ವಿವೇಕರ ಕಥಾಲೋಕ-6

To prevent automated spam submissions leave this field empty.

ನಾಲ್ಕನೆಯ ಕಥಾಸಂಕಲನ : ಮತ್ತೊಬ್ಬನ ಸಂಸಾರ (2005)

ಮತ್ತೊಬ್ಬನ ಸಂಸಾರ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಅವರ ಹಿಂದಿನೆಲ್ಲ ಕಥೆಗಳಿಗಿಂತ ಭಿನ್ನವಾಗಿಯೂ ಹೆಚ್ಚು ಸಂಕೀರ್ಣವಾಗಿಯೂ ಇರುವುದು ವಿಶೇಷ. ಇವು ಯಾವುದೇ ಬಗೆಯ ಸೈದ್ಧಾಂತಿಕ ಚೌಕಟ್ಟಿಗಾಗಲೀ, ಸರಳೀಕೃತ ನೋಟಕ್ಕಾಗಲೀ, ಸಿದ್ಧಮಾದರಿಯ ವಿಮರ್ಶೆಗಾಗಲಿ ದಕ್ಕದ ಕಥೆಗಳು. ಪ್ರತಿ ಕಥೆಯೂ ಅದರಷ್ಟಕ್ಕೇ ಅನನ್ಯ ಮತ್ತು ಹಾಗಾಗಿ ಸಂಕಲನದ ಬಗ್ಗೆ ಒಟ್ಟಾರೆ ಮಾತುಗಳು ಕಷ್ಟವಾಗಿಸುವಷ್ಟು ವಿಭಿನ್ನ.

ಮೊದಲ ಕಥೆ ಮತ್ತೊಬ್ಬನ ಸಂಸಾರವನ್ನು ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ನಿಲುಕು ಮತ್ತು ಇನ್ನೂಒಂದು ಕಾದಂಬರಿಯೊಂದಿಗೆ ಹೋಲಿಸುವುದು ಅಗತ್ಯ. ನಿಲುಕು ಕಥೆಯಲ್ಲಿ ಒಬ್ಬರ ಬದುಕಿನಂತೆಯೇ ಇನ್ನೊಬ್ಬರ ಬದುಕು ಇರಬಹುದಾದ ಒಂದು ಅನೂಹ್ಯ ಸಾಧ್ಯತೆ ಒಂದು ಕುತೂಹಲವಾಗಿ, ಬೆರಗಾಗಿ ಬಂದಿದೆ. ಇಬ್ಬರು ಶ್ರೀರಾಮರು ಇರಬಹುದಾದ ಮತ್ತು ಇಬ್ಬರೂ ಅಗೋಚರ ಎಂಬ ಹೆಸರಿನಲ್ಲೇ ಒಂದು ಕಥೆಯನ್ನು ಬರೆದಿರಬಹುದಾದ ವಿಲಕ್ಷಣ ಎನಿಸಬಹುದಾದ ಸತ್ಯ; ಅರ್ಜುನ ಹೇಳದೇ ಮುಚ್ಚಿಡುವ ಸಂಗತಿ ತನ್ನದೇ ಬದುಕಿನಲ್ಲಿ ನಡೆದ(ನಡೆದಂಥ) ವಿದ್ಯಮಾನವಾಗಿರಬಹುದಾದ ಸಾಧ್ಯತೆ; ಯಾವ ನಿಖರ ಕಾರ್ಯಕಾರಣ ಸಂಬಂಧವೂ ಇಲ್ಲದೆ ಸರಸ್ವತಿ ಎಂಬ ಒಬ್ಬ ಹುಡುಗಿ ಭಿಡೆಯಿಲ್ಲದೆ ತನ್ನನ್ನು ಮದುವೆಯಾಗು ಎಂದು ಮನೆಗೇ ಬರುವ ಪ್ರಸಂಗದ ವೈಚಿತ್ರ್ಯ -ಎಲ್ಲವೂ ಇಲ್ಲಿ ಕೇವಲ ಬೆರಗಿನಾಚೆ ಚಾಚಿಕೊಳ್ಳುವ ಉದ್ದೇಶ ಹೊಂದಿಲ್ಲ. ಆದರೆ ಇನ್ನೂ ಒಂದು ಕಾದಂಬರಿ ಉದ್ದಿಶ್ಯ ಪೂರ್ವಕ ಹಾಗೆ ಪರಕಾಯ ಪ್ರವೇಶದ ಅನಿವಾರ್ಯವನ್ನು ಕಂಡುಕೊಂಡಿರಬಹುದಾದ ಒಬ್ಬ ವ್ಯಕ್ತಿಯ ತಲ್ಲಣಗಳನ್ನು ಕುರಿತದ್ದು, ಎರಡು ಸಂಸ್ಕೃತಿಗಳ ಜನಜೀವನದ ಮೇಲೆ ಅದರಿಂದಾದ ಪರಿಣಾಮಗಳನ್ನು ಸೂಕ್ಷ್ಮವಾಗಿ ವಿವೇಚಿಸುವಂಥದ್ದು ಮತ್ತು ಇಂಥ ಒಂದು ಹೊರದಾರಿಯ ದೂರಗಾಮಿ ಪರಿಣಾಮಗಳನ್ನು ಆಧುನಿಕತೆ ಮತ್ತು ಪರಂಪರೆಯ ಆಯಾಮಗಳಿಂದ ನೋಡಲು ಯತ್ನಿಸುವಂಥದ್ದು. ಮತ್ತೊಬ್ಬನ ಸಂಸಾರವಾದರೋ ಬದುಕಿನ ತೀರ ವ್ಯಕ್ತಿಗತ ನೆಲೆಯಲ್ಲೂ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿರುವುದರ ಸೂಕ್ಷ್ಮ ವಿಡಂಬನೆಯೇ ಸರಿ.

ಶರವಣ ಸರ್ವಿಸಸ್ ವಿವೇಕರ ಬಹುಮುಖ್ಯ ಕಥೆಗಳಲ್ಲಿ ಒಂದು. ಇಲ್ಲಿನ ಶರವಣನನ್ನು ಲಂಗರು ಕಥೆಯ ಪಬ್ಬ, ಸುಧೀರನ ತಾಯಿ ಕಥೆಯ ಉಪ್ಪ, ಸರಹದ್ದು ಕಥೆಯ ಜನ್ನನ ಜೊತೆ ಹೋಲಿಸಬಹುದಾದ ವ್ಯಕ್ತಿಯಾದರೂ ಇವನು ಅವರೆಲ್ಲರ ರಿಫೈನ್ಡ್ ಮಾದರಿಯೆನ್ನಬೇಕು. ಯಾಕೆಂದರೆ ಕಂತು ಕಥೆಯ ಬುಗುರಿಯನ್ನೋ, ಜಾಮೀನು ಸಾಹೇಬ ಕಥೆಯ ದಯಾನಂದನನ್ನೋ ಪಬ್ಬನಿಗೆ ಕಸಿ ಮಾಡಿರುವಂತೆ ಈ ಶರವಣ ಈ ಎಲ್ಲರನ್ನು ಹೋಲುತ್ತಾನೆ. ಆದರೆ ಆ ಎರಡೂ ಪಾತ್ರಗಳು (ಕಂತು ಕಥೆಯ ಬುಗುರಿ ಅಥವಾ ಜಾಮೀನು ಸಾಹೇಬದ ದಯಾನಂದ) ತೆರೆದಿಡದ ಸತ್ಯಗಳನ್ನು ಈ ಶರವಣ ನಮ್ಮೆದುರು ತೆರೆದಿಡುವ ಬಗೆ ಹೊಸದು. ಬೆಂಗಳೂರಿನಿಂದ ಬಂದ ಶ್ರೀಕಾಂತ ಈ ಶರವಣನಲ್ಲಿ ಪ್ರಚೋದಿಸುವ ಅಪಾರ ಯಶಸ್ಸಿನ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿಲ್ಲಿ.

ಓದಿನಲ್ಲಿ ದಡ್ಡನಾಗಿದ್ದ, ದೇಹದಲ್ಲಿ ಪೀಚಾಗಿದ್ದ, ಸೋಡಾ ಗ್ಲಾಸಿನ ಬುಡ್ಡಿ ಎಂಬ ಅಡ್ಡ ಹೆಸರಿನ ಶ್ರೀಕಾಂತ ಬೆಂಗಳೂರಿನಲ್ಲಿ ಶೇರು ವ್ಯವಹಾರ ನಡೆಸಿ ಎಷ್ಟು ಬೆಳೆಯುತ್ತಾನೆಂದರೆ ಶರವಣನ ಹೆಂಡತಿ ಲಾವಣ್ಯಳತ್ತ ಅವನು ಬೀರುವ ನೋಟದಲ್ಲಿರುವ ಆತ್ಮವಿಶ್ವಾಸದಲ್ಲೇ ಶರವಣನಿಗೆ ಬದುಕಿನ ಸವಾಲಿನ ಸಂದೇಶ ರವಾನೆಯಾಗಿ ಬಿಟ್ಟಿರುತ್ತದೆ! ನಗರದ ಭ್ರಮಾಧೀನ ಜನರ ನಾಡಿಯನ್ನು ಕಂಡುಕೊಂಡ ಶರವಣ ಇವರಿಗೆ ಸಮಾಧಾನದ ಭ್ರಮೆ ಬೇಕೇ ಹೊರತು ನಿಜವಾದ ಸಮಾಧಾನ ಬೇಕಿಲ್ಲ ಎಂಬುದನ್ನು ತನ್ನ ಶರವಣ ಸರ್ವಿಸಸ್‌ನ ಬಂಡವಾಳ ಮಾಡಿಕೊಂಡು ಬೆಳೆಯುತ್ತಾನೆ. ಆದರೆ ಈ ಪ್ರಕ್ರಿಯೆಯಲ್ಲಿ ಅವನೇ ತನ್ನ ನಿಜದ ಶಾಂತಿ, ನೆಮ್ಮದಿ, ಸಮಾಧಾನಗಳನ್ನು ಬಲಿಕೊಟ್ಟಿರುವುದು ಮಾತ್ರ ಅವನ ಅರಿವಿಗೆ ಬರುವುದು ತಡವಾಗಿ! ಹೆಂಡತಿ ಲಾವಣ್ಯ ಒಂದು ಮಾತೂ ಆಡದೆ ಮನೆಬಿಟ್ಟು ಹೋಗಿದ್ದರಲ್ಲಿ, ಮಗಳ ಮಹಾ ಮೌನದಲ್ಲಿ ಇದು ಶರವಣನೆದುರು ನಿಂತಿದೆ. ಆಧುನಿಕ ನಗರಗಳ ಎಲ್ಲ ಸಾಂಪ್ರದಾಯಿಕ ಭ್ರಮೆಗಳನ್ನೂ ದುಡಿಸಿಕೊಂಡ ಶರವಣ ಯಾವ ಯಶಸ್ಸಿನ ಕುದುರೆಯ ಬೆನ್ನು ಹತ್ತಿದ್ದನೋ ಅದಕ್ಕೇ ಬಂಧಿಯಾಗಿರುವುದನ್ನು ಕಥೆ ನವಿರಾಗಿ, ಸರಳವಾಗಿ ಕಟ್ಟಿಕೊಡುತ್ತದೆ. ಇಲ್ಲಿ ವಾಸ್ತು, ನಾಡಿ ಶಾಸ್ತ್ರ, ಪುರೋಹಿತರ ವ್ಯವಸ್ಥೆಯೆಲ್ಲದರ ಜೊತೆ ಯುಜಿ ಕೂಡ ಬರುತ್ತಾರೆ. ನಡುವಿನ ಫಿಲ್ಟರ್ ಇಲ್ಲದೆ ಬದುಕನ್ನು ಪಡೆಯುವ ಯೂಜಿಯವರ ಪ್ರವೇಶ ಮತ್ತು ಫಿಲ್ಟರುಗಳನ್ನೇ ತನ್ನ ಸರ್ವಿಸಸ್‌ನ ಬಂಡವಾಳ ಮಾಡಿಕೊಂಡಿರುವ ಶರವಣ ಈ ಎರಡು ಧ್ರುವಗಳ ನಡುವೆ ಅವನ ಮಗಳ ಮಹಾ ಮೌನವಿದೆ. ಕಥೆಯಲ್ಲೂ ಆ ಮೌನ ನಮ್ಮ ಒಳಗನ್ನು ಕಲಕುವಂತೆ, ಕಾಡುವಂತೆ ಹರಿಯುತ್ತಿದೆ.

ಕಾರಣ ಕಥೆ ವಿವೇಕರ ಹಳೆಯ ಶೈಲಿಗೆ ಹೆಚ್ಚು ಸಮೀಪವಿದೆ. ಮುಕ್ತಾ ಎನ್ನುವ ಒಬ್ಬ ನತದೃಷ್ಟೆಯ ಬದುಕಿನ ದುರಂತವನ್ನು ಪರೋಕ್ಷವಾಗಿಯೇ ಹೇಳುವ ಈ ಕಥೆಯಲ್ಲಿ ವಿವೇಕರ ಮೊದಮೊದಲಿನ ಕಥೆಗಳ ಪ್ರೇಮಕ್ಕನೋ, ಇತ್ತೀಚಿನ ಸುಧೀರನ ತಾಯಿ ಸರೋಜಿನಿಯೋ ಕಂಡರೆ ಅಚ್ಚರಿಯಿಲ್ಲ. ಹೊಸದಾದ ಒಂದು ಬದಿ ಕಡಲು ಕಾದಂಬರಿಯಲ್ಲಿ ಕೂಡ ಇಂಥ ಪಾತ್ರಗಳು ಎದುರಾಗುತ್ತವೆ. ಕಾರಣ ಕಥೆಯ ಆರಂಭ ಗಮನಿಸಿ:

"ಮಾರಿಕಾಂಬಾ ದೇವಸ್ಥಾನದತ್ತ ಹೋಗುವ ಕಿರಿದಾದ ರಸ್ತೆಯ ಎರಡೂ ಬದಿಗೆ ಒತ್ತೊತ್ತಾಗಿ ಮನೆಗಳು. ಕೆಲವಂತೂ ವಠಾರದ ಸಾಲುಮನೆಗಳ ಹಾಗೆ ಇಕ್ಕೆಲದ ಗೋಡೆಗಳನ್ನು ನೆರೆಯವರ ಜೊತೆ ಹಂಚಿಕೊಂಡಿದ್ದವು. ತುದಿಯಿಂದ ತುದಿಯವರೆಗೆ ಪೋಣಿಸಿಟ್ಟ ಹಾಗೆ ಇದ್ದ ಮನೆಗಳ ಮಧ್ಯದಲ್ಲಿ ಹೂದಂಡೆಯ ನಡುವಿನ ನಾರಿನ ಹಾಗೆ ರಸ್ತೆ ಹರಿದಿತ್ತು. ಈ ಒತ್ತೊತ್ತು ಮನೆಗಳ ನಡುವಿನ ಒಂದು ಖಾಲಿ ಜಾಗದಿಂದಾಗಿ, ಆ ಬದಿಯ ಮನೆಗಳ ಸಾಲು ಥಟ್ಟನೆ ಅಲ್ಲಿ ತುಂಡಾಗಿತ್ತು. ಈ ಜಾಗದ ನೇರ ಎದುರಿಗೆ, ರಸ್ತೆಯ ಈಚೆ ಕಡೆ, ನನ್ನ ಅಜ್ಜನ ಮನೆ."

ಇಲ್ಲಿ ಕಥೆ ಇರುವುದು ಈ ಅಜ್ಜನ ಮನೆಯ ಎದುರು ಮನೆಯಲ್ಲಿ. ಆದರೆ ಅದರ ಎಲ್ಲ ಅನಾವರಣ ನಡೆಯುವುದು ಈ ಅಜ್ಜನ ಮನೆಯಲ್ಲೇ. ಅಲ್ಲದೆ ಬೆಳೆದವರ ಲೋಕದ ಮೂಢನಂಬುಗೆಗಳನ್ನು, ಅದಕ್ಕೆ ತನ್ನ ತಪ್ಪೇನೂ ಇಲ್ಲದೆ ಬಲಿಯಾದವಳ ನೋವನ್ನು, ಇಲ್ಲಿ ವಿವೇಕ್ ನಮಗೆ ಒಬ್ಬ ಮುಗ್ಧ ಬಾಲಕ ಮತ್ತು ಆ ಮುಕ್ತಾಳ ಮುಖಾಮುಖಿಯ ವಿವರಗಳಲ್ಲಿ ಕಟ್ಟಿಕೊಡುತ್ತಾರೆ. ಇಲ್ಲಿ ಗಮನಿಸಬೇಕಾದ್ದು ಓದುಗನಿಗೆ ಮುಕ್ತಾ ನೇರವಾಗಿ ದಕ್ಕುವುದು ಪುಟ್ಟ ಬಾಲಕನೊಂದಿಗಿನ ಅವಳ ಪುಟ್ಟ ಪಟ್ಟಾಂಗದಿಂದಲೇ ಆಗಿದ್ದರೂ ಇಲ್ಲಿನ ನಿರೂಪಣೆ ಆ ಬಾಲಪ್ರಜ್ಞೆಯನ್ನು ಬಳಸಿಕೊಂಡಿಲ್ಲದಿರುವುದು. ಇಲ್ಲಿನ ನಿರೂಪಕ ವಯಸ್ಸಿನ ನಿರ್ಬಂಧವಿಲ್ಲದ ಒಂದು ಸ್ವಾತಂತ್ರ್ಯವನ್ನು ಉಳಿಸಿಕೊಂಡು ಏಕಕಾಲಕ್ಕೆ ವಿಭಿನ್ನ ಪಾತಳಿಗಳಲ್ಲಿ ಸಂಚರಿಸಬಲ್ಲ ಸಾಧ್ಯತೆಯನ್ನು ಬಳಸಿಕೊಳ್ಳುತ್ತಾನೆ. ಹಾಗಾಗಿ ಅದನ್ನು ಹೊಸದೇ ಆದ ನಿಚ್ಚಳ ಕಣ್ಣುಗಳಿಂದ ಕಾಣುವುದನ್ನು ಸಾಧ್ಯವಾಗಿಸುತ್ತಾನೆ.

ಈ ಮಾರಿಕಾಂಬೆ, ಅಪಶಕುನ ಎಂಬ ಅಪಖ್ಯಾತಿಗೆ ತುತ್ತಾದ ಮುಕ್ತಾ, ಒತ್ತೊತ್ತಾದ ಮನೆಗಳಲ್ಲಿ ಇದೊಂದೇ ಕಳಚಿಕೊಂಡಿರುವುದು, ನಡುವಿನ ದಾರಿ ಎಲ್ಲವನ್ನು ವಿವರಗಳಲ್ಲಿ ಕಟ್ಟಿಕೊಡುವ ಸಾಮಾನ್ಯ ಕ್ರಿಯೆಯಲ್ಲೂ ವಿವೇಕ್ ತೋರಿಸುವ ರೂಪಕಗಳು ಮನಸೆಳೆಯುತ್ತವೆ, ಯಾಕೆಂದರೆ ಅವು ಸೊಗಸಾಗಿವೆ ಎಂದಷ್ಟೇ ಅಲ್ಲ, ಅವುಗಳು ಕಥೆಯ ಆತ್ಮದೊಂದಿಗೆ ಸಂಬಂಧಿಸಿದ ಯಾವುದೋ ತಂತುಗಳನ್ನು ತಮಗೇ ಅರಿಯದ ಹಾಗೆ ಮೀಟುತ್ತಿವೆ ಎಂಬ ಕಾರಣಕ್ಕೂ. ಇಂಥ ಸಾರ್ಥಕ ಪ್ರತಿಮೆಗಳತ್ತ ವಿವೇಕ್ ಸದಾ ಜಾಗೃತ. ಇಲ್ಲಿನ ಕಥೆಗೂ ನಮ್ಮೊಳಗಿನ ಭಾವಸ್ಪಂದನದ ಉದ್ದೀಪನದಾಚೆ ಘನವಾದ ಅನ್ಯ ಉದ್ದೇಶಗಳಿಲ್ಲದಾಗ್ಯೂ ಈ ಉದ್ದೇಶ ಘನವಾಗುವುದು ಮತ್ತು ಕಥೆ ಸುದೀರ್ಘ ಕಾಲ ಮನಸ್ಸಿನಲ್ಲಿ ನಿಲ್ಲುವುದು ಇಂಥ ವಿವರಗಳಿಂದಲೇ ಎನ್ನುವುದು ಗಮನಾರ್ಹ. ಆದರೆ ವಿವರಗಳೇ ಸೃಷ್ಟಿಸುವ, ಬರಹಗಾರನಿಗೂ, ಓದುಗನಿಗೂ ಸಮಾನವಾಗಿ ದಕ್ಕಿಸುವ ಒಂದು ಮನಸ್ಥಿತಿ ಪೂರ್ತಿಯಾಗಿ ವಿವರಗಳದ್ದೇ ನಿರ್ಮಿತಿಯಲ್ಲ ಎನ್ನುವ ಎಚ್ಚರ ಬಹಳ ಮುಖ್ಯ. ವಿವೇಕರನ್ನು ಮತ್ತು ಇದೇ ಕಾರಣಕ್ಕೆ ನಮ್ಮ ಮತ್ತೋರ್ವ ಬಹುಮುಖ್ಯ ಕಥೆಗಾರ ಜಯಂತರನ್ನು ಅನುಸರಿಸಿದವರು ಇದನ್ನು ಗಮನಿಸಬೇಕಿದೆ ಅನಿಸುವಷ್ಟರ ಮಟ್ಟಿಗೆ ಇವತ್ತು ಬಾಲ್ಯದ ಊರನ್ನು, ಬದುಕನ್ನು, ಸ್ಮೃತಿಗಳನ್ನು ಕಟ್ಟಿಕೊಡುತ್ತ ಕಥೆ ಹೇಳುವ ವಿಧಾನ ಬಳಕೆಗೆ ಬಂದಿದೆ. ಇವೇ ಮಾತುಗಳು ವಿವೇಕರ ಇತ್ತೀಚಿನ ಕಥೆ ಸುಧೀರನ ತಾಯಿಗೂ ಅನ್ವಯಿಸಬಹುದಾದ್ದರಿಂದ ಇದನ್ನು ಕೊಂಚ ವಿಸ್ತರಿಸಬಹುದು.

ವಾಸ್ತವ ಬದುಕಿನಿಂದಲೇ ಪಡೆದ ಪ್ರತೀಕಗಳಿಂದ (ಕಥೆಯಿಂದಲ್ಲ) ಇವರು ಕಥೆಗಳನ್ನು ಜೀವಂತಗೊಳಿಸುವ ಪ್ರಕ್ರಿಯೆಯೇ ಅಧ್ಯಯನಕ್ಕೆ ಯೋಗ್ಯವಾದದ್ದು. ಇವರು ಪಡೆಯುವ ಪ್ರತೀಕಗಳು ಈ ಕಾರಣಕ್ಕೇ ಆಯ್ದ ಎನ್ನುವ ವರ್ಗಕ್ಕೆ ಸೇರಿದವು. ಯಾಕೆ ಅವೇ ವಿವರಗಳು, ಅವೇ ಪ್ರತೀಕಗಳು ಆಯ್ಕೆಯಾದವು ಎಂದರೆ ಕಥೆಯ ಛಂದಸ್ಸಿಗೆ ಅವೇ ಬೇಕಾದಂಥವು ಎನ್ನುವ ಇವರ ಸೂಕ್ಷ್ಮ ಅವಲೋಕನದಿಂದ. ಆದರೆ ಹೀಗೆ ಆಯ್ದ ಪ್ರತೀಕಗಳು, ವಿವರಗಳಿಂದ ಇವರು ತಮಗೆ ಬೇಕಾದ ವಿಚಾರ, ನಿಲುವು ಮಂಡಿಸಲು ಪ್ರಯತ್ನಿಸುತ್ತಾರೆ ಎಂದು ತಿಳಿಯುವುದು ತಪ್ಪಾಗುತ್ತದೆ. ಬದುಕು ತನ್ನ ಹಲವು ತಿರುವುಗಳಲ್ಲಿ, ಹಲವು ಸ್ತರದಲ್ಲಿ ನಮ್ಮೊಳಗನ್ನು ತೆರೆದು ತೋರುತ್ತ, ಪಾಠ ಕಲಿಸುತ್ತ ನಿರಂತರ ಹೊಸ ಅಚ್ಚರಿ, ಬೆರಗು, ಬೆಳಕು ತೋರುತ್ತಿರುವುದನ್ನು ಇವರು ಬಲ್ಲರು. ಆದರೆ ನಿಜ ಜೀವನದ ವಾಸ್ತವ ವಿವರಗಳಿಂದಲೇ ಘಟಿಸಿದ ಗತವನ್ನು ಪುನರ್ ನಿರ್ಮಿಸುತ್ತ ಅದಾಗಲೇ ಅದರ ಅನುಭವಿಯ ಪ್ರಜ್ಞೆಯ ಪಾತಳಿಯಲ್ಲೇ ಜೀರ್ಣವಾದ ಒಂದು ಒಳನೋಟವನ್ನು ಆ ಅನುಭವಕ್ಕೆ ಹೊರಗಾದವರಿಗೆ ಹೊಸದಾಗಿ ದಕ್ಕಿಸಿಕೊಡುವುದರಲ್ಲಿ ಇವರಿಗೆ ತೃಪ್ತಿಯಿಲ್ಲ. ತಮ್ಮ ಓದುಗ ಇಂಥದ್ದನ್ನು ತನ್ನ ಸ್ವಂತ ಅನುಭವಗಳಿಂದಲೇ ಗ್ರಹಿಸಬಲ್ಲವನು ಎಂದು ಇವರು ತಿಳಿಯುತ್ತಾರೆ. ಮಾತ್ರವಲ್ಲ ತಾವು ಕಥೆ ಹೇಳುವ ವಿಧಾನ ಅಮೂರ್ತವಾಗಿದ್ದರೂ, ವಾಚ್ಯವಾಗದೆ ಸೂಚ್ಯವಾದಷ್ಟೂ ಅದನ್ನು ಆತ ಗ್ರಹಿಸದೇ ಹೋಗಬಹುದೆಂಬ ಅನುಮಾನ ಕೂಡ ಇವರಲ್ಲಿ ಇಲ್ಲ. ಓದುಗನ ಸಾಮಥ್ರ್ಯದ ಬಗ್ಗೆ ಸಂಪೂರ್ಣ ಧೈರ್ಯ ಮತ್ತು ಗೌರವ. ಹಾಗಾಗಿ ಇವರು ಕೈ ಚಾಚುವುದು ಇನ್ನೂ ಆಚೆಯದೇನಾದರೂ ದಕ್ಕೀತೆ ಎಂದು. ಹಾಗಾಗಿ ಇವರ ಶೋಧದಲ್ಲಿ ಇವರು ಆಯ್ದುಕೊಳ್ಳುವ ಪ್ರತೀಕಗಳ ಬಗ್ಗೆ ಇವರಿಗೆ ಸ್ವಲ್ಪ ಹೆಚ್ಚೇ ವ್ಯಾಮೋಹವಿದ್ದರೂ ಅದನ್ನು ಬಿಟ್ಟುಕೊಟ್ಟು ಕಥೆ, ಕಾದಂಬರಿ ಬರೆಯುವ ರಿಸ್ಕ್ ತೆಗೆದುಕೊಂಡವರು ವಿವೇಕ್.

ಇದು ಮೇಲ್ನೋಟಕ್ಕೆ ವಿವರಗಳ ಮೋಹವಾಗಿ ಕಂಡರೂ ಇದನ್ನು ಅಷ್ಟು ಸರಳಗೊಳಿಸಬಾರದು. ಇವರ ಪಾತ್ರಗಳ ವ್ಯಕ್ತಿತ್ವವನ್ನು, ಇಡೀ ಕಥೆಯ ಆತ್ಮವನ್ನು ಗಮನದಲ್ಲಿಟ್ಟುಕೊಂಡೇ ಇದನ್ನು ನಾವು ಗಮನಿಸಬೇಕಿದೆ. ಒಬ್ಬ ಉಪ್ಪನನ್ನೇ ತೆಗೆದುಕೊಳ್ಳಿ. ಈ ಉಪ್ಪ ನನ್ನೊಳಗೂ ಇರುವ ಒಬ್ಬ ಮುಗ್ಧ, ಪ್ರಾಮಾಣಿಕ, ಅಸಹಾಯಕ ಮತ್ತು ಇವೆಲ್ಲ ಕಾರಣಗಳಿಂದಲೇ ಮೂರ್ಖ ಎನಿಸಿಕೊಂಡವನೂ ಆಗಿರುತ್ತ ನಾಗರೀಕತೆ ನನಗೆ ಇವನನ್ನು ನನ್ನಲ್ಲಿ ಯಾರೂ ಗುರುತಿಸದಂತೆ ಅಡಗಿಸಿಟ್ಟುಕೊಳ್ಳುವುದನ್ನೇ ಕಲಿಸಿರುತ್ತದೆ. ವಿವೇಕ್ ಇದನ್ನು ಗಮನಿಸಿಕೊಂಡಿರುತ್ತ ಕಥೆಯಲ್ಲಿ ನನಗೆ ಇದನ್ನು ಕಾಣಿಸಲು ಉಪ್ಪನಂಥ, ಪಬ್ಬನಂಥ, ಜನ್ನನಂಥ ಪಾತ್ರಗಳು ಮತ್ತು ಅವರನ್ನು ಸದಾ ಅವಹೇಳನ ಮಾಡುವ ಆಧುನಿಕರ ಸಮಾಜ ಎರಡನ್ನೂ ಸೃಜಿಸುತ್ತಾರೆ. ಸೃಜಿಸುತ್ತ ಒಬ್ಬ ಸರೋಜಿನಿಯ ಸಂಕಟಗಳಿಗೆ ತನ್ನ ಓದುಗನನ್ನು ಮುಖಾಮುಖಿಯಾಗಿಸುತ್ತಾರೆ ಅಥವಾ ಒಬ್ಬ ರಘುವೀರನ ತೊಳಲಾಟವನ್ನು ನನಗೆ ಮುಟ್ಟಿಸುತ್ತಾರೆ ಅಥವಾ ಒಬ್ಬ ಜನ್ನನಂಥ ಜನ್ನನ ಕನಸುಗಳ ಸರಹದ್ದನ್ನು ಆ ಕನಸುಗಳನ್ನೇ ಜನ್ನನ ವಾಸ್ತವ ಪ್ರಜ್ಞೆಯನ್ನಾಗಿಸಿ ಸಮಾಜ ಮತ್ತು ಓದುಗರ ಭ್ರಮೆಯನ್ನಾಗಿಸಿ ಕಾಣಿಸಬಲ್ಲವರಾಗುತ್ತಾರೆ.

ಈ ಅದ್ಭುತ ಕಲೆಗಾರಿಕೆ ಇಷ್ಟವಾಗಿಯೂ ಇದೊಂದು ಪ್ರಜ್ಞಾಪೂರ್ವಕ ಸಂಯೋಜನೆ ಎಂಬುದನ್ನು ನೆನಪಿಡುವುದು ಸಾಧ್ಯ. ಅದಲ್ಲ ಎನಿಸುವ ಹಾಗೆ ಸಂಯೋಜಿಸುವುದೇ ಇಲ್ಲಿ ಕಥೆಗಾರನ ಮುಂದಿರುವ ದೊಡ್ಡ ಸವಾಲು. ಯಾಕೆಂದರೆ ಇದೆಲ್ಲ ತುಂಬ ತಾಳ್ಮೆ, ಕುಸುರಿ ಕೆಲಸದ ಜೊತೆಗೇ ಸೂಕ್ಷ್ಮ ವಾಸ್ತವ ಪ್ರಜ್ಞೆಯನ್ನು, ಒಂದು ಬಗೆಯ ನಿರ್ಮಮ, ನಿರ್ಮೋಹ ಮನಸ್ಥಿತಿಯನ್ನು ಕತೆಗಾರನಿಂದ ಬಯಸುವಂಥದು. ವಿವೇಕ ಇದನ್ನು ಸಾಧಿಸಿದವರು. ಬರೇ ವಿವರಗಳಲ್ಲಿ ನಿಂತುಹೋದವರು ಅಲ್ಲೇ ಉಳಿಯುತ್ತಾರೆ ಎಂಬುದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.

ಅಂಚು ಕಥೆ ಅನೇಕ ಕಾರಣಗಳಿಗೆ ಲಂಕೇಶರ ಕೊನೆಯ ಸಂಕಲನದ ಕಥೆಗಳನ್ನು ನೆನಪಿಸುತ್ತದೆ. ರಸಿಕ ಪಿ.ಟಿ. ಮಾಸ್ತರ ಸುಬ್ಬರಾಯಪ್ಪ ಮತ್ತು ಅವನ ಚೇಷ್ಟೆಗಳು ಒಂದೇ ಒಂದು ಮುಖಾಮುಖಿಯಲ್ಲಿ ಹೇಗೆ ಅಂತರಂಗದ ಶೋಧಕ್ಕೆ ಅವನನ್ನು ಪ್ರೇರೇಪಿಸುವುದೋ ಹಾಗೆಯೇ ಅವನ ಮತ್ತು ಜೀಜಾಬಾಯಿಯ ಒಂದೇ ಒಂದು ಮುಖಾಮುಖಿ ಓದುಗರನ್ನು ಹಲವಾರು ವಿಧಗಳಲ್ಲಿ ತಟ್ಟುತ್ತದೆ, ಬಹುಕಾಲ ಕಲಕುತ್ತದೆ. ಸೂಕ್ಷ್ಮ ಸಂವೇದನೆಗಳಿರುವ ಆದರೆ ಹೊರನೋಟಕ್ಕೆ ಮಹಾರಸಿಕನಷ್ಟೇ ಆಗಿ ಕಾಣುವ ಸುಬ್ಬರಾಯ ಮತ್ತು ದುರಂತ ನಾಯಕಿಯಂಥ ಜೀಜಾಬಾಯಿ ಇಬ್ಬರ ವ್ಯಕ್ತಿತ್ವವನ್ನು ಇಲ್ಲಿ ಕಟ್ಟಿಕೊಡುವ ವಿವೇಕರ ವಿಧಾನ ವಿನೂತನವಾದದ್ದು. ಇದು ಹೆಚ್ಚು ನೇರ ಮತ್ತು ವಾಚ್ಯವಾಗಿಯೇ ಹೇಳುತ್ತ ಹೋಗುವ ವಿಧಾನವಾಗಿದ್ದೂ ಅಷ್ಟೇ ಅಲ್ಲ ಅನಿಸುವಂತೆ ಮಾಡುವ ವಿಧಾನ. ಇದನ್ನು ಲಂಕೇಶ್ ಬಳಸಿದಷ್ಟು ಚೆನ್ನಾಗಿ ಬೇರೆ ಯಾರೂ ಬಳಸಿದಂತಿಲ್ಲ. ವಿವೇಕ್ ತಮ್ಮದೇ ಧಾಟಿಯಲ್ಲಿ ಅದನ್ನು ಮಾಡಿದ್ದಾರೆ. ಕೊಂಚ ಉಡಾಫೆಯ ಲಘು ಧಾಟಿಯಲ್ಲೇ ಸುಬ್ಬರಾಯರ ವಿವರಗಳನ್ನು ವಿವೇಕ ತೊಡಗಿದರೂ ಅಂಚು ಕಥೆಯ ಕೊನೆಯ ಪಾರಾ ಇಡೀ ವಿದ್ಯಮಾನವನ್ನು ಹೊಸದೇ ಆದ ಆಯಾಮದ ಪಾತಳಿಯಲ್ಲಿಟ್ಟು ಏನೋ ಕಳಕೊಂಡ, ಅನಾಥ ಭಾವವನ್ನು ಸುಬ್ಬರಾಯ ಮತ್ತು ಓದುಗರಲ್ಲಿ ಸಮಾನವಾಗಿ ಉಳಿಸುವುದು ಜೀಜಾಬಾಯಿಯ ಬಗ್ಗೆಯೇ ಅಥವಾ ನಮ್ಮದೇ ಬದುಕಿನ ಬಗ್ಗೆಯೇ ಎನಿಸುವಂತಾಗುವುದು ವಿಚಿತ್ರ. ಸುಬ್ಬರಾಯ ಬಾಗಿಲಿನ ಚಿಲಕ ಹುಡುಕುವ ಪ್ರಸಂಗವನ್ನು ಮನಸ್ಸು ಚಿತ್ತಾಲರ ಸೆರೆ ಕಥೆಯ ಬರ್ಮಾಚಾರಿಯ ಬಾಗಿಲಿನೊಂದಿಗೆ ಜೋಡಿಸುವುದು ಕೂಡ ಕಥೆಗೆ ಹೊಸ ಆಯಾಮ ಒದಗಿಸುವುದು ಇಲ್ಲಿನ ಚೋದ್ಯ!

ಕೆಲವು ತತ್ವಗಳ ಸಲುವಾಗಿ ಕಥೆಯ ಘನಶ್ಯಾಮನ ವ್ಯಕ್ತಿತ್ವದ ಟೊಳ್ಳುತನ ಅರ್ಚನಾ ಮತ್ತು ರಾಮದಾಸನ ಮೂಲಕವೇ ತೆರೆದುಕೊಳ್ಳುತ್ತ ಹೋಗುವುದಾದರೂ ಈ ಎರಡೂ ಪಾತ್ರಗಳ ತೀರಾ ತೆಳ್ಳನೆಯ ಚಿತ್ರಣ ಕಥೆಗೆ ಬೇಕಾದ ಗುರುತ್ವ ಒದಗಿಸುವಲ್ಲಿ ಸೋತಿದೆ ಅನಿಸುತ್ತದೆ. ಒಂದು ರೀತಿಯಲ್ಲಿ ನೋಡಿದರೆ ಇಂಥ ಪರಿಣಾಮವನ್ನು ವಿವೇಕರ ಮೊದಲ ಸಂಕಲನದ ಕಥೆ ಚಿಪ್ಪುಗಳು ಚೆನ್ನಾಗಿಯೇ ಸಾಧಿಸಿತ್ತು ಅನಿಸುತ್ತದೆ.

ಸರಹದ್ದು ಕಥೆ ಮೇಲ್ನೋಟಕ್ಕೆ ಸರಳವಾದ ಕಥೆಯಂತೆ ಕಂಡರೂ ಆಳವಾದ ಒಂದು ಒಳನೋಟ ಈ ಕಥೆಯಲ್ಲಿದೆ. ಜನ್ನ ಕನಸುಗಳ ಮೂಲಕ, ಕಲ್ಪನೆಯೇ ವಾಸ್ತವ ಎಂಬಂತೆ ತನ್ನ ಸುತ್ತಲಿನ ಸಮಾಜದೊಂದಿಗೆ ವ್ಯವಹರಿಸುತ್ತಾನಾದರೂ ಅವನು ಇದನ್ನು ಪ್ರಜ್ಞಾಪೂರ್ವಕವಾಗಿಯೇ ಮಾಡುತ್ತಿರುವುದು ಅನಿಸುತ್ತದೆ. ಮತ್ತು ಹಾಗಾಗಿ ಅವನು ಸುಂದರಿಯ ಬಗ್ಗೆ ಹೇಳುವ ಕಥೆ, ಕಲ್ಪನೆಗಳಿಂದ ಏನನ್ನೋ ಮುಚ್ಚಿಡುತ್ತಿರುವುದು ಸ್ಪಷ್ಟವಾಗುವುದಾದರೂ ಅದರ ಹಿಂದೆ ಘನವಾದ ಒಂದು ಉದ್ದೇಶವಿರಬಹುದೆಂಬ ಅನುಮಾನವೂ ಬರುತ್ತದೆ. ಆದರೆ ಸುತ್ತಲಿನ ಸಮಾಜ ಅವನ ಕಲ್ಪನೆ, ಕನಸುಗಳ ಅಸಂಗತ ವಿವರಗಳಾಚೆ ಏನನ್ನೂ ಅರ್ಥಮಾಡಿಕೊಳ್ಳುವ ಸೂಕ್ಷ್ಮಜ್ಞತೆ ತೋರಿಸುವುದಿಲ್ಲ. ಇದರಿಂದ ಒಂದು ರೀತಿಯಲ್ಲಿ ಭ್ರಮಿತ ವರ್ಗ ಜನ್ನನಂಥವರದ್ದಾಗಿರದೇ ಶೇಷ ಜಗತ್ತಿನದೇ ಅನಿಸಿದರೆ ಅಚ್ಚರಿಯಿಲ್ಲ. ಕೊನೆಯಲ್ಲಿ ಬರುವ ಪೋಲೀಸರ ನಡವಳಿಕೆ ಇದನ್ನು ಸ್ಪಷ್ಟ ಕಾಣಿಸುವಂತಿದೆ. ಇಲ್ಲಿ ಯಾರು ತಮ್ಮ ಸರಹದ್ದುಗಳನ್ನು ಗುರುತಿಸಿಕೊಂಡವರು ಎಂಬುದೇ ಪ್ರಶ್ನೆಯಾಗಿ ಉಳಿಯುವುದು ಕಥೆಯ ಘನತೆ ಹೆಚ್ಚಿಸಿದೆ.

ಕಾಂತಾಸಮ್ಮಿತ ಒಂದು ವಿಲಕ್ಷಣ ದಾಂಪತ್ಯಕ್ಕೆ ಸಂಬಂಧಿಸಿದ್ದು. ಅವನತಿಯ ಕೊನೆಯ ಹಂತದಲ್ಲಿರುವ ವ್ಯಾಪಾರಸ್ತರ ಒಂದು ಸಾರಸ್ವತ ಕುಟುಂಬದ ಚಿತ್ರ ವಿವೇಕರ ಅನೇಕ ಕಥೆಗಳಲ್ಲಿ ಕಂಡುಬರುತ್ತದೆ. ಆದರೆ ಪ್ರತಿಬಾರಿಯೂ ಈ ಸ್ಥಾಯಿಯಾದ ಚಿತ್ರದಿಂದ ವಿವೇಕ್ ಕಟ್ಟಿಕೊಡುವ ಬದುಕು ಭಿನ್ನವಾಗಿಯೇ ಇರುತ್ತದೆ ಮತ್ತು ಒಟ್ಟಾರೆಯಾಗಿ ಕಥೆ ನಮ್ಮನ್ನು ಕಲಕುವುದು ಬೇರೆ ಬೇರೆ ಕಾರಣಗಳಿಗಾಗಿಯೇ ಆಗಿರುತ್ತದೆ. ಆದರೆ ಅಂಥ ಒಂದು ಸೂಕ್ಷ್ಮ ಸಂವೇದನೆಗೆ ಬೇಕಾದ ಮನಸ್ಥಿತಿಯನ್ನು ಇಂಥ ವಿವರಗಳು ಉದ್ದೀಪಿಸುತ್ತವೆ. ಇಲ್ಲಿಯೂ ಜಯವಂತ-ಸುಶೀಲೆ ಮತ್ತು ಅದಕ್ಕೆ ಸಂವಾದಿಯಾಗಿ ಸುರೇಶ-ಮಡಗಾಂವಕರ್ ಸಂಬಂಧ ಕಾಣಿಸುವ ದರ್ಶನ ಭಿನ್ನ. "ಕುಟುಂಬ ಎನ್ನುವುದು ಕಾಮ, ಪ್ರೇಮ, ತಂದೆ ತಾಯಿ, ಮಕ್ಕಳು, ಮನೆತನ, ಪರಸ್ಪರ ಅನಿವಾರ್ಯತೆ, ಅವಲಂಬನೆ ಇದೆಲ್ಲದರ ಒಂದು ಅವಿನಾಭಾವ ಒಕ್ಕೂಟವೆಂದು ಅವಳಿಗೆ ಪದೇಪದೇ ಅನಿಸುವುದು." - ಈ ಮಾತು ಒಂದು ಶಿಲ್ಪವಾಗಿ ಈ ಕಥಾನಕದಲ್ಲಿ ಬಂದಿದೆ. ಜಯವಂತ ತನ್ನ ಮೇಲೆ ಕೈಯೆತ್ತಿದ್ದನ್ನೂ ಶುಭಸೂಚಕವೆಂದು ಕಾಣುವ ಸುಶೀಲೆಯ ಮನೋಭಾವದಲ್ಲಿ, ಹೊಡೆಯುವುದರ ಮೂಲಕವೇ ಈ ತನ್ನ ವಿಲಕ್ಷಣ ಸಂಬಂಧದ ಬಗ್ಗೆ ಅಡಗಿಸಿಟ್ಟ ತನ್ನ ಭಾವನೆಯನ್ನೆಲ್ಲ ಮೊತ್ತಮೊದಲ ಬಾರಿಗೆಂಬಂತೆ ಪ್ರಕಟಪಡಿಸಿದ ಜಯವಂತನ ವರ್ತನೆಯಲ್ಲಿ ತೆರೆದುಕೊಳ್ಳುವ ಸತ್ಯ ಬದುಕು ತನ್ನ ನಿಗೂಢ ಮಜಲುಗಳಲ್ಲಿ ಅಡಗಿಸಿಟ್ಟುಕೊಳ್ಳುವ ಗುಟ್ಟುಗಳ ಬಗ್ಗೆ ಆಘಾತ ಉಂಟುಮಾಡುವಂಥದು.

ಮಂಡಲ ಕಥೆ ಒಂದು ಹಂತದ ವರೆಗೆ ತಂತ್ರವನ್ನೇ ಆಧರಿಸಿಕೊಂಡಿರುವ ಕಥೆಯಾದರೂ ಮುಂದೆ ಮಾನವೀಯ ನೆಲೆಗಟ್ಟಿನಲ್ಲಿ ತನ್ನ ಬಾಹುಗಳನ್ನು ಚಾಚುತ್ತದೆ. ಈ ಕಥೆ ತನ್ನ ಬಸಿರಲ್ಲಿ ಉಳಿಸಿಕೊಳ್ಳುವ ಗುಟ್ಟುಗಳಲ್ಲಿ ಉಳಿದೇ ಹೋಗುವ ಸಾಧ್ಯತೆಗಳ ಒಂದು ಜಗತ್ತು ಕಥೆಗೆ ಒಂದಕ್ಕಿಂತ ಹೆಚ್ಚು ಆಯಾಮಗಳ ನೋಟವನ್ನು ಸಾಧ್ಯವಾಗಿಸುತ್ತ ಕಥೆಯನ್ನು ಅನೂಹ್ಯತೆಯೊಂದಿಗೆ ಐಕ್ಯಗೊಳಿಸಿದೆ. ಚಂದ್ರಿಕಾಳ ಬಸುರಿಗೆ ಕಾರಣರಾದವರು ಯಾರು ಎಂಬುದು ಅವಳ ಭವಿಷ್ಯದ ದೃಷ್ಟಿಯಿಂದ ಮುಖ್ಯವಾಗಿ ಕಂಡರೂ ಆ ಗುಟ್ಟನ್ನು ಅವಳು ಬಿಟ್ಟುಕೊಡದಿರುವುದು ಅವಳಿಗೇ ಅದು ಯಾರೆಂದು ತಿಳಿಯದೇ ಇರುವುದರಿಂದಲೂ ಇರಬಹುದು ಎನ್ನುವುದು ಆ ಶೋಧವನ್ನು ಕೈಬಿಟ್ಟು ಈ ವಿದ್ಯಮಾನದ ಇತರೆ ಸಾಧಕ ಬಾಧಕಗಳತ್ತ ನೋಡುವಂತೆ ಮಾಡುತ್ತದೆ ಎಂಬುದೇನೋ ನಿಜವೇ. ಆದರೆ, ಮಹಿಮಯ್ಯನ ಅಧಿಕೃತ ಹೆಂಡತಿಯಲ್ಲಿ ಹುಟ್ಟಿದ ಮಗನೇ ಆ ವ್ಯಕ್ತಿಯಾಗಿದ್ದರೆ ಎಂಬ ಒಂದು ಊಹೆ ಬಿಟ್ಟುಕೊಡುವ ಅರ್ಥಗಳು ಬೇರೆಯೇ ಆಗಿರುತ್ತ ಮಹಿಮಯ್ಯ ಕಥೆಯಲ್ಲಿ ಕೊನೆಗೂ ಅಂತ್ಯವಿಲ್ಲದ ಒಂದು ತೊಳಲಾಟಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯಕ್ಕೆ ತಲುಪುವುದರೊಂದಿಗೆ ಅವನು ನಿಜವಾದ ಅಭೇದ್ಯ ಮಂಡಲವೊಂದರ ಎದುರು ನಿಂತಿರುತ್ತಾನೆ.

ಥೂ ಕೃಷ್ಣ ಒಂದು ಹೊಸ ಬಗೆಯ ಪ್ರಯೋಗಶೀಲತೆಯನ್ನು ಕಾಣಿಸುವ ಹಂಬಲ ಹೊಂದಿದೆ. ಈ ಕಥೆಯ ನಾಲ್ಕು ಭಾಗಗಳಲ್ಲಿ ಪ್ರತಿಭಾಗದ ಒಂದಲ್ಲಾ ಒಂದು ಪಾತ್ರದಲ್ಲಿ ಅದರ ಹಿಂದಿನ ಭಾಗದ ಇನ್ಯಾವುದೋ ಒಂದು ಪಾತ್ರದ ಹೊಳಹುಗಳು ಕಾಣಿಸಿದರೂ ಅದು ಇದೇ ಅಲ್ಲ ಅನಿಸುವಂತೆ ಕಥಾನಕ ಮುಂದುವರಿಯುತ್ತದೆ. ಇದು ಒಂದು ಬಗೆಯ ಗೊಂದಲಕ್ಕೆ ನಮ್ಮನ್ನು ತಳ್ಳುವಾಗಲೂ ಒಂದು ನಿರ್ದಿಷ್ಟ ವಿಧಾನದಲ್ಲಿ ಜೋಡಿಸಿಟ್ಟ ಗಾಜಿನ ಪಟ್ಟಕದಲ್ಲಿನ ಬಿಂಬ ಪ್ರತಿಬಿಂಬಗಳೆಲ್ಲ ಸೇರಿ ನಿರ್ಮಿಸುವ ವಿಚಿತ್ರ ಚಿತ್ರದಲ್ಲೂ ಒಬ್ಬ ನುರಿತ ವಿನ್ಯಾಸಕಾರನ ಕೈವಾಡವಿರುವಂತೆ ಕಾಣಿಸುವ ಹಾಗೆಯೇ ಎಲ್ಲ ಗೊಂದಲಗಳನ್ನು ಮೀರಿ ಓದುಗನ ಮನಸ್ಸು ಒಂದು ವಿನ್ಯಾಸಕ್ಕೆ, ಜೋಡಣೆಗೆ ತುಡಿಯುತ್ತದೆ.

ಇಲ್ಲಿ ನಮಗೆ ಮತ್ತೆ ವಿವೇಕರ ನಿಲುಕು, ಇನ್ನೂ ಒಂದು, ಮತ್ತೊಬ್ಬನ ಸಂಸಾರ ಕಥೆ/ಕಾದಂಬರಿಗಳಲ್ಲಿ ಕಂಡುಬರುವ ಸಂಬಂಧವಿಲ್ಲದ ವ್ಯಕ್ತಿಗಳ ಮತ್ತು ಘಟನೆಗಳ ನಡುವೆಯೂ ಯಾವುದೋ ತಂತುವೊಂದು ಸುಪ್ತವಾಗಿ ಗುಪ್ತವಾಗಿ ಕೆಲಸ ಮಾಡುತ್ತಿರಬಹುದಾದ ಅನೂಹ್ಯ ಸಾಧ್ಯತೆಯೊಂದರ ಕಡೆಗೆ ಮುಖಮಾಡಿರುವುದರ ಮುಖಾಮುಖಿಯಾಗುತ್ತದೆ. ಇಂಥ ಒಂದು ಅನೂಹ್ಯ ಸಾಧ್ಯತೆಯನ್ನು ಬಹುಷಃ ಕನ್ನಡದಲ್ಲಿ ಮತ್ತೆ ಮತ್ತೆ ದುಡಿಸಿಕೊಂಡ ಇನ್ನೋರ್ವ ಕಥೆಗಾರ ವಿವೇಕರ ಮೆಚ್ಚಿನ ಯಶವಂತ ಚಿತ್ತಾಲರೇ ಅನಿಸುತ್ತದೆ.

ಲೇಖನ ವರ್ಗ (Category):