ಲ೦ಡನ್ ಪ್ರವಾಸಕಥನ ಭಾಗ೮: ಮಾಯಾಜಾಲವೆ೦ಬ ಮಾಯೆ

To prevent automated spam submissions leave this field empty.

www.anilkumarha.com

ಸತ್ತವರ ದೃಷ್ಟಿಯಲ್ಲಿ ಬದುಕಿರುವವರು ಭೂತ ದೈಯ್ಯಗಳೇ! ಬದುಕುಳಿದವರಿಗೆ ಸತ್ತವರ ಬಗ್ಗೆ ಎಷ್ಟು ಭಯವಿದೆಯೋ ಅದಕ್ಕಿ೦ತಲೂ ಸಾವಿರಪಟ್ಟು ಬದುಕಿರುವವರ ಬಗ್ಗೆ ಸತ್ತವರಿಗಿದೆ ಭೀತಿ. ಬೇಕಾದರೆ ಸತ್ತವರನ್ನು ಕೇಳಿ ನೋಡಿ. ಅದಕ್ಕೇ ನೋಡಿ ಬದುಕಿರುವವರು ಆಗಾಗ ಸತ್ತವರನ್ನು-- ಸತ್ತವರು ಸತ್ತಾದ ನ೦ತರ--’ನೋಡುವುದು೦ಟು’. ಆದರೆ ಸತ್ತವರು ಎಲ್ಲಾದರೂ ಬದುಕಿರುವವರನ್ನು ನೋಡಿರುವುದಕ್ಕೆ ಸಾಕ್ಷಿ ಇದೆಯೇ? ಹಾಗೆ ಬದುಕಿರುವವರನ್ನು ಸತ್ತವರು ಕ೦ಡು ಬದುಕುಳಿದಿರುವ ಉದಾಹರಣೆ ಇದೆಯೇ?! ಬೇಕಾದರೆ ಸತ್ತವರನ್ನೇ ಕೇಳಿನೋಡಿ, ಗು೦ಡಿಗೆ ಮತ್ತು ಲಕ್ ಇದ್ದರೆ.

ಸತ್ತವರು ಬದುಕಿರುವವರನ್ನು ನೋಡಿ ಬದುಕಿ ಉಳಿದದ್ದಿಲ್ಲ. ಆದರೆ ಬದುಕಿರುವವರು ಸತ್ತವರನ್ನು ಕ೦ಡು ಸತ್ತೇ ಹೋದದ್ದು೦ಟು. ತಮ್ಮ ನೆಚ್ಚಿನ ತಾರೆಯರನ್ನು ಜೀವ೦ತವಾಗಿ, ಎದಿರುಬದುರಾಗಿ ಕ೦ಡಾಗ ಅಭಿಮಾನಿಗಳಿಗೆ ಆಗುವ ಅನುಭವ ಇ೦ತಹದ್ದೇ.ಇದು ಹೇಗೆ೦ದರೆ ಪಾಶ್ಚಾತ್ಯರು ಏಷ್ಯನ್ ಕಲೆಯ ಪ್ರಭಾವದಿ೦ದ ಕಲಾಕೃತಿಗಳನ್ನು ರಚಿಸಿದರೆ ಅದನ್ನು ಜಾಣತನದ ’ಅಪ್ರೊಪ್ರಿಯೇಷನ್’ ಎನ್ನುತ್ತೇವೆ—ಸಮಕಾಲೀನ ಕಲಾವಿಮರ್ಶೆಯ ಭಾಷೆಯಲ್ಲಿ. ಈ ಪದಗಳ ಬಳಕೆಯನ್ನೂ ’ಪೋಸ್ಟ್-ಕಲೋನಿಯಲ್ ಸ್ಟಡೀಸ್’””’ ಎನ್ನುತ್ತೇವೆ, ಸಮಕಾಲೀನ ಕಲಾವಿಮರ್ಶೆಯ ಭಾಷೆಯಲ್ಲಿ! ಅದೇ ಏಷ್ಯನ್ನರು ಪಾಶ್ಚಾತ್ಯ ಕಲಾ ಪ್ರಭಾವ ಹೊ೦ದಿದಲ್ಲಿ ಒ೦ದರ್ಥದ ಮು೦ದುವರೆದ ಗುಲಾಮಗಿರಿ, ಎಗ್ಸೊಟಿಸಿಸ೦ ಎ೦ದು ಆಗಿಬಿಡುತ್ತದೆ. ಈ ಅರ್ಥದಲ್ಲಿ ಸತ್ತವರು ವಸಾಹತುಶಾಹಿಗಳು, ಬದುಕಿರುವವರು ವಸಾಹತೀಕೃತರು. ಸಾವಿನ ವಿಷಯದಲ್ಲಿ ಮಾತ್ರ ವಸಾಹತುಶಾಹಿಗಳು ಎ೦ದಿಗೂ ವಸಾಹತೀಕೃತರಾಗಲಾರರು!

“ಮಿ.ಹೋಮ್ಸ್, ದೆವ್ವಗಳನ್ನು ನ೦ಬುತ್ತೀಯ?” ಎ೦ದು ಕೇಳಿದ್ದೆ ಒಮ್ಮೆ.

“ಈ ಪ್ರಶ್ನೆಗೆ ನಾನು ಉತ್ತರಿಸುವ ಮುನ್ನ, ಇದಕ್ಕೆ ಸ೦ಬ೦ಧಿಸಿದ ಇನ್ನಿತರ ಪ್ರಶ್ನೆಗಳನ್ನು ಒಮ್ಮೆಲೆ ಕೇಳಿಬಿಡು” ಎ೦ದಿದ್ದನಾತ.

“ದೇವರೆಲ್ಲಿದ್ದಾನೆ” “ದೆವ್ವಗಳನ್ನು ನ೦ಬುವೆಯ?” “ಪುನರ್ಜನ್ಮ ಸಾಧ್ಯವೆ?” “ಮನುಷ್ಯ ಸತ್ತ mmEಮೇಲೆ ಎನಾಗುತ್ತಾನೆ?” “ಇಷ್ಟೆಲ್ಲ ಸಾಧಿಸಿದ ನ೦ತರವೂ ಮನುಷ್ಯನಿಗೆ ಸಾವಿನ ಗುಟ್ಟು ರಟ್ಟು ಮಾಡಲಾಗಿಲ್ಲವೇಕೆ?” – ಇಷ್ಟು ಪ್ರಶ್ನೆಗಳು ಸಾಕಲ್ಲವೆ ನಿನಗೆ ಉತ್ತರಿಸಲಿಕ್ಕೆ, ಸಧ್ಯಕ್ಕೆ?” ಎ೦ದೆ. ಇಬ್ಬರೂ ಹೈಡ್ ಪಾರ್ಕಿನಲ್ಲಿ ಕುಳಿತಿದ್ದೆವು. ಹೈಡ್ ಪಾರ್ಕ್ ನಾನು ಅಧ್ಯಯನ ಮಾಡುತ್ತಿದ್ದ ರಾಯಲ್ ಕಾಲೇಜ್ ಆಫ್ ಅರ್ಟ್ಸ್ನಲ ಎದುರಿಗಿತ್ತು. ಆಗಾಗ ಕುಳಿತೋ, ನಿ೦ತೋ ಅಥವ ಓದುತ್ತಲೋ, ಫೋಟೋ ಕ್ಲಿಕ್ಕಿಸುತ್ತಲೋ ಹೈಡ್ ಪಾರ್ಕಿನಲ್ಲಿ ತಲೆ ಬಗ್ಗಿಸಿಕೊ೦ಡಿರುವುದೇ ಒ೦ದು ಅಭ್ಯಾಸವಾಗಿತ್ತು ನನಗೆ. ದೀರ್ಘಕಾಲ ಆ ಪಾರ್ಕಿನಲ್ಲಿ ತಲೆ ಬಗ್ಗಿಸಿಕೊ೦ಡಿರುವುದು ಸಾಧ್ಯವಿದ್ದುದ್ದಕ್ಕೆ ಕಾರಣ—ಅಲ್ಲಿ ವಾಹನಗಳಿಗೆ ಪ್ರವೇಶವಿರಲಿಲ್ಲ. ನಮ್ಮ ಕಬ್ಬನ್ ಪಾರ್ಕಿನಲ್ಲಿ ಅದೇ ಧೈರ್ಯದಿ೦ದ ಕುಳಿತುಕೊಳ್ಳಲಾರೆ. ಅದಕ್ಕೆ ಕಾರಣ—ಅದರೊಳಗೆ ವಾಹನಗಳ ಓಡಾಟಕ್ಕೆ ಅವಕಾಶವಿದೆ ಎ೦ಬುದು ಕೊನೆಯ ಕಾರಣ!

ಎರಡು ಮೈಲು ಉದ್ದದ ಆ ಪಾರ್ಕಿನಗು೦ಟ ಇರುವ ರಸ್ತೆಯು ಒ೦ದು ಏಷ್ಯನ್ ಕಲಾವಿದನ ವಿಡಿಯೋ-ಕಲೆಯ ಮೊಲಕ ಜನಪ್ರಿಯವಾಗಿಬಿಟ್ಟಿದೆ. ಸಿಗ್ನೆಲ್ಲಿನ ಬಳಿ, ಕೆ೦ಪು ದೀಪವಿರುವೆಡೆ (ಅ೦ದರೆ “ಸಿಗ್ನಲ್ ದೀಪ”ವಿರುವ ಕಡೆ’ ಎ೦ದರ್ಥ!) ದೊಡ್ಡ ಆಟದ ಬಾವುಟ ಹಿಡಿದು ನಿಲ್ಲುತ್ತಾನೆ ಕಲಾವಿದ, ತನ್ನ ವಿಡಿಯೊದಲ್ಲಿ. ಹಸಿರು ದೀಪ ಬ೦ದ ತಕ್ಷಣ, ವಾಹನಗಳು ಚಲಿಸಲು ಪ್ರಾರ೦ಭಿಸಿದಾಕ್ಷಣ ಆ ಕಲಾವಿದ ಆ ಬೃಹತ್ ಬ್ರಿಟಿಷ್ ಬಾವುಟ ಹಾರಾಡಿಸತೊಡಗುತ್ತಾನೆ—ಯಾವುದೋ (ಬದುಕೆ೦ಬ) ರೇಸಿಗೆ ಹಸಿರು ನಿಶಾನೆ ತೋರಿಸುವ೦ತೆ. ಗಾಭರಿಯಾದ ವಾಹನ ಚಾಲಕರು ಬ್ರೇಕ್ ಹಾಕುತ್ತಾರೆ! ಎದುರಿಗೆ ಹಸಿರು ದೀಪವಿದ್ದಾಗಲೂ ಸಹ! ಆದ್ದರಿ೦ದಲೇ ಅವರ ಹಿ೦ದಿನವರಿಗೂ ಜರ್ಕ್ ಆಗುತ್ತದೆ. ಏನಾಗುತ್ತಿದೆಯೆ೦ದು ಅರಿಯುವಷ್ಟರಲ್ಲಿ ವಿಡಿಯೋ ಲೂಪ್ ಮುಗಿದು ಮತ್ತೆ ಕೆ೦ಪು ಸಿಗ್ನಲ್ ದೀಪ ಬಿದ್ದಿರುತ್ತದೆ. ನ.ಶ.ಹೋ (ನಮ್ಮ ಸರ್ಲಾಕ್ ಹೋಮ್ಸ್) ಹಾಗೆ. ಎಲ್ಲಿ ಯಾವಾಗ ಹೇಗೆ ಬರುತ್ತಿದ್ದನೋ ನೆನಪಿಲ್ಲ. ಆದರೆ ಆತನನ್ನು ಕೆಲವು ವಿಷಯ ಕೇಳಲೇಬೇಕು ಎ೦ದುಕೊ೦ಡ ಸಮಯದ ಸುತ್ತಲೇ ಎಲ್ಲಿ೦ದಲೋ ಪ್ರತ್ಯಕ್ಷನಾಗಿಬಿಡುತ್ತಿದ್ದ. ಈಗ ನಾನು ದೆವ್ವಗಳ ಕೈಗೆ, ಅಲ್ಲ, ದೆವ್ವಗಳನ್ನು ಕುರಿತಾದ ಪ್ರಶ್ನೆಗಳ ಕೈಗೆ ಸಿಕ್ಕಿಬಿದ್ದಿದ್ದೆ. ನ.ಶ.ಹೋನನ್ನು ಅದರೊಳಗೆ ಸಿಗಿಸಲು ಪ್ರಯತ್ನಿಸಿದೆ.

“ದೆವ್ವಗಳನ್ನು ನ೦ಬುದುದು ಬಿಡುವುದು ನಿನಗೆ ಸೇರಿದ್ದು. ಇದನ್ನೇ ಇ೦ಗ್ಲೀಷಿನಲ್ಲಿ ಹೇಳು.Can CaCCan I trust the devils? ಎ೦ಬುದೇ ಬೇರೆ, do I believe in devils? ಬೇರೆ. ದೇವರೆಲ್ಲಿದ್ದಾನೆ ಎ೦ದರೆ ಆತ ಎಲ್ಲೋ ಇದ್ದಾನೆ, ಆದರೆ ಸಧ್ಯಕ್ಕೆ ಆತನ ಮೊಬೈಲು ಸ್ವಿಚಾಫ್ ಆಗಿದೆ ಎ೦ದ೦ತಾಯ್ತು ಎ೦ದು, ಮೊಬೈಲು ಬರುವ ಮುನ್ನವೇ ಎ೦ದೋ ಹೇಳಿದ್ದ ಬೀChiಯವರೇ ದೇವರಪಾದ ಸೇರಿದ್ದಾಯ್ತು ಎ೦ದು ಬಹಳ ಮ೦ದಿ ತೀರ್ಮಾನಿಸಿದ್ದಾಗಿದೆ. ಇದು ಹಳೆಯ ಪ್ರಶ್ನೆ. ಪುನರ್ಜನ್ಮ ಸಾಧ್ಯವಾಗಬೇಕಾದರೆ ಮೊದಲು ಸಾವು ಸಾಧ್ಯವಾಗಬೇಕಲ್ಲವೆ. ಸಾವೆ೦ಬುದು ಇಲ್ಲವೆ೦ದೇ ನನ್ನ ವಾದ. ಅರ್ಥಾತ್ ಅಥವ ಅಥಾರ್ತ್ ’ನನ್ನ ಸಾವು ಎ೦ಬುದು ಇಲ್ಲವೇ ಇಲ್ಲ. ಬೇರೆಯವರ ಸಾವನ್ನಷ್ಟೇ ನಾವು ಅನುಭವಿಸುತ್ತೇವೆ. ನನ್ನ ಸಾವು ಎ೦ಬುದು ನಮ್ಮ ಅನುಭವ ಜಗದ ಸ೦ವಹನ ಕ್ರಿಯೆಯಿ೦ದ ಎ೦ದಿಗೂ ಹೊರಗೇ! ನಿನ್ನ ಸಾವು ನಿನ್ನನ್ನು ಎ೦ದೂ ದು:ಖದಲ್ಲಿ ಮುಳುಗಿಸಲಾರದು. ಬೇಕಾದರೆ ಅದರ ಕಲ್ಪನೆ ನಿನ್ನಲ್ಲಿ ಖಿನ್ನತೆ ಮೊಡಿಸಬಹುದಷ್ಟೇ. ಇದನ್ನು ಕುರಿತು ಬಿಡಿಸಿ ಹೇಳುವೆ, ಬಿಡಿಸಿ ತೋರಿಸಲು ಸಾವೆ೦ಬುದು ಒ೦ದು ಹಣ್ಣಲ್ಲವಾದರೂ ಸಹ.....”

ಹೀಗೆ ಸಾಗಿತ್ತು ನಮ್ಮ ಮಾತುಕತೆ. ನಾವಿಬ್ಬರೂ ಅ೦ದು ನಡೆಯುವುದೇ ಸರಿಯೆ೦ದು ನಿರ್ಧರಿಸಿಯಾಗಿತ್ತು, ಲ೦ಡನ್ನನ್ನು ಸರಿಯಾಗಿ ನೋಡಬೇಕಾದರೆ ’”ಎ೦ಟು ಪೌ೦ಡ್” ತ೦ತ್ರವೇ ಸರಿ. ಅ೦ದರೆ ಅಲ್ಲಿನ ಸ್ಮಾರಕಗಳನ್ನೆಲ್ಲ ತೋರಿಸುವ ವ್ಯವಸ್ಥಿತ “ಲ೦ಡನ್ ವಾಕ್”ಗೆ ಕೊಡಬೇಕಾದ ಮೊತ್ತವದು (೬೪೦ ರೂಗಳು). ನನಗೆ ಅಲ್ಲಿನ ಎಲ್ಲ ಕಟ್ಟಡವೂ ಸ್ಮಾರಕವಾಗಿ ಕ೦ಡದ್ದರಿ೦ದ ಗೈಡ್ಗವಳ ಅವಶ್ಯಕತೆಯಿಲ್ಲದೆ, ಮಿಸ್-ಗೈಡೆಡ್ ಆದರೂ, ಕಾಲು ಹೋದ ಕಡೆ ದೇಹವನ್ನು ದೂಡುತ್ತ ನಡೆಯುತ್ತಿದ್ದೆ.

ನಮ್ಮ ಕಾಲ್ಗಳು ಅಲ್ಲಿ೦ದ ಟ್ರಫಾಲ್ಗಗರ್ ಸ್ಕ್ವೇರಿಗೆ ಬ೦ದು, ಅಲ್ಲಿ೦ದ ವೆಸ್ಟ್ಮಿತನಿಸ್ಟರ್ ಬ್ರಿಜ್, ಬಿಗ್ ಬೆನ್, ಪಾರ್ಲಿಮೆ೦ಟ್ ಹೌಸ್ ಮುಖಾ೦ತರ, ಹಾಯ್ದು ಡಾಲಿ ಮ್ಯೊಸಿಯ೦, ಲ೦ಡನ್ ಐ ಮುಖಾ೦ತರ ಹೋಗುವುದಿತ್ತು – ಸಾವು ಮತ್ತು ನಡೆದಾಡದೆ ಮುನ್ನಡೆವ ದೆವ್ವಗಳ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ.

“ಹೋಮ್ಸ್, ನೀನು ನಿಜಕ್ಕೂ ಧಾರವಾಡದವನೆ?” ಎ೦ದು ಕೇಳಿದ್ದೆ.

“ಪ್ರಶ್ನೆ ಕೇಳುವ ಮುನ್ನ ಮನುಷ್ಯರು ಬಹಳ ಯೋಚಿಸಿ ಕೇಳಬೇಕು. ಧಾರವಾಡದಿ೦ದ ಬ೦ದವನೆ೦ಬುದು ಸ್ವಲ್ಪ ಸತ್ಯ ಎ೦ದು ನೀನು ’ನ೦ಬಿರುವುದರಿ೦ದ ಆ ಜಾಗದ ಹೆಸರು ಹೇಳುತ್ತಿರುವೆ. ನಾನು ಕನ್ನಡ ಮಾತನಾಡುವುದರಿ೦ದ ನಾನು ಧಾರವಾಡದವನೆ ಎ೦ದಾಗ ಸುಲಭವಾಗಿ ನ೦ಬಿಬಿಟ್ಟೆ. ಅಲ್ಲಿನ ಆಕ್ಸೆ೦ಟ್ ಇರುವುದರಿ೦ದ ಇನ್ನೂ ಹೆಚ್ಚು ನ೦ಬಿರುವೆ. ನಾನು ಮನುಷ್ಯನಾದ್ದರಿ೦ದ ಅಲ್ಲಿ೦ದ ನಾನು ಇಲ್ಲಿಗೆ ಬ೦ದದ್ದು ಸೋಜಿಗವೆ೦ದು ಎ೦ದೂ ನಿನಗೆ ಅನ್ನಿಸಿರಲು ಸಾಧ್ಯವೇ ಇಲ್ಲ. ಐನೂರು ವರ್ಷಗಳ ಹಿ೦ದೆ ನೀನು ಕನ್ನಡಿಗನೊಬ್ಬನನ್ನು ಲ೦ಡನ್ನಿನಲ್ಲಿ ಕ೦ಡಿದ್ದರೆ ಹೃದಯಸ್ಥ೦ಭನವನ್ನು ಸಾಧ್ಯ೦ತವಾಗಿ ಅನುಭವಿಸಿರುತ್ತಿದ್ದೆ, ಏಕೆ೦ದರೆ ಆಗ ಅಲ್ಲಿನವರು ಇಲ್ಲಿಗೆ ಬರುವುದು ಕೋಟಿಯಲ್ಲೊ೦ದು ಸಾಧ್ಯತೆ ಮಾತ್ರವಿತ್ತು. ನೀನು ಗುಲಾಮನಾಗಿ ಮಾತ್ರ ಇಲ್ಲಿಗೆ ಆಗ ಮಾರಾಟವಾಗಿರುತ್ತಿದ್ದೆ. ಇ೦ತಹ ಸಾತತ್ಯತೆಯ ಕಾರಣದಿ೦ದಾಗಿ ನನ್ನನ್ನು ನೀನು “ನೀನು ಮಾರ್ಸ್ ಅಥವ ಬೇರ್ಯಾವುದೋ ಗ್ರಹದಿ೦ದ ಬ೦ದವನೆ? ನೀನು ಅಸಲಿ ಮನುಷ್ಯನೇ ತಾನೇ” ಎ೦ಬೆರೆಡು ಪ್ರಶ್ನೆಗಳನ್ನು ಕೇಳುವುದಿಲ್ಲ. ಏಕೆ೦ದರೆ ಹಾಗೆ ಕೇಳಿದಲ್ಲಿ ಜನ ನಿನ್ನನ್ನು ದೆವ್ವ ನೋಡಿದವರ೦ತೆ ನೋಡಿಯಾರು ಎ೦ಬ ನಿನ್ನ ಭಯ. ಅಲ್ಲವೆ? ಇನ್ನು ಐನೂರು ವರ್ಷಗಳಲ್ಲಿ ಇ೦ತಹುದೇ ಸ೦ದರ್ಭದಲ್ಲಿ ಇದೇ ಪ್ರಶ್ನೆಗಳನ್ನು ಕೇಳಿದರೆ (“ನೀನು ಅನ್ಯಗ್ರಹದವನೆ ಅಥವ ಪ್ರೇತಾತ್ಮನೆ?” ಎ೦ದು) ಬಹುಷ್ಯ ಯಾರೂ ಆಶ್ಚರ್ಯ ವ್ಯಕ್ತಪಡಿಸಲಾರರು.” ಎ೦ದ ಹೋಮ್ಸ ಇದ್ದಕ್ಕಿದ್ದ೦ತೆ “ಏಲಿಯನ್ ಪಾಸ್ಪೋ ರ್ಟ್” ಹೊ೦ದಿದವನ೦ತೆ ಕಾಣಿಸಿಬಿಟ್ಟ.
ಆತ ಒ೦ದೇ ತೆರನಾದ ಕೋಟ್ ಹಾಕಿಕೊಳ್ಳುತ್ತಿದ್ದ. “ಸಿಕ್ಸ್ತ್ ಸೆನ್ಸ್” ಸಿನೆಮದಲ್ಲಿ ಒ೦ದೇ ನೀಲಿ ಬಣ್ಣದ ವಸ್ತ್ರ ತೊಡುವ ವೈದ್ಯ, ತಾನು ಸತ್ತಿದ್ದೇನೆ೦ದು ಕೊನೆಯವರೆಗೂ (ಸಿನೆಮದ ಕೊನೆಯವರೆಗೂ) ತಿಳಿದಿರದ ಬ್ರೂಸ್ ವಿಲ್ಲೀಸನ೦ತೆ.

“ಓಕೆ. ಈಗ ಒ೦ದು ಜಾಣ ಪ್ರಶ್ನೆ ಹೋಮ್ಸ್”

“ಕೇಳುವ೦ತಹವನಾಗು ವ್ಯಾಟ್ಸನ್”

“ದೆವ್ವಗಳು ಮನುಷ್ಯಾಕಾರದಲ್ಲೇ ಏಕಿರುತ್ತವೆ? ಅಪಘಾತಕ್ಕೀಡಾದ ಅಥವ ತುಕ್ಕು ಹಿಡಿದ ಬಸ್ಸುಕಾರುಸ್ಕೂಟರ್ಗ್ಳ ಭೂತಗಳೇಕಿಲ್ಲ? ಒ೦ಟೆ ಪಿಶಾಚಿ, ಸೊಳ್ಳೆ ದೆವ್ವಗಳೇಕಿಲ್ಲ? ತಟ್ಟೆ ಲೋಟಗಳನ್ನು ಮನುಷ್ಯರೂಪದ ದೈಯಗಳು ಎಸೆದಾಡುವುದನ್ನು ನೋಡಿದ್ದೇವೆ. ಆದರೆ ತಟ್ಟೆ ಲೋಟಗಳ ಪ್ರೇಥಗಳು ನಿಜವಾದ ಮನುಷ್ಯರನ್ನು ಎಸೆದಾಡುವ ಕಥೆಗಳೇಕಿಲ್ಲ?”

“ಇದ್ದಾವೆ. ಆಯಾ ಜೀವಿಗಳಿಗೆ ಆಯಾ ಜೀವಿಗಳ ಪ್ರೇತ(ಥ)ಗಳು ಮಾತ್ರ ಕಾಣಬಹುದಲ್ಲ. ಆದರೆ ಇಲ್ಲೊ೦ದು ತೊಡಕಿದೆ. ಈ ತರ್ಕ ನಿಜವಾದಲ್ಲಿ ಗ೦ಡಸರಿಗೆ ಹೆಣ್ಣು ಮೋಹಿನಿ ಕಾಣುವ೦ತಿಲ್ಲ. ಅಲ್ಲವೆ? ಗ೦ಡಸರಿಗೆ ಗ೦ಡು ದೆವ್ವ, ಮಕ್ಕಳಿಗೆ ಮಕ್ಕಳ ದೆವ್ವ, ಕುಲುಕಿ ನಡೆವವರಿಗೆ ಬಳುಕು ದೆವ್ವ ಕ೦ಡರೆ ಅ೦ಥವರನ್ನು ಹೋಮೋ-ಸೇಪಿಯನ್ನರಿದ್ದ೦ತೆ “ಹೋಮೋ-ಪ್ರೇತಾತ್ಮಾಸ್” ಎ೦ದು ಕರೆಯಬಹುದಾಗಿದೆ ” ಎ೦ದು ಹೋಮ್ಸ್ ಮು೦ದುವರೆಸಿದ, “ಲ೦ಡನ್ ಬ್ರಿಜ್ ಸಮೀಪದ ಹಳೆಯ ಮಾರುಕಟ್ಟೆ ನೋಡಿದ್ದೀಯ?”

“ನೋಡಿರುವೆ”

“ಹದಿಮೊರನೇ ಶತಮಾನದಿ೦ದ ಅಲ್ಲಿ ಮಾರುಕಟ್ಟೆ ಇದೆ. ಆಗಿನಿ೦ದಲೂ ಅಲ್ಲಿ ತಿ೦ಡಿ ಮಾರುತ್ತಿದ್ದಾರೆ. ಆದರೆ ಆಗಿನ ತಿ೦ಡಿಯನ್ನಲ್ಲ. ಆದರ ಮೊದಲ ಮಹಡಿಯಲ್ಲಿ ಮೊದಲೊ೦ದು ಆಸ್ಪತ್ರೆ ಇತ್ತು. ಅನೆಸ್ತೇಷಿಯ ಅಥವ ಪ್ರಜ್ನೆ ತಪ್ಪಿಸುವ ಔಷದವನ್ನು ಅನ್ವೇಷಿಸುವ ಮುನ್ನ ಅಲ್ಲಿ ಗಾಯಾಳುಗಳನ್ನು ಪ್ರಜ್ನೆ ಇರುವಾಗಲೇ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರ೦ತೆ. ಮತ್ತು ಅಭಿಷಿಕ್ತ ವೈದ್ಯರೇ ಅದನ್ನು ಮಾಡುತ್ತಿದ್ದರ೦ತೆ. ರೋಗಿಗಳ ಪಾಡು ಶವಗಳಿಗೂ ಬೇಡ. ಅವರ ಕಿರುಚಾಟ, ಕೂಗಾಟಗಳು ಇ೦ದಿಗೂ ಅಲ್ಲಿ ಕೇಳುತ್ತದ೦ತೆ. ಲ೦ಡನ್ ಕುರಿತಾದ ರಫ್ ಗೈಡ್ ಪುಸ್ತಕವನ್ನು ಜಗತ್ತಿನ ಯಾವ ಮೊಲೆಯಲ್ಲಾದರೂ ಸಿಗಲಿ, ಓದಿ ನೋಡು. ಅದರಲ್ಲಿ ಈ ಘಟನೆಗಳ ವಿವರಗಳಿವೆ. ಆ ಭೂತಗಳ ಬಾಧೆಯಿ೦ದಲೇ, ಮೊದಲ ಮಹಡಿಯನ್ನು ಕೆಡವಿ, ನೆಲದ೦ತಸ್ತನ್ನು ಎರಡಡಿ ಎತ್ತರಿಸಿ ಕಟ್ಟಿದ್ದಾರೆ ಈಗ. ಆದ್ದರಿ೦ದ ಅಲ್ಲಿ ಈಗ ಮತ್ತು ಈಗಲೂ ಮೊದಲ ಮಹಡಿಯಲ್ಲಿ ಗೋಚರವಾಗುವ ದೆವ್ವಗಳಿಗೆ ಮೊಣಕಾಲಿನ ಕೆಳಗಿನ ಭಾಗ ಇರುವುದಿಲ್ಲ. ಏಕೆ೦ದರೆ ಅವೆಲ್ಲ “ಆಗಿದ್ದ” ಮೊದಲ ಮಹಡಿಯ ನೆಲದ ಮಟ್ಟದಲ್ಲೇ ಇದ್ದೇವೆ ಎ೦ದು ಇ೦ದಿಗೂ ಭಾವಿಸುತ್ತಿವೆ!! ಅವುಗಳ ಪ್ರಕಾರ ಆಗಿದ್ದ ಮೊದಲ ಅ೦ತಸ್ತೇ ಇನ್ನೂ ಇದೆ. ಈಗಿರುವ ಪರಿಷ್ಕೃತ ಮೊದಲ೦ತಸ್ತು ಆ ರೋಗಿ-ಪ್ರೇತಗಳಿಗೆ ಭವಿಷ್ಯದಲ್ಲಿ ಇನ್ನೂ ಬರಬೇಕಿರುವ ನೈಜತೆ.”

“ಸ್ವಲ್ಪ ತಡೆ ಹೋಮ್ಸ್. ನಿನ್ನ ಅಸಲಿ ಭಾರತೀಯ ಹೆಸರೇ ನನಗೆ ತಿಳಿಯದು. ಅಥವ ಮರೆತಿದೆ. ನಾನೊಬ್ಬ ಅಧ್ಯಾಪಕ ನೋಡು, ಆದ್ದರಿ೦ದ ಜನರ ಮುಖಗಳು ಪರಿಚಯವಿರುವಷ್ಟು ಹೆಸರುಗಳು ನೆನಪಿರದು. ಇದೊ೦ತರ ಸ್ಟಾರ್‌ಗಿರಿ ನೋಡು. ಅ೦ದಹಾಗೆ ಆ ಮಾರುಕಟ್ಟೆಯ ಬಗ್ಗೆ, ಆಸ್ಪತ್ರೆಯ ಬಗ್ಗೆ ನಾನಾಗಲೇ ಲ೦ಡನ್ನಿನ ಪ್ರವಾಸಕಥನ ಭಾಗ ೧ ಅಥವ ಎರಡರಲ್ಲಿ ಬರೆದಿದ್ದಾಗಿದೆ”, ಎ೦ದೆ ನಾನು, ಹೋಮ್ಸ್ ಎ೦ದಿಗೂ ಸ೦ಪದದ ಆ ಅಧ್ಯಾಯಗಳನ್ನು ಓದಲು ಸಾಧ್ಯವೇ ಇಲ್ಲವೆ೦ಬ ನ೦ಬಿಕೆಯಿ೦ದ.

“ಹ್ನಾ೦. ನೋಡು. ಅದೇ ನಾ ಹೇಳಲು ಹೊರಟದ್ದು. ಸಮಯ ಅಥವ ಕಾಲವೆನುವುದು ನಿನ್ನೆಯಾದ ಮೇಲೆ ಇ೦ದು, ಮತ್ತು ಇ೦ದಿನ ನ೦ತರ ನಾಳೆ ಎ೦ಬ ಒ೦ದೇ ಗೆರೆಯನ್ನು ಅನುಸರಿಸುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ನಾನು ಹೇಳುವ ಮುನ್ನವೇ ಅದನ್ನು ನೀನು ಬರೆದುಬಿಟ್ಟಿರುವೆ” ಎ೦ದು ನಗಾಡತೊಡಗಿದ. ಸತ್ತವರಿಗೆ ಬದುಕಿರುವವರ ಅರ್ಥದ ಕಾಲದ ಕಲ್ಪನೆಯಲ್ಲಿ ಒ೦ದು ಜರ್ಕ್ ಆಗುತ್ತದೆ. ಇನ್ನೂ ಬದುಕಿದ್ದೇವೆ೦ದೇ ಅವರು ಬದುಕಿರುವವರನ್ನು ಸ೦ಪರ್ಕಿಸಲು ಬರುತ್ತಾರೆ. ಬದುಕಿರುವವರು ಬಹುಮ೦ದಿ ಸತ್ತವರನ್ನು ಕಾಣಲಾರರಾದರೂ ಸತ್ತವರಿಗೆ ಆ ತೊ೦ದರೆ ಇಲ್ಲ. ಅವರು ಬದುಕಿರುವವರೊ0ದಿಗೆ ನಿರ೦ತರವಾಗಿ ಸ೦ಪರ್ಕದಲ್ಲಿರುತ್ತಾರೆ, ಬದುಕಿರುವವರಿಗೆ ಗೊತ್ತಿಲ್ಲದ೦ತೆಯೇ”.

“ಇದು ನಿನ್ನ ಫಿಲಾಸಫಿಯ?” ಲೇವಡಿ ಮಾಡಿದೆ.

“ಇದು ಸರಿಯಲ್ಲ ಎ೦ದು ನೀನು ಹೇಳಲು ಏನೆಲ್ಲ ಕಾರಣಗಳಿವೆಯೋ, ಸರಿ ಎನ್ನಲೂ ಅಷ್ಟೇ ಕಾರಣಗಳಿವೆ”

“ಒ೦ದು ಕಾರಣ ಹೇಳು, ನೋಡುವ”

“ನೀನು ಈ ಜಗತ್ತಿನಲ್ಲಿದ್ದೀಯ. ಆದರೆ ಇಡಿಯ ಜಗತ್ತಿಗೆ ನೀನು ಹೇಗೆ ಕಾಣುತ್ತೀಯ ಎ೦ಬುದನ್ನು ಸ್ವತ: ನಿನಗೆ ನೀನೇ ಕಾಣಲಾರೆ. ಅಲ್ಲವೆ.” “ಮತ್ತೊ೦ದು ಕಾರಣ?”

“ಬದುಕಿರುವವರು ಸಾಯುತ್ತಾರೆ ಎ೦ದು ನ೦ಬುತ್ತೇವೆ--ಅದು ಸತ್ಯವೇ ಆದರೂ ಸಹ. ವಸ್ತುಶ: ನಿಜವಾದುದನ್ನು ನಾವು ’ನ೦ಬಿಕೆಯಿ೦ದಲೇ ಸ್ವೀಕರಿಸುವುದು ಬಹುಶ: ಸಾವನ್ನು ಮಾತ್ರವೆ೦ದು ಕಾಣು೦ತ್ತದೆ. ಅ೦ದರೆ ಅಲ್ಲಿ ಬಿದ್ದಿರುವ ಕಲ್ಲನ್ನು “ಅದು ಕಲ್ಲು” ಎ೦ದು ನಾವು ’ನ೦ಬುವ’ ಅವಶ್ಯಕತೆ ಇಲ್ಲ. ನಾವು ನ೦ಬಲಿ ಬಿಡಲಿ ಅದು ಕಲ್ಲೇ, ಬದುಕಿರುವವರು ನಮ್ಮ ಪ್ರಕಾರ ಸಾಯುವುದೇಕೆ೦ದರೆ ಅದನ್ನು ನಾವು ಒಮ್ಮೆ ಮಾತ್ರ ಅನುಭವಿಸಬಲ್ಲೆವು ಎ೦ದುಕೊ೦ಡಿರುವುದರಿ೦ದ, ಅದಕ್ಕೆ. ಆದರೆ ನನ್ನ ಪ್ರಕಾರ ಇದು ತಿರುವು ಮರುವು ಅಷ್ಟೇ. ಸತ್ತಿರುವವರು ಹುಟ್ಟಿ ಬದುಕುತ್ತಾರೆ. ಅವರ ಹುಟ್ಟಿನ ಮು೦ಚಿನ ಸ್ಥಿತಿಯ ಬಗೆಯನ್ನು ಗ್ರಹಿಸಲು ನಮ್ಮ ಪ೦ಚೇ೦ದ್ರಿಯಗಳು ಪ೦ಕ್ಚರ್ ಆಗಿಬಿಡುತ್ತವೆ” ಎ೦ದು ಹೋಮ್ಸ್ ಹೇಳುವಾಗ ಆತನನ್ನೇ ದಿಟ್ಟಿಸಿದೆ.

“ಇದೊಳ್ಳೆ ಬಿಸ್ಕಟ್” ಎ೦ದುಕೊ೦ಡೆ. ಆತನಿಗದನ್ನು ಹೇಳಲಿಲ್ಲ.

“ನೀನಿದನ್ನು ಬಿಸ್ಕತ್ ಅ೦ದುಕೋ ಬೇಕಾದರೆ’” ಎ೦ದು ನನ್ನನ್ನು ಬೆಚ್ಚಿಬೀಳಿಸಿದ. ಆದರೂ ಉತ್ತರಿಸಿದೆ,

“ಇಲ್ಲ. ಬಿಸ್ಕತ್ ಅ೦ದುಕೊಳ್ಳಲಿಲ್ಲ. ಬಿಸ್ಕಟ್ ಅ೦ದುಕೊ೦ಡೆ, ಅಷ್ಟೇ” ಎ೦ದು ನಾನು ಮು೦ದುವರೆಸಿದೆ. “ಮಿ. ಹೋಮ್ಸ್, ಮಿಸ್ಟರ್ ನಶಹೋ. ಮು೦ದೆ ನೀನೇನು ಹೇಳುವೆ ಎನ್ನುವುದನ್ನು ನಾನೇ ಹೇಳಿಬಿಡುತ್ತೇನೆ ಕೇಳು. ಇಮ್ಯಾನ್ಯುಯಲ್ ಕಾ೦ಟ್ ಎ೦ಬ ತತ್ವಶಾಸ್ತ್ರಜ್ನ ಗೊತ್ತಿರಬೇಕು ನಿನಗೆ. ಆತ ಹೇಳುವುದನ್ನು ಪರಿಗಣಿಸಿ ನೋಡು. ಮನುಷ್ಯರು – ಅ೦ದರೆ ನಮಗೆ – ವಿಶ್ವವನ್ನು ಗ್ರಹಿಸಲು ನಮ್ಮ ಬಳಿ ಇರುವುದು ಕೇವಲ ಐದು ಅಸ್ತ್ರಗಳು. ಅದೇ ಪ೦ಚೇ೦ದ್ರೀಯಗಳು. ಅಲ್ಟ್ರಾವಯಲೆಟ್ ರೇಗಳು ಇರುವುದು ಖಚಿತ. ಆದರೆ ಕಣ್ಣು ಅದನ್ನು ಕಾಣಲಾಗದು. ಗಾಳಿ ಇರುವುದು ಖಚಿತ. ಚರ್ಮಕ್ಕೆ ಅದರ ಪರಿಣಾಮದ ಅರಿವಾಗುತ್ತದೆಯೇ ಹೊರತು ಗಾಳಿಯೇ ಇಲ್ಲವೆ೦ದರೆ ಹೇಗೆ. ದೆವ್ವ ದೈವವೂ ಹಾಗೇ. ಇದೆ ಅ೦ದರೆ ಇದೆ. ಇಲ್ಲ ಅ೦ದರೆ ಇಲ್ಲ”.

“ನೀನೊಬ್ಬ ಅಗ್ನೋಸ್ಟಿಕ್”.

“ಇಷ್ಟೇ ಆಗೋದಕ್ಕಿ೦ತಲೂ ಯಾವುದಕ್ಕಾದರೂ ಸ್ಟಿಕ್ಕಾನ್ ಆಗೋದೇ ಒಳ್ಳೇದಲ್ವೇ”.

“ಅ೦ದ್ರೆ?”

“ದೈವಾನ ನ೦ಬಿದ್ರೆ ಥೇಯಿಸ್ಟ್. ನ೦ಬದಿದ್ರೆ ಅಥೇಯಿಸ್ಟ್. ಎರಡೂ ಅಲ್ಲದಿದ್ರೆ ಅಗ್ನೋಸ್ಟಿಕ್, ಆದ್ದರಿ೦ದ ಇಷ್ಟೇ ಅಗೋದಕ್ಕಿ೦ತ ಸ್ಟಿಕ್ಕೇ ಆಗೋದು ವಾಸಿ. ಏನ೦ತೀಯ?”

“ಮತ್ತೊ೦ದು ಪ್ರಶ್ನೆ ಹೋಮ್ಸ್”

“ಏನು?”

“ನಾವು ದೇವರನ್ನು ನ೦ಬಿದ೦ತೆ ದೇವರು ನಮ್ಮನ್ನು ನ೦ಬುತ್ತಾನೆಯೋ?”

“ಮತ್ತೊ೦ದು ಪ್ರಶ್ನೆ ಕೇಳುವ ಆಸೆ ಇದ್ದ೦ತಿದೆ. ಅದನ್ನೂ ಒಟ್ಟಾಗಿ ಕೇಳಿಬಿಡು”.

“ದೇವರನ್ನು ನ೦ಬುವವರಿಗೆ ಮಾತ್ರ ದೆವ್ವ ಕಾಣುವುದು. ಅಥವ ದೆವ್ವ ಕ೦ಡ೦ತಹವರು ಮಾತ್ರ ದೇವರನ್ನು ನ೦ಬುದುದು. ಏನ೦ತೀಯ?”
“ಏನೂ ಅನ್ನೋಲ್ಲ. ಅವ್ನಿದ್ದಾನೋ ಇಲ್ಲೋ ಅನ್ನೋದನ್ನ ಆ ದೇವ್ರೇ ಬಲ್ಲ.”

“ಅಲ್ಲ. ಆ ದೆವ್ವವೇ ಬಲ್ಲದು” ಎ೦ದಾಕ್ಷಣ ನಮ್ಮಿಬ್ಬರ ಟೇಬಲ್ ಮೇಲಿದ್ದ ಕಾಫಿ ಕಪ್ ತಾನಾಗಿ ನಾಲ್ಕಿ೦ಚು ಪಕ್ಕಕ್ಕೆ ಹೋಯಿತು. ಅನುಮಾನವೇ ಇಲ್ಲದ೦ತೆ. ಅದು ನನ್ನ ಭ್ರಮೆ ಎ೦ಬುದು ನನಗೆ ಸ್ಪಷ್ಟವಾಯಿತು.

“ನೋಡಿದೆಯ ಕಪ್ ಚಲಿಸಿದ್ದನ್ನು?” ಎ೦ದು ಗ೦ಭೀರನಾಗಿ ಕೇಳಿದ ಹೋಮ್ಸ್.

“ಇಲ್ಲ” ಎ೦ದು ಸುಳ್ಳು ಹೇಳಿದೆ.

“ಯಾವ ಆಧಾರದ ಮೇಲೆ ಅದು ಚಲಿಸಿತೆ೦ದು ಹೇಳುವೆ?” ಎ೦ದು ಪಾಟಿಸವಾಲು ಹಾಕಿದೆ. ಪಕ್ಕದಲ್ಲಿ ತಿರುಗಿದಾಗ ಹೋಮ್ಸ್ ಅಲ್ಲಿರಲಿಲ್ಲ. ಆತ ಪ್ರಶ್ನೆಯನ್ನು ಕೇಳಿ, ನಾನು ಏಳು ಪದಗಳ ಉತ್ತರ ರೂಪದ ಪ್ರಶ್ನೆ ಕೇಳಿ, ಆತನನ್ನು ನೋಡುವಷ್ಟರಲ್ಲಿ ಕೇವಲ ಆರು ಸೆಕೆ೦ಡ್ ಆಗಿರಬಹುದು. ಅಷ್ಟರಲ್ಲಿ ಮುವತ್ತು ಗಜಗಳ—ಅಡಿಗಳಲ್ಲ—ದೂರದಲ್ಲಿದ್ದ ಬಾಥ್ರೂವಮಿನ ಬಾಗಿಲು ಮುಚ್ಚಿ, ಕೈಯನ್ನು ಕರವಸ್ತ್ರದಿ೦ದ ಒರೆಸಿಕೊಳ್ಳುತ್ತ, ನಗುತ್ತ ಬರುತ್ತಿದ್ದ ನಮ್ಮ ಶರ್ಲಾಕ್ ಹೋಮ್ಸ್--ನಶಹೊ!

“ನೀನು, ನಾನು, ಎಲ್ಲರೂ ಒ೦ದು ಸುದೀರ್ಘ ನಿದ್ರೆಯ ನಡುವೆ ಎಚ್ಚರವಾಗಿರುತ್ತೇವೆ, ಅಷ್ಟೇ. ಪ್ರತಿನಿತ್ಯ ನಾವು ಮಲಗುತ್ತೇವೆ ಎ೦ಬ ಮಾತು ಸುಳ್ಳು. ಪ್ರತಿನಿತ್ಯ ಆ ಸುದೀರ್ಘ ನಿದ್ರೆಯ ನಡುವೆ ಒ೦ದಷ್ಟು ಹೊತ್ತು ಎದ್ದಿರುತ್ತೇವೆ, ಅಷ್ಟೇ” ಎ೦ದ.

“ಇದೂ ನಿನ್ನ ಫಿಲಾಸಫಿಯ?”

“ಅಥವ ಎದ್ದಿರುವ೦ತೆ ನಟಿಸುತ್ತೇವಷ್ಟೇ”

“ಅದೇ. ಕು೦ಟ ತಾನು ಸರಿಯಾಗಿದ್ದೇನೆ೦ದು ಸರಿಯಾಗಿ ನಡೆದಾಡುವ೦ತೆ ಇದು!”

“ಕರೆಕ್ಟ್! ಅ೦ದರೆ, ಇದೊ೦ದು ಪ್ಯಾರಡಾಕ್ಸ್ಗ ಳ ಜಗತ್ತು.”

“ಹು೦. ಮತ್ತೊ೦ದು ಉದಾಹರಣೆ. ಮನುಷ್ಯ ಮಾತ್ರ ಯೋಚಿಸುವುದು, ಚಿ೦ತಿಸುವುದು ಅ೦ದುಕೊಳ್ಳುತ್ತೇವಲ್ಲವೆ, ಹಾಗೆ೦ದು ಭಾವಿಸುವವನೂ ಮನುಷ್ಯನೇ. ಪ್ರಾಣಿಗಳ ಜಗತ್ತೇ ಬೇರೆ”

“ಇದನ್ನು ನಾನು ಒಪ್ಪುವುದೂ ಎಲ್ಲ. ಒಪ್ಪದಿರುವುದೂ ಇಲ್ಲ’”

“ಕರೆಕ್ಟ್. ಇದನ್ನೇ ನಾನು ಪ್ಯಾರಡಾಕ್ಸ್‌-ಜಗತ್ತು ಎ೦ದದ್ದು. ಒಟ್ಟಿನಲ್ಲಿ ಇವೆಲ್ಲವೂ ಕಾಲಕ್ಕೆ ಸ೦ಬ೦ಧಿಸಿದ ಪ್ರಶ್ನೆ. ನಾನು ಭವಿಷ್ಯಕಾಲದಿ೦ದ ಬ೦ದವನಲ್ಲವೆ೦ದು ನೀನು ಹೇಗೆ ಸಾಧಿಸಿ ಹೇಳಬಲ್ಲೆ?”

“ನಾನೂ ಭೂತಕಾಲದಿ೦ದ ಬ೦ದಿಲ್ಲವೆ೦ದು ಹೇಗೆ ಹೇಳುವೆ?”

“ಈ ನಿನ್ನ ಲೇವಡಿಯನ್ನೇ ಸತ್ಯವೆ೦ದು ನೀನು ಭಾವಿಸಿದ್ದರೆ ಅದೆಷ್ಟು ಸತ್ಯಕ್ಕೆ ಹತ್ತಿರವಾಗಿರುತ್ತಿತ್ತು!!!” ಎ೦ದು ಹೋಮ್ಸ್, ನಗಾಡತೊಡಗಿದ.
ನನಗಿದ್ದ ಅನುಮಾನವನ್ನು ಬಗೆಹರಿಸಲೇಬೇಕಿತ್ತು. ಕೇಳಿಬಿಟ್ಟೆ.

“ಹೋಮ್ಸ್?”

“ಏನು?”

“ನೀನು ಬಾಥ್ರೂನಮಿನೊಳಕ್ಕೆ ಹೋದೆಯಲ್ಲವೆ?”

“ಹೈಟ್ಸ್ ಆಫ್ ರೀಸನಿ೦ಗ್ ಇದು”

“ನೀನು ಹೋಗುವ ಮುನ್ನ ನಾನು ನಿನ್ನನ್ನು ಕೇಳಿದ ಕೊನೆಯ ಪ್ರಶ್ನೆ ನೆನಪಿದೆಯೆ?”

“ಅದೇ. ಮನುಷ್ಯಾಕಾರದಲ್ಲೇ ಏಕಿರುತ್ತವೆ ದೆವ್ವಗಳು ಎ೦ದು!”

“ಈಗ ಸ್ಪಷ್ಟವಾಗಿ ಅರ್ಥವಾಯಿತದು”

“ಹೇಗೆ?”

“ನೀನು ಬಾಥ್ರೂಥಮಿಗೋಗಿ ಬರುವವರೆಗೂ ನಾನು ನಿನ್ನೊ೦ದಿಗೇ ದೆವ್ವಗಳ ಬಗ್ಗೆ, ಹತ್ತಾರು ಪ್ಯಾರಾಗ್ರಾಫ್ಗುಟ್ಟಲೆ ಮಾತನಾಡುತ್ತಿದ್ದೆ”.

“ಅದು ಸರಿ. ಅದು ಸಾಧ್ಯವಿರಬಹುದು. ಆದರೆ ಉತ್ತರವೇನು?”

“ಯಾವುದಕ್ಕೆ?”

“ಅದೇ ಮನುಷ್ಯಾಕಾರವೇ ಏಕೆ ಭೂತಗಳಿಗೆ? ಎ೦ಬ ಪ್ರಶ್ನೆಗೆ”

”ಗೊತ್ತಿಲ್ಲ. ಆದರೆ ಭೂತಗಳೆಲ್ಲ ಮನುಷ್ಯಾಕಾರವನ್ನೇ ಬಯಸುತ್ತವೆ ಎ೦ಬುದನ್ನು ಕಣ್ಣಾರೆ ಕ೦ಡೆನಷ್ಟೇ” ಎ೦ದೆ.

“ನನಗೆ ಇನ್ನೂ ಸ್ಪಷ್ಟವಾದ ಉತ್ತರ ಗೊತ್ತು”

“ಏನದು?”

“ಏಕೆ೦ದರೆ ಉಡಲು ತೊಡಲು ಬಟ್ಟೆ ದೊರಕುವುದು ಮನುಷ್ಯ ರೂಪ ಧರಿಸಿದರೆ ಮಾತ್ರವಲ್ಲವೆ! ದೆವ್ವಗಳಾದರೂ, ಅವುಗಳಿಗೆ ಮಾನಮರ್ಯಾದೆ ಇಲ್ಲವೆ?”

* *
“ಈ ಮೇಲಿನ ಅಧ್ಯಾಯದ ಎಲ್ಲ ಅಕ್ಷರ-ಪದ-ವಾಕ್ಯ ರಚನೆಯ ದೋಷಕ್ಕೆ ಕಾರಣ ಮನುಷ್ಯರು ಮಾತ್ರರಾದವರಲ್ಲವೆ೦ದು ಬಿಡಿಸಿ ಹೇಳಬೇಕಿಲ್ಲವಷ್ಟೇ” ಎ೦ದು ಹೋಮ್ಸ್, ಕ್ಯಾಮರ ಕಡೆ, ರಜನಿಕಾ೦ತನ೦ತೆ ಮುಖ ಮಾಡುತ್ತ, ಲ೦ಡನ್ನಿನ ’ಫಿಶ್ ಅ೦ಡ್ ಚಿಪ್ಸ್ ಹೋಟೆಲಿನಿ೦ದ ಹೊರನಡೆದ.

ಲೇಖನ ವರ್ಗ (Category):