ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

To prevent automated spam submissions leave this field empty.

ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ ಅರ್ಥ ಬರುವ ಹಾಗೆ ಹೇಳಬಹುದು. ಅಷ್ಟೇ ಅಲ್ಲ, ನೇರಾರ್ಥ, ತದ್ವಿರುದ್ಧಾರ್ಥದ ನಡುವೆ ಹತ್ತು ಹಲವಾರು ವಿವಿಧಾರ್ಥಗಳನ್ನೂ ಪದಗಳಿಗೆ ತುಂಬಬಹುದು. ಮತ್ತು ಮೂಲಾರ್ಥದಲ್ಲಿ ಇಲ್ಲದ ಅರ್ಥವನ್ನು ನುಡಿಯ ರೀತಿಯಲ್ಲಿ ಮತ್ತು ನುಡಿಯ ಸಂದರ್ಭದಲ್ಲಿ ಆರೋಪಿಸಬಹುದು. ಹಾಗಾಗಿ ನಟರಿಗೆ ಪದದ ಅರ್ಥ ಎನ್ನುವುದು ಪ್ರತಿನಿತ್ಯ ಎದುರಿಸಬೇಕಾದ ಒಂದು ಚಲನಶೀಲ ಅಂಶ.
ಕುರ್ತುಕೋಟಿಯವರು ತಮ್ಮ ಪ್ರಬಂಧ ಒಂದರಲ್ಲಿ ಸ್ವಾತಂತ್ಯ್ರ ಎಂಬ ಪದಕ್ಕೆ ಹೇಗೆ ಅರ್ಥ ಬದಲಾವಣೆಯಾಗುತ್ತಿದೆ ಎಂದು ನಿರೂಪಿಸುತ್ತಾರೆ. ಸ್ವಾತಂತ್ಯ್ರಪೂರ್ವದಲ್ಲಿ ಆ ಪದಕ್ಕಿದ್ದ ಅರ್ಥಕ್ಕೂ, ನಂತರ ಪ್ರತಿದಶಕದಲ್ಲೂ ಅದರ ಅರ್ಥ ಬದಲಾಗತ್ತಿರುವುದನ್ನು ನಮ್ಮ ಅವಗಾಹನೆಗೆ ತರುತ್ತಾರೆ. ಮತ್ತೊಂದು ಕಡೆ, "ಬಂಗಾರ" ಒಂದು ವಸ್ತುವಿಗಿಂತ ಅದರ ಮೂಲಸತ್ವಕ್ಕಿರುವ ಪದ ಎಂದು ಹೇಳುತ್ತಾರೆ. ಪದದ ಅರ್ಥಪಲ್ಲಟವಾಗುವುದು ಒಂದು ಭಾಷಾ ಸಮುದಾಯದ ಬೆಳವಣಿಗೆಯಲ್ಲಿ ಅನಿವಾರ್ಯವೇನೋ. ಹಾಗೆಯೇ ಆ ಪಲ್ಲಟಗಳನ್ನು ಗಮನಿಸುವುದು ಕೂಡ ಆ ಸಮುದಾಯದ ಬಗ್ಗೆ ನಮಗೆ ಹೊಳಹುಗಳನ್ನು ಕೊಡುತ್ತದೆ.
ಸುಮಾರು ಎರಡು-ಮೂರು ವರ್ಷದ ಕೆಳಗೆ ಆಸ್ಟ್ರೇಲಿಯಾದ ಸರ್ಕಾರಿ ರೇಡಿಯೋ 'ಎಬಿಸಿ'ಯಲ್ಲಿ ಕಾಲ್‌ಬ್ಯಾಕ್ ಕಾರ್ಯಕ್ರಮವನ್ನು ಕೇಳುತ್ತಿದೆ. ಅಂದು "ಜೇಡರಬಲೆ" ಎಂಬ ಪದದ ಬಗ್ಗೆ ಮಾತುಕತೆ ನಡೆದಿತ್ತು. "ಕಾಬ್‌ವೆಬ್‌" ಮತ್ತು "ಸ್ಪೈಡರ್‌ ವೆಬ್‌" ಎರಡೂ ಒಂದೇ ವಸ್ತುವಿಗೆ ಸಂಬಂಧಪಟ್ಟಿದ್ದರೂ ಯಾವ ಯಾವ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸುತ್ತೀರ ಎಂಬುದು ಚರ್ಚಾ ವಿಷಯವಾಗಿತ್ತು. ಹಲವಾರು ಜನರು ಕರೆಮಾಡಿ ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಮನೆಯ ಹೊರಗಿದ್ದರೆ ಸ್ಪೈಡರ್‌ವೆಬ್‌, ಒಳಗಿದ್ದರೆ ಕಾಬ್‌ವೆಬ್‌ ಎಂದು ಕೆಲವರು ಹೇಳಿದರೆ, ಅದಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಬಳಸುತ್ತೇವೆ ಎಂದು ಇನ್ನು ಕೆಲವರು ಹೇಳುತ್ತಿದ್ದರು. ಕಾಬ್‌ ಎಂಬುದು ಚಕ್ರದ ಪದವಾದ್ದರಿಂದ ಸ್ಪೈಡರ್‌ವೆಬ್‌ ಅದು ಚಕ್ರದ ರೂಪದಲ್ಲಿಲ್ಲದಾಗ ಎಂದು ಕೆಲವರು ಹೇಳಿದರು. ಧೂಳು ಹಿಡಿದಿದ್ದರೆ ಕಾಬ್‌ವೆಬ್‌ ಇಲ್ಲದಿದ್ದರೆ ಸ್ಪೈಡರ್‌ವೆಬ್‌. ಜೇಡ ಇನ್ನೂ ಅಲ್ಲಿದ್ದರೆ ಸ್ಪೈಡರ್‌ ವೆಬ್‌ ಇಲ್ಲದಿದ್ದರೆ ಕಾಬ್‌ವೆಬ್‌ ಎಂದು ಉಪಯೋಗಿಸುತ್ತೇವೆ ಎಂದು ಕೆಲವರು ವಿವರಿಸಿದರು. ಮರಗಿಡಗಳಂಥ ಪ್ರಾಕೃತಿಕ ಪರಿಸರದಲ್ಲಿದ್ದರೆ ಸ್ಪೈಡರ್‌ವೆಬ್‌, ಕುರ್ಚಿ, ಮೇಜು, ಕಿಟಕಿಯಂಥ ಮಾನವ ನಿರ್ಮಿತ ವಸ್ತುಗಳಿಗೆ ಕಟ್ಟಿದರೆ ಕಾಬ್‌ವೆಬ್‌ ಎಂದು ಇನ್ನು ಕೆಲವರು ಅರ್ಥೈಸಿದರು.
ಒಟ್ಟಾರೆ, ಇದು ಯಾವ ಪದಕ್ಕೆ ಯಾವ ಅರ್ಥ ಸರಿ ಯಾವುದು ತಪ್ಪು ಎಂಬ ಚರ್ಚೆ ಆಗಿರಲಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಅದರ ಬಗ್ಗೆ ಚರ್ಚೆಯೇ ಬೇಕಾಗಿರುವುದಿಲ್ಲ. ಅರ್ಥಕೋಶ ತೆಗೆದು ನೋಡಿಬಿಟ್ಟರೆ ಸಾಕು. ಆದರೆ ಯಾರಿಗೆ ಯಾವಾಗ ಯಾವ ಪದಕ್ಕೆ ಯಾವ ಅರ್ಥ ಸರಿಯೆನಿಸುತ್ತದೆ ಎಂಬುದನ್ನು ಹೇಳುತ್ತಾ ಜತೆಜತೆಗೆ ಕಾರ್ಯಕ್ರಮ ನಡೆಸಿಕೊಡುವವ ಯಾಕೆ ಅವರಿಗೆ ಹಾಗೆನಿಸುತ್ತದೆ ಎಂದು ಮಾತನಾಡಿಸುತ್ತಾ ಅವರ ಜೀವನದ ಮತ್ತು ಭಾವನೆಗಳ ವಿವರವನ್ನು ಹೇಳುವಂತೆ ಪ್ರೇರೇಪಿಸುತ್ತಿದ್ದ. ಹಾಗಾಗಿ ಆ ಕಾರ್ಯಕ್ರಮ ಪದಗಳ ಬಗ್ಗೆಯಾದರೂ ನಿಜವಾಗಿಯೂ ಬದುಕುಗಳ ಬಗ್ಗೆಯೇ ಆಗಿತ್ತು!

ಆ ಕಾರ್ಯಕ್ರಮ ನನ್ನ ಮೇಲೆ ಗಾಢವಾದ ಪರಿಣಾಮ ಬೀರಿತು. ಪದಗಳನ್ನು ಅರ್ಥೈಸುವ ಬಗೆಗಿನ ಯೋಚನೆ ವಿಶಿಷ್ಟವೆನಿಸಿದ್ದು ಬರೇ ಒಂದು ಹಂತವಷ್ಟೆ. ಆದರೆ, ಮುಂದೆ ಜನರೊಡನೆ ಮಾತಾಡುವಾಗ ಅವರು ಉಪಯೋಗಿಸುವ ಪದಗಳೇ ಅವರ ಬಗ್ಗೆ ಎಷ್ಟು ಹೇಳುತ್ತದೆ ಎಂಬುದು ಅರಿವಿಗೆ ಬಂದಿತು. ನಾನೂ ಯಾವಾಗ ಏನೇನು ಪದಗಳನ್ನು ಉಪಯೋಗಿಸುತ್ತೇನೆ ಅನ್ನುವ ಎಚ್ಚರವೂ ಗಾಢವಾಗುತ್ತಾ ಹೋಯಿತು.
ಹಲವಾರು ಸಲ ಕೇಳಿರುವ ಪದ ನನಗೆ ಏನು ಅರ್ಥ ಕೊಡುತ್ತದೆ? ಅರ್ಥಕೋಶದ ಅರ್ಥವನ್ನು ಮರೆತು, ಪದಗಳಿಗೆ ಅರ್ಥಕೊಡುವ ಮನಸ್ಸಿನ ಆಲೋಚನಾಭಾಗವನ್ನು ಪಕ್ಕಕ್ಕಿಟ್ಟು, ಭಾವನಾತ್ಮಕವಾಗಿ ಒಂದು ಪದ ನನ್ನೊಳಗೆ ಏನು ಲಹರಿಯನ್ನು ಎಬ್ಬಿಸುತ್ತದೆ? "ತೌರು" ಎಂಬ ಪದ ಗಂಡು ಮನದಲ್ಲಿ, ಹೆಣ್ಣು ಮನದಲ್ಲಿ ವಿಭಿನ್ನ ಭಾವಗಳನ್ನು ಹೊಮ್ಮಿಸುತ್ತದೆ ಅಲ್ಲವೆ? ಅಷ್ಟೇ ಯಾಕೆ, ತಾಯಿಯಿರುವ ಹೆಣ್ಣಿಗೂ, ತಾಯಿಯಿರದ ಹೆಣ್ಣಿಗೂ, ತಾಯಿ ಮನೆ ಪರವೂರಿನಲ್ಲಿರುವ ಹೆಣ್ಣಿಗೂ, ಪಕ್ಕದ ಬೀದಿಯಲ್ಲಿರುವ ಹೆಣ್ಣಿಗೂ ಬೇರೆ ಬೇರೆ ಭಾವತೀವ್ರತೆಗಳನ್ನು ತಂದುಕೊಡುತ್ತದಲ್ಲವೆ? "ಮರಳು" ಎನ್ನುವ ಪದ ಬಿಲ್ಡಿಂಗ್‌ ಕಾಂಟ್ರಾಕ್ಟರ್‌ಗೂ ಕಡಲಲ್ಲಿ ಆಡುವ ಮಗುವಿಗೂ ಎಷ್ಟು ವಿಭಿನ್ನ ಭಾವನೆಗಳನ್ನು ಹೊಮ್ಮಿಸುತ್ತದೆ. "ಬೆರಳು" ಎಂಬ ಪದ ಉಂಗುರ ಮಾಡುವ ಅಕ್ಕಸಾಲಿಗೂ, ಕೊಳಲು ನುಡಿಸುವ ಕಲಾಕಾರನಿಗೂ ಹೇಗೆ ಬೇರೆ ಬೇರೆ ಭಾವನೆಗಳನ್ನು ಹುಟ್ಟಿಸುತ್ತದೆಯಲ್ಲವೆ? ಯಶವಂತ ಚಿತ್ತಾಲರ ಬರಹವೊಂದರಲ್ಲಿ "ರಕ್ತ" ಪದ ಬಗ್ಗೆ ಇಂಥದೇ ವಿಚಾರ ಓದಿದ ನೆನಪು.
ಒಂದು ಪದ ಹಲವರಿಗೆ ಹಲವು ಅರ್ಥಗಳನ್ನು ಕೊಡುತ್ತವೆ ಎಂಬುದಷ್ಟೇ ನನ್ನ ಸೋಜಿಗಕ್ಕೆ ಕಾರಣವಲ್ಲ. ಆದರೆ, ಪದ ನನ್ನ ತಲೆಯಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಬೇರೆಯದೇ ಭಾವನೆಗಳನ್ನು ಹೊಮ್ಮಿಸುತ್ತದೆಯಲ್ಲ ಅದನ್ನು ಯಾವ ಅರ್ಥಕೋಶ ಹಿಡಿದಿಡಬಲ್ಲುದು? ಹಾಗಾಗಿಯೇ, ನಮ್ಮ ಪರಿಸರ, ಹಿನ್ನೆಲೆಗೆ ಅನುಸಾರವಾಗಿ ಪದಗಳಿಗೆ ನಮ್ಮದೇ ಭಾವಾರ್ಥಗಳನ್ನು ಕೊಟ್ಟುಕೊಂಡು ಉಪಯೋಗಿಸುತ್ತಿರುತ್ತೇವೆ. ಹಾಗೆ ಹೇಳುವಾಗ, ನಾವು ಮನೋವೈಜ್ಞಾನಿಕತೆಯ ಹೊಸ್ತಿಲಲ್ಲಿ ನಿಂತಿದ್ದೇವೆ ಎಂಬುದು ನಿಜ. ಆದರೂ ಅನುದಿನದ ಬದುಕಲ್ಲಿ, ಮತ್ತೆ ಮತ್ತೆ ನಾವು ನಮ್ಮ ತಲೆಯೊಳಗಿನ ಅರ್ಥಕೋಶದತ್ತ ಗಮನಹರಿಸುವುದು ಒಳ್ಳೆಯ ಅಭ್ಯಾಸವೇನೋ ಅನ್ನಿಸುತ್ತದೆ.
ತಲೆಯೊಳಗಿನ ಅರ್ಥಕೋಶ ಪದದ ಬಗ್ಗೆ ತೆರೆದಿಡುವುದಕ್ಕಿಂತ, ನಮ್ಮ ಬಗ್ಗೆ ಹೆಚ್ಚು ವಿವರಗಳನ್ನು ನಮಗೇ ತೆರೆದು ತೋರಬಹುದು ಅಲ್ಲವೆ?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು