ಪತಂಜಲಿಯ ಯೋಗ ಅಂತಿಮ ಭಾಗ

To prevent automated spam submissions leave this field empty.

ಪತಂಜಲಿಯ ಯೋಗ ಅಂತಿಮ ಭಾಗ
ಕೊನೆಯ ಲೇಖನ
ಪತಂಜಲಿಯ ಯೋಗದ ಚತು‍ರ್ಥ ಕೈವಲ್ಯಪಾದ
ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ.

ಜನ್ಮ, ಔಷಧಿ, ಮಂತ್ರ, ತಪಸ್ಸು ಮತ್ತು ಸಮಾಧಿಯಿಂದ ಸಿಧ್ಧಿಗಳು ಹುಟ್ಟುತ್ತವೆ.ಯೋ.ಸೂ.ಪಾದ ೪. ಸೂತ್ರ.೧
ಧ್ಯಾನದಿಂದ ಹುಟ್ಟಿದವು ಆಶಯರಹಿತವಾಗಿರುತ್ತದೆ. ಯೋ.ಸೂ.ಪಾದ ೪. ಸೂತ್ರ.೬
ಇವು ಸಂಸ್ಕಾರಗಳನ್ನು ಮನಸ್ಸಿನಲ್ಲಿ ಬಿಡುವುದಿಲ್ಲ. ಎಂದರೆ ಜನ್ಮ, ಔಷಧಿ, ಮಂತ್ರದಿಂದ ಬಂದ ಸಿಧ್ಧಿಗಳಿಗೆ ಕರ್ಮಲೇಪ ಇರುತ್ತದೆ.
ಯೋಗಿಗಳ ಕರ್ಮವು ಶುಕ್ಲವೂ ಅಲ್ಲ; ಕೃಷ್ಣವೂ ಅಲ್ಲ. ಬೇರೆಯವರಿಗೆ ಶುಕ್ಲ, ಕೃಷ್ಣ ಮತ್ತು ಶುಕ್ಲ-ಕೃಷ್ಣ(ಒಳ್ಳೆಯದು,ಕೆಟ್ಟದ್ದು,ಎರಡೂ ಬೆರೆತದ್ದು) ಎಂಬ ಪ್ರಭೇಧಗಳಿವೆ. ಯೋ.ಸೂ.ಪಾದ ೪. ಸೂತ್ರ.೭
ಎಂದರೆ ನಿಜವಾದ ಯೋಗಿಯ ಕೆಲಸಗಳು ಆಶಯರಹಿತ. ಹಾಗಾಗಿ ಇರುವ ಕ‍ರ್ಮದ ಬುತ್ತಿ ತೀರಿಸುವುದಷ್ಟೇ ಅವನ ಕೆಲಸ.
ಯಾವಾಗ ಕರ್ಮದ ಫಲಕ್ಕೆ ಮನಸ್ಸಿನಲ್ಲಿ ಎಡೆ ಇರುವುದಿಲ್ಲವೋ, ಆಗ ಇರುವ ಕ್ಲೇಷಗಳು ಧ್ಯಾನದಿಂದ ತನು ಸ್ಥಿತಿಯನ್ನು ಹೊಂದುತ್ತದೆ.
ಮನಸ್ಸಿನಲ್ಲಿ ವೃತ್ತಿಗಳು ಏಳುತ್ತವೆ. ವೃತ್ತಿಗಳಿಂದ ಬದಲಾವಣೆ ಹೊಂದುವುದರಿಂದ ಅದು ಪ್ರಕೃತಿ. ಪುರುಷನು ಅಪರಿಣಾಮಿ.ಯೋ.ಸೂ.ಪಾದ ೪. ಸೂತ್ರ.೧೮
ದೃಶ್ಯವು ಸ್ವಪ್ರಕಾಶಿತವಲ್ಲ.ಯೋ.ಸೂ.ಪಾದ ೪. ಸೂತ್ರ.೧೯
ಇಲ್ಲಿ ದೃಶ್ಯವೆಂದರೆ ಪ್ರಕೃತಿ(ವ್ಯಕ್ತ). ವಿಷೇಷ-ಪುರುಷ/ಪುರುಷರನ್ನು ಹೊರತುಪಡಿಸಿ ಉಳಿದಿದ್ದೆಲ್ಲವೂ ಪ್ರಕೃತಿ. ಬದಲಾವಣೆ ಆಗುವಂತಹುದು. ಅದು ತನ್ನನ್ನು ತಾನೇ ಗ್ರಹಿಸಲಾಗದು. ಮನಸ್ಸನ್ನು ನಾವು ಗ್ರಹಿಸುವುದರಿಂದ (ಗುರುತಿಸುವುದರಿಂದ) ಅದು ಚಿತಿಶಕ್ತಿಯಾಗಲಾರದು.
ಒಂದೇ ಸಮಯಕ್ಕೆ ದೃಶ್ಯ ಮತ್ತು ಚಿತಿಶಕ್ತಿಯನ್ನು ತಿಳಿಯಲಾಗುವುದಿಲ್ಲ.ಯೋ.ಸೂ.ಪಾದ ೪. ಸೂತ್ರ.೨೦
ಚಿತಿಶಕ್ತಿ/ಪುರುಷ ಯಾವಾಗಲೂ ಅಗ್ರಾಹ್ಯ.(ಗ್ರಹಿಸಲು ಆಗದಂತಹುದು/ಅವ್ಯಕ್ತ) ಇಲ್ಲದಿದ್ದರೆ (ಉದಾಹರಣೆಗೆ) ಮನಸ್ಸನು ಗ್ರಹಿಸಲು ಚಿತಿಶಕ್ತಿ. ಆ ಚಿತಿಶಕ್ತಿಯನ್ನು ಗ್ರಹಿಸಲು ಮತ್ತೊಂದು ಶಕ್ತಿ; ಅದನ್ನು ಗ್ರಹಿಸಲು ಮಗದೊಂದು... ಹೀಗಾದರೆ ಕೊನೆ ಎಲ್ಲಿ?(ಭಾವಾ‍ರ್ಥ)ಯೋ.ಸೂ.ಪಾದ ೪. ಸೂತ್ರ.೨೧
(ಮನಸ್ಸಿನೊಳಗಿನ ಬುಧ್ಧಿಯನ್ನು ಗ್ರಹಿಸಲು ಬುಧ್ಧಿಯಿಂದ ಸಾಧ್ಯ ಎನ್ನುವುದಾದರೆ ಆ ಬುಧ್ಧಿಯನ್ನು ಗ್ರಹಿಸಲು ಮತ್ತೊಂದು ಬುಧ್ಧಿ; ಸ್ಮೃತಿ ಕಲುಷಿತವಾಗುತ್ತದೆ :ವಾಕ್ಯಾ‍ರ್ಥ)
ಇದನ್ನು ಬರೀ ತಿಳಿದರೆ ಸಾಲದು;ಯೋಗಾಂಗಗಳ ಆಚರಣೆಯಿಂದ ವಿವೇಕಖ್ಯಾತಿಯ ಪ್ರಜ್ಞಾವಸ್ಥೆಯಿಂದ ಸಾಧಿಸಬೇಕು.
ಆಗ ಮನಸ್ಸು ಕೈವಲ್ಯದೆಡೆ ಬಗ್ಗುತ್ತದೆ.ಯೋ.ಸೂ.ಪಾದ ೪. ಸೂತ್ರ.೨೬
ಆಗಲೂ ಮನಸ್ಸಿನಲ್ಲಿ ಅಳಿದುಳಿದ (ತನು ಸ್ಥಿತಿಯ) ಸಂಸ್ಕಾರಗಳು ಅಡ್ಡಿಯಾಗುತ್ತವೆ.ಯೋ.ಸೂ.ಪಾದ ೪. ಸೂತ್ರ.೨೭
ಮನಸ್ಸಿನಲ್ಲಿ ವಿವೇಕಖ್ಯಾತಿಯೊಂದೇ ಉಳಿದಾಗ ಧರ್ಮಮೇಘಸಮಾಧಿಯಾಗುತ್ತದೆ.ಯೋ.ಸೂ.ಪಾದ ೪. ಸೂತ್ರ.೨೯
ಇದರಿಂದ ಕ್ಲೇಷ, ಕರ್ಮಗಳಿಂದ ಮುಕ್ತಿ.ಯೋ.ಸೂ.ಪಾದ ೪. ಸೂತ್ರ.೩೦
ಆಗ ಮನಸ್ಸನ್ನು ಕವಿದಿರುವ ಎಲ್ಲಾ ಆವರಣಗಳೂ ಕಳೆದು, ತಿಳಿದುಕೊಳ್ಳಬೇಕಾದುದು ಅಲ್ಪ; ತಿಳಿದ ಜ್ಞಾನ ಅನಂತ.ಯೋ.ಸೂ.ಪಾದ ೪. ಸೂತ್ರ.೩೧
ತಂತಾನೇ ಪ್ರಕೃತಿ(ಮನಸ್ಸು ಬುದ್ದಿ ಮತ್ತು ಅಹಂಕಾರವೂ ಸೇರಿದಂತೆ) ತನ್ನ ಮೊಲಗುಣಗಳಿಗೆ ಕರಗಿಹೋಗುತ್ತದೆ. ಇದೇ ಪ್ರತಿಪ್ರಸವ. ಇದರಿಂದ ಚಿತಿಶಕ್ತಿ ತನ್ನ ಸ್ವರೂಪದಲ್ಲಿರುತ್ತದೆ; ಇದೇ ಕೈವಲ್ಯ.ಯೋ.ಸೂ.ಪಾದ ೪. ಸೂತ್ರ.೩೪
ಯಾವಾಗ ದೃಷ್ಟ ಕ್ಲೇಷ, ಕರ್ಮ, ವಿಪಾಕ, ಆಶಯ ಇವುಗಳಿಂದ ಹೊರತಾಗುತ್ತಾನೆಯೋ ಅಲ್ಲಿಗೆ ಪ್ರಕೃತಿಯ ಕೆಲಸ ಮುಗಿಯಿತು. ಆಗ ಸಂಯೋಗ ಕೊನೆಗೊಳ್ಳುತ್ತದೆ. ಚಿತಿಶಕ್ತಿ ಅಥವಾ ಪುರುಷ ತನ್ನ ಸ್ವರೂಪದಲ್ಲಿರುತ್ತದೆ. ಜನ್ಮಾತೀತ, ಕಾಲಾತೀತ, ಬದಲಾವಣೆ ಇಲ್ಲದ, ಸತ್+ಚಿತ್+ಆನಂದದ ಸ್ಥಿತಿಯೇ ಕೈವಲ್ಯ.
ಪತಂಜಲಿಯ ಚತುರ್ಥ ಕೈವಲ್ಯಪಾದದ ಮುಖ್ಯಸೂತ್ರಗಳನ್ನು ಯೋಗದಲ್ಲಿ ಪ್ರಾರಂಭಿಕ ಆಸಕ್ತಿ ಇರುವವರಿಗೆಂದು ಬರೆದ ಲೇಖನ.

ಮನ ಏವ ಮನುಷ್ಯಾಣಾಮ್ ಕಾರಣಂ ಬಂಧ-ಮೋಕ್ಷಯಃ
ಉಪನಿಷತ್
ಮನುಷ್ಯನ ಬಂಧನಕ್ಕೂ ಮುಕ್ತಿಗೂ ಮನಸ್ಸೇ ಕಾರಣ.

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಮಿದಮದಃ ಪಥ್ಯಮಿತಿ ಚ I
ರುಚೀನಾಂ ವೈಚಿತ್ರ್ಯಾದ್ರುಜುಕುಟಿಲನಾನಾಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿಪಯಸಾಮ‍ರ್ಣವ ಇವ II
ಪುಷ್ಪದಂತನ ಮಹಿಮ್ನಸ್ತವ
ಉಪನಿಷತ್ತುಗಳು, ವೇದಾಂತ, ಭಗವದ್ಗೀತೆ, ಸಾಂಖ್ಯ, ಯೋಗ, ಪಾಶುಪತ, ವೈಷ್ಣವ ಮುಂತಾದ ಹಲವಾರು ಮಾ‍ರ್ಗಗಳಿವೆ.
ಜನರು ಋಜು(ನೇರ)ವೋ, ಕುಟಿಲ(ಸೊಟ್ಟ)ವೋ ಅಂತೂ ಬೇರೆ ಬೇರೆ ಮಾ‍ರ್ಗಗಳನ್ನು ಅನುಸರಿಸಿ, ತಮ್ಮ ತಮ್ಮ ಅಭಿರುಚಿಗನುಗುಣವಾಗಿ, ಇದೇ ಶ್ರೇಷ್ಠ, ಇದೇ ಯೋಗ್ಯವೆಂದು ತಿಳಿದು - ಎಲ್ಲಾ ನದಿಗಳೂ ಕಡಲನ್ನು ಸೇರುವಂತೆ(ಬೇಗ ಅಥವಾ ಅತಿ ನಿಧಾನವಾಗಿ ಕೊನೆಗೆ)- ನಿನ್ನೊಬ್ಬನನ್ನೇ ಸೇರುತ್ತಾರೆ.

ಮಾನವ ಜನುಮ ದೊಡ್ಡದು; ಅದನು ಹಾನಿಮಾಡಬೇಡಿರಿ ಹುಚ್ಚಪ್ಪಗಳಿರಾ........
ದಾಸರು.

ಮುಗಿಯಿತು
೨೩/೯/೦೫

ಲೇಖನ ವರ್ಗ (Category):