ಕುಂತಿಯ ಅಂತ್ಯ

To prevent automated spam submissions leave this field empty.

ದು:ಖತಪ್ತನಾದ ಸೂರ್ಯ ತಲೆಮರೆಸಿಕೊಂಡುಬಿಟ್ಟಿದ್ದ. ಮೋಡಗಳಿಂದ ಸುರಿವ ಭಾಶ್ಪಾಂಜಲಿಯ ನಡುವೆ ಕಾಡ ಮಧ್ಯದಲ್ಲಿ ಒಂದು ಅಂತ್ಯಸಂಸ್ಕಾರ. ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದ ಎಮ್ಮೆಗುಂಡಿ ಕಾನಿನಲ್ಲಿ ೮೦ ವರ್ಷದ ಹಿರಿಯಾನೆ ಕುಂತಿಗೆ ವಿದಾಯ ಹೇಳುವ ಘಳಿಗೆ ಅದು.
೧೯೭೧ರಲ್ಲಿ ಅರಣ್ಯ ಇಲಾಖೆಯ ಕಟ್ಟಕಡೆಯ ಖೆಡ್ಡಾ ಒಪರೇಶನ್ನಿನಲ್ಲಿ ಕಾಕನಕೋಟೆಯಲ್ಲಿ ಹಿಡಿದ ಆನೆ ಕುಂತಿ. ಅಲ್ಲಿಂದ ಮುಂದೆ ೩೭ ವರ್ಷಗಳ ಕಾಲ ಕುಂತಿ ಸಕ್ರೆಬೈಲಿನ ಆನೆ ಬಿಡಾರದ ಕುಟುಂಬ ಸದಸ್ಯ. ಕುಂತಿಯ ನಾಲ್ಕು ಮರಿಗಳನ್ನೂ ಮಠ-ಮಂದಿರಗಳಿಗೆ ದಾನ ನೀಡಲಾಗಿದೆ. ಮದಗಜಗಳನ್ನು ಪಳಗಿಸಲು ಮತ್ತು ಮರ-ಮಟ್ಟುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಕುಂತಿ ಕಳೆದ ಮೂರು ವರ್ಷಗಳಿಂದ ಮಂಕಾಗಿತ್ತು. ಒಂದುವರೆ ತಿಂಗಳ ಹಿಂದೆ ಎಮ್ಮೆಗುಂಡಿ ಕಾಡಿನಲ್ಲಿ ಮಲಗಿದ ಕುಂತಿ ಮೇಲೇಳಲೇ ಇಲ್ಲ. ಹಾಲು-ಅನ್ನವನ್ನು ಅಲ್ಲಿಯೇ ನೀಡಲಾಗುತ್ತಿತ್ತು. ಕಳೆದ ಶುಕ್ರವಾರ ಮುಂಜಾನೆ ಸಕ್ರೆಬೈಲಿನ ಅತಿಹಿರಿಯ ಆನೆಯ ಅಂತ್ಯ. ಅಲ್ಲೀಗ ಆನೆಗಳ ಸಂಖ್ಯೆ ೧೬ ಅಷ್ಟೆ.
ಅಕಾಲಿಕ ಮಳೆಯ ನಡುವೆ ಆನೆಗಳೇ ಚಿತೆಗೆ ಸೌದೆ ತಂದವು. ಗತಿಸಿದ ಕುಂತಿಗೆ ಅವುಗಳಿಂದಲೇ ಪೂಜೆ, ಕಳೆಬರವನ್ನು ಚಿತೆಯ ಮೇಲಿರಿಸಿದ್ದೂ ಆನೆಗಳೆ. ಸಹಜ ಸಾವಾದ್ದರಿಂದ ಪೋಸ್ಟ್-ಮೊರ್ಟಮ್ ಔಪಚಾರಿಕವಗಿತ್ತು. ಆರು ವರ್ಷಗಳಿಂದ ಕುಂತಿಯ ಮಾವುತನಾಗಿದ್ದ ಖಾಸಿಮ್ ಸಾಬ್ ಮಂಕಾಗಿ ಕುಳಿತಿದ್ದ. ಕುಂತಿಯ ದೇಹ ಬೂದಿಯಾದರೂ ಮಳೆ ನಿಂತಿರಲಿಲ್ಲ, ಕಣ್ಣೀರು ಕಾಣಬಾರದೆಂಬಂತೆ.