ಕಾಡುತ್ತಿರುವ ಒ೦ದು ವಚನ

To prevent automated spam submissions leave this field empty.

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ ಅಂದರೆ ನೆಗೆಟಿವ್ ಅನ್ನಿಸಬಹುದಾದ ಭಾವಗಳ ಮೂಲಕ ಮತ್ತೊ೦ದು ನೆಲೆಗೆ ಜಿಗಿಯುವ ಶಕ್ತಿ ಕಾಣುವುದರಿ೦ದ. ಹೊಸ ನೆಲೆಗೆ ಜಿಗಿದಾಗಿಯೂ ಬಿಟ್ಟ ನೇತ್ಯಾತ್ಮಕ ನೆಲೆ ತನ್ನ ಅರ್ಥವನ್ನು ಬಿಟ್ಟುಕೊಡದೆ ನಮ್ಮ ಜತೆ ಆಟವಾಡುತ್ತಲೇ ಇರುವ ಗುಣವಿರುವುದರಿ೦ದ.

ಕಲ್ಯಾಣದಲ್ಲಿ ಕ್ರಾ೦ತಿ ಘಟಿಸಿದ ನ೦ತರ ವಚನಕಾರರೆಲ್ಲಾ ಚೆಲ್ಲಾಪಿಲ್ಲಿಯಾಗಿ ಮೂರಾಬಟ್ಟೆ ಹಿಡಿದುಹೋದ ಮೇಲೆ ಅವರುಗಳು ಬರೆದಿರಬಹುದಾದ ವಚನಗಳಿಗಾಗಿ ತಡಕಾಡುತ್ತಿದ್ದೆ. ಕ್ರಾ೦ತಿಯ ಸಮಯದ ಹಿಂಸಾಚಾರ, ದ್ರೋಹ, ಕೊಲೆ ಇವುಗಳ ಅನುಭವ ಸಾ೦ದ್ರತೆ, ನಿರಾಶೆ ಅವರ ವಚನಗಳಲ್ಲಿ ಯಾವ ಧ್ವನಿ ಪಡೆಯುತ್ತದೆ ಎ೦ದು ನನ್ನ ಕುತೂಹಲ. ಆಗ ಕಣ್ಣಿಗೆ ಬಿದ್ದ ವಚನವಿದು. ನನ್ನ ಹುಡುಕಾಟಕ್ಕೆ ಇದು ಪೂರಕವಾಗಿಲ್ಲವಾದರೂ, ನನ್ನನ್ನು ಈ ವಚನ ಬೇರೆಯೇ ಕಾರಣಕ್ಕೆ ಹಿಡಿದು ನಿಲ್ಲಿಸಿತು. ಇದನ್ನು ಮತ್ತೆ ಮತ್ತೆ ಓದಿದ ಹಾಗೆ ಹೊಸ ಹೊಸ ಅರ್ಥಗಳು, ನಿಗೂಢ ವಿಚಾರಗಳು ಸ್ಪುರಿಸುತ್ತಾ ಹೋಯಿತು.

ಈ ವಚನದ ಕವಿಯ ಮತ್ತೊ೦ದು ಮುಖ್ಯ ಹಿನ್ನೆಲೆ ಆಕೆ ಬಸವಣ್ಣನ ಹೆ೦ಡತಿಯೆನ್ನುವುದು. ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಣ್ಣನಿಗೆ ಅಗ್ರಮಾನ್ಯ ಸ್ಥಾನ ಅನ್ನುವುದು ಎಲ್ಲರಿಗೂ ಗೊತ್ತಿರುವ ಮಾತು. ಆದರೆ ಆತನ ಹೆ೦ಡತಿ ಇಷ್ಟೊಂದು ಪರಿಣಾಮಕಾರಿ ಕವಿಯೆನ್ನುವುದು ಗೊತ್ತಿರಲಿಲ್ಲ. ಅವಳ ಕವಿತ್ವವನ್ನು ವಚನದ ಮೂಲಕ ಹೀಗೆ ಎದುರುಗೊ೦ಡಿರಲಿಲ್ಲ. ಮೊದಲ ಮೂರು ಸಾಲುಗಳು ಒ೦ದೇ ರೀತಿಯ ಭಾವವನ್ನು ತೆರೆದಿಡುವ ಮೂರು ಚಿತ್ರಗಳು.

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-

ಕಾಮನ್ ಸೆನ್ಸ್ ಅನ್ನಿಸಬಹುದಾದ೦ಥ ವಿಚಾರಗಳು. ಆದರೆ ಕವಿ ಅದರತ್ತ ನಮ್ಮ ಗಮನವನ್ನು ಸೆಳೆಯುವುದೇಕೆ? ಆ ಚಿತ್ರಗಳು ಒ೦ದು ಸಾಮಾನ್ಯ ನೆಲೆಯಿ೦ದ ಮತ್ತೊ೦ದು ಗಹನವಾದ ನೆಲೆಗೆ ಜಿಗಿಯಲು ಮಾಡುತ್ತಿರುವ ತಯಾರಿ ಅನಿಸುತ್ತದೆ. ಇಲ್ಲಿ ಆ ತಯಾರಿ ಕಾಣುವುದು ಅರಸದೇ ಇರುವ ಸ್ಥಿತಿಯಲ್ಲಿ. ಎಲೆ ಉದುರಿಹೋದ ಮರದಿ೦ದ ನೆರಳನ್ನು ಯಾರು ತಾನೆ ಅಪೇಕ್ಷಿಸುತ್ತಾರೆ? ಹಾಗೆ ಕುಗ್ಗಿದ ದೀಪಕ್ಕೆ ಬೆಳಕು ನೀಡುವ ಶಕ್ತಿಯಿರುವುದಿಲ್ಲ ಅದನ್ನು ತಾನು ಅರಸಲೂ ಇಲ್ಲ, ಸವೆದು ಹೋದ ವಿಗ್ರಹದಲ್ಲಿ ರೂಪ ಅರಸುವುದು ಕಷ್ಟ ತಾನು ಅರಸಲೂ ಇಲ್ಲ ಎ೦ದು ಕವಿ ಮೊದಲಿಗೆ ಹೇಳಿಬಿಡುತ್ತಾರೆ. ಈ ಮೂರೂ ಚಿತ್ರಗಳನ್ನು ನಮ್ಮ ಮು೦ದಿಡುವಾಗ ನೆರಳು, ಬೆಳಕು ಹಾಗು ರೂಪದ ಆಕಾಂಕ್ಷೆಯತ್ತ ಕವಿ ನಮ್ಮ ಗಮನ ಸೆಳೆಯುತ್ತಲೇ ಅದು ನಿಷ್ಪಲವಾದುದು ಎ೦ದೂ ಸೂಚಿಸುತ್ತಿರುವುದು ಗಮನಿಸಬೇಕಾದ ಅ೦ಶ.

ಈ ಮೂರೂ ಚಿತ್ರಗಳೂ ನನ್ನ ಗಮನ ಸೆಳೆದಿದ್ದಕ್ಕೆ ಮತ್ತೊ೦ದು ಕಾರಣವೂ ಇದೆ. ಅದು ಈ ಚಿತ್ರಗಳ ಜತೆ ಮಾನವನಿಗಿರುವ ಸಂಬಂಧವನ್ನು ಕುರಿತಾದದ್ದು. ಮೊದಲನೆಯ ಚಿತ್ರ-ಎಲೆಗಳೆದ ಮರ-ನೈಜವಾದುದು. ಮಾನವನ ಯಾವುದೇ ಕೈವಾಡವಿಲ್ಲದೆಯೇ ನಿಲ್ಲುವ ನೈಸರ್ಗಿಕ ಚಿತ್ರ.
ಎರಡನೆಯದು-ಕಳೆಯರೆತ ದೀಪ- ಸೀಮಿತವಾದ ಮಾನವನ ಪಾತ್ರವಿರುವ ಸಂದರ್ಭ. ಅಂದರೆ ದೀಪ ಹಚ್ಚುವಷ್ಟಕ್ಕೇ ಸೀಮಿತವಾದ ಪಾತ್ರವನ್ನು ಮನುಷ್ಯ ವಹಿಸಿದರೂ, ಉರಿಯುವ ದೀಪ ತನ್ನಷ್ಟಕ್ಕೇ ನಿಸರ್ಗದ ನೈಜ ಚಿತ್ರ. ಈ ಸಂದರ್ಭದಲ್ಲಿ ಮಾನವ ಹಾಗು ಪ್ರಕೃತಿಯ ಸಮ್ಮೇಳದ ಭಾವವೂ ಇದೆ ಎ೦ಬುದು ವಿಶೇಷ. ಮೂರನೆಯದು ಮತ್ತೂ ವಿಶೇಷವಾದುದು-ಕುರುಹಳಿದ ಮೂರ್ತಿ-ನೈಸರ್ಗಿಕ ಬಂಡೆಗಲ್ಲಿನಲಿ ಮಾನವ ಕ್ರಿಯೆಯ ಫಲ. ಮಾನವನ ಕೈವಾಡದ ಮೂಲಕ ರೂಪಪಡೆಯುವ ಸ್ವತಂತ್ರ ಆಕೃತಿ. ಇದು ಮಾನವ-ಪ್ರಕೃತಿಯ ಸಂಬಂಧದ ಮತ್ತೊ೦ದು ಘಟ್ಟವನ್ನು ಸೂಚಿಸುವುದಷ್ಟೇ ಅಲ್ಲ, ವೀರಶೈವ ಸಿದ್ಧಾ೦ತದ ಒ೦ದು ಮೂಲ ಹೊಳಹನ್ನು ನಮಗೆ ನೀಡುತ್ತದೆ. ಯಾಕೆ೦ದರೆ ವೈದಿಕ ಸಂಪ್ರದಾಯದ ವಿಗ್ರಹಾರಾಧನೆಯನ್ನು ಟೀಕಿಸುತ್ತಾ ಬ೦ದ ವಚನಕಾರರ ಧ್ವನಿಯೂ ಇಲ್ಲಿದೆ. ಸ್ಥಾವರ-ಜಂಗಮ ಸಿದ್ಧಾ೦ತ ಹೇಳುವ- ಸ್ಥಾವರಕ್ಕೆ ಅಳಿವು೦ಟು, ಜ೦ಗಮಕ್ಕಳಿವಿಲ್ಲ ಎ೦ಬ ಮಾತು ನೆನಪಿಗೆ ತರುವ ತಾತ್ವಿಕ ಹಿನ್ನೆಲೆಯೂ ಈ ಮಾತಿನಲ್ಲಿ ಕ೦ಡಾಗ ವಚನದ ವಿಸ್ತಾರ ಒಮ್ಮೆಲೆ ಹಿಗ್ಗಿಬಿಡುತ್ತದೆ. ಕವಿಯ ಭಾವಕ್ಕೆ ವಿಸ್ತಾರವನ್ನು ಕೊಡುವುದರಲ್ಲೂ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಶಬ್ದವಡಗಿ-ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ. ಈ ಸಾಲು ಇಡೀ ಪದ್ಯದ ನೋಟವನ್ನು ಬದಲಿಸಿಬಿಡುತ್ತದೆಯಲ್ಲವೆ? ಈ ಹಿ೦ದೆ ನೇತ್ಯಾತ್ಮಕವಾಗಿ ಕ೦ಡ ಅಂಶಗಳು ಇದ್ದಕ್ಕಿದ್ದ ಹಾಗೆ ಹೊಸ ಬೆಳಕಿನಲ್ಲಿ ಕಾಣುತ್ತದೆ.

ಶಬ್ದವಡಗಿ-ನಿಶ್ಶಬ್ದನಾದ ಎ೦ಬ ಸಾಲು ತು೦ಬಾ ಖುಶಿಕೊಟ್ಟ ಸಾಲು.ನಿಶ್ಶಬ್ದನಾದ-ಎ೦ಬುದು ಸೌಂಡ್ ಆಫ್ ಸೈಲನ್ಸ್ ಎ೦ಬ ಭಾವ ತರುವುದು. ಬಸವನಲ್ಲಿ ಶಬ್ದವರಸದೇ ಇರುವುದು ಬಸವಣ್ಣ ಹಾಗು ನೀಲಾಂಬಿಕೆಯರ ಸಂಬಂಧವನ್ನು ಸು೦ದರವಾಗಿ ಈ ಎಲ್ಲ ಚಿತ್ರಗಳ ಹಿನ್ನೆಲೆಯಲ್ಲಿ ತು೦ಬಾ ಸಹಜ ಹಾಗು ನೈಜ ಸ್ಥಿತಿಯೆ೦ದನಿಸುವ೦ತೆ ಬರುವುದು ಈ ವಚನದ ಹಿರಿಮೆಯೇ ಇರಬೇಕು. ಇನ್ನು ಕಡೆಯ ಸಾಲಿನಲ್ಲಿ- ಸ೦ಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು-ಎ೦ಬಲ್ಲಿ- ಸ೦ಗಯ್ಯ ಪದ ಹೊಮ್ಮಿಸುವ ಆತ್ಮೀಯತೆ ಮು೦ದೆ ಕಾಯವಿಲ್ಲದ ಕರುಣೆಯಲ್ಲಿ ಕರಗುತ್ತದೆ. ಈ ಸಾಲು ನನ್ನನ್ನು ಇನ್ನೂ ಕಾಡುತ್ತಲೇ ಇದೆ. ವೀರಶೈವ ಅರ್ಥಕೋಶದಲ್ಲಿ `ಕಾಯವಿಲ್ಲದ ಕರುಣಿ` ಎ೦ಬುದಕ್ಕೆ ವಿಶಿಷ್ಟಾರ್ಥ ಇದ್ದೀತು ಎಂಬ ಅರಿವಿದ್ದೂ, ನನ್ನದೆ ಅರ್ಥವನ್ನು ಅದರಲ್ಲಿ ಹುಡುಕ್ಕುತ್ತಾ ಹೋಗುವ ದಾರಿಗಿಳಿಯುತ್ತೇನೆ. ಇದೇ ನನ್ನನ್ನು ಪದ್ಯಗಳಿಗೆ, ಕಾವ್ಯಕ್ಕೆ ಆಕರ್ಷಿಸುವ ಅ೦ಶ. ಕಾಯವಿಲ್ಲದ ಕರುಣಿಯಾದೆ ನಾನು ಎ೦ದರೆ ಏನು ಅರ್ಥ? ಸ೦ಗಯ್ಯನ ಮೂಲಕ ಹೊಮ್ಮುವ ಕರುಣೆಯ ಮೂಲ ತಾನಾದೆ ಎ೦ತಲೇ? ಅಥವಾ ಮೂರ್ತರೂಪವಿಲ್ಲದ ಕರುಣೆಗೆ ನಾನೇ ರೂಪವಾದೆ ಎ೦ತಲೆ? ಅಥವಾ ಇನ್ನೂ ದೂರ ಹೋಗಿ ನೋಡಿದರೆ, ನೆರಳಾಗದ, ಬೆಳಕುನೀಡದ, ರೂಪಕೊಡದ ಬಸವಣ್ಣನಿಗೆ ಕರುಣೆ ತೋರಿದೆ ಎ೦ತಲೇ? ಯೋಚಿಸಿದಷ್ಟೂ ಗಾಢವಾಗುವ
ಸಾಲುಗಳು ಇವು.

ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ತಲೆಯಲ್ಲಿ ಹೊತ್ತುಕೊ೦ಡು ತಿರುಗಬಹುದಾದ೦ಥ ಸಾಲುಗಳು ಅಲ್ಲವೆ?

೨೮-೦೭-೨೦೦೩

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

"ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು."

ಇಲ್ಲಿ ನಾನು ಅರ್ಥ ಮಾಡಿಕೊಂಡದ್ದು ಹೀಗೆ:-

ಸಂಗಯ್ಯ -> ಇಷ್ಟ ದೇವ

ಕಾಯವಿಲ್ಲದ -> ನಶ್ವರವಾದ ದೇಹವಿಲ್ಲದೆ

ಕರುಣಿಯಾದೆ -> ಕೃಪೆಗೆ ಪಾತ್ರವಾದೆ

ಒಟ್ಟಿನಲ್ಲಿ ದೇವರ ಕೃಪೆಗೆ ಪಾತ್ರವಾಗಲು ನಶ್ವರವಾದ ದೇಹ ಬೇಕಾಗಿಲ್ಲ. ಮನಸ್ಸಿನಲ್ಲಿ ದೃಢ ಭಕ್ತಿಯಿದ್ದರೆ ಸಾಕು. 

ಎಲೆಗಳಿಲ್ಲದ ಮರ, ಕಾಂತಿಯಿರದ ದೀಪ, ಮಾಸಿ ಹೋಗಿರುವ ಮೂರ್ತಿ ಇವುಗಳು ದೃಢ ಭಕ್ತಿಯಿಲ್ಲದ ನಶ್ವರ ದೇಹದ ಹಾಗೆ.  

‌"ಎನ್ನ ಕಾಲೇ ಕಂಬ ದೇಹವೇ ದೇಗುಲ", "ಕಾಯಕವೇ ಕೈಲಾಸ" ಎಂದು ಹೇಳಿದ ವಚನಕಾರರು ದೇಹವನ್ನು ನಶ್ವರ ಎಂದು ಬಗೆದಿರಲಿಲ್ಲ ಎಂದು ನನ್ನ ತಿಳವಳಿಕೆ. ಅವರು ವಿರೋಧಿಸಿದ ವೈದಿಕರು ದೇಹವನ್ನು ನಶ್ವರ ಅನ್ನುತ್ತಾರಲ್ಲವೆ?

"ಕರುಣಿಯಾದೆ ನಾನು" ಅನ್ನುವಾಗ ಮತ್ತೊಬ್ಬರ ಕರುಣೆ/ಕೃಪೆಗೆ ಪಾತ್ರವಾದೆ ಅನ್ನಬಹುದ?

ಎಲ್ಲ ವಚನಕಾರರು ಒಂದು common ತತ್ವವನ್ನು ಒಪ್ಪುವುದಿಲ್ಲ. ಆದ್ದರಿಂದಲೆ ಇವುಗಳ ಚರ್ಚೆಗೆ ಆಸ್ಪದ ಕೊಡಲು 'ಅನುಭವ ಮಂಟಪ' ವನ್ನು ಮಾಡಿದ್ದು. ನಾವು ಅಲ್ಲಮನ ವಚನದಲ್ಲಿ ದೇವರನ್ನೆ question ಮಾಡುವ ಸನ್ನಿವೇಶಗಳನ್ನು ನೋಡಬಹುದು. ಆದರೆ ಬಸವಣ್ಣ ಇಷ್ಟು ಧೈರ್ಯ ತೋರಿಲ್ಲ. ಆದ್ದರಿಂದ ಎಲ್ಲ ವಚನಕಾರರು ಒಂದು ತತ್ವಕ್ಕೆ(ವೈದಿಕತ್ವದ ವಿರೋಧ ಅಥವ ಆಸ್ತಿಕತ್ವದ ವಿರೋಧ) ಸೀಮಿತವಾಗಿಲ್ಲ. 

ನಿಮ್ಮ ತಿಳವಳಿಕೆ ಒಂದು ತರದಲ್ಲಿ ಸರಿಯೆನಿಸಿದರೂ ಬಸವಣ್ಣನವರ ಈ ಕೆಳಗಿನ ವಚನ ನೋಡಿ:-

ಉಳ್ಳವರು ಶಿವಾಲಯ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ

ಎನ್ನ ಕಾಲೆ ಕಂಬವು
ದೇಹವೆ ದೇಗುಲ
ಶಿರವೆ ಹೊನ್ನ ಕಳಸವಯ್ಯ

ಸ್ಥಾವರಕ್ಕಳಿವಂಟು
ಜಂಗಮಕ್ಕಳಿವಿಲ್ಲ
ಅಯ್ಯ ಕೇಳಯ್ಯ ಕೂಡಲಸಂಗಯ್ಯ

ಇದು ಬಹುಶಃ ಆಗಿನ ಕಾಲದ ಅಸ್ಪೃಷ್ಯತೆ, ಜಾತೀಯತೆಯಂತಹ ಕಂದಾಚಾರಗಳ ವಿಡಂಬಣೆಯಾಗಿ ಕೂಡ ಅರ್ಥೈಸಬಹುದು. ತಮ್ಮ ತಮ್ಮ ದೇಹದಲ್ಲಿ ದೇಗುಲವನ್ನು ಕಟ್ಟಿ ಶಿರದಲ್ಲಿ ಕಳಸವನ್ನು ಪ್ರತಿಷ್ಠಾಪಿಸಿ. ದೇಹದಲ್ಲಿ ದೇಗುಲವಿಲ್ಲದೆ ಪ್ರಾಪಂಚಿಕ ದೇಗುಲಗಳನ್ನು ಸಂದರ್ಶಿಸಿದರೆ ಯಾವ ದೇವನು ಒಲಿಯುವುದಿಲ್ಲ ಎಂಬುದು ನಿಲುವು. ಹಾಗೆಯೆ ಚಲನಶೀಲವಾದ ದೇಹವೆಂಬ[ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ] ದೇಗುಲಕ್ಕೆ ಅಳಿವಿಲ್ಲ ಆದರೆ ಜಡವಾಗಿರುವ ಪ್ರಾಪಂಚಿಕ ದೇಗುಲಗಳು ನಾಶವಾಗುವ ಸಾಧ್ಯತೆಗಳಿವೆ. ಆದರೆ ದೇಹವು ಒಂದು ದಿನ ತನ್ನ ಚಲನಶೀಲತೆಯನ್ನು(ಜಂಗಮತ್ವವನ್ನು) ಕಳೆದುಕೊಳ್ಳುತ್ತದೆ. ಆದ್ದರಿಂದ ಮನಸ್ಸು ಮಾತ್ರ ಜಂಗಮ, ದೇಹವು ಕೊನೆಗೆ ಸ್ಥಾವರವಾಗುವುದು ಅಂತ ಅರ್ಥೈಸಬಹುದು

ಯಾವುದೇ ಬಾಹ್ಯ ವಸ್ತು-ಆಚರಣೆಗಳಿಗಿಂತ ಮನುಷ್ಯನ ದೇಹ ಅದಕ್ಕಿಂತ ಹೆಚ್ಚಾಗಿ ಮನಸ್ಸ ಭಕ್ತಿಪಥಕ್ಕೆ ಬಹು ಮುಖ್ಯ ಎಂದು ಅರ್ಥೈಸಬಹುದಾಗಿದೆ.

ಆಗಿನ ಕಾಲದಲ್ಲಿ ಬಡವರಿಗೆ, ಹಿಂದುಳಿದವರಿಗೆ ತಮ್ಮ ತಮ್ಮ ದೇಹ -ಮನಸ್ಸು ಬಿಟ್ಟರೆ ಬೇರೆ ಯಾವ ಸವಲತ್ತುಗಳು ಇರಲಿಲ್ಲ.. ಆದ್ದರಿಂದ ಎಲ್ಲರನ್ನೂ ಭಕ್ತಿಯ ಕಡೆಗೆ ಸೆಳೆಯಲು ಈ ವಚನಗಳನ್ನು ಬರೆದಿರಬಹುದಷ್ಟೆ.

"ದೇವರ ಮೇಲಿನ ಭಕ್ತಿ", "ದೇಹ-ಮನಸ್ಸು" ಎಂಬ ಆಧ್ಯಾತ್ಮಿಕ ಸರಳ ನಿರೂಪಣೆಗಳಿಗಿಂತ ವಚನಗಳು ಸಂಕೀರ್ಣ ಎಂದು ಬಗೆಯುತ್ತೇನೆ. ವಚನಗಳು ಒಮ್ಮೆಲೇ ವಯ್ಯುಕ್ತಿಕ, ಸಾಮುದಾಯಿಕ ಮತ್ತು ಆಧ್ಯಾತ್ಮಿಕ ನೆಲೆಗಳಲ್ಲಿ ಸಂಚರಿಸುವದೇ ಅವುಗಳ ಚೆಲುವಿಗೆ ಮತ್ತು ಗಾಢತೆಗೆ ಕಾರಣ. ಏ.ಕೆ.ರಾಮಾನುಜನ್‌ "ಸ್ಪೀಕಿಂಗ್‌ ಆಫ್‌ ಶಿವ" ಪುಸ್ತಕದಲ್ಲಿ ದೇಹ-ದೇವಾಲಯ-ದೇಹ ಪ್ರತೀಕಗಳ ಬಗ್ಗೆ ಹೊಳಹುಗಳನ್ನು ಕೊಡುವಂತೆ ಮುನ್ನುಡಿಯಲ್ಲಿ ಸೊಗಸಾಗಿ ಬರೆದಿದ್ದಾರೆ.

ಇರಲಿ, ನಿಮಗೆ ಕಂಡಿದ್ದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಲೆಖಕರ ವಿಮರ್ಶೆ ಚನ್ನಾಗಿದೆ, ಆದರೆ ಮಹಾನ್ ಕ್ರಾಂತಿ ಮಾಡಿದ ಶರಣರನ್ನು "ಮೂರಾಬಟ್ಟೆ ಹಿಡಿದು ಹೋದರು" ಎಂದು ಬರೆಯುವದರ ಮೂಲಕ ಶರಣರು ಮಾಡಿದ ತ್ಯಾಗ, ಬಲಿದಾನಗಳನ್ನು ಲೇಖಕರು ಅವಮಾನಿಸಿದ್ದಾರೆ. ಜಗತ್ತಿನ ಯಾವ ಮೂಲೆಯಲ್ಲಿಯೂ ನಡೆಯದಂತಹ ಕ್ರಾಂತಿ ಕನ್ನಡದ ನೆಲದಲ್ಲಿ ನಡೆದರೊ ಸಹ ಅದನ್ನು ಗೌರವಿಸದ ಅಭಿಮಾನ ಶೂನ್ಯರು ನಾವು ಕನ್ನಡಿಗರು. ಇನ್ನು ಮುಂದಾದರೂ ಶರಣರ ಕ್ರಾಂತಿಯನ್ನು ಎಲ್ಲರೂ ಗೌರವಿಸಲಿ.

ಶಿವ ಶರಣರು ಮತ್ತು ಕಲ್ಯಾಣದ ಕ್ರಾಂತಿಯ ಬಗ್ಗೆ ಗೌರವ ಮತ್ತು ಕಾಳಜಿ ಅಷ್ಟೇ ಅಲ್ಲ ಅತೀವ ಹೆಮ್ಮೆ ನನಗೆ.
ವೈದಿಕರ ಹಿಂಸೆ ಮತ್ತು ಅತ್ಯಾಚಾರದ ವಿರುದ್ಧ ಅತಿ ಪ್ರಬಲವಾಗಿ ಹೋರಾಡಿದವರಲ್ಲಿ ಶರಣರು ಪ್ರಮುಖರು ಎಂದು ಬಗೆಯುತ್ತೇನೆ.
"ಮೂರಾಬಟ್ಟೆಯಾಗಿ ಹೋದರು" ಎಂದು ಇದ್ದದ್ದನ್ನು "ಮೂರಾಬಟ್ಟೆ ಹಿಡಿದು ಹೋದರು" ಎಂದು ನಾನು ಬದಲಿಸಿದ್ದು ಶರಣರ ಮೇಲಿನ ಗೌರವದಿಂದಲೇ.
ನನ್ನ ಮನಸ್ಸಿನಲ್ಲಿ ಅವಮಾನಮಾಡುವ ಯಾವುದೇ ವಿಚಾರವೂ ಇರಲಿಲ್ಲ , ಇಲ್ಲ . ಅಷ್ಟನ್ನು ಖಂಡಿತವಾಗಿ ಹೇಳಬಲ್ಲೆ. ಹಾಗೆ ಧ್ವನಿಸಿದ್ದರೆ ಅಲ್ಲ ಅನ್ನುವುದಕ್ಕೆ ಇದೆ ನನ್ನ ವಿವರಣೆ.
ಉಳಿದವರು ಗೌರವಿಸಲಿ ಎಂದು ನನ್ನ ಆಶಯ ಕೂಡ. ಹೇರಲಾರೆ.
ಪ್ರತಿಕ್ರಿಯೆಗೆ ಧನ್ಯವಾದಗಳು

ಲೇಖನದ ಒಟ್ಟು ಆಶಯ ಗಮನಿಸಿ ;
ಅಲ್ಲಿ ಅವಮಾನದ ಉದ್ದೇಶ ಕಾಣುವದಿಲ್ಲ ;
ಬರಹಗಾರರ ಬರಹದ ಉದ್ದೇಶ , ಅವರು ನಮಗೆ ತಲುಪಿಸಬೇಕೆಂದಿರುವ ವಿಷಯಕ್ಕೆ ಗಮನ ಕೊಡದೆ ಪ್ರಾಸಂಗಿಕವಾಗಿ ಬಳಸಿದ ಯಾವುದೋ ಒಂದು ಪದವನ್ನು ಹಿಡಿದು ಹೀಗೆಲ್ಲ ಪ್ರತಿಕ್ರಿಯಿಸತೊದಗಿದರೆ ,
ಚರ್ಚೆ ಹಾದಿ ತಪ್ಪುವದಿಲ್ಲವೆ ? ನಮ್ಮ ಬರಹಗಾರರು ನಿರುತ್ಸಾಹ ಹೊಂದುವದಿಲ್ಲವೆ ? ಎಲ್ಲವೂ ವಿವಾದಕ್ಕೆ ಎಡೆ ಕೊದತೊಡಗಿದರೆ ಯಾರಾದರೂ ಏಕೆ ಬರೆದಾರು ? ಇದು ಯಾರಿಗೆ ನಷ್ಟ ?
ನಮ್ಮ ಜನಕ್ಕೆ ನಷ್ಟ ಅಲ್ಲವೋ ?

ದಯವಿಟ್ಟು ವಿಚಾರ ಮಾಡಿ .

ಇದು ನನ್ನ ಅನಿಸಿಕೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಮಸ್ಕಾರ ಅನಿವಾಸಿಯವರಿಗೆ , ಹಿ೦ದಿನ ನಮ್ಮ ನಿಮ್ಮಲ್ಲಾದ ಬಿಸಿ ಬಿಸಿ ವಾದವನ್ನು ಮರೆತು ಈ ವಚನವನ್ನು ನೋಡುವ
"ಶ್ರಮ"ವನ್ನು ಪಡುತ್ತಿದ್ದೇನೆ :), ಕಾರಣ ನೀವು ಬದಲಾಗಿರಬಹುದು ಅಥವಾ ನಾನು ಬದಲಾಗಿರಬುಹುದು.

ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ನಾವು ಮತ್ತೊಬ್ಬರಲ್ಲಿ ಶಬ್ದವನ್ನು ಅರೆಸುವುದಾದರೂ ಏಕೆ ??
ಒ೦ದು ನಮ್ಗೇ ಏನೋ ತಿಳಿದಿರಲ್ಲಾ ಅಥ್ವಾ ತಿಳಿದು ವಾದ ಮಾಡುವಾಗ, ಅವನು ಏನು ಹೇಳ್ತಾನೋ ಅ೦ತಾ ಅಲ್ವೇ ??
ಆದರೆ ಬಸವನ ಸ್ಥಿತಿ "ಶಬ್ದವಡಗಿ ನಿಶ್ಶಬ್ದನಾದ" ಅ೦ದರೆ ಬಸವ ಜ್ಞಾನದ ನಿಜಾವಸ್ಥೆಯಲ್ಲಿದ್ದ, ಅಷ್ಟೇ ಅಲ್ಲಾ.. ತನ್ನ ಬಳಿ ಬ೦ದವರಿಗೆ
ಶಬ್ದದ ಇತಿ ಮಿತಿಗಳನ್ನು ಮತ್ತು ಶಬ್ದ ಸಾಗರವನ್ನು ದಾಟುವ ಕಲೆಯ ಮೌನದಿ೦ದಲೇ ತಿಳಿಸುತ್ತಿದ್ದ.

ವಚನಕಾರರಲ್ಲಿ ಪ್ರಥಮ ನಾದ ಅವನಿಗೆ ಶಬ್ದ ಮತ್ತು ವಚನದ ಮಿತಿ ತಿಳಿದು ಬಹುಶ: ಕೊನೆಯಲ್ಲಿ
ಆತ ಮೌನವನ್ನ್ ಆವರಿಸಿದ್ದನೆ೦ದು ನನ್ನ ನ೦ಬಿಕೆ. ಯಾಕ೦ದರೆ ಬಸವಣ್ಣನವರನ್ನು ಸಮಾಧಿ ಮಾಡುವಾಗ ಆ ಕೆಲ್ಸವನ್ನು ಮಾಡುವವನಿಗೆ ಒ೦ದು ವಿಚಿತ್ರ ದರ್ಶನವಾಯ್ತ೦ತೆ. ಶಬ್ದ ಬೆಳಕನ್ನು ಮೀರಿದ ಅತೀ೦ದ್ರಿಯ ಅನುಭವ - ಪರಮಾನುಭವ.
ಆಗ ಅವನು ೦ದು ಹಾಡು ಹೇಳ್ತಾನೆ. ಬೇ೦ದ್ರೆಯವರು ಅದರ ಮೇಲೆ ಒ೦ದು ಕಾವ್ಯವನ್ನು ಬರೆದಿದ್ದಾರೆ.
(ತು೦ಬಿ ಬ೦ದಿತ್ತಾ ತ೦ಗೀ ತು೦ಬಿ ಬ೦ದಿತ್ತಾ
ಬೆಳಕಿಗಿನ್ನಾ ಬೆಳ್ಳಗಿತ್ತಾ.. ಕತ್ತಲೆಗಿನ್ನಾ ಕಪ್ಪಗಿತ್ತಾ)

ಅದನ್ನು ಕೇಳಿದಾಗಲೂ ಇದೇ ಭಾವ ಮತ್ತು ಇದೇ ರೀತಿ ಆನ೦ದವಾಗುತ್ತೆ.
ಅದೂ ಕೂಡ ಶಬ ಮತ್ತು ಅಶಬ್ದದ ಮೇಲೆ ಕುರಿತಾದ ಪದ್ಯ.
ಅ೦ತಹವರ ಬಳಿ ಹೋದಾಗ ನಮ್ಮ ಮನಸ್ಸಿನ ಅನುಮಾನ ಮತ್ತು ಆಸ್ಥಿತ್ತ್ವದ ಬಗ್ಗೆ ಯಿರುವ ಅನುಮಾನ ಮಾಯಾವಾಗುತ್ತದೆ.

"ಕಾಯವಿಲ್ಲದ ಕರುಣಿಯಾದೆ ನಾನು."
ಕಾಯ - > ದೇಹ
ಕರುಣಿ - > ದಯಾ..
ಇಲ್ಲಿ ಬುದ್ದನ ನೆನಪು ಬರುತ್ತದೆ. ಆತ ತನ್ನ ದೇಹವನ್ನು ಮೀರುವ ಬಗ್ಗೆ ಹೇಳೀ ..ಕರುಣೇ ..ಯಿ೦ದ
ಅಹ೦ಕಾರವನ್ನು ಮೀರಿ.. ಸ೦ಸಾರವನ್ನು ಮೀರಬಹುದೆ೦ದ.
ಸದಾ ದು:ಖದಿ೦ದ ಇರುವ ಈ ಲೋಕದಲ್ಲಿ ಕರುಣೆಯಷ್ಟೂ ಒಳ್ಳೆಯ ಭಾವವಿಲ್ಲವೆ೦ದ.
ಸದಾ ಕರುಣಾಶಾಲಿಯಾಗಿರುವ ಕೆಲವರನ್ನು ನೀವು ಅವರ ದೇಹವಿಲ್ಲದಿದ್ದರೂ (ಅಳಿದರೂ) ಜ್ಞಾಪಕ ಇಟ್ಟುಕೊಳ್ಳುವುದಿಲ್ಲವೇನು ??
ಇಲ್ಲಿ ಬಸವನ ಸ೦ಗದಲ್ಲಿ ಈಕೆ ತನ್ನ ಪೂರ್ಣ ಸ್ವರುಪವನ್ನು ಕ೦ಡುಕೊ೦ಡಳೂ ಎನ್ನ ಬಹುದು.

ಮತ್ತೆ ಕರುಣೆಯ ಬಗ್ಗೆ ಕೆಲವು ಜಿಡ್ಡೂರವರ ಪುಸ್ತಕ ಓದಿದ್ದೇ ..ಮತ್ತೆ ಕಟ್ ಪೇಸ್ಟ್ :) ಮಾಡ್ತಾಯಿದ್ದೇನೆ.
ಅನುವಾದ ಮಾಡೂವಾಗ ತಪ್ಪಾದರೆ ಭಾವ ಮರೆ ಆಗಬಹುದು ಎ೦ಬ ಕಾರಣಕ್ಕಾಗಿ.
*****************************************
The Nature of New mind ಪುಸ್ತಕ ಅನ್ಸತ್ತೆ - Jiddu Krishnamurthy

Q: Do you know what it means to love somebody?

Do you understand what compassion is?

Compassion is not hard to come by when the heart is not filled with the cunning things of the mind. It is the mind with its demands and fears, its attachments and denials, its determinations and urges, that destroys love.

Do you have the sense of astonishing energy which is compassion, the end of sorrow?

Without compassion human beings are destroying themselves.

Have an insight into sorrow, not the sorrow of thought, but the universal sorrow of mankind, and out of that insight is compassion.

Is compassion the end of all life end of all death?

Is there something sacred, untouched by man which is beyond compassion?

That may be the origin of everything. A real, penetrating meditation which brings insight.
*************************************************
ಅ೦ದರೆ ದಯೆಯೇ ಧರ್ಮದ ಮೂಲವಯ್ಯಾ .. ಅ೦ದ ಬಸವಣ್ಣನವರಿಗೆ ಕರುಣಿಯ ಮೂಲಕ ನಮ್ಮ ಅಧ್ಯಾತ್ಮದ ಪ್ರಶ್ನೆಗಳಿಗೂ ಮತ್ತು
ನಿತ್ಯ ಜೀವನದ ಪ್ರಶ್ನೆಗಳಿಗೂ ಉತ್ತರ ದೊರಕುವುದೆ೦ಬ ನ೦ಬಿಕೆಯಿತ್ತು. ಆಗ ನಮ್ಗೇ ಉತ್ತರ ಹುಡುಕುವ ಗೋಜಿರುವುದಿಲ್ಲಾ.
ಜೀವನ ಪ್ರಶ್ನೆಯಾಗಿ ಕಾಡುವುದಿಲ್ಲಾ. ಆಗ ದೇಹ ಅನಿತ್ಯಾನಿತ್ಯತೆ /ಲೋಕದ ಸತ್ಯಾಸತ್ಯತೆ ಯ ಬಗ್ಗೆ ಚರ್ಚೆ ನಡೆಯುವುದಿಲ್ಲಾ.
ಯಾಕ೦ದರೆ ನಾವು Transform ಆಗಿರ್ತೀವಿ. ಬರೀ ಜಡ ದೇಹವಾಗೋಲ್ಲಾ.
ಆ ಸ್ಥಿತಿಯಲ್ಲಿ Total Action ಇರುತ್ತೆ. ಆಗ "ನಾನು" ದೇಹವಾಗಿರೋಲ್ಲಾ.
ಪೂರ್ಣ ಜೀವ೦ತ ಸ್ವರೋಪವದು. ಲೋಕಕ್ಕೆ ಮ೦ಗಳವನ್ನು ತರುವ೦ತಹ ಸಾಧನೆ.
ಈಕೆ ನಿಜವಾಗಲೂ ಸುಮ೦ಗಲಿ.
ಈ ವಚನವನ್ನೂ ಹ೦ಚಿಕೊ೦ಡಿದ್ದಕೆ ಧನ್ಯವಾದ. ಇದನ್ನು ಓದಿದ ಮೇಲೆ ಮು೦ದೇನಿದ್ದರೂ ಧ್ಯಾನ .
ಜಾಸ್ತಿ ಚರ್ಚೆ ಮಾಡಿದರೆ ಅದರ ನಿಜವಾದ ಅರ್ಥ ಮರೆಯಬಹುದು.

ಅ೦ದರೆ ದಯೆಯೇ ಧರ್ಮದ ಮೂಲವಯ್ಯಾ .. ಅ೦ದ ಬಸವಣ್ಣನವರಿಗೆ ಕರುಣಿಯ ಮೂಲಕ ನಮ್ಮ ಅಧ್ಯಾತ್ಮದ ಪ್ರಶ್ನೆಗಳಿಗೂ ಮತ್ತು
ನಿತ್ಯ ಜೀವನದ ಪ್ರಶ್ನೆಗಳಿಗೂ ಉತ್ತರ ದೊರಕುವುದೆ೦ಬ ನ೦ಬಿಕೆಯಿತ್ತು.
---------ಒ೦ದು ಬದಲಾವಣೆ-------> ಅ೦ದರೆ ದಯೆಯೇ ಧರ್ಮದ ಮೂಲವಯ್ಯಾ .. ಅ೦ದ ಬಸವಣ್ಣನವರಿಗೆ ಕರುಣಿಯ ಮೂಲಕ ನಮ್ಮ ಅಧ್ಯಾತ್ಮದ ಪ್ರಶ್ನೆಗಳಿಗೂ ಮತ್ತು ನಿತ್ಯ ಜೀವನದ ಪ್ರಶ್ನೆಗಳಿಗೂ ಉತ್ತರ ದೊರಕುವುದೆ೦ಬ "ಅನುಭವವಿತ್ತು".

ಮುರುಳಿಯವರೆ,
ಬದಲಾವಣೆ ಅನ್ನುವುದಕ್ಕಿಂತೆ - "ಅಂದು-ಅಲ್ಲಿ-ಅದು, ಇಂದು-ಇಲ್ಲಿ-ಇದು ಸ್ಥಿರವೊಂದೆಯಾದರೂ, ಚರ ಬೇರೆ" (ಇದು ಯಾವುದೋ ಶ್ಲೋಕದ ಭಾಷ್ಯದಲ್ಲಿ ಓದಿದ್ದು "ಉದ್ಧರಿಸಲಾರೆ" :) )ಎಂಬುದರಿಂದ ನನಗೆ ನಿಮ್ಮ ಮಾತಿನಿಂದ ತೊಂದರೆಯಿಲ್ಲ.
ವಚನ ನಿಮ್ಮಲ್ಲಿ ಮೂಡಿಸಿದ ವಿಸ್ಮಯಕಾರಿ ವಿಚಾರಲಹರಿಯನ್ನು ಅರಗಿಸಿಕೊಂಡು ನಂತರ ಮರುನುಡಿಯಬಲ್ಲೆ. ಸದ್ಯಕ್ಕಂತೂ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.