ವಿಕಿಪೀಡಿಯಾಕ್ಕೆ ಲೇಖನ ಬರೆಯಿರಿ:ವಿದ್ಯಾರ್ಥಿಗಳಿಗೆ ಹೊಸ ಮನೆಕೆಲಸ

To prevent automated spam submissions leave this field empty.

ಉದಯವಾಣಿ 

(ಇ-ಲೋಕ-47)(6/11/2007)

ತರಗತಿಯಲ್ಲಿ ಕೆಲಸ ಕೊಟ್ಟರೆ,ಅಂತರ್ಜಾಲದ ಪುಟಗಳನ್ನು ಜಾಲಾಡಿ ಕೆಲಸ ಪೂರೈಸುವ ಚಾಳಿ ಇಂದು ಸಾಮಾನ್ಯ.ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಈ ಅಡ್ಡಹಾದಿಗೆ ಮದ್ದರೆಯಲು ಹೊಸ ಉಪಾಯ ಹುಡುಕಿದ್ದಾರೆ.ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಮಾತಿನಂತೆ ಅವರು ಮುಕ್ತ ವಿಶ್ವಕೋಶ ವಿಕಿಪೀಡಿಯಾದಲ್ಲಿ ತಮ್ಮ ಲೇಖನ ಬರೆದು ಪ್ರಕಟಿಸಲು ವಿದ್ಯಾರ್ಥಿಗಳಿಗೆ ಪಂಥಾಹ್ವಾನ ನೀಡುತ್ತಿದ್ದಾರೆ.ಕೊನೆ ಪಕ್ಷ ಇರುವ ಲೇಖನವನ್ನು ತಿದ್ದಿ ನೇರ್ಪುಗೊಳಿಸುವಲ್ಲಿ ಭಾಗವಹಿಸಬೇಕು ಎನ್ನುವ ಶರತ್ತೂ ಇದೆ.ಏನೇ ಆಗಲಿ ಲೇಖನಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಮಾತ್ರಾ ವಿದ್ಯಾರ್ಥಿಗಳ ಕೆಲಸಕ್ಕೆ ಅಂಗೀಕಾರ ಸಿಗುತ್ತದೆ. ಹೀಗೆ ವಿದ್ಯಾರ್ಥಿಗಳು ವಿಕಿಪೀಡಿಯಾವನ್ನು ಬೆಳೆಸುವಲಿ ನೆರವಾಗಲು ಪ್ರೋತ್ಸಾಹ ನೀಡುವುದರೊಂದಿಗೆ,ಅವರ ಬರವಣಿಗೆಯನ್ನು ಪಕ್ವಗೊಳಿಸುವ ಪ್ರಾಧ್ಯಾಪಕರ ಯೋಚನೆ ಚೆನ್ನಾಗಿದೆ ಎಂದಿರಾ?ನೀವೂ ಮಕ್ಕಳಿಗೆ ಇಂತಹದೇ ಕೆಲಸ ನೀಡುತ್ತೀರಾ?

ಬೆರಳ್ಗೆ ಬರುತ್ತೆ ಪೆಟ್ರೋಲ್!

ಚಿಕಾಗೋದ ಹತ್ತು ಗ್ಯಾಸೋಲಿನ್ ಬಂಕ್‍ಗಳಲ್ಲಿ ಗ್ಯಾಸ್ ಇಂಧನ ಭರ್ತಿಗೆ ಗ್ರಾಹಕರು ತಮ್ಮ ಬೆರಳಚ್ಚನ್ನು ನೀಡಿದರೆ ಸಾಕು. ಇಂಧನ ಬಂಕ್‍ಗಳಲ್ಲಿ ಸ್ಥಾಪಿಸಲಾದ ಜೈವಿಕ ಚಹರೆ ಗುರುತು ಹಚ್ಚುವ ಸಾಧನ ಬೆರಳಚ್ಚಿನ ಆಧಾರದಲ್ಲಿ ಜನರನ್ನು ಗುರುತಿಸುತ್ತದೆ.ಈ ಯಂತ್ರಗಳು ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಖಾತೆ ಮತ್ತು ಚಾಲ್ತಿ ಖಾತೆಗೆ ಸಂಪರ್ಕ ಹೊಂದಿರುತ್ತದೆ. ಖಾತೆಯಲ್ಲಿ ಹಣವಿದ್ದರಷ್ಟೆ,ಇಂಧನ ಹಾಕಲು ಸಾಧ್ಯ.ಗ್ರಾಹಕರು ಸುಲಭದಲ್ಲಿ ತಮ್ಮ ಕೆಲಸ ಮುಗಿಸುವುದೇ ಈ ಬದಲಾವಣೆಯ ಉದ್ದೇಶ.ಈ ಹೊಸ ಸೇವೆ ಪಡೆಯಲು ಮೊದಲಾಗಿ ಬೆರಳಚ್ಚು ನೀಡಿ,ಖಾತೆಗೆ ಬೆರಳಚ್ಚನ್ನು ಪ್ರವೇಶ ಪಡೆಯುವ ಚಹರೆಯೆಂದು ದಾಖಲಿಸಬೇಕಾಗುತ್ತದೆ.ಜೈವಿಕ ಚಹರೆ ಪಡೆಯುವ ಸಾಧನವನ್ನು ಪೇಬೈಟಚ್ ಎಂಬ ಕಂಪೆನಿ ತಯಾರಿಸಿದ್ದು,ಸದ್ಯ ಶೆಲ್ ಕಂಪೆನಿ ತನ್ನ ಬಂಕ್‍ಗಳಲ್ಲಿ ಇವನ್ನು ಪ್ರಾಯೋಗಿಕವಾಗಿ ಬಳಸುತ್ತಿದೆ.ಗ್ರಾಹಕರ ಮನ ಗೆದ್ದು ಇತರ ಬಂಕ್‍ಗಳಿಂದ ಅವರನ್ನು ತಮ್ಮೆಡೆ ಸೆಳೆದು,ಅವರನ್ನು ತಮ್ಮಲ್ಲೇ ಉಳಿಸಿಕೊಳ್ಳಲು,ತಾಜಾ ಸುದ್ದಿಗಳನ್ನು ತಮ್ಮ ಬಂಕ್‍ಗಳ ಫಲಕಗಳಲ್ಲಿ ಪ್ರದರ್ಶಿಸುವಂತಹ ಸೇವೆಯನ್ನೂ ಅದು ನೀಡುತ್ತಿದೆ.ಈ ಆಧುನಿಕ ಸವಲತ್ತುಗಳನ್ನು ಸ್ಥಾಪಿಸಲು ಶೆಲ್ ಕಂಪೆನಿ ಮಾಡುವ ಖರ್ಚು ವ್ಯಾವಹಾರಿಕವೇ,ಗ್ರಾಹಕರ ನಿಷ್ಠೆಯನ್ನು ಉಳಿಸುವಲ್ಲಿ ಅಂತಹ ಗಿಮಿಕ್‍ಗಳು ಯಶಸ್ವಿಯಾದಾವೇ ಎನ್ನುವುದನ್ನು ಸಮಯವೇ ಹೇಳಬೇಕು.

ಎರಡು ಕನ್ನಡಿಯುಳ್ಳ ದೂರದರ್ಶಕ

 ದೂರದರ್ಶಕದಲ್ಲಿ ವಿಶ್ವದ ಇತರ ಆಕಾಶಕಾಯಗಳಿಂದ ಬರುವ ಬೆಳಕನ್ನು ಸೆರೆ ಹಿಡಿಯಲು ಕನ್ನಡಿಗಳು ಇರುತ್ತವೆ.ಅದರ ವ್ಯಾಸ ಹೆಚ್ಚಿದಷ್ಟೂ ಒಳ್ಳೆಯದು. ಆದರೆ ವಿಶಾಲ ಕನ್ನಡಿಯನ್ನು ತಯಾರಿಸುವುದು ಒಂದು ಸಮಸ್ಯೆಯಾದರೆ,ಅದು ಒಡೆಯದಂತೆ ದೂರದರ್ಶಕ ಸ್ಥಾಪಿಸುವಲ್ಲಿಗೆ ಸಾಗಿಸುವುದು ಮತ್ತೊಂದು ಸವಾಲು. ಎಂಟು ಮೀಟರ್ ವ್ಯಾಸದ ದೂರದರ್ಶಕಗಳೇ ಈಗಿನ ಮಿತಿ. ದೂರದರ್ಶಕದಲ್ಲಿ ಎರಡು ಕನ್ನಡಿಗಳನ್ನು ಬಳಸುವ ಮೂಲಕ ಅಧಿಕ ವ್ಯಾಸದ ಕನ್ನಡಿ ಬಳಸಿದ ಪರಿಣಾಮವನ್ನು ಪಡೆಯುವ ವಿಧಾನ ಸಂಶೋಧಿಸಿ ಈಗಲೇ ಇಪ್ಪತ್ತು ವರ್ಷ ಸಂದಿದೆ. ಆದರೆ ಅಂತಹ ದೂರದರ್ಶಕದ ಸ್ಥಾಪನೇ ಇನ್ನೂ ಆಗಬೇಕಿದೆ.ಅರಿಜೋನಾದಲ್ಲಿ ಈ ವಿಶಾಲ ಎರಡು ಕನ್ನಡಿಯ ದೂರದರ್ಶಕ ತಯಾರಾಗುತ್ತಿದೆ. ಎರಡು ಎಂಟು ಮೀಟರ್ ವ್ಯಾಸದ ಕನ್ನಡಿಗಳು ಜತೆಯಾಗಿ ಹನ್ನೊಂದು ಮೀಟರ್ ಕನ್ನಡಿ ನೀಡುವ ನೋಟವನ್ನು ನೀಡಲಿವೆ. ದೂರದ ಆಕಾಶಕಾಯಗಳಿಂದ ಬರುವ ಬೆಳಕು ಭೂಮಿಯ ವಾತಾವರಣ,ಗಾಳಿಯ ಕಾರಣದ ಕನ್ನಡಿಯ ತೊನೆದಾಟ ಇವು ನೋಟವನ್ನು ಮಸುಕಾಗಿಸುತ್ತದೆ. ಕನ್ನಡಿಯ ತೊನೆದಾಟವನ್ನು ನಿಯಂತ್ರಿಸಲು ಅಯಸ್ಕಾಂತದ ಆಧಾರ ಕನ್ನಡಿಗಿದೆ.ಕಂಪ್ಯೂಟರ್ ದೃಶ್ಯವನ್ನು ವಿಶ್ಲೇಶಿಸುವ ಮೂಲಕ ದೂರದರ್ಶಕದ ನೋಟವನ್ನು ನೆರ್ಪುಗೊಳಿಸುವ ವ್ಯವಸ್ಥೆ ಇದರಲ್ಲಿದೆ.ಬಾಹ್ಯಾಕಾಶದಲ್ಲಿರುವ ದೂರದರ್ಶಕ ಹಬಲ್‍ಗೆ ಹೋಲಿಸಿದರೆ ಈ ದೂರದರ್ಶಕದ ಸ್ಪಷ್ಟತೆ ಹತ್ತು ಪಟ್ಟು ಅಧಿಕ.ಹಬಲ್ ದೂರದರ್ಶಕ ಬರೇ ಎಂಟಡಿಯ ಕನ್ನಡಿ ಹೊಂದಿದೆ. ಆದರೆ ಅದು ಬಾಹ್ಯಾಕಾಶದಲ್ಲಿರುವುದರಿಂದ ಇದುವರೆಗಿನ ಅತ್ಯುತ್ತಮ ಚಿತ್ರಗಳನ್ನು ಅದು ಸೆರೆ ಹಿಡಿದಿದೆ.ಹೊಸ ದೂರದರ್ಶಕದ ಮೂಲಕ ಭೂಮಿಯಿಂದ ಒಂಭೈನೂರು ಮಿಲಿಯನ್ ಪ್ರಕಾಶ ವರ್ಷ ದೂರದ ಕಾಯಗಳಿಂದಲೂ ಮಾಹಿತಿ ಪಡೆಯುವ ಕನಸು ವಿಜ್ಞಾನಿಗಳದ್ದು.ಪ್ರಖರ ನಕ್ಷತ್ರದ ಮರೆಯಲ್ಲಿರುವ ಮಸುಕು ಆಕಾಶಕಾಯವನ್ನೂ ನೋಡುವ ವ್ಯವಸ್ಥೆ ಇದರಲ್ಲಿರುವುದು ದೂರದರ್ಶಕದ ಮತ್ತೊಂದು ವಿಶೇಷ. ಜವಾಬ್ದಾರಿ ಅರಿತು ನಡೆಯುವಲ್ಲಿ ಟಾಪ್‍ಟೆನ್ ಕಂಪೆನಿಗಳು ಬಿ.ಪಿ. ಕಂಪೆನಿ ವಿಶ್ವದ ಎರಡನೆಯ ದೊಡ್ಡ ಕಂಪೆನಿ.ಆದರೆ ಜವಾಬ್ದಾರಿ ಅರಿತು ನಡೆವ ಕಂಪೆನಿಗಳ ಪಟ್ಟಿಯಲ್ಲಿದಕ್ಕೆ ಅಗ್ರಸ್ಥಾನ.ಗಾಳಿ,ಸೌರಶಕ್ತಿಯನ್ನು ಬಳಸಿಕೊಳ್ಳುವ ತಂತ್ರಜ್ಞಾನ ಅಭಿವೃಧ್ಧಿ ಪಡಿಸುವ ಕೆಲಸವನ್ನಿದು ಮಾಡುತ್ತಿದೆ.ಮುಖ್ಯವಾಗಿ ವಿಶ್ವದಾದ್ಯಂತ ತೈಲಕ್ಷೇತ್ರಗಳನ್ನು ತ್ವರಿತ ಗತಿಯಲ್ಲಿ ಉತ್ಪಾದನೆಗೆ ಅಣಿಗೊಳಿಸಿ,ಜನಸಾಮಾನ್ಯರಿಗೆ ತೈಲ ದುಬಾರಿಯಾಗದಂತೆ ನೋಡಿಕೊಳ್ಳುವ ಕಂಪೆನಿಯ ಯತ್ನ ಪ್ರಶಸ್ತಿಗಿಟ್ಟಿಸಿದೆ.ಪಟ್ಟಿಯಲ್ಲಿ ಎರಡನೆಯ ಸ್ಥಾನ ಇಂಗ್ಲೆಂಡಿನ ಬರ್ಕ್ಲೇಸ್ ಬ್ಯಾಂಕಿಗೆ.ಪರಿಸರಕ್ಕೆ ಹಾನಿ ತರುವ ಯೋಜನೆಗಳಿಗೆ ಅಥವ ಮೂಲ ನಿವಾಸಿಗಳನ್ನು ಸ್ಥಳಾಂತರಿಸುವ ಯೋಜನೆಗಳಿಗೆ ಕಂಪೆನಿ ಸಾಲ ಕೊಡದು.ಜತೆಗೆ ಜನರಿಗೆ ಹೊರೆಯಾಗದ ಬಡ್ಡಿದರ ವಿಧಿಸುವ ಸ್ವನಿಯಂತ್ರಣವನ್ನಿದು ಪಾಲಿಸುತ್ತಿದೆ.ಅದರ ವ್ಯವಹಾರ ಪಾರದರ್ಶಕವೆಂಬ ಹೆಗ್ಗಳಿಕೆ ಬೇರಿದೆ.ಮೂರನೆಯ ಸ್ಥಾನ ಇಎನೈ ಎಂಬ ಇಟೆಲಿಯ ತೈಲ ಕಂಪೆನಿಗೆ.ತನ್ನ ರಿಫೈನರಿಯನ್ನು ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸುವಂತೆ ಮಾಡಿದ ಅಗ್ಗಳಿಕೆ ಕಂಪೆನಿಯದು.ಎಚ್‍ಎಸ್‍ಬಿಸಿ ಬ್ಯಾಂಕ್ ಪರಿಸರಕ್ಕೆ ಹಾನಿ ಮಾಡುವ ಯೋಜನೆಗಳಿಗೆ ಸಾಲ ನೀಡಲು ನಿರಾಕರಿಸಿ,ಪರ್ಯಾಯ ಶಕ್ತಿ ಮೂಲಗಳನ್ನು ಬಳಸಿಕೊಳುವ ಯೋಜನೆಗಳಿಗೆ ಕಡಿಮೆ ಬಡ್ಡಿದರ ವಿಧಿಸಿ ನಾಲ್ಕನೇ ಸ್ಥಾನ ಪಡೆದಿದೆ.ವೊಡಾಫೋನ್ ಕಂಪೆನಿ ವಿಶ್ವಬ್ಯಾಂಕ್ ಜತೆ ಸೇರಿ ಆಫ್ರಿಕಾದ ಜನರಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ನೀಡಲು ಶ್ರಮಿಸುತ್ತಿರುವುದರ ಜತೆಗೆ, ಇಂಗ್ಲೆಂಡಿನಲ್ಲಿ ರೋಗಿಗಳಿಗೆ ಔಷಧಿ ಸೇವಿಸಲು ನೆನಪಿಸಲು ಕಿರುಸಂದೇಶ ಕಳುಹಿಸುವಂತಹ ವಿನೂತನ ಸೇವೆ ನೀಡುತ್ತಿದೆ.

*ಅಶೋಕ್‍ಕುಮಾರ್ ಎ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಪದ ಬಳಗದ ಎಚ್ ಆರ್ ವೆಂಕಟೇಶ್ ಹಲವಾರು ಲೇಖನಗಳನ್ನು ವಿಕಿಪೀಡಿಯಾಕ್ಕೆ ಸೇರಿಸಿದ್ದಾರಂತೆ.
ರಾಧಾತನಯ ಅವರ ಕಾವ್ಯನಾಮ. ಅವರ ಲೇಖನಗಳ ಪಟ್ಟಿ:
೧. ವಿದುರಾಶ್ವತ್ಥ.
೨. ಪ್ರೊ. ಹಿರಿಯಣ್ಣ.
೩. ಡಾ. ರಾಮಕೃಷ್ಣರಾವ್
೪. ಪ್ರೊ. ಎಚ್. ಆರ್. ರಾಮಕೃಷ್ಣರಾಯರು.
೫. ಆಲ್ ಗೊರ್, ಮತ್ತು ಪಚೌರಿ, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು.
೬. ಡೊರಿಸ್ ಲೆಸ್ಸಿಂಗ್ ನೋಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ.
೭. ಡಾ. ಬಾಲಮುರಳಿಕೃಷ್ಣ.
೮. ಸಂಪ್ರದಾಯದ ಹಾಡುಗಳ ರಾಧಮ್ಮನವರು.
೯. ಹೆಜ್ಜೆಕೃಶ್ಟರಾಯರು.
೧೦.ಶ್ಯಾನುಭೋಗ್ ತಿಮ್ಮಪ್ಪಯ್ಯನವರು.
೧೧. ಡಾ. ಮರಿಗೌಡ.
೧೨. ಡಾ. ಮನಮೋಹನ್ ಅತ್ತಾವರ್
೧೩. ಡಾ ಕ್ರುಂಬಿಗಲ್
೧೪. ಜಾನ್ ಕ್ಯಾಮರಾನ್
೧೫. ಬಾಳೀಕಾಯಿ
೧೬. ಬಾಬಿ ಜಿಂದಾಲ್
೧೭. ರಾಗಿ ಬೆಳೆ.
೧೮. ಬಾಲಕೃಷ್ಣನಿಡ್ವಣ್ಣಾಯ ಮತ್ತು ಸತ್ಯಭಾಮಾ ನಿಡ್ವಣ್ಣಾಯ.
೧೯. ಚಿದಂಬರ ಸ್ವಾಮಿಗಳು.
೨೦. ಶ್ರೀ. ಶ್ರೀ. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು.
೨೧. ಭಾರತಿ ತೀರ್ಥ ಮಹಾಸ್ವಾಮಿಗಳು.
೨೨. ಯಾಮಿನಿ ಕೃಷ್ಣಮೂರ್ತಿ. ಇತ್ಯಾದಿ
ಓದಿ ನೋಡಿ
*ಅಶೋಕ್

ಧನ್ಯವಾದಗಳು, ಅಶೋಕ್,

ಕೆಲವು, ಹಳೆಯ ಲೇಖನಗಳನ್ನು ಸಂಪಾದಿಸಿದ್ದೇನೆ. ಉದಾ; ಮಾನ್ಯ ಮುಖ್ಯಮಂತ್ರಿ, ಶ್ರೀ ಯಡಿಯೂರಪ್ಪನವರು, ಡಾ. ಅಮೂರ, ಡಾ. ಎಲ್. ಎಸ್. ಶೆಷಗಿರಿರಾವ, ಕೈಲಾಸಂ, ಇತ್ಯಾದಿ.
ಕೆಲವು ಚುಟುಕು ಲೇಖನಗಳನ್ನು ಬರೆದಿದ್ದೇನೆ. ಉದಾ : ಕೃಂಬಿಗಲ್ ರಸ್ತೆ, ರಾಗಿಮುದ್ದೆ, ರಾಗಿಬೆಳೆ, ವಿದ್ಯಾರ್ಥಿಭವನ್, ಗಾಂಧಿಬಜಾರ್, ಅಕ್ಕಿಹೆಬ್ಬಾಳು, ವಿ.ಬಿ. ಬೆಕರಿ, ಇತ್ಯಾದಿ.
ಒಟ್ಟು ಎಲ್ಲಾ ಸೇರಿ, ೫೦ ವ್ಯಕ್ತಿಚಿತ್ರಗಳಿಗೂ ಮೀರಿದೆ. ನನಗೆ ಖುಷಿಕೊಟ್ಟ ಕೆಲಸಗಳಲ್ಲಿ ಇದೊಂದು !
ಇನ್ನೊಂದು.......?????

ಸಂಪದಕ್ಕೆ, ಪ್ರತಿದಿನ ಬರೆಯುವ ಎರಡು ಸಾಲುಗಳು- ಚಿತ್ರಪುಟಕ್ಕೆ. ಅವು ಯಾಹೂ ಅವರ್ ಸಿಟಿ, ಬೆಂಗಳೂರ್ ನ

ಮೊದಲ ಪುಟದಲ್ಲಿ ಪ್ರಕಟವಾದಾಗ, ಏನೊ ಆನಂದ !

ಹರಿಯವರಿಗೆ, ಧನ್ಯವಾದಗಳು.