ಮಾತು

To prevent automated spam submissions leave this field empty.

ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ... ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವರ ಸ್ವಭಾವವೇ ಹಾಗೆ. ಅಮೂಲ್ಯವಾದ ಚಿನ್ನದ ಪಾತ್ರೆಯಲ್ಲಿ ಮತ್ತಷ್ಟು ಅಮೂಲ್ಯವಾದ ಇನ್ನೇನೋ ಇರಬಹುದೆಂಬ ತರ್ಕ ನಮ್ಮದು. ಆ ಪಾತ್ರೆಯೊಳಗೆ ಶೂನ್ಯವೆಂಬುದು ಇದೆ, ಬರಿಗಣ್ಣಿಗೆ ಕಾಣದು ಎಂಬ ಸತ್ಯ ನಮಗೆ ಗೋಚರವಾಗುವುದಿಲ್ಲ. ಜೀವನದಲ್ಲಿ ಎಷ್ಟೋ ಸಾರಿ ಸತ್ಯ ನಮ್ಮ ಕಣ್ಣಿಗೆ ನಿಚ್ಚಳವಾಗಿ ಗೋಚರಿಸುತ್ತಿದ್ದರೂ ನಾವು ಅದನ್ನು ಕಾಣುವುದಿಲ್ಲ. ಮಹತ್ತಾಗಿದ್ದರೂ ಕಣ್ಣಿಗೆ ಗೋಚರಿಸದ ಕಾರಣ ಹಲವರು

ಸತ್ಯವೇ ದೇವರು

ಎಂದುಲಿಯುತ್ತಾರೆ. ಆದರೆ ಕಾಣದ ಸತ್ಯ ಬೇರೆಯೇ ಇದೆ. ಅದೆಂದರೆ ಮಾತೇ ದೇವರು ಎಂಬ ಸತ್ಯ.

ದೇವರು ಸಿಡಿಲಿನ ಆರ್ಭಟವನ್ನು, ಕಡಲ ಮೊರೆತವನ್ನು, ನೀರ ಜುಳುಜುಳು ನಾದವನ್ನು, ಹಕ್ಕಿಗಳ ಕಲರವವನ್ನು ಸೃಷ್ಟಿಸಿ ಆ ಎಲ್ಲ ಶಬ್ದಗಳನ್ನು ಕಲಸಿ ತೇಯ್ದು ನಾದಿ ಸ್ಫುಟವಾದ ಕಣಕವನ್ನು ತೆಗೆದು ಮಾನವನ ಕೊರಳೊಳಗೆ ಇಟ್ಟನು. ಮನುಷ್ಯನ ಬಾಯಿಂದ ಮಾತಾಗಿ ಅದು ಹೊರಬಂತು.

ಮಾತೇ ಜ್ಯೋತಿರ್ಲಿಂಗ

ಎಂಬ ಶರಣ ನುಡಿಯಾಗಲೀ

ಮಾತಿನಿಂ ನಗೆ ನುಡಿಯು ಮಾತಿನಿಂ ಹಗೆ ಹೊಲೆಯು
ಮಾತಿನಿಂ ಸರ್ವಸಂಪದವು ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ

ಎಂಬ ಸರ್ವಜ್ಞ ನುಡಿಯಾಗಲೀ ಮಾತಿನ ಶ್ರೇಷ್ಠತೆಯನ್ನು ಸಾರುತ್ತಿವೆ. ನಿಜವಾಗಿಯೂ ಮಾತೆಂಬುದು ನಮ್ಮ ಬದುಕಿನ ಜೀವಾಳವಾಗಿದೆ. ಮಾತು ಎಂಬುದು ಇಲ್ಲದೇ ಹೋಗಿದ್ದರೆ ನಾವು ಒಬ್ಬರಿಗೊಬ್ಬರು ಸಂವಾದಿಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು, ಯೋಚಿಸುವುದು, ತರ್ಕ ಮಾಡುವುದು, ಚರ್ಚೆ ವಾದ ವಿವಾದ ಜಗಳ ಏನೆಲ್ಲವನ್ನೂ ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಆದರೆ ಮಾತನ್ನು ಅರಿತು ಹಿತವಾಗಿ ಮಿತವಾಗಿ ಬಳಸಬೇಕು. ಮಾತು ಗೊತ್ತಿದೆಯೆಂದು ಸಿಕ್ಕಾಪಟ್ಟೆ ಮಾತನಾಡಿದರೆ ಅದು ಹಗುರವೆನಿಸುತ್ತದೆ. ಅಂಥ ಮಾತುಗಾರಿಕೆಯಿಂದಾಗಿ ಅದನ್ನಾಡುವ ಮನುಷ್ಯನೂ ಹಗುರವಾಗುತ್ತಾನೆ. ಅದನ್ನೇ ಸಂತ ಕಬೀರ ಹೀಗೆ ಹೇಳುತ್ತಾನೆ:

ಮಾತಿನ ಬೆಲೆ ಅರಿತವರು ಅದನ್ನು ಹೃದಯದ ತಕ್ಕಡಿಯಲ್ಲಿಟ್ಟು ತೂಗಿ ನಂತರ ಹೊರಗೆ ಹಾಕುತ್ತಾರೆ

ಎಂದು. ನಮ್ಮ ಸಿರಿಗನ್ನಡದ ಮಹಾಕವಿ ಪಂಪ ಇಂದಿಗೆ ಒಂದು ಸಾವಿರ ವರ್ಷಗಳ ಮುನ್ನವೇ ತನ್ನ ಮಹಾಕಾವ್ಯ ವಿಕ್ರಮಾರ್ಜುನವಿಜಯದಲ್ಲಿ

ನಾಲಗೆ ಕುಲಮಂ ತುಬ್ಬುವವೊಲ್

ಎಂದಿದ್ದಾನೆ. ನಾಲಗೆ ಕುಲವನ್ನು ಹೇಳುವಂತೆ ನಮ್ಮ ಅಂತರಂಗದ ವ್ಯಕ್ತಿತ್ವ, ನಮ್ಮ ಸಂಸ್ಕಾರ, ನಮ್ಮ ಪರಿಸರ, ನಮ್ಮ ಸಹವಾಸಗಳನ್ನೂ ಬಯಲಿಗೆಳೆಯುತ್ತದೆ. ಅದಕ್ಕಾಗಿಯೇ ಮಾತು ನಮ್ಮ ಬಾಯಿಂದ ಹೊರಬರುವ ಮುನ್ನ ಅದನ್ನು ಚೆನ್ನಾಗಿ ತೂಗಿ ಅದನ್ನಾಡುವುದರಿಂದ ಆಗುವ ಪರಿಣಾಮಗಳೇನು ಸಾಧನೆಯೇನು ಎಂಬುದನ್ನು ಚಿಂತನೆಯ ಒರಗಲ್ಲಿಗೆ ಉಜ್ಜಿ ನೋಡಬೇಕು. ನಾವು ತೂಕವಿಲ್ಲದೆ ಮಾತನಾಡಿದರೆ ನಮ್ಮ ವ್ಯಕ್ತಿತ್ವವೇ ಹಾಳಾಗುತ್ತದೆ, ಸಲ್ಲದ ಜಗಳಕ್ಕೂ ನಾವು ಕಾರಣರಾಗುತ್ತೇವೆ. ಅದನ್ನೇ ನಮ್ಮ ಕನ್ನಡ ಜನಪದರು

ಮಾತು ಬಲ್ಲವನಿಗೆ ಜಗಳವಿಲ್ಲ
ಊಟ ಬಲ್ಲವನಿಗೆ ರೋಗವಿಲ್ಲ

ಎಂದು ನುಡಿಗಟ್ಟುಗೊಳಿಸಿದ್ದಾರೆ. ಇದನ್ನು ಅರಿತು ಬಾಳಿದವನು ಎತ್ತ ಹೋದರೂ ಬದುಕಿಯಾನು.
ಸರ್ವಜ್ಞನ ಮಾತಿನಲ್ಲಿ ಹೇಳುವುದಾದರೆ

ಮಾತು ಬಂದೆಡೆಯಲ್ಲಿ ಸೋತುಹೋದವ ಜಾಣ
ಮಾತಿಂಗೆ ಮಾತು ಮಥನಿಸೆ ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ

ಒಂದು ಮಾತು ನೀವು ಗಮನಿಸಿರಬಹುದು, ಅದೆಂದರೆ ನಾವು ಯೋಚಿಸುವುದು, ತರ್ಕ ಮಾಡುವುದು ಎಲ್ಲವೂ ನಮ್ಮ ಮಾತೃಭಾಷೆಯಲ್ಲಿಯೇ ನಡೆಯುತ್ತದೆ. ತಾಯಿಯ ಮಡಿಲಿನಿಂದ ಹಿಡಿದು ನಮ್ಮ ಬಾಲ್ಯ ಕಳೆಯುವವರೆಗೆ ಯಾವ ಭಾಷೆಯಲ್ಲಿ ನಾವು ಪಳಗುತ್ತೇವೆಯೋ ಅದೇ ಭಾಷೆ ನಮ್ಮ ಜೀವನದಲ್ಲಿ ಆಧಿಪತ್ಯ ನಡೆಸುತ್ತದೆ. ರಾಷ್ಟ್ರಕವಿ ಕುವೆಂಪುರವರು ತಮ್ಮ ಕಾವ್ಯದಲ್ಲಿ

ಹೆಮ್ಮೆಯಿಂದ ಕೂಡಿ ನಲಿದ ಮಾತದಾವುದು

ಎಂದಿರುವುದು ಆ ಮಾತೃಭಾಷೆಯನ್ನು ಕುರಿತೇ. ಮಕ್ಕಳಮಾತು ಅಂದರೆ ಬಾಲಭಾಷೆ ಯಾರು ಕೇಳಿಲ್ಲವೋ ಅವರು ಏನೆನ್ನುತ್ತಾರೆ ಎಂಬುದನ್ನು ತಮಿಳಿನ ದಾರ್ಶನಿಕ ತಿರುವಳ್ಳುವರ್ ಹೀಗೆ ಹೇಳುತ್ತಾನೆ

ಕುಳಲಿನಿದು ಯಾಳಿನಿದು ಎನ್ಬರ್ ತಮ್ ಮಕ್ಕಳ್ ಮಳಲೈ ಸೊಲ್ ಕೇಳಾದವರ್ಗಳ್
(ಕೊಳಲಿನ ದನಿ ಚೆಂದ ವೀಣೆಯ ದನಿ ಚೆಂದ ಅನ್ತಾರೆ ತಮ್ಮ ಮಕ್ಕಳ ತೊದಲುನುಡಿ ಕೇಳದವರು)

ಹೀಗೆ ಮಾತಿನ ವೈವಿಧ್ಯಮಯ ರೂಪಾತಿಶಯಗಳಿಗೆ ಎಣೆಯುಂಟೇ? ಮಾತಿನಿಂದ ನಗೆಯು ಉಂಟಾಗುವಂತೆ ಹಗೆಯೂ ಉಂಟಾಗ ಬಹುದಲ್ಲವೇ ಅದಕ್ಕೇ ಹೇಳೋದು

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಸ್ಫಟಿಕ ಶಲಾಕೆಯಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ಎಂದು. ಮಾತಾಡಬೇಕು ಆದರೆ

ಮಾತು ಮಾಣಿಕ್ಯ ಮೌನ ಬಂಗಾರ

ಎಂದೂ ಹೇಳುತ್ತಾರೆ. ಈ ಮಾತಿನ ಪ್ರಭಾವವೋ ಏನೋ ಈಗೀಗ ಜನ ಮಾತನಾಡುವುದನ್ನೇ ಕಡಿಮೆ ಮಾಡಿದ್ದಾರೆ. ಸಿಟಿಬಸ್ಸಿನಲ್ಲಿ ಕುಳಿತು ಅರ್ಧಗಂಟೆಯಲ್ಲಿ ನಮ್ಮ ಸ್ಥಳ ಸೇರುವ ವೇಳೆಗೆ ಪಕ್ಕದಲ್ಲಿ ಕುಳಿತವರ ಹೆಸರು, ವಿವರ-ಪ್ರವರ, ಕುಲ-ಗೋತ್ರ ಎಲ್ಲವುಗಳ ಮಾತುಕತೆ ನಡೆಸಿ ಕೊನೆಗೆ ಜಗಳವೂ ಆಡಿ ಮನೆ ಸೇರುತ್ತಿದ್ದ ಆ ದಿನಗಳೆಲ್ಲಿ? ಇಂದು ಸೀಟು ಸಿಕ್ಕ ಕೂಡಲೇ ನಿದ್ದೆ ಪ್ರಾರಂಭಿಸಿ ಮೌನವಾಗಿ ಇಳಿದುಹೋಗುವ ಈ ಆಧುನಿಕ ದಿನಗಳೆಲ್ಲಿ. ಪಕ್ಕದವರನ್ನು ಏನಾದರೂ ಮಾತನಾಡಿಸಿದರೂ ಭಾಷೆ ಅರ್ಥವಾಗಲಿಲ್ಲವೆಂಬಂತಹ ಬಿಂಕ ಬಿಗುಮಾನ. ಸಾಲದೆಂಬಂತೆ ಕೈ ಸನ್ನೆ! ಬಾಯ್‌ಸನ್ನೆ!! ಹೀಗಾಗಿ ನಮ್ಮ ಮಾತುಗಳೆಲ್ಲವೂ ಮೌನವಾಗುತ್ತಿವೆ. ಲೆಕ್ಕ ಹಾಕಿ ನೋಡಿದರೆ ನಮ್ಮ ಮಾತುಗಳೆಲ್ಲವೂ ಐವತ್ತರಿಂದ ಅರುವತ್ತು ಶಬ್ದಗಳಲ್ಲೇ ಕಳೆದುಹೋಗುತ್ತೆ. ಆರೋಗ್ಯಪೂರ್ಣ ಚರ್ಚೆಗಳಲ್ಲಿ, ಹಾಸ್ಯ ಸಂವಾದಗಳಲ್ಲಿ, ಪುಸ್ತಕಗಳ ವಿಮರ್ಶೆಯಲ್ಲಿ, ಕಲೆಯ ಮೀಮಾಂಸೆಯಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲದೇ ಕೆಲಸದ ಗುಲಾಮರಾಗಿ, ಪುಸ್ತಕದ ಹುಳುವಾಗಿ, ಮನೆಯೆಂಬ ಗೂಡಿನ ಸೆರೆಯಾಳಾಗಿ ಮೌನಕ್ಕೆ ಶರಣಾದರೆ ಖಂಡಿತ ಒಂದು ಅಮೂಲ್ಯ ವಸ್ತುವೊಂದನ್ನು ಕಳೆದುಕೊಳ್ಳಲಾರಂಭಿಸಿದ್ದೇವೆ ಎಂದರ್ಥ.

ಆ ಅಮೂಲ್ಯ ವಸ್ತು: ಮಾತು

ಲೇಖನ ವರ್ಗ (Category):