ನೀರು-ನೀರವತೆ-ನಗ್ನತೆ

To prevent automated spam submissions leave this field empty.

ಸಂಜೆ,ಮುಸ್ಸಂಜೆಯ ಸಮಯ. ವಿಪರೀತ ಧಗೆ. ಬಗೆ ಬಗೆಯ ಸಸ್ಯವನ್ನು ರಾಶಿ,ರಾಶಿಯಾಗಿ ತನ್ನೊಡಲಲ್ಲಿ ಇಟ್ಟುಕೊಂಡ ಆ ಬೆಟ್ಟದ ಇಳಿಜಾರಿನಲ್ಲಿ ಇಳಿದಿಳಿದು ಹೋದೆ.ಹಸಿರು ಉಡುಗೆಯುಟ್ಟ ಎದುರಿಗಿನ ಬೆಟ್ಟದ ಕಲ್ಲಂಚಿನಿಂದ ಝರಿ,ಝರಿಯಾಗಿ ಆತುರದಿಂದ ಜರಿ ಜರಿದು ತೊರೆಯಾಗಿ ಹರಿ ಹರಿದು ಹೋಗುತ್ತಿದ್ದ ಚಿಕ್ಕಹಳ್ಳ...ಗೂಡಿಗೆ ಮರಳಿದ್ದ ಹಕ್ಕಿಗಳ ಚಿಲಿಪಿಲಿಯ ಹೊರತಾಗಿ ಅಲ್ಲೆಲ್ಲ ನಿಶ್ಯಬ್ದ..ಕಪ್ಪು ಕಪ್ಪು ಕಲ್ಲು ಹಾಸುಗಳು..ಬಿಸಿಲಿಗೆ ಅಷ್ಟಿಷ್ಟು ಕಾದವುಗಳು.

ಬೀಸುಗಾಲು ಹಾಕುತ್ತ ಹತ್ತಿ,ಗುತ್ತಿ ಹೋದ ನಾನು ಅ೦ತಿಮವಾಗಿ ಒಂದು ಬಂಡೆಯ ಮೇಲೆ ಕುಳಿತೆ.ಸಹಜವಾಗಿ ನೀರಿಗಿಳಿದವು ನನ್ನೆರಡು ಕಾಲುಗಳು..ತಂಪೆಂದರೆ ತಂಪಾದ ನೀರು ಅದು. ಕಾಲುಗಳಿಗೆ ಸವರಿಕೊಂಡು ಹೋಗುತ್ತಿದ್ದ ತಣ್ಣನೆಯ ನೀರು ನನಗೆ ಕಾಲವನ್ನೇ ಮರೆಸಿತ್ತು.
ಬೆಳದಿಂಗಳು ಆವರಿಸಿತ್ತು.ಅಲ್ಲಿ ಯಾರೂ ಇರಲಿಲ್ಲ ನನ್ನೊಬ್ಬನ ಹೊರತಾಗಿ.ಪ್ರಕೃತಿ ಮತ್ತು ಅದು ಎಲ್ಲ ಮನುಷ್ಯರನ್ನು ಸೃಷ್ಟಿಸಿದ್ದ ಹಾಗೆ ಸೃಷ್ಟಿಸಿದ್ದ ನಾನು.

ತಣ್ಣನೆಯ ನೀರಿನಲ್ಲಿ ಕಾಲುಗಳನ್ನು ಇಳಿಬಿಟ್ಟು ಕೈಚಾಚಿ ಕುಳಿತಿದ್ದ ನಾನು,ತಲೆಯೆತ್ತಿ ಮೇಲೆ ದಿಟ್ಟಿಸಿದೆ.ನೀಲಾಕಾಶ. ತುಂಬೆಲ್ಲ ನಕ್ಷತ್ರಗಳು. ಹೊಳೆಯುತ್ತಿವೆ. ಬೆಳಗುತ್ತಿವೆ. ಸೆಳೆಯುತ್ತಿವೆ. ಇಲ್ಲಿ ನನ್ನ ಇಳಿಬಿಟ್ಟ ಕಾಲುಗಳಿಗೆ ನೀರು ತಂಪೆರೆಯುತ್ತಿದೆ.ಮೇಲೆ ಆ ನಕ್ಷತ್ರಗಳ ಪ್ರಪಂಚ ದಿವ್ಯಾನುಭವ ನೀಡುತ್ತಿದೆ. ಧಗೆಯಿಂದ ಮೈಮೇಲೆ ಇಳಿದಿದ್ದ ಬೆವರ ಹನಿಗಳು ಆವಿಯಾಗಿ ಹೋದವು.ಆದರೂ ಮೈಯೆಲ್ಲ ಅಂಟು ಅಂಟು.ಪಕ್ಕದಲ್ಲಿ ಯಾರಾದರು ಕುಳಿತಿದ್ದರೆ ಬೆವರ ವಾಸನೆ ಅನ್ನುತ್ತಿದ್ದರೇನೊ? ಒಮ್ಮೆ ಈ ನೀರಿನಲ್ಲಿ ಮುಳುಗು ಹಾಕಿಬಿಡಲೆ? ಬೇಡ..ಬೆವರಿನ ವಾಸನೆ
ನನ್ನೊಂದಿಗಿರಲಿ. ಈ ಸಸ್ಯರಾಶಿಯಲ್ಲಿ ಅಲ್ಲೆಲ್ಲೊ,ಎಷ್ಟು ಹೊತ್ತಿಗೋ ಅರಳಿರುವ ಅದೇನೊ ಹೂವುಗಳ ಘಮ ತೇಲಿ ಬರುತ್ತಿದೆ. ಆ ಪರಿಮಳ ಮತ್ತು ನನ್ನ ಬೆವರಿನ ವಾಸನೆ ಎರಡೂ ತದ್ವಿರುದ್ಧ.ಅಷ್ಟೇ ಸಹಜವೆಂಬಂತೆ ನನ್ನನ್ನೂ ಮಡಿಲಲ್ಲಿ ಇರಿಸಿಕೊಂಡಿದೆ ಈ ಪ್ರಕೃತಿ.

ಓದಿದ ನೆನಪು. ಕುತೂಹಲ ಮೂಡಿಸಿದ ಆ ಓದು.ಮರೆಯಲಾಗದ ವರ್ಣನೆ ಅದು.ಅಲ್ಲಿ ವರ್ಣಿಸಿದ ಹಾಗೆ ನಾ ವರ್ಣಿಸಲಾರೆ.ಆದರೂ ಇರಲಿ.ನೋಡಿ.., ಅವರು ರೋಮನ್ ಅರಸರು.. ಶತ ಶತಮಾನಗಳ ಹಿಂದಿನ ಕಾಲವದು..ಅದು ಮನೆಯಲ್ಲ, ಅರಸರಿಗೆ ತಕ್ಕ ವಿಶಾಲವಾದ,ಭವ್ಯವಾದ ಅರಮನೆ ಅದು..ಅರಮನೆಯೊಳಗೊಂದು ಹೊಂಡ..ಹೊಂಡದಲ್ಲಿ ಅರಸರ ಸೊಂಟದ ಮಟ್ಟಕ್ಕೆ ತುಂಬಿಸಿದ ತಿಳಿಯಾದ ನೀರು..ಅಲ್ಲೇ ಎದುರಿಗೆ ವೇದಿಕೆ ಅಥವಾ ಸಂಗೀತಗಾರರಿಂದ,ನರ್ತಕಿಯರಿಂದ ಸುಂದರವಾಗಿ ಕಾಣುತ್ತಿದ್ದ ವೇದಿಕೆ..ಸುಗಂಧದ್ರವ್ಯ ಬೆರೆಸಿರುತ್ತಿದ್ದ ಆ ತಣ್ಣನೆಯ ನೀರಿನಲ್ಲಿ ಬೇಸಿಗೆಯ ಧಗೆಯಿಂದ ಪಾರಾಗುತ್ತ,ನೀರಿನೊಂದಿಗೆ ಆಟವಾಡುತ್ತ,ಸಂಗೀತ ಆಲಿಸುತ್ತ, ನೃತ್ಯ ವೀಕ್ಷಿಸುತ್ತ .... ಸಾಕು, ಸಾಕು ಎನ್ನುವಷ್ಟು ಹೊತ್ತು ಅದರಲ್ಲಿ ಮುಳುಗೆದ್ದು ಅಲ್ಲಿಯೇ ಕಟ್ಟೆಯ ಮೇಲೆ ಬಿದ್ದುಕೊಂಡು ನಿದ್ದೆ ಹೋಗುತ್ತಿದ್ದರಂತೆ....ಎಂಥಾ ರಸಿಕ ಮಹಾಶಯರು,ಅದೆಂಥಾ ಪ್ರಕೃತಿಪ್ರಿಯರಿರಬೇಕು ಆ ಅರಸರು.

ಈ ರೀತಿಯ ಸ್ನಾನ, ಈ ರೀತಿಯ ಮೋದ ಆ ಅರಸರಿಗೆ ಅದೆಷ್ಟು ಮುದ ನಿಡುತ್ತಿತ್ತೊ,ರೋಮಾಂಚನ ನೀಡುತ್ತಿತ್ತೊ ಎನೊ? ಒಂದಂತೂ ಸತ್ಯ.ಅವರು ಪ್ರಕೃತಿ ಪ್ರಿಯರು ಎಂಬುದು..ಹಾಗೆಯೇ ಪ್ರಕೃತಿಯ ಜೊತೆಗೆ ಒಂದಾಗಲು ನೀರು ಅಮೂಲ್ಯವಾದ ಸಂಪರ್ಕ ಸಾಧನ ಎಂಬುದೂ ಅಷ್ಟೇ ಸತ್ಯ.

ನನ್ನೆರಡು ಕಾಲುಗಳನ್ನು ಮಾತ್ರ ಇಳಿಬಿಟ್ಟು ಕುಳಿತಿದ್ದ ನನಗೆ ಇಲ್ಲಿ, ಈ ತಣ್ಣನೆಯ ನೀರಿನಲ್ಲಿ ಒಂದೆರಡು ಬಾರಿ ಮುಳುಗು ಹಾಕಿಬಿಡೋಣಾ ಅಂತ ಅನಿಸುತ್ತಿದೆ.ಆದರೆ ಇಲ್ಲಿ ನರ್ತಕಿಯರಿಲ್ಲ,ಸಂಗೀತಗಾರರಿಲ್ಲ,ಆರಮನೆ ಇಲ್ಲ..! ನಾನೇನು ಅರಸು ಪುತ್ರನೆ?..ಬಿಡಿ..ನೀರಲ್ಲಿ ಮುಳುಗು ಹಾಕಿದೆ ಅಂದುಕೊಳ್ಳಿ..ಮುಳುಗಿ ಮುಳುಗಿ ಸಾಕಾಗಿ ಮೈ ಒರೆಸಿಕೊಂಡು ಹಾಸುಗಲ್ಲಿನ ಮೇಲೆ ಮೈ ಚಾಚಿದರೆ ನಿದ್ದೆಯಂತೂ ಗ್ಯಾರಂಟಿ..ಅತ್ತ ಬೆಟ್ಟದಿಂದ ರುದ್ರ ಭಯಾನಕ ಹುಲಿ ನೀರು ಕುಡಿಯಲು ಬರಬಹುದು..ಬೇಡ..ಮುಳುಗು ಹಾಕುವುದು ಬೇಡ ಅಂದುಕೊಂಡೆ.

ಹೌದು ನೀರು ಮತ್ತು ಮನುಷ್ಯನ ನಡುವಿನ ಸಂಬಂಧವೇ ಹಾಗೆ....ಅದು ಎಂದೆಂದಿಗೂ ಬಿಡಿಸಲಾರದ ಬಂಧ..ಆದರೇನಂತೆ? ಅದರ ಮಹತ್ವದ ‘ಗಂಧ’ ನಮಗೆ ಅಷ್ಟಾಗಿ ತಿಳಿದಿಲ್ಲ ಬಿಡಿ. ನಾವೂ ಸೇರಿದಂತೆ ಎಲ್ಲ ಜೀವಿಗಳ ಹುಟ್ಟಿಗೆ ಮೂಲ ಕಾರಣ ಈ ನೀರು. ಜೀವಿಗಳ ಹುಟ್ಟು ನೀರಿನಿಂದ,ವಿಕಾಸ ನೀರಿನಿಂದ,ನಂತರ ವಿಕಾಸವಾಗುತ್ತಾವಾಗುತ್ತಾ ಹುಟ್ಟಿದವನು ಮನುಷ್ಯ. ಪ್ರಕೃತಿಯ ಅದ್ಭುತ ಸೃಷ್ಟಿಯಾದ ನೀರು ಅದೆಷ್ಟು ನಾಗರಿಕತೆಗಳನ್ನು ಹುಟ್ಟಿ ಬೆಳೆಸಿದೆ. ಸಿಂಧು ಕಣಿವೆ ನಾಗರಿಕತೆ ಹುಟ್ಟಿದ್ದು ತೀಳಿಯಾದ ನೀರು ಸಮೃದ್ಧವಾಗಿದ್ದ ದಡದಲ್ಲಿ.ನೈಲ್ ನಾಗರಿಕತೆ
ಹುಟ್ಟಿದ್ದು ನೈಲ್ ನದಿಯ ದಡದಲ್ಲಿ.ಸುಮೇರಿಯನ್ ನಾಗರಿಕತೆ ಹುಟ್ಟಿದ್ದು ನೀರು ಸಿಗುವ ಜಾಗದಲ್ಲೇ. ಈಗ ಅವ್ಯಾವ ನಾಗರಿಕತೆಗಳೂ ಉಳಿದಿಲ್ಲ.ಎಲ್ಲ ನಶಿಸಿ ಹೋಗಿವೆ.ನೀರಿನ ಕೊರತೆಯೂ ಆ ನಾಗರಿಕತೆಗಳು ನಶಿಸಲು ಒಂದು ಮುಖ್ಯ ಕಾರಣ ಎಂಬುದನ್ನು ಮರೆಯಬಾರದಲ್ಲ....!

ಉಳಿದೆಲ್ಲ ಜೀವಿಗಳಿಗಿಂತ ನೀರಿನ ಮೇಲೆ ಹೆಚ್ಚು ಅವಲಂಬಿತನಾದವನು ಮನುಷ್ಯ.ಆದರೆ ಇಂದು ವಿಶ್ವವನ್ನು ಕಾಡುತ್ತಿರುವ ನೀರಿನ ಸಮಸ್ಯೆಗೆ ಮೂಲ ಕಾರಣ ಮನುಷ್ಯ.ಅಂದು ನೀರು ಹರಿದಲ್ಲಿ ನಾಗರಿಕತೆ,ಬದುಕು..ನೀರಿನ ಹರಿವು ನಿಂತರೆ ನಾಶ.ಈಗ ನೀರಿಲ್ಲದ,ಮರಭೂಮಿಯಂತ ಪ್ರದೇಶದಲ್ಲೂ ಬದುಕು ರೂಪಿಸಿಕೊಳ್ಳುವ ದಾಷ್ಟಿಕವನ್ನು ಬೆಳೆಸಿಕೊಂಡಿದ್ದಾನೆ ಮನುಷ್ಯ. ನೀರನ್ನು ಅದೆಲ್ಲಿಂದೋ ಹೊತ್ತು ತರುತ್ತಾನೆ. ಬರಿದಾಗುವ ತನಕ ಹೊರುತ್ತಾನೆ.ಬರಿದಾಗುವ ಸೂಚನೆ ಬಂದಾಗಿದೆ.ಅದಕ್ಕೆ ನೀನೇ ಕಾರಣ,ನೀನೇ ಕಾರಣ ಎಂದು ಮನುಷ್ಯರು ಪರಸ್ಪರ ಕಚ್ಚಾಡುತ್ತಿದ್ದಾರೆ, ಹೊಡೆದಾಡುತ್ತಿದ್ದಾರೆ, ಬಡಿದಾಡುತ್ತಿದ್ದಾರೆ.ಆದರೆ ನೀರು ಬರಿದಾಗುವುದು ನಿಂತಿಲ್ಲ.ಅದು ಬರಿದಾಗುತ್ತಲೇ ಇದೆ.ಹೊಸ ನೀರನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಿದ್ದು,ಗೊತ್ತಿದ್ದು ಅದನ್ನು ಬರಿದಾಗಿಸುತ್ತಿದ್ದೇವೆ..ಬರಡು ತಲೆಯ ಬುರುಡೆ ಬಿಡುವ ಮನುಷ್ಯರು..!

ಸಮೃದ್ಧವಾಗಿ ಹರಿಯುವ ಶುದ್ಧ ನೀರನ್ನು ಮಲೀನಗೊಳಿಸುತ್ತಿದ್ದೇವೆ.ಬೆಟ್ಟ ಗುಡ್ಡಗಳನ್ನು ಅಗೆದು ಬಗೆದು,ಕಾಡನ್ನು ಕಡಿದು ಕಡಿದು ನೀರಿನ ಮೂಲವನ್ನೇ ಮುಚ್ಚಿ ಹಾಕುತ್ತಿದ್ದೇವೆ. ಕೆರೆಗಳೆಲ್ಲ ಮೈದಾನವಾಗುತ್ತಿದೆ. ಬಾವಿಗಳೆಲ್ಲ ಬತ್ತಿಹೋಗುತ್ತಿವೆ. ಅಂತರ್ಜಲ ದಿನದಿಂದ ದಿನಕ್ಕೆ ಅಂತರ್ಮುಖಿಯಾಗುತ್ತಲೇ ಇದೆ.

ಅಂತರ್ಮುಖಿಯಾಗುವುದು, ನನ್ನೊಂದಿಗೆ ನಾನೇ ಸಂವಾದಿಸಿಕೊಳ್ಳುವುದು ಎಷ್ಟು ಸಂತಸದಾಯಕ..!ನೀರಿನಲ್ಲಿ ಬಿಟ್ಟಿದ್ದ ನನ್ನೆರಡು ಕಾಲುಗಳನ್ನು ಮೇಲೆತ್ತಿಕೊಂಡೆ.ನೀರು ಹರಿಯುತ್ತಲೇ ಇದೆ.ಮೇಲೆ ಆಕಾಶದಲ್ಲಿ ನಕ್ಷತ್ರಗಳು ಎಷ್ಟೊಂದು ಪ್ರಕಾಶವಾಗುತ್ತಿವೆ.ಸುಮ್ಮನೆ ಸರಿದು ಹೋಗುತ್ತಿದೆ ಕಾಲ....ನನ್ನೊಳಗೆ ಕೋಲಾಹಲ.

“ರಷ್ಯಾದ ಸೈಬೇರಿಯಾದಲ್ಲಿನ ಬೈಕಲ್ ಕೆರೆ ಜಗತ್ತಿನ ದೊಡ್ಡ ಕೆರೆ.ಇದರ ಆಳ ಒಂದುವರೆ ಕಿಲೋ ಮೀಟರ್.ಉದ್ದ ೬೩೬ ಕಿಲೋ ಮೀಟರ್.ಅಗಲ೭೯ಕಿಲೋಮೀಟರ್.ಕೆರೆಯಲ್ಲಿರುವುದು ಶುದ್ಧ ನೀರು.ಒಂದು ಲೆಕ್ಕಾಚಾರದ ಪ್ರಕಾರ ಇಡೀ ವಿಶ್ವಕ್ಕೆ ೪೦ ವರ್ಷ ಸಾಕಾಗುವಷ್ಟು ನೀರನ್ನು ಬೇಕಾದರೆ ಈ ಕೆರೆಯೇ ಒದಗಿಸಬಲ್ಲದು.ದುರದೃಷ್ಟವೆಂದರೆ ಸುತ್ತಮುತ್ತಲಿನ ಕೈಗಾರಿಕೆಗಳಿಂದಾಗಿ ಈ ಕೆರೆಯ ನೀರು ಸಹ ಮಲಿನವಾಗುತ್ತಿದೆ.”
ಹಳ್ಳದ ನಡುವಿನ ಬಂಡೆಯ ಮೇಲೆ ಮುಡುಗಿ ಕುಳಿತ ನನಗೆ ಬೆಳದಿಂಗಳು ಭರವಸೆ ಮೂಡಿಸುತ್ತಿತ್ತಾದರೂ ಅದು ಹುಸಿ ಅನ್ನಿಸತೊಡಗಿತು. ಎದ್ದು ನಿಂತೆ..ಮೈ ಮೇಲಿನ ಬಟ್ಟೆಯನ್ನೆಲ್ಲ ತೆಗೆದುಹಾಕಿದೆ..ತಣ್ಣನೆಯ ನೀರಿನಲ್ಲಿ ಮೂರು ಮುಳುಗು ಹಾಕಿದೆ. ತೃಪ್ತಿಯಾಗುವಷ್ಟು ನೀರು ಕುಡಿದೆ.ಸದ್ಯಕ್ಕೆ ದಾಹ ಇಂಗಿತು..ನನ್ನ ನಗ್ನತೆ ,ಅಲ್ಲಿನ ನೀರವತೆ.... ಆ ಬೆಳದಿಂಗಳು ಬಿಸಾಕಿದ ನನ್ನ ಬಟ್ಟೆಯನ್ನು ಎತ್ತಿಕೊಳ್ಳುವಂತೆ ಮಾಡಿತು.ಬೆಳದಿಂಗಳಿನಲ್ಲಿ ದಡದಡನೆ ಮರ ಗಿಡಗಳ ನಡುವೆ ಹಾದು ಹೋಗುತ್ತಿದ್ದ ದಾರಿಯಲ್ಲಿ ಬೆಟ್ಟ ಹತ್ತಿ ಹಳ್ಳಿಯ ನನ್ನ ಮನೆ ಸೇರಿಕೊಂಡೆ. ಮನೆ ಮಂದಿಯೆಲ್ಲ ಆಗಲೆ ಮಲಗಿ ಎಷ್ಟು ಹೊತ್ತಾಯಿತೋ? ಮನೆಯೊಳಗೆ ಕಪ್ಪು ಆವರಿಸಿದೆ.ನೇರವಾಗಿ ನನ್ನ ಕೊಠಡಿಗೆ ಹೋದೆ.ಕಿಟಕಿಯಿಂದ ತೂರಿ ಬರುತ್ತಿದ್ದ ಬೆಳದಿಂಗಳ ಬೆಳಕಿನಲ್ಲಿ ಮತ್ತೆ ಮೈ ಮೇಲಿನ ಬಟ್ಟೆಯನ್ನೆಲ್ಲಾ ತೆಗೆದು ಬಿಸಾಕಿದೆ.

ನಗ್ನವಾಗಿ ಹಾಸಿಗೆಯಲ್ಲಿ ಮೈಚೆಲ್ಲಿದೆ..ಮತ್ತೆ,ನಗ್ನತೆ ಮತ್ತು ನೀರವತೆ....!

ನಾನು ಏನನ್ನೂ ಅರಿತುಕೊಳ್ಳಬಾರದು,ಆಲೋಚಿಸಬಾರದು ಅನಿಸಿತು. ಅರಿತುಕೊಂಡರೆ, ಆಲೋಚಿಸುತ್ತ ಹೋದರೆ ನೆಮ್ಮದಿ ಕೆಡುತ್ತದೆ ಅಲ್ವಾ? ಬೇಡವೇ ಬೇಡ...

ತೆಳ್ಳನೆಯ ವಸ್ತ್ರವನ್ನು ಮೈಮೇಲೆ ಎಳೆದುಕೊಂಡೆ.ನೀರವತೆ...ಬಂತು ನಿದ್ದೆ. ನಿದ್ದೆಯೊಳಗೆ ಕನಸು. ಎಂಥಾ ಕನಸು?..ಆ ‘ಪವಿತ್ರ’ಗಂಗೆ ಸ್ವಚ್ಚವಾದ ಮೇಲೆ ಮಿಂದ ಕನಸು,ಕಾವೇರಿ ಮೈತುಂಬಿಕೊಂಡು ಕೃಷ್ಣರಾಜ ಸಾಗರ ೩೬೫ ದಿನವೂ ತುಂಬಿ ತುಳುಕಿ ಗೇಟ್ ತೆರೆದಾಗ ಬೆಳ್ಳನೆಯ ಹಾಲಿನಂತೆ ತಮಿಳುನಾಡಿಗೆ ಧಾವಿಸಿ ಹೋಗುವ ಕನಸು,ವಿಶ್ವ ವಿಖ್ಯಾತ ಜೋಗ್ ಜಲಪಾತ ವರ್ಷವಿಡಿ ಸಮೃದ್ಧವಾಗಿ ಧುಮ್ಮಿಕ್ಕುವುದನ್ನು ನೋಡುವ ಕನಸು,ಕೆರೆ-ಬಾವಿಗಳೆಲ್ಲ ತುಂಬಿಕೊಂಡು ಅನ್ನದಾತರೆಲ್ಲ ಆನಂದದಿಂದ ಕುಣಿಯುತ್ತಿರುವ ಕನಸು,..ನಮ್ಮ ಮನೆಯ ಹತ್ತಿರವಿರುವ ತೊರೆ,ಆ ಝರಿ ನನ್ನ ಅಧ್ಯಾತ್ಮಿಕತೆಗೆ ನಿತ್ಯ ನೆರವಾಗುವ ಕನಸು,..ಎಲ್ಲವೂ ಅಸ್ಪಷ್ಟ..

‘ನಿದ್ದೆಯೊಳಗಿನ ಕನಸು. ಕನಸಿನೊಳಗಿನ ನಿದ್ದೆ.’...ನೀರಿನಿಂದ ನಾವು..ನಮ್ಮಿಂದ ?

-ಪ್ರಸಾದ ಹೆಗಡೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಬಹಳ ಸೊಗಸಾದ ನಿರೂಪಣಾ ಶೈಲಿ ; ಭಾವ ತನ್ಮಯತೆ, ನಿಸರ್ಗದೊಡನಾಟ, ಅದರಲ್ಲೂ ಜೀವ ಜಲದೊಡನೆ ; ಕೇಳಬೇಕೆ ?

ಮೈ ರೋಮಾಂಚನವಾದ ಅನುಭವ; ಚೆನ್ನಾಗಿದೆ. ನೀವು ಯಾವುದಾದರೂ ಮತ್ತೊಂದು ಕರ್ನಟಕದ ಸೊಗಸಿನ ಪ್ರಕೃತಿಯ ಮಡಿಲಿಗೆ/ ತಾಣಕ್ಕೆ ಹೋಗಿ, ಮತ್ತೆ ನಿಮ್ಮ ಅನುಭವಗಳ ಅಮೃತಧಾರೆಯನ್ನು ನಮಗೆ ಉಣಿಸಿ.
ಹೊಗ್ಗೇನಕಲ್ಲಿಗೆ ಹೋಗಿ.

ಧನ್ಯವಾದಗಳು.