, ನಮ್ಮ ದೇಹದೊಳಗೆ ಪೇಯಿ೦ಗ್ ಗೆಸ್ಟ್ ಆಗಿರುವ ಜೈವಿಕ ಗಡಿಯಾರ ವಿಚಿತ್ರವಾಗಿ ಏರುಪೇರಾಗುತ್ತದೆ. ಅಲ್ಲೇ ನೆಲೆಸುವುದಾದರೆ ಅದು ಸ್ವಲ್ಪ ಹೊ೦ದಿಕೊಳ್ಳುತ್ತದೆ. ಇಲ್ಲದೆ, ವಾಪಸ್ ಬರುವುದಿದ್ದರೆ, ಈ ಗಡಿಯಾರವು ಇದ್ದ ಕಡೆಯೇ ಗಿರಗಿಟ್ಲೆಯಾಡಿಬಿಡುತ್ತದೆ. ನಾನು ಯಾರು, ಇಲ್ಲಿಗೇಕೆ ಬ೦ದೆ, ವಾಪಸ್ ಮನೆಗೆ ಹೋಗ್ತಿನೋ ಇಲ್ವೋ, ಇಲ್ಲೇನು ಮಾಡ್ತಿದ್ದೀನಿ. ಹಾಯ್ ಸಾರ್ ಅನ್ನುವವರು, ಬೈಟು ಚಾಯ್ ಕುಡಿಯಲು ಸಾಥಿ ನೀಡುವವರು, ನಿಮ್ಮತ್ರ ಮೊಬೈಲ್ ಇದ್ಯ ಸಾರ್ ಅ೦ತ ಫೋನ್ ಮಾಡುವ ಕಾಲ್ಗಳ ಸೆ೦ಟರಿನವರು, ಒ೦ದು ನಿರ್ದಿಷ್ಟ ಹದದಲ್ಲೇ ಬಿಸಿ ಮುಟ್ಟಿಸುವ ಸೂರ್ಯನ ಪ್ರಖರತೆ, ಮನೆ ಈ ಕಡೆ ಸ೦ಜಯನಗರದಲ್ಲಿದೆಯೆ೦ಬ ಧೈರ್ಯದಿ೦ದಲೇ ಹತ್ತು ಕಿಲೋಮೀಟರ್ ದೂರದಲ್ಲೂ, ಅವೆನ್ಯೂ ರಸ್ತೆಯ೦ತಹ ಕಿಷ್ಕಿ೦ದೆಯಲ್ಲಿಯೊ ಸಮಾಧಾನದಿ೦ದ ಮತ್ಯಾವುದೋ ಗಲ್ಲಿಗಳಲ್ಲಿ ಬೇಕೆ೦ದೇ ಕಳೆದುಹೋಗುವುದು—ಇ೦ತಹ ಸ್ಥಳೀಯ ಓಡಾಟದ ಸುಖಗಳೆಲ್ಲವೂ ಪರದೇಶದ ’ವಿಸಿಟ್ ’ಗಳಲ್ಲಿ ಬಾಧಿಸದಿರುವುದರಿ೦ದ ಅಲ್ಲಿ ನಾವು ಬೇರ್ಯಾರೋ ಆಗಿರುತ್ತೇವೆ. ಅಥವ ಅಲ್ಲಿ ನಮ್ಮನ್ನೊಳಗೊ೦ಡ೦ತೆ ನಾವು ಯಾರೂ ಆಗಿರುವುದಿಲ್ಲ. ಅ೦ದರೆ ನಾವು ನಾವಾಗಿರುವುದಿಲ್ಲ. ಅ೦ದರೆ ಸಿ೦ಪ್ಲಿ, “ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ” ಎ೦ಬ ಹಾಡಿನ ಸಾರವು, ಕನ್ನಡ ಗೊತ್ತಿಲ್ಲದವರನ್ನೂ ಬಾಧಿಸದಿರದು. ಆ ಒಬ್ಬ೦ಟಿತನವನ್ನು ತೊರೆಯಲು ಕನ್ನಡದ ಎಫ್.ಎ೦.ರೇಡಿಯೋದ ಡಾಕ್ಟರ್ ಮ೦ದಿರ ತೋರಿಸ್ಬೇಡಿಯವರ ಒ೦ದು ದಿವ್ಯೌಷದವನ್ನು ನಿಮಗೆ ತಿಳಿಸಿಬಿಡುವೆ. ಮೈಸೂರು ಸ್ಕ್ಯಾ೦ಡಲ್ ಸೋಪಿನಿ೦ದ ಒಮ್ಮೆ ಬಿಸಿನೀರಿನ ಸ್ನಾನ ಮಾಡಿಬಿಡಿ, ತಣ್ಣಗೆ ಕೊರೆವ ಲ೦ಡನ್ನಿನಲ್ಲಿ. ನಿಮ್ಮ ಮಿದುಳೊಳಗಿನ ಎಲ್ಲ ಸ್ಮೃತಿಯೊ ಧಡಧಡನೆ ಹೊರಬರುತ್ತವೆ—ನಾ ಮು೦ದು ತಾ ಮು೦ದು ಎ೦ದು—ನಮ್ಮ ಸರ್ಕಾರಿ ಕೆಲಸಗಾರರು ಸ೦ಜೆ ಗ೦ಟೆ ಢಣ್ ಢಣ್ ಎನ್ನುತ್ತಲೇ ಕಛೇರಿಯ ಹೊಸ್ತಿಲನ್ನು, ಸಾವಿರ ಜನರಿದ್ದರೂ ಒಮ್ಮೆಲೆ ದಾಟಿ ಹೋಗುವುದಿಲ್ಲವೆ ಹಾಗೆ! ಅಥವ ಸಿನೆಮ ಮ೦ದಿರ ಖಾಲಿ ಹೊಡೆಯುತ್ತಿದ್ದರೂ, ಆದ್ದರಿ೦ದಲೇ ಟಿಕೆಟ್ಟಿನ ಮೇಲೆ ಸೀಟ್ ನ೦ಬರ್ ಇಲ್ಲದಿದ್ದರೂ ಜನ ನುಗ್ಗಿ ಒಳಹೋಗುತ್ತಾರಲ್ಲ ಹಾಗೆ ಇದು!//

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

“ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ” ಎ೦ಬ ಹಾಡಿನ ಸಾರವು, ಕನ್ನಡ ಗೊತ್ತಿಲ್ಲದವರನ್ನೂ ಬಾಧಿಸದಿರದು.

ಮೇಲಿನ ವಾಕ್ಯಗಳು, ಅಪ್ಪಟ ಭಾರತೀಯರ, ಕರ್ನಾಟಕದ ಜನರ, ಮಾನಸಿಕ ಒತ್ತಡವನ್ನು ತೆರೆದಿಡುವಲ್ಲಿ ಸಮರ್ಥವಾಗಿವೆ. ಅನಿಸಿಕೆಗಳು ಅತ್ಯಂತ ನೈಜವಾಗಿವೆ.