ಶ್ರೀಬಸವೇಶ್ವರರ ವಚನಗಳು-3

To prevent automated spam submissions leave this field empty.

****ಜಾತಿ ಪದ್ಧತಿ 'ಸಲ್ಲ' ಎಂದ ಬಸವಣ್ಣ****

ಎಲ್ಲ ಕೆಲಸಗಳೂ ಸಮವೇ. ಕಾಯಕದಲ್ಲಿ ಮೇಲು-ಕೀಳು ಎಂಬುದಿಲ್ಲ. ಜಗದಲಿ ಕಿವಿಯಿಂದ ಹುಟ್ಟಿದವರಾರು ಇಲ್ಲ..
ಹೀಗಿರುವಾಗ ಉಚ್ಚನೀಚ ಭಾವನೆಗಳು ಸಲ್ಲ. ಬಸವಣ್ಣನವರು ವ್ಯಕ್ತಿಯ ಶ್ರೇಷ್ಟತೆ
ನಿರ್ಣಯ ಆಗುವುದು ಹುಟ್ಟಿದ ಜಾತಿಯಿಂದಲ್ಲ ಬದುಕುವ ರೀತಿಯಿಂದ ಎಂದು ಈ ವಚನದಲ್ಲಿ ಮಾರ್ಮಿಕವಾಗಿ
ತಿಳಿಸಿದ್ದಾರೆ.

ಕಾಸಿ ಕಮ್ಮಾರನಾದ,ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ,ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು!

ಹಾಗೆಯೇ ಜಾತಿಭೇದಜನಿತ ವೈಷಮ್ಯವನ್ನು ತೊರೆದು ಸೋದರತ್ವದ,ಬಂಧುತ್ವದ ಭಾವದಿಂದ ಅನ್ಯೋನ್ಯವಾಗಿ
ಬದುಕಲು ಕರೆಕೊಡುತ್ತ ಅವರೆನ್ನುತಾರೆ..

ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ;
ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯಾ,
ಕೂಡಲಸಂಗಮದೇವಾ,
ನಿಮ್ಮ ಮನೆಯ ಮಗನೆಂದೆನಿಸಯ್ಯಾ.

ಹುಟ್ಟಿನಿಂದ ಬರುವ ಜಾತಿಯಿಂದ ವ್ಯಕ್ತಿ ಶ್ರೇಷ್ಟನಾಗುವುದಿಲ್ಲ. ಇನ್ನೊಬ್ಬರ ಹಿತವನ್ನೇ ಬಯಸುವ ಶರಣರು..ಅವರು
ಕುಲಜರು ಎಂದು ಶ್ರೇಷ್ಟತೆಗೆ ಹೊಸ ಮಾನದಂಡವನ್ನೇ ನೀಡಿದ್ದಾರೆ ಅಣ್ಣನವರು.

ಕೊಲುವನೇ ಮಾದಿಗ,ಹೊಲಸು ತಿಂಬವನೇ ಹೊಲೆಯ!
ಕುಲವೇನೋ ಅವಂದಿರ ಕುಲವೇನೋ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು!

ಬಸವಣ್ಣನವರು ಕಾಯಕ,ದಾಸೋಹದಿಂದ ಪರಿಪೂರ್ಣರಾದ ಶರಣರನ್ನು ಜಾತಿಯ ಮೇಲೆ ಬಿಂಬಿಸಿದರೆ
ಕೂಡಲಸಂಗ ನಗದಿರುವನೇ ಎಂದು ಈ ವಚನದಲ್ಲಿ ಕೇಳುತ್ತಾರೆ. ಜಾತಿರಹಿತ ಸಮಾಜ ಕಟ್ಟಲು ಕಂಕಣಬದ್ಧರಾದ
ಬಸವಣ್ಣನವರು ದೇವರೊಲುಮೆಗೆ,ಬಾಳಿನ ಹಿರಿಮೆಗೆ ಬೇಕಾದುದು ಜಾತಿಯಲ್ಲ,"ಬದುಕುವ ರೀತಿ" ಎಂದು
ಮತ್ತೊಮ್ಮೆ ಸಾರಿ ಹೇಳಿದ್ದಾರೆ.

ಸೆಟ್ಟಿಯೆಂಬೆನೇ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸುಶಿಲ್,
’ವೇದವನೋದಿ ಹಾರುವನಾದ’ ಈ ಸಾಲಿನಲ್ಲಿ ಹಾರುವ ಅಂದ್ರೆ ಏನಂತ ಗೊತ್ತಾಗಲಿಲ್ಲ. ದಯವಿಟ್ಟು ತಿಳಿಸಿ.
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ತುಂಬ ಚೆನ್ನಾಗಿ ಬರೆದಿದ್ದೀರ ಸುಶೀಲ್.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

ಸಂಭಾಷಣೆ ಖುಷಿ ಕೊಟ್ಟಿದೆ. :)
ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

-ಸುಶೀಲ್.
ಜಗದಲಿ ಎಲ್ಲವ ತಿಳಿಯುತಲಿ ನಾವು ತಿಳಿಯದಾದೆವು ನಮ್ಮನ್ನೆ!!