ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರ

To prevent automated spam submissions leave this field empty.

ಉದಯವಾಣಿ

(ಇ-ಲೋಕ-48)(13/11/2007)

 

ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರ ಮಾಡಬಾರದೇಕೆ?ಜನರಿಗೆ ಮಿಂಚಂಚೆ ಕಳುಹಿಸಿ,ಮತ ನೀಡಲು ವಿನಂತಿಸುವುದುಪ್ರಚಾರದ ಒಂದು ವೈಖರಿ.ಅಭ್ಯರ್ಥಿಯ ಸಾಧನೆ,ಆತನ ವೈಯುಕ್ತಿಕ ವಿವರಗಳನ್ನು ನೀಡುವ ಅಂತರ್ಜಾಲ ತಾಣವನ್ನು ಆರಂಭಿಸಿ,ಜನರ ಜತೆ ಸ್ಪಂದಿಸುವುದು ಇನ್ನೊಂದು ವಿಧಾನ. ಆದರೆ ಸದ್ಯ ಅಭ್ಯರ್ಥಿಯ ಬಗ್ಗೆ ಅಪಪ್ರಚಾರ ಮಾಡಲು ಅಂತರ್ಜಾಲ ಬಳಕೆಯಾಗುತ್ತಿರುವುದೇ ಹೆಚ್ಚು!ಅಮೆರಿಕಾದಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.ಆ ಮಟ್ಟಿಗಂತೂ ಈ ಮಾತು ನಿಜ.ಹಿಲರಿ ಕ್ಲಿಂಟನ್ ಡೆಮೋಕ್ರಾಟ್ ಪಕ್ಷದ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.ಅವರ ವಿರುದ್ಧ ಅಪಪ್ರಚಾರ ಮಾಡುವ StopHerNow.com AgainstHillary.com ಅಂತಹ ತಾಣಗಳು ಜನರ ಗಮನ ಸೆಳೆದಿವೆ. ಅಪಪ್ರಚಾರಕ್ಕೆ ಚಿತ್ರ,ವಿಡಿಯೋ ಮತ್ತು ಆಡಿಯೋ ತುಣುಕುಗಳನ್ನು ಬಳಸಲಾಗುತ್ತಿದೆ.ಯುಟ್ಯೂಬ್ ಅಂತಹ ಜನಪ್ರಿಯ ವಿಡಿಯೋ ತುಣುಕುಗಳ ತಾಣದಲ್ಲಿ ಕ್ಲಿಂಟನ್ ವಿರುದ್ಧ ಸಾಕಷ್ಟು ಅಪಪ್ರಚಾರ ಸಾಮಗ್ರಿ ಇದೆ.ಫೇಸ್‍ಬುಕ್ ಅಂತಹ ಸಾಮಾಜಿಕ ಸಂಬಂಧ ತಾಣದಲ್ಲಿ ಕ್ಲಿಂಟನ ಅವರ ವ್ಯಕ್ತಿಚಿತ್ರ ಲಭ್ಯವಿದ್ದು ಸುಮಾರು ಐವತ್ತೈದು ಸಾವಿರ ಜನರು ಆ ಪುಟಕ್ಕೆ ಸದಸ್ಯರಾಗಿ ನೋಂದಾಯಿಸಿ ಕೊಂಡಿದ್ದಾರೆ.

ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯ ಅಂತರ್ಜಾಲದಲ್ಲೂ ಭರಾಟೆಯಿಂದ ನಡೆದಿದೆ.bjpguj.org, narendramodi.com, fansofnarendramodi.com ಇಂತಹ ತಾಣಗಳು ಚುನಾವಣಾಸಕ್ತರನ್ನು ಸೆಳೆಯುತ್ತಿವೆ.ನರೇಂದ್ರ ಮೋದಿಯವರ ಭಾಷಣಗಳ ತುಣುಕುಗಳು ಯುಟ್ಯೂಬ್ ತಾಣದಲ್ಲಿ ಬಹಳಷ್ಟು ಸೇರ್ಪಡೆಯಾಗಿವೆ.ಖ್ಯಾತ ಕೈಗಾರಿಕೋದ್ಯಮಿಗಳು ಮೋದಿಯವರ ಪ್ರಶಂಸೆ ಮಾಡುವ ತುಣುಕುಗಳೂ ಇಲ್ಲಿ ಸಿಗುತ್ತವೆ. ನೂರು ಡಾಲರು ಮುಟ್ಟಿದ ಕಚ್ಚಾ ತೈಲ:ಸಣ್ಣ ಕಾರು ಯಾಕೆ ಬೇಡ?

ಕಚ್ಚಾ ತೈಲದ ಬೆಲೆ ನೂರು ಡಾಲರು ಮುಟ್ಟುವುದರಲ್ಲಿದ್ದರೂ ಅಮೆರಿಕನ್ನರು ಸಣ್ಣ ಕಾರುಗಳೆಂದರೆ ಮೂಗು ಮುರಿಯುತ್ತಾರಂತೆ.ಹಡಗಿನಂತೆ ವಿಶಾಲವಾದ,ಶರವೇಗದಲ್ಲಿ ಓಡುವ,ಪೆಟ್ರೋಲ್‍ನ್ನು ಬಕಾಸುರನಂತೆ ಕುಡಿವ ದೊಡ್ದ ಕಾರುಗಳು ಅಲ್ಲಿನ ಹೆದ್ದಾರಿಗಳಲ್ಲಿ ಎಲ್ಲೆಲ್ಲೂ ಕಾಣಿಸುತ್ತವೆ.ಈಗ ಮರ್ಸಿಡಿಸ್ ಕಂಪೆನಿ ನಿರ್ಮಿತ ಸಣ್ಣ ಸ್ಮಾರ್ಟ್ ಕಾರು ಅಮೆರಿಕದಲ್ಲಿ ಮಾರಾಟವಾಗಲಿದೆ.ಗ್ಯಾಲನ್‍ಗೆ ನಲ್ವತ್ತು ಕಿಲೋಮೀಟರ್ ಓಡುವ ಈ ಕಾರು,ಸಾವಿರದ ಎಂಟು ನೂರು ಪೌಂಡು ತೂಕವಿದೆ.ಉದ್ದವೂ ಒಂಭತ್ತು ಅಡಿಗಳಷ್ಟೆ.ಅಮೆರಿಕನ್ನರು ಸಣ್ಣ ಕಾರು ಸುರಕ್ಷಿತವಲ್ಲ ಎನ್ನುವ ಭಾವನೆ ಹೊಂದಿದ್ದಾರೆ.ಅಪಘಾತವಾದಾಗ ಸಣ್ಣ ಕಾರು ಅದರೊಳಗಿರುವವರನ್ನು ರಕ್ಷಿಸಲಾರದು ಎನ್ನುವುದು ಸುಳ್ಳಲ್ಲ.ತೂಕ ಕಡಿಮೆಯಿದ್ದರೆ ಅಪಘಾತದ ಸಂದರ್ಭ ಅವು ನಜ್ಜುಗುಜ್ಜಾಗುತ್ತವೆ.ಕಾರಿನ ವಿಮೆ ಮಾಡುವ ಕಂಪೆನಿಗಳೂ ಸಣ್ಣ ಕಾರಿನ ಬಗ್ಗೆ ಒಲವು ಹೊಂದಿಲ್ಲ.ವಿಮೆ ಕಂಪೆನಿಗಳು ಅಪಘಾತದ ಹಾನಿ ತುಂಬಿ ಕೊಡುವುದರ ಜತೆಗೆ, ಪ್ರಯಾಣಿಕರ ಜೀವ ಹಾನಿ ಆದರೆ ಪರಿಹಾರ ಕೊಡಬೇಕಲ್ಲ?ಜಗತ್ತಿನ ಮೂವತ್ತಾರು ದೇಶಗಳಲ್ಲಿ ಮುಕ್ಕಾಲು ದಶಲಕ್ಷದಷ್ಟು ಖರ್ಚಾಗಿರುವ ಈ ಸ್ಮಾರ್ಟ್ ಕಾರು ಅಮೆರಿಕಕ್ಕೆ ತಡವಾಗಿ ಪ್ರವೇಶಿಸುತ್ತಿದೆ.ಈಗಲಾದರೂ ಅಮೆರಿಕನ್ನರು ಅದನ್ನು ಇಷ್ಟ ಪಡುತ್ತಾರೋ ಎನ್ನುವುದು ಕುತೂಹಲದ ವಿಷಯ.

ಒಂದೂವರೆ ಲಕ್ಷ ಅಂತರ್ಜಾಲ ತಾಣಗಳು ಅಂತರ್ಧಾನ!

ನೇವಿಸ್ಟಾರ್ ಎಂಬ ಕಂಪೆನಿ ಅಲಬಾಂಜಾ ಎಂಬ ಕಂಪೆನಿಯನ್ನು ಕೊಂಡುಕೊಂಡಿತು.ಅಲಬಾಂಜಾ ಕಂಪೆನಿ ಅಂತರ್ಜಾಲದ ತಾಣಗಳನ್ನು ನಿರ್ವಹಿಸುತ್ತಿದ್ದ ಕಂಪೆನಿ.ಹಳೆ ಕಂಪೆನಿ ನಿರ್ವಹಿಸುತ್ತಿದ್ದ ವೆಬ್ ಸರ್ವರ್‌ಗಳನ್ನು ಹೊಸ ಜಾಗದಲ್ಲಿದ್ದ ತನ್ನ ಸರ್ವರ್‌ಗಳಿಗೆ ವರ್ಗಾಯಿಸಲು ನೇವಿಸ್ಟಾರ್ ನಿರ್ಧರಿಸಿತು.ಆದರೆ ಕೆಲಸ ಯೋಚಿಸಿದಂತೆ ನಡೆಯಲಿಲ್ಲ.ಕೆಲವು ಸೈಟುಗಳನ್ನು ಐಪಿವಿಳಾಸ(ಸಂಖ್ಯೆ) ನೀಡಿ ಜಾಲಾಡಲು ಸಾಧ್ಯವಾಯಿತು. ಆದರೆ ಜನರು ತಾಣಗಳನ್ನು ಯು ಆರ್ ಎಲ್(ಅಕ್ಷರದಲ್ಲಿರುವ ವಿಳಾಸ) ನೀಡಿ ಸಂಪರ್ಕಿಸುವುದು ಕ್ರಮ. ಈ ವಿಧಾನದಲ್ಲಿ ತಾಣಗಳಿಗೆ ಸಂಪರ್ಕ ಬರುತ್ತಿರಲಿಲ್ಲ.ಲಕ್ಷಾಂತರ ತಾಣಗಳ ಲಕ್ಷಾಂತರ ಗ್ರಾಹಕರು ಒಂದೇ ಸವನೆ ತಾಣಗಳನ್ನು ಸಂಪರ್ಕಿಸಲು ಪ್ರಯತ್ನಿಸುವ ಹತಾಶ ಪ್ರಯತ್ನಕಿಳಿದುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಯಿತು.ನೇವಿಸ್ಟಾರ್ ಇನ್ನೂ ಸಮಸ್ಯೆಯನ್ನು ಬಗೆ ಹರಿಸಲು ಸಫಲವಾಗಿಲ್ಲ.ಮೂರು ನಾಲ್ಕು ದಿನಗಳ ಕಾಲ ತಾಣಗಳು ಜನರಿಗೆ ಲಭ್ಯವಿಲ್ಲದ್ದರಿಂದ ತಾಣಗಳ ನಿರ್ವಾಹಕರೂ ಉರಿದುಬಿದ್ದಿದ್ದಾರೆ.ವೃತ್ತಿಪರವಾಗಿ ಕೆಲಸ ನಿರ್ವಹಿಸದ ನೇವಿಸ್ಟಾರ್ ಕಂಪೆನಿ ಬಗ್ಗೆ ಅಸಮಾಧಾನ ಮುಗಿಲು ಮುಟ್ಟಿದೆ.

ತಿಮಿಂಗಿಲಗಳ ಭಾಷೆ ಕಲಿಯಲು ವಿಜ್ಞಾನಿಗಳ ಪ್ರಯತ್ನ

 

 ಆಸ್ಟ್ರ್‍ಏಲಿಯಾದ ವಿಜ್ಞಾನಿಗಳು ತಿಮಿಂಗಿಲಗಳ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದಾರೆ.ಅದಕ್ಕೆ ಅವರು ಸುಲಭದ ಮಾರ್ಗವನ್ನು ಅನುಸರಿದ್ದಾರೆ.ತಿಮಿಂಗಿಲಗಳು ಹೊರಡಿಸುವ ಶಬ್ದಗಳನ್ನು ಮೊದಲಾಗಿ ಮುದ್ರಿಸಿಕೊಂಡದ್ದು ಸಂಶೋಧಕರು ಮಾಡಿದ ಮೊದಲ ಕೆಲಸ.ನಂತರ ತಿಮಿಂಗಿಲಗಳಿದ್ದೆಡೆ ಈ ಮುದ್ರಿತ ಶಬ್ದಗಳನ್ನು ನುಡಿಸಿ,ಅವುಗಳ ಪ್ರತಿಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು,ಅವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ತಿಮಿಂಗಿಲಗಳು ಈ ಶಬ್ದಗಳ ಮೂಲಕ ಸಂವಹನವನ್ನು ಸಾಧಿಸುವ ಬಗೆ ವಿಜ್ಞಾನಿಗಳಿಗೆ ಅರ್ಥವಾಗ ಹತ್ತಿದೆ.ಪ್ರಣಯಿ ತಿಮಿಂಗಿಲಗಳು ಹೊರಡಿಸುವ ಶಬ್ದಕ್ಕೂ ತಾಯಿ ಮತ್ತು ಮಕ್ಕಳ ನಡುವಿನ ಶಬ್ದ ವಿನಿಮಯ ಬೇರೆ ಬೇರೆಯಾಗಿರುವುದು ವಿಜ್ಞಾನಿಗಳಿಗೆ ಸ್ಪಷ್ಟವಾಗಿದೆ.

ಗೂಗಲ್ ಮೊಬೈಲ್ ತಂತ್ರಾಂಶ

 ಗೂಗಲ್ ಮೊಬೈಲ್ ಸಾಧನವನ್ನು ಹೊರತರಲಿದೆ ಎಂಬ ವದಂತಿ ಇದೆ.ಅದರ ಹ್ಯಾಂಡ್‍ಸೆಟ್ ಉಚಿತವಾಗಿ ಸಿಗಲಿದೆ ಎಂಬ ಗುಸುಗುಸು ಬೇರೆ ಇದೆ.ಆದರೆ ಈ ಸುದ್ದಿ ಗೂಗಲ್ ಅಭಿವೃದ್ಧಿ ಪಡಿಸಿರುವ ಮೊಬೈಲ್ ತಂತ್ರಾಂಶದ ಬಗ್ಗೆ. ಈ ತಂತ್ರಾಂಶವನು ಮೊಬೈಲಿನಲ್ಲಿ ಬಳಸಿದರೆ ಜನರಿಗೆ ಕೆಲವು ಪ್ರಯೋಜನಗಳು ಸಿಗಲಿವೆ.ಮೊದಲನೆಯದಾಗಿ ಈ ತಂತ್ರಾಂಶವಿದ್ದ ಮೊಬೈಲಿನಲ್ಲಿ ಇತರ ತಂತ್ರಾಂಶಗಳನ್ನು ಸ್ಥಾಪಿಸಲು ಸಾಧ್ಯ.ಮೊಬೈಲ್ ಸಾಧನದಲ್ಲಿ ಇರುವ ತೊಂದರೆಗಳನ್ನು ಸರಿ ಪಡಿಸುವ ತಂತ್ರಾಂಶಗಳನ್ನು ಸೇರಿಸಲೂ ಇದು ಅವಕಾಶ ನೀಡುತ್ತದೆ.ಹೊಸ ಸೌಲಭ್ಯ ನೀಡುವ ತಂತ್ರಾಂಶಗಳನ್ನು ಸೇರಿಸಲೂ ಅವಕಾಶ ಸಿಗುತ್ತದೆ.ಅಂತರ್ಜಾಲ ತಾಣಗಳನ್ನು ಮೊಬೈಲಿನಲ್ಲಿ ನೋಡಲು ಸಾಧ್ಯವಾಗುವುದು ತಂತ್ರಾಂಶ ನೀಡುವ ಅತ್ಯಂತ ದೊಡ್ದ ವರದಾನ.ತಂತ್ರಾಂಶದ ಹೆಸರು ಆಂಡ್ರಿಯಾಡ್ ಎಂದಾಗಿದೆ. *ಅಶೋಕ್‍ಕುಮಾರ್

ಲೇಖನ ವರ್ಗ (Category):