ಸೋಡಾಗೋಲಿ

To prevent automated spam submissions leave this field empty.

ಈ ತೆಲುಗು ಕಥೆಯನ್ನು ಶ್ರೀರಮಣ ಅವರ 'ಮಿಥುನ' ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ೧೯೫೨ರಲ್ಲಿ ಆಂಧ್ರದ ತೆನಾಲಿಯಲ್ಲಿ ಜನಿಸಿದ ಶ್ರೀರಮಣ ಅವರು ಆಂಧ್ರಜ್ಯೋತಿ ತೆಲುಗು ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅಂಕಣಕಾರರಾಗಿ ಜನಪ್ರಿಯರಾಗಿದ್ದಾರೆ. ಅವರ ಹತ್ತಕ್ಕೂ ಹೆಚ್ಚು ಅಂಕಣ ಸಂಗ್ರಹಗಳು ಪುಸ್ತಕರೂಪ ತಳೆದಿವೆ. ತೆಲುಗು ಸಿನಿಮಾ ಸಾಹಿತ್ಯದಲ್ಲೂ ಅರು ಹೆಸರು ಮಾಡಿದ್ದಾರೆ. 'ಮಿಥುನ' ಅವರ ಏಕೈಕ ಕಥಾಸಂಕಲನ.

 ಮಿಥುನ ಕಥಾಸಂಕಲನವನ್ನು ವಸುಧೇಂದ್ರ ಅವರು ಬಹುಸಮರ್ಥವಾಗಿ ಕನ್ನಡಕ್ಕೆ ಭಾಷಾಂತರಿಸಿ ತಮ್ಮದೇ ಆದ 'ಛಂದ ಪುಸ್ತಕ' ಮೂಲಕ ಹೊರತಂದಿದ್ದಾರೆ. 'ಮನೀಷೆ' ಅವರ ಅತ್ಯುತ್ತಮ ಸೃಜನಶೀಲ ಕಥಾಸಂಕಲನ. ಇದಲ್ಲದೆ 'ಯುಗಾದಿ' ಎಂಬ ಮತ್ತೊಂದು ಕಥಾಸಂಕಲನ, ಕೋತಿಗಳು ಸಾರ್ ಕೋತಿಗಳು (ಪ್ರಬಂಧ) ಮತ್ತು ಇ-ಕಾಮರ್ಸ್ (ವೈಜ್ಞಾನಿಕ) ಎಂಬ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ೧೯೬೯ರಲ್ಲಿ ಬಳ್ಳಾರಿಯ ಸಂಡೂರಿನಲ್ಲಿ ಜನಿಸಿದ ವಸುಧೇಂದ್ರ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎಂ.ಇ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಜೆನಿಸಿಸ್ ಸಾಫ್ಟ್ ವೇರ್ ನಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಸೋಡಾಗೋಲಿ

ಮಟಮಟ ಮಧ್ಯಾಹ್ನದ ಬೆಂಕಿ ಬಿಸಿಲು ಅವನ ಪಾಲಿಗೆ ಒಳ್ಳೆ ಬೆಳದಿಂಗಳಿದ್ದಂತೆ! ಲೊಳಗಾಬಳಗಾ ಖಾಕಿ ನಿಕ್ಕರು, ತೋಳಿಲ್ಲದ ಬನಿಯನ್ನು, ಗುಂಗುರು ಕೂದಲು, ವಿಶಾಲವಾದ ನಗುಮುಖದಿಂದ ತಗ್ಗುದಿನ್ನೆಯ ರಸ್ತೆಯಲ್ಲಿ ಅತಿ ಜಾಗ್ರತೆಯಿಂದ ಸೋಡಾ ಬಂಡಿಯನ್ನು ತಳ್ಳುತ್ತಾ ಬರುತ್ತಿದ್ದ. ಬಂಡಿಯ ಒಂದು ಗೂಟಕ್ಕೆ ಅಕ್ಕಿಚೀಲ, ಮತ್ತೊಂದು ಗೂಟಕ್ಕೆ ನೀರಿನ ಬಕೇಟು ಸಿಕ್ಕಿಸಿಕೊಂಡು, ಅಡ್ಡಪಟ್ಟಿಯ ಮಧ್ಯದಲ್ಲಿ ಒಂದು ಡಜನು ಸೋಡಾ ಬಾಟಲಿಗಳನ್ನಿಟ್ಟುಕೊಂಡು ನಾಜೂಕಿನಿಂದ ಬಂಡಿ ನಡೆಸುತ್ತಿದ್ದ. ಓಣಿಯ ಮೊದಲ ಗಿರಾಕಿ ಸಿಗುತ್ತಲೇ ಸೈಕಲ್ ಟ್ಯೂಬಿನಿಂದ ಮಾಡಿದ ಓಪನರ್ ನಿಂದ ಕೀಕ್..ಕೀ..ಕೀಕ್.. ಎಂದು ಐದಾರು ಪಕ್ಷಿಕೂಗಿನೊಂದಿಗೆ ಸೋಡಾ ಬಾಟಲಿ ಓಪನ್ ಮಾಡುತ್ತಿದ್ದ. ಆ ಸದ್ದಿಗೇ ಓಣಿಯ ಎಲ್ಲರಿಗೂ ದಾಹವಾಗೋದು. ಅನಾವಶ್ಯಕವಾಗಿ ಕಿರುಚಿ ಬಾಯಿ ಒಣಗಿಸಿಕೊಳ್ಳುವ ಗೋಜಿಲ್ಲದೆ ಒಂದು ಡಜನು ಸೋಡಾ ಖಾಲಿ ಮಾಡಿಕೊಂಡು ಮುಂದಿನ ಓಣಿಗೆ ಹೋಗುತ್ತಿದ್ದ. ಆತನ ನಿಜವಾದ ಹೆಸರೇನೋ ಗೊತ್ತಿಲ್ಲವಾದರೂ ಎಲ್ಲರೂ ಅವನನ್ನು 'ಸೋಡಾನಾಯ್ಡು' ಎಂದೇ ಕರೆಯುತ್ತಿದ್ದರು.

ಅರಳಿಕಟ್ಟೆಯ ಬಳಿ, ಶಿವಾಲಯಕ್ಕೆ ಹತ್ತಿರದಲ್ಲಿ ಬಂಡಿ ನಿಲ್ಲಿಸುತ್ತಿದ್ದ. ಅಲ್ಲಿ ಇಸ್ಪೇಟು ಮಂದಿ ಎಲೆ ಕಲಸುತ್ತಾ ಬೆವರಿಳಿಸುತ್ತಿದ್ದರೆ 'ಒಂದು ಸೋಡಾ ಕುಡಿಯಿರಿ, ಆಟ ಕಲ್ತು ಬರ್ತದೆ' ಅಂತ ಗಿಲೀಟಿನ ಮಾತಾಡಿ ಸೋಡಾ ಒಡೆಯುತ್ತಿದ್ದ. ಆಡೋ ನಾಲ್ಕು ಜನರೊಂದಿಗೆ ನೋಡೋ ಹತ್ತು ಜನ ಸೇರಿ ಕುಡಿದರೆ ಒಂದಿಪ್ಪತ್ತು ಸೋಡಾಗಳು ಖರ್ಚಾಗೋವು. ಖಾಲಿ ಸೀಸೆಗಳನ್ನು ಒಂದು ಕಡೆ ಮಟ್ಟಸವಾಗಿ ಜೋಡಿಸಿಕೊಂಡು, ತುಂಬಿದ ಸೀಸೆಯ ಮೇಲೆ ಹೊದಿಸಿದ ಗೋಣಿತಟ್ಟಿಗೆ ನೀರು ಚಿಮುಕಿಸಿಕೊಂಡು ಬಂಡಿಯನ್ನು ಇನ್ನೊಂದು ದಿಕ್ಕಿಗೆ ನಡೆಸುತ್ತಿದ್ದ.ನಾಯ್ಡುಗೆ ಮಾನಮರ್ಯಾದೆಗಳೆಲ್ಲ ಚೆನ್ನಾಗಿ ಗೊತ್ತಿತ್ತು. ಊರಲ್ಲಿ ಮದುವೆ ಸಂಭ್ರಮ ನಡೆದರೆ ಚಪ್ಪರದ ನೆರಳಿನಲ್ಲಿ ಬಂಡಿ ನಿಲ್ಲಿಸಿ, ಕೇಳುವುದಕ್ಕೆ ಮುಂಚೆಯೇ ಬೀಗರಿಗೆ ಸೋಡಾ ಕೊಡುತ್ತಿದ್ದ. ಒಡೆಯುವ ಮೊದಲು ಸೋಡಾ ಬಾಟಲಿಯ ಮೂತಿಯನ್ನು ನೀರಿನಲ್ಲಿ ಅದ್ದಿ ತೊಳೆದು, ಗಲಗಲ ಅಲ್ಲಾಡಿಸಿ 'ಒಂದು ಧೂಳಿನ ಕಣ ತೋರಿಸಿರಿ ನೋಡಾಣ' ಅಂತ ಸವಾಲು ಹಾಕುವಂತೆ ಗುಳ್ಳೆಗಳು ತೇಲುತ್ತಿರುವ ಸೀಸೆಯನ್ನು ತೋರಿಸಿ, ನಾಟ್ಯಭಂಗಿಯಲ್ಲಿ ವಯ್ಯಾರವಾಗಿ ಅದುಮಿ ಹಿಡಿದು ಸೋಡಾ ಒಡೆದು ಮರ್ಯಾದೆಯಿಂದ ಕೈಗೆ ಕೊಡುತ್ತಿದ್ದ. ಅವರ ಹತ್ತಿರ ಹಣ ತೆಗೆದುಕೊಳ್ಳುತ್ತಿರಲಿಲ್ಲ.'...ಅಬ್ಬಬ್ಬಾ ಎಂಥಾ ಮಾತು... ಮನೆ ಮರ್ಯಾದೀನ್ನ ಮೂರುಕಾಸಿಗೆ ತೂರೋ ಹಂಗೆ ಬೀಗರ ಹತ್ತಿರ ದುಡ್ಡು ತೊಗೊಂಡೆ ಅಂತ ಗೊತ್ತಾದ್ರೆ ಯಜಮಾನರು ನನ್ನ ಸಾಯಿಸಿಬಿಡ್ತಾರೆ ... ನಾವು ಆಮೇಲಕ್ಕೆ ನೋಡ್ಕೊಳ್ತೀವಿ ಬಿಡ್ರಿ' ಅಂತ ಭರವಸೆಯಿಂದ ಹೇಳಿ ಬಿಡುತ್ತಿದ್ದ. ಎಲ್ಲಾ ಸೇರಿ ಒಂದು ನಾಲ್ಕು ರೂಪಾಯಿ ಕೂಡಾ ಆಗ್ತಾ ಇದ್ದಿಲ್ಲ, ಸ್ವಲ್ಪ ಉಪ್ಪು ಖಾರ ಸೇರಿಸಿ ಮನೆಯ ಯಜಮಾನನಿಗೆ ಖರ್ಚಿನ ಪಟ್ಟಿ ಕೊಟ್ಟು ಮುಂದಿನ ರೋಡಿಗೆ ಹೋಗುತ್ತಿದ್ದ.

 ನಾಯ್ಡುಗೆ ಲೌಕಿಕ ಗೊತ್ತು. ಕೆಲವು ಮನೆಯೊಳಗೆ ಸೀದಾ ಹೋಗಿ ಸಪ್ಪಳವಿಲ್ಲದಂತೆ ಹೆಬ್ಬೆರಳಿನಿಂದ ಸೋಡಾ ಒಡೆದು ಕೊಡುತ್ತಿದ್ದ. ಅಂದರೆ ಆ ಮನೆಯಲ್ಲಿ ಬಯಕೆ ಹತ್ತಿದ ಬಸುರಿ ಹೆಣ್ಣುಮಗಳಿದ್ದಾಳೆಂದರ್ಥ. ಒಂದೇ ಸೋಡಾವನ್ನು ಸ್ವಲ್ಪ ಕುಡಿದ ನಂತರ ಮತ್ತೆ ಗೋಲಿ ಬಿಗಿದು, ಎರಡನೇ ಸೋಡಾದಂತೆ ಮಕ್ಕಳಿಗೆ ಕಣ್ಣುಕಟ್ಟು ಮಾಡಿ ದೊಡ್ಡವರಿಗೆ ಹಣ ಉಳಿತಾಯ ಮಾಡುವ ತಂತ್ರವೂ ಗೊತ್ತು. ನಮ್ಮೂರಿನ ನೇಕಾರರ ಓಣಿಯಲ್ಲಿ ಆಲದ ಕೊಂಬೆಗಳು, ಬೇವಿನಕೊಂಬೆಗಳು ಒಂದಕ್ಕೊಂದು ರೆಟ್ಟೆ ಬಿಗಿದುಕೊಂಡು ನೆಲದ ಮೇಲೆಲ್ಲಾ ನೆರಳು ಚೆಲ್ಲಿರುತ್ತಿದ್ದವು. ಸೋಡಾರಥ ಬರುತ್ತಲೇ ಹಾಡಿಲ್ಲದ ಕೋಲಾಟದಂತೆ ಕೇಳಿಬರುವ ಸದ್ದು ನಿಂತುಹೋಗುತ್ತಿತ್ತು. ನೂರು ಗಡಿಯಾರಗಳು ಒಮ್ಮೆಲೇ ನಿಂತಂತೆ ಕಾಲವೇ ತಟಸ್ಥಗೊಂಡಂಥ ನಿಶ್ಯಬ್ದದೊಳಗಿಂದ ನೇಕಾರರು ಬುಳುಬುಳು ಹೊರಗೆ ಬರುತ್ತಿದ್ದರು. ವಸ್ತ್ರ ಹೆಣೆಯುವ ಕೈಗಳಿಗೆ, ಮಗ್ಗ ಹೊಡೆಯುವ ಕೈಗಳಿಗೆ ಸೋಡಾವನ್ನು ಕೊಟ್ಟು ಅವರ ದಣಿವಾರಿಸುತ್ತಿದ್ದ. ಆ ಓಣಿಗೆ ಆಗ ಮಧ್ಯಾಂತರ. ಅಕ್ಕಿ ಕೊಟ್ಟರೆ ಅಕ್ಕಿ, ಚಿಲ್ಲರೆ ಕೊಟ್ಟರೆ ಚಿಲ್ಲರೆಯನ್ನು ತೆಗೆದುಕೊಂಡು, ಸ್ವಲ್ಪ ಹೊತ್ತು ಕಷ್ಟಸುಖ ಮಾತನಾಡಿ, ಖಾಲಿ ಸೀಸೆಗಳ ಗಲಗಲ ಸದ್ದಿನಲ್ಲಿ ಬಂಡಿಯನ್ನು ಮನೆಯ ದಾರಿಗೆ ತಳ್ಳುತ್ತಿದ್ದ. ಅಲ್ಲಿಯವರೆಗೆ ನಾನೂ ನಾಯ್ಡುವಿನ ಬೆನ್ನ ಹಿಂದೆ ತಿರುಗುತ್ತಿದ್ದೆ. ರಜಾದಿನಗಳಲ್ಲಿ ಹಾಯಾಗಿ ಆಟ ಗೀಟ ಆಡೋದು ಬಿಟ್ಟು ಆ ರಣರಣ ಬಿಸಿಲಿನಲ್ಲಿ ನಾಯ್ಡುವಿನ ಜೊತೆ ಬೀದಿಗಿಳಿದು, ಅವನು ನಿಂತರೆ ನಿಂತು, ನಕ್ಕರೆ ನಕ್ಕು, ಮಾತಾಡಿದರೆ ಮಾತಾಡಿ..ನಿನಗೇನು ಬಂತೋ ಕರ್ಮ...? ಅಂದರೆ ತಪ್ಪುವುದಿಲ್ಲ.

'ಹಾಲು ಬೇಕು ಅಂದ್ರೆ ಕೋಲಿಂದಾದ್ರೂ ಹೊಡಿಸ್ಕೋಬೇಕು' ಅಂತ ಅಮ್ಮ ಅವಾಗಾವಾಗ ಹೇಳುತ್ತಿದ್ದಳು. ಹಾಲು, ಕೋಲಿನ ಸಂಗತಿ ನನಗೆ ಗೊತ್ತಿಲ್ಲವಾದರೂ ಈ ಅಂಡಲೆಯುವ ಕಾರಣವೇನೆಂದರೆ, ಆಗಲೇ ಅಂದರೆ ನಾನು ಏಳನೇ ಕ್ಲಾಸಿನ ಹುಡುಗನಿದ್ದಾಗ ನನ್ನ ಬಳಿ ನಾಲ್ಕುನೂರಾ ನಲವತ್ತೇಳು... ಅಲ್ಲಲ್ಲ... ಅರುವತ್ತಮೂರು ಬೆಣ್ಣೆಗೋಲಿಗಳು, ನೂರಾ ಹದಿನೇಳು ಸೀಸದ ಗೋಲಿಗಳು, ಹದಿನಾರು ಕಿರುಗೋಲಿಗಳು ಇದ್ದವು. ಕೊಂಡುಕೊಂಡವು ಇದ್ದವಾದರೂ ಜಾಸ್ತಿಯೆಲ್ಲಾ ಆಡಿ ಗೆದ್ದವುಗಳೇ!ಇಷ್ಟೊಂದು ಸರಕು ಗೋಪಿ ಬಳಿಯಾಗಲೀ, ಶೀನನ ಬಳಿಯಾಗಲೀ ಇಲ್ಲ. ಅವರಿಬ್ಬರೇ ಏನು ಒಟ್ಟಾರೆ ನನ್ನ ಯಾವ ಗೆಳೆಯರ ಬಳಿಯೂ ಇಷ್ಟೊಂದಿಲ್ಲ. ಆದರೆ ಎಷ್ಟಿದ್ದರೆ ಏನು ಲಾಭ? ನ್ನ ಬಳಿ ಒಂದೇ ಒಂದು ಸೋಡಾಗೋಲಿ ಇರಲಿಲ್ಲ. ಶೀನನ ಬಳಿ, ಗೋಪಿಯ ಬಳಿ ಎರಡೆರಡು ಇದ್ದವು. ಆ ಗೋಲಿಗೆ ಒಂದು ವಿಶೇಷವಿದೆ. ಅದು ಕೈಯೊಳಗಿದ್ದರೆ ಎದ್ವಾತದ್ವಾ ಮಾನಮರ್ಯಾದೆ. ಬರೀ ನಾನು ಹೇಳೋದೊಂದೇ ಅಲ್ಲ. 'ಉದಾತ್ತನೋಳ್ ಪುಟ್ಟದಲ್ತೆ ನೀಲಿರಾಗಂ' ಅಂತ ನಮ್ಮ ಮಾಸ್ತರರು ಕೂಡಾ ಒಪ್ಪಿಕೊಳ್ಳುತ್ತಿದ್ದರು. ಆದ್ದರಿಂದ ಆ ನೀಲಿ ಗೋಲಿಯನ್ನು ಸಂಪಾದಿಸಬೇಕೆಂಬ ಛಲ ನನ್ನಲ್ಲಿ ಬೇರು ಬಿಟ್ಟಿತ್ತು. ಅದೇನಾದರೂ ಅಂಗಡಿಯಲ್ಲಿ ಸಿಗೋ ಹಾಗಿದ್ರೆ ಹತ್ತು ಪೈಸೆ ಅಲ್ಲ ಎಂಟಾಣೆ ಬೇಕಾದ್ರೂ ಬಿಸಾಕಿ ತೊಗೊಳ್ಳದಕ್ಕೆ ಹಿಂದು ಮುಂದೆ ನೋಡ್ತಿರಲಿಲ್ಲ. ನಿಜ ಹೇಳಬೇಕೆಂದರೆ ಆ ಸೋಡಾ ಗೋಲಿ ಮಾಡಿದವನ್ಯಾವನೋ ಶುದ್ಧ ಅಯೋಗ್ಯ. ಗೋಲಿಯನ್ನು ಸೀಸೆಯ ಕತ್ತಿನಲ್ಲಿ ತುರುಕಿ, ಅದರ ಬಾಯಿಂದ ಹೊರಬರದಂತೆ ಮಾಡಿಬಿಟ್ಟಿದ್ದ. ಇಲ್ಲಾ ಅಂದಿದ್ದರೆ...ಹೋದರೆ ಹೋಗಲಿ ಅಂತ ಗೋಪಿಯ ಹತ್ತಿರ 'ಇಪ್ಪತ್ತು ಸೀಸಾ ಗೋಲಿ ಕೊಡ್ತೀನಿ ಒಂದು ಸೋಡಾಗೋಲಿ ಕೊಡ್ತೀಯಾ?' ಅಂತ ಬೇಡಿಕೆಯನ್ನು ಮುಂದಿಟ್ಟರೆ, ಅವನು 'ಅಲ್ಲಲಲೆಲೆ...ಆಸೆಬುರುಕ, ದೋಸೆಕಳ್ಳ...' ಅಂತಂದು ನನ್ನ ಚೌಕಾಸಿಯನ್ನು ಗೇಲಿ ಮಾಡಿದ್ದ. ಅದರಿಂದಾಗಿ ಆ ಗೋಲಿಯ ಮೇಲಿನ ವ್ಯಾಮೋಹ ಇನ್ನಷ್ಟು ಹೆಚ್ಚಾಗಿತ್ತು. ಜಿದ್ದು ಹುಟ್ಟಿತ್ತು. ಗೋಪಿ, ಶೀನ ನನಗೆ ಮಹಾರಾಜರಂತೆ ಕಾಣುತ್ತಿದ್ದರು.

ನಮ್ಮೂರಿನಲ್ಲಿ ಕೆಲವರಿಗೆ ಡಜನುಗಟ್ಟಲೆ ಸ್ವಂತ ಸೋಡಾ ಸೀಸೆಗಳಿವೆ. ಅವರೆಲ್ಲ ಸ್ವಲ್ಪ ಸಿರಿವಂತರು. ಸೀಸೆಯ ಕೆಳಗೆ ಕೆಂಪು, ಹಸಿರು, ನೀಲಿ ಬಣ್ಣಗಳಿಂದ ಗುರ್ತು ಹಾಕಿರುತ್ತಾರೆ. ಪ್ರತಿದಿನ ಅವರ ಸೋಡಾ ಬಾಟಲಿಗಳನ್ನು ಗುರ್ತಿನಿಂದ ಕೇಸಿನಲ್ಲಿಟ್ಟು ಅವರ ಮನೆಗೆ ನಾಯ್ಡು ಕೊಟ್ಟು ಬರುತ್ತಿದ್ದ. ಮತ್ತೆ ರಾತ್ರಿಯಲ್ಲಿ ಖಾಲಿ ಸೀಸೆಗಳನ್ನು ತರುತ್ತಿದ್ದ. ಅವರು ಊರವರ ಎಂಜಲನ್ನು ಮುಟ್ಟಿಸಿಕೊಳ್ಳುತ್ತಿದ್ದಿಲ್ಲ! ಅದಕ್ಕೇ ಆ ಶೀನ ಗೋಪಿ ನನ್ ಮಕ್ಳಿಗೆ ಸೋಡಾಗೋಲಿಗಳಿದ್ದದ್ದು. ಬಾಟಲಿ ಒಡೆದುಹೋಗುತ್ತಿತ್ತೋ, ಇವರೇ ಒಡೆದು ಹಾಕುತ್ತಿದ್ದರೋ... ಅಂತೂ ಎರಡೆರಡು ಸಂಪಾದಿಸಿಕೊಂಡಿದ್ದರು. ಸೀಸಾ ಮಾಡಿದವನನ್ನು, ಸಿರಿವಂತರನ್ನು ಬಯ್ಯುತ್ತಾ ಕುಳಿತರೆ ಬಂದ ಲಾಭವೇನು? ಅದಕ್ಕೆ ಬದಲು ಸೋಡಾನಾಯ್ಡುವನ್ನು ಯಾವುದೇ ರೀತಿಯಲ್ಲಿ ಒಲಿಸಿಕೊಳ್ಳೋದು ಸುಲಭ ಅನ್ನಿಸಿ ಆ ಕೆಲಸಕ್ಕೆ ಕೈ ಹಾಕಿದ್ದೆ. ಆದ್ದರಿಂದಲೇ ಬಂದಿದ್ದು ಈ ಊರು ಅಲೆಯೋ ಕರ್ಮ...ದಿನಪೂರ್ತಿ ಸೂರ್ಯ ನನ್ನ ಕಣ್ಣಿಗೆ ನೀಲಿಯಾಗಿ ಕಾಣಿಸುತ್ತಿದ್ದ. ಸಂಜೆಯಾಗುತ್ತಲೇ ನಾಯ್ಡು ಮನೆಗೆ ಹೋಗುತ್ತಿದ್ದೆ. ಶುಭ್ರವಾಗಿ ಸಾರಿಸಿ ರಂಗೋಲಿ ಇಟ್ಟ ಒಂಟಿ ಕಂಬದ ಮನೆ, ಪಡಸಾಲೆಯಲ್ಲಿಟ್ಟ ಸೋಡಾ ಮೆಷಿನ್ನಿನ ಪಕ್ಕದಲ್ಲಿಯೇ ತಲೆ ಎತ್ತಿ ನಿಂತ ಗ್ಯ್ಯಾಸ್ ಸಿಲಿಂಡರು, ಆ ಪಕ್ಕದಲ್ಲಿಯೇ ಗೂಡುಗಳಿದ್ದ ಕಟ್ಟಿಗೆ ಅಲಮಾರಾ. ಎಲ್ಲವನ್ನೂ ಓರೆಯಾಗಿ ಮಣ್ಣಿನ ಗೋಡೆಗೆ ಒರಗಿಸಲಾಗಿರುತ್ತಿತ್ತು. ಗ್ಯಾಸ್ ಸಿಲಿಂಡರಿಗೆ, ಮೆಷಿನ್ನಿಗೆ ಕುಂಕುಮ ಹಚ್ಚಿ, ಪಾರಿಜಾತ ಹೂಗಳನ್ನಿಟ್ಟಿರುತ್ತಿದ್ದರು. ನಾಯ್ಡು ಸ್ನಾನ ಮಾಡಿ ಉದ್ದನೆಯ ಕುಂಕುಮವನ್ನು ಹಚ್ಚಿಕೊಂಡು ಒದ್ದೆ ವಸ್ತ್ರವನ್ನು ಸುತ್ತಿಕೊಂಡು ಗುಡಿಯಲ್ಲಿನ ಪೂಜಾರಿಯಂತೆ ಕಾಣುತ್ತಿದ್ದ.ಖಾಲಿ ಸೀಸೆಗಳನ್ನು ಒಂದೊಂದಾಗಿ ತೊಳೆಯೋದು, ಸೀಸದ ಬಾಯಿಯ ಬಳಿಯಿರುವ ರಬ್ಬರು ಗಾಲಿಯನ್ನು ಪರೀಕ್ಷಿಸಿ ಅವಶ್ಯವಿದ್ದರೆ ಬದಲಾಯಿಸಿ, ಶೋಧಿಸಿದ ನೀರನ್ನು ಅಳತೆಯ ಪ್ರಕಾರ ಲಾಳಿಕೆಯ ಮೂಲಕ ಸೀಸೆಯಲ್ಲಿ ತುಂಬುವುದು ಇವೆಲ್ಲಾ ಒಂದು ಹಂತ.

ಅನಂತರ ಒಮ್ಮೆ ಪ್ರಾರ್ಥಿಸಿ ಮುಖಕ್ಕೆ ಕಬ್ಬಿಣದ ಜಾಲರಿಯ ಮುಖವಾಡವನ್ನು ಹಾಕಿಕೊಂಡು ಸೋಡಾ ತಯಾರಿಸುವ ಕಾರ್ಯಕ್ಕೆ ಇಳಿಯುತ್ತಿದ್ದ. ಮೆಷಿನ್ನಿಗೆ ಸೀಸೆಯನ್ನು ಕಟ್ಟಿ ಗಿರಗಿರನೆ ತಿರುಗಿಸಿ, ಎಡಗೈಯಿಂದ ಗ್ಯಾಸ್ ಹ್ಯಾಂಡಲನ್ನು ತಿರುಗಿಸಿ 'ಛಸ್' ಎಂಬ ಶಬ್ದ ಬರುತ್ತಲೇ ಮೆಷಿನ್ನಿನಲ್ಲಿ ಗುಂಡು ಬಿಗಿದ ಸೀಸೆಯನ್ನು ತೆಗೆದು ಇನ್ನೊಂದನ್ನು ಕಟ್ಟುತ್ತಿದ್ದ. ಲೆಕ್ಕ ಹಾಕುವ ಪ್ರಮೇಯವೇ ಇಲ್ಲದಂತೆ ಹನ್ನೆರಡು ಸುತ್ತಿಗೆ ಬಲಗೈಯ ಬಳಿ ಅದೆ ಠಕ್ಕೆಂದು ನಿಲ್ಲುತ್ತಿತ್ತು. ಸೋಡಾ ಕಟ್ಟಿದ ಬಾಟಲಿಗಳನ್ನು ಕಟ್ಟಿಗೆ ಗೂಡಿನಲ್ಲಿ ಇಡುತ್ತಿದ್ದ. ಆ ಗೂಡುಗಳೆಲ್ಲಾ ತುಂಬಿದ ಮೇಲೆ ಕಟ್ಟಿಗೆಯ ತೊಟ್ಟಿಯಲ್ಲಿ ಒಣಹುಲ್ಲನ್ನು ಹಾಸಿ, ನೀರನ್ನು ಚಿಮುಕಿಸಿ, ಜಾಗ್ರತೆಯಿಂದ ಹಸುಗೂಸನ್ನು ತೊಟ್ಟಿಲಿನಲ್ಲಿ ಮಲಗಿಸುವಂತೆ ಮುದ್ದಿನಿಂದ ಪೇರಿಸುತ್ತಿದ್ದ. ಕಡೆಯಲ್ಲಿ ಊರಿನ ಸಿರಿವಂತರ ಸೀಸೆಗಳನ್ನು ಕಟ್ಟಿ ಕೇಸುಗಳಲ್ಲಿ ಸೇರಿಸುತ್ತಿದ್ದ. ಸೋಡಾದ ಸಂಪೂರ್ಣ ವ್ಯವಹಾರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಪೂಜೆ ಮಾಡಿದಷ್ಟು ಶ್ರದ್ಧೆಯಿಂದ ಮಾಡುತ್ತಿದ್ದ. ಎಲೆ ಹಸಿರು ಬಣ್ಣದ ಸೀಸೆಗಳಲ್ಲಿ ನೀಲಿ ಬಣ್ಣದ ಗೋಲಿಗಳು.. ಎಲೆಮರೆಯ ನೇರಳೆ ಹಣ್ಣಿನಂತೆ ನನ್ನ ಕಣ್ಣು ಕುಕ್ಕುತ್ತಿದ್ದವು. ಅಬ್ಬಾ ಅದೆಷ್ಟೊಂದು ನೀಲಿ ಗೋಲಿಗಳೋ..?

ದಿನಾಲೂ ನಾನು ಅಲ್ಲಿಗೆ ಹೋಗುವುದನ್ನು, ಅವನನ್ನು ನೆಟ್ಟಗಣ್ಣಿಂದ ನೋಡುವುದನ್ನು ನಾಯ್ಡು ಗಮನಿಸಿದ. 'ದಿನಾ ನಿಂಗೇನೋ ಇಲ್ಲಿ ಕಾರುಬಾರು ॒ಬೇರೆ ಕೆಲಸ ಗಿಲಸ ಇಲ್ಲೇನು?' ಅಂತ ಸ್ವಲ್ಪ ಸಿಟ್ಟಿನಿಂದ ಕೇಳಿದ. 'ಸೋಡಾ ಗೋಳಿ ಕೊಡ್ತೀಯಾ.. ದುಡ್ಡು ಕೊಡ್ತೀನಿ..ಇಕೋ..' ಉಗುಳು ನುಂಗುತ್ತಾ ಹಿಡಿಯನ್ನರಳಿಸಿ ಚಿಲ್ಲರೆ ಹಣವನ್ನು ತೋರಿಸಿದಾಗ ನಾಯ್ಡು ಬಾಲವನ್ನು ತುಳಿಸಿಕೊಂಡ ಹಾವಿನಂತೆ 'ಖಸ್..' ಅಂತ ಎದ್ದ.'ಮತ್ತೆ ಯಾವತ್ತನ್ನ ನನ್ನ ನೆರಳಿಗೆ ಬರೋದಾಗಲೀ, ಸೋಡಾಗೋಲಿ ಕೇಳೋದಾಗಲೀ ಮಾಡಿದರೆ ಸುಮ್ಮನಿರಂಗಿಲ್ಲ, ಕಾಲು ಮುರಿದು ಕೈಯಾಗ ಕೊಡತೀನಿ. ಹೋಗು ॒ನಡಿ' ಎಂದು ಗದರಿಸಿದ. ಜಾಲರಿಯ ಮುಖವಾಡವನ್ನು ಹಾಕಿಕೊಂಡ ನಾಯ್ಡು ಬೋನಿನಲ್ಲಿನ ಹುಲಿಯಂತೆ ಹೂಂಕರಿಸಿದ. ಭಯದಿಂದ ಓಡಿ ಹೋದೆ.ನಾಯ್ಡುಗೆ ಇದ್ದಕ್ಕಿದ್ದಂತೆ ಅಂತಹ ಕೋಪ ಯಾಕೆ ಬಂತೆನ್ನುವುದು ಆಮೇಲಕ್ಕೆ ತಿಳಿಯಿತು. ಗೋಲಿ ಕೇಳುವುದು ತುಂಬಾ ತಪ್ಪಂತೆ. ಅಪಶಕುನವಂತೆ. ಸೋಡಾ ಬಾಟಲಿ ಒಡೆದರೆ ತಾನೇ ಗೋಲಿ ಹೊರಬರುವುದು? ಸೋಡಾ ಬಾಟಲಿ ಒಡೆದರೆ ನಷ್ಟಕ್ಕಿಂತ ಹೆಚ್ಚಾಗಿ ಅಪಾಯವಂತೆ. ನಾನು ಹಾಗೆ ಕೇಳಿದ್ದು ತುಂಬಾ ತಪ್ಪು ಅಂತ ಅರ್ಥವಾಯ್ತು. ಮನಸ್ಸಿನಲ್ಲಿಯೇ ಗಲ್ಲಗಲ್ಲ ಬಡಿದುಕೊಂಡೆ. ಆದರೆ ಹಾಗಂತ ಗೋಲಿ ಆಸೆ ಬಿಡಲಿಕ್ಕಾಗುತ್ತಾ? ಅದು ಮಾತ್ರ ಬೇಕೇ ಬೇಕು. ಅದರಲ್ಲಿ ರಾಜಿ ಇಲ್ಲ. ಈ ಘಟನೆ ನಡೆದ ಒಂದು ವಾರದ ಕಾಲ ನಾಯ್ಡುವಿನ ಕಣ್ಣಿಗೆ ಬೀಳಲಿಲ್ಲ. ಆಮೇಲಕ್ಕೆ ನಾಯ್ಡು ಬಂಡಿ ಎದುರಾದಾಗಲೆಲ್ಲಾ ಹಣ ತೆತ್ತು ಸೋಡಾ ಕುಡಿಯೋದನ್ನು ಶುರುವಿಟ್ಟೆ. ಒಂದೊಂದು ದಿನ ಎರಡು ಮೂರು ಸೋಡಾ ಕುಡಿಯುವ ಪರಿಸ್ಥಿತಿ ಬರುತ್ತಿತ್ತು. ಏನು ಮಾಡಲಿಕ್ಕೆ ಆಗ್ತದೆ? ಹಾಯಾಗಿ ಉಳಿದ ಹುಡುಗರಂತೆ ಜೀರ್ಗಿ ಪೆಪ್ಪರಮೆಂಟೋ, ನಿಪ್ಪಟ್ಟನ್ನೋ ಕೊಂಡು ತಿನ್ನುವುದನ್ನು ಬಿಟ್ಟು ಜ್ವರ ಬಂದವರಂತೆ ಈ ಕಷಾಯದಂತಿರುವ ಸೋಡಾ ಕುಡಿಯೋದು, ಅಂಡಲೆಯುತ್ತಾ ತಿರುಗೋದು.. ನನ್ನ ಮೇಲೆ ನನಗೇ ಅನುಕಂಪವಾಯಿತು. ಆದರೂ ತಪ್ಪುವುದಿಲ್ಲ. ನಾಯ್ಡುವನ್ನು ಮೆಚ್ಚಿಸಲೇಬೇಕು. ನೂರು ಸೀಸೆಗಳಲ್ಲಿ ಒಂದಲ್ಲಾ ಒಂದು ಸೀಸೆ ಒಡೆದು ಹೋಗುವಂತೆ ಮಾಡಪ್ಪಾ ಅಂತ ಕಂಡ ದೇವರನ್ನು ಬೇಡಿಕೊಳ್ಳುತ್ತಿದ್ದೆ. ಯಾವತ್ತಾದರೂ ಒಂದು ದಿನ ನಾಯ್ಡುವಿನ ಮನಸ್ಸು ಕರಗದಿರುತ್ತದೆಯೇ, ಕೈ ಜಾರಿ ಸೀಸೆ ಒಡೆಯದಿರುತ್ತದೆಯೇ ಎನ್ನುವ ಆಸೆ ಆ ಬಂಡಿಯ ಹಿಂದೆ ನಾನು ಅಲೆಯುವಂತೆ ಮಾಡಿತ್ತು. ಅದೇನೋ ಹೇಳ್ತಾರಲ್ಲ.. ಎತ್ತಿನ ಹಿಂದೆ ನರಿಯ ಹಂಗೆ ಅಂತ.. ಹಾಗೆ ಬಿಸಿಲು ಮಳೆ ಅನ್ನದಂಗೆ ನಾಯ್ಡುವಿನ ಹಿಂದೆಯೇ ತಿರುಗುತ್ತಿದ್ದೆ.

ಸೋಡಾ ನಾಯ್ಡು ತಪ್ಪದಂತೆ ತಿಂಗಳಿಗೊಮ್ಮೆ ಗ್ಯಾಸ್ ಸಿಲಿಂಡರಿನ ಸಲುವಾಗಿ ಪಟ್ಟಣಕ್ಕೆ ಹೋಗುತ್ತಾನೆ. ಅದು ನನಗೆ ಗೊತ್ತಿದ್ದರಿಂದ ಪಟ್ಟು ಹಿಡಿದು ಮಾಸ್ತರರ ಜಗುಲಿಯ ಮೇಲೆ ಕಾದು ಕುಳಿತೆ. ಖಾಲಿ ಗ್ಯಾಸ್ ಸಿಲಿಂಡರನ್ನು ಸೈಕಲ್ಲಿನ ಮೇಲೆ ನಿಲ್ಲಿಸಿ ಕಟ್ಟಿ, ನಿಕ್ಕರಿನ ಮೇಲೆ ಸಿಲ್ಕ್ ಜುಬ್ಬಾವನ್ನು ಹಾಕಿಕೊಂಡು ಔಡಲೆಣ್ಣೆ ಹಚ್ಚಿ ಗುಂಗುರು ಕೂದಲನ್ನು ಬಾಚಿ ಕಣ್ಣಿಗೆ ಕಪ್ಪು ಕನ್ನಡಕವನ್ನು ಹಾಕಿಕೊಂಡು ಹಾಯಾಗಿ ಬೆಲ್ ಹೊಡೆಯುತ್ತಾ ಕಾಣಿಸಿಕೊಂಡ. ಪೂರ್ತಿ ಜಗುಲಿಯ ಹತ್ತಿರ ಬರುವುದಕ್ಕೆ ಸರಿಯಾಗಿ ಟೈಲರ್ ರಾಮಣ್ಣನ ತಮ್ಮ ಕೈಗೆ ಸಿಕ್ಕ. ಕುವೈಟ್ ನಿಂದ ಆ ದಿನವೇ ಬಂದಿದ್ದ. ನೋಡಿದ ತಕ್ಕಣ ನಾಯ್ಡು ವಿಶಾಲವಾಗಿ ನಕ್ಕು ಸೈಕಲ್ಲನ್ನು ಪಕ್ಕಕ್ಕೆ ತೆಗೆದುಕೊಂಡು ಜಗಲಿಯ ಮೇಲೆ ಕಾಲಿಟ್ಟು ನಿಲ್ಲಿಸಿದ. 'ಏನ್ ತಮ್ಮಾ ಯಾವಾಗ ಬಂದಿದ್ದು?' ನಿಂದ ಪ್ರಾರಂಭಿಸಿ ಉತ್ತರಕ್ಕಾಗಿ ಕಾಯದೆ '..ಕುವಾಯತ್ ಬರೀ ಮರಳುಗಾಡೇ ಅಲ್ಲೇನು? ಸೋಡಾ ವ್ಯಾಪಾರ ಭರ್ಜರಿಯಾಗೇ ಇರಬೇಕು ಅಂದ್ಕೊಳ್ತೀನಿ. ಮೊದಲೇ ನೀರು ಇರಂಗಿಲ್ಲ ಅಲ್ಲಿ, ಸೋಡಾ ಕುಡಿದು ಬದುಕಬೇಕಾಗಿದ್ದೇ.. ಎಲ್ಲಾರೂ ದುಡ್ಡು ಇದ್ದವರೇ ಅಲ್ಲೇನು, ಅಂದ ಮಾಲೆ ಸ್ವಂತ ಮಿಷಿನ್ ಇಟ್ಟುಗೊಂಡಿರ್ತಾರೆ ಬಿಡು..ತಮ್ಮಾ! ಅವರದೆಲ್ಲಾ ಉಲ್ಟಾ ಪದ್ಧತಿ ಅಲ್ಲೇನು, ಅಂದ ಮೇಲೆ ಹ್ಯಾಂಡಲ್ ಕೂಡಾ ಎಡಕ್ಕೆ ಇರಬೇಕು..ಮುನ್ನೂರರವತ್ತು ದಿನಾನೂ ಸುಖವಾಗಿ ಬಿಸಿಲೇ ಬಿಸಿಲು ಬಿಡು..ಬಿಸಿಲಂದ್ರೆ ಲಾಭಾನೇ..' ಕೇಳೋ ತನಕ ಕೇಳಿ ಅಲ್ಲಿಯೇ ಕುಳಿತು ಪೇಪರು ಓದುತ್ತಿದ್ದ ಮಾಸ್ತರರು ಅಡ್ಡಬಂದು ತಮ್ಮಣ್ಣನನ್ನು ರಕ್ಷಿಸಿಕೊಂಡರು.

ನಾನಲ್ಲೇ ಬಚ್ಚಿಟ್ಟು ಕುಳಿತುಕೊಂಡಿದ್ದೆ. ನಾಯ್ಡು ಹೋದರೆ ನನಗೆ ಆಮೇಲೆ ತುಂಬಾ ಕೆಲಸವಿತ್ತು. ಹೊರಟು ನಿಂತಿದ್ದ ಅವನನ್ನು ಮತ್ತೆ ಬೇಕೆಂದೇ ಮಾಸ್ತರರು ತಡೆದರು. ಈ ಮಾಸ್ತರರು ಒಳ್ಳೇ ಜಿಗಣೆ ಇದ್ದಂಗೆ.. 'ಪ್ರಪಂಚ ಅಂದರೆ ಬರೀ ಸೋಡಾ ಒಂದೇ ಅಲ್ಲ.. ಇನ್ನಾ ಬೇಕಾದಷ್ಟು ಇರ್ತವೆ.. ನೋಡಿಲ್ಲಿ, ಪೇಪರ್ ನೋಡು.. ಎಲ್ಲಾ ರಾಜರ ಆಸ್ತೀನ ಸರ್ಕಾರ ತನ್ನ ಕಬ್ಜಕ್ಕೆ ತೊಗೊಂಡದೆ.. ಇನ್ನು ಮಂದೆ ರಾಜರೆಲ್ಲಾ ಖೋಜಾನೇ.. ಈವತ್ತಿನಿಂದ ಸತ್ತಗೋತ ಅವರ ಅವರ ಬದುಕು ಅವರ ಮಾಡಿಕೊಳ್ಳಬೇಕಾಗಿದ್ದೇ..' ನಿರಂತರವಾಗಿ ಸಾಗುತ್ತಿದ್ದ ಮಾತನ್ನು ನಾಯ್ಡು ಕತ್ತರಿಸಿದ. 'ಅವರಿಗೇನು ಕಮ್ಮಿ ಬಿಡರಿ ಮಾಸ್ತರರೆ, ದೊಡ್ಡ ಮಾರಾಜರು, ಕಿರೀಟ, ಜರತಾರಿ ಅಂಗಿ ಇರೋರು. ಅವರ ರಾಜ್ಯದಾಗೆ ಅವರು ನನ್ನ ಹಂಗೆ ಮೂರು ಕಾಯಿಲ್ ಮಿಷಿನ್ ಒಂದು ಹತ್ತೋ ಇಪ್ಪತ್ತೋ ಹಾಕಿಸಿಕೊಂಡರೆ ಆಯ್ತು. ದಿನಕ್ಕೆ ಹತ್ತು ಗ್ರೋಸು ಬಾಟಲಿ ಬಿಗದರೆ ಸಾಕು. ಮತ್ತೆ ರಾಜರಂಗೆ ಬದುಕಬೋದು. ಅದೇನೂ ಅಂಥ ದೊಡ್ಡ ವರಿ ಅಲ್ಲ ಬಿಡರಿ..' ಎನ್ನುತ್ತಾ ಸುಂಯ್ ಎಂದು ಹೊರಟುಹೋದ.ಮಾಸ್ತರರಿಗೆ ಮತ್ತೆ ಮಾತುಗಳು ಹೊರಡಲಿಲ್ಲ.ಆಗಲೇ ತಡವಾಗಿ ಹೋಗಿದೆ ಅಂತ ಒದ್ದಾಡುತ್ತಿದ್ದೆ. ಎರಡು ಕ್ಷಣದಲ್ಲಿ ನಾಯ್ಡು ಮನೆಗೆ ಓಡಿದೆ. ಯಾರೂ ಇರಲಿಲ್ಲ. ಪಡಸಲೆಯಲ್ಲಿ ಚಿಕ್ಕ ಕೂಸು ಆಡಿಕೊಳ್ಳುತ್ತಿದ್ದಳು. ನನ್ನ ನೋಡುತ್ತಲೇ ಅಳುವುದಕ್ಕೆ ಮೊದಲಿಟ್ಟಳು. ಅವರಮ್ಮ ಒಳಗಿನಿಂದ ಹೊರಬಂದಳು. ನಾನು ಸ್ವಲ್ಪ ಆಯಾಸ, ಅವಸರವನ್ನು ನಟಿಸುತ್ತಾ 'ನಮ್ಮಮ್ಮಗೆ ಸೋಡಾ ಬಂದದೆ, ಒಂದು ಜ್ವರ ತೊಗೊಂಡು ಬಾ ಅಂದಳು' ಅಂತ ಧೈರ್ಯದಿಂದ ತಡವರಿಸದೆ ಹೇಳಿದೆ.'ನಾಯ್ಡು ಪಟ್ಟಣಕ್ಕೆ ಹೋಗ್ಯಾನೆ. ತುಂಬಿದ ಸೀಸೆಗಳಿಲ್ಲ. ಅಷ್ಟಕ್ಕೂ ಅವರಿಲ್ಲದ ಹೊತ್ತಿನಾಗೆ ಮನೆಗೆ ಬಾಟಲಿ ಕೊಟ್ಟರೆ ಸಿಟ್ಟಾಗ್ತಾನೆ, ನಾನೇನೂ ಮಾಡೋ ಹಂಗಿಲ್ಲ' ಅಂತಂದು ಅಳುತ್ತಿದ್ದ ಮಗುವನ್ನು ಕಂಕುಳಲ್ಲಿ ಹಾಕಿಕೊಂಡು ಒಳಕ್ಕೆ ಹೊರಟುಹೋದಳು.ಅರೆರೆ..

ಸೀಸಾ ಎಗರಿಸಿ ಗೋಲಿ ಮಾಡಿಕೊಳ್ಳೋದು ಅಂದುಕೊಂಡಿದ್ದೆ.. ಏನಾಗಬೇಕೋ ಅದು ಆಗೇ ಆಗುತ್ತೆ. ನಾಲ್ಕು ಮಾತು ಬೈದೋ ಹೊಡೆದೋ ಅಮ್ಮ ಅದರ ರೊಕ್ಕ ಕಟ್ಟುತ್ತಾಳೆ ಅಂದುಕೊಂಡಿದ್ದೆ. ಆದರೆ ಈ ಸಲ ಕೂಡಾ ಗೋಲಿಗೆ ಮುಕ್ತಿ ಸಿಗಲಿಲ್ಲ.ಶ್ರೀರಾಮನವಮಿ.ರಾಮದೇವರ ಗುಡಿಯ ಬಳಿ ಹರಿಕಥೆ ಶುರುವಯ್ತು. ರಾತ್ರಿ ಏಳಕ್ಕೆ ಶುರುವಾಗಿ ಮೂರು ತಾಸು ಹರಿಕಥೆ ಸಾಗುತ್ತಿತ್ತು. ನಾಯ್ಡು ಭಕ್ತಿಯೊಡನೆಯೂ ಬಂಡಿಯೊಡನೆಯೂ ಬರುತ್ತಿದ್ದ. ಕಥೆ ಅರ್ಧ ಮುಗಿದ ಮೇಲೆ ಪೆಟ್ರೋಮ್ಯಾಕ್ಸ್ ಲೈಟು ಪಕ್ ಪಕ್ ಅನ್ನುತ್ತಿದ್ದರೆ, ನಾಯ್ಡು ಕೈ ಹಾಕಿ ಲೈಟನ್ನು ಆರಿಸಿ, ಟಕಟಕ ಗ್ಯಾಸು ಹೊಡೆದು, ಪಿನ್ನು ತಿರುಗಿಸಿ ಭಗ್ ಭಗ್ ಎಂದು ಲೈಟನ್ನು ಫಳಫಳ ಬೆಳಗಿಸುತ್ತಿದ್ದ. ಅ ಬಿಡುವಿನಲ್ಲೇ ದಾಸರಿಗೆ ಮತ್ತು ಪಕ್ಕವಾದ್ಯದವರಿಗೆ ಸೋಡಾ ಒಡೆದು ಕೊಡುತ್ತಿದ್ದ. ಸೋಡಾ ಒಡೆದಾಗ ಮುಡುವ ಪಕ್ಷಿಕೂಗು ಮೈಕಿನ ಮೂಲಕ ರೈಲು ಕೂಗಿನಂತೆ ಕೇಳಿ ನಿದ್ರಾವಸ್ಥೆಯಲ್ಲಿದ್ದ ಭಕ್ತರನ್ನು ಎಚ್ಚರಿಸುತ್ತಿತ್ತು.ಮೊದಲೇ ದಾಸರಿಗೆ ಮಾತು ಹೆಚ್ಚು. ಅದಕ್ಕೇ '.. ಭಗವಾನ್ ಭಕ್ತರೇ, ಈ ಯಃಕಶ್ಚಿತ್ ಸೋಡಾ ಪರಮಾದ್ಭುತವಾಗಿದೆ. ಕೊಂಡುಕೊಳ್ಳುವವರು ಕೊಂಡುಕೊಳ್ಳಿ. ಮತ್ತೆ ಕಥೆ ಶುರುವಾಗುತ್ತದೆ.' ಅಂತ ಮೈಕಿನಲ್ಲಿ ತೇಗುತ್ತಾ ಹೇಳಿದ ಮೇಲೆ ಹತ್ತು ಹದಿನೈದು ಸೋಡಾ ಒಡೆದ ಸದ್ದು ಕೇಳಿಸಿತು. ದಿನವೂ ಈ ರೀತಿಯಾಗಿ ನಾಯ್ಡು ದಾಸರನ್ನೂ, ಭಕ್ತರು ಸೋಡಾವನ್ನೂ ಸೇವಿಸಿದರು. ಅನಂತರ ದಾಸರು ನಾಯ್ಡುವಿನ ಒಳ್ಳೆತನಕ್ಕೆ ಮತ್ತಷ್ಟು ಬೆರಗಾಗಿ ವೇದಾಂತದ ಧಾಟಿಯಲ್ಲಿ '..ದೇವರು ಅಂದ್ರೆ ಇಂಥದೇ ರೂಪದಲ್ಲಿ ಇರ್ತಾನೆ ಅನ್ನೋದೇನೂ ಇಲ್ಲ.. ಆ ಪರಮಾತ್ಮ ಯಾರಿಗೆ ಯಾವ ರೂಪದಲ್ಲಾದರೂ ಪ್ರತ್ಯಕ್ಷನಾಗಬಹುದು.. ನಮ್ಮ ನಾಯ್ಡುಗೆ ಸೋಡಾನೇ ಸಾಕ್ಷಾತ್ ಪರಮೇಶ್ವರ ಇದ್ದಂತೆ.. ಆ ಸೀಸಾದ ತುದಿಯಲ್ಲಿರುವ ನೀಲಿ ಗೋಲಿಯೇ ನೀಲಕಂಠ ಇದ್ದಂಗೆ.. ಆ ಪರಮೇಶ್ವರ ನಮ್ಮ ನಾಯ್ಡುಗೆ ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ..' ಅಂತ ಮೈಕಿನಲ್ಲಿ ಹೇಳಿದರು. ನಾಯ್ಡು ಅದೃಷ್ಟ ಕೇಳಬೇಕೆ. ಪುಣ್ಯ ಪುರುಷಾರ್ಥಗಳು ಏಕಕಾಲಕ್ಕೆ ಸಿಕ್ಕವು. ದಾಸರು ಆ ಮಾತು ಹೇಳಿದ ಮೇಲೆ ನೀಲಕಂಠನನ್ನು ಕತ್ತಲಲ್ಲಿ ಎಗರಿಸಿ, ಆ ನೀಲಿ ಕಂಠವನ್ನು ದಕ್ಕಿಸಿಕೊಳ್ಳಬೇಕೆಂದು ನಾನು ನಿಶ್ಚಯಿಸಿಕೊಂಡೆ. ಕಥೆ ಸ್ವಲ್ಪ ಶುರುವಾದ ಮೇಲೆ ಆ ಕೆಲಸ ಮಾಡೋಣವೆಂದುಕೊಂಡೆ. ಆದರೆ ಆ ದಿನ ಮತ್ತು ಅದರ ಮರುದಿನ ಏನಾಯಿತೋ ಕಾಣೆ. ನಾಯ್ಡು ಪೆಟ್ರೊಮ್ಯಾಕ್ಸ್ ಗ್ಯಾಸ್ ಹೊಡೆಯುವುದನ್ನು ನಿಲ್ಲಿಸಿದ. ದಾಸರು ಸೋಡಾ ಕುಡಿಯಲಿಲ್ಲ. ನಾಯ್ಡು ಭಕ್ತರ ಮಧ್ಯದಲ್ಲಿ ಕುಳಿತುಕೊಂಡನಾದರೂ ಬಂಡಿ ತರಲಿಲ್ಲ. ಕೊನೆಗೆ ನನಗೆ ಗೊತ್ತಾದ್ದೇನೆಂದರೆ ಆರತಿ ತಟ್ಟೆಯಲ್ಲಿ ಹಾಕಲೆಂದು ತಂದ ಚಿಲ್ಲರೆಯಿಂದ ಭಕ್ತರು ಸೋಡಾ ಕುಡಿಯುತ್ತಿದ್ದಾರೆಂದು ದಾಸರಿಗೆ ಅರ್ಥವಾಯಿತಂತೆ. ಅದರಿಂದಾಗಿ ನಾಯ್ಡು ಮತ್ತು ದಾಸರ ಸಂಬಂಧ ರಾಂರಾಂ ಆಯ್ತು. ಅದರ ಜೊತೆ ನನ್ನ ಸೋಡಾ ಗೋಲಿ ಕೂಡಾ ಶ್ರೀಮದ್ರಮಾರಮಣ ಗೋವಿಂದಾ..

ವಿಜಯದಶಮಿಯ ಕಡೆಯ ದಿನ.ಮಹಾಭಾರತದ ರಾಜಸೂಯ ಯಾಗದ ನಾಟಕ. ವೇಷ ಹಾಕಿದವರೆಲ್ಲಾ ನಮ್ಮೂರಿನವರೇ. ಜನರೇಟರ್ ಹಾಕಿ ಲೈಟಿನಿಂದ ಥಳುಕು ಬಳಕು ಮಾಡಿದ್ದರು. ಸ್ಟೇಜು, ತೆರೆಗಳನ್ನು ಕಟ್ಟುತ್ತಿದ್ದರು. ಅವರ ಪ್ರಯತ್ನದಲ್ಲಿ ಅವರಿದ್ದರೆ ನನ್ನ ಪ್ರಯತ್ನದಲ್ಲಿ ನಾನಿದ್ದೆ. ಹೇಗಿದ್ದರೂ ನಾಯ್ಡು ಬಂದೇ ಬರುತ್ತಾನೆ. ಆ ಕತ್ತಲಿನಲ್ಲಿ ಒಂದು ಸೀಸಾ ಎಗರಿಸಿ, ಅದನ್ನು ಎಲ್ಲಿ ಒಡೆಯಬೇಕು, ಗಾಜಿನ ಚೂರುಗಳನ್ನು ಎಲ್ಲಿ ಬಿಸಾಡಬೆಕು ಎಂಬುದನ್ನು ಕೂಡಾ ನಿಶ್ಚಯಿಸಿಕೊಂಡೆ. 'ಹರಬ್ರಹ್ಮ.. ಮಹೇಶ್ವರ.. ಸದಾನಂದ..' ಶುರುವಾಯ್ತು. ಚೌಕಳಿ ಚಾದರವನ್ನು ನೀಳವಾಗಿ ತಲೆಯಿಂದ ಉಂಗುಷ್ಠದವರೆಗೆ ಹೊದೆದುಕೊಂಡು ಹೋದೆ. ನನ್ನಲ್ಲಿ ಕಳ್ಳನ ಕಳೆ ಎದ್ದು ಹೊಡೆಯುತ್ತಿತ್ತು. ಊರಿನ ಜನರೆಲ್ಲಾ ಅಲ್ಲಿಯೇ ಸೇರಿದ್ದರು. ಮಧ್ಯೆ ಮಧ್ಯೆ ತೆರೆ ಬಿದ್ದಾಗೆಲ್ಲಾ ಸೋಡಾ ಬಾಡಲಿ ಒಡೆಯುವ ಸದ್ದು ಕೇಳಿಸುತ್ತಿತ್ತು. ಬಂಡಿಯನ್ನು ಒಂದು ಕಡೆಗೆ ನಿಲ್ಲಿಸಿ, ಭುಜದ ಮೇಲೆ ಸೋಡಾ ಕೇಸನ್ನಿಟ್ಟುಕೊಂಡು ಜನರ ಮಧ್ಯೆ ನಾಯ್ಡು ತಿರುಗಾಡುತ್ತಿದ್ದ. ನಾನು ತುಂಬಾ ಅನುಭವವಿರುವ ಕಳ್ಳನಂತೆ, ಅನುಮಾನ ಬರದಂತೆ ನಾಯ್ಡುವನ್ನು ಓರೆಕಣ್ಣಿಂದ ನೋಡುತ್ತಿದ್ದೆ. ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ.

ತೆರೆ ಸರಿಯಿತು. ಮಯಸಭೆಯ ಸೀನು. ಚಿಟ್ಟಬ್ಬಾಯಿಯದೇ ದುರ್ಯೋಧನನ ಪಾತ್ರ. ಕಿರೀಟ, ಗದೆ, ಜರತಾರಿ ಅಂಗಿ ಫೋಕಸ್ ಲೈಟಿನಲ್ಲಿ ವಿಜೃಂಭಿಸುತ್ತಾ ನಿಜವಾದ ದುಯೋಧನನಂತೆ ಕಾಣುತ್ತಿದ್ದ. ಸ್ಟೇಜನ್ನು ಅಳೆಯುವವನಂತೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ದೊಡ್ಡ ದೊಡ್ಡ ಹೆಜ್ಜೆಗಳನ್ನಿಟ್ಟು ಒಂದೆರಡು ಸುತ್ತು ತಿರುಗಿ ' ಆಹಾ ಈ ಮಯನ ಶಿಲ್ಪ ಚಮತ್ಕಾರವೇನೋ ಕಾಣೆ..' ಅಂತ ಶುರುಮಾಡಿ ಸ್ವಲ್ಪ ಹೊತ್ತು ಗಡಗಡ ಡಗಡಗ ಏನೇನೋ ಹೇಳಿದ. ನನಗಂತೂ ಗೋಲಿಗಳನ್ನು ಡಬ್ಬಿಯಲ್ಲಿ ಹಾಕಿ ಅಲ್ಲಾಡಿಸಿದಂತೆನಿಸಿತು. ಆ ಮಾತುಗಳ ಮಧ್ಯದಲ್ಲಿಯೊಮ್ಮೆ ಗದೆಯೊಡನೆ ಠೀವಿಯಿಂದ ನಡೆಯುತ್ತಾ.. 'ಸೋಡ.. ಸೋಡ..' ಅಂತಂದ. ಅನ್ನುವದರೊಳಗೆ, ಸ್ಟೇಜಿನ ಪಕ್ಕವೇ ಇದ್ದ ನಾಯ್ಡು 'ಠಕಿಕ್' ಅಂತ ಸೋಡಾ ಒಡೆಯುವುದು, ಸ್ಟೇಜಿನ ಮೇಲೆ ಹೋಗಿ ಅದನ್ನು ಅವನಿಗೆ ಕೊಡುವುದು, ರೆಪ್ಪೆ ಬಡಿಯುವುದರೊಳಗೆ ಆಗಿಹೋಯ್ತು. ದುರ್ಯೋಧನ ಇಂಗು ತಿಂದ ಮಂಗನಂತೆ ಏನು ಮಾಡಬೇಕೋ ತಿಳಿಯದೆ ಆ ಗೊಂದಲದಲ್ಲಿ ಸೋಡಾ ತೆಗೆದುಕೊಂಡು ತಲೆಯೆತ್ತಿ ಸೋಡಾ ಕುಡಿಯಲು ಶುರುಮಾಡಿದ್ದೇ, ತಲೆಯ ಮೇಲಿದ್ದ ಕಿರೀಟ ಉದ್ದಕೂದಲಿನ ಚವರಿಯ ಸಮೇತ ನೆಲಕ್ಕೆ ಬಿದ್ದುಬಿಟ್ಟಿತು. ಚಿಟ್ಟಬ್ಬಾಯಿ ಬರೀ ಜರತಾರಿ ಅಂಗಿ ಮತ್ತು ಬೋಡು ತಲೆಯಲ್ಲಿ ಫೋಕಸ್ ಲೈಟಿನ ಮುಂದೆ ದಂಗು ಬಡಿದು ನಿಂತುಬಿಟ್ಟ. ಸ್ಟೇಜ್ ಮೇಲೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ನಾಯ್ಡು, ಜನರ ಕೇಕೆ, ಶೀಟಿ, ಚಪ್ಪಾಳೆಗಳು..ಮಹಾರಾಜ ಗದೆಯನ್ನು ಕೆಳಕ್ಕೆಸೆದು 'ನಿಂಗೆ ಬುದ್ದಿ ಅದಾ ಇಲ್ಲ' ಅಂತ ಗದರಿಸಿ ಬರುತ್ತಿದ್ದ ತೇಗನ್ನು ಸಂಭಾಳಿಸಿಕೊಂಡ. 'ನೀನೇ ಅಲ್ಲೇನು ಸೋಡ ಬೇಕು ಅಂದಿದ್ದು?' ಅಂತ ನಾಯ್ಡು ಮುಗ್ದವಾಗಿ ಕೇಳಿದ. 'ನಿನ್ನವ್ವನ.. ಸೋಡಸೋಪಚಾರ ಅನ್ನೋದಿಕ್ಕೆ ನಾನು ಸಾಯತಿದ್ರೆ, ನೀನು ಸ್ಟೇಜ್ ಮೇಲೆ ಬಂದು ಸೋಡಾ ಕೊಡ್ತೀಯ.. ನಾನು ನಿಂಗೇನು ಅಪಕಾರ ಮಾಡಿದ್ನಲೆ, ಮತ್ತೆ ಏಳಲಾರದಂಗೆ ಹೊಡತ ಕೊಟ್ಟಿಯಲ್ಲ..' ಅಂತ ಅಳುಬುರುಕು ಧ್ವನಿಯಲ್ಲಿ ಚಿಟ್ಟಬ್ಬಾಯಿ ಬೈಯಲಾರಂಭಿಸಿದ. ಅನ್ನಬಾರದ ಮಾತುಗಳ ಸಮೇತ ಎಲ್ಲವೂ ಮೈಕಿನಲ್ಲಿ ಜೋರಾಗಿ ಕೇಳಿಸಿದವು. ತೆರೆಯನ್ನೆಳೆದುಬಿಟ್ಟರು. ಆಗಲೇ ಸುತ್ತಲೂ ಲೈಟುಗಳು ಪಟಪಟನೆ ಬೆಳಗಿದವು. ಎಲ್ಲಾ ಬೆಳ್ಳನೆ ಬೆಳಕಿನಂತಾಯ್ತು. ನಾಟಕ ಅಲ್ಲಿಗೇ ನಿಂತುಹೋಯ್ತು. 'ಏನೋ ದೊಡ್ಡ ಯಜಮಾನನಂಗೆ ಮಾತಾಡ್ತಾನೆ.. ಮಯಸಭದಾಗೆ ಹಣ್ಣು, ಹಂಪಲು ಪಾನೀಯಗಳು ಎಲ್ಲಾ ಬರ್ತಾವಂತೆ.. ಹಂಗೇ ಸೋಡಾ ಬಂದರೆ ಇವನ ಗಂಟೇನು ಹೋಗ್ತದೆ.. ಕುಣಿಲಿಕ್ಕೆ ಬಾರದ ಸೂಳಿ ನೆಲ ಸೊಟ್ಟಗದೆ ಅಂದಂಗೆ ನನ್ನ ಮೇಲೆ ಎಗರಿ ಬರ್ತಾನೆ..' ನಾಯ್ಡು ಗೊಣಗುತ್ತಾ ಬಂಡಿಯ ಬಳಿ ಹೋದ. ಜನ ಗಲಾಟೆ ಮಾಡುತ್ತಾ ಎದ್ದರು. ನನ್ನ ಕಳ್ಳತನದ ಚಮತ್ಕಾರವನ್ನು ತೋರಿಸೋಣವೆಂದರೆ ಈ ರೀತಿಯಾಗಿ ಅದಕ್ಕೆ ತೆರೆಬಿತ್ತು. ಸೋಡಾ ಗೋಲಿ ಮತ್ತೆ ಮರ ಏರಿ ಕೂತಿತು.(ಮುಂದುವರಿಯುವುದು)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಂದು ಒಳ್ಳೆಯ ಸಣ್ಣ ಕಥೆಯನ್ನು ಓದಿ ಬಹಳ ದಿನಗಳೇ ಆಗಿತ್ತು. ಕಥೆಯ "plot" ನಲ್ಲಿ ಅಡಕವಾಗಿರುವ ಸಹಜ ಹಾಸ್ಯ ತುಂಬ ಚೆನ್ನಾಗಿದೆ. ಮುಂದಿನ ಭಾಗಕ್ಕೆ ಎದುರುನೋಡುತ್ತಿರುವೆ.

ಶ್ರೀಕಾಂತ್