ಶ್ರೀಬಸವೇಶ್ವರರ ವಚನಗಳು-2

To prevent automated spam submissions leave this field empty.

ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ

ನೀರಿಂಗೆ ನೈದಿಲೆಯೇ ಶೃಂಗಾರ
ಊರಿಂಗೆ ಅಕನೆಯೇ ಶೃಂಗಾರ
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗಮನ ಶರಣರಿಗೆ
ನೊಸಲ ವಿಭೂತಿಯೇ ಶೃಂಗಾರ

ಹುತ್ತವ ಬಡಿದರೆ ಉರಗ ಸಾವುದೆ
ಘೋರತಪವ ಮಾಡಿದರೇನು
ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದು:ಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ

ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ

ಮಾಡುವಂತಿರಬೇಕು, ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ,
ಕೂಡಿಕೊಂಬುವ ನಮ್ಮ ಕೂಡಲಸಂಗಮದೇವ

ಕಲ್ಲನಾಗರ ಕಂಡರೆ ಹಾಲನೆರೆ ಎಂಬರು;
ದಿಟನಾಗರ ಕಂಡರೆ ಕೊಲ್ಲು ಕೊಲ್ಲು ಎಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲತಾಗಿದ ಮಿಟ್ಟೆಯಂತಪ್ಪರಯ್ಯ!

ಮಡಕೆಯ ಮಾಡುವೊಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವೊಡೆ ಹೊನ್ನೇ ಮೊದಲು,
ಶಿವಪಥ ಅರಿವೊಡೆ ಗುರುಪಥ ಮೊದಲು,
ಕೂಡಲಸಂಗಮ ದೇವರನರಿವೊಡೆ,
ಶರಣರ ಸಂಗವೇ ಮೊದಲು, ಮೊದಲು.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಚನ ’ಅಮೃತ’ ಸವಿಸಿದ್ದಕ್ಕೆ ಹೆನ್ನನ್ನಿ.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ಚೆನ್ನಾಗಿದೆ ಸುಶೀಲ್. ವಚನಗಳ ಜೊತೆಗೆ ಅದರ ಸಣ್ಣ description ಇದ್ದರೆ ಇನ್ನೂ ಚೆನ್ನಿತ್ತು :-).
ಮುಂದಿನ ಸಲ try ಮಾಡಿ, ಒಂದೊಂದೆ ವಚನಗಳನ್ನು( description ಜೊತೆಗೆ ) ಹಾಕಿದರೂ ಪರವಾಗಿಲ್ಲ.

ಕೊಱಡು, ಬಱಡು, ಅಱಿವೊಡೆ ಎಂಬಿವು ಮೂಲಪಾಠಗಳೆಂಬುದನ್ನು ಬಿಟ್ಟರೆ ಉೞಿದಂತೆ ಒಳ್ಳೆಯ ವಚನಗಳು. ಸಾಧ್ಯವಾದಷ್ಟು ವಚನಗಳಲ್ಲಿ ಱಕಾರವಿದ್ದಂತೆಯೇ ಬೞಸಿ. ಬಾಸೆ(ಭಾಷೆ)ಯನ್ನು ಅಧ್ಯಯನವಿಷಯ ಮಾಡಿಕೊಂದಿರುವ ನನಗೆ ಅದೆಷ್ಟಱ ಮಟ್ಟಿಗೆ ಅನುಕೂಲವಾಗುತ್ತದೆ.

ಇಂತು ತಮ್ಮ ವಿಶ್ವಾಸಿ
ಕನ್ನಡಕಂದ.