ವಿಶ್ವದ ಅತಿ ಜಾಣ ಹಾಗೂ ಬುಧ್ಧಿವಂತ ಮಕ್ಕಳಿರುವ ದೇಶ ಯಾವುದು?

To prevent automated spam submissions leave this field empty.

ಇದೆ ಹಾಗೊಂದು ದೇಶ.

ಈ ದೇಶದ ಮಕ್ಕಳು ಏಳು ವರ್ಷ ವಯಸ್ಸಾಗುವವರೆಗೂ ಶಾಲೆಗೆ ಹೋಗುವುದಿಲ್ಲ. ತಂದೆ ತಾಯಿಗಳು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೋಲ್ಲ. ಸ್ಕೂಲ್ ಯೂನಿಫಾರ್ಮ್‍ಗಳಿಲ್ಲ. ಸ್ಪೋರ್ಟ್ಸ್ ಕ್ಲಬ್ಗಳಿಲ್ಲ. ಹೈಸ್ಕೂಲಿನ ಮಕ್ಕಳಿಗೂ ದಿನಕ್ಕೆ ಅರ್ಧಘಂಟೆಗೂ ಹೆಚ್ಚಿನ ಹೋಮ್‍ವರ್ಕ್ ಇರೋಲ್ಲ. ವಿದ್ಯಾಭ್ಯಾಸಕ್ಕಾಗಿ ನಿಯಮಿತ ಸಿಲಬಸ್ ಅಂತ ಇಲ್ಲ. ಪುರಸ್ಕೃತ ಪುಸ್ತಕಗಳೂ ಅಂತಲೂ ಇಲ್ಲ. ಎಲ್ಲವೂ ಶಿಕ್ಷಕರ ಇಛ್ಛಾನುಸಾರ ನಿರ್ಧಾರಿತ. ದೇಶ ತಂತ್ರಜ್ನಾನದಲ್ಲಿ ವಿಶ್ವದ ಮುಂಚೂಣಿಯಲ್ಲಿದ್ದರೂ, ತರಗತಿಗಳಲ್ಲಿ ಪವರ್‍ಪಾಯಿಂಟ್ ಉಪಯೋಗವಿಲ್ಲದೆ ಕರಿಯ ಬಣ್ಣದ ಬರಿಯುವ ಹಲಗೆ - ಸೀಮೆಸುಣ್ಣದ ಬಳಪ, ಓವರ್‍ಹೆಡ್ ಪ್ರೊಜೆಕ್ಟರ್ಗಳ ಪ್ರಯೋಗ. ಇಲ್ಲಿಯ ಶಾಲಾ ಕಾಲೇಜುಗಳಲ್ಲಿ ಅಮೇರಿಕೆಯಲ್ಲಿರುವಂತೆ ಹಾರ್‍ವರ್ಡ್, ಪ್ರಿನ್ಸ್‍ಟನ್ ತರಹದ ಉಚ್ಛ ನೀಚ ಸ್ತರದ ತಾರತಮ್ಯಗಳಿಲ್ಲ.

ಎಲ್ಲ ದೇಶದ ಮಕ್ಕಳಂತೆ ಇಲ್ಲಿಯ ಮಕ್ಕಳೂ ಜೀನ್ಸ್, ಟ್ಯಾಂಕ್‍ಟಾಪ್ ಧರಿಸುತ್ತಾರೆ. ಹಲವರು ಸ್ಟಿಲ್ಲೆಟೋ ಹೀಲ್ಸ್ ಧರಿಸಿ ಶಾಲೆಗೆ ಬರುತ್ತಾರೆ. ಕೆಲ ಮಕ್ಕಳು ತಲೆಗೂದಲಿಗೆ ವಿಚಿತ್ರ ಶೈಲಿಯ ವಿನ್ಯಾಸ ಮಾಡಿಸಿಕೊಂಡು ಬಣ್ಣ ಬಣ್ಣಗಳಲ್ಲಿ ಡೈ ಮಾಡಿಸಿಕೊಂಡು ಬರುತ್ತಾರೆ. ಗಂಟೆ ಗಟ್ಟಲೆ ಇಂಟರ್ನೆಟ್‍ಗೆ ತಗಲಿಕೊಂಡು ಕಾಲವ್ಯಯ ಮಾಡುತ್ತಾರೆ. ರಾಕ್ ಮತ್ತುಹೆವಿ ಮೆಟಲ್ ಸಂಗೀತ ಕೇಳುತ್ತಾರೆ.

ಇಷ್ಟೆಲ್ಲಾ ಇದ್ದರೂ, Organisation for Economic Cooperation and Development ಇತ್ತೀಚೆಗೆ 57 ದೇಶಗಳ 400000ಕ್ಕೂ ಹೆಚ್ಚು ಸಂಖ್ಯೆಯಲ್ಲಿನ 15 ವರ್ಷ ವಯಸ್ಸಿನ ಮಕ್ಕಳಿಗಾಗಿ ನಡೆಸಿದ ಪರೀಕ್ಷೆಯ ಫಲಿತಾಂಶಾನುಸಾರ, ಮೇಲ್ಕಂಡ ದೇಶದ ಮಕ್ಕಳು ವಿಶ್ವದಲ್ಲೇ ಅತಿ ಪ್ರತಿಭಾವಂತ ಮಕ್ಕಳು ಎಂದು ಪರಿಗಣಿಸಲಾಗಿದೆ. ಮೇಧಾವಿತ್ವ ಮತ್ತು ಆಲೋಚನಾಶಕ್ತಿಯಲ್ಲಿ ಇವರನ್ನು ಮೀರಿಸಿದ ಮಕ್ಕಳಿಲ್ಲ. ವಿಜ್ನಾನ, ಗಣಿತ ಮತ್ತು ವಿಜ್ನಾನದ ಅನ್ವಯಪ್ರಾಕಾರಗಳಲ್ಲಿ ಈ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಮುಂದುವರೆದು ಈ ದೇಶದ ಮಕ್ಕಳು ವಿಶ್ವದಲ್ಲೇ ಅತಿ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವುಳ್ಳ ಕಾರ್ಮಿಕ ಪೌರರಾಗಿ ಪರಿವರ್ತಿತರಾಗುವುದೂ ಅಷ್ಟೇ ಸತ್ಯ. ಆಶ್ಚರ್ಯವೇ? ನೀವೊಬ್ಬರೇ ಏಕೆ? ಇಡೀ ವಿಶ್ವವೇ ಬೆರಗಾಗಿ ಕುಳಿತಿದೆ. ಯಾವುದು ಈ ದೇಶ? ಇದು ಹೇಗೆ ತಾನೇ ಸಾಧ್ಯ? ಅತಿ ಆಧುನಿಕ ಹಾಗೂ Land of Opportunities ಎಂದು ಹೆಸರಾದ ಅಮೇರಿಕವೂ ಕೂಡಾ ಎಲ್ಲೋ ಇಪ್ಪತ್ತೊಂಭತ್ತನೇ ಸ್ಥಾನದಲ್ಲಿದೆ. ಅಮೇರಿಕದ ಶಿಕ್ಷಣ ತಜ್ನರು ಈ ದೇಶಕ್ಕೆ ಭೇಟಿಯಿತ್ತು ಅಲ್ಲಿಯ ಶಿಕ್ಷಣ ಪಧ್ಧತಿಯ ಬಗ್ಗೆ ಕೂಲಂಕಷ ಅಧ್ಯಯನ ಮಾಡತೊಡಗಿದ್ದಾರೆ.

ಈ ದೇಶ ಸ್ಕಾಂಡಿನೇವಿಯಾದ ಅಂಗವಾಗಿ ಸಂವಹನ(ನೋಕಿಯಾ), ಗಣಿಗಾರಿಕೆ, ಅರಣ್ಯಮೂಲದ ಉತ್ಪಾದನೆಗಳಲ್ಲಿ ಹೆಸರಾಂತ ದೇಶ ಫಿನ್ಲೆಂಡ್. ಅಮೇರಿಕದ “ದಿ ವಾಲ್ ಸ್ಟ್ರೀಟ್ ಜರ್ನಲ್”ನಲ್ಲಿ ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ ಇಂಟರ್‍ನ್ಯಾಷನಲ್ ಪರೀಕ್ಷೆಯೊಂದರಲ್ಲಿ ಮೊದಲ ಸ್ಥಾನ ಗಳಿಸಿದ ಪ್ರಚಂಡ ಮಕ್ಕಳ ವಿದ್ಯಾಭ್ಯಾಸ ಕ್ರಮದಲ್ಲದೇನು ವಿಶೇಷ?

ಸಂಕ್ಷಿಪ್ತವಾಗಿ ಹೇಳಬೇಕಂದರೆ - ಸುಶಿಕ್ಷಿತ ಶಿಕ್ಷಕರು ಮತ್ತು ವಯಸ್ಸಿಗೂ ಮೀರಿದ ಹೊಣೆಗಾರಿಕೆ ತೋರುವ ಮಕ್ಕಳು. ಪ್ರಾರಂಭದಲ್ಲಿ ದೊಡ್ಡವರ ಮೇಲು ಉಸ್ತುವಾರಿಯಿಲ್ಲದೆಯೇ ಬಹಳಷ್ಟು ಕಲಿಯುತ್ತವೆ ಇಲ್ಲಿನ ಮಕ್ಕಳು. ನಂತರ ಮಕ್ಕಳ ಕ್ಷಮತೆಗನುಗುಣವಾಗಿ ಪಠ್ಯಕ್ರಮ ನಿರೂಪಿಸಲಾಗುತ್ತದೆ. ಮೊದಲ ನೋಟಕ್ಕೆ ಅದೇನು ಮಹಾ ಅನಿಸಿದರೂ ಅನುಕರಿಸಲು ಅಷ್ಟು ಸುಲಭವಲ್ಲ ಅನ್ನುವುದು ತಥ್ಯ.

ಇಲ್ಲಿನ ವಿದ್ಯಾಭ್ಯಾಸ ಕ್ರಮದ ಹಲವು ಕುತೂಹಲಕಾರಿ ಅಂಶಗಳು ಹೀಗಿವೆ.

• ಇಲ್ಲಿಯ ಪ್ರೈಮರಿ ಶಾಲೆಯಲ್ಲಿ ಕಲಿಸಲು ಸ್ನಾತಕೋತ್ತರ ಪದವೀಧರರಿಗೆ ಮಾತ್ರ ಅವಕಾಶ. ಈ ಹುದ್ದೆಗೆ ಅತಿ ಹೆಚ್ಚಿನ ಸ್ಪರ್ಧೆ. ಶಿಕ್ಶಕರಾಗುವ ಮೊದಲು ನುರಿತ ಶಿಕ್ಷಕರೊಬ್ಬರ ಅಪ್ಪ್ರೈಂಟಿಸ್ ಆಗಿ ಹಲವು ವರ್ಷ ಕೆಲಸ ಮಾಡ ಬೇಕು. ಶಿಕ್ಷಕರಿಗೆ ಉತ್ತಮ ಸಂಭಾವನೆ ಕೂಡ ಸೌಲಭ್ಯ.

• ಹೊರಗೆ ಎಷ್ಟೇ ನಿರ್ಬಂಧವಿಲ್ಲದಿದ್ದರೂ ತರಗತಿಯಲ್ಲಿ ಮಾತ್ರ ಮೊಬೈಲ್, ಐಪಾಡ್ ಬಳಕೆ ನಿಷಿಧ್ಧ. • ಬುಧ್ಧಿವಂತ ಮಕ್ಕಳಿಗಿಂತಲೂ ಕಡಿಮೆ ಕ್ಷಮತೆಯುಳ್ಳ ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಕಾಳಜಿ. ಪ್ರತಿಭಾವಂತ ಮಕ್ಕಳಿಗಾಗಿ ಯಾವ ವಿಶೇಷ ತರಬೇತಿಯೂ ಇಲ್ಲ. ಬುಧ್ಧಿವಂತ ಮಕ್ಕಳನ್ನು ಹಿಂದುಳಿದ ಸಹಪಾಠಿಗಳಿಗೆ ಸಹಾಯ ಮಾಡಲು ಪ್ರಚೋದಿಸಲಾಗುತ್ತದೆ. ಇದರಿಂದ ಇಬ್ಬರಿಗೂ ಸಹಾಯವಾಗುತ್ತೆ ಅಂತ ದೃಢ ನಂಬಿಕೆ.

• ಸರ್ಕಾರದ ವತಿಯಿಂದ ಪ್ರತಿ ಮನೆಯಲ್ಲೂ ಮಗುವಿನ ಜನ್ಮವಾದ ಕೂಡಲೆ ಒಂದು ಗಿಫ್ಟ್ ಹಾಂಪರ್ ಕೊಡಲಾಗುತ್ತೆ. ಅದರಲ್ಲಿ ಮಕ್ಕಳಿಗಾಗಿ ಚಿತ್ರಪುಸ್ತಕವೂ ಸೇರಿಸಲಾಗುತ್ತೆ. ಪ್ರತಿ ಮಾಲ್ ಮತ್ತು ಶಾಪಿಂಗ್ ಮಳಿಗೆಯಲ್ಲಿಯೂ ದೊಡ್ಡ ಪುಸ್ತಕ ಮಳಿಗೆ ಅಥವಾ ಲೈಬ್ರರಿ ಇರುವುದು ಕಡ್ಡಾಯ. ಮೊಬೈಲ್ ಪುಸ್ತಕ ಮಾರುವ ಮಳಿಗೆಗಳು ದೇಶದ ಮೂಲೆ ಮೂಲೆಗೂ ತಲುಪುತ್ತವೆ.

• ಮಕ್ಕಳ ಬಾಲ್ಯ ಯಾವ ರೀತಿಯ ಸ್ಪರ್ಧಾತ್ಮಕ ಮನೋಭಾವದ ಒತ್ತಡಗಳಿಲ್ಲದೆಯೇ ಕಳೆಯುತ್ತವೆ. • ಮಕ್ಕಳನ್ನು ಮೊದಲಿನಿಂದಲೇ ಸ್ವಾವಲಂಬಿಗಳನ್ನಾಗಿ ಬೆಳೆಯಲು ಉತ್ತೇಜಿಸಲಾಗುತ್ತದೆ. ಶಾಲೆಗೆ ಕರೆದೊಯ್ಯಲು ಅಥವಾ ಮನೆಗೆ ಕರೆತರಲು ಪೋಷಕರು ಅಥವಾ ಆಯಾಗಳು ಹೋಗುವ ಪರಿಪಾಠವಿಲ್ಲ. ಎಷ್ಟೇ ಹಣವಂತರಿರಲಿ ಇದೇ ವ್ಯವಸ್ಥೆ. ಹರಿದ್ವರ್ಣ ಕಾಡುಗಳಲ್ಲಿ ನಸುಗತ್ತಲಿನಲ್ಲಿಯೇ ಒಬ್ಬೊಬ್ಬರೇ ದೂರದ ಶಾಲೆಗಳಿಗೆ ನಡೆದು ಹೋಗುವಷ್ಟು ಸಾಮರ್ಥ್ಯ ಕಲಿಯುತ್ತವೆ ಇಲ್ಲಿಯ ಮಕ್ಕಳು.

• ಶಾಲೆಗಳಲ್ಲಿ ತರಗತಿಯ ನಡುವೆ ಅಕಸ್ಮಾತ್ ತೂಕಡಿಸುವ ಅಥವಾ ನಿದ್ದೆ ಹೋಗುವ ಮಕ್ಕಳನ್ನು ಎಚ್ಚರಿಸಿ ಶಿಕ್ಷೆ ಕೊಡಲಾಗದು. ಅವರನ್ನು ಅವರ ಪಾಡಿಗೆ ಬಿಟ್ಟು ಪಾಠ ಮುಂದುವರಿಸುವಷ್ಟು ಸಂವೇದನೆ ಶಿಕ್ಷಕರಿಗಿದೆ.

“ಅಯ್ಯೋ ಬಿಡ್ರೀ. ಫಿನ್ಲೆಂಡ್ ಒಂದು ಚಿಕ್ಕ ದೇಶ. ಕಮ್ಮಿ ಜನಸಂಖ್ಯೆ. ಒಂದೇ ಭಾಷೆ, ಒಂದೇ ಜನಾಂಗ. ಅಲ್ಲಿ ಇದೆಲ್ಲಾ ಸಾಧ್ಯವಿರಬಹುದು ಕಣ್ರೀ! ನಮ್ಮ ದೇಶದ ಥರಾ ಇಷ್ಟೊಂದು ಜನಸಂಖ್ಯೆಯಿದ್ದು ನಾಕಾರು ಭಾಷೆಕಲೆತು ಪ್ರತಿಯೊಂದಕ್ಕೂ ಗುದ್ದಾಡ ಬೇಕಾದ ಪರಿಸ್ಥಿತೀಲಿ ಇಂಥಾದ್ದೆಲ್ಲಾ ಸಾಧ್ಯಾನೇನ್ರಿ?” ಅಂತ ಮೂಗೆಳೀಬೇಡಿ.

ಚಿಕ್ಕ ಮಕ್ಕಳು ಎಲ್ಲಿದ್ರೂ ಚಿಕ್ಕ ಮಕ್ಕಳೇ. ಪ್ರಾಥಮಿಕ ಶಿಕ್ಷಣಕ್ಕೆ ಕೊಡಬೇಕಾದ ಮಹತ್ವ ನಮ್ಮಲ್ಲಿ ಸಿಗುತ್ತಾ ಇಲ್ಲ ಅನ್ನೋದು ಸರ್ವ ವಿದಿತ . ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಖ್ಯಾತ ವಿಜ್ನಾನಿ ಸಿ. ಎನ್. ಆರ್ . ರಾವ್ ಅವರು ತಮ್ಮ ಆತ್ಮಕಥೆಗಳಲ್ಲಿ ಸ್ಫೂರ್ತಿಗಾಗಿ ಕೃತಜ್ನತೆಯಿಂದ ಸ್ಮರಿಸೋದು ಕಡುಬಡತನದಲ್ಲಿದ್ದರೂ ನಿಸ್ವಾರ್ಥಭಾವದಿಂದ ದಾರಿ ತೋರಿಸಿದ ತಮ್ಮ ಶಾಲಾ ಮೇಷ್ಟ್ರುಗಳನ್ನೇ ಅಲ್ಲವೇ!

ಅರವತ್ತು ವರ್ಷಗಳ ಹಿಂದೆಯೇ ಖ್ಯಾತ ನಾಟಕಕಾರ ಕೈಲಾಸಂ “ಟೊಳ್ಳು ಗಟ್ಟಿ” ನಾಟಕದಲ್ಲಿ ಹೇಳಿದ ಹಾಗೆ “ಕೊಂಡಿಗಳಿಲ್ಲದ ಪಾತಾಳಗರಡಿ ಹಾಗಿರೋ ನಮ್ಮ ಇಂಗ್ಲೀಷ್ ವಿದ್ಯಾಭ್ಯಾಸ ಕ್ರಮ ಬಿಟ್ಬಿಟ್ಟು , ನಮ್ಮಕ್ಕಳ ಸ್ವಭಾವದಲ್ಲಿರೋ ಗುಣಗಳನ್ನು ಹೊರಕ್ಕೆ ಸೆಳೆಯುವ ವಿದ್ಯಾಭ್ಯಾಸಕ್ರಮವೊಂದನ್ನು ಏರ್ಪಡಿಸಿಕೊಂಡು ಅದನ್ನನುಸರಿದ್ರೇನೆ ನಮ್ಮ ದೇಶದೇಳಿಗೆ ಎಂಬೋ ” ಅವರ ಯೋಚ್ನೆ “ಕುಂಬಳಕಾಯಷ್ಟಿಲ್ದಿದ್ರೂನೂವೆ ರಾಗೀಕಾಳಷ್ಟಾದ್ರೂ” ನಮ್ಮಲ್ಲಿಯ ಶಿಕ್ಷಣ ತಜ್ನರಿಗೆ ಬಂದು ಪೂರ್ತಿ ಅಲ್ದಿದ್ರೂ ಸ್ವಲ್ಪಾನಾದ್ರೂ ಫಿನ್ಲೆಂಡಿನ ಒಳ್ಳೆಯ ವಿಧಾನಗಳನ್ನು ಅನುಕರಿಸೋಕ್ಕಾಗ್ಬಹುದೇನೋ!

ಅಂತೂ ಯೋಚಿಸಲಾರ್ಹ ವಿಚಾರ.

- ನವರತ್ನ ಸುಧೀರ್

*************************************************************

ಮೇಲಿನ ಲೇಖನ ಮೊದಲ ಬಾರಿ 17-03-2008ರಂದು thatskannada.com ನಲ್ಲಿ "ಜಾಗತಿಕ ಕುತೂಹಲ" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿತ್ತು.

http://thatskannada.oneindia.in:80/mixed-bag/lifestyle/2008/0317-brightkids-great-education-finland.html

ಲೇಖನ ವರ್ಗ (Category):