ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

To prevent automated spam submissions leave this field empty.

ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ. ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನೆಲ್ಲ ಕಡಿದುಕೊಳ್ಳಬೇಕಾಗಿಲ್ಲ. ಒಂಟಿಯಾಗಿದ್ದು, ಏಕಾಂತದಲ್ಲಿದ್ದು ಅಥವಾ ಮನಶ್ಶಾಸ್ತ್ರಜ್ಞರನ್ನು ಕಂಡು, ಆಚಾರ್ಯರ ದರ್ಶನ ಪಡೆದು, ಅಥವಾ ಪುಸ್ತಕಗಳನ್ನು ಓದಿ ನಮ್ಮನ್ನು ನಾವು ಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವೆಂಬುದು ತಪ್ಪು ಕಲ್ಪನೆ. ನಮ್ಮ ಬಗ್ಗೆ ನಾವು ಪಡೆಯುವ ಅರಿವು ಒಮ್ಮೆ ಸಾಧಿಸಿ ಮುಗಿಸಿಬಿಡಬಹುದಾದ ಗುರಿಯಲ್ಲ. ಅದೊಂದು ನಿರಂತರವಾದ ಕಾರ್ಯ. ನಮ್ಮನ್ನು ನಾವು ತಿಳಿಯಬೇಕಾದರೆ ಕ್ರಿಯೆಗಳಲ್ಲಿ ನಮ್ಮನ್ನು ನೋಡಿಕೊಳ್ಳಬೇಕು. ನಮ್ಮ ಕ್ರಿಯೆಗಳೆಂದರೆ ಸಂಬಂಧಗಳು. ಗಂಡನೊಡನೆ, ಹೆಂಡತಿಯೊಡನೆ, ಸೋದರನೊಡನೆ, ಸಮಾಜದೊಡನೆ, ಮನುಷ್ಯರೊಡನೆ ನಿಮ್ಮ ಸಂಬಂಧ ಹೇಗಿದೆ ಎಂದು ನೋಡಿಕೊಳ್ಳಿ. ನೀವು ಹೇಗೆ ಪ್ರತಿಕ್ರಿಯೆ ತೋರುತ್ತೀರಿ ಎಂಬುದನ್ನು ಗಮನಿಸಿ. ಆದೆ ಹೀಗೆ ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಮನಸ್ಸು ಬಹಳ ಎಚ್ಚರವಾಗಿರಬೇಕು. ನಮ್ಮಲ್ಲಿ ತೀಕ್ಷ್ಣವಾದ ಗ್ರಹಿಕೆ ಇರಬೇಕು.

[ಇದು ಜೆಕೆಯವರ ದಿ ಬುಕ್ ಆಫ್ ಲೈಫ್ ಎಂಬ ಪುಸ್ತಕದ ಕನ್ನಡ ಅನುವಾದ "ಅನುದಿನ ಚಿಂತನ"ದಿಂದ ಆಯ್ದದ್ದು. ನನ್ನ ಈ ಅನುವಾದವನ್ನು ಬೆಂಗಳೂರಿನ ಜೆಕೆ ಫೌಂಡೇಶನ್ನಿನ ದಿ ಸ್ಟಡಿ ೨೦೦೨ರಲ್ಲಿ ಪ್ರಕಟಿಸಿದೆ. ಸಂಪದದ ಗೆಳೆಯರ ಪ್ರತಿಕ್ರಿಯೆಯನ್ನು ನೋಡಿಕೊಂಡು ಆಗಾಗ ಜೆಕೆ ಚಿಂತನೆಗಳನ್ನು ಹಂಚಿಕೊಳ್ಳುವ ಆಸೆ ಇದೆ.]

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅತ್ಯಮೂಲ್ಯ ಚಿಂತನೆಗಳನ್ನು ನಮ್ಮ ಮುಂದಿರಿಸುತ್ತಿರುವಿರಿ. ನಾನಂತೂ ನೀವು ಬರೆದದ್ದನ್ನೆಲ್ಲಾ ಓದಲು ತಯಾರಿದ್ದೀನಿ.

ನಿಮ್ಮ ನಿರೂಪಣೆಯಂತೂ ಚೊಕ್ಕದಾಗಿದೆ.

ಕಾಪಿರೈಟ್ ತೊಂದರೆ ಇಲ್ಲದಿದ್ದರೆ ಕೃಷ್ಣಮೂರ್ತಿಗಳ ಎಲ್ಲ ಬರಹಗಳನ್ನೂ ನನಗೆ ಇಲ್ಲಿ ಓದಲು ನೀಡುವಿರಾ? ಅಧ್ಯಾತ್ಮದ ಬಗ್ಗೆ ಕನ್ನಡದ ಬಹಳಷ್ಟು ಪುಸ್ತಕಗಳನ್ನು ಕೊಂಡಿರುವೆ. ಇವರ ಕನ್ನಡ ಅವತರಣಿಕೆ ಇರುವುದು ತಿಳಿದಿರಲಿಲ್ಲ. ಎಲ್ಲಿ ಸಿಗುವುದು ಎಂದು ತಿಳಿಸಿದರೆ, ಮುಂದೊಮ್ಮೆ ಬೆಂಗಳೂರಿಗೆ ಬಂದಾಗ ಕೊಳ್ಳುವೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಇಂಗ್ಲಿಷಿನಲ್ಲಿ ಹತ್ತೊಂಬತ್ತು ಸಂಪುಟಗಳಲ್ಲಿ, ಸುಮಾರು ಐವತ್ತು ಸಾವಿರ ಪುಟಗಳಲ್ಲಿ ಸಿಗುತ್ತದೆ. ಅಪ್ರಕಟಿತ ಭಾಷಣ ಮತ್ತು ಸಂಭಾಷಣೆಗಳು ಟೇಪು, ಆಡಿಯೋ, ವೀಡಿಯೋ ರೂಪದಲ್ಲಿ ಚನ್ನೈನ ಜೆಕೆ ಇಂಡಿಯಾ ಫೌಂಡೇಶನ್ನಿನಲ್ಲಿ ಲಭ್ಯ. ಬೆಂಗಳೂರಿನ ಕನಕಪುದ ರಸ್ತೆಯಲ್ಲಿರುವ ವ್ಯಾಲಿ ಸ್ಕೂಲಿನ ಆವರಣದಲ್ಲೆ ಇರುವ ಸ್ಟಡಿ ಸೆಂಟರ್ ಜೆಕೆ ಬರವಣಿಗೆಗಳನ್ನು ಕನ್ನಡದಲ್ಲಿ ಪ್ರಕಟಿಸುತ್ತಿದೆ, ಕಳೆದ ಐದು ವರ್ಷಗಳಿಂದ. ಇದುವರೆಗೂ ಹತ್ತೊಂಬತ್ತು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನವಕರ್ನಾಟಕದ ಮಳಿಗೆಗಳಲ್ಲಿ, ಬೆಂಗಳೂರಿನ ಅಂಕಿತ ಪುಸ್ತಕದ ಅಂಗಡಿಯಲ್ಲಿ, ಮತ್ತು ಸ್ಟಡಿ ಸೆಂಟರಿನಲ್ಲಿ ಕೂಡ ಲಭ್ಯ. ಪ್ರಕಟವಾಗಿರುವ ಜೆಕೆಯವರ ಎಲ್ಲ ಇಂಗ್ಲಿಷ್ ಭಾಷಣ ಮತ್ತು ಲೇಖನಗಳನ್ನು ಸಿಡಿ ರೂಪದಲ್ಲಿ ದೊರಕಿಸಿಕೊಟ್ಟಿದ್ದಾರೆ. ಅದು ಮಾರಾಟಕ್ಕಿಲ್ಲ, ಸಂಶೋಧನೆ, ಅನುವಾದ ಇತ್ಯಾದಿಗಳಲ್ಲಿ ಆಸಕ್ತರಾದವರಿಗೆ ಪರಾಮರ್ಶೆಗೆಂದು ದೊರೆಯುತ್ತದೆ.
ಜೆಕೆಯವರ ಎಲ್ಲ ಅನುವಾದಗಳನ್ನೂ ಸಂಪದದಲ್ಲಿ ಹಾಕಲು ಕಾಪಿರೈಟ್ ಅಡ್ಡ ಬರುತ್ತದೆ. ಆಯ್ದ ಕೆಲವು ಭಾಗಗಳನ್ನು ಆಗಾಗ ಸಂಪದದಲ್ಲಿ ಗೆಳೆಯರೊಡನೆ ಹಂಚಿಕೊಳ್ಳುವೆ. ಅದೂ ನನ್ನ ಅನುವಾದಗಳನ್ನು ಮಾತ್ರ. ಇತರರ ಅನುವಾದಗಳನ್ನು ಹಾಕಲಾರೆ.
ಜೆಕೆ ಕುರಿತ ಅನೇಕ ಅಂತರ್ಜಾಲ ತಾಣಗಳಿವೆ.