ಮೊಪಾಸಾ: ಹೆಂಡತಿ ಹೇಳಿದ ಕತೆ

To prevent automated spam submissions leave this field empty.

ಈಗ ನೀವು ಓದುತ್ತಿರುವ ಕತೆ ಹತ್ತೊಂಬತ್ತನೆಯ ಶತಮಾನದ್ದು. ಒಬ್ಬ ಹೆಂಗಸು ತನ್ನ ಗೆಳೆಯನಿಗೆ ಬರೆದ ಪತ್ರದ ರೂಪದಲ್ಲಿದೆ. ವಿವರಗಳನ್ನು ಆಮೇಲೆ ಹೇಳುತ್ತೇನೆ.
ಗೆಳೆಯಾ,
ನನ್ನ ಬದುಕಿನ ಸುಂದರ ನೆನಪುಗಳನ್ನು ಹೇಳುವಂತೆ ಕೇಳಿದ್ದೀಯ. ನನಗೀಗ ವಯಸ್ಸಾಗಿದೆ. ನಂಟರಿಲ್ಲ. ಮಕ್ಕಳೂ ಇಲ್ಲ. ನನ್ನ ನೆನಪುಗಳನ್ನು ಈಗ ನಿಜವಾಗಿ ಹೇಳಬಹುದು. ಆದರೆ ಹೆಸರುಗಳನ್ನು ಹೇಳುವ ಧೈರ್ಯವಿಲ್ಲ.
ಎಲ್ಲರೂ ನನ್ನ ಬಗ್ಗೆ ಪ್ರೀತಿ ತೋರಿಸುತ್ತಿದ್ದರು. ಅದು ನಿನಗೂ ಗೊತ್ತು. ನೋಡುವುದಕ್ಕೆ ನಾನು ತುಂಬ ಚೆನ್ನಾಗಿದ್ದೆ. ಈಗಂತೂ ಮುದುಕಿ. ದೇಹಕ್ಕೆ ಉಸಿರು ಹೇಗೆ ಬೇಕೋ ಹಾಗೆ ನನ್ನ ಆತ್ಮಕ್ಕೆ ಪ್ರೀತಿ ಬೇಕಾಗಿತ್ತು. ನನ್ನನ್ನು ಪ್ರೀತಿ ಮಾಡುವವರು, ಮೆಚ್ಚಿಕೊಳ್ಳುವವರು, ನೋಡಿಕೊಳ್ಳುವವರು ಸದಾ ನನ್ನೊಡನೆ ಇರಬೇಕು ಅನ್ನಿಸುತ್ತಿತ್ತು. ಇಲ್ಲದಿದ್ದರೆ ಸತ್ತು ಹೋಗುವುದೇ ವಾಸಿ ಅಂದುಕೊಳ್ಳುತ್ತಿದ್ದೆ.
ಹೆಂಗಸರು ಜೀವನದಲ್ಲಿ ಒಮ್ಮೆ ಮಾತ್ರ ಪ್ರೀತಿಸುತ್ತಾರೆ ಅಂತ ಹೇಳುತ್ತಾರಲ್ಲ ಅದು ಸುಳ್ಳು. ನನ್ನ ಮನಸ್ಸಿನಲ್ಲಿ ಅನೇಕ ಬಾರಿ ತೀವ್ರವಾದ ಪ್ರೀತಿ ಹುಟ್ಟಿತ್ತು. ಪ್ರತಿ ಬಾರಿಯೂ ಈ ಪ್ರೀತಿಯ ಆನಂದ ಅನಂತ ಅನ್ನಿಸಿತ್ತು. ಆದರೆ ಎಣ್ಣೆ ತೀರಿದ ದೀಪದಂತೆ ಆ ಪ್ರೀತಿಗಳೂ ಸಹಜವಾಗಿಯೇ ನಂದಿ ಹೋದವು.
ನಾನು ಮುಗ್ಧಳಾಗಿದ್ದಾಗ ಮಾಡಿದ ಒಂದು ಸಾಹಸ ಹೇಳುತ್ತೇನೆ. ಅದು ಶುರು. ಆಮೇಲೆ ಅಂಥವು ಎಷ್ಟೋ ಮಾಡಿದೆ.
ಮದುವೆಯಾಗಿ ವರ್ಷವಾಗಿತ್ತು. ಗಂಡ ಶ್ರೀಮಂತ. ತುಂಬ ದೊಡ್ಡ ಮನೆತನ. ಆದರೆ ನನಗೆ ಅವನ ಮೇಲೆ ಪ್ರೀತಿ ಇರಲಿಲ್ಲ. ನಿಜವಾದ ಪ್ರೀತಿ ಹುಟ್ಟುವುದಕ್ಕೆ ಸ್ವಾತಂತ್ರ್ಯ ಇರಬೇಕು, ಅಡ್ಡಿ ಆತಂಕಗಳೂ ಇರಬೇಕು. ನನಗಂತೂ ಹಾಗನ್ನಿಸುತ್ತದೆ. ಸ್ನೇಹಿತರು, ದೊಡ್ಡವರು, ನಂಟರು ಎಲ್ಲರೂ ಸೇರಿ ಮಾಡಿದ ಮದುವೆಯಿಂದ ಪ್ರೀತಿಯನ್ನು ಬಲವಂತವಾಗಿ ಹೇರಿದ ಹಾಗಾಗುತ್ತದೆ. ಧರ್ಮ, ಆಶೀರ್ವಾದ, ಕಾನೂನು ಇವುಗಳ ಸಮ್ಮತಿಯನ್ನು ಪಡೆದು ಹುಟ್ಟುವ ಪ್ರೀತಿ ಪ್ರೀತಿಯೇ ಅಲ್ಲ. ಕಾನೂನು ಬದ್ಧ ಚುಂಬನಕ್ಕಿಂತ ಕದ್ದು ಪಡೆದ ಮುತ್ತಿಗೆ ರುಚಿ ಹೆಚ್ಚು.
ನನ್ನ ಗಂಡ ಎತ್ತರವಾಗಿದ್ದ. ಗಂಭೀರವಾಗಿದ್ದ. ತುಂಬ ಸಭ್ಯನಾಗಿದ್ದ. ಅವನ ವರ್ತನೆಯಲ್ಲಿ ಯಾವ ಕುಂದೂ ಇರಲಿಲ್ಲ. ಆದರೆ ಜಾಣನಲ್ಲ. ತನಗೆ ಅನ್ನಿಸಿದ್ದನ್ನು ಮುಚ್ಚು ಮರೆ ಇಲ್ಲದೆ ಹೇಳಿಬಿಡುತ್ತಿದ್ದ. ಅವನ ಮಾತು ಕತ್ತಿಯ ಅಲುಗಿನ ಹಾಗೆ. ದಾಕ್ಷಿಣ್ಯ ಇರಲಿಲ್ಲ. ಕತ್ತರಿಸಿಬಿಡುತ್ತಿತ್ತು. ತನ್ನ ಅಪ್ಪ ಅಮ್ಮ ಹೇಳಿದ ಮಾತುಗಳನ್ನೇ ಅವನೂ ಆಡುತ್ತಿದ್ದನೋ ಏನೋ ಅನ್ನಿಸುತ್ತಿತ್ತು. ಅವನ ಅಪ್ಪ ಅಮ್ಮ ಆ ಮಾತುಗಳನ್ನು ಬಹುಶಃ ತಮ್ಮ ಹಿರಿಯರಿಂದ ಕಲಿತಿದ್ದಿರಬಹುದು. ನನ್ನ ಗಂಡನಿಗೆ ಯಾವ ವಿಷಯದ ಬಗೆಗೂ ಅನುಮಾನ, ಆತಂಕ ಅನ್ನುವುದೇ ಇರಲಿಲ್ಲ. ಸಂಗತಿ ಯಾವುದಾದರೂ ಸರಿ ತನ್ನ ತಲೆಯೊಳಗೆ ಸದಾ ಸಿದ್ಧವಾಗಿರುವ ವಿಚಾರಗಳನ್ನು ತಟ್ಟನೆ ಆಡಿಬಿಡುತ್ತಿದ್ದ. ಇರುವ ಸಂಗತಿಯನ್ನು ಬೇರೆ ಬೇರೆ ಥರ ನೋಡಬಹುದು ಅನ್ನುವುದು ಅವನಿಗೆ ತಿಳಿದೇ ಇರಲಿಲ್ಲ. ಮನೆಯ ಕಿಟಕಿಗಳನ್ನು ತೆರೆದಿದ್ದರೆ ಗಾಳಿ ಆಡುತ್ತಾ ಹಿತವಾಗಿರುವಹಾಗೆಯೇ ಮನಸ್ಸನ್ನು ತೆರೆದುಕೊಂಡಿದ್ದರೆ ಹೊಸ ವಿಚಾರಗಳು ಸುಳಿಯುತ್ತಾ ಲವಲವಿಕೆ ಇರುತ್ತದೆ. ಆದರೆ ನನ್ನ ಗಂಡನ ಮನಸ್ಸಿನ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು.
ನಾವಿದ್ದ ಮನೆ ದೊಡ್ಡದು. ಊರಿನ ಆಚೆ ಇತ್ತು. ಮನೆಯ ಸುತ್ತ ದೊಡ್ಡ ಮರಗಳು ಬೆಳೆದಿದ್ದವು. ಕಟ್ಟಡ ಹಳೆಯದು. ಬೇಸರದ ದೊಡ್ಡ ಮುದ್ದೆಯಂತಿತ್ತು. ಮನೆಯ ಮುಂದೆ ಬೆಳೆದ ಹುಲ್ಲು ಒಣಗಿ, ಬೆಳ್ಳಗಾಗಿ ಮುದುಕರ ಗಡ್ಡದ ಹಾಗೆ ಇತ್ತು. ಮನೆಯ ಸುತ್ತ ಇದ್ದ ತೋಟ ಒಂದು ಕಾಡು ಅನ್ನಿಸುವ ಹಾಗೆ ಇತ್ತು. ತೋಟದ ಸುತ್ತ ಹಳ್ಳ ತೋಡಿದ್ದರು. ಒಂದು ತುದಿಯಲ್ಲಿ ಪುಟ್ಟ ಕೆರೆ ಇತ್ತು. ಅದರ ತುಂಬ ಜೊಂಡು ಹುಲ್ಲು ಬೆಳೆದಿತ್ತು. ಕೆರೆಯ ನೀರು ಹರಿದು ಬರಲು ಒಂದು ಪುಟ್ಟ ತೊರೆ ಇತ್ತು. ಅಲ್ಲಿಗೆ ಬರುವ ಬಾತುಕೋಳಿಗಳನ್ನು ಬೇಟೆಯಾಡಲು ಅನುಕೂಲವಾಗುವಂತೆ ನನ್ನ ಗಂಡ ಅಲ್ಲೊಂದು ಪುಟ್ಟ ಗುಡಿಸಲು ಕಟ್ಟಿಸಿದ್ದ.
ಮನೆಯಲ್ಲಿ ಆಳುಕಾಳು ಇದ್ದರು. ಅವರಲ್ಲಿ ಒಬ್ಬನಿಗೆ ನನ್ನ ಗಂಡನ ಮೇಲೆ ಬಹಳ ಭಕ್ತಿ. ನನ್ನ ಗಂಡ ಹೇಳಿದರೆ ಪ್ರಾಣ ಬಿಡಲೂ ತಯಾರಾಗಿದ್ದ. ಒಬ್ಬಳು ಮನೆಕೆಲಸದವಳಿದ್ದಳು. ಅವಳಿಗೆ ನಾನೆಂದರೆ ಜೀವ. ಅವಳನ್ನು ನಾನೇ ಕರೆದುಕೊಂಡು ಬಂದಿದ್ದೆ. ಅವಳ ಅಪ್ಪ ಯಾರೋ ಗೊತ್ತಿರಲಿಲ್ಲ. ಅಮ್ಮ ಮಗುವನ್ನು ಬಿಟ್ಟು ಹೊರಟುಹೋಗಿದ್ದಳು. ಈ ಅನಾಥ ಹುಡುಗಿಗೆ ಹದಿನಾರು ವರ್ಷವಾಗಿತ್ತು. ಆದರೆ ಇಪ್ಪತ್ತು ದಾಟಿದವಳಂತೆ ಮೈ ಕೈ ತುಂಬಿಕೊಂಡು ಚೆನ್ನಾಗಿ ಬೆಳೆದಿದ್ದಳು. ಅವಳ ಕಣ್ಣು ಕಡು ಕಪ್ಪು. ತಲೆಯ ತುಂಬ ದಟ್ಟ ಕೂದಲ ರಾಶಿ. ಮೈ ಬಣ್ಣ ಕಂದು. ಜಿಪ್ಸಿಗಳ ಹಾಗೆ ಕಾಣುತ್ತಿದ್ದಳು.
ಎಲೆಗಳು ಉದುರುವ ಕಾಲ ಬಂದಿತ್ತು. ನಾವು ಬೇಟೆಯಾಡಲು ಹೋಗುತ್ತಿದ್ದೆವು. ಕೆಲವು ಬಾರಿ ನಮ್ಮ ತೋಟದಲ್ಲಿ, ಇನ್ನು ಕೆಲವು ಬಾರಿ ಅಕ್ಕ ಪಕ್ಕದವರ ತೋಟದಲ್ಲಿ. ಆಗ ಒಂದು ದಿನ ನಮಗೆ ಒಬ್ಬ ಯುವಕನ ಪರಿಚಯವಾಯಿತು. ಅವನು ನಮ್ಮ ಮನೆಗೆ ಬರತೊಡಗಿದ. ಸ್ವಲ್ಪ ದಿನ ಆದಮೇಲೆ ನಿಲ್ಲಿಸಿಬಿಟ್ಟ. ನಾನೂ ಅವನನ್ನು ಮರೆತುಬಿಟ್ಟೆ. ಆದರೆ ನನ್ನ ಗಂಡ ನನ್ನನ್ನು ನೋಡುವ ರೀತಿ ಬದಲಾಗಿಬಿಟ್ಟಿತು.
ನನ್ನ ಗಂಡ ನನ್ನೊಡನೆ ಮಾತು ನಿಲ್ಲಿಸಿಬಿಟ್ಟ. ಯಾವಗಲೂ ಏನೋ ಯೋಚನೆ ಮಾಡುವವನಂತೆ ಇರುತ್ತಿದ್ದ. ನನಗೆ ಮುತ್ತಿಡುವುದನ್ನೂ ಬಿಟ್ಟ. ನನ್ನ ಬಳಿ ಬರುವುದೇ ಕಡಮೆಯಾಯಿತು. ನನಗೂ ಒಬ್ಬಳೇ ಇರಬೇಕು ಅನ್ನಿಸುತ್ತಿತ್ತು. ರಾತ್ರಿ ಮಲಗಲು ನನಗೇ ಬೇರೆಯ ಕೋಣೆ ಬೇಕು ಅಂದೆ. ರಾತ್ರಿಯ ಹೊತ್ತಿನಲ್ಲಿ, ಇನ್ನೇನು ನನಗೆ ನಿದ್ದೆ ಹತ್ತುತ್ತಿದೆ ಅನ್ನುವಾಗ ಕೋಣೆಯ ಬಾಗಿಲ ಬಳಿ ಹೆಜ್ಜೆ ಸಪ್ಪಳ ಕೇಳಿಸುತ್ತಿತ್ತು. ಸ್ವಲ್ಪ ಹೊತ್ತು ನಿಶ್ಶಬ್ದ. ಆಮೇಲೆ ಹೆಜ್ಜೆಗಳು ದೂರ ಹೋಗುವ ಸದ್ದು ತಿಳಿಯುತ್ತಿತ್ತು. ರಾತ್ರಿ ಕೆಲವು ಬಾರಿ ನಿದ್ದೆ ಬಾರದೆ ಕಿಟಕಿಯಿಂದ ಆಚೆಗೆ ನೋಡಿದರೆ ಮರದ ನೆರಳಿನಲ್ಲಿ ಯಾರೋ ಸುಳಿದಾಡಿದಂತೆ ಅನ್ನಿಸುತ್ತಿತ್ತು. ಗಂಡನಿಗೆ ಹೇಳಿದೆ. ಅವನು ಸ್ವಲ್ಪಹೊತ್ತು ನನ್ನನ್ನೇ ದುರುಗುಟ್ಟಿಕೊಂಡು ನೋಡಿದ. ಕೆಲಸದ ಆಳು ಇರಬೇಕು ಅಂದ.
ಒಂದು ದಿನ ಸಾಯಂಕಾಲ. ಅವತ್ತು ಬೇಗ ಊಟ ಮಾಡಿದ್ದೆವು. ಗಂಡ ನನ್ನ ಕೋಣೆಗೆ ಬಂದ. ಬಹಳ ಖುಷಿಯಾಗಿದ್ದ. "ಯಾವುದೋ ನರಿ ಬಂದು ನಮ್ಮ ಬಾತು ಕೋಳಿಗಳನ್ನು ತಿಂದುಹಾಕುತ್ತಿದೆ. ಬೇಟೆಗೆ ಹೊರಟಿದ್ದೀನಿ. ಬರುತ್ತೀಯಾ?" ಅಂತ ಕೇಳಿದ. ಅವನು ನಗುನಗುತ್ತಾ ಮಾತನಾಡುತ್ತಿದ್ದ. ಆ ನಗುವಿನ ಹಿಂದೆ ಏನೋ ತಂತ್ರ ಇದೆ ಅನ್ನಿಸುತ್ತಿತ್ತು. ಆಶ್ಚರ್ಯ ಆಯಿತು. ಹೋಗಲೋ ಬೇಡವೋ ಅನ್ನುವ ಅನುಮಾನ ಹುಟ್ಟಿತು. "ನೀನು ಬಂದೇ ಬರಬೇಕು" ಅಂತ ಒತ್ತಾಯಿಸುವಹಾಗೆ ನನ್ನ ಗಂಡ ನನ್ನನ್ನೇ ನೋಡುತ್ತಿದ್ದ. ಸರಿ ಅಂತ ಒಪ್ಪಿಕೊಂಡೆ.
ನಿನಗೆ ಗೊತ್ತಲ್ಲ, ನಾನೂ ಗಂಡಸರಂತೆಯೇ ಬೇಟೆ ಆಡುತ್ತಿದ್ದೆ. ಕಾಡು ಹಂದಿ, ತೋಳಗಳನ್ನು ಹೊಡೆದಿದ್ದೆ. ನನ್ನ ಗಂಡ ನನ್ನನ್ನೂ ಬೇಟೆಗೆ ಕರೆದದ್ದರಲ್ಲಿ ವಿಶೇಷವೇನೂ ಇರಲಿಲ್ಲ.
ಆದರೆ ಅವನು ಸುಮ್ಮನೆ ತಟಗುಟ್ಟುತ್ತಿದ್ದ. ಕೂರುತ್ತಿದ್ದ. ಏಳುತ್ತಿದ್ದ. ಓಡಾಡುತ್ತಿದ್ದ. ಮತ್ತೆ ಕೂರುತ್ತಿದ್ದ. ಸುತ್ತ ಕಣ್ಣಾಡಿಸುತ್ತಿದ್ದ. ಹತ್ತು ಗಂಟೆಯ ಹೊತ್ತಿಗೆ ಇದ್ದಕ್ಕಿದ್ದ ಹಾಗೆ "ರೆಡೀನಾ?" ಅಂತ ಕೇಳಿದ.
ಹೊರಟೆ. ನನ್ನ ಬಂದೂಕನ್ನೂ ನನ್ನ ಗಂಡನೇ ಹೊತ್ತಿದ್ದ. "ತೋಟಾನೋ, ಚರೇನೋ?" ಅಂತ ಕೇಳಿದೆ. ಅವನಿಗೆ ಆಶ್ಚರ್ಯ ಆಯಿತು. "ಏನಿಲ್ಲ, ಚರೆ ಸಾಕು" ಅಂದ. ಸ್ವಲ್ಪ ಹೊತ್ತಾದ ಮೇಲೆ "ಪರವಾಗಿಲ್ಲವೇ! ಆರಾಮವಾಗಿಯೇ ಇದ್ದೀಯಲ್ಲ?" ಅಂದ. ಅವನ ದನಿ ವಿಚಿತ್ರವಾಗಿತ್ತು.
ನನಗೆ ನಗು ಬಂತು. "ಆರಾಮವಾಗಿರದೆ ಏನು ಮಾಡಲಿ? ನರಿ ಹೊಡೆಯುವುದು ಏನು ಘನವಾದ ಕೆಲಸವೇ? ಅದೇನು ಹುಲಿಯೇ?" ಅಂದೆ.
ಮಾತಾಡದೆ ಇಬ್ಬರೂ ಸುಮ್ಮನೆ ನಡೆದೆವು. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಹುಣ್ಣಿಮೆಯ ಹತ್ತಿರದ ದಿನಗಳು. ಚಂದ್ರ ಇನ್ನೂ ಬೆಳ್ಳಗಾಗಿರಲಿಲ್ಲ. ಬೇಜಾರಿನ ದೊಡ್ಡ ಮುದ್ದೆಯಂಥ ನಮ್ಮ ಮನೆ ನಸು ಹಳದಿ ಬೆಳಕಿನಲ್ಲಿ ಮೀಯುತ್ತಿತ್ತು. ಕಲ್ಲಿನ ಇಳಿಜಾರು ಚಾವಣಿಯ ಮೇಲೆ ತಿಂಗಳ ಬೆಳಕು ಹೊಳೆಯುತ್ತಿತ್ತು. ಸ್ವಚ್ಛ ಸುಂದರ ನಿಶ್ಶಬ್ದ ರಾತ್ರಿಯನ್ನು ಕಲಕುವ ಯಾವ ಸದ್ದೂ ಇರಲಿಲ್ಲ. ಎಲೆಗಳ ಅಲುಗಾಟವಿಲ್ಲ, ಕಪ್ಪೆಗಳ ಸದ್ದಿಲ್ಲ, ಗೂಬೆಯ ಕೂಗಿಲ್ಲ. ಸಾವಿನ ಹಾಗೆ ಜಡ, ನಿಶ್ಚಲ, ನಿಶ್ಶಬ್ದ.
ತೋಟದೊಳಗೆ ಕಾಲಿಟ್ಟಾಗ ನನ್ನೊಳಗೆ ಇದ್ದಕ್ಕಿದ್ದಹಾಗೆ ಉತ್ಸಾಹ ಹುಟ್ಟಿತು. ಉದುರಿದ ಎಲೆಗಳ ನರುಗಂಪು ನನ್ನ ಉಸಿರನ್ನು ತುಂಬಿಕೊಂಡಿತು. ನನ್ನ ಗಂಡ ಮಾತನಾಡಲಿಲ್ಲ. ಹುಷಾರಾಗಿ ಕೇಳಿಸಿಕೊಳ್ಳುತ್ತಿದ್ದ, ಹುಷಾರಾಗಿ ಗಮನಿಸುತ್ತಿದ್ದ, ಹುಷಾರಾಗಿ ನೆರಳುಗಳ ವಾಸನೆ ಹಿಡಿಯುತ್ತಿದ್ದ. ಬೇಟೆಗಾರನ ಹುಷಾರು ಮತ್ತು ಉದ್ರೇಕ ಅವನಲ್ಲಿ ಇಡಿಯಾಗಿ ತುಂಬಿತ್ತು.
ನಾವು ಕೆರೆಯ ಅಂಚಿಗೆ ಬಂದೆವು. ಜೊಂಡು ಹುಲ್ಲು ಸುಮ್ಮನೆ ನಿಂತಿತ್ತು. ಗಾಳಿ ಇರದಿದ್ದರೂ ಕೆರೆಯ ನೀರಿನಲ್ಲಿ ಸೂಕ್ಕ್ಷ್ಮವಾದ ಚಲನೆ ಇತ್ತು. ನೀರು ಕಲಕಿ, ಅಲೆಗಳು ಮೂಡಿ, ತಿಂಗಳ ಬೆಳಕಿನ ವರ್ತುಲಗಳು ಥಳಥಳಿಸುತ್ತ ಕೆರೆಯ ಅಂಚಿನವರೆಗೆ ನಿಧಾವವಾಗಿ ವಿಸ್ತರಿಸಿಕೊಳ್ಳುತ್ತಿದ್ದವು.
ನಾವು ಗುಡಿಸಿಲ ಹತ್ತಿರ ಬಂದೆವು. ನನ್ನನ್ನೇ ಮೊದಲು ಒಳಕ್ಕೆ ಹೋಗು ಅಂದ ನನ್ನ ಗಂಡ. ಬಂದೂಕು ರೆಡಿ ಮಾಡಿಕೊಂಡ. ಕಾಯುತ್ತ ಕುಳಿತೆವು. ಯಾಕೋ ನನ್ನ ಮೈ ನಡುಗಿತು. "ಯಾಕೆ? ಭಯ ಆಗುತ್ತಾ? ವಾಪಸ್ಸು ಹೋಗು" ಅಂದ ಗಂಡ. ನನಗೆ ಆಶ್ಚರ್ಯವಾಯಿತು. "ನಾನು ಬರೀ ಕೈಯಲ್ಲಿ ವಾಪಸ್ಸು ಹೋಗಲು ಬಂದಿಲ್ಲ. ನೀವು ಯಾಕೋ ವಿಚಿತ್ರವಾಗಿ ಆಡುತ್ತಿದ್ದೀರಿ" ಅಂದೆ. "ನಿನ್ನಿಷ್ಟ" ಎಂದು ಹೇಳಿ ಅವನು ಸುಮ್ಮನೆ ಕಾಯುತ್ತ ಕುಳಿತ.
ಅರ್ಧ ಗಂಟೆ ಕಳೆಯಿತು. ರಾತ್ರಿಯ ನಿಶ್ಚಲತೆ ಹಾಗೇ ಇತ್ತು. "ನರಿ ನಿಜವಾಗಲೂ ಬರುತ್ತಾ?" ಅಂತ ಪಿಸುಗುಟ್ಟಿದೆ. ಚೇಳು ಕುಟುಕಿದವನಂತೆ ಆಡಿದ. "ಖಂಡಿತಾ. ಅನುಮಾನವೇ ಬೇಡ" ಅಂತ ಅವನೂ ಪಿಸುಗುಟ್ಟಿದ.
ಮತ್ತೆ ಸುದೀರ್ಘ ಮೌನ.
ಬಹುಶಃ ನನಗೆ ಜೊಂಪು ಹತ್ತಿತ್ತೆಂದು ಕಾಣುತ್ತದೆ. ಗಂಡ ನನ್ನ ತೋಳನ್ನು ಅದುಮಿ "ನೋಡು. ಅಲ್ಲಿ. ಮರದ ಕೆಳಗೆ. ಕಾಣುತ್ತಾ?" ಅಂದ.
ನೋಡಿದೆ. ನನಗೆ ಏನೂ ಕಾಣಲಿಲ್ಲ. ನನ್ನ ಗಂಡ ಬಂದೂಕು ಎತ್ತಿದ. ಅವನು ನನ್ನ ಮುಖವನ್ನೇ ನೋಡುತ್ತಿದ್ದ. ನಾನೂ ಗುರಿ ಇಡುತ್ತಿದ್ದೆ. ಇನ್ನೇನು ಬಂದೂಕಿನ ಕುದುರೆ ಒತ್ತಬೇಕು ಅನ್ನುವಷ್ಟರಲ್ಲಿ ನನ್ನೆದುರಿಗೇ, ಮೂವತ್ತು ಹೆಜ್ಜೆ ದೂರದಲ್ಲಿ, ತಿಂಗಳ ಬೆಳಕಿನಲ್ಲಿ, ಒಬ್ಬ ಮನುಷ್ಯ ಬಾಗಿಕೊಂಡು, ಯಾತರಿಂದಲೋ ತಪ್ಪಿಸಿಕೊಳ್ಳುವವನ ಹಾಗೆ, ಅರ್ಧ ನಡೆಯುತ್ತ ಅರ್ಧ ಓಡುತ್ತ ಪ್ರತ್ಯಕ್ಷನಾದ.
ಆಶ್ಚರ್ಯದಿಂದ ಕಲ್ಲಾದೆ. ಜೋರಾಗಿ ಚೀರಿದೆ. ಪಕ್ಕಕ್ಕೆ ತಿರುಗುವಷ್ಟರಲ್ಲಿ ಗುಂಡು ಹಾರಿದ ಸದ್ದು ಕೇಳಿಸಿತು. ನಮ್ಮತ್ತ ಬರುತ್ತಿದ್ದವನು ಗುಂಡೇಟು ತಿಂದ ತೋಳದ ಹಾಗೆ ನೆಲಕ್ಕುರುಳಿ ಒದ್ದಾಡುತ್ತಿದ್ದ.
ಜೋರಾಗಿ ಕಿರುಚಿಕೊಂಡೆ. ಭಯವಾಗಿತ್ತು. ಹುಚ್ಚಿಯಂತಾಗಿದ್ದೆ. ಯಾರದೋ ಕೈ ನನ್ನ ಕತ್ತು ಹಿಸುಕುತ್ತಿತ್ತು. ನನ್ನ ಗಂಡನ ಕೈ! ನನ್ನನ್ನು ನೆಲಕ್ಕೆ ದಬ್ಬಿದ. ಕಾಲಿನಲ್ಲಿ ಒದೆದ. ಆಮೇಲೆ ಬಲಿಷ್ಠ ಕೈಗಳಲ್ಲಿ ನನ್ನನ್ನು ಎತ್ತಿಕೊಂಡು ಹೆಣ ಬಿದ್ದಿದ್ದಲ್ಲಿಗೆ ಓಡಿದ. ನನ್ನನ್ನು ಹೆಣದ ಮೇಲೆ ಎಸೆದ. ಸತ್ತೆ ಅನ್ನಿಸಿತು. ನನ್ನ ಮುಖವನ್ನು ಅಪ್ಪಳಿಸಲು ಕಾಲು ಎತ್ತಿದ.
ಆ ಕ್ಷಣದಲ್ಲಿ, ಏನಾಯಿತೆಂದು ತಿಳಿಯುವ ಮೊದಲೇ, ಯಾರೋ ನನ್ನ ಗಂಡನನ್ನು ಹಿಡಿದು ಹಿಂದಕ್ಕೆಳೆದು ಹೊಡೆದು ಉರುಳಿಸಿದ್ದರು. ನಾನು ತಟ್ಟನೆ ಎದ್ದೆ. ನನ್ನ ಗಂಡ ಕೆಳಗೆ ಬಿದ್ದಿದ್ದ. ನಮ್ಮ ಮನೆಯ ಕೆಲಸದವಳು ಹತಾಶಳಂತೆ, ಕೆರಳಿದ ಕಾಡು ಬೆಕ್ಕಿನಂತೆ, ನನ್ನ ಗಂಡನ ಮೇಲೆ ಬಿದ್ದು ಅವನ ಮುಖ ಪರಚಿ, ಕೂದಲು ಕಿತ್ತು, ಗುದ್ದಿ, ಚೀರುತ್ತಿದ್ದಳು. ಜೋರಾಗಿ ಅಳುತ್ತಿದ್ದಳು.
ಮತ್ತೇನೋ ಹೊಳೆದವಳಂತೆ ತಟ್ಟನೆ ತಿರುಗಿದಳು. ಹೆಣದ ಮೇಲೆ ಹೋಗಿ ಬಿದ್ದಳು. ಅಪ್ಪಿಕೊಂಡಳು. ಹೆಣದ ಕಣ್ಣು, ಮೂಗು, ಮುಖ, ಬಾಯಿಗೆಲ್ಲ ಮುತ್ತಿಟ್ಟಳು. ತನ್ನ ತುಟಿಯಿಂದ ಹೆಣದ ತುಟಿ ಒತ್ತಿ, ತನ್ನ ಉಸಿರನ್ನು ಹೆಣಕ್ಕೆ ನೀಡುವಂತೆ ದೀರ್ಘವಾಗಿ ಚುಂಬಿಸಿದಳು.
ನನ್ನ ಗಂಡ ನಿಧಾನವಾಗಿ ಮೇಲೆದ್ದ. ನನ್ನನ್ನೆ ದಿಟ್ಟಿಸಿ ನೋಡಿದ. ನನ್ನ ಕಾಲಿಗೆ ಬಿದ್ದ. "ನನ್ನನ್ನು ಕ್ಷಮಿಸಿಬಿಡು. ನಿನ್ನ ಮೇಲೆ ಸುಮ್ಮನೆ ಅನುಮಾನ ಪಟ್ಟೆ. ಪಾಪ ಈ ಕೆಲಸದವಳ ಗೆಣೆಕಾರನನ್ನು ಕೊಂದುಬಿಟ್ಟೆ. ನಮ್ಮ ಆಳು ನನಗೆ ಮೋಸಮಾಡಿಬಿಟ್ಟ" ಅಂದ ನನ್ನ ಗಂಡ.
ನನಗೆ ಅವನ ಮಾತು ಕೇಳಿಸುತ್ತಿರಲಿಲ್ಲ. ಆದರೆ ಅರ್ಥ ಆಯಿತು. ನನ್ನ ಕಣ್ಣ ತುಂಬ ಕೆಲಸದ ಹುಡುಗಿಯೇ ತುಂಬಿಕೊಂಡಿದ್ದಳು. ಜೀವ ಹೋದ ಪ್ರಿಯನನ್ನು ಅಪ್ಪಿ, ಬಿಕ್ಕುತ್ತ, ಆಳುತ್ತ, ಹೊರಳಾಡುತ್ತಿದ್ದ ಜೀವ. ಆ ಕ್ಷಣದಲ್ಲಿ ನಾನೂ ನನ್ನ ಗಂಡನಿಗೆ ಮೋಸ ಮಾಡಬಹುದು, ಮಾಡಬೇಕು ಅನ್ನಿಸಿತು.
ಇತಿ ನಿನ್ನ

[ಇದು ಫ್ರಂಚ್ ಭಾಷೆಯಲ್ಲಿ ಮೊಪಾಸಾ ಬರೆದಿರುವ ಕಥೆ. ಯಾವಗಲೋ ಓದಿದ್ದೆ ಅಂತ ಮಸುಕು ನೆನಪು. ಮತ್ತೆ ಅಕಸ್ಮಾತ್ತಾಗಿ ಓದಲು ಸಿಕ್ಕಿದಾಗ ಕನ್ನಡದಲ್ಲಿ ಇದನ್ನು ಹೇಳಬೇಕು ಅನ್ನಿಸಿತು. ಹೇಳಿದ್ದೇನೆ. ಕದ್ದು ಬಂದ ಪ್ರೇಮಿ ಯಾರು? ಹೆಂಡತಿಗೆ ಪರಿಚಯವಾಗಿದ್ದ ಯುವಕನೋ? ಗಂಡನಿಗೆ ಕೆಲಸದವಳ ಮೇಲೆ ಕಣ್ಣಿತ್ತೋ? ಹೆಂಡತಿ ಮುದುಕಿಯಾದ ಮೇಲೆ ಕಾಗದ ಬರೆಯುತ್ತಿರುವ ಗೆಳೆಯ ಯಾರು? ತನಗೆ ಆ ಕ್ಷಣದಲ್ಲಿ ಗಂಡನಿಗೆ ಮೋಸ ಮಾಡಬೇಕು ಅನ್ನಿಸಿದಮೇಲೆ ದೊರೆತ ಒಬ್ಬ ಹೊಸಗೆಳೆಯನೋ? ನಿಮಗೆ ಏನನ್ನಿಸುತ್ತದೆ?]

ಲೇಖನ ವರ್ಗ (Category):