ಮಗು - ನಗು

To prevent automated spam submissions leave this field empty.

ಮಗು - ನಗು
*********

ಮಗುವೆ ನೀನು ನಗುತಲಿರಲು
ಗೆಜ್ಜೆ ಘಲಿರು ಉಲಿಯುತಿರಲು
ಗಿಲಕಿ ಗಿಲಿರು ಗೀತವಿರಲು
ಬದುಕು ಬೆಳಕು ಬೆಳದಿಂಗಳು.

ಕಣ್ಣಿನಂದ ನೋಟ ಹೊಳಪು
ಕೆನ್ನೆ ನೋಡಿ ಎಷ್ಟು ನುಣುಪು!
ಕಾಲು ಬಡಿವ ಆಟ ಹುರುಪು
ಮುಗ್ಧ ಮನವು ಹಾಲು ಬಿಳುಪು.

ಅಂಬೆಗಾಲ ನಂದಲಾಲ
ಬೆಣ್ಣೆ ಮೆದ್ದ ತುಂಟಬಾಲ
ಕಣ್ಣಲೇಕೆ ನೀರ ಜಾಲ?
ಕೊಡಲೊಲ್ಲಳೆ ತಾಯಿ ಹಾಲ?

ಬೆಣ್ಣೆಗೆನ್ನೆ ಹಾಲುಗಲ್ಲ
ಜೇನುಹೊಳೆಯು ತುಟಿಯಲೆಲ್ಲ
ಎಂಥ ಸೊಗಸು ಕಾಣಿರೆಲ್ಲ
ಸುಳ್ಳು ಸುಳ್ಳೇ ಅಳುವ ಮಳ್ಳ.

ಬೊಚ್ಚುನಗು ಬಾಯಿತುಂಬ
ಹಚ್ಚಿದಂತೆ ದೀಪಸ್ತಂಭ.
ಚುಕ್ಕಿ ಚೆಲ್ಲಿ ಬಾನತುಂಬ
ಚಂದ್ರಮ ನಿನ್ನ ಪ್ರತಿಬಿಂಬ.

- ೦ -

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಕ್ಕತ್
ಬೊಚ್ಚ ಬಾಯಿ ಗೊತ್ತು. ಬೊಚ್ಚ ನಗು ಕೂಡ ಉಂಟೇ?

ಬೆಣ್ಣೆಗೆನ್ನೆ, ಹಾಲುಗಲ್ಲ ... ಇಲ್ಲಿ ಹಾಲುಗಲ್ಲ ಅಂದ್ರೆ ಹಾಲುಹಲ್ಲುಗಳು ಅಂತನಾ ಅತವ ಹಾಲುಗಲ್ಲ ಅಂದ್ರೆ ಹಾಲಿನಂತ ಗಲ್ಲ(ಕೆನ್ನೆ?) ಉಳ್ಳವರು ಅಂತನಾ? ...ನನಗೆ ಗೊಂದಲವಾಗಿದೆ :(
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ವೈಭವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಬೊಚ್ಚುನಗು = ಬೊಚ್ಚುಬಾಯಿಯ ನಗು, ಸ್ವಲ್ಪ ಕವಿಸ್ವಾತಂತ್ರ್ಯ ಉಪಯೋಗಿಸಿ ಹೊಸ ಪದ ಬರೆದೆ.
ತಪ್ಪಾಯ್ತೇ ? ನಿಮ್ಮ ಅಡಿಬರಹ ನೋಡಿ :-) ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು, ಸೊಗಡು.
ಬೊಚ್ಚುನಗು ಅಚ್ಚಗನ್ನಡದ ಒರೆ ಅಲ್ಲವೇ? :-)

ಹಾಲುಗಲ್ಲ = ಹಾಲಿನಂತ ಗಲ್ಲ. ಗಲ್ಲ ಅಂದರೆ ಕೆನ್ನೆ ಅಲ್ಲ . ಎರಡು ಕೆನ್ನೆ ಸೇರುವ ತುಟಿಯ ಕೆಳಗಿನ ಭಾಗ.

ಪೂರ್ಣಿಮಾರವರೆ,
ಪದ್ಯ ತುಂಬಾ ಚೆನ್ನಾಗಿದೆ. ಮಗುವಿನ ಬಗ್ಗೆ ಬರೆದ ನಿಮ್ಮ ಇತರ ಪದ್ಯಗಳೂ ಇಷ್ಟವಾದವು.

[quote=poornimas]ಗಲ್ಲ ಅಂದರೆ ಕೆನ್ನೆ ಅಲ್ಲ . ಎರಡು ಕೆನ್ನೆ ಸೇರುವ ತುಟಿಯ ಕೆಳಗಿನ ಭಾಗ[/quote]
ಎರಡು ಕೆನ್ನೆ ಸೇರುವ ತುಟಿಯ ಕೆಳಗಿನ ಭಾಗಕ್ಕೆ ಗದ್ದ ಎನ್ನುತ್ತಾರೆ, ಗಲ್ಲ ಅಲ್ಲ!

ನಮ್ಮ ಕಡೆ ಚೀಕ್ = ಕೆನ್ನೆ, ಚಿನ್ = ಗಲ್ಲ. ಗದ್ದ ಪದ ವಾಡಿಕೆಯಲ್ಲಿಲ್ಲ.

ನಿಮಗೆ ಪದ್ಯ ಇಷ್ಟವಾದದ್ದು ಸಂತೋಷ.

ನಮ್ಮ ಕಡೆ ಚೀಕ್ = ಕೆನ್ನೆ, ಚಿನ್ = ಗಲ್ಲ. ಗದ್ದ ಪದ ವಾಡಿಕೆಯಲ್ಲಿಲ್ಲ.

ತಪ್ಪು ಅಂತ ನಾನು ಹೇಳಿದೆನೆ? :) ನನ್ನ ಗೊಂದಲವನ್ನು ಹಂಚಿಕೊಂಡೆ.

ಬೊಚ್ಚುನಗು ಸಕ್ಕತ್ ಒರೆ ..ಇದು ನಿಮ್ಮ ನೆಗೞ್ಚು.. ಆದ್ದರಿಂದ ಕೇಳಿದೆ. ಹಾಗೆಯೆ ಇದು ಕೆಲವು ಕಡೆ ಆಡುಮಾತಿನಲ್ಲಿ ಬಳಕೆಯಲ್ಲಿರಬಹುದೇನೊ ಅಂತ ಕೇಳಿದೆ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮ್ಮ ಗೊಂದಲದಲ್ಲಿ ತಪ್ಪೇನಿಲ್ಲ ಬಿಡಿ. ಹೊಸ ಪದ ನೋಡಿ, ಹಾಗಾಗಿ ಏನಾದರೂ ನಾನು ತಪ್ಪು ಮಾಡಿರುವೆನೇನೋ ಅನ್ನಿಸ್ತು. ಅದರಿಂದ ಕೇಳಿದೆ, ಸ್ವಲ್ಪ ಹಗುರವಾಗಿ ಬರೆದೆನಷ್ಟೆ.

ನೀವು ಹೇಳಿದಂತೆ ’ಬೊಚ್ಚುನಗು’- ಕೆಲವು ಕಡೆ ಬಳಕೆಯಲ್ಲಿದ್ದರೆ ಅಚ್ಚರಿಯೇನಿಲ್ಲ !

ಕನ್ನಡದಲ್ಲಿ ಚಿನ್ ಎಂಬ ಇಂಗ್ಲೀಷ್ ಶಬ್ಧಕ್ಕೆ ಗದ್ದ ಎನ್ನುವುದುಂಟು. ಚೀಕ್ ಎಂಬುದಕ್ಕೆ ಗಲ್ಲ ಎನ್ನುವುದು ವಾಡಿಕೆ. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ. ಅದಲು ಬದಲಾಗುವುದುಂಟು.

- ನಾಸೋ

ವಂದನೆಗಳು ಸಾರ್. ನಿಮ್ಮ ಕಾರ್ಯಕ್ರಮಗಳನ್ನು ನಾವು ದೂರದರ್ಶನದಲ್ಲಿ ನೋಡುತ್ತಿದ್ದೆವು, ಧನ್ಯವಾದಗಳು.

ನಮ್ಮ ಕಡೆ ಚೀಕ್ = ಕೆನ್ನೆ, ಚಿನ್ = ಗಲ್ಲ. ಗದ್ದ ಪದ ವಾಡಿಕೆಯಲ್ಲಿಲ್ಲ. ಆದರೆ ನೀವು ಹೇಳಿದ ವ್ಯತ್ಯಾಸವನ್ನು ನಾನೂ ಗಮನಿಸಿದ್ದೇನೆ.