ಇ-ಲೋಕ-೮ (೨/೨/೨೦೦೭)

To prevent automated spam submissions leave this field empty.

ಬಲ್ಬ್‌ ಬಳಕೆಗೆ ನಿಷೇಧ!
 ಥಾಮಸೆ ಆಲ್ವಾ ಎಡಿಸನ್ ಸಂಶೋಧಿಸಿದ ಬುರುಡೆ ಬಲ್ಬ್‌ನ ಒಂದು ತೊಂದರೆ ಅಂದರೆ,ಇದರಲ್ಲಿ ಟಂಗ್‌ಸ್ಟನ್ ತಂತಿ ಸುರುಳಿಯಲ್ಲಿ ಹರಿಯುವ ವಿದ್ಯುತ್‌ ಉಂಟು ಮಾಡುವ ಶಾಖದಿಂದ ಸುರುಳಿ ಕಾದು,ಅದು ಬೀರುವ ಪ್ರಕಾಶದ ಮೂಲಕ ಬೆಳಕು ದೊರೆಯುತ್ತದೆ. ಹೆಚ್ಚಿನ ವಿದ್ಯುತ್ ಶಕ್ತಿ ಶಾಖದ ರೂಪದಲ್ಲಿ ನಷ್ಟವಾಗುತ್ತದೆ.ಹಿಂದೆ ಅವನ್ನು ಬಳಸುವುದು ಅನಿವಾರ್ಯವಾಗಿತ್ತು.ಈಗಲಾದರೋ ಅಂತಹ ಬಲ್ಬ್‌ಗಳು ಬಳಸುವ ವಿದ್ಯುಚ್ಛಕ್ತಿಯ ಮೂರನೇ ಮೂರನೇ ಒಂದಕ್ಕಿಂತಲೂ ಕಡಿಮೆ ವಿದ್ಯುಚ್ಛಕ್ತಿ ಬಳಸುವ ಕಾಂಪಾಕ್ಟ್ ಫ್ಲೊರೆಸೆಂಟ್ ಲ್ಯಾಂಪ್‌(ಸಿ.ಎಫ್.ಎಲ್‌)ಗಳು ಲಭ್ಯ.ಇವುಗಳು ಬುರುಡೆ ಬಲ್ಬ್‌ಗಳಿಗೆ ಹೋಲಿಸಿದರೆ ಅಧಿಕ ದುಬಾರಿ ಎನ್ನುವುದೇನೋ ನಿಜ. ಆದರೆ ಇವುಗಳ ಬಾಳಿಕೆ ಹೆಚ್ಚು. ಹಾಗಾಗಿ ಅವುಗಳು ಕೆಟ್ಟು ಹೋಗುವ ಮೊದಲು ಅವುಗಳಿಗಾಗಿ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚು ವಿದ್ಯುತ್ ಉಳಿತಾಯವಾಗಿರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಬುರುಡೆ ಬಲ್ಬ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೆ ಬರುವುದರಲ್ಲಿದೆ. ಬಳಕೆದಾರರಿಗೆ ಈ ಬಗ್ಗೆ ಶಿಕ್ಷಣ ನೀಡುವುದೇ ಅಲ್ಲದೆ, ಉಚಿತ ಸಿ.ಎಫ್.ಎಲ್‌. ದೀಪಗಳನ್ನು ಮೊದಲಿಗೆ ನೀಡಿ, ಮತ್ತೆ ಖರೀದಿ ಮೇಲೆ ರಿಯಾಯಿತಿ ಕೊಡುವ ಯೋಜನೆ ಅಲ್ಲಿನ ಆಡಳಿತದ್ದು.

ಕಂಪ್ಯೂಟರ್‍ ಮುರುಕರಿಗೆ ಕೈತುಂಬಾ ಕೆಲಸ
 ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶ ವಿಂಡೋಸ್ ವಿಸ್ಟಾವು ಈ ವಾರ ಬಿಡುಗಡೆಯಾಗಿ ಜನರ ಕೈ ಸೇರಿದೆ.ಇದನ್ನು ಬಳಸಲು ಅಧಿಕ ಸಾಮರ್ಥ್ಯ ಹೊಂದಿರುವ ಯಂತ್ರಾಂಶ ಅಗತ್ಯ.ಕನಿಷ್ಠ ಐನೂರಹನ್ನೆರಡು ಮೆಗಾಬೈಟ್ RAM ಸ್ಮರಣ ಸಾಮರ್ಥ್ಯ, ಎಂಟುನೂರು ಮೆಗಾಹರ್ಟ್ಸ್ ಸಂಸ್ಕಾರಕ,ಹದಿನೈದು ಗಿಗಾಬೈಟ್‌ಗಳಷ್ಟು ಹಾರ್ಡ್‌ಡಿಸ್ಕ್ ಸಾಮರ್ಥ್ಯ ಅವಶ್ಯ. ಹಳೆಯ ಕಂಪ್ಯೂಟರುಗಳಿಗೆ ವಿಸ್ಟಾ ಹೊಂದಿಕೆಯಾಗುವುದು ಸಂಶಯ.ಹೊಸ ತಂತ್ರಾಂಶ ಸುಭದ್ರವಾಗಿದ್ದು ಕಂಪ್ಯೂಟರ್‌ಗೆ ಅಧಿಕ ಸುರಕ್ಷತೆಯನ್ನು ನೀಡಿ,ವೈರಸ್ ದಾಳಿ,ಕಂಪ್ಯೂಟರ್‍ ಮುರುಕರು ಕಂಪ್ಯೂಟರ್‌ಗಳಿಂದ ಮಾಹಿತಿ ಕದಿಯುವುದು ಮುಂತಾದ ಸೈಬರ್‍ ಅಕೃತ್ಯಗಳನ್ನು ನಡೆಸಲು ಕಠಿನವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ. ಆದರೆ ಈ ಮಾತನ್ನು ಸುಳ್ಳು ಮಾಡಲು ಕಂಪ್ಯೂಟರ್‍ ಹ್ಯಾಕರುಗಳು ಮತ್ತು ಸಂಶೋಧನಾಕಾರರು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ಸಂಶೋಧನಾಕಾರರಾದರೋ ವಿಸ್ಟಾದಲ್ಲಿನ ಲೋಪದೋಷಗಳನ್ನು ಜಾಹೀರು ಪಡಿಸಿ, ತಮ್ಮ ಪಟುತ್ವವನ್ನು ಜಗಜ್ಜಾಹೀರು ಮಾಡುವ ಕನಸು ಹೊತ್ತಿರುತ್ತಾರೆ. ಅದೇ ವೇಳೆ ಮುರುಕರು ತಮ್ಮ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸಲೋಸುಗ ವಿಸ್ಟಾದ ಭದ್ರತೆಗೆ ಚ್ಯುತಿ ತರಲು ಪ್ರಯತ್ನ ಪಡುತ್ತಾರೆ.ಅಂದ ಹಾಗೆ ವಿಸ್ಟಾವು ಐವತ್ತು ಮಿಲಿಯನ್ ಸಾಲುದ್ದದ ತಂತ್ರಾಂಶ. ಇದನ್ನು ಅಭಿವೃದ್ಧಿ ಪಡಿಸಲು ಕಂಪೆನಿಗೆ ಆರು ಬಿಲಿಯನ್ ಡಾಲರು ಖರ್ಚು ಬಂದಿದೆ.ಇದರ ಹಿಂದಿನ ವಿಂಡೋಸ್-ಎಕ್ಸ್‌ಪಿಯ ಬಿಡುಗಡೆಯಾಗೀ ಇದೀಗ ಆರು ವರ್ಷಗಳು ಸಂದಿವೆ.
 ಧ್ವನಿ ಆದೇಶಗಳಿಗೆ ಸ್ಪಂದಿಸುವ ಸೌಲಭ್ಯ ವಿಸ್ಟಾದಲ್ಲಿ ಲಭ್ಯ. ಇದರ ಪ್ರಕಾರ ಬಳಕೆದಾರನು ಕಂಪ್ಯೂಟರನ್ನು ಮಾತಿನ ಮೂಲಕ ಕೆಲಸ ಮಾಡುಂತೆ ಮಾಡಬಹುದು. ಕಡತಗಳ ಪ್ರತಿ ಮಾಡುವುದು, ಕಡತಗಳನ್ನು ಕಿತ್ತೆಸೆಯಲು ಈ ವ್ಯವಸ್ಥೆಯನ್ನು ಬಳಸಬಹುದು. ಆದರೆ ಇ-ಮೇಲ್‌ನಲ್ಲಿ ಬಂದ ಧ್ವನಿ ಕಡತಗಳನ್ನು ನುಡಿಸಿದಾಗಲೂ ಕಂಪ್ಯೂಟರ್‍ ಪ್ರತಿಕ್ರಿಯಿಸುವುದು ಕಂಡು ಬಂದಿದೆ. ಇ-ಮೇಲ್ ಮೂಲಕ ಮುರುಕರು ಕೀಟಲೆಗೋಸ್ಕರ ಕಂಪೂಟರ್‍ ಕಡತಗಳನ್ನು ನಿವಾರಿಸಲು ಶಕ್ತರಾಗುವುದು ಭದ್ರತೆಯ ದೃಷ್ಟಿಯಿಂದ ತರವಲ್ಲ. ಆದರೆ ಹೀಗಾಗ ಬೇಕಾದರೆ, ಧ್ವನಿಗ್ರಹಣ ವ್ಯವಸ್ಥೆ ಚಾಲೂ ಆಗಿರಬೇಕು,ಜತೆಗೆ ಮೈಕ್ ಮತ್ತು ಸ್ಪೀಕರ್‍ ಚಾಲೂ ಇರಬೇಕು. ಇಷ್ಟೆಲ್ಲಾ ಆಗಿ ಧ್ವನಿ ಆದೇಶಗಳು ಬಳಕೆದಾರನ ಗಮನಕ್ಕೆ ಬರದೆ ಹೊರಡುವುದು ಅಸಂಭವ ಎನ್ನುವುದು ಮೈಕ್ರೋಸಾಫ್ಟ್ ವಿವರಣೆ.
 

ಬಾಂಬು ಭಯ ಹುಟ್ಟಿಸಿ ಪ್ರಚಾರ!
 ಪ್ರಚಾರಗಿಟ್ಟಿಸಲು ಯಾವ ಮಟ್ಟಕ್ಕೂ ಹೋಗುವ ಕಂಪೆನಿಗಳ ತಿಕ್ಕಲುತನಕ್ಕೆ ಈಗ ಇನ್ನೊಂದು ಪುರಾವೆ ಸಿಕ್ಕಿದೆ. ಬಾಸ್ಟನ್‌ನಲ್ಲಿ ಈ ವಾರದ ಮಧ್ಯೆ ಅಲ್ಲಲ್ಲಿ ಮಿನುಗುವ,ಬಾಂಬುಗಳನ್ನು ಹೋಲುವ, ಬ್ಯಾಟರಿಗಳಿದ್ದ,ಇಲೆಕ್ಟ್ರಾನಿಕ್ ಸಾಧನಗಳು ರಸ್ತೆಯಂಚಿನಲ್ಲಿ ಕಂಡಾಗ ಜನರು ಭಯಭೀತರಾದರು. ಬಾಂಬು ನಿಸ್ತೇಜಗೊಳಿಸುವ ತಂಡಗಳು ಸಾರಿಗೆಯನ್ನು ಬಂದು ಮಾಡಿ, ಸಾಧನವನ್ನು ಸುತ್ತುವರೆದುವು. ಕೊನೆಗೆ ಇವುಗಳು ಜನರ ಗಮನ ಸೆಳೆಯಲು ಟಿವಿ ಚಾನೆಲ್‌ ಒಂದರ ಧಾರಾವಾಹಿ ಪ್ರಾಯೋಜಕರು ಆಡಿದ ಆಟವೆನ್ನುವುದು ಗೊತ್ತಾಯಿತು. ಈರ್ವರನ್ನು ಈ ಸಂಬಂಧ ವಶಕ್ಕೆ ತೆಗೆದುಕೊಂಡು ಆಪಾದನೆ ಹೊರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
 

ಮುಟ್ಟಿದರೆ ಮುನಿಯುವ ಪುಸ್ತಕಗಳ ಕಂಪ್ಯೂಟರೀಕರಣ
 ಅಮೆರಿಕಾದ ಲೈಬ್ರರಿ ಆಫ್ ಕಾಂಗ್ರೆಸ್ ಗ್ರಂಥಾಲಯದಲ್ಲಿ ಅತ್ಯಂತ ಪುರಾತನ ಪುಸ್ತಕಗಳು ಲಭ್ಯ. ಆದರೆ ಇವುಗಳ ಪುಟಗಳು ಮುಟ್ಟಿದರೆ ಮುರಿಯುವ ಭೀತಿಯಿರುವ ಕಾರಣ, ಸಂಶೋಧಕರ ಕೈಗಿವನ್ನು ಕೊಡಲು ಹಿಂದೆಮುಂದೆ ನೋಡಬೇಕಾದ ಸ್ಥಿತಿಯಿದೆ.ಅದಕ್ಕಾಗಿ ಇವುಗಳ ಪುಟಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲ್ ಪ್ರತಿಗಳನ್ನು ಲಭ್ಯವಾಗಿಸುವ ಎರಡು ಮಿಲಿಯನ್ ಡಾಲರ್‍ ಯೋಜನೆ ಅನುಷ್ಠಾನವಾಗಲಿದೆ.ಪುಸ್ತಕವನ್ನು ಮುಟ್ಟದೆಯೇ ಅದರೊಳಗಿನ ಪುಟ ತಿರುಗಿಸಿ,ಸ್ಕ್ಯಾನ್ ಮಾಡಲು ಯಂತ್ರಗಳ ಬಳಕೆ ಬೇಕಾಗುತ್ತದೆ. ಸಾವಿರಗಟ್ಟಲೆ ಪುಸ್ತಕಗಳನ್ನು ವೇಗವಾಗಿ ಸ್ಕ್ಯಾನ್ ಮಾಡಲು ಯಾಂತ್ರೀಕೃತ ವ್ಯವಸ್ಥೆ ಅಗತ್ಯ. ನಮ್ಮಲ್ಲೂ ಕನ್ನಡ ಪುಸ್ತಕಗಳನ್ನು ಗಣಕೀಕರಣಗೊಳಿಸುವ ಯೋಜನೆ ಜಾರಿಯಲ್ಲಿದೆ.
*ಅಶೋಕ್‌ಕುಮಾರ್‍ ಎ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮುರುಕರು = hackers?

hackers ಅಂದರೆ ನೀವೇನು ಅರ್ಥ ಮಾಡಿಕೊಂಡಿದ್ದೀರೋ ತಿಳಿಯದು, ಆದರೆ "ಮುರಿಯುವ, ಕೆಡಿಸುವ ಕೆಲಸ ಮಾತ್ರ ಮಾಡುವವರು" ಎಂದು ಅರ್ಥ ಮಾಡಿಕೊಂಡಿದ್ದರೆ ಅದು ತಪ್ಪು.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಈ ಹ್ಯಾಕರ್ ಅನ್ನೋ ಪದ "ರಾಜಕಾರಣಿಗಳು", "ಸಂತರು" ಎಂಬ ಪದಗಳಂತೆ. ಅವರಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲರೂ ಇರುತ್ತಾರೆ. ಕೆಟ್ಟವರಿರುತ್ತಾರೆ ಎಂಬ ಮಾತ್ರಕ್ಕೆ ಎಲ್ಲ ಸಂತರನ್ನೂ ಕಳ್ಳರು ಎನ್ನುತ್ತೇವೆಯೆ? ಕೆಲವು ರಾಜಕಾರಣಿಗಳು ಅಕ್ರಮ ಕೆಲಸ ಮಾಡಿದರೆಂದ ಮಾತ್ರಕ್ಕೆ ಎಲ್ಲ ರಾಜಕಾರಣಿಗಳನ್ನೂ ಕ್ರಿಮಿನಲ್ಲುಗಳು ಎನ್ನುತ್ತೇವೆಯೆ?
(ಇಲ್ಲಿ ನಾವಂದುಕೊಳ್ಳುವುದಕ್ಕೂ, ಹೆಸರು ಸೂಚಿಸುವ ಅರ್ಥಕ್ಕೂ, ಸಾಮಾಜಿಕ ಅರ್ಥಕ್ಕೂ ಮಧ್ಯೆ ಇರುವ subtle difference ಅರ್ಥ ಮಾಡಿಕೊಳ್ಳಬೇಕು. ಸಮಾಜದಲ್ಲಿ ಧಾರ್ಮಿಕ ಗುರುಗಳನ್ನು, ಸಂತರನ್ನು ನೋಡಿದ ತಕ್ಷಣ "ಕಳ್ಳರು" ಅನಿಸಿಬಿಡಬಹುದು. ಆದರೆ ಅವರೆಲ್ಲರೂ ಕಳ್ಳರಾಗಿರಬೇಕಿಲ್ಲ. ನೀವು ಹ್ಯಾಕರ್ ಗಳನ್ನ "ಮುರುಕರು" ಎಂದದ್ದು ಎಲ್ಲ ಸಂತರನ್ನು, ಗುರುಗಳನ್ನು "ಕಳ್ಳರು" ಎಂದಂತೆ!)

Hacker ಎಂದರೆ ಕಂಪ್ಯೂಟರು ಪ್ರೋಗ್ರಾಮುಗಳನ್ನು ಬರೆಯುವವರು, ಅದನ್ನು ಬದಲಾಯಿಸುವವರು ಮತ್ತು ಬಹುಮುಖ್ಯವಾಗಿ ಅದರಲ್ಲಿರುವ ಲೋಪದೋಷಗಳನ್ನು ಹುಡುಕುವವರು ಎಂದು.

ಹಾಗೆ ಕಂಡು ಹಿಡಿದ ಲೋಪದೋಷಗಳನ್ನು ದುರುಪಯೋಗ ಪಡೆಸಿಕೊಳ್ಳುವವರು ಎಂದಾಗಲೇಬೇಕಿಲ್ಲ. ಆದರೆ ಹೆಚ್ಚಿನ ಜನ ದುರುಪಯೋಗ ಪಡಿಸಿಕೊಳ್ಳುವವರನ್ನೇ Hackerಗಳು ಎಂದು ತಿಳಿದುಕೊಂಡಿದ್ದಾರೆ! ನೀವೊಬ್ಬರೇ ಅಲ್ಲ :P

ಸಂಪೂರ್ಣ ವಿವರಕ್ಕೆ [:http://en.wikipedia.org/wiki/Hacker|ವಿಕಿಪೀಡಿಯ ಪುಟ ನೋಡಿ].

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

good hackers ಬಗ್ಗೆ ಗೊತ್ತಿದೆ...ಲೇಖನದಲ್ಲಿ ಆ ಭಾವನೆ ವ್ಯಕ್ತವಾಗಿಲ್ಲವೇನೋ..ಒಪ್ಪುತ್ತೇನೆ.

ನಾನು ಬರೆದದ್ದು ಕ್ಲಿಯರ್ ಆಗಿ ಇಲ್ಲ ಅನ್ಸತ್ತೆ. in short, ಹ್ಯಾಕರ್ ಅಂದರೆ "ಮುರುಕ" ಅಲ್ಲ :P

ವಿಕಿಪೀಡಿಯ ಪುಟ ಓದಿ.
--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"