೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 
ನಾಗೇಶ ಹೆಗಡೆಯವರೊಂದಿಗೆ ಪ್ರಶಾಂತ ಪಂಡಿತ್

ವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ. ಅವರ ಬರಹಗಳನ್ನು ಓದುತ್ತಾ ಬೆಳೆದಿರುವ ನನಗೆ ಅವರು ಕನ್ನಡದ ಸಂದರ್ಭದಲ್ಲಿ ಶಿವರಾಮ ಕಾರಂತ, ಗೌರೀಶ ಕಾಯ್ಕಿಣಿ, ಮೂರ್ತಿರಾಯರ ವೈಚಾರಿಕ ಪರಂಪರೆಯ ಮುಂದುವರಿಕೆಯಾಗಿ ಕಾಣುತ್ತಾರೆ. ಆದರೆ ಈ ಹಿರಿಯರಂತೆ ಕತೆ, ಕಾವ್ಯ, ಕಾದಂಬರಿಗಳನ್ನು ಬರೆಯದ ನಾಗೇಶ ಹೆಗಡೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಸತ್ವವನ್ನು ಹೀರಿ ಭಾಷೆಯ ಸೊಗಡನ್ನೂ ಶಕ್ತಿಯನ್ನೂ ವೈಜ್ಞಾನಿಕ ಬರಹಗಳಲ್ಲಿ ತಂದವರು. ವೈಚಾರಿಕ ಲೇಖನ, ವೈಜ್ಞಾನಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದು ಎಂದು ತೋರಿಸಿದವರು. ಗಂಭೀರ ವಿಷಯಗಳನ್ನು ಸರಳಗೊಳಿಸದೇ ಸರಳವಾಗಿ ಬರೆದವರು.

ಅವರ ಪ್ರಬಂಧವೊಂದು ನಮಗೆ ಹನ್ನೆರಡನೇ ತರಗತಿಯಲ್ಲಿ ಕನ್ನಡದ ಪಠ್ಯವಾಗಿತ್ತು. ಅದರಲ್ಲಿ ಚೆರ್ನೋಬಿಲ್ ಅಣು ದುರಂತ, ಭೋಪಾಲ್ ವಿಷಾನಿಲ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಆಧುನಿಕ ಅಭಿವೃದ್ಧಿ ಮಾದರಿಗಳ ಸಾಧಕ ಬಾಧಕಗಳನ್ನು ಚರ್ಚಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ನಿಧಾನವಾಗಿ ಚಳುವಳಿಗಳೆಲ್ಲಾ ಕಾವು ಕಳೆದುಕೊಳ್ಳತೊಡಗಿದ್ದು, ನೋಡನೋಡುತ್ತಲೇ ಗ್ಲೋಬಲ್ ಎಕಾನಮಿ, ಡೆವಲಪ್ಮೆಂಟು ಇತ್ಯಾದಿಗಳು ನಮ್ಮನ್ನು ಆವರಿಸತೊಡಗಿದ್ದು ಶಾಪಿಂಗ್ ಸಂಸ್ಕೃತಿ ಇನ್ನಿಲ್ಲದಂತೆ ಹಬ್ಬುತ್ತಿರುವುದು, ಇವನ್ನೆಲ್ಲಾ ಹೇಗೆ ಅರ್ಥಮಾಡಿಕೊಳ್ಳುವುದು, ಹೇಗೆ ನಿಭಾಯಿಸುವುದು ಎಂದು ಗೊಂದಲಕ್ಕೊಳಗಾದಾಗಲೆಲ್ಲ ನನಗೆ ಅವರ ಅಂಕಣ ಬರಹಗಳು ಒಮ್ಮೊಮ್ಮೆ ಹೊಸದಾರಿಯನ್ನು ತೋರಿವೆ ಕೆಲವೊಮ್ಮೆ ಇನ್ನಷ್ಟು ಬೆಚ್ಚಿಬೀಳಿಸಿವೆ. ಅವರನ್ನು ಹಲವು ವರ್ಷಗಳಿಂದ ತಪ್ಪದೇ ಓದುತ್ತಾ ಬಂದಿರುವ ನಾನು ಬಹಳ ದಿನದಿಂದ ಈ ಎಲ್ಲಾ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸಬೇಕು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಹರಿ ಪಾಡ್ಕಾಸ್ಟಿನ ಐಡಿಯಾ ಮುಂದಿಟ್ಟರು. ಮೂರ್ನಾಲ್ಕು ತಿಂಗಳಿಂದ ಆಗ ಹೋಗೋಣ, ಈಗ ಹೋಗೋಣ ಎನ್ನುತ್ತಾ ಕೊನೆಗೂ ಜನವರಿಯ ಮೊದಲ ಭಾನುವಾರ ಮುಂಜಾನೆ ಅವರ ಹಳ್ಳಿಗೆ ಹೊರಟೇಬಿಟ್ಟೆವು. ಮಧ್ಯಾಹ್ನ ಅವರ ಮನೆ ತಲುಪಿದಾಗ ಸ್ವಾಗತಿಸಿದ್ದು ಹಕ್ಕಿಗಳ ಚಿಲಿಪಿಲಿ, ನಾಯಿಯ ಬೌಬೌ, ತಂಪಾದ ಗಾಳಿ. ನಾವು ಬೆಂಗಳೂರಿನ ಹೊರವಲಯದಲ್ಲೇ ಇದ್ದೇವೆಯೇ ಎಂದು ಆಶ್ಚರ್ಯಪಡುವಂತೆ ಇತ್ತು ಅಲ್ಲಿಯ ವಾತಾವರಣ. ಅವರ “ಮೈತ್ರಿ” ಫಾರಂನಲ್ಲಿ ಕುಳಿತು ನಾವು informal ಆಗಿ ಚರ್ಚಿಸಿದ್ದು ಇದೀಗ ನಿಮ್ಮ ಮುಂದಿದೆ.

~

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹರಿ ಮತ್ತು ಪ್ರಶಾಂತ್ ಪಂಡಿತ್,
ತುಂಬಾ ತುಂಬಾ ಚೆನ್ನಾಗಿ ಮೂಡಿಸಿದ್ದೀರ! ಅಭಿನಂದನೆಗಳು!
ಹರಿಯವರ ಪ್ರಜ್ಞಾವಂತ ಮುನ್ನುಡಿ ಹಾಗು ಹಿನ್ನುಡಿ ಅವರ ಕಾಳಜಿಗೆ ಕನ್ನಡಿ ಹಿಡಿದಂತೆ ಇವೆ.
ಪ್ರಶಾಂತರ ಚಿಂತನಶೀಲ ಪ್ರಶ್ನೆಗಳು ಎಷ್ಟು ಒಳ್ಳೆಯ ಮಾತುಗಳನ್ನು ಚರ್ಚೆಗೆ ತಂದವು ಎಂದು ಮುದಗೊಂಡೆ. ಪ್ರಶ್ನೆಗಳು ವಿಷಯವನ್ನು ವಿಸ್ತರಿಸುವಲ್ಲಿ ತುಂಬಾ ಕೆಲಸ ಮಾಡಿವೆ ಎಂದು ನನ್ನ ಎಣಿಕೆ.
ನಾಗೇಶ್ ಹೆಗ್ಡೆಯವರ ಉತ್ತರಗಳ ಹಿಂದಿನ ಸಾವಧಾನ, ಗಾಂಭೀರ್ಯ, ಕನ್ನಡದಲ್ಲಿ ವಿಜ್ಞಾನ ಹಾಗು ಪರಿಸರದ ಬಗೆಗಿನ ಅವರ ಚಿಂತನೆ ನಿಜವಾಗಿಯೂ ತಟ್ಟಿತು. ಅವರ ಬಿಡಿ ಬರಹಗಳನ್ನಷ್ಟೇ ಅಲ್ಲಿ ಇಲ್ಲಿ ಓದಿರುವ ನನಗೆ ಅವರನ್ನು ಸಮಗ್ರವಾಗಿ ಓದಬೇಕು ಅನಿಸುತ್ತಿದೆ.
ಹಲವಾರು ವಿಚಾರಗಳ ಬಗ್ಗೆ ಹೊಸದಾಗಿ ಯೋಚಿಸಲು ಹಚ್ಚಿದ ಈ ಪ್ಯಾಡ್ ಕಾಸ್ಟ್ ಎಷ್ಟೋ ದಿನಗಳ ನಂತರ ಒಳ್ಳೆಯ ಚರ್ಚೆ ಕೇಳಿದ ಸಂತೋಷ ಕೊಟ್ಟಿತು. ವಿಜ್ಞಾನ-ತಂತ್ರಜ್ಞಾನ, ನಗರ-ಹಳ್ಳಿ, ಜಾಗತೀಕರಣದಲ್ಲಿ ಚಳವಳಿ ಎಷ್ಟು ಸೊಗಸಾಗಿ ತೆರೆದುಕೊಂಡವು. ಆದರೆ, ಮಾಧ್ಯಮಗಳ ತ್ವರಿತಗತಿ (breaking news etc) ಸಹಜ ಬದಲಾವಣೆಯ ಒಂದು ರೂಪ ಎಂದು ನೋಡಲು ಸಾಧ್ಯವೇ? ನನಗಂತೂ ಅದರ ಹಿಂದಿನ ಒತ್ತಡಗಳು ತಾನೆ ತಾನಾದುದು ಎಂಬಂತೆ ನೋಡಿದರೆ ಕೆಲವು ಮುಖ್ಯವಾದ ವಿಷಯಗಳು ಮರೆ ಮಾಚಿದಂತೆ ಅನಿಸುತ್ತದೆ. ಇಲ್ಲಿ ಆ ಉದ್ದೇಶವಿಲ್ಲದಿದ್ದರೂ ಪರಿಣಾಮ ಅದಯಿತೋ ಎಂದು ಅನಿಸುತ್ತಿದೆ.
ಮತ್ತೊಮ್ಮೆ ಇಬ್ಬರಿಗೂ ತುಂಬಾ ಥ್ಯಾಂಕ್ಸ್.

ಬಹಳ ಚೆನ್ನಾಗಿ ಮೂಡಿ ಬಂದಿದೆ - ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಾತುಕತೆಯನ್ನು ಚೆನ್ನಾಗಿ ಬಂದಿದೆ. ಪಂಡಿತರ ಪ್ರಶ್ನೆಗಳು, ಮತ್ತು ಒಳನೋಟಗಳೂ ಸಂದರ್ಶನವನ್ನು ಒಳ್ಳೇ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ.

ಹೀಗೇ ಮತ್ತೆ ಮತ್ತೆ ಪಾಡ್ಕಾಸ್ಟ್ಗಳು ಬರುತ್ತಿರಲಿ..

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

ನಿಜ ಸುದರ್ಶನ್. ಮಾಧ್ಯಮಗಳ ಇಂದಿನ ಸ್ವರೂಪ ತಾನೇ ತಾನಾಗಿ ಆದದ್ದಲ್ಲ. ನಮ್ಮ ಚರ್ಚೆಯಲ್ಲಿ ಅದು ಸ್ಪಷ್ಟವಾಗಿ ಮೂಡಿಬರಿಲಿಲ್ಲ ಎಂಬ ಸಂದೇಹ ನನಗೂ ಇತ್ತು. ಇದೀಗ ನಾಗೇಶ ಹೆಗಡೆಯವರೊಂದಿಗೆ ಸಂಪದ ಬಳಗದವರೆಲ್ಲ ಸೇರಿ ಚರ್ಚೆಯನ್ನು ಮುಂದುವರೆಸುವ ಸಾಧ್ಯತೆ ಇರುವುದರಿಂದ ಆ ಅವಕಾಶವನ್ನು ಬಳಸಿಕೊಳ್ಳೋಣ.

ನಿಮ್ಮ ಒಳ್ಳೆಯ ಮಾತುಗಳಿಗೆ ಥ್ಯಾಂಕ್ಸು.

ಪ್ರಶಾಂತ ಪಂಡಿತ ಮತ್ತು ಹರಿ,
ತುಂಬ ಚನ್ನಾಗಿ ಬಂದಿದೆ ಸಂದರ್ಶನ. ಮಾಧ್ಯಮಗಳು, ಭಾಷೆ, ಹಳ್ಳಿ-ನಗರ, ಮೂಢನಂಬಿಕೆ-ವೈಚಾರಿಕತೆ, ಚಳುವಳಿಗಳು ಎಂದೆಲ್ಲ ಹಲವು ವಿಚಾರಗಳನ್ನು ಮುಟ್ಟಿದ ಚರ್ಚೆ ಮತ್ತೆ ಮತ್ತೆ ಮೆಲುಕು ಹಾಕುವಂಥದ್ದಾಗಿದೆ.
ನಾಗೇಶ ಹೆಗಡೆ ಅವರ 'ಇರುವುದೊಂದೇ ಭೂಮಿ' ಯನ್ನು ಪಿಯುಸಿ ಇದ್ದಾಗ ಓದಿ ಬಹಳ ವರ್ಷಗಳೇ ಆದವು. ಆಗ ಬಹಳಷ್ಟು ದಿನ ಅದರ ಗುಂಗಿನಲ್ಲಿದ್ದರೂ, ಮುಂದಿನ ಓದು, ಕೆಲಸಗಳಲ್ಲಿ ಮತ್ತೆ ಅವರನ್ನು ಅಷ್ಟು ಓದಲಿಲ್ಲ. ಈಗ ಮತ್ತೆ ಅವರನ್ನು ಪ್ರಜಾವಾಣಿಯ ಅಂಕಣಗಳಲ್ಲಿ ಕಂಡುಕೊಂಡಿದ್ದೇನೆ. ಸಂಪದದ ಈ ಸಂದರ್ಶನಕ್ಕೆ ಋಣಿ.
-
ಅನಿಲ

ಮೊದಲಿಗೆ, ಈ ಆಡಿಯೊ ಸಂದರ್ಶನವನ್ನು ಸಾಧ್ಯ ಮಾಡಿದ ಹರಿಪ್ರಸಾದ್ ಮತ್ತು ಪ್ರಶಾಂತ್‌ರವರಿಗೆ ಧನ್ಯವಾದಗಳು. ಬಹಳ ಸಕಾಲಿಕವಾದ ಸಂದರ್ಶನ ಇದು.

ನಾಗೇಶ್ ಹೆಗಡೆಯವರ ಸಂದರ್ಶನವನ್ನು ಕೇಳಿದ ಮೇಲೆ ಅವರು ಹೇಳಿರುವ ಹಲವಾರು ವಿಷಯಗಳಲ್ಲಿ ಸದ್ಯಕ್ಕೆ ಒಂದೆರಡನ್ನು ಆಯ್ದುಕೊಂಡು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಆಸಕ್ತರು ಸರಿಯೆನಿಸಿದಲ್ಲಿ (ತಪ್ಪೆನಿಸಿದರಂತೂ ಖಂಡಿತವಾಗಿ) ಚರ್ಚೆ ಮುಂದುವರೆಸಬಹುದು.

ನಾಗೇಶ್ ಹೆಗಡೆಯವರೆ,

ಮೊದಲಿಗೆ, ಮುಖ್ಯವಾಗಿ ನೀವು ಹೇಳಿದ ಐಟಿ, ಡಿಜಿಟಲ್ ಡಿವೈಡ್ ಮತ್ತು ಕನ್ನಡದ ಬಗ್ಗೆ ಒಂದೆರಡು ಮಾತು. ಇಲ್ಲಿ ಸ್ವಲ್ಪ ನನ್ನದೆ ಪ್ರವರ ಮತ್ತು ಅನುಭವವನ್ನು ಉಲ್ಲೇಖಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ನೀವು ಕೈಗಣಕ ಮತ್ತು ಅಂಗೈಗಣಕಗಳಲ್ಲಿ ಕನ್ನಡ ಹೆಚ್ಚಿಗೆ ಕಾಣದೆ ಇರುವುದರ ಬಗ್ಗೆ ಪ್ರಸ್ತಾಪಿಸುತ್ತ, ’ಇಷ್ಟೆಲ್ಲ ಕನ್ನಡದ ಐಟಿ ತಂತ್ರಜ್ಞರು ಇದ್ದಾರೆ, ಯಾಕಿದು ಸಾಧ್ಯವಾಗುತ್ತಿಲ್ಲ,’ ಎಂಬ ಪ್ರಶ್ನೆ ಎತ್ತಿದ್ದೀರಿ. ನಾನು ಇದಕ್ಕೆ ನನಗರ್ಥವಾದ ವಾಸ್ತವ ಮತ್ತು ನನಗೆ ಹೊಳೆದ ಪರಿಹಾರವನ್ನು ಮಾತ್ರ ಇಲ್ಲಿ ಬರೆಯುತ್ತೇನೆ. ಈ ಸಮಸ್ಯೆಯ ಮೂಲ ಇರುವುದೆ ಭಾರತದ ಆರ್ಥಿಕ ಬಡತನದಲ್ಲಿ ಮತ್ತು ಬಲ್ಲಿದರಿಗಿರುವ ಇಂಗ್ಲಿಷ್ ಜ್ಞಾನದಲ್ಲಿ. ಇವತ್ತು ಕೇವಲ ಕನ್ನಡ ಮಾತ್ರ ಬರುವ ರೈತನಿಗೆ ಕಂಪ್ಯೂಟರ್‌ನ ಅವಶ್ಯಕತೆಯಿಲ್ಲ. ಯಾಕೆಂದರೆ ಅವನು ಬಡವನೂ ಹೌದು. ಅಷ್ಟಿಷ್ಟು ಸ್ಥಿತಿವಂತನಾದ ರೈತ ತನಗೆ ಅಷ್ಟಿಷ್ಟು ಇಂಗ್ಲಿಷು ಗೊತ್ತಿದ್ದರೆ ಅಗತ್ಯವಾದ ಕಡೆ ಇಂಗ್ಲಿಷ್ ಕಂಪ್ಯೂಟರ್ ಬಳಸುತ್ತಾನೆ. ಇಂಗ್ಲಿಷ್ ಬಾರದ ಸ್ಥಿತಿವಂತ ರೈತ ಅಗತ್ಯವಾದಾಗ ಮತ್ತಿನ್ಯಾರನ್ನೊ ಅವಲಂಬಿಸಿರುತ್ತಾನೆ. ಇನ್ನು ವ್ಯಾಪಾರಿಗಳು, ವಹಿವಾಟು ಮಾಡುವವರು ೨-೩ ಸಾವಿರಕ್ಕೆಲ್ಲ ಸಿಗುವ ಇಂಗ್ಲಿಷ್ ಬಲ್ಲ ನೌಕರರನ್ನು ಇಟ್ಟುಕೊಂಡು ಸಂಭಾಳಿಸುತ್ತಾರೆ. ಹಾಗಾಗಿ ಇವತ್ತಿನ ಸ್ಥಿತಿಯಲ್ಲಿ ಕನ್ನಡದಲ್ಲಿ, ಆ ವಿಚಾರದಲ್ಲಿ ಯಾವುದೆ ಭಾರತೀಯ ಭಾಷೆಯಲ್ಲಿ ಕಂಪ್ಯೂಟರ್ ತರುವ ಅಗತ್ಯ ಯಾವ ಕಂಪನಿಗೂ ಕಾಣಿಸುತ್ತಿಲ್ಲ. ಅವರಿಗೆ ಸದ್ಯಕ್ಕೆ ಮಾರುಕಟ್ಟೆ ಕಾಣಿಸುತ್ತಿಲ್ಲ ಮತ್ತು ಹಾಕುವ ಬಂಡವಾಳಕ್ಕೆ ಸೂಕ್ತ ಲಾಭವೂ ಕಾಣಿಸುತ್ತಿಲ್ಲ.

ಕನ್ನಡದ ಮಟ್ಟಿಗಷ್ಟೆ ಮಾತನಾಡುವುದಾದರೆ, ಡಿಜಿಟಲ್ ಡಿವೈಡ್‌ನ ಆರ್ಥಿಕ ಆಯಾಮ ಬಿಟ್ಟು ಕೇವಲ ಭಾಷೆಯ ಆಯಾಮದಲ್ಲಿ ಮಾತನಾಡುವುದಾದರೆ, ಇದನ್ನು ಈ ಕೂಡಲೆ ಸಾಧ್ಯಮಾಡುವ ಸ್ಥಿತಿಯಲ್ಲಿರುವ ಏಕೈಕ ಸಂಸ್ಥೆ ಎಂದರೆ ಅದು ರಾಜ್ಯ ಸರ್ಕಾರ. ಇವತ್ತಿನ ಕಂಪ್ಯೂಟರೀಕರಣದ ಕಾಲದಲ್ಲಿ "ಕೇವಲ ಕನ್ನಡ ಇರುವ ಕಂಪ್ಯೂಟರ್‌ಗಳನ್ನು ಮಾತ್ರ ಕೊಳ್ಳುತ್ತೇವೆ" ಎಂದು ಸರ್ಕಾರ ತೀರ್ಮಾನಿಸಿದರೆ ಸಾಕು ಅದು ಅರ್ಧ ಯುದ್ಧವನ್ನು ಗೆದ್ದಂತೆ. ಆದರೆ ಪರದೇಸಿ ಐಎ‍ಎಸ್ ಬಾಬುಗಳ ಅಧಿಕಾರಶಾಹಿಯಿಂದಾಗಿ ಮತ್ತು ನಮ್ಮ ರಾಜ್ಯದ ಕೀಳರಿಮೆಯ ಅಯೋಗ್ಯ ರಾಜಕಾರಣಿಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅಷ್ಟೆ ಅಲ್ಲ, ಇದರ ಬಗ್ಗೆ ನಮ್ಮ ಸಾಹಿತಿಗಳಿಗೂ, ಕನ್ನಡಪರ ಹೋರಾಟಗಾರರಿಗೂ, ಚಳವಳಿಕಾರರಿಗೂ ಸ್ಪಷ್ಟ ಕಲ್ಪನೆಯೆ ಇಲ್ಲ.

ಇದಕ್ಕೆ ನನ್ನ ಸ್ವಂತ ಅನುಭವದ ಉದಾಹರಣೆ ಕೊಡುತ್ತೇನೆ. ೨೦೦೫ ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದಾಗ (ಆಗಲೆ ಮೊದಲ ಸಲ ನಿಮ್ಮನ್ನು ಪ್ರಜಾವಾಣಿಯಲ್ಲಿ ಭೇಟಿಯಾಗಿದ್ದು!) ಕನ್ನಡ ಸಂಸ್ಕೃತಿ ಇಲಾಖೆಗೆ ಮತ್ತು ವಿಧಾನಸೌಧದಲ್ಲಿನ ಕನ್ನಡ ಅಭಿವೃದ್ಧಿ ಇಲಾಖೆಗೆ ಮೂರ್ನಾಲ್ಕು ದಿನ ಅಲೆದೆ. "ಸರ್ಕಾರಿ ಇಲಾಖೆಗಳಲ್ಲಿ ಕನ್ನಡದ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುವುದರಿಂದ ನೀವು ಕನ್ನಡವನ್ನು ಬೆಳಸಬಹುದು, ಕೇವಲ ನುಡಿ-ಬರಹಗಳನ್ನೆ ನೋಡಿ ಈಗಾಗಲೆ ಕಂಪ್ಯೂಟರ್‌ನಲ್ಲಿ ಕನ್ನಡ ಇದೆ ಎಂದುಕೊಳ್ಳಬೇಡಿ, ಹಾಗೆ ಮಾಡಿದರೆ ಕೇವಲ ಕನ್ನಡ ಮಾತ್ರ ಬರುವ ಬಹುಸಂಖ್ಯಾತ ಕನ್ನಡಿಗರಿಗೆ ಕಂಪ್ಯೂಟರ್ ದೂರವಾಗುತ್ತ ಹೋಗುತ್ತದೆ," ಎನ್ನುವ ವಿಚಾರವನ್ನಿಟ್ಟುಕೊಂಡು ಅದರ ಬಗ್ಗೆ ಚರ್ಚಿಸಲು ಸಂಸ್ಕೃತಿ ಇಲಾಖೆಗೆ ಹೋದೆ. ಎರಡು-ಮೂರು ಸಲ ಹೋದ ಮೇಲೆ ಯಾರೊ ಒಬ್ಬರು ಎರಡನೆ-ಮೂರನೆ ಸ್ಥಾನದ ನಿರ್ದೇಶಕರು ಸಿಕ್ಕರು. ಅವರಿಗೆ ಇದ್ಯಾವುದೂ ಮುಖ್ಯವಿರಲಿಲ್ಲ. ಸಂಬಳಕ್ಕಾಗಿ ಕೂಲಿ ಮಾಡುವ ನೌಕರರು ಅವರು! ಇನ್ನು ಇದಿನಬ್ಬ ಎಂಬ ವಯೋವೃದ್ಧ ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಅವರು ಮೂರ್ನಾಲ್ಕು ದಿನಕ್ಕೊಮ್ಮೆಯೂ ವಿಧಾನಸೌಧದ ಕಡೆ ತಲೆ ಹಾಕುತ್ತಿರಲಿಲ್ಲ. ಹಾಗೂ ಹೀಗೂ ಪ್ರಾಧಿಕಾರದ ಕಾರ್ಯದರ್ಶಿಯನ್ನು ಕಂಡು ಮಾತನಾಡಿದರೆ, ಅವರು, ಇದು ನಮ್ಮ ಕೆಳಗೆ ಇಲ್ಲ. ಚಾವ್ಲಾ ಎಂಬ ಇ-ಗವರ್ನಮೆಂಟ್ ಇಲಾಖೆಯವರನ್ನು ನೋಡಿ ಎಂದರು! ಎಲ್ಲರೂ ಕೇವಲ ಸಂಬಳ ತೆಗೆದುಕೊಳ್ಳುವ ಕೂಲಿಗಳು. ಮೂಲಭೂತವಾಗಿ ನಮ್ಮ ಸಮಸ್ಯೆ ಇರುವುದು ಇಲ್ಲಿಯೆ.

ಇದೆ ವಿಷಯದ ಮೇಲೆ ಒಮ್ಮೆ (MLC) ಚಂದ್ರಶೇಖರ ಕಂಬಾರರಿಗೆ ಇಲ್ಲಿಂದಲೆ ಫೊನ್ ಮಾಡಿದ್ದೆ. ಮೈಕ್ರೊಸಾಪ್ಟ್‌ನವರು ೪೦ ಡಾಲರ್‌ಗೆಲ್ಲ ಥಾಯ್ ಬಾಷೆಯಲ್ಲಿ ಆಪರೇಟಿಂಗ್ ಸಿಸ್ಟಮ್ ತರುತ್ತಿದ್ದಾರೆ, ನೀವು ಅದನ್ನು ಪ್ರಸ್ತಾಪಿಸಿ ಮತ್ತು ಸರ್ಕಾರದ ಕಂಪ್ಯೂಟರ್‌ಗಳು ಕನ್ನಡದ್ದಾಗಿರುವಂತೆ ಒತ್ತಾಯಿಸಿ ಎಂದು ಕೋರಿಕೊಂಡಿದ್ದೆ. ಅವರ ಮನೆಗೆ ಅದಕ್ಕೆ ಪೂರಕವಾದ ದಾಖಲೆಗಳು ತಲುಪುವ ವ್ಯವಸ್ಥೆಯನ್ನೂ ಮಾಡಿದೆ. ಹಾಗೆಯೆ (MLC) ಮುಖ್ಯಮಂತ್ರಿ ಚಂದ್ರುರವರಿಗೂ ಫೋನ್ ಮಾಡಿ ಅವರಲ್ಲೂ ಅದನ್ನೆ ಕೋರಿದ್ದೆ. ನಾನು ಮಾಡಿದಂತಹ ಯೋಚನೆ ಮತ್ತು ಕೆಲಸವನ್ನೆ ಇನ್ನೂ ಒಂದಷ್ಟು ಜನ ಮಾಡಿರಬಹುದು. ಆದರೆ ಮಾರನೆ ದಿನದ ಪತ್ರಿಕೆಗಳಲ್ಲಿ ಬಂದಿದ್ದೆ ಬೇರೆಯದಾಗಿತ್ತು. ಈ ಕನ್ನಡ ಪಂಡಿತರು ಮತ್ತು ಹೋರಾಟಗಾರರು ವಿಧಾನಪರಿಷತ್ತಿನಲ್ಲಿ ಏನೇನೊ ಅಮುಖ್ಯವಾದ ವಿಚಾರಗಳನ್ನು ಮಾತನಾಡಿದ್ದರೆ ಹೊರತು ಈಗ ತೀರ ಅಗತ್ಯವಾದದ್ದು ಏನು ಎನ್ನುವುದನ್ನೆ ಮರೆತಿದ್ದರು. ಇವರಿಗೆಲ್ಲ ಮೈಕ್ರೊಸಾಪ್ಟ್‌ನ ವಿರುದ್ಧವೊ ಇನ್ಯಾವುದೊ ಕಂಪನಿಯ ವಿರುದ್ದವೊ ಮಾತನಾಡುವುದು ಮುಖ್ಯವಾಗಿಬಿಡುತ್ತದೆಯೆ ಹೊರತು ನಮ್ಮ ಈಗಿನ ಅಗತ್ಯವಾದ ಕನ್ನಡ ಅನುಷ್ಠಾನ ಮುಖ್ಯವಾಗುವುದಿಲ್ಲ. ಇವರಿಗೆ ತಮ್ಮ ಸಿನಿಕತನ, ದ್ವೇಷ, ಅಸಹನೆ, ಈಗೊ, ಕ್ಯಾಪಿಟಲಿಸಮ್, ಮುಖ್ಯವಾಗಿಬಿಡುತ್ತದೆಯೆ ಹೊರತು ತಾವು ನಿರ್ವಹಿಸಬೇಕಾದ ಜವಾಬ್ದಾರಿ ಏನು ಎನ್ನುವುದು ಹಾಗು ಸಮಸ್ಯೆಗೆ ಪರಿಹಾರ ಏನು ಅನ್ನುವುದಲ್ಲ. ಅದೇ ಪರಿಸ್ಥಿತಿ ಇವತ್ತಿಗೂ ಮುಂದುವರೆಯುತ್ತಿದೆ. ನಾಲ್ಕು ವರ್ಷಗಳ ಹಿಂದೆ ನನ್ನಂತಹ ಅಮುಖ್ಯ ಮನುಷ್ಯ ಹೇಳಿದ್ದನ್ನೆ ಲಿಂಗದೇವರು ಹಳೆಮನೆಯಂತಹ ಅಧ್ಯಾಪಕರು ಇವತ್ತೂ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದಾರೆ.

ಇನ್ನು ’ನಮ್ಮ ಐಟಿ ಇಂಜಿನಿಯರ್‌ಗಳು ಏನೂ ಮಾಡುತ್ತಿಲ್ಲ,’ ಎನ್ನುವ ಸಿನಿಕತನದ ಮಾತಿನ ಬಗ್ಗೆ. ಈ ಸಮಸ್ಯೆಗೆ ಇರುವ ಆರ್ಥಿಕ ಆಯಾಮವೆ ಹೀಗೆ ಹೇಳುವವರಿಗೆ ಅರ್ಥವಾಗುತ್ತಿಲ್ಲ. ಈ ಸಮಸ್ಯೆ ಒಂದು ವೆಬ್‍ಸೈಟು ಮಾಡುವಷ್ಟೊ, ಇಲ್ಲವೆ ಕೇವಲ ನಾಲ್ಕೈದು ಜನ ಸೇರಿಕೊಂಡು ಒಂದು ಪ್ರೊಗ್ರಾಮ್ ಬರೆದುಬಿಡುವಷ್ಟೊ ಆಗಿದ್ದರೆ ಇಷ್ಟೊತ್ತಿಗೆ ನಮ್ಮ ಹುಡುಗರು ಅದನ್ನು ಮಾಡಿಬಿಡುತ್ತಿದ್ದರು. ದಿನೇದಿನೇ ಬದಲಾಗುತ್ತಿರುವ ಹಾರ್ಡ್‍ವೇರ್ ಇಟ್ಟುಕೊಂಡು, ತಮ್ಮ ಜೀವನವನ್ನು ಸಾಗಿಸಲು ಮಾಡಬೇಕಾದ ಉದ್ಯೋಗವನ್ನಿಟ್ಟುಕೊಂಡು, ಭಾಷೆಗೆ ಸಂಬಂಧಪಟ್ಟ ಡಿಜಿಟಲ್ ಡಿವೈಡ್ ತುಂಬುವುದು ಅಸಾಧ್ಯ. ಇದನ್ನು ಮಾಡಬಲ್ಲ ಸಾಧ್ಯತೆ ಇರುವುದು ಸರ್ಕಾರಕ್ಕೆ ಮತ್ತು ಆದಾಯಕ್ಕಾಗಿ ಕೆಲಸ ಮಾಡುವ ಕಂಪನಿಗಳಿಗೆ ಮಾತ್ರ.

ಅದು ಬಿಟ್ಟರೆ ಯಾರಾದರೂ ದುಡ್ಡು ಕಳೆದುಕೊಳ್ಳಲು ಸಿದ್ಧವಿರುವ ಶ್ರೀಮಂತನಿಂದಲೂ ಇದನ್ನು ಸ್ವಲ್ಪ ಮಟ್ಟಿಗೆ ತುಂಬಲು ಸಾಧ್ಯವಿದೆ. ಇವತ್ತು ಕೇವಲ ಹತ್ತು ಸಾವಿರ ರೂಪಾಯಿಗೆ ಅಂತರ್ಜಾಲ ಜಾಲಾಡಬಹುದಾದ ಮತ್ತು ಒಂದೆರಡು ಉಪಯುಕ್ತ ತಂತ್ರಾಂಶಗಳಿರುವ ಅಪ್ಪಟ ಕನ್ನಡದ ಕಂಪ್ಯೂಟರ್ ಅನ್ನು ನಿರ್ಮಿಸಲು ಸಾಧ್ಯವಿದೆ. ಕನಿಷ್ಠ ೧-೨ ಸಾವಿರ ಕಂಪ್ಯೂಟರ್‌ಗಳನ್ನು ನಿರ್ಮಿಸಿದರೆ ಈ ಬೆಲೆಯಲ್ಲಿ ಸುಲಭವಾಗಿ ಮನೆ ಬಳಕೆಗೆ ಬೇಕಾದ ಕನ್ನಡ ಕಂಪ್ಯೂಟರ್ ಅನ್ನು ನಿರ್ಮಿಸಬಹುದು. ಆದರೆ ಅದಕ್ಕೆ ಕನಿಷ್ಠ ಎಂದರೂ ಒಂದು ಕೋಟಿ ರೂಪಾಯಿ ಕಳೆದುಕೊಳ್ಳುವ ದೊಡ್ಡಮನಸ್ಸಿನ ಕನ್ನಡ ಫ್ಹಿಲಾಂಥ್ರಪಿಸ್ಟ್ ಮುಂದೆ ಬರಬೇಕು. ಆದರೆ, ನಮ್ಮಲ್ಲಿ ಇಂತಹ ಒಬ್ಬ ದೊಡ್ಡಮನಸ್ಸಿನ ಶ್ರೀಮಂತನನ್ನೂ ನಾನು ನೋಡಿಲ್ಲ. ನಮ್ಮ ದಾರಿದ್ರ್ಯ ಇರುವುದು ಇಲ್ಲಿ. ನಮ್ಮಲ್ಲಿ ಬಡವರಿಗೆ ಸಹಾಯ ಮಾಡುವುದು ಅಥವ ದಾನ ಮಾಡುವುದು ಫ್ಯಾಷನ್ ಆಗಿದೆಯೆ ಹೊರತು ಬಡತನ ನಿರ್ಮೂಲನೆ ಅಲ್ಲ.

ಇಷ್ಟೆಲ್ಲ ಹೇಳಿಯೂ ನಾನು ಆಶಾವಾದದಿಂದ ಕೂಡಿದ್ದೇನೆ. ಅದೇನೆಂದರೆ, ಈಗಾಗಲೆ ಲಕ್ಷಕ್ಕೂ ಮಿಗಿಲಾಗಿ ನೌಕರರನ್ನು ಹೊಂದಿರುವ ಟಿಸಿಎಸ್, ಇನ್ಫೊಸಿಸ್, ವಿಪ್ರೊ‍ಗಳಂತಹ ಕಂಪನಿಗಳು ಜಾಗತಿಕ ಆರ್ಥಿಕ ಹಿಂಜರಿತವಾಗುತ್ತಿದ್ದಂತೆ ದೇಸಿ ಮಾರುಕಟ್ಟೆಗೆ ತಂತ್ರಾಂಶ ಅಭಿವೃದ್ಧಿ ಪಡಿಸಲು ತೊಡಗಿಕೊಳ್ಳಲೇಬೇಕು. ಹೊಸಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಿಕೊಳ್ಳುವ ಆ ಸಮಯದಲ್ಲಿ ಸ್ವಲ್ಪ ಮಾರುಕಟ್ಟೆ ಇದೆ ಅಂದರೂ ಸಾಕು ಅವರು ನೂರಾರು ಜನರನ್ನು ಆ ಮಾರುಕಟ್ಟೆ ವಶಪಡಿಸಿಕೊಳ್ಳಲು ತೊಡಗಿಸುತ್ತಾರೆ. ಅದು ಐಡಿಯಲ್ ಆದ, ನಾವೆಲ್ಲ ಈಗ ಬಯಸುವ ಪರಿಸ್ಥಿತಿ ಅಲ್ಲ. ಹಾಗೆಯೆ ಅದು ಇಂತಹುದೆ ದಿನ ಆಗುತ್ತದೆ ಎನ್ನುವುದೂ ಅಸಾಧ್ಯ. ಆದರೆ ಅದು ತಡವಾಗದಿದ್ದರೆ ಸಾಕು ಎನ್ನುವ ಹಂಬಲವಷ್ಟೆ ನನ್ನದು.

ಇದೇ ವಿಷಯದ ಮೇಲೆ ನನ್ನದು ಇನ್ನೂ ಹಲವು ಅಂಶಗಳಿವೆ. ಉದಾಹರಣೆಗೆ, ನಮ್ಮ ಹಾಲಿ ವ್ಯವಸ್ಥೆ, ಹಿರಿಯರು ಸಿನಿಕರಾಗದೆ ಹುಡುಕಿಕೊಂಡು ಹೋಗಿ ನೀಡಬೇಕಾದ ನಿಸ್ವಾರ್ಥ ಮಾರ್ಗದರ್ಶನ ಮತ್ತು ಅಗತ್ಯವಾಗಿ ಬೀರಬೇಕಾದ ಪ್ರಭಾವ. ರಾಜಕೀಯ ಇಚ್ಚಾಶಕ್ತಿ, ಅಧಿಕಾರ ರಾಜಕಾರಣದಲ್ಲಿ ಮತ್ತು ಆಡಳಿತದ ಅಧಿಕಾರಶಾಹಿಯಲ್ಲಿ ರೂಪಿಸಬೇಕಾದ ಜವಾಬ್ದಾರಿ ಮತ್ತು ಮೌಲ್ಯಗಳು, ಇವು ಮುಚ್ಚುವ ಎಲ್ಲಾ ತರಹದ ಕಂದರಗಳು, ಇತ್ಯಾದಿ. ಈಗಾಗಲೆ ಈ ಪ್ರತಿಕ್ರಿಯೆ ಉದ್ದವಾಗಿರುವುದರಿಂದ ಇಲ್ಲಿಗೆ ನಿಲ್ಲಿಸುತ್ತೇನೆ. ಯಾರಾದರೂ ಚರ್ಚೆ ಮುಂದುವರೆಸಿದರೆ ಮುಂದಕ್ಕೆ ಹೇಳುವ ಅವಕಾಶ ಬರಬಹುದು.

ಮುಗಿಸುವ ಮುನ್ನ ನೀವು ಚಳವಳಿಗಳ ಬಗ್ಗೆ ಹೇಳಿದ ಮಾತಿಗೆ ಒಂದು ಪುಟ್ಟ ಟಿಪ್ಪಣಿ ಮಾಡಿಬಿಡುತ್ತೇನೆ: ಮಾಧ್ಯಮಗಳಿಂದಾಗಿ, ಯುವಕರೆಲ್ಲ ಕೆರಿಯರ್ ಎಂದು ಓಡುವುದರಿಂದಾಗಿ, ಮತ್ತೂ ಇನ್ನೂ ಹಲವು ಕಾರಣಗಳಿಗೆ ಚಳವಳಿಗಳು ಬಲ ಕಳೆದುಕೊಂಡವು ಎಂದಿದ್ದೀರಿ, ಆ ವಿಷಯದ ಬಗ್ಗೆ ನೀವು ಹೇಳಿರುವುದನ್ನು ಕೇಳಿ ನನಗೆ ಅನೇಕ ವಿಷಯಗಳು ತಿಳಿದುಬಂದವು. ಹಾಗೆಯೆ ನನಗೆ ಹೊಳೆದದ್ದು ಏನೆಂದರೆ, ಆ ಚಳವಳಿಗಳು ತಮ್ಮ ಮೂಲ ಉದ್ದೇಶ ಒಂದಷ್ಟು ಮಟ್ಟಿಗೆ ಈಡೇರುತ್ತಿದ್ದಂತೆ ಬಲಹೀನವಾದವು ಎಂದು. ಚಳವಳಿಗಳಿಂದ ವ್ಯವಸ್ಥೆ ಅಷ್ಟರ ಮಟ್ಟಿಗೆ ಸುಧಾರಿಸಿತು ಎನ್ನಿಸುತ್ತದೆ. ಆದರೆ ಈಗ ಬೀದಿ ಚಳವಳಿಗಳಿಗಿಂತ ಬೇರೆಯೆ ತರಹದ ಆಕ್ಟಿವಿಸಂ (ರ್‍ಯಾಲ್ಫ಼್ ನೇಡರ್‌ ಮಾದರಿಯದು) ಬೇಕಾಗಿದೆ ಎನ್ನುವುದು ನನ್ನ ಗಾಢ ನಂಬಿಕೆ. ಆ ದಿಸೆಯಲ್ಲಿ ನಮ್ಮ ಪ್ರಯತ್ನ ಇರಬೇಕು. ಇದರ ಬಗ್ಗೆ ಸಮಯವಾದರೆ ನಿಮ್ಮ ಅಭಿಪ್ರಾಯ ತಿಳಿಸಿ?

ನಮಸ್ಕಾರ,
ರವಿ...

[ಸಂಪದ ತಂಡಕ್ಕೆ ಮತ್ತೊಮ್ಮೆ ಧನ್ಯವಾದಗಳು]

ಈ ಪ್ರತಿಕ್ರಿಯೆಯಲ್ಲಿ ರಾಲ್ಫ್ ನೇಡರ್ ಎಂಬ ಅಮೆರಿಕದ ಆಕ್ಟಿವಿಸ್ಟ್‌ನ ಕುರಿತು ಪ್ರಸ್ತಾಪಿಸಿದ್ದೆ. ಆ ಪ್ರಸ್ತಾಪಕ್ಕೆ ಪೂರಕವಾಗಿ ಆತನ ಬಗ್ಗೆ ನಾನು ನಾಲ್ಕೈದು ದಿನಗಳ ಹಿಂದೆ ಬರೆದಿರುವ ಲೇಖನದ ಲಿಂಕ್ ಅನ್ನು ಇಲ್ಲಿ ಕೊಡುತ್ತಿದ್ದೇನೆ. ಆಸಕ್ತರು ಗಮನಿಸಬಹುದು.
http://amerikadimdaravi.blogspot.com/2008/03/blog-post_06.html

ಹಾಗೆಯೆ, ಡಿಜಿಟಲ್ ಡಿವೈಡ್ ಬಗ್ಗೆ ಬರೆಯುತ್ತ ಕಂಪ್ಯೂಟರ್‌ನ ಆಪರೇಟಿಂಗ್ ಸಿಸ್ಟಮ್ ಕನ್ನಡದ್ದೇ ಆಗುವ ಅವಶ್ಯಕತೆ ಮತ್ತು ಸರ್ಕಾರ ಅದನ್ನು ಯಾಕಾಗಿ ಮಾಡಬೇಕು ಎಂದು ಪ್ರಸ್ತಾಪಿಸಿದ್ದೆ. ಅದಕ್ಕೆ ಪೂರಕವಾಗಿ ನಾಲ್ಕು ವರ್ಷಗಳ ಹಿಂದೆ ಬರೆದಿದ್ದ "ಬೆಳೆಯಬೇಕಿದ ಕನ್ನಡ 'ಬರಹ-ನುಡಿ' ಯಿಂದಾಚೆಗೆ" ಲೇಖನವನ್ನು ಸಂಪದದಲ್ಲಿ ಅಪ್‍ಲೋಡ್ ಮಾಡಿದ್ದೇನೆ. ಅದರ ಲಿಂಕ್ ಇದು:
http://www.sampada.net/article/7714

ರವಿ...

ರವಿ,

ನಾಗೇಶ ಹೆಗಡೆಯವರಿಗೆ ಪ್ರತಿಕ್ರಿಯಿಸುತ್ತಾ ನೀವು ಎತ್ತಿದ ಪ್ರಶ್ನೆಗಳಿಗೆ ನನ್ನ ಅನಿಸಿಕೆಗಳನ್ನು ಸೇರಿಸುತ್ತಿದ್ದೇನೆ. ನೀವು ಅವರಿಗೆ ಕೇಳಿದ ಪ್ರಶ್ನೆಗಳಿಗೆ ನನ್ನ ಸಹಮತವಿದೆ. ಖಂಡಿತ ವೆಬ್ ಸೈಟೊಂದನ್ನು ಸೃಷ್ಟಿಸಿದಷ್ಟು ಅಥವಾ ಪ್ರೋಗ್ರಾಮೊಂದನ್ನು ಬರೆದಷ್ಟು ಸುಲಭವಲ್ಲ ಡಿಜಿಟಲ್ ಡಿವೈಡನ್ನು ತುಂಬುವುದು. ಹಾಗೆಯೇ ಜನಸಾಮಾನ್ಯರ ಆರ್ಥಿಕ ಅನುಕೂಲ, ಇಂಗ್ಲೀಷ್ ಜ್ಞಾನ, ಸರ್ಕಾರದ ಪಾಲುದಾರಿಕೆ ಮುಂತಾದ ಅಂಶಗಳನ್ನು ನೀವು ಚರ್ಚಿಸಿದ್ದು ಸಮಂಜಸವಾಗಿಯೇ ಇದೆ. ಆದರೆ ನಾಗೇಶರು ಹೇಳಿದ
’ಇಷ್ಟೆಲ್ಲ ಕನ್ನಡದ ಐಟಿ ತಂತ್ರಜ್ಞರು ಇದ್ದಾರೆ, ಯಾಕಿದು ಸಾಧ್ಯವಾಗುತ್ತಿಲ್ಲ’
’ನಮ್ಮ ಐಟಿ ಇಂಜಿನಿಯರ್‌ಗಳು ಏನೂ ಮಾಡುತ್ತಿಲ್ಲ’
ಎಂಬ ಮಾತುಗಳನ್ನು ನಾನು ಅರ್ಥೈಸುವುದೇ ಬೇರೆ ರೀತಿಯಲ್ಲಿ. ನಾಗೇಶರ ಇಂಗಿತ ಏನಿದೆಯೋ ತಿಳಿಯದು. ಅವರೊಂದಿಗೆ ಚರ್ಚಿಸಿ ತಿಳಿಯೋಣ. ನನ್ನ ಮಿತಿಯಲ್ಲಿ, ಐಟಿ ಕ್ಷೇತ್ರದಲ್ಲಿ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಪಾಲ್ಗೊಂಡ ನನ್ನ ಅನುಭವದ ಆಧಾರದ ಮೇಲೆ ಈ ಕೆಳಗಿನ ಮಾತುಗಳನ್ನು ಹೇಳುತ್ತಿದ್ದೇನೆ.

ಖಂಡಿತವಾಗಿಯೂ ನೀವು ಗುರುತಿಸಿದಂತೆ “…ಇವನ್ನೆಲ್ಲ ಮಾಡಬಲ್ಲ ಸಾಧ್ಯತೆ ಇರುವುದು ಸರ್ಕಾರಕ್ಕೆ ಮತ್ತು ಆದಾಯಕ್ಕಾಗಿ ಕೆಲಸ ಮಾಡುವ ಕಂಪನಿಗಳಿಗೆ ಮಾತ್ರ”. ಆದರೆ ಇಂತಹ ಸರ್ಕಾರಿ ಇಲಾಖೆಗಳಲ್ಲಿ / ಸಂಸ್ಥೆಗಳಲ್ಲಿ ಅಥವಾ ಸಾಫ್ಟವೇರ್ ಕಂಪನಿಗಳಲ್ಲಿ ಕೆಲಸಮಾಡುವ, ನಿರ್ಧಾರ ತೆಗೆದುಕೊಳ್ಳುವ ಎಷ್ಟು ಮಂದಿಗೆ ಕನ್ನಡದ ಬಗ್ಗೆ ಪ್ರೀತಿ, ಕಾಳಜಿ, ಸಮುದಾಯದ ಕಷ್ಟಗಳ ಬಗ್ಗೆ ತಿಳುವಳಿಕೆ, ಸಮುದಾಯಕ್ಕೆ ಸಹಾಯವಾಗುವ ಕೆಲಸಗಳ ಬಗ್ಗೆ ಆಸಕ್ತಿ ಇರುತ್ತದೆ ಎಂಬುದು ನನ್ನ ಪ್ರಶ್ನೆ. ಈ ಮಾತನ್ನು ಯಾವುದೇ ಹತಾಶೆಯಿಂದ ಅಥವಾ ಸಿನಿಕತನದಿಂದ ಹೇಳುತ್ತಿಲ್ಲ. ಕೆಲವು ಉದಾಹರಣೆಗಳೊಂದಿಗೆ ವಿವರಿಸಲು ಯತ್ನಿಸುತ್ತೇನೆ. ಕನ್ನಡಿಗರೇ ಆದ ಇಂಜಿನಿಯರುಗಳು ಐಟಿ ಕಂಪನಿಗಳಲ್ಲಿ ಲಕ್ಷಗಳ ಸಂಖ್ಯೆಯಲ್ಲಿರಬಹುದು. ಆದರೆ ಅವರಲ್ಲಿ ಕನ್ನಡ ಓದಿ, ಬರೆಯಬಲ್ಲವರು ಭಾಷೆಯ ಬಗ್ಗೆ ಪ್ರೀತಿಯಿರುವವರು ಎಷ್ಟು ಮಂದಿ? ಕನ್ನಡದ ಬಳಕೆ ಅನಿವಾರ್ಯವಾಗಿರುವವರ ಸಂಖ್ಯೆ ಎಷ್ಟು? ಎಂದು ಪ್ರಶ್ನಿಸಿದರೆ ಉತ್ತರ ಕಷ್ಟ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ, ಮನೆಯಲ್ಲಿ ಕನ್ನಡ ಮಾತನಾಡುವ 5 ಮಂದಿ ನನ್ನ ಸಹೋದ್ಯೋಗಿಗಳಿಗೆ ಸ್ಪಷ್ಟವಾಗಿ ಕನ್ನಡ ಓದಲು ಬರೆಯಲು ಬಾರದು! ಸಂಶೋಧನೆಯ ಸಲುವಾಗಿ ಅವರ ಸಹಾಯ ಬಳಸಿಕೊಳ್ಳಬೇಕಾದಾಗ ಈ ವಿಷಯ ತಿಳಿಯಿತು. ಆದರೆ ಅಮೆರಿಕೆಯಲ್ಲಿ ಹುಟ್ಟಿ ಬೆಳೆದ ಇನ್ನೊಬ್ಬ ಸಹೋದ್ಯೋಗಿ ತಮಿಳನ್ನು ಸ್ವಚ್ಛವಾಗಿ ಬರೆಯಲು ಓದಲು ಬಲ್ಲರು ಮಾತ್ರವಲ್ಲ ಅವರ ನೇತೃತ್ವದಲ್ಲಿ ನಡೆಯುವ ಸಂಶೋಧನೆಯೊಂದರಲ್ಲಿ ತಮಿಳನ್ನೇ ಬಳಸುತ್ತಾ ಇಂದು ಆ ಭಾಷೆಯನ್ನು ಕಂಪ್ಯೂಟರಿಗೆ ಅಳವಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ನಮ್ಮ ಲ್ಯಾಬಿನ ಡೆಮೊಗಳಲ್ಲಿ ತಮಿಳು ರಾರಾಜಿಸುತ್ತಿದೆ. ಕಾರಣ ಅವರ ತಂಡದಲ್ಲಿರುವವರೆಲ್ಲ (ಐಐಟಿ, ಬಿಟ್ಸ್ ಪಿಲಾನಿ ಪದವೀಧರರು, ಅಮೆರಿಕದಿಂದ ಎಂಎಸ್ ಮಾಡಿ ಬಂದವರು, ಎಲ್ಲರೂ) ತಮಿಳಿನ ಜ್ಞಾನ ಉಳ್ಳವರು. ಕನ್ನಡದ ಪ್ರಾಥಮಿಕ ಜ್ಞಾನವೂ (ಪ್ರೀತಿಯೂ) ಇಲ್ಲದವರಿಂದ ಭಾಷೆಯೊಂದನ್ನು ಕಂಪ್ಯೂಟರಿಗೆ ಅಳವಡಿಸುವ ತಂತ್ರಜ್ಞಾನಗಳ ಸಂಶೋಧನೆ ಹೇಗೆ ಸಾಧ್ಯ? ಇದು ನಾನು ಕೆಲಸಮಾಡುತ್ತಿರುವ ಕಂಪನಿಯ ಕಥೆಯಾದರೆ ನಮ್ಮ ಯುನಿವರ್ಸಿಟಿಗಳು, ಐಐಎಸ್ಸಿಯಂಥ ಸಂಸ್ಥೆಗಳ (ಅಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕೆಲಸ ನಡೆಯಬೇಕೆಂದರೆ) ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಕನ್ನಡವನ್ನು ಪ್ರೀತಿಸುವ ಐಟಿ ತಂತ್ರಜ್ಞರು ಇರುವಲ್ಲಿ (ಕಾಲೇಜಿನಿಂದ ಹಿಡಿದು ಕಂಪನಿಗಳವರೆಗೆ) ತಮ್ಮ ಮಿತಿಯೊಳಗೇ ಏನನ್ನಾದರೂ ಸಾಧಿಸಬಹುದು, ಕನಿಷ್ಠ ಮೊದಲ ಹೆಜ್ಜೆಗಳನ್ನಿಡಬಹುದು.

ಇಂತಹ ಪರಿಸ್ಥಿತಿಗೆ ಬಹಳಷ್ಟು ಕಾರಣಗಳಿರಬಹುದು. ಕನ್ನಡ ಮಾತಾಡಿದರೆ ದಂಡಹಾಕುವ ಶಾಲೆಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಭಾಷೆಯ ಆಗತ್ಯ ಇಂಜಿನಿಯರುಗಳಿಗಿಲ್ಲ ಎಂಬಂಥ ವಾತಾವರಣವಿರುವಲ್ಲಿ ಅಭಿವೃದ್ಧಿ ಕಷ್ಟಸಾಧ್ಯ. ಇದಕ್ಕೆ ಪೂರಕವಾಗಿ ಇನ್ನೊಂದು ಉದಾಹರಣೆ ಕೊಡುತ್ತೇನೆ. ನಾನು ಪಿಯೂಸಿ ಓದುತ್ತಿದ್ದಾಗ ಕನ್ನಡವನ್ನು ಆಯ್ದುಕೊಂಡಿದ್ದೆ. ವಿಜ್ಞಾನದ ವಿದ್ಯಾರ್ಥಿಯಾಗಿ ಕನ್ನಡ ಆಯ್ದುಕೊಂಡದ್ದಕ್ಕಾಗಿ ನನ್ನ ಓರಗೆಯವರಿಂದ ತಾತ್ಸಾರಕ್ಕೂ ಒಳಗಾಗಿದ್ದೆ. “It’s a waste of time learning languages”, “ಕನ್ನಡ ಯಾಕ್ ತೊಗೊಂಡ್ಯೋ, ಸ್ಯಾನ್ ಸ್ಕ್ರಿಟ್ ಅಥ್ವಾ ಇಂಗ್ಲೀಷ್ ತೊಗೋಳೋದಲ್ವಾ” ಎಂಬ ಪುಕ್ಕಟೆ ಸಲಹೆಗಳನ್ನೂ ಪಡೆದಿದ್ದೆ. ಶಿವಮೊಗ್ಗ ನಗರವಾಸಿಯಾದ ನಾನು ಮೊದಲ ದಿನ ಕನ್ನಡ ತರಗತಿಯಲ್ಲಿ ಕೂತಾಗ ತಿಳಿದದ್ದು ಅಲ್ಲಿದ್ದ ಬಹಳಷ್ಟು ಮಂದಿ ಸುತ್ತಮುತ್ತಲ ಹಳ್ಳಿಗಳಿಂದ ಓದಲು ಬಂದಿದ್ದ “ಕನ್ನಡ ಮೀಡಿಯಮ್” ಹುಡುಗರು. ಇದು ಹದಿನೈದು ವರ್ಷಗಳ ಹಿಂದಿನ ಕಥೆ! ಅದೂ ಅನಂತಮೂರ್ತಿ, ಲಂಕೇಶ್, ತೇಜಸ್ವಿ, ನಿಸಾರ್ ಅಹ್ಮದರಂಥ ಹಿರಿಯ ಬರಹಗಾರರು ಒಂದು ಕಾಲದಲ್ಲಿ ಕಲಿತ / ಪಾಠಮಾಡಿದ ಕಾಲೇಜಿನಲ್ಲಿ ನಡೆದದ್ದು. ಇದು ಇಂಜಿನಿಯರುಗಳ, ತಂತ್ರಜ್ಞರ ವಿಷಯವಾದರೆ ಇತರರ ಕಥೆ ನೋಡೋಣ. ನೀವು ಉದಾಹರಿಸಿದ ರೈತರನ್ನು ಬಿಟ್ಟು ಇತರೆ ವೃತ್ತಿನಿರತನ್ನು ಗಮನಿಸಿ - ಡಾಕ್ಟರು, ಲಾಯರುಗಳು, ಸರ್ಕಾರಿ ಇಲಾಖೆಗಳನ್ನೇ ಗಮನಿಸಿ ನೋಡಿ – ಇವರಲ್ಲಿ ಎಷ್ಟು ಮಂದಿಗೆ ದಿನನಿತ್ಯದ ಬಳಕೆಗೆ ಕನ್ನಡ ಅನಿವಾರ್ಯ?

ಇರಲಿ. ಇದನ್ನು ಹೆಚ್ಚಿಗೆ ಬೆಳೆಸುತ್ತಾ ಹೋಗುವುದಿಲ್ಲ. ನಾಡಿನ ಎಲ್ಲರಿಗೂ ತಾಯ್ನುಡಿಯು ಬದುಕಿನ ಎಲ್ಲ ಅಗತ್ಯಕ್ಕೆ ಅನಿವಾರ್ಯವಾಗದ ಹೊರತು ತಂತ್ರಜ್ಞಾನ ಅಳವಡಿಕೆಯಂಥ ಕೆಲಸವನ್ನು ಪೂರ್ಣಪ್ರಮಾಣದಲ್ಲಿ ಕೈಗೊಳ್ಳಲಾಗದು ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಸರ್ಕಾರಗಳ ಒತ್ತಾಸೆ, ಬೆಂಬಲ ಮಾತ್ರವಲ್ಲದೇ ಕಾನೂನಿನ ಚೌಕಟ್ಟು ಇತ್ಯಾದಿಗಳಿದ್ದರೂ ಭಾಷೆಯ ಬಳಕೆಯ ಅಗತ್ಯ ಅಥವಾ ಅನಿವಾರ್ಯತೆ ನಮ್ಮೊಳಗಿನಿಂದ ಬರಬೇಕಲ್ಲವೇ...

(ನಾಗೇಶರ ಮಾತುಗಳಿಂದ ಈ ಎಲ್ಲ ಆಲೋಚನೆಗಳು ಬಂದವು. ಅವರು ಯಾವ ಅರ್ಥದಲ್ಲಿ ಹೇಳಿದರೋ ಅವರನ್ನೇ ಕೇಳೋಣ, ಚರ್ಚಿಸೋಣ)

- ಪ್ರಶಾಂತ

ನಾಗರಾಜ್. ಜಿ
ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ.
ನನ್ನ ಒಂದು ಮನವಿಯನ್ನು ತಮ್ಮಲ್ಲಿ ಏನೆಂದರೆ ಈ ಅಡಿಯೋವನ್ನು ರೇಡಿಯೋದಲ್ಲಿ ಪ್ರಸಾರ ಮಾಡಲು ಅನುಮತಿ ಇದೆಯಾ? ಇದ್ದರೆ ನಾನು ಸ್ವಲ್ಪ ಸರಿಪಡಿಸಿ ಪ್ರಸಾರ ಮಾಡಬಲ್ಲೆ. ಜೊತೆಗೆ ಎಲ್ಲಾ ಆಡಿಯೋ ಸಹ ಪ್ರಸಾರ ಮಾಡುವೆ. ಏನಂತಿರಿ.

ನಾಗೇಶ ಹೆಗಡೆಯವರೊಂದಿಗೆ ಸಂದರ್ಶನ ಕೇಳಿದೆ. ಚೆನ್ನಾಗಿದೆ. ನಾನು ಹಳ್ಳಿಯತ್ತ ಒಂದು ಹೆಜ್ಜೆ ಇಟ್ಟಾಗಿದೆ.ಅಲ್ಲಿ ಹಳ್ಳಿಗರಿಗಾಗಿ ಏನಾದರೂ ಗುಡಿಕೈಗಾರಿಕೆ ಮಾಡಬೇಕೂಂತ ಯೋಚಿಸ್ತಾ ಇದ್ದೇನೆ. ಸಲಹೆ ಸಹಕಾರ ಕೊಡುವವರಿದ್ದರೆ ಸ್ವೀಕರಿಸುವೆ.

ultimate ಆಗಿದೆ! ಎಷ್ಟು ಸೆನ್ಸಿಬಲ್ ಆಗಿದೆ. Oh dear! I love listening to people who talk sense. ನಾಗೇಶ್ ಹೆಗಡೆಯವರು ಶುರುವಿನಲ್ಲಿ ಬರಹ ಬೇರೆ, ಮಾತಿನಲ್ಲಿ ಹೇಳುವುದು ಬೇರೆ, ಅಂತ ಶುರು ಮಾಡಿದರೂ ನನಗೆ ಅವರ ಮಾತೇ ಜಾಸ್ತಿ ಇಷ್ಟವಾಯಿತು. ಒಂದೊಂದು ಶಬ್ದಗಳನ್ನೂ (transistors ಇತ್ಯಾದಿ) ಅವುಗಳ ಅರ್ಥವನ್ನೂ ಸರಿಯಾಗಿ ಅರಿಯದೆ ಕನ್ನಡಕ್ಕೆ translate ಮಾಡುವವರ ಹಾವಳಿ ಜಾಸ್ತಿ ಆಗಿರುವಾಗ, ನಿಜವಾಗಲೂ ಈ ಆರಾಮಾಗಿರುವ ತಂಪು ಕನ್ನಡದ ಮಾತುಕತೆ ಕೇಳಿ ಮನಸ್ಸಿಗೆ ಒಂಥರಾ ತಂಪು- ಮಳೆಗಾಲ ಶುರುವಾಗುವಾಗ ಆಗುವ ತಂಪಿನಂಥ ತಂಪು ಆದುದು ಸುಳ್ಳಲ್ಲ.

ವಿಜ್ಞಾನಿಗಳಲ್ಲಿ ಇರುವ ವಿವಿಧ ವಿಜ್ಞಾನಿಗಳನ್ನೂ ಅವರಲ್ಲಿ ಇರುವ ಮೂಢನಂಬಿಕೆಗಳನ್ನೂ ವಿವರಿಸುವ ರೀತಿ ಸೂಪರಾಗಿತ್ತು. I can tolerate ignorance but not stupidity ಅಂತ ಯಾರೋ ಎಲ್ಲೋ ಹೇಳಿದ್ದು ನೆನಪಾಯ್ತು.

ಮೂಢನಂಬಿಕೆಗಳು ಈ ಕಾಲದಲ್ಲಿ ಜಾಸ್ತಿನೇ ಆಗಿರಬಹುದು ಎನ್ನುವುದು ಎಷ್ಟು ನಿಜವೋ ಗೊತ್ತಿಲ್ಲ, ಆದರೆ, ನಾವು ಮೂಢ ನಂಬಿಕೆಗಳಿಂದ ಹೊರ ಬಿದ್ದಾಗ, ಮಾತ್ರ ನಮಗೆ ಅವು ಕಾಣಿಸುತ್ತವೆಯಷ್ಟೇ? ಮೂಢನಂಬಿಕೆಗಳಿಂದಲೇ ಆವ್ರತವಾಗಿದ್ದಾಗ, ಕೆಸರಲ್ಲಿ ಇರುವ ಹಂದಿಯು ಕೆಸರನ್ನೇ ನೆಚ್ಚಿ ಆಟವಾಡಿದಂತೆ, ನಮಗೆ ಇದು ಕೆಸರು ಎಂದು ಹೇಗೆ ತಿಳಿಯುತ್ತದೆ? ಹೊರಬಿದ್ದಾಗ ಸುತ್ತಮುತ್ತಲೂ ಕೆಸರು ಕಂಡಂತೆ!

ತುಂಬಾ ಆಪ್ತವಾದ ಮಾತುಕತೆ. ಸುಂದರ ಭಾಷೆ, ಸರಳ ನಿರೂಪಣೆ ಹಾಗು ಸಂದರ್ಶನ ಮಾಡಿದವರ ಪೂರ್ವ ಸಿದ್ಧತೆ ಎದ್ದು ಕಾಣುತ್ತದೆ. ಇಷ್ಟೊಂದು ಸ್ತುತ್ಯರ್ಹ ಕೆಲಸ ಮಾಡಿದ ಸಂಪದ ತಂಡಕ್ಕೆ ಧನ್ಯವಾದಗಳು. ನಾಗೇಶ್ ಹೆಗಡೆಯವರೊಂದಿಗೆನೆ ಮತ್ತೂ ಹಲವಾರು ಘಂಟೆಗಳಷ್ಟು ಮಾತಾಡುವುದು ಬಾಕಿ ಇದೆ ಅನಿಸುತ್ತೆ.