ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 
[:video/1|ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ]

 

ಜಿ.ಟಿ. ನಾರಾಯಣರಾವ್ ಅಧ್ಯಯನ ಕೊಠಡಿಯಲ್ಲಿ

ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿ.ಟಿ.ನಾರಾಯಣರಾವ್‌ ಅವರದ್ದೊಂದು ಪಾಡ್‌ಕ್ಯಾಸ್ಟ್‌ ಮಾಡಬೇಕು ಎಂಬ ಯೋಜನೆ ಬಹಳ ಹಳೆಯದು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಹರಿಪ್ರಸಾದ್‌ ನಾಡಿಗರು ಪಾಡ್‌ಕ್ಯಾಸ್ಟ್‌ ಜತೆ ವಿಡಿಯೋ ಕೂಡಾ ಹಾಕಬಹುದು ಎನ್ನುತ್ತಿದ್ದರು. ಇದಕ್ಕೆ ಅಗತ್ಯವಿರುವ ಕ್ಯಾಮೆರಾ, ಧ್ವನಿಗ್ರಹಣ, ಆಮೇಲೆ ಸಂಕಲನವನ್ನೆಲ್ಲಾ ಯಾರು ಮಾಡುವುದು ಎಂಬುದು ನಮ್ಮೆದುರು ಇದ್ದ ದೊಡ್ಡ ಪ್ರಶ್ನೆಯಾಗಿತ್ತು.

ಗೆಳೆಯ ಅಭಯಸಿಂಹ ವೃತ್ತಿಯ ಕಾರಣಕ್ಕೆ ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸಿದ್ದೇ ನನ್ನೆದುರು ಇದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿಬಿಟ್ಟಿತು. ಅದರ ಪರಿಣಾಮವಾಗಿ ಈ ವಿಡಿಯೋ ಹಾಗೂ ಪಾಡ್‌ಕ್ಯಾಸ್ಟ್‌ ನಿಮ್ಮ ಮುಂದಿದೆ.

ಜಿ.ಟಿ.ಎನ್‌. ನನಗೆ ಪುಸ್ತಕಗಳ ಮೂಲಕ ಬಾಲ್ಯದಲ್ಲೇ ಪರಿಚಿತರು. ನಿಮ್ಮಲ್ಲನೇಕರಿಗೂ ಅವರು ಹೀಗೆ ಪರಿಚಿತರಾಗಿರಬಹುದು. ಹತ್ತು ಹನ್ನೆರಡು ವರ್ಷಗಳಿಂದ ಅವರನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳಲೂ ಸಾಧ್ಯವಾಯಿತು. `ನುಡಿದಂತೆ ನಡೆಯುವುದು' ಎಂಬುದಕ್ಕೆ ಸಾಕ್ಷಿಯಾಗುವಂಥ ಬದುಕು ಜಿ.ಟಿ.ಎನ್‌. ಅವರದ್ದು. ವೈಜ್ಞಾನಿಕ ಮನೋಧರ್ಮ ಎಂಬುದು ಕೇವಲ ಅವರ ಬರೆವಣಿಗೆಗೆ ಸೀಮಿತವಾಗಿರುವ ವಿಷಯವಲ್ಲ. ಅದು ಅವರ ಬದುಕೂ ಕೂಡಾ.

ಮಡಿಕೇರಿಯ ಜಿ.ಟಿ.ನಾರಾಯಣರಾವ್‌ ಹುಟ್ಟಿದ್ದು 1926ರ ಜನವರಿ 30ರಂದು. ತಂದೆ ಗುಡ್ಡೆಹಿತ್ಲು ತಿಮ್ಮಪ್ಪಯ್ಯ. ತಾಯಜಿ.ಟಿ.ಎನ್ ಮತ್ತು ಅವರ ಪತ್ನಿ ಲಕ್ಷ್ಮಿಿ ವೆಂಕಟಲಕ್ಷ್ಮಿ. ಮದ್ರಾಸು ವಿಶ್ವವಿದ್ಯಾಲಯದಿಂದ 1947ರಲ್ಲಿ ಗಣಿತ ಎಂ.ಎ ಪದವಿ ಪಡೆದರು. ಮಂಗಳೂರು, ಮಡಿಕೇರಿ, ಬೆಂಗಳೂರುಗಳಲ್ಲಿ 1947ರಿಂದ 1969ರವರೆಗೆ ಕಾಲೇಜು ಉಪನ್ಯಾಸಕರಾಗಿದ್ದರು. 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹ್ವಾನ ಮನ್ನಿಸಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತರಾದರು. ತರುವಾಯ ಪೂರ್ಣಕಾಲ ವಿಜ್ಞಾನ ವಾಙ್ಮಯ ರಚನೆಯಲ್ಲಿ ಮಗ್ನರಾಗಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದಂತೆಯೂ ಆಳವಾದ ಜ್ಞಾನ ಹೊಂದಿರುವ ಜಿ.ಟಿ.ಎನ್‌. ಸಂಗೀತದ ಬಗ್ಗೆ ಕನ್ನಡ ಹಾಗೂ ಇಂಗ್ಲಿಷ್‌ಗಳೆರಡರಲ್ಲೂ ಅನೇಕ ಲೇಖನಗಳನ್ನು ಬರೆದಿದ್ದಾರೆ. `ಶ್ರುತಗಾನ' ಕೃತಿ ಇಂಥ ಲೇಖನಗಳಿಗೇ ಮೀಸಲಾಗಿದೆ. ಈಗ ಅದರ ವಿಸ್ತೃತ ಆವೃತ್ತಿ ಸಂಗೀತ ರಸನಿಮಿಷಗಳು ಪ್ರಕಟಣೆಗೆ ಸಿದ್ಧವಾಗಿದೆ.

ಅವರ ಪ್ರಮುಖ ಕೃತಿಗಳು ಈ ಕೆಳಗಿನಂತಿವೆ. ಐನ್‍ಸ್ಟೈನ್ ಬಾಳಿದರಿಲ್ಲಿ (ವೈಜ್ಞಾನಿಕ ಜೀವನಚರಿತ್ರೆ), ಕುವೆಂಪು ದರ್ಶನ ಸಂದರ್ಶನ (ಕುವೆಂಪು ಕುರಿತು), ಕೃಷ್ಣವಿವರಗಳು (Black Holes), ಕೊಪರ್ನಿಕಸ್ ಕ್ರಾಂತಿ (ಖಗೋಳ ವಿಜ್ಞಾನೇತಿಹಾಸ), ಜಾತಕ ಮತ್ತು ಭವಿಷ್ಯ (ನಾಳೆಯನ್ನು ಇಂದು ಅರಿಯಬಹುದೇ?), ಧೂಮಕೇತು (ಅದೃಶ್ಯಲೋಕದ ಅನಾದಿ ಕಾಲದ ಅಪೂರ್ವ ಅತಿಥಿ), ನಕ್ಷತ್ರ ವೀಕ್ಷಣೆ (ಬಾನಿಗೆ ಹಿಡಿದ ನುಡಿ ಚಿತ್ರ ದರ್ಪಣ), ನವಕರ್ನಾಟಕ ಕನ್ನಡ ವಿಜ್ಞಾನ ಪದವಿವರಣ ಕೋಶ (ಪ್ರಧಾನ ಸಂಪಾದನೆ), ವೈಜ್ಞಾನಿಕ ಮನೋಧರ್ಮ, ಸಂಗೀತ ರಸನಿಮಿಷಗಳು (ಕಲಾವಿದರ ಜೊತೆಗಿನ ಒಡನಾಟದ ಅನುಭವ ಕಥನ), ಸಪ್ತಸಾಗರದಾಚೆಯೆಲ್ಲೋ..(ಚಂದ್ರಶೇಖರ್ ದರ್ಶನ, ಸಂವಾದ), ಸುಬ್ರಹ್ಮಣ್ಯನ್ ಚಂದ್ರಶೇಖರ್ (ವೈಜ್ಞಾನಿಕ ಜೀವನ ಚರಿತ್ರೆ), Scientific Temper, With the Great Minds (Ramanujan, Raman, Chandrasekhar, Muralidhara Rao and Suresh)

> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (11 MB)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂದರ್ಶನ ಬಹಳ ಚೆನ್ನಾಗಿದೆ. ಹರಿ, ಯೂಟ್ಯೂಬ್ ಅಲ್ಲದೇ ಬೇರೆನೇ tool ಹುಡುಕಿ ಸಂಪದದಲ್ಲಿ ಹಾಕ್ತೀನಿ ಅಂದಾಗ, ನಾನು ಭಯಪಟ್ಟಿದ್ದೆ. ಆದರೂ ಅವರ ಧೈರ್ಯ ಹಾಗು ಮಾಡಿದ ಕೆಲಸಕ್ಕೆ ನನ್ನ ಅಭಿನಂದನೆ. ಹಾಗೆಯೇ ಈ ಸಂದರ್ಶನದ ಸೂತ್ರಧಾರರಾದ ನಿಮಗೂ, ಅಭಯಸಿಂಹರವರಿಗೂ ಧನ್ಯವಾದಗಳು.

ಹೀಗೆಯೇ ನಮ್ಮ ನಾಡಿನ ಮತ್ತಷ್ಟು ರತ್ನಗಳ ಸಂದರ್ಶನಗಳನ್ನು ಮಾಡಿ ನಮಗೆ ತಲುಪಿಸಿ ಎಂದು ಆಶಯಿಸುತ್ತೇನೆ

ಶಶಿಶೇಖರ

ನಾನು ಬೆಂಗಳೂರಿನಲ್ಲಿರುವಾಗ ಇವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೆ, ಮೈಸೂರಿಗೆ ಬಂದಾಗ ಒಮ್ಮೆ ಮನೆಗೆ ಬನ್ನಿ ಅಂತ ಕರೆದರೂ ಕೂಡ. ತುಂಬಾ ಔದಾರ್ಯ ಮನ ಇವರದು. ಚಿಕ್ಕವರನ್ನು ಕಂಡರೆ ಓದಲು ಬರೆಯಲು ಹುರಿದುಂಬಿಸುತ್ತಾರೆ...

ಇವರ ಎಲ್ಲ ಹೊತ್ತಿಗೆಗಳು ತುಂಬಾ ಕಡಿಮೆ ದರದಲ್ಲಿ ಸಿಗುತ್ತವೆ.
ಹೊತ್ತಿಗೆಗಳು ಎಲ್ಲರಿಗೂ ಸುಲಭವಾಗಿ ಸಿಗಲಿ, ಎಲ್ಲರೂ ಓದಲಿ ಎನ್ನುವುದು ಇವರ ಒಲವು.
ಇವರ ವಿಜ್ನಾನ ಸಪ್ತರ್ಷಿಗಳು ತಂಬಾ ಚೆನ್ನಾಗಿದೆ.. ಅದನ್ನು ಓದಲು ನಮ್ಮ ಮನೆಯಲ್ಲಿ ಸರತಿಯಲ್ಲಿ ಕಾದು ಕುಳಿತು ಕೊಂಡಿರುತ್ತೆದ್ದೆವು... :)
ಯಾರಿಗಾದರೂ ಕಾಣಿಕೆ ಕೊಡೋವಾಗ ಇವರ ಹೊತ್ತಿಗೆಗಳನ್ನು ಕೊಟ್ಟರೆ ಓದುವ ಹಸಿವನ್ನು ಹೆಚ್ಚಿಸಿದಹಾಗಾಗುತ್ತೆ, ಅರಿವನ್ನು ಹಂಚಿದಂತಾಗುತ್ತೆ ಅಲ್ಲವೆ..

ಅದ್ಭುತ. "The role played by the governor " ಎಂಬುದಕ್ಕೆ "ರಾಜ್ಯಪಾಲರು ಇಲ್ಲಿ ಅಭಿನಯಿಸುವ ಪಾತ್ರ"ಎಂಬ ಅನುವಾದದ ಅವಾಂತರಕೇಳಿ ಬಿದ್ದು ಬಿದ್ದು ನಕ್ಕೆ.ಕಂಪ್ಯೂಟರ್ ಯಂತ್ರದಲ್ಲಿನ governor ಗೆ ರಾಜ್ಯಪಾಲರೆಂದು ಭಾಷಾಂತರ! "ಧರ್ಮವಿಲ್ಲದ ವಿಜ್ಞಾನ ಕುರುಡು, ವಿಜ್ಞಾನವಿಲ್ಲದ ಧರ್ಮ ಕುಂಟು" -ಇಂದು ಅಗತ್ಯವಾಗಿ ತಿಳಿದುಕೊಳ್ಳಬೇಕಾದ್ದು. ಅಂತೂ ಶ್ರಮ ವಹಿಸಿದ ಎಲ್ಲರಿಗೂ ಧನ್ಯವಾದಗಳು. ವೀಡಿಯೋ ನಿಮಗೆ ನೋಡಲು ಅವಕಾಶವಿಲ್ಲ ವೆಂಬ ಪ್ರಕಟಣೆ ಬಂತು. ವೀಡಿಯೋ ಕೂಡ ಲಭ್ಯವಿದೆಯೇ?

ಶಂಕರಬಟ್ಟರು ತಮ್ಮ ' ಕನ್ನಡ ಬರಹವನ್ನು ಸರಿಪಡಿಸೋಣ' ಹೊತ್ತಗೆಯಲ್ಲಿ ಪುಟ ೧೫೯ ಹೀಗೆ ಬರೆದಿದ್ದಾರೆ. ಅವರನ್ನು ಕೋಟ್ ಮಾಡುತ್ತಿದ್ದೇನೆ.

".........ಜೆ.ಆರ್. ಲಕ್ಷ್ಮಣ ರಾವ್ ರವರು ಸಂಪಾದಿಸಿದ 'ವಿಙ್ಞಾನ ಬರವಣಿಗೆ: ಕೆಲವು ಸಮಸ್ಯೆಗಳು' ಎಂಬ ಪುಸ್ತಕದಲ್ಲಿ ವಿಙ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಸೂಚಿತವಾಗಿರುವ ಕೆಲವು ವಿಧಾನಗಳನ್ನು ಪರಿಶೀಲಿಸಬಹುದು. ಈ ಪುಸ್ತಕದಲ್ಲಿ ಇಂತಹ ಬರಹಗಳ ವಸ್ತು, ಶೈಲಿ ಮತ್ತು ವಿನ್ಯಾಸಗಳು ಹೇಗಿರಬೇಕೆಂಬುದನ್ನು ವಿವರಿಸುವ ಜಿ.ಟಿ. ನಾರಾಯಣರಾವ್ ಅವರ ಒಂದು ಲೇಖನವಿದೆ. ಈ ಲೇಖನದಲ್ಲಿ ಇಂಗ್ಲಿಶ್ ನ ಕೆಲವು ಆಯ್ದ ಪರಿಚ್ಚೇದಗಳನ್ನು ಅನುವಾದಿಸಿ ತೋರಿಸಲಾಗಿದೆ. ಕೆಲವೊಮ್ಮೆ ನಿಜಕ್ಕೂ ಇದು ಕನ್ನಡ ಬರಹವೇ ಅಥವಾ ಸಂಸ್ಕ್ರುತ ಬರಹವೇ ಎಂಬ ಸಂಶಯಕ್ಕೆಡೆಯಾಗುತ್ತದೆ. ಈ ಲೇಖನದಲ್ಲಿ ಬರುವ ಅನುವಾದಗಳಲ್ಲಿ ಒಂದು ವಾಕ್ಯ ಹೀಗಿದೆ: "ಅಂತರ-ಬ್ರಹ್ಮಾಂಡೀಯ ಆಕಾಶದ ಚಿರಂತನ ರಾತ್ರಿ ದಟ್ಟೈಸಿರುವ ವಿಶಾಲ ಶೀತಲ ಸರ್ವವ್ಯಾಪೀ ಶೂನ್ಯದಲ್ಲಿ"(ವಿಶ್ವದ ಒಂದೇ ಒಂದು ಪ್ರರೂಪೀ ನೆಲೆಯಿದೆ). ನಾರಾಯಣರಾವ್ ಅವರ ಇಂತಹದೇ ಇನ್ನೊಂದು ಬರಹ ತುಸು ಕಠಿಣವಾಗಿದೆಯೆಂಬುದಾಗಿ ಕನ್ನಡ ಸಾಪ್ತಾಹಿಕವೊಂದರ ಸಂಪಾದಕರು ಆಕ್ಷೇಪಿಸಿದಾಗ, ಅವರು ಈ ಉತ್ತರವನ್ನು ಕೊಟ್ಟಿದ್ದರಂತೆ: " ಕಲಗಚ್ಚು ಅತಿ ಸರಳ. ಕುಂಕುಮಕೇಸರಿ ಮಿಶ್ರಿತ ಕೆನೆ ಹಾಲು ಅತಿ ಕಠಿಣ, ನಿಮಗೆ ಕಲಗಚ್ಚು ಪ್ರಿಯವಾದರೆ ಧಾರಳವಾಗಿ ಅದನ್ನು ಕುಡಿಯಿರಿ." ( ನಾರಾಯಣರಾವ್ ೧೯೯೦: ೩೪)............"

ನಾನು ಕಳದ ವರ್ಷ ಜಿ ಟಿ ನ್ 'ರ ಐನ್‍ಸ್ಟೈನ್ ಬಾಳಿದರಿಲ್ಲಿ ಪುಸ್ತಕ ಒದಿದೆ. ತು೦ಬಾ ಹಿಡಿಸಿತು. ಅದರಲ್ಲಿ ಬರೆದಿರುವ ಸಣ್ಣ ಪದ್ಯಗಳು. ( "ಅತ್ರಿಸೂನು" ಎ೦ಬ ಅ೦ಕಿತದಿ೦ದ ಕೊನೆಗೊಳ್ಳುವ ಪದ್ಯಗಳು) ಜಿ.ಟಿ.ಎನ್ ಆವರೇ ಬರೆದಿದ್ದಾ? . ಮ೦ಕುತಿ೦ಮ್ಮ ನನ್ನು ನೆನೆಪಿಸುವ ಆ ಪದ್ಯಗಳು ಬಹಳ ಸ೦ದರ್ಬೋಚಿತವಾಗಿ ಉಪಯೋಗಿಸಲಾಗಿದೆ.

ಇ-ಮೇಯ್ಲ್ ಮೂಲಕ ಹಲವು ಪ್ರತಿಕ್ರಿಯೆಗಳು ನಮಗೆ ತಲುಪಿವೆ. ಆಯ್ದ ಕೆಲವನ್ನು ಓದುಗರು ಕೆಲವರ ಕೋರಿಕೆಯಂತೆ ಇಲ್ಲಿ ಹಾಕುತ್ತಿದ್ದೇನೆ:

ಡಿ ಎಸ್ ನಾಗಭೂಷಣರು "ಜಿ ಟಿ ಎನ್ ನಮ್ಮ ಮೇಷ್ಟ್ರು ಹಾಗೂ ಹಿರಿಯ ಸ್ನೇಹಿತರು. ಪಾಡ್ಕ್ಯಾಸ್ಟ್ ಹೊರತಂದದ್ದಕ್ಕಾಗಿ ಧ್ಯನ್ಯವಾದಗಳು" ಎಂದು ಬರೆದಿದ್ದಾರೆ.

ಅರುಣ್ ಶರ್ಮ "ಜಿ ಟಿ ಎನ್ ಅವರನ್ನು ೧೯೮೭ರಲ್ಲಿ ಭೇಟಿ ಮಾಡಿದ್ದೆ. ಆಗಲೇ ೨೦ ವರ್ಷಗಳು ಆಗಿಹೋದವು ಎನ್ನುವುದು ನಂಬಲಾಗುತ್ತಿಲ್ಲ". ಎಂದು ಬರೆದಿದ್ದಾರೆ.

ಶ್ರೀಶ ಅನಂತನಾರಾಯಣರವರು "ಮುಂದಿನ ಸಂಚಿಕೆಗಳನ್ನೂ ಕಾತುರದಿಂದ ನಿರೀಕ್ಷಿಸುವೆ" ಎಂದು ಬರೆದಿದ್ದಾರೆ.

ಗಿರೀಶ್ ಕೆ ಬಿ, ನಾಗರಾಜ್ ಗದಗಿ ಮತ್ತು ಇನ್ನೂ ಹಲವರು ಧನ್ಯವಾದಗಳು ಎಂದು ಇ-ಮೇಯ್ಲ್ ಮೂಲಕ ಬರೆದು ಕಳುಹಿಸಿದ್ದಾರೆ.

--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಜಿ.ಟಿ.ಎನ್ ರವರು ಸ್ಟಾರ್ ಆಫ್ ಮೈಸೂರ್ ಪತ್ರಿಕೆಯಲ್ಲಿ ಸಂಗೀತದ ವಿಮರ್ಶಕರಾಗಿದ್ದರು. ಅವರ ಸಂಗೀತದ ವಿಮರ್ಶೆಗಳು ಹಲವು ಬಾರಿ ವಿವಾದಾತ್ಮಕವಾಗಿರುತ್ತಿತ್ತು. ಹೆಸರಾಂತ ಪಿಟೀಲು ವಾದಕರು ಹಾಗೂ ಸಹೋದರರೂ ಆದ ಕುಮರೇಶ್ ಮತ್ತು ಗಣೇಶ್ ರವರು ಇವರ ವಿಮರ್ಶೆಯನ್ನು ಒಪ್ಪದೆ ನ್ಯಾಯಕಟ್ಟಲೆಗೆ ಅವರನ್ನು ಕೊಂಡೊಯ್ಯುವಂಥ ಪ್ರಸಂಗಗಳೂ ಬಂದಿದ್ದವು. ಕಲಾವಿದರನ್ನು ಅವರೇ ಆಹ್ವಾನಿಸಿ ಅವರ ಮುಂದೆ ಕಾರ್ಯಕ್ರಮದಲ್ಲಿ ಮುಖಸ್ತುತಿ ಮಾಡಿ ಪತ್ರಿಕೆಯಲ್ಲಿ ತಮ್ಮ ಅಸಹನೆಯನ್ನು ವಿಚಿತ್ರವಾಗಿ ತೋರ್ಪಡಿಸಿಕೊಂಡ ಪ್ರಸಂಗಗಳೂ ಇವೆ. ನಮ್ಮ ನಾಡಿನ ಅತಿ ಹಿರಿಯ ಗಾಯಕರು ಅವ್ರಿಗೇ ನಾನ್ ಸೆನ್ಸ್ ಎಂದು ಹೇಳಿದ್ದನ್ನೂ ಬಲ್ಲೆ. ಇನ್ನು ಅವರ ಇಂಗ್ಳೀಶ್ ಬರವಣಿಗೆಗಳಲ್ಲಿ ಒಂದು ಬಗೆಯಾದ ಅನವಶ್ಯಕ ಘಾಟು ಕಂಡು ಬರುತ್ತಿತ್ತು. ಅತಿ ಸಾಮಾನ್ಯ ಸಂಗೀತಕ್ಕೆಲ್ಲಾ ಮನ್ನಣೆ ನೀಡಿದ ಪ್ರಸಂಗಗಳೇಷ್ಟೋ. ಆತಿ ಸೊಗಸಾದ ಕಾರ್ಯಕ್ರಮಗಳಿಗೆ ಅನವಶ್ಯವಾಗಿ ಮಂಗಳಾರತಿ ಎತ್ತಿದ ಪ್ರಸಂಗಗಳನ್ನು ಜನರು ಬಲ್ಲರು. ಒಟ್ಟಿನಲ್ಲಿ ಅವರ ಸಂಗೀತದ ಅಭಿರುಚಿ ಪ್ರಶ್ನಾರ್ಹವಾಗಿತ್ತು ಡಾ.ನಾಗವಲ್ಲಿ ನಾಗರಾಜ್