*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ ]- ಶ್ರೀ. ಡಿ. ಆರ್. ವೆಂಕಟರಮಣನ್

To prevent automated spam submissions leave this field empty.

*ಕಗ್ಗಕ್ಕೊಂದು ಕೈಪಿಡಿ- [ ಮಂಕುತಿಮ್ಮ ಗುರುವಿನ ತತ್ವದರ್ಶನ]
ಕ್ರಯ : ೨೨೫ ರೂ./- ( ಒಟ್ಟು ೫೭೨ ಪುಟಗಳು)

ರಚನೆ :

ಶ್ರೀ. ಡಿ. ಆರ್. ವೆಂಕಟರಮಣನ್
ನಿತ್ಯಾನಂದ ಪ್ರಿಂಟರ್ಸ್, ಅಶೋಕನಗರ,
ಬೆಂಗಳೂರು -೫೬೦ ೦೫೦. ೨೦೦೦.

ಮಂಕುತಿಮ್ಮನ ಕಗ್ಗವನ್ನು ರಚಿಸಿದ ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ನವರು, ಅಕ್ಟೋಬರ್ ೭, ೧೮೮೭ ರಂದು ಮುಳಬಾಗಿಲು ತಾಲ್ಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಮನೆತನದವರು ತಮಿಳುನಾಡಿನ ತಿರುಚಿನಾಪಳ್ಳಿಯಿಂದ ವಲಸೆ ಬಂದವರು. ಮನೆಮಾತು ತಮಿಳು. ತಂದೆ ಶೇಕದಾರರಾಗಿದ್ದರು. ತಮ್ಮ ಮೆಟ್ರಿಕ್ ಪರೀಕ್ಷೆಗೆ ಕುಳಿತುಕೊಂಡರು. ಆದರೆ ಉತ್ತೀರ್ಣರಾಗಲಿಲ್ಲ. ಮುಂದೆ ಕಾಲೇಜ್ ವಿದ್ಯಾಭ್ಯಾಸಮಾಡಿಸುವಷ್ಟು ಅನುಕೂಲತೆಗಳು ಇರಲಿಲ್ಲ. ಸೂರ್ಯೋದಯ ಪ್ರಕಾಶಿತ, ಪತ್ರಿಕೆ. ಬೆಂಗಳೂರಿನಲ್ಲಿ ಕೆಲಸ. ಅವರು ಕೆ. ಜಿ. ಎಫ್ ನಲ್ಲಿ, ಸೋಡಾ ಫ್ಯಾಕ್ಟಾರಿಯಲ್ಲಿ, ಕೆಲಸಮಾಡಿ ನಂತರ 'ವೀರಕೇಸರಿ' ಎಂಬ ಪತ್ರಿಕೆಗೆ ಬಾತ್ಮೀದಾರರಾಗಿ ದುಡಿದರು. ಹಿಂದೂ ಪತ್ರಿಕೆಗೂ ಲೇಖನಗಳನ್ನು ಬರೆಯುತ್ತಿದ್ದರು. ಕೊನೆಗೆ ಮೈಸೂರು ಟೈಮ್ಸ್ ಗೆ ಉಪ ಸಂಪಾದಕರಾಗಿ ಕೆಲಸಮಾಡಿದರು. ರಾಜಕೀಯ ವಿಶ್ಲೇಷಣೆ, ತತ್ವ ಶಾಸ್ತ್ರ. ೧೯೬೧ ಡಿ. ಲಿಟ್ ಪದವಿ ದೊರೆಯಿತು ! ೧೯೩೫ ರಲ್ಲಿ 'ಗೊಖಲೆ ಸಾರ್ವಜನಿಕ ಸಂಸ್ಥೆ,' ಯನ್ನು ಸ್ಥಾಪಿಸಿದರು. ಸಾಹಿತ್ಯ, ಮತ್ತು ಭಾಷಾಭ್ಯಾಸಗಳನ್ನು ಮನೆಯಲ್ಲೇ ಮಾಡಿಕೊಂಡರು. ಅಪೂರ್ವವಾದ ಜ್ಞಾನಾರ್ಜನೆಯ ವಿಧಾನಗಳಿಂದ ಅವರು ಹಲವು ಅತ್ಯುತ್ತಮ ಗ್ರಂಥಗಳನ್ನು ಬರೆಯಲು ಸಾಧ್ಯವಾಯಿತು. ಅದರಲ್ಲಿ ಮಂಕುತಿಮ್ಮನ ಕಗ್ಗವೂ ಒಂದು. ಈಶೊಪನಿಷತ್ತನ್ನು ಕನ್ನಡದಲ್ಲಿ ಭಾಷಾಂತರಿಸಿದರು.

೧. ಶ್ರೀಮದ್ಭಗವದ್ಗೀತಾ ತಾತ್ಪರ್ಯ,
೨. ಜೀವನ ಸೌಂದರ್ಯ, ಮತ್ತು ಸಾಹಿತ್ಯ,
೩. ಸಂಸ್ಕೃತಿ,
೪. ದೇವರು,
೫. ಋತು ಸತ್ಯ ಧರ್ಮ,
೬. ರಾಜ್ಯಶಾಸ್ತ್ರ,
೭. ಉಮರನ ಒಸಗೆ,

ಶ್ರೀಮದ್ ಭಾಗವತದರ್ಶನಕ್ಕೆ ಕೇಂದ್ರ ಸಾಹಿತ್ಯ ಅಕ್ಯಾಡಮಿ ಅವಾರ್ಡ ಸಿಕ್ಕಿತು. ೧೯೭೪, ರಲ್ಲಿ ಪದ್ಮಭೂಷಣ. ೧೯೭೫ ರಲ್ಲಿ, ಅಕ್ಟೋಬರ್ ೭ ರಂದು ಮರಣ. ಡಾ. ಬಿ. ಜಿ.ಎಲ್ ಸ್ವಾಮಿ, ಅವರ ಒಬ್ಬನೆ ಮಗ. ಗುಂಡಪ್ಪನವರ ಮಡದಿ ಭಾಗೀರತಮ್ಮ, ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡರು. ಅವರ ಮರಣದ ನಂತರ ಪುನರ್ವಿವಾಹವಾಗದೆ, ತಮ್ಮ ಮನಸ್ಸನ್ನು ಸಾಹಿತ್ಯದ ಕಡೆಗೆ ತಿರುಗಿಸಿದರು. ಪಾಶ್ಯಾತ್ಯ ಗ್ರಂಥಗಳನ್ನೂ ವಿಪುಲವಾಗಿ ಓದಿದ್ದರು. ಅವರು ಅವರ ವೇದಾಂತ , ಪಾಶ್ಚಾತ್ಯರ ತತ್ವ ದರ್ಶನಗಳನ್ನು ತಮ್ಮ ಪರೀಕ್ಷೆಗೆ ಒಳಪಡಿಸಿ ತಮ್ಮದೇ ಆದ ಒಂದು ಸಿದ್ಧಾಂತಕ್ಕೆ ಹೊಂದಿದ್ದರು. ಅವುಗಳಲ್ಲಿ 'ಮಂಕುತಿಮ್ಮನಕಗ್ಗ' ವೂ ಒಂದು. ಜೀವನ ಸೌಂದರ್ಯ, ಮತ್ತು ಸಾಹಿತ್ಯ, ಸಂಸ್ಕೃತಿ, ಮುಂತಾದ ಗ್ರಂಥಗಳಲ್ಲಿ ಹೇಳಿರುವ ಮಾತುಗಳು ಕಗ್ಗದ ಪದ್ಯಗಳಿಗೆ ವ್ಯಾಖ್ಯಾನದೋಪಾದಿಯಲ್ಲಿ ಇವೆ. ಆ ಸಮಯದಲ್ಲೆ ಅವರ ಲೇಖನಿಯಿಂದ ಅನೇಕ ಅನರ್ಘ್ಯರತ್ನ ಕೃತಿಗಳು ಹೊರಬಂದವು.

ಮೇಲೆ ತಿಳಿಸಿದ ಕಗ್ಗಕ್ಕೆ ಕೈಪಿಡಿ ಬರೆದ, ಶ್ರೀ ವೆಂಕಟರಮಣನ್, ೧೭-೧೮ ವರ್ಷಗಳು ಡೀ. ವಿ. ಜಿ ಅವರ ನಿಕಟ ವರ್ತಿಗಳಾಗಿದ್ದು, ಗೋಖಲೆ ಸಾರ್ವಜನಿಕ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. ಅವರು ಜಂಟೀ ಕಾರ್ಯದರ್ಶಿಗಳು. ಗುಂಡಪ್ಪನವರ ನಿಕಟವರ್ತಿಗಳು. ಅವರ ವಿಚಾರಧಾರೆಗಳನ್ನು ಬಲ್ಲವರು.
ವೆಂಕಟರಮಣರು ವ್ಯಾಖ್ಯಾನಿಸಿದ ವಿಷಯಗಳನ್ನೆ ನನ್ನ ಒಂದು ಕ್ರಮದಲ್ಲಿ ವಿಂಗಡಿಸಿ ಕೊಟ್ಟಿದ್ದೇನೆ. ಅದರಲ್ಲಿ . ನನಗೆ ಕಗ್ಗದ ಹಿರಿಮೆಗಳು ಹೆಚ್ಚು ಹೆಚ್ಚು ಜನರಿಗೆ ತಲುಪಲೆನ್ನುವ ಕಾತುರ. ಕೊನೆಯ ಪಕ್ಷ, 'ಇಂಟರ್ ನೆಟ್' ಓದುಗರಿಗೆ ಅದರ ಬಗ್ಗೆ ಒಂದೆರಡು ಉದಾಹರಣೆಗಳನ್ನು ಪ್ರಸ್ತುತಪಡಿಸಿದರೆ, ಅವರು ಓದಿ ಅದರ ಉಪಯೊಗವನ್ನು ಪಡೆಯಲೆಂಬುದೇ ನನ್ನ ಅಭಿಮತ. ಇಂತಹ ಉತ್ತಮ ಸಾಹಿತ್ಯವನ್ನು ಕೊಟ್ಟ ಡೀ. ವಿ. ಜಿ ಯವರಿಗೆ ಎಲ್ಲರ ಪರವಾಗಿ ನಮನಗಳು.

ಕಗ್ಗದ ವಿಶೇಷತೆಗಳನ್ನು ಹಲವರು ಕಂಡುಕೊಂಡ ಬಗೆಗಳು ನಿಜವಾಗಿಯೂ ಅಭಿನಂದನೀಯ :

ಚಿಂತನ ಶೀಲರೂ ವಾಗ್ಮಿಗಳೂ, ವಿದ್ವಾಂಸರೂ ಆದ, ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಹರ್ಷಾನಂದ್ ಜೀರವರು ಹೇಳಿರುವ ಮಾತು ಸ್ತುತ್ಯಾರ್ಹ : ಕೆಲವು ಓದುಗರು 'ಮಂಕುತಿಮ್ಮನ ಕಗ್ಗವನ್ನು' ಒಂದು ಅದ್ಭುತ ಗ್ರಂಥವೆಂದು ಪರಿಗಣಿಸುತ್ತಾರೆ. ಎಕೆಂದರೆ ಅದು ದರ್ಶನವೂ ಹೌದು, ಸುಭಾಷಿತ, ಮತ್ತು ಉತ್ತಮ ಸಾಹಿತ್ಯ. ಜೀವನದ ಮೂಲ ಸಮಸ್ಯೆಗಳ ಬಗ್ಗೆ ಚಿಂತನೆ, ಮತ್ತು ವರ್ಣನೆ ಇದೆ. ಎಲ್ಲ ಜನರಿಗೂ ಎಲ್ಲಾ ಕಾಲಕ್ಕೂ ಉಪಯುಕ್ತವಾಗಬಲ್ಲ ವಿಷಯಗಳಿರುವ ಸುಭಾಷಿತ- ಇಡೀ ಜನಾಂಗದ ಚಿಂತನಧಾರೆಯನ್ನು ಮೇಲ್ಮಟ್ಟಕ್ಕೆ ಎತ್ತಬಲ್ಲ ಸತ್ವ ಇದರಲ್ಲಿದೆ. ಇದೇ ಸಾಹಿತ್ಯದಲ್ಲಿ ನಾವುಗಳು ಗಮನಿಸಬೇಕಾದ ಮುಖ್ಯ ಲಕ್ಷಣಗಳು ; ಮತ್ತು ಗುಣಗಳು.

ಚಿನ್ಮಯಾ ಮಿಷನ್ ನ, ಶ್ರೀ ಸ್ವಾಮಿ ಬ್ರಹ್ಮಾನಂದರು, ಕಗ್ಗವನ್ನು ಕನ್ನಡದ ಭಗವದ್ಗೀತೆಗೆ ಹೋಲಿಸಿದ್ದಾರೆ. ಕಗ್ಗವನ್ನು ಕುರಿತ ಅವರ ಉಪನ್ಯಾಸಗಳು ೧೦ ವರ್ಷಕ್ಕಿಂತ ಹೆಚ್ಚು.

ಪ್ರೊ. ಎಚ್ ಎಸ್. ಲಕ್ಷ್ಮೀನಾರಾಯಣ ಭಟ್ಟರು ಸುಮಾರು ೨೦ ವರ್ಷಗಳಿಗಿಂತ ಹೆಚ್ಚಾಗಿ ಕಗ್ಗದ ಬಗ್ಗೆ ಉಪನ್ಯಾಸಗಳನ್ನು ಕೊಡುತ್ತಾ ಬಂದಿದ್ದಾರೆ.

ಕರ್ನಾಟಕ ರಾಜ್ಯದ ಮಾಜೀ ನ್ಯಾಯಾಧೀಶರೂ, ರಾಜ್ಯಪಾಲರೂ,ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿಗಳಾಗಿದ್ದ , ಶ್ರೀ. ನಿಟ್ಟೂರು ಶ್ರೀನಿವಾಸರಾಯರು, ಕಗ್ಗದ ಪ್ರಸಾರಕ್ಕೆ ತಮ್ಮ ತುಂಬು ಹೃದಯದ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ.

ರಾಷ್ಟ್ರ ಕವಿ, ಕುವೆಂಪುರವರ ಮಾತುಗಳು ಎಷ್ಟು ಅರ್ಥಪೂರ್ಣ.

ಹಸ್ತಕ್ಕೆ ಬರೆ ನಕ್ಕೆ ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ- ಮಂಕುತಿಮ್ಮ.

ಮಂಕುತಿಮ್ಮನೇ ಏಕೆ ಎನ್ನುವುದರ ಬಗ್ಗೆ, ಡಿ. ವಿ. ಜಿ ಯವರ ಕಲ್ಪನೆ ಸರಿಯಾಗಿದೆ. ನಿಜವಾಗಿ ಅವರು ತಿಮ್ಮ ಗುರುಗಳು. ಅನುಭಾವ, ಅಧ್ಯಯನ, ಸಾಮಾನ್ಯಜನ ಮತ್ತು ಮಹಾನುಭಾವರುಗಳ ಸಂಪರ್ಕದಿಂದ ತತ್ವ-ಜ್ಞಾನ ಮತ್ತು ಸಿದ್ಧಾಂತ, "ವನಸುಮದ ಆದರ್ಶ" ದಲ್ಲಿದೆ ಕಗ್ಗದ ರಚನೆಯ ಬಗ್ಗೆ ಇದ್ದ ಉದ್ದೇಶ, ಸ್ಪಷ್ಟವಾಗಿದೆ.

ವಿಶದಮಾದೊಂದು ಜೀವನಧರ್ಮ ದರ್ಶನವ-
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು.
ನಿಸದವಂ ಗ್ರಂಥಾನುಭವಗಳಿಂದಾರಿಸುತ.
ಹೊಸೆದನೀ ಕಗ್ಗವನು-ಮಂಕುತಿಮ್ಮ.

ಕಗ್ಗದ ಮೊದಲ ೩ ಪದ್ಯಗಳನ್ನು ಮನುಷ್ಯನ ಹೃದಯದಲ್ಲಿ ಏಳಬಹುದಾದ ಪ್ರಶ್ನೆಗಳ ಸಾರಾಂಷವೆಂದೂ, ಕಗ್ಗದ ಕೊನೆಯ ಒಂದೂವರೆ ಪದ್ಯವನ್ನು, ಪ್ರಶ್ನೆಗೆ ಉತ್ತರವೆಂದೂ, ಮಿಕ್ಕ ಭಾಗಗಳನ್ನು ಪ್ರಶ್ನೆಗಳ ವಿಚಾರದ ಚರ್ಚೆ, ಉತ್ತರಗಳ ಅನ್ವೇಷಣೆ, ವಿಶ್ಲೇಷಣೆಗಳೆಂದೂ, ತಿಳಿದುಕೊಳ್ಳಬಹುದು

ಅನೇಕ ವಿದ್ವಾಂಸರುಗಳು ಲೇಖನಗಳನ್ನು ಬರೆದಿದ್ದಾರೆ ; ಗಮಕ ಹಾಡಿದ್ದಾರೆ. ಉಪನ್ಯಾಸಗಳು ಸಾಕಷ್ಟು ನಡೆದಿವೆ. ಮತ್ತು ಮೇಲೆ ತಿಳಿಸಿದ ಎಲ್ಲರೂ ಕಗ್ಗದ ಕ್ಯಾಸೆಟ್ಟುಗಳನ್ನು, ಹೊರತಂದಿದ್ದಾರೆ. ಡಾ. ರಾಜ್ಕುಮಾರರು ಕಗ್ಗದ ಕೆಲವು ಪದ್ಯಗಳನ್ನು ಹಾಡಿದ್ದಲ್ಲದೆ, ಸೀ. ಡಿ ಮೂಲಕ ಅದನ್ನು ಪ್ರಚಾರಗೊಳಿಸಿ ಜನಪ್ರಿಯಮಾಡಿರುವುದು ಶ್ಲಾಘನೀಯ.

ಕೆಲವರ ಅಭಿಪ್ರಾಯಗಳು ನಿಜಕ್ಕೂ ದಾಖಲಿಸಲು ಅರ್ಹವಾಗಿವೆ :

ಕಗ್ಗವನ್ನು ಅರ್ಥಮಾಡಿಕೊಳ್ಳಲು ಪ್ರತಿಪದಾರ್ಥವನ್ನು ಮಾಡಿಕೊಂಡು, ವಿವರಣೆ ಹೇಳಿ, ತಾತ್ಪರ್ಯ ತಿಳಿಯುವುದೊಂದಾದರೆ, ಅವರ ಅನೇಕ ಗ್ರಂಥಗಳನ್ನು ಅವಲೊಕಿಸಿ, ಆ ಹಿನ್ನೆಲೆಯಲ್ಲಿ. ಇನ್ನೊಂದು, ವೆಂಕಟರಾಮನ್ ಎರಡನೆಯ ಮಾರ್ಗದಲ್ಲಿ ನಡೆದಿದ್ದಾರೆ. ಮೊದಲ ೩ ಪದ್ಯಗಳಿಗೆ ಕೊಟ್ಟಿರುವ ವಿವರಣೆ, ಕಗ್ಗದ ಕೊನೆಯ ಪದ್ಯಗಳಿಗೂ ಇರುವ ಸಂಬಂಧ ದಾಖಲಿಸುವುದು ಮುಖ್ಯ. ೪ ನೇ ಪದ್ಯದಿಂದ ೪೨ ರ ವರೆಗೆ ಪದ್ಯಗಳಲ್ಲಿ ಬರುವ ಪ್ರಶ್ನೆಗಳ ಪ್ರಸಕ್ತತೆಯನ್ನೂ ನಮಗೆ ತಿಳಿಸಿದ್ದಾರೆ. ಒಟ್ಟಾರೆ ಅತ್ಮವಿಸ್ತರಣಾಭ್ಯಾಸ, ಸರ್ವ ಸಹಭಾಗಿತೆ, ಮತ್ತು ಜೀವನೋತ್ಸಾಹಗಳಲ್ಲದೆ, ಸತ್ಯ ಮತ್ತು ಸೌಂದರ್ಯಗಳನ್ನೂ, ವಿವರಿಸಿರುವುದು ಬುದ್ಧಿಪ್ರಚೋದಕವಾಗಿದೆ. ಜನಪದ ಹಾಡಿನ ಅರ್ಥದದಲ್ಲಿ ಕಗ್ಗವು ಮೂಲತಃ ಕತ್ತಿ, ಎಂಬರ್ಥದಿಂದ, ಖಡ್ಗದಿಂದ ಬಂದಿರುವಂತೆ ತೋರುತ್ತದೆ. [ಪ್ರಾಕೃತ -ಖಾಗ್ಗ] ಡಾ. ಶ್ರೀ. ಎಂ. ಚಿದಾನಂದ ಮೂರ್ತಿಯವರು ಒಂದು ಲೇಖನ ಬರೆದಿದ್ದಾರೆ. "ಕಗ್ಗ ಪದದ ವ್ಯುತ್ಪತ್ತಿ ಮತ್ತು ಅರ್ಥ ವ್ಯತ್ಯಾಸ" ಎಂಬ ಲೇಖನದಲ್ಲಿ ವಿವೇಚನೆ ಮಾಡಿದ್ದಾರೆ. [ ಛಂದೋತರಂಗ, ಪು. ೨೩೫-೨೩೯.] ಹೊಸಗನ್ನಡದಲ್ಲಿ ಕಗ್ಗ, ಕೆಲಸಕ್ಕೆ ಬಾರದ್ದು, ನಿಷ್ಪ್ರಯೋಜಕ ಎನ್ನುವ ಹೀನ- ಅರ್ಥವಿದೆ. ಮತ್ತೊಬ್ಬ ವಿದ್ವಾಂಸರು ಇದು ನಿಜವಾಗಿಯೂ ಕಗ್ಗವೂ ಅಲ್ಲ. ಮಂಕು ತಿಮ್ಮ ವಾಸ್ತವವಾಗಿ ಮಂಕ ಅಲ್ಲ. ಹಗ್ಗವೂ ಅಲ್ಲ. ಸಗ್ಗ; ವೇದಾಂತ ಸಾರಸಂಗ್ರಹ. ವಿದ್ವತ್ ಸಾಧಕರೊಬ್ಬರ ಅನುಭವಾಮೃತ ಉದಾತ್ತ ಧ್ಯೇಯ, ನೀತಿ, ಆದರ್ಶಗಳನ್ನು ಕುರಿತು ಮಾತನಾಡುವವರು ಲೌಕಿಕರಿಗೆಗೆ ಮಂಕರಂತೆ ಕಾಣುತ್ತಾರೆ. ಡಿ. ವಿ. ಜಿ. ಯವರ ಕೃತಿ ಶೀರ್ಷಿಕೆ, "ಮಂಕುತಿಮ್ಮನ ಕಗ್ಗ," ಈ ನಿಟ್ಟಿನಲ್ಲಿ ಬಹಳ ಅರ್ಥಪೂರ್ಣ. ಇದು ಮೊದಲು ಪ್ರಕಟವಾಗಿದ್ದು ೧೯೪೩ ರಲ್ಲಿ. ೧೯೪೩ ರಿಂದ ೨೦೦೦ ದ ವರೆಗೆ ಪ್ರಕಟಿಸಿದ ಪ್ರತಿಗಳು ಹೀಗಿವೆ :

೧೯೪೩, ೧೯೫೦, ೧೯೫೮, ೧೯೬೪, ೧೯೬೯, ೧೯೭೩, ೧೯೭೭, ೧೯೮೦, ೧೯೮೭, ೧೯೮೮, ೧೯೯೩, ೧೯೯೬, ಮತ್ತು ೨೦೦೦ ದಲ್ಲಿ. ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಖರ್ಚಾಗಿವೆ. ದುಡ್ಡು ಕೊಟ್ಟು ಓದಿದವರ ಸಂಖ್ಯೆಯೂ ಹೆಚ್ಚಾಗಿಯೆ ಇದೆ !

ಮಂಕುತಿಮ್ಮನ ಕಗ್ಗದ ಬಗ್ಗೆ ಅನೇಕ ಪುಸ್ತಕಗಳು ಹೊರಗೆ ಬಂದಿವೆ. ಅವುಗಳಲ್ಲಿ :

೧. ಮಂಕುತಿಮ್ಮನಿಗೆ ಮೌನ ನಮನ, - ಮೌನೇಶ. ಗಾಡದ [೧೯೮೮]

೨. 'ಮಂಕುತಿಮ್ಮನ ಕಗ್ಗ,' ಒಂದು ವಿವೇಚನೆ ಶ್ರೀ ಸ್ವಾಮಿ ಬ್ರಹ್ಮಾನಂದ [೧೯೯೩]

೩. ಆಡು ಕನ್ನಡದಲ್ಲಿ ಮಂಕುತಿಮ್ಮನ ಕಗ್ಗ - ಪ್ರೊ. ಕೆ. ಎನ್. ರಂಗನಾಥ ಶಾಸ್ತ್ರೀ [೧೯೯೯]

೪. 'ಮಂಕುತಿಮ್ಮನ ಕಗ್ಗ'-ತಾತ್ಪರ್ಯ- ಶ್ರೀ ಶ್ರೀಕಾಂತ್

೫. ಮಂಥನ- ಡಿ. ವಿ. ಜಿ. ಯವರ 'ಮಂಕುತಿಮ್ಮನ ಕಗ್ಗ'ದ ಸಮೀಕ್ಷೆ-
ಶ್ರೀಮತಿ ಸುಶೀಲಾ ಶ್ರೀನಿವಾಸ ದೇಶಪಾಂಡೆ.

ನಾನು ಚಿಕ್ಕವನಾಗಿದ್ದಾಗ ( ೧೯೫೪ ರಲ್ಲಿ ನನಗೆ ೧೦ ವರ್ಷ ) ನಮ್ಮ ತಂದೆಯವರು, ಅನೇಕ ನೀತಿಯುತವಾದ ಪುಸ್ತಕಗಳನ್ನು ಓದಿ ಅದರ ಅರ್ಥವನ್ನು ನಮ್ಮ ವಠಾರದ ಅಂಗಳದಲ್ಲಿ ಎಲ್ಲರಿಗೂ, ವಿವರಿಸಿ ಹೇಳುತ್ತಿದ್ದದ್ದು ಇಂದೂ ನೆನಪಿದೆ. ಇದು ನಾನು ಹೊಳಲ್ಕೆರೆಯಲ್ಲಿ ಒದುತ್ತಿದ್ದ ಕಾಲ. ಅವರು ಆಗಿನಕಾಲದಲ್ಲೇ ಬೊಂಬಾಯಿ ಮತ್ತು ಮದ್ಯಭಾರತದಲ್ಲೆಲ್ಲಾ ಕೆಲಸಮಾಡಿ ಬಂದವರು. ಇಂಗ್ಲೀಷಿನ ಜೊತೆಗೆ, ಸುಮಾರು ಭಾಷೆಗಳನ್ನು ಓದಲು ಬರೆಯಲು ಮತ್ತು ಮಾತಾಡಲು ಕಲಿತಿದ್ದರು. ದಾಸ್ ಬೋಧ್- ಮರಾಠಿ ಪದ್ಯ ಸಂಗ್ರಹ. ಮರಾಠಿ ಕಲಿತಿದ್ದ ಅವರು ಅದನ್ನು ಪಠಿಸಿ ವಿವರಿಸುತ್ತಿದ್ದರೆ ನಮಗೆಲ್ಲಾ ಅತೀವ ಆನಂದವಾಗುತ್ತಿತ್ತು. ಇನ್ನೊಂದು ಅವರಿಗೆ ಪ್ರಿಯವಾದ ಗ್ರಂಥವೆಂದರೆ, ಹೊಸಕೆರೆ ಚಿದಂಬರಯ್ಯನವರು ಸಂಪಾದಿಸಿದ, "ಅನುಭವಾಮೃತ," ದ ಸಾಲುಗಳು ಅತ್ಯಂತ ಮುದಕೊಡುತ್ತಿದ್ದವು. ಪದಗಳ ಅರ್ಥ ಎಷ್ಟು ಸರಳವೆಂದರೆ, ನಮಗೂ ಸುಮಾರಾಗಿ ಎಲ್ಲ ಗೊತ್ತಾಗುತ್ತಿತ್ತು.

ನಮ್ಮ ಊರಿನಲ್ಲಿ ಯಾವ ಸೌಕರ್ಯಗಳೂ ಇರದೆ ಒಂದು ಅತ್ಯಂತ ಕಗ್ಗಹಳ್ಳಿಯಾಗಲು ನಮ್ಮ ಗ್ರಾಮದ ಮುಂದಾಳುಗಳೇ ಕಾರಣರೆಂದು ಕೇಳಿದ್ದೆ. "ಪಬ್ಲಿಕ್ ಲೈಬ್ರರಿ," ಚಿತ್ರದುರ್ಗದಲ್ಲಿತ್ತು. ಬೆಂಗಳೂರು ಮತ್ತು ಜಿಲ್ಲಾ ಮುಖ್ಯಗಳಲ್ಲಿ ಇದ್ದವು. ಸರ್ಕಾರ ರೈಲುಮಾರ್ಗ ಹಾಕಲು ಊರಿನ ಮುಖಂಡರನ್ನು, ಅವರ ಸಲಹೆ ಪರಾಮರ್ಷೆಮಾಡಿದಾಗ, ಅವರು ಊರಿಗೆ ಹತ್ತಿರವಿದ್ದರೆ ಪಿಡುಗು ಬರುತ್ತದೆ. ದೂರದಲ್ಲಿ ಹಾಕಿಬಿಡಿ ಎಂದರತೆ. ಹೀಗಾಗಿ ನಮ್ಮ ಊರಿಗೆ ೪ ಮೈಲಿ ದೂರದಲ್ಲಿ ರೈಲ್ವೆ ಸ್ಟೇಷನ್ ಇದೆ. ಯಾವ ಕಾರ್ಖಾನೆ ಉದ್ಯಮಗಳೂ ಇಲ್ಲ. ಸ್ಕೂಲು, ಕಾಲೇಜ್ ಬರಲು ಬಹಳ ಸಮಯ ಹಿಡಿಯಿತು. ಒಟ್ಟಿನಲ್ಲಿ ನವ ನಾಗರಿಕತೆ ಬರಲು ಸುಮಾರು ೫೦ ವರ್ಷ, ನಮ್ಮ ಊರಿನ ಜನ ಕಾಯಬೇಕಾಯಿತು.

ಅವರು ಬರೆದ ಅನೇಕ ಪುಸ್ತಕಗಳು ನಮ್ಮ ಮನೆಯ ಪುಸ್ತಕ ಭಂಡಾರದಲ್ಲಿ ಇದ್ದವು. ಅನುಭವಾಮೃತದ ಪದ್ಯದ ಸಾಲುಗಳು, ಎಂತಹವರನ್ನೂ ಮರುಳು ಮಾಡುವಷ್ಟು ಸರಳ ಶೈಲಿಯಲ್ಲಿ ಬರೆದದ್ದು. ಆಗ ಕಗ್ಗದ ಹೆಸರು ನಮಗೆ ತಿಳಿದಿರಲಿಲ್ಲ. ನಮ್ಮಪಠ್ಯ ಪುಸ್ತಕದಲ್ಲಿ, "ವನಸುಮದಲಿ" ಎನ್ನುವ ಪದ್ಯ ಇತ್ತು. ಅದರಿಂದ ನಮಗೆ ಡೀ. ವಿ. ಗುಂಡಪ್ಪನವರ ಹೆಸರು ತಿಳಿದಿತ್ತು.

ಬೆಂಗಳೂರಿಗೆ ಬಂದ ಮೇಲೂ, ನಾನು ಗೋಖಲೆ ಇನ್ಸ್ಟಿಟ್ಯೂಟಿನ ಕಾರ್ಯಕ್ರಮಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಆದರೆ ಅಲ್ಲಿಗೆ ಹೋಗಲಾಗಲಿಲ್ಲ. ಏಕೆಂದರೆ ನಮಗೆ ಬಹಳ ಹತ್ತಿರ, " The Indian Institute of World Culture," ಇತ್ತು. ಅಲ್ಲಿ ನಮಗೆ ಬೇಕಾದ ಪುಸ್ತಕಗಳು ಸಿಗುತಿದ್ದವು. ಮೇಲಾಗಿ ಸುವ್ಯಸ್ಥಿತ ಸಭಾಗೃಹದ ವ್ಯಸ್ಥೆ ಚೆನ್ನಾಗಿತ್ತು. ಬೊಂಬಾಯಿಗೆ ಬಂದಮೇಲೆ ಸ್ವಾಮಿ ಚಿನ್ಮಯಾನಂದರ "ಗೀತಾಜ್ಞಾನ ಯಜ್ಞ", ದ ಪ್ರವಚನಗಳು ಬಿರುಸಿನಿಂದ ನಗರದ ಎಲ್ಲಾ ಪ್ರದೇಶಗಳಲ್ಲೂ ನಡೆಯುತ್ತಿದ್ದವು. ಸಹಸ್ರಾರು ಜನ ಅದನ್ನು ಕೇಳಲು ದೂರ ದೂರಗಳಿಂದ ಬರುತ್ತಿದ್ದರು. ನಾನೂ ನನ್ನ ಆಫೀಸ್ ಮುಗಿಸಿಕೊಂಡು ನೇರವಾಗಿ ಶಿವಾಜಿಪಾರ್ಕಿಗೆ ಸ್ವಾಮಿಗಳ ಪ್ರವಚನವನ್ನು ಕೇಳಲು ಹೋಗುತ್ತಿದ್ದೆ. ಸ್ವಾಮಿ ಚಿನ್ಮಯಾನಂದರ ಮರಣದ ನಂತರ ನನಗೆ ಕಗ್ಗದ ಬಗ್ಗೆ ಹೆಚ್ಚು ಹೆಚ್ಚು ಪ್ರವಚನಗಳು ಕಾಣಿಸತೊಡಗಿದವು. ನಾನು ಹೇಳುತ್ತಿರುವುದು ಬೊಂಬಾಯಿ ನಗರದ ವಿಷಯ. ಬೆಂಗಳೂರಿನ ವಿಷಯ ನನಗೆ ಹೆಚ್ಚಾಗಿ ತಿಳಿಯದು. ಇದು ನನ್ನ ಅಲ್ಪ ಜ್ಞಾನದ ಪರಿಚಯ ಅಷ್ಟೆ.

ಆಗ ಬೆಂಗಳೂರಿನಲ್ಲಿ ಪ್ರಚಾರ ಜೋರಾಗಿ ನಡೆದಿರಬಹುದು. ಕಗ್ಗದ ಪುಸ್ತಕಗಳ ಪುನಃ ಮುದ್ರಣಗಳೇ ಅದರ ಕಥೆಯನ್ನು ಸಾರಿ ಹೆಳುತ್ತವೆ. ಒಟ್ಟಿನಲ್ಲಿ ಸಿ. ಡಿ ಕ್ಯಾಸೆಟ್ ಗಳು ಮತ್ತು ರಾಜಕುಮಾರ್ ಮುಂತಾದವರ ಹೆಚ್ಚು ಪ್ರಚಾರದಿಂದಾಗಿ ಇದು ಸಂಭವಿಸಿದೆ ಎಂದು ಹೇಳಬಹುದು. ಬಹುಶಃ ಹೊಸಕೆರೆ ಚಿದಂಬರರು, ಮತ್ತು ಅವರ ಸಮಕಾಲೀನರು ಅಷ್ಟು ಅದೃಷ್ಟವಂತರಿಲ್ಲದಿರಬಹುದು !

ನನಗೆ ನಮ್ಮ ಅಣ್ಣನವರು, ೨೦೦೪ ರಲ್ಲಿ, "ಮಂಕುತಿಮ್ಮನ ಕಗ್ಗ" ದ ಒಂದು ಪ್ರತಿಯನ್ನು ಕೊಟ್ಟು, ಪ್ರತಿದಿನ ಓದು, ಎಂದು ಹೇಳಿದಮೇಲೆ, ನನಗೆ ಅದರಲ್ಲಿ ಆಸಕ್ತಿ ಹೆಚ್ಚಿ ಓದತೊದಗಿದೆ. [ ಕ್ರಯ. ರೂ.೨೨೫/- !] ನಿಧಾನವಾಗಿ ಓದುತ್ತಿದ್ದೆ. ನಮ್ಮ ಪಕ್ಕದ ಮನೆಗೆ ಚಿನ್ಮಯಾನಂದ ಮಿಶನ್ ನ ಒಬ್ಬ ಸ್ವಾಮಿಗಳು ಬರುತ್ತಾರೆ, ಪ್ರವಚನಮಾಡಲು ಎಂದಾಗ, ನಾನು ಸ್ವಲ್ಪ ಜಾಗೃತನಾದೆ. ಪುಸ್ತಕ ಇನ್ನೂ ಮುಗಿಸಿಲ್ಲ. ನೋಡೋಣ, ವಿವರಣೆ ಹೇಗಿದೆ ಎಂದು. ಮತ್ತೆ ಚೆಂಬೂರಿನಲ್ಲಿ ಸಿಂಧಿ ಕಾಲೊನಿಯಲ್ಲಿ, ಒಂದು ಸಾಯಂಕಾಲ ಪ್ರವಚನ ನಡೆಯಿತು. ಅದೂ 'ಚಿನ್ಮಯಮಿಶನ್' ನ ವತಿಯಿಂದ. ನನಗೆ ತಡೆಯಲಾಗಲಿಲ್ಲ. ಪುಸ್ತಕವನ್ನು ಪ್ರತಿದಿನ ಖಡ್ಡಾಯವಾಗಿ ಒಂದು ಗಂಟೆ ಪಠನ ಮಾಡುವ ಕಾರ್ಯಕ್ರಮ ಇಟ್ಟುಕೊಂಡೆ. ಈ ಲೇಖನ ಅದರ ಒಂದು ಪ್ರತಿಫಲ ಎನ್ನಬಹುದು !
ವನಸುಮದ ಕಲ್ಪನೆ ಮತ್ತು ಅದರ ಆದರ್ಥ ನಮ್ಮ ಜೀವನದ ಮೇಲೆ, ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ

ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವವನು ತೊರೆದು ಕೃತಕೃತ್ಯತೆಯ ಪಡೆವಂತೆ
ವಿಪರೀತ ಮತಿಯನುಳಿದು..
ನೈಜಮಾದೊಳ್ಪಿನಿಂ ಬಾಳ್ವವೊಲು.

ಸ್ವಾಮೀ ರವಿ ಶಂಕರರ, "ಆರ್ಟ್ ಅಫ್ ಲಿವಿಂಗ್", ಮತ್ತು ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಕಾರ್ಯಕ್ರಮಗಳು ಇಂದಿನ ಜೀವನಕ್ಕೆ ಬೇಕಾದ ಸಾಮಗ್ರಿಗಳು. ಆ ಹಿನ್ನೆಲೆಯಲ್ಲಿ ನಾನು ಡಿ. ವಿ. ಜಿ. ರವರ "ಜೀವನದ ಲಲಿತಕಲೆ", ಎನ್ನುವ ಭಾಗ, ನನಗೆ ಬಹಳ ಇಷ್ಟವಾದ ವಿಷಯವಾಯಿತು. ಆ ಪರಿಛ್ಛೇದದ ಕೆಲವು ಪದ್ಯಗಳನ್ನು ಇಲ್ಲಿ ದಾಖಲುಮಾಡಿದ್ದೇನೆ. ಇದು ಡಿ. ವಿ. ಜಿ ಮತ್ತು ವೆಂಕಟರಮಣರು ಸೇರಿ ನಮಗೆ ಕೊಟ್ಟಿರುವ ಪುಸ್ತಕದಿಂದಲೇ ಪದ್ಯಗಳನ್ನು ಹೇಗಿದೆಯೋ ಹಾಗೆ ತೆಗೆದುಕೊಂಡದ್ದು. ಪ್ರತಿಪದಾರ್ಥಗಳ ವಿವರಣೆಗಳನ್ನು ಸ್ವಲ್ಪ, ಯಾವ ಅರ್ಥವೂ ಕೆಡದಂತೆ, ಚುಟುಕುಮಾಡಿ ಕೊಟ್ಟಿದ್ದೇನೆ. ಲೇಖಕರನ್ನು ಈ ಬದಲಾಣೆಗೆ ಕ್ಷಮೆಬೇಡುತ್ತೇನೆ. ಈ ಬದಲಾವಣೆ ನಾನು ಮಾಡಿದ್ದು.

"ಜೀವನದ ಲಲಿತಕಲೆ." ಪುಟ. ೪೬೯

ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ
ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ
ತಿಳಿವುದೊಳಹದದಿಂದ- ಮಂಕುತಿಮ್ಮ. [೮೨೫]

ತಿಮ್ಮಗುರು ಜೀವನ ಕಲೆ- ಕಲೆಗಳಲ್ಲೆಲ್ಲಾ ಶ್ರ್‍ಏಷ್ಟಕಲೆಯನ್ನು ಚೆನ್ನಾಗಿ ಅರಿತಿದ್ದಾರೆ. ವ್ಯಾಸಂಗ, ಲೋಕಾನುಭವ ಮತ್ತು ಚಿಂತನೆಗಳಿಂದ ಹೃದಯ ವಶಾಲ್ಯತೆಗಳನ್ನು ಪಡೆದಾಗಲೇ ನಾವು ಆ ಅನುಭವದ ಪರಿಣಾಮಗಳಿಂದ ಜೀವನವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಕಲಿಯಬಹುದು. ಆದರೆ ಇದನ್ನು ತಮ್ಮ ತಮ್ಮ ಸ್ವಂತ ಅನುಭವದಿಂದಲೇ ಅದನ್ನು ಪಡೆದುಕೊಳ್ಳಬೇಕು.

ಸಂಗೀತಕಲೆಯೊಂದು, ಸಾಹಿತ್ಯ ಕಲೆಯೊಂದು.
ಅಂಗಾಂಗ ಭಾವ ರೂಪಣದ ಕಲೆಯೊಂದು.
ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ
ಮಂಗಳೋನ್ನತ ಕಲೆಯೋ-ಮಂಕುತಿಮ್ಮ. [೮೨೬]

ನಾನು ನನ್ನದು ಎನ್ನುವ ಅಹಂ ಅನ್ನು ಕಡಿಮೆಮಾಡುತ್ತಾ ಬರಬೇಕು. ಇದಕ್ಕೆ ಅಭ್ಯಾಸ ಮುಖ್ಯ. ಆದ್ದರಿಂದ ಕೆಲವು ಕಲೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಸಂಗೀತ ಸಾಹಿತ್ಯ, ನೃತ್ಯ ಗಳು ನಮ್ಮ ಅಂತರಂಗವನ್ನು ಒಂದು ಸಂಸ್ಕಾರಕ್ಕೆ ಒಳಪಡಿಸುತ್ತವೆ.

ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ
ನೂಕುನುಗ್ಗುಗಳತ್ತ, ಸೋಂಕುರೋಗಗಳು
ಸಾಕಿ ಸಲಹುವರುಮ್ ಅತ್ತಲೆ ನಿನಗೆ ; ನಿನ್ನೆಲ್ಲ
ಲೋಕ ಮೂಲವು ನೋಡೋ-ಮಂಕುತಿಮ್ಮ. [೮೨೭]

ಇಲ್ಲಿ ತಿಮ್ಮಗುರುಗಳು ಕೆಲವು ನಿಯಮಗಳನ್ನು ತಿಳಿಸುತ್ತಾರೆ. ನಾವಿರುವ ಈ ಲೋಕ ಬ್ರಹ್ಮವಸ್ತುವಿನ ತೋರಿಕೆಯೇ ಆದ್ದರಿಂದ ಅದರ ವಿಚಾರದಲ್ಲಿ ನಮ್ಮಿಂದ ಏನಾದರೂ ಅಪಚಾರವಾದೀತೇನೋ ಎನ್ನುವ ಭಯ ನಮ್ಮಲ್ಲಿ ಮೂಡಬೇಕು. ನಾವು ಲೋಕವನ್ನು ಸ್ವಲ್ಪ ನಯದಿಂದ ನಡೆಸಿಕೊಳ್ಳತಕ್ಕದ್ದು. ಜನರ ದುಖಃ, ಸಂಕಟಗಳಿಗೆ ಸ್ಪಂದಿಸಿ ಸಹಾಯಮಾಡಬೇಕು. ನಾವು ವಿಶ್ವದ ಕೆಲವು ಸಂಗತಿಗಳಿಂದ ದೂರ ಸರಿಯಬೇಕು. ಲೋಕದ ಆಕರ್ಷಣೆಗಳು , ಸೋಂಕು ರೋಗಗಳು. ಅವು ನಮ್ಮ ಆಪ್ತಜನರ ಬಂಧನವೂ ಆಗಿರಬಹುದು. ಬ್ರಹ್ಮ ವಸ್ತುವಿನಲ್ಲೇ ಮನಸ್ಸನ್ನು ಇಟ್ಟಾಗಮಾತ್ರ ಬ್ರಹ್ಮಾನುಭವವನ್ನು ಗಳಿಸಲು ಸಾಧ್ಯವಾಗುವುದು.

ಕಳವಳವ ನೀಗಿಬಿಡು, ತಳಮಳವ ದೂರವಿಡು
ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು
ತಿಳಿ ತಿಳಿವು ಶಾಂತಿಯಲಿ ಮಂಕುತಿಮ್ಮ. [೮೨೮]

ನಮ್ಮ ಮನಸ್ಸಿನ ತಲ್ಲಣಗಳು, ಆತಂಕಗಳು ಜಗತ್ತಿನ ವ್ಯಾಪಾರಗಳಿಗೆ ಹೋಲಿಸಿದಾಗ ಮಾತ್ರ ಆಗುವಂತಹದು. ಈ ಗಾಬರಿ ಅಶಾಂತತೆಗಳನ್ನು ಮನಸ್ಸಿನಿಂದ ಹೊಗೋಡಿಸಿ ಬ್ರಹ್ಮ ವಸ್ತುವಿನ ಕಡೆಗೆ ಮನವನ್ನು ತಿರುಗಿಸಿದ್ದೇ ಆದರೆ, ನಮ್ಮ ಮನಸ್ಸು ಕದಡಿಹೋದ ನೀರಾಗದೆ, ನಿರ್ಮಲವಾಗಿದ್ದು ಸಮಾಧಾನ ದೊರೆಯುತ್ತದೆ. ಆಗ ಅನುಭವಕ್ಕೆ ಬರುವ ತಿಳಿವೆ ನಮ್ಮ ಗುರಿಯಾಗಬೇಕು.

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ
ತಳದ ಕಸ ತೇಲುತ್ತಬಗ್ಗಡವದಹುದು
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ
ತಿಳಿಯಹುದು ಶಾಂತಿಯಲಿ ಮಂಕುತಿಮ್ಮ. [೮೨೯]

ನಮ್ಮ ಮನಸ್ಸಿನಲ್ಲಿ ಮನೆಮಾಡಿರುವ, ಅಸೂಯೆ, ಅತಿಪ್ರೀತಿ, ದ್ವೇಷ, ಅತಿ ಮಹತ್ವಾಕಾಂಕ್ಷೆಗಳು ನಿಜವಾದ ಶತೃಗಳು.

ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು
ಇಳೆಯೊಳಾವುದರೊಳಮಸಹ್ಯಪಡಬೇಡ
ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ
ಕೊಳೆ ಶುಚಿಖ್ಯಾಪಕವೊ ಮಂಕುತಿಮ್ಮ. [೮೩೦]

ಆದರೆ ಇನ್ನೊಂದು ವಿಷಯ. ಈ ಲೋಕವೇ ಹಾಗೆ; ಇಲ್ಲಿ ಅಶಾಂತಿ, ತಳಮಳ, ಅತಿಯಾದ ಆನಂದ, ಮುಜುಗುರ ಎಲ್ಲವೂ ಇವೆ. ಏಕೆಂದರೆ, ಅವುಗಳಿಗು ಬ್ರಹ್ಮವಸ್ತುವಿನ ಆಟದಲ್ಲಿ ಒಂದು ಪಾಲಿದೆ. ನಾವು ಮಾತ್ರ ನಮ್ಮ ಮನಸ್ಸನ್ನು ಮಲಿನಮಾಡಿಕೊಳ್ಳದೆ ಶುಚಿಯಲ್ಲೇ ನಮ್ಮನ್ನು ಕಂಡುಕೊಳ್ಳಬೇಕು.

ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ ?.
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ ?.
ಮಲವೇನೊ ! ಹೊಲೆಯೇನೊ ! ಜೀವಸಂಬಂಧವಲ.
ಮಲಿನದಲಿ ನೆನೆ ಶುಚಿಯ ಮಂಕುತಿಮ್ಮ. [೮೩೧]

ತಿಮ್ಮ ಗುರು ಹೇಳುವಂತೆ, ಬ್ರಹ್ಮವಸ್ತುವು ಆನಂದಕ್ಕಾಗಿ ನೂರುಕೋಟಿರೂಪಗಳನ್ನು ತಾಳಿಬಂದಿದೆ. ಸುಂದರವಾದ ರೂಪ ಹೇಗೆ ಅದರ ಅಸಹ್ಯಕರವಾದ ವಸ್ತುಗಳೂ ಇವೆ. ನಾವು ಇವುಗಳನ್ನೆಲ್ಲಾ ಸಮಚಿತ್ತದಿಂದ ಪರಿಶೀಲಿಸಿ, ಆದಷ್ಟು ಅವುಗಳ ಮಧ್ಯೆ ಇದ್ದಾಗಲೂ ಶುಚಿಯಾಗಿರಲು ಪ್ರಯತ್ನಿಸಬೇಕು.

ಗುಡಿಯ ಪೂಜೆಯೊ, ಕಥೆಯೊ, ಸೊಗಸು ನೋಟವೊ, ಹಾಡೊ.
ಬಡವರಿಂಗುಪಕೃತಿಯೊ, ಆವುದೋ ಮನದ
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ.
ಬಿಡುಗಡೆಯೊ ಜೀವಕ್ಕೆ- ಮಂಕುತಿಮ್ಮ. [೮೩೨]

ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸುಲಭದಮಾತಲ್ಲ. ಇಲ್ಲಿ ಪ್ರಮುಖವಾಗಿ ಮಾಡಬೇಕಾದದ್ದು ನಾನು ನನ್ನದು ಎನ್ನುವ ಭಾವನೆಯನ್ನು ಆದಷ್ಟು ಕಡಿಮೆಮಾಡಿಕೊಳ್ಳಬೇಕು. ನಮ್ಮ ಮನಸ್ಸನ್ನು ಒಳ್ಳೆಯ ಕಾರ್ಯಗಳತ್ತ ತಿರುಗಿಸಬೇಕು. ಒಳ್ಳೆಯ ಸಂಗೀತ, ಕೀರ್ತನೆ, ಭಜನೆ, ಸಂಕೀರ್ತನೆ ಮತ್ತು ಒಳ್ಳೆಯ ಕಾರ್ಯಗಳಿಂದ ಇದನ್ನು ಸಾಧಿಸಬಹುದು.

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ.
ಜಗವ ಸುಡುಗಾಡೆನುವ ಕಟುತಪಸು ಬೇಡ.
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ.
ಮಿಗೆಚಿಂತೆ ತಲೆಹರಟೆ -ಮಂಕುತಿಮ್ಮ. [೮೩೩]

ನಮ್ಮ ನಡುವಳಿಕೆಯಲ್ಲಿ ಪರಿವರ್ತನೆಗಳನ್ನು ತಂದುಕೊಳ್ಳಬೇಕು. ಸಂತೋಷವಿರುವ ಕಡೆ ದುಖಃವನ್ನು ಬರಲು ಬಿಡಬಾರದು. ನಾವಿರುವ ಲೋಕದ ಬಗ್ಗೆ ಅಸಹ್ಯದ ಮಾತುಗಳು ಸಲ್ಲದು. ಲೋಕ ಕೆಟ್ಟದ್ದು, ಜನರೆಲ್ಲಾ ಕೆಟ್ಟವರು ಎನ್ನುವ ಮಾತಿನಲ್ಲಿ ಪೂರ್ಣಸತ್ಯವಿಲ್ಲ. ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಕೂಡ. ಮಗುವಿನ ನಿರ್ಮಲವಾದ ಮನಸ್ಸಿನಂತೆ ಆನಂದವನ್ನು ಅನುಭವಿಸುವ ಮನೋಭಾವವನ್ನು ಪಡೆಯಬೇಕು. ಆ ಜಗನ್ನಿಯಾಮಕನು ಎಲ್ಲರನ್ನೂ ಸಲಹುತ್ತಾನೆ ಎಂಬ ನಂಬಿಕೆಯೊಂದಿಗೆ ಜೀವನ ನಡೆಸಬೇಕು. ಮಿಕ್ಕೆಲ್ಲ ಮಾತು ತಲೆಹರಟೆ ಎನ್ನುತ್ತಾರೆ ತಿಮ್ಮ ಗುರುಗಳು.

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ.
ಅವನರಿವಿಗೆಟುಕುವವೊಲೊಂದಾತ್ಮನಯವ.
ಹವಣಿಸಿದನಿದನು ಪಾಮರಜನದ ಮಾತಿನಲಿ.
ಕವನ ನೆನಪಿಗೆ ಸುಲಭ-ಮಂಕುತಿಮ್ಮ

ಶ್ರೀ. ಡಿ. ವಿ. ಗುಂಡಪ್ಪನವರ ಮಾತುಗಳಲ್ಲಿ ಹೇಳುವುದಾದರೆ :

ತಾನು ದೊಡ್ಡ ಕವಿಯೂ ಅಲ್ಲ , ವಿಜ್ಞಾನಿಯೂ ಅಲ್ಲ. ತನ್ನ ಬುದ್ಧಿಸಾಮರ್ಥ್ಯಕ್ಕೆ ಸಿಕ್ಕ ಜ್ಞಾನವನ್ನು ಅರ್ಥೈಸಿಕೊಂಡು ಸಾಮಾನ್ಯ ಜನರ ಭಾಷೆಯಲ್ಲಿ ನಿರೂಪಿಸಿದ್ದೇನೆ.

ಗೌರವಿಸು ಜೀವನವ, ಗೌರವಿಸು ಚೇತನವ.
ಆರದೋ ಜಗವೆಂದು ಭೇದವೆಣಿಸದಿರು.
ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ.
ದಾರಿಯಾತ್ಮೋನ್ನತಿಗೆ -ಮಂಕುತಿಮ್ಮ

ಜೀವನದ ಬಗ್ಗೆ ಗೌರವವಿರಲಿ. ಕಷ್ಟ ಕೋಟಲೆಗಳೆಷ್ಟು ಬಂದರೂ ಹೆದರದೆ, ಬೇಸರಸಿಕೊಳ್ಳದೆ, ಸಮಚಿತ್ತರಾಗಿ ನಗುಮುಖದಿಂದ ಅದನ್ನು ಎದುರಿಸಲು ಸಿದ್ಧರಾಗಬೇಕು.

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ.
ಇಂದು ನಂಬಿಹುದೆ ಮುಂದೆಂದುಮೆಂದಲ್ಲ.
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು.
ಇಂದಿಗೀ ಮತವುಚಿತ- ಮಂಕುತಿಮ್ಮ

ಮೇಲೆ ನಿರೂಪಿಸಿದ ಮಾತುಗಳು ನಾನು ಕಂಡುಕೊಂಡ ಸತ್ಯಗಳು. ಇವು ನನ್ನ ಅಧ್ಯಯನ ಮತ್ತು ಅವುಗಳ ಚಿಂತನೆಯಿಂದ ದೊರೆತ ನಿಸದ, ಸತ್ಯ ಇಂದು ನನಗೆ ಸರಿಯಾದದ್ದು ಎನ್ನಿಸಿದೆ.

ಒಟ್ಟಾರೆ ಕಗ್ಗದ ವ್ಯಪ್ತಿ ವಿಸ್ತಾರವಾದದ್ದು. ಮಂಕುತಿಮ್ಮನ ಹೆಸರು ಬಳಸಿರುವುದಕ್ಕೆ ಕಾರಣವಿದೆ. ವಾಸ್ತವವಾಗಿ, ತಿಮ್ಮನು ಮಂಕನು ಅಲ್ಲ ; ಕೆಲಸಕ್ಕೆ ಬಾರದವನೂ, ಅಲ್ಲವೇ ಅಲ್ಲ. ಉದಾತ್ತಆದರ್ಶ, ನೀತಿಗಳನ್ನು ಕುರಿತು ಮಾತನಾಡುವವರು, ಲೌಕಿಕ ಜನರ ಕಣ್ಣಿನಲ್ಲಿ ಮಂಕರು. ತಿಳಿದವರಿಗೆ ಅದು ಕಗ್ಗ ; ಮಂಕುಗಳಿಗೆ ಅರ್ಥವಿಲ್ಲ. ಆದ್ದರಿಂದ ಅವರ ಕೃತಿಗೆ ಇಟ್ಟಿರುವ ಶಿರೋನಾಮ, ಮೇಲೆ ತಿಳಿಸಿದ ಅರ್ಥದಲ್ಲಿ, ತುಂಬಾ ಸಮಯೋಚಿತವಾಗಿದೆ.

ಅರಿಕೆ :

*ಮೂಲ ಲೇಖನ : "ಕಗ್ಗಕ್ಕೊಂದು ಕೈಪಿಡಿ"- ಇದು ನಾನು 'ಇಂಟರ್ ನೆಟ್' ಗೆ, ಅಳವಡಿಸಿ ಬರೆದ ಲೇಖನ. ನನಗೆ ಬಲು ಆಪ್ತವಾದ "ಜೀವನದ ಲಲಿತ ಕಲೆ"- ಪು. ೪೬೯ ನ್ನು ಇಲ್ಲಿ ಉಪಯೋಗಿಸಿಕೊಂಡಿದ್ದೇನೆ. ಇದರಲ್ಲಿ ಏನಾದರೂ ದೋಷಗಳಿದ್ದರೆ ಕ್ಷಮೆ ಬೇಡುತ್ತೇನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾನೊಂದು ಟ್ಯೂಬ್ ಲೈಟ್. ಕಗ್ಗದ ಮೇಲೆ ಶ್ಯಾಮ್ ಕಿಶೋರ್ ಆಗಲೇ ಬರೆದಿದ್ದಾರೆ. ನಾನು ಅದನ್ನು ಈಗ ಗಮನಿಸಿದೆ. ಪುನರಾವರ್ತನೆ ಆಯಿತೇನೋ ನಾನರಿಯೆ. ಕ್ಷಮೆಯಿರಲಿ.